Monday, September 22, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 22


ಇಂದಿನ ಇತಿಹಾಸ
ಸೆಪ್ಟೆಂಬರ್ 22

ಮೆಕ್ಸಿಕೊ ನಗರದಲ್ಲಿ ನಡೆದ ಚೆಸ್  ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವುದರಲ್ಲಿ ಯಶಸ್ವಿಯಾದರು. ಎಂಟನೇ ಸುತ್ತಿನ ಪಂದ್ಯದಲ್ಲಿ ಕೇವಲ ಅರ್ಧ ಪಾಯಿಂಟ್ ಗಿಟ್ಟಿಸಿದರೂ ಭಾರತದ ಆನಂದ್ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿ ನಿಲ್ಲುವಲ್ಲಿ ಯಶಸ್ವಿಯಾದರು

2014: ಬೆಂಗಳೂರು: ಮಂಗಳ ನೌಕೆಯ ಪಥ ಸರಿಪಡಿಸುವಿಕೆ ಮತ್ತು ಮುಖ್ಯ ದ್ರವ ಎಂಜಿನ್ನಿನ ದಹನಶೀ­ಲತೆಯ ಪರೀಕ್ಷೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು  ಇಸ್ರೊ ಪ್ರಕಟಿಸಿತು. ಮಂಗಳ ನೌಕೆ ಕಕ್ಷೆ ಪ್ರವೇಶಿಸುವುದಕ್ಕೆ ಪೂರ್ವಭಾವಿ­ಯಾಗಿ ಈ ಪರೀಕ್ಷೆ ನಡೆಸಬೇಕಿತ್ತು. ವಿಜ್ಞಾನಿಗಳು ಇದನ್ನು ಅಗ್ನಿಪರೀಕ್ಷೆ ಎಂದೇ ಕರೆದಿದ್ದರು. ‘ನೌಕೆಯ ಪಥವನ್ನು ನಾಲ್ಕನೇ ಬಾರಿಗೆ ಸರಿಪಡಿಸಲು ಈ ಪರೀಕ್ಷೆ ನಡೆಸಬೇಕಿತ್ತು. ಸುಮಾರು 4 ಸೆಕೆಂಡು­ಗಳ ಕಾಲ ದ್ರವ ಎಂಜಿನ್‌ ಉರಿಸುವ ಈ ಪರೀಕ್ಷೆ ಯಶಸ್ವಿಯಾಗಿದೆ' ಎಂದು ಇಸ್ರೊ ಸ್ಪಷ್ಟಪಡಿಸಿತು. 300 ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸ­ಲಾಗಿದ್ದ ಎಂಜಿನ್‌ ಮತ್ತೆ ಸರಿಯಾಗಿ ಉರಿಯ­ಲಿ­ದೆಯೇ ಎಂಬುದೇ ಕುತೂಹಲದ ವಿಷಯವಾಗಿತ್ತು. ಸೆ.24 ರಂದು ನೌಕೆ ಮಂಗಳನ ಕಕ್ಷೆ ಸೇರಲಿದೆ. ಸದ್ಯ ಪ್ರತಿ ಸೆಕೆಂಡ್‌ಗೆ 22.1 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ನೌಕೆಯ ವೇಗ ಪ್ರತಿ ಸೆಕೆಂಡ್‌ಗೆ 4.4  ಕಿ.ಮೀಗೆ ತಗ್ಗಲಿದೆ. ಈ ವೇಗವನ್ನು ತಗ್ಗಿಸಲು ಎಂಜಿನ್‌ ಅನ್ನು 24 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉರಿಸಬೇಕಾಗುತ್ತದೆ ಎಂದೂ ಇಸ್ರೊ ಹೇಳಿತು. ಇದಕ್ಕೂ ಮುನ್ನ ಈದಿನ ಬೆಳಗ್ಗೆ ನೌಕೆ ಮಂಗಳನ ಪ್ರಭಾವ ವಲಯವನ್ನು ಪ್ರವೇಶಿಸಿತ್ತು. 'ನಮ್ಮ ಲೆಕ್ಕಾಚಾರದ ಪ್ರಕಾರ ಮಂಗಳಯಾನ ನೌಕೆಯು ಮಂಗಳ ಗ್ರಹದ ಗುರುತ್ವಾಕರ್ಷಣ ವಲಯವನ್ನು ಈದಿನ ಮುಂಜಾನೆ 9 ಗಂಟೆ ಸುಮಾರಿಗೆ ಪ್ರವೇಶಿಸಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದರು.

2014: ಮುಂಬೈ: ಹಿರಿಯ ಬಾಲಿವುಡ್ ನಟ ಶಶಿ ಕಪೂರ್ (76) ಅವರನ್ನು ಹೃದಯ ಸೋಂಕಿನ ಕಾರಣ ಇಲ್ಲಿನ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಯಿತು. ಶಶಿ ಕಪೂರ್ ಅವರನ್ನು ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡದ್ದನ್ನು ಅನುಸರಿಸಿ ಹಿಂದಿನ ದಿನ ಸಂಜೆ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯ ಸೋಂಕಿಗಾಗಿ ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು.

2014: ಇಂಚೋನ್  (ದಕ್ಷಿಣ ಕೊರಿಯಾ): ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿಯಿತು. ರಾಹಿ ಸರ್ನೊಬತ್‌, ಅನಿಸಾ ಸಯ್ಯದ್‌ ಹಾಗೂ ಹೀನಾ ಸಿಧು ಅವರನ್ನೊಳಗೊಂಡ ಭಾರತದ ಮಹಿಳೆಯರ ತಂಡವು 25 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿತು.ಮೂವರು ಶೂಟರ್ ಗಳನ್ನು ಒಳಗೊಂಡ ಭಾರತದ ತಂಡ 1729 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಚೀನಾ
ಬೆಳ್ಳಿ ಗೆದ್ದರೆ ಆತಿಥೇಯ ದಕ್ಷಿಣ ಕೊರಿಯ ಚಿನ್ನದ ಪದಕವನ್ನು ಬಾಚಿಕೊಂಡಿತು. ಭಾರತಕ್ಕೆ ಶೂಟಿಂಗ್‌ನಲ್ಲಿ ದೊರೆತ ನಾಲ್ಕನೇ ಪದಕ ಇದು. ಜಿತು ರಾಯ್‌ ಅವರನ್ನೊಳಗೊಂಡ ಭಾರತದ ಪುರುಷರ ತಂಡ 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಹಿಂದಿನ ದಿನ ಕಂಚಿನ ಪದಕ ಗೆದ್ದಿತ್ತು. ಇದಕ್ಕೂ ಮೊದಲು ಜಿತು ಅವರು 50 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಸಾಧನೆ ತೋರಿದ್ದರು. 10 ಮೀ. ಏರ್‌ ಪಿಸ್ತೂಲ್ ವಿಭಾಗದಲ್ಲಿ ಶ್ವೇತಾ ಚೌಧರಿ ಅವರು ಕಂಚಿನ ಪದಕ ಪಡೆದಿದ್ದರು. ಈ ಮಧ್ಯೆ ಮಹಿಳೆಯರ ಸಿಂಗಲ್ಸ್ ಸ್ಕಾವಷ್ ಸೆಮಿಫೈನಲ್​ನಲ್ಲಿ ಸೋತ ದೀಪಿಕಾ ಪಲ್ಲಿಕ್ಕಲ್ ಅವರು ಕಂಚಿನ ಪದಕಕ್ಕೆ ತೃಪ್ತರಾಗಬೇಕಾಯಿತು. ಪಲ್ಲಿಕ್ಕಲ್ ಅವರು ವಿಶ್ವದ ನಂಬರ್ 1 ಆಟಗಾರ್ತಿ ನಿಕೋಲ್ ಡೇವಿಡ್ ಅವರಿಂದ 4-11, 4-11, 5-11 ಅಂಕಗಳೊಂದಿಗೆ ಪರಾಜಿತರಾದರು.

2014: ಈರೋಡ್ (ತಮಿಳ್ನಾಡು): ನಾಲ್ಕು ಅಂತಸ್ತಿನ ಸರ್ಕಾರಿ ಕಟ್ಟಡದ ಎರಡನೇ ಅಂತಸ್ತಿನ ಬಾಲ್ಕನಿ ಕುಸಿದ ಪರಿಣಾಮವಾಗಿ 22ರ ಹರೆಯದ ಮಹಿಳೆಯೊಬ್ಬರು ಮೃತರಾಗಿ ಇನ್ನೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿ ಘಟಿಸಿತು. ಘಟನೆಯಲ್ಲಿ ಮೃತರಾದ ಮತ್ತು ಗಾಯಗೊಂಡ ಇಬ್ಬರೂ ಮಹಿಳೆಯರು ಕೊಳೆಗೇರಿ ನಿಮೂಲನಾ ಮಂಡಳಿಯ ಕಟ್ಟಡದ ಎರಡನೇ ಅಂತಸ್ತಿನ ಬಾಲ್ಕನಿ ಕುಸಿದಾಗ ಒಂದನೇ ಮಹಡಿಯ ಮೆಟ್ಟಿಲ ಬಳಿ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನ ರಾತ್ರಿ 11.30 ರ ವೇಳೆಗೆ ಈ ಘಟನೆ ಸಂಭವಿಸಿತು ಎಂದು ಅವರು ನುಡಿದರು.

2014: ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಆರೋಗ್ಯ ಪರಿಸ್ಥಿತಿ ಸ್ವಲ್ಪ ಏರು ಪೇರಾದ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಮಧುಮೇಹದ ಸಮಸ್ಯೆಯ ಹಿನ್ನೆಲೆಯಲ್ಲಿ ಜೇಟ್ಲಿ ಅವರನ್ನು ಈ ತಿಂಗಳ ಆದಿಯಲ್ಲಿ ರಾಜಧಾನಿಯ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೇಟ್ಲಿ ಅವರ ಹಠಾತ್ ಅಸ್ವಸ್ಥತೆ ಹಿನ್ನೆಲೆಯಲ್ಲಿ ಈದಿನ ನಡೆಯಬೇಕಾಗಿದ್ದ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಉದ್ಘಾಟನಾ ಸಮಾರಂಭವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ರದ್ದು ಪಡಿಸಿತು. ಜೇಟ್ಲಿ ಅವರ ಕೈಯಿಂದಲೇ ವೆಬ್ ಸೈಟ್ ಉದ್ಘಾಟನೆ ನಿಗದಿಯಾಗಿತ್ತು. ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಇತ್ತೀಚೆಗೆ ಆಸ್ಟ್ರೇಲಿಯಾದ ಕೈರ್ನ್ಸ್ನಲ್ಲಿ ನಡೆದ ಜಿ-20 ಹಣಕಾಸು ಸಚಿವರ ಮಹತ್ವದ ಸಭೆಯೊಂದರಲ್ಲೂ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

2014: ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ 25 ವರ್ಷಗಳಷ್ಟು ಹಳೆಯದಾದ ಮೈತ್ರಿಯನ್ನು ಕೊನೆಗೊಳಿಸದಂತೆ ಒತ್ತಾಯಿಸಿದರು. ಮಹಾರಾಷ್ಟ್ರ ಕೋರ್ ಕಮಿಟಿಯ ಬಹುತೇಕ ಸದಸ್ಯರು ಮತ್ತು ಶಿವಸೇನೆ ಜೊತೆಗೆ ಮೈತ್ರಿ ಮುಂದುವರಿಸಲು ಆಸಕ್ತಿ ಇಲ್ಲದ ಹಿರಿಯ ಬಿಜೆಪಿ ನಾಯಕರ ಮಧ್ಯೆ ಭಿನ್ನಮತ ಹೆಚ್ಚಿದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಠಾಕ್ರೆ ಅವರನ್ನು ಭೇಟಿ ಮಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವುದೇ ಇಲ್ಲವೇ ಎಂಬುದು ಮೇಲೆ ಶಾ- ಠಾಕ್ರೆ ಭೇಟಿಯಿಂದ ಸ್ಪಷ್ಟವಾಗುವುದು ಎನ್ನಲಾಯಿತು. ಶಿವಸೇನೆಯು ಹೆಚ್ಚು ಸ್ಥಾನಗಳಿಗಾಗಿ ತನ್ನ ಪಟ್ಟು ಮುಂದುವರಿಸಿದರೆ ಅದರ ಜೊತೆಗೆ ಮೈತ್ರಿ ಮುಂದುವರಿಕೆ ಬೇಡ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ರಾಜ್ಯ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಮತ್ತಿತರ ಹಲವರು ಅಭಿಪ್ರಾಯ ಪಟ್ಟಿದ್ದರು. ನಿತಿನ್ ಗಡ್ಕರಿಯಂತಹ ಕೆಲವರು ಶಿವಸೇನಾ ಜೊತೆಗೆ ಬಾಂಧವ್ಯ ಮುಂದುವರಿಕೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತ ಪಡಿಸಿದ್ದರು. ಶಿವಸೇನೆಯು ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಹಲವಾರು ಬಾರಿ ನಿತಿನ್ ಗಡ್ಕರಿ ಮೇಲೆ ಹರಿಹಾಯ್ದಿತ್ತು.

2014:
 ಕಾರವಾರ: ಎರಡನೇ ಮಹಾಯುದ್ಧದಲ್ಲಿ ಭಾರತೀಯ ಬ್ರಿಟಿಷ್ ಸೇನೆಯಿಂದ ಭಾಗವಹಿಸಿ ಶೌರ್ಯ ಮೆರೆದಿದ್ದ ಇಲ್ಲಿನ ನಿವೃತ್ತ ಯೋಧ ಚೆಂಡಿಯಾದ ಬುದ್ಯಾ ಗುಣಾ ನಾಯ್ಕ(98) ಹಿಂದಿನ ದಿನ (ಸೆಪ್ಟೆಂಬರ್ 21) ನಿಧನರಾದರು. ಈದಿನ ಅವರ ಅಂತಿಮ ಸಂಸ್ಕಾರ ನೆರವೇರಿತು. ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೊಷ್, ತಹಸೀಲ್ದಾರ್ ಮಧುಕರ ನಾಯ್ಕ ಇತರರು ಗೌರವ ಸಲ್ಲಿಸಿದರು. 1940 ಡಿ.3ರಂದು ಕಾರವಾರದ ಬೈತ್ಖೋಲದಲ್ಲಿ ನಡೆದ ಆರ್ವಿು ಸೆಲೆಕ್ಷನ್ ಕ್ಯಾಂಪ್ನಲ್ಲಿ ಬ್ರಿಟಿಷ್ ಸೇನೆ ಸೇರಿದ ಬುದ್ಯಾ ನಾಯ್ಕ, 2ನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದರು. ಈಜಿಪ್ಟ್, ಸುಡಾನ್, ಜರ್ಮನಿ, ಇಟಲಿ, ಪ್ಯಾರಿಸ್, ಇರಾಕ್ ದೇಶಗಳಿಗೆ ತೆರಳಿ ಯುದ್ಧ ಮಾಡಿದ್ದರು. ನಂತರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ಇವರ ಹಿರಿಮಗ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಈಗ ಮೊಮ್ಮಗ ವಿನೋದ ಭಾರತೀಯ ನೌಕಾಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಳಿಯ ಗಜಾನನ ನಾಯ್ಕ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

2014: ಹುಮನಾಬಾದ್: ಚಿಟಗುಪ್ಪದ ಕೊಡಂಬಲ್ ರಸ್ತೆಯಲ್ಲಿನ ವಿವಾದಿತ ಕಸಾಯಿಖಾನೆ ಲೈಸೆನ್ಸ್ ರದ್ದು ಮಾಡಲಾಯಿತು.  ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ಕಸಾಯಿಖಾನೆ ಕೆಲಸಗಾರರು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ, ಕಸಾಯಿಖಾನೆ ಹಾಗೂ ಕಪ್ಪರಗಾಂವ ರಸ್ತೆಯಲ್ಲಿರುವ ಡಾಲ್ಡಾ ಅಕ್ರಮ ತಯಾರಿಕಾ ಕೇಂದ್ರಕ್ಕೆ ಸಂಸದ ಭಗವಂತ ಖೂಬಾ ಹಾಗೂ ಶಾಸಕ ರಾಜಶೇಖರ ಪಾಟೀಲ್ ಅಧಿಕಾರಿಗಳ ಜತೆ ತೆರಳಿ ಪರಿಶೀಲನೆ ನಡೆಸಿದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಸಾಯಿಖಾನೆಯೊಳಗೆ ಕಾಲಿಡುತ್ತಲೇ ನೂರಾರು ದನಗಳನ್ನು ಕಡಿಯುವುದನ್ನು ಕಂಡು ದಂಗಾದ ಸಂಸದ-ಶಾಸಕರು, ಅಲ್ಲಲ್ಲಿ ಬಿದ್ದ ಎಲುಬುಗಳು, ರಕ್ತ ಮತ್ತು ಮಾಂಸದ ದುರ್ವಾಸನೆ ಸಹಿಸಿಕೊಳ್ಳಲಾಗದೆ ಹೊರಬಂದು ವಾಂತಿ ಮಾಡಿಕೊಂಡರು. ಕಸಾಯಿಖಾನೆ ಲೈಸನ್ಸ್ ರದ್ದುಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ್, ವರದಿ ಮಾಡಲು ಬಂದ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಅಕ್ಷಮ್ಯ. ಸಮಗ್ರ ತನಿಖೆಗೆ ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಬೀದರ್: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಕಸಾಯಿಖಾನೆ, ದನದ ಎಲುಬಿನಿಂದ ಡಾಲ್ಡಾ ತಯಾರಿಸುವ ಘಟಕಗಳು ಕಾರ್ಯಾಚರಿಸುತ್ತಿದ್ದರೂ ಸರ್ಕಾರ ಮೌನ ವಹಿಸಿದೆ.

2014: ಶ್ರೀನಗರ: ಭೀಕರ ಪ್ರವಾಹದಿಂದಾಗಿ ಕಾಶ್ಮೀರ ಕಣಿವೆ ಭಾಗದ ಗಡಿ ಪ್ರದೇಶಗಳಲ್ಲಿ ನಾಶಗೊಂಡಿದ್ದ 70 ಬಾರ್ಡರ್ ಔಟ್ಪೋಸ್ಟ್ಗಳನ್ನು ಮರುಸ್ಥಾಪಿಸಲಾಗಿದೆ ಎಂದು ಸೇನೆ ತಿಳಿಸಿತು. ಪ್ರವಾಹದಿಂದಾಗಿ ಸುಮಾರು 30-40 ಸೇನಾ ಶಿಬಿರಗಳು, ಚೆಕ್ಪೋಸ್ಟ್ಗಳು ಹಾಗೂ ಅನೇಕ ಬಂಕರ್ಗಳು ನಾಶಗೊಂಡಿದ್ದವು. ಗಡಿ ನಿಯಂತ್ರಣ ರೇಖೆಯಲ್ಲಿ 30 ಚೆಕ್ಪೋಸ್ಟ್ಗಳು ಹಾಗೂ 10-15 ಬಂಕರ್ಗಳು ನಾಶವಾಗಿದ್ದವು. ಇವುಗಳನ್ನು ಯಶಸ್ವಿಯಾಗಿ ಮರು ಸ್ಥಾಪಿಸಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದರು.

2007: ಬೆಂಗಳೂರಿನ ಎನ್. ಎ. ಸಂದೀಪ್ ಎಲ್ಲೈಸಿ 61ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಅವರು ತಮ್ಮ ಜೀವನದ ಮೊಟ್ಟ ಮೊದಲ ರಾಷ್ಟ್ರೀಯ ಪದಕ ಗೆದ್ದುಕೊಂಡರು. ಪಣಜಿಯ ಕಂಪಾಲ್ ಈಜುಗೊಳದಲ್ಲಿ ನಡೆದ ಪುರುಷರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಸಂದೀಪ್ ಅವರು ದೂರವನ್ನು 28.3 ಸೆಕೆಂಡುಗಳಲ್ಲಿ ಕ್ರಮಿಸಿ ಈ ಸಾಧನೆ ಮಾಡಿದರು. ಕಳೆದ ಬಾರಿಯ ಚಾಂಪಿಯನ್ ಅರ್ಜುನ್ ಮುರಳೀಧರನ್ ಅವರು ಭಾರಿ ಪೈಪೋಟಿ ಒಡ್ಡಿದರಾದರೂ, ಕೊನೆಯ ಹಂತದಲ್ಲಿ ತಮ್ಮ ವೇಗದಲ್ಲಿ ಕೊಂಚ ಹಿನ್ನಡೆದದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಭಗವಾನ್ ಮಹಾವೀರ್ ಜೈನ್ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ತಿ ಸಂದೀಪ್ ಆರಂಭದಲ್ಲಿ ಸ್ವಲ್ಪ ಹಿಂದೆ ಇದ್ದರೂ, ನಿರ್ಣಾಯಕ ಘಟ್ಟದಲ್ಲಿ ವೇಗವಾಗಿ ಈಜಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಕಂಚಿನ ಪದಕವನ್ನು ತಮಿಳುನಾಡಿನ ಬಾಲಕೃಷ್ಣನ್ ಅವರು 28.51ಸೆ. ಗಳೊಂದಿಗೆ ತಮ್ಮ ಕೊರಳಿಗೆ ಹಾಕಿಸಿಕೊಂಡರು. ಮಹಿಳೆಯರ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಶಿಖಾ ಟಂಡನ್ ಬಂಗಾರದ ಪದಕವನ್ನು ತಮ್ಮ ಕೊರಳಿಗೆ ಹಾಕಿಸಿಕೊಂಡರು. ಒಲಿಂಪಿಯನ್ ಶಿಖಾ ಅವರು ಈ  ದೂರವನ್ನು 31.48ಸೆಕೆಂಡುಗಳಲ್ಲಿ ಕ್ರಮಿಸಿದರು. ಕೂಟದ ಮೂರನೇ ದಿನ ಕರ್ನಾಟಕ ತಂಡಕ್ಕೆ ಒಟ್ಟು ಮೂರು ಚಿನ್ನದ ಪದಕ ದೊರೆತವು.

2007: ಭಾರತ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಅಧಿಕೃತ ವೆಬ್ ಸೈಟ್ www. dhoni.org  ಹೆಸರಿನ ವೆಬ್ ಸೈಟನ್ನು ಈದಿನ ಕೋಲ್ಕತ್ತದಲ್ಲಿ ಆರಂಭಿಸಲಾಯಿತು.

2007: ಮೆಕ್ಸಿಕೊ ನಗರದಲ್ಲಿ ನಡೆದ ಚೆಸ್  ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವುದರಲ್ಲಿ ಯಶಸ್ವಿಯಾದರು. ಎಂಟನೇ ಸುತ್ತಿನ ಪಂದ್ಯದಲ್ಲಿ ಕೇವಲ ಅರ್ಧ ಪಾಯಿಂಟ್ ಗಿಟ್ಟಿಸಿದರೂ ಭಾರತದ ಆನಂದ್ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿ ನಿಲ್ಲುವಲ್ಲಿ ಯಶಸ್ವಿಯಾದರು. ಬೋರಿಸ್ ಗೆಲ್ಫಾಂಡ್ ಅವರೊಂದಿಗೆ ಜಂಟಿಯಾಗಿದ್ದ ವಿಶ್ವನಾಥನ್ ಆನಂದ್ ಅವರು ಬೋರಿಸ್ ಅವರನ್ನು ಅರ್ಧ ಪಾಯಿಂಟಿನಿಂದ ಹಿಂದೆ ತಳ್ಳಿದರು.

 2007: ಲಾರಿ ಡಿಕ್ಕಿಯಿಂದಾಗಿ ಪುರುಷತ್ವ ಕಳೆದುಕೊಂಡ ಬೈಕ್ ಸವಾರ, ರಾಜ್ಯ ಗುಪ್ತಚರ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿದ್ದ ಟಿ.ದ್ಯಾವೇಗೌಡ (43) ಅವರಿಗೆ ಎಂಟು ಲಕ್ಷ ರೂಪಾಯಿಗಳ ಪರಿಹಾರವನ್ನು ಅರ್ಜಿ ಸಲ್ಲಿಸಿದ ದಿನದಿಂದ ಶೇಕಡಾ 8 ವಾರ್ಷಿಕ ಬಡ್ಡಿ ಸಹಿತವಾಗಿ ಪಾವತಿ ಮಾಡುವಂತೆ ಯುನೈಟೆಡ್ ಇಂಡಿಯಾ ಇನ್ ಶ್ಯೂರೆನ್ಸ್ ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಆಜ್ಞಾಪಿಸಿತು. ನ್ಯಾಯಮೂರ್ತಿಗಳಾದ   ಕೆ.ಎಲ್. ಮಂಜುನಾಥ ಹಾಗೂ ಜಾವೇದ್ ರಹೀಂ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶ ನೀಡಿತು. ದ್ಯಾವೇಗೌಡ ಅವರು 1999ರ ಜುಲೈ 26ರಂದು ಅವರು ಸ್ಕೂಟರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿತ್ತು. ಗಾಯಗೊಂಡ ಅವರಿಗೆ ಐದು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸೊಂಟದ ಕೆಳಭಾಗ ಸಂಪೂರ್ಣ ಹಾನಿಗೊಳಗಾದ ಕಾರಣ, ಅವರು ಪೇದೆ ಕೆಲಸ ನಿರ್ವಹಿಸಲೂ ಅಶಕ್ತರಾದರು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಪ್ರತಿದಿನ ಮೂತ್ರದ ನಳಿಕೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೂ ಉಂಟಾಯಿತು. ಮೋಟಾರು ವಾಹನ ಅಪಘಾತ ನ್ಯಾಯಾಲಯ ಅವರಿಗೆ ರೂ. 3.27 ಲಕ್ಷ  ಪರಿಹಾರಕ್ಕೆ ಆದೇಶಿಸಿತ್ತು. ಪರಿಹಾರದ ಹಣವನ್ನು ಹೆಚ್ಚು ಮಾಡುವಂತೆ ಅವರು ಹೈಕೋರ್ಟ್  ಮೊರೆ ಹೋಗಿದ್ದರು.

2007: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಂಡನೆಗೆ ಒತ್ತು ನೀಡುವುದರ ಜೊತೆಗೆ ಪಕ್ಷದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವ ನಿರ್ಣಯವನ್ನು ಭೋಪಾಲಿನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಅಂಗೀಕರಿಸಿತು. ಮೀಸಲಾತಿ ಕುರಿತಂತೆ ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನೇತೃತ್ವದ ಸಮಿತಿ ಸಿದ್ಧಪಡಿಸಿದ್ದ ವರದಿಯನ್ನು ಬಿಜೆಪಿ ರಾಷ್ಟ್ರೀಯ ಮಂಡಳಿ ಅಂಗೀಕರಿಸಿತು. ಈ ವರ್ಷದ ಜೂನ್ 26ರಂದು ರಾಜನಾಥ್ ಸಿಂಗ್ ಈ ಸಮಿತಿ ರಚಿಸಿದ್ದರು. ಪಕ್ಷದ ಎಲ್ಲಾ ಘಟಕಗಳಲ್ಲೂ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ಒದಗಿಸಲಾಗುವುದು ಎಂದು ಪಕ್ಷ ಹೇಳಿತು.

2007: ಅಮೆರಿಕದಲ್ಲಿ ನೆಲೆಸಿದ ಭಾರತೀಯ ಮೂಲದ ನಾಲ್ವರು, ಫೋರ್ಬ್ಸ್ ಪತ್ರಿಕೆ ಪ್ರಕಟಿಸಿದ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. ಐಪಾಡ್ ಸ್ಪೀಕರ್, ಹೋಮ್ ಥಿಯೇಟರ್, ಗದ್ದಲ ನಿಯಂತ್ರಕ ಹೆಡ್ ಫೋನ್ ತಯಾರಿಕೆಯಲ್ಲಿ ಮೊದಲಿಗರಾದ ಅಮರ್ ಬೋಸ್, ಗೂಗಲ್ ಸಂಸ್ಥಾಪಕ ನಿರ್ದೇಶಕ ಕವಿತಾರ್ಕ್ ಶ್ರೀರಾಮ್, ಬಂಡವಾಳ ಹೂಡಿಕೆದಾರ ವಿನೋದ್ ಖೋಸ್ಲಾ ಮತ್ತು ಹೊರಗುತ್ತಿಗೆ ಸಂಸ್ಥೆ ಇನ್ಫೋಟೆಕ್ಕಿನ ಭರತ್ ದೇಸಾಯಿ ಮತ್ತು ಅವರ ಪತ್ನಿ ನೀರಜಾ ದೇಸಾಯಿ ಪಟ್ಟಿಯಲ್ಲಿ ಸ್ಥಾನ ಪಡೆದವರು. 77 ವರ್ಷದ ಅಮರ್ ಬೋಸ್ ಹಾಗೂ ಗೂಗಲ್ ನ ಶ್ರೀರಾಮ್ ಪಟ್ಟಿಯಲ್ಲಿ 271ನೇ ಸ್ಥಾನ ಹಂಚಿಕೊಂಡಿದ್ದಾರೆ. ಅವರಿಬ್ಬರೂ ತಲಾ ಸುಮಾರು 180 ಶತ ಕೋಟಿ ಡಾಲರಿನಷ್ಟು ಆಸ್ತಿ ಹೊಂದ್ದಿದಾರೆ. ಕಳೆದ ವರ್ಷ ಇವರಿಬ್ಬರು 242ನೇ ಸ್ಥಾನವನ್ನು ಹಂಚಿಕೊಂಡಿದ್ದರು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಟೈಗರ್ ಮೆಮನ್ ನ ಇಬ್ಬರು ನಿಕಟವರ್ತಿಗಳಾದ ದಾವೂದ್ ಮೊಹಮ್ಮದ್ ಫಾನ್ಸೆ ಯಾನೆ ದಾವೂದ್ ಟಾಕ್ಲಾ (82) ಮತ್ತು ಷರೀಫ್ ಅಬ್ದುಲ್ ಗಫೂರ್ ಪಾರ್ಕರ್ ಯಾನೆ ದಾದಾಭಾಯಿ (75) ದೋಷಿಗಳು ಎಂದು ಟಾಡಾ ವಿಶೇಷ ನ್ಯಾಯಾಲಯ ತೀರು ನೀಡಿತು. ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಪಾತ್ರ ಇರುವುದನ್ನು ನ್ಯಾಯಾಲಯ ಇದೇ ಮೊದಲ ಬಾರಿಗೆ ಎತ್ತಿ ಹಿಡಿಯಿತು.

2006: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾಗಿದ್ದ ಮಲಪ್ರಭಾ ನದಿಗೆ ಕಳಸಾ ಮತ್ತು ಬಂಡೂರಿ ನಾಲೆಗಳ ಜೋಡಣೆ ಕಾಮಗಾರಿಗೆ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು.

2006: ಪ್ಯಾಂತಲೂನ್ ರಿಟೇಲ್ (ಇಂಡಿಯಾ) ಲಿಮಿಟೆಡ್ನ ಬಿಗ್ ಬಜಾರ್ ತನ್ನ 32ನೇ ಬಿಗ್ ಬಜಾರ್ ಮಳಿಗೆಯನ್ನು ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಆರಂಭಿಸಿತು. ಇದು ದೇಶದಲ್ಲೇ ಅತಿ ದೊಡ್ಡ ಮಳಿಗೆ ಎಂಬುದು ಕಂಪೆನಿಯ ಪ್ರತಿಪಾದನೆ.

1989: ಕವಿ ಇರ್ವಿಂಗ್ ಬರ್ಲಿನ್ ಅವರು ತಮ್ಮ 101ನೇ ವಯಸಿನಲ್ಲಿ ನ್ಯೂಯಾರ್ಕ್ ನಗರದಲ್ಲಿನಿಧನರಾದರು.

1986: ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಕ್ರಿಕೆಟ್ ಪಂದ್ಯ `ಟೈ' ಆಯಿತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಟೈ ಆದದ್ದು ಇದು ಎರಡನೆಯದು. ಇದು ಸುನಿಲ್ ಗಾವಸ್ಕರ್ ಅವರ 100ನೇ ಟೆಸ್ಟ್ ಪಂದ್ಯವೂ ಆಗಿತ್ತು.

1981: ಸೌರಶಕ್ತಿಯ ಮೋಟಾರ್ ಸೈಕಲನ್ನು ತಯಾರಿಸಿರುವುದಾಗಿ ಶ್ರೀಲಂಕಾ ವಿಜ್ಞಾನಿಗಳು ಕೊಲಂಬೋದಲ್ಲಿ ಪ್ರಕಟಿಸಿದರು. ಇಂಧನ ಬಿಕ್ಕಟ್ಟನ್ನು ನಿವಾರಿಸುವುದೇ ಸೌರಶಕ್ತಿಯ ಮೋಟಾರ್ ಸೈಕಲ್ ತಯಾರಿಕೆಯ ಉದ್ದೇಶ ಎಂದು ಅವರು ನುಡಿದರು.

1980: ಪರ್ಷಿಯ ಕೊಲ್ಲಿಯ ಉತ್ತರ ಕರಾವಳಿಯಲ್ಲಿನ ಶಟ್ ಅಲ್ ಅರಬ್ ಜಲಮಾರ್ಗದ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಇರಾನಿನ ಮೇಲೆ ಇರಾಕ್ ದಾಳಿ ಮಾಡಿತು. ಇದರೊಂದಿಗೆ ಪರ್ಷಿಯ ಕೊಲ್ಲಿ ಘರ್ಷಣೆ ಪೂರ್ಣ ಪ್ರಮಾಣದ ಸಮರವಾಗಿ ಮಾರ್ಪಟ್ಟಿತು.

1977: ಜಮಾತ್-ಎ- ಇಸ್ಲಾಮೀ ಸಂಸ್ಥಾಪಕ ಮೌಲಾನಾ ಅಬ್ದುಲ್ ಅಲಿ ಮೌದುದಿ ನಿಧನ.

1954: ಸಾಹಿತಿ ಚಿನ್ನಾಸ್ವಾಮಿ ಮೂಡ್ನಕೂಡು ಜನನ.

1953: ಸಾಹಿತಿ ಓ.ಎಲ್. ನಾಗಭೂಷಣ ಸ್ವಾಮಿ ಜನನ.

1952: ಖ್ಯಾತ ತೆಲುಗು ಸಾಹಿತಿ ಬಾಪಿರಾಜು ನಿಧನ.

1941: ಖ್ಯಾತ ಸಾಹಿತಿ ಪ್ರೇಮಾ ಭಟ್ ಜನನ.

1938: ಸಾಹಿತಿ ಟಿ.ಎಲ್. ದೇವರಾಜು ಜನನ.

1895: ಆಸ್ಟ್ರಿಯಾ ಸಂಜಾತ ಅಮೆರಿಕನ್ ಚಿತ್ರ ನಟ ಪೌಲ್ ಮುನಿ (1895-1967) ಜನ್ಮದಿನ. (ಕುತೂಹಲದ ಸಂಗತಿ ಗೊತ್ತೆ? ಭಾರತದ ಖ್ಯಾತ ನಟ ಅಶೋಕ್ ಕುಮಾರ್ ಅವರು `ದಾದಾಮೋನಿ' ಎಂದೇ ಜನಪ್ರಿಯರಾಗಿದ್ದರು. ತಾನು ಪೌಲ್ ಮುನಿಯ ಸಹೋದರ `ದಾದಾ ಮುನಿ' ಎಂಬುದಾಗಿ ಅಶೋಕ್ ಕುಮಾರ್ ತಮಾಷೆ ಮಾಡುತ್ತಿದ್ದರು.)

1857: ಮೂವರು ಮೊಘಲ್ ರಾಜಕುಮಾರರನ್ನು ಕ್ಯಾಪ್ಟನ್ ಹೊಡ್ಸನ್ ದೆಹಲಿಯಲ್ಲಿ ಕೊಂದು ಹಾಕಿದ (ರಾಜಕುಮಾರರಲ್ಲಿ ಇಬ್ಬರು ಎರಡನೇ ಬಹಾದುರ್ ಶಹಾನ ಮಕ್ಕಳು ಮತ್ತು ಮೂರನೆಯವ ಮೊಮ್ಮಗ). ಮೂವರೂ ರಾಜಕುಮಾರರ ಬಟ್ಟೆ ಬಿಚ್ಚಿಸಿ ಒಳ ಉಡುಪುಗಳಲ್ಲಿ ನಿಲ್ಲಿಸಿದ ಹೊಡ್ಸನ್ ಅತ್ಯಂತ ಸಮೀಪದಿಂದ ಅವರಿಗೆ ಗುಂಡು ಹಾರಿಸಿದ. ಅವರ ಶವಗಳನ್ನು ನಾಯಿಗಳು ಹಾಗೂ ಹದ್ದುಗಳಿಗೆ ತಿನ್ನಲು ಎಸೆಯಲಾಯಿತು.

1599: ಭಾರತದಲ್ಲಿ ವ್ಯಾಪಾರ ನಡೆಸುವ ಸಲುವಾಗಿ 24 ಮಂದಿ ವರ್ತಕರು ಲಂಡನ್ನಿನಲ್ಲಿ ಸಭೆ ಸೇರಿ 30,133 ಪೌಂಡ್ ಪಾಲುಬಂಡವಾಳದೊಂದಿಗೆ `ದಿ ಗವರ್ನರ್ ಅಂಡ್ ಕಂಪೆನಿ ಆಫ್ ಮರ್ಚೆಂಟ್ಸ್ ಆಫ್ ಲಂಡನ್ ಟ್ರೇಡಿಂಗ್ ಇನ್ ಟು ದಿ ಈಸ್ಟ್ 
ಇಂಡೀಸ್' ಹೆಸರಿನಲ್ಲಿ ಕಂಪೆನಿಯನ್ನು ಆರಂಭಿಸಿದರು. ಈ ಕಂಪೆನಿ `ಈಸ್ಟ್ ಇಂಡಿಯಾ ಕಂಪೆನಿ' ಎಂದೇ ಖ್ಯಾತಿ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ) 

No comments:

Advertisement