Thursday, September 18, 2008

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 2

ನಮ್ಮ ಆಹಾರವೆಷ್ಟು

 ಹಿತ ?


ಮೂರೂ ವಿಷಯುಕ್ತವಾಗಿದೆ. ರುಚಿಯನ್ನು ವಿಷದ ಮೂಲಕ ನಿರ್ಮಾಣ ಮಾಡುತ್ತಾರೆ. ಇನ್ನೊಂದು ವಿಷಹಾಕಿ ಪರಿಮಳ ಬರುವಂತೆ ಮಾಡುತ್ತಾರೆ. ಮತ್ತೊಂದು ರೀತಿ ವಿಷ ಹಾಕಿ ಅದು ನೋಡಲಿಕ್ಕೆ ಸೊಬಗಾಗಿ ಕಾಣುವಂತೆ ಮಾಡುತ್ತಾರೆ.  ಬಣ್ಣದ ವಿಷ, ಪರಿಮಳದ ವಿಷ, ರುಚಿಯ ವಿಷ, ಒಟ್ಟಾರೆ ವಿಷವನ್ನೇ ತಿನ್ನುತ್ತಿದ್ದೇವೆ. ಇದು ಹಿತ ಆಹಾರ ಹೇಗಾದೀತು ? 

ಮಹರ್ಷಿ ವಾಲ್ಮೀಕಿಗಳಿಗೆ ಶ್ರೀರಾಮ ಗೋಚರವಾದದ್ದು ದಿವ್ಯ ಜಾಗೃತಾವಸ್ಥೆ ತಲುಪಿದ ಮೇಲೆಯೇ. ಅವರು ಶ್ರೀರಾಮನನ್ನು ಅಯೋಧ್ಯೆಯ ಸಿಂಹಾಸನದಲ್ಲಿ ನೋಡಲಿಲ್ಲ. ತಮ್ಮ ಹೃದಯ ಸಿಂಹಾಸನದಲ್ಲಿ ನೋಡಿದರು. ಹಾಗಾಗಿ ರಾಮಾಯಣ ಪ್ರಾರಂಭ ಆಗೋದು 'ತಪಸ್ವಾಧ್ಯಾಯನಿರತಮ್' ಅನ್ನೋ ಶಬ್ದದಿಂದ. 

ಇಲ್ಲಿ ತಪಸ್ಸು, ಸ್ವಾಧ್ಯಾಯ ಎಂಬ ಎರಡು ಪದಗಳಿವೆ. ಹಾಗಾದರೆ ಏನಿದು ತಪಸ್ಸು ? ಏನಿದು ಸ್ವಾಧ್ಯಾಯ? ಭಾರೀ ಪ್ರಶ್ನೆ! 

ಮೊದಲು ತಪಸ್ಸಿನ ಬಗ್ಗೆ ಯೋಚಿಸೋಣ.

 ತಪಸ್ಸು ಅಂದ್ರೆ ಯೋಗ ಭಾಷೆಯಲ್ಲಿ ಹೇಳುವುದಾದರೆ 'ಹಿತಮಿತಮೇಧ್ಯಾಶನಂ ತಪಃ'. 'ಅಶನ' ಅಂದ್ರೆ ಆಹಾರ. ಅದು ಹಿತವಾಗಿರಬೇಕು, ಮಿತವಾಗಿರಬೇಕು, ಮೇಧ್ಯವಾಗಿರಬೇಕು, ಅಂದರೆ ತಿನ್ನುವಂತಿರಬೇಕು. 

ಇಲ್ಲಿ ಹಿತ ಎಂದರೆ ಪ್ರಿಯವಾದದ್ದು ಎಂದಲ್ಲ. ಪ್ರಿಯವಾಗಬಾರದು ಅಂತೇನಿಲ್ಲ. ಆದರೆ ದೇಹಕ್ಕೆ ಹಿತವಲ್ಲದಿದ್ದರೆ ಅಂಥ ಪ್ರಿಯ ಆಹಾರ ಕೂಡ ಬೇಡ. ನಾವು ಮೂಗು, ನಾಲಗೆ, ಕಣ್ಣು, ಬಯಸುವ ಆಹಾರ ಕೊಡುತ್ತೇವೆ. ಅದು ಹಿತವಲ್ಲ. ಆದರೆ ಶರೀರ ಕೇಳುವ ಆಹಾರ ಕೊಟ್ಟಿರೋದಿಲ್ಲ. ಮೂಗಿಗೆ ಒಳ್ಳೇ ಪರಿಮಳ ಬಂದರೆ ಅದು ಒಳ್ಳೆಯ ಆಹಾರವಾಗಿರಲು ಸಾಧ್ಯವಿಲ್ಲ.

 ಮೂಗು, ಮನಸ್ಸಿನ ಜೊತೆಗೆ, ಆತ್ಮನೊಂದಿಗೂ ಸಮಾಲೋಚನೆ ಮಾಡಿದ ಬಳಿಕ ಆಹಾರ ಹಿತವೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕು. ಹಾಗೆ ಮಾಡದೇ ತಾನೇ ಸ್ವತಂತ್ರವಾಗಿ ಇದು ಒಳ್ಳೆಯದು ಎಂದುಕೊಂಡು ಅಂಥ ಆಹಾರದ ಹಿಂದೆ ಹೋಗಿಬಿಡುತ್ತೇವೆ. 

ಕಣ್ಣು ಒಳ್ಳೇ ಬಣ್ಣವಿದೆ ಎಂದರೆ, ನಾಲಿಗೆ ರುಚಿಯಾಗಿದೆ ಎಂದರೆ, ಮೂಗು ಸುವಾಸನಾಯುಕ್ತವಾಗಿದೆ ಎಂದು ಹೇಳಿ ಬಿಟ್ಟರೆ... ಅಂಥ ಆಹಾರದ ಹಿಂದೆ ಹೋಗಿಬಿಡುತ್ತೇವೆ.

 ಇಂದಿನ ದಿನಗಳಲ್ಲಿ ಈ ಮೂರೂ ವಿಷಯುಕ್ತವಾಗಿದೆ. ರುಚಿಯನ್ನು ವಿಷದ ಮೂಲಕ ನಿರ್ಮಾಣ ಮಾಡುತ್ತಾರೆ. ಇನ್ನೊಂದು ವಿಷಹಾಕಿ ಪರಿಮಳ ಬರುವಂತೆ ಮಾಡುತ್ತಾರೆ. ಮತ್ತೊಂದು ರೀತಿ ವಿಷ ಹಾಕಿ ಅದು ನೋಡಲಿಕ್ಕೆ ಸೊಬಗಾಗಿ ಕಾಣುವಂತೆ ಮಾಡುತ್ತಾರೆ.

 ಬಣ್ಣದ ವಿಷ, ಪರಿಮಳದ ವಿಷ, ರುಚಿಯ ವಿಷ, ಒಟ್ಟಾರೆ ವಿಷವನ್ನೇ ತಿನ್ನುತ್ತಿದ್ದೇವೆ. ಇದು
ಹಿತ ಆಹಾರ ಹೇಗಾದೀತು ? ಯೋಚಿಸಿ.

 -ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,

ಶ್ರೀ ರಾಮಚಂದ್ರಾಪುರ ಮಠ

No comments:

Advertisement