Monday, November 4, 2019

ಕೇಂದ್ರದ ತುರ್ತು ಸಭೆ: ಸುಡುವಿಕೆ ಕಡಿತಕ್ಕೆ ಪಂಜಾಬ್, ಹರಿಯಾಣಕ್ಕೆ ಸೂಚನೆ


ಕೇಂದ್ರದ ತುರ್ತು ಸಭೆ: ಸುಡುವಿಕೆ ಕಡಿತಕ್ಕೆ ಪಂಜಾಬ್, ಹರಿಯಾಣಕ್ಕೆ ಸೂಚನೆ
ನವದೆಹಲಿ: ರಾಷ್ಟ್ಟೀಯ ರಾಜಧಾನಿ ಪ್ರದೇಶ ಮತ್ತು ದೆಹಲಿ ಸುತ್ತು ಮುತ್ತಣ ಉಪನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 2019 ನವೆಂಬರ್ 3ರ ಭಾನುವಾರ ತುರ್ತು ಸಭೆ ನಡೆಸಿದ ಕೇಂದ್ರ ಸರ್ಕಾರವು ಸುಡುವಿಕೆಯನ್ನು ಕಡಿಮೆಗೊಳಿಸಿ, ದೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೂಚನೆ ನೀಡಿತು.

ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಯವರು ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.

ದೆಹಲಿಯ ಅಧಿಕಾರಿಗಳಲ್ಲದೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಪ್ರತಿನಿಧಿಗಳು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಭೆಗೆ ಹಾಜರಾದರು. ಪ್ರಧಾನಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಪಿ.ಕೆ. ಮಿಶ್ರ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸಭೆಯನ್ನು ನಡೆಸಿದರು.

ಸಂಪುಟ ಕಾರ್ಯದರ್ಶಿಯವರು ರಾಜ್ಯಗಳಲ್ಲಿನ ಪರಿಸ್ಥಿತಿಯ ಮೇಲೆ ಪ್ರತಿದಿನವೂ ನಿಗಾ ಇಡಬೇಕು ಎಂದು ಸಭೆಯು ನಿರ್ಧರಿಸಿತು. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ತಮ್ಮ ರಾಜ್ಯಗಳ ವಿವಿಧ ಜಿಲ್ಲೆಗಳ ಪರಿಸ್ಥಿತಿ ಮೇಲೆ ಪ್ರತಿದಿನವೂ ನಿರಂತರ ನಿಗಾ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಯಿತು.

ಕೊಯ್ದ ಪೈರಿನ ಕೂಳೆ ಸೇರಿದಂತೆ ತ್ಯಾಜ್ಯ ವಸ್ತುಗಳ ಸುಡುವಿಕೆಯನ್ನು ತಗ್ಗಿಸುವಂತೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೊಗೆ ಮತ್ತು ದೂಳಿನ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಕೇಂದ್ರವು ನೆರೆಯ ರಾಜ್ಯಗಳಿಗೆ ಸೂಚಿಸಿತು.

ದೆಹಲಿ ಮತ್ತು ಅದರ ಉಪನಗರಗಳಲ್ಲಿ ಈದಿನ  ಬೆಳಗ್ಗೆ ವಾಯುಮಾಲಿನ್ಯ ಸೂಚ್ಯಂಕವು ೯೯೯ ಗಡಿ ದಾಟಿ ಅಪಾಯದ ಮುನ್ನೆಚ್ಚರಿಕೆ ನೀಡಿತ್ತು.

No comments:

Advertisement