ಆರ್‌ಬಿಐ ದರ ಕಡಿತ ಮತ್ತು ಇಎಂಐ sಸ್ಥಗಿತ:
‘ದೈತ್ಯ ಹೆಜ್ಜೆಗಳು’ ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ: ಒಂದು ದಶಕದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣzಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಿದ ಮತ್ತು ಎಲ್ಲ ಅವಧಿ ಸಾಲಗಳ ಇಎಂಐ ಕಂತುಗಳ ಪಾವತಿಯನ್ನು ಮೂರು ತಿಂಗಳ ಅವಧಿಗೆ ಸ್ಥಗಿತಗೊಳಿಸಿದ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಕ್ರಮಗಳನ್ನು ’ದೈತ್ಯ ಹೆಜ್ಜೆಗಳು’ ಎಂಬುದಾಗಿ 2020 ಮಾರ್ಚ್ 27ರ ಶುಕ್ರವಾರ ಬಣ್ಣಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
"ಇಂದು ಆರ್ಬಿಐ ನಮ್ಮ ಆರ್ಥಿಕತೆಯನ್ನು ಕೊರೋನವೈರಸ್ ಪ್ರಭಾವದಿಂದ ರಕ್ಷಿಸಲು ದೈತ್ಯ ಕ್ರಮಗಳನ್ನು ತೆಗೆದುಕೊಂಡಿದೆ" ಎಂದು ಪ್ರಧಾನಿ ಟ್ವೀಟ್ ಮಾಡಿದರು.
"ಆರ್ಬಿಐ ಪ್ರಕಟಣೆಗಳು ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿ ದ್ರವ್ಯತೆಯನ್ನು (ಲಿಕ್ವಿಡಿಟಿ) ಸುಧಾರಿಸುತ್ತದೆ, ನಿಧಿಯ ವೆಚ್ಚವನ್ನು ಕಡಿಮೆ ಮಾಡುತ್ತದೆ, ಮಧ್ಯಮ ವರ್ಗ ಮತ್ತು ವ್ಯವಹಾರಗಳಿಗೆ ಸಹಾಯ ಮಾಡುತ್ತದೆ" ಎಂದು ಮೋದಿ ಟ್ವೀಟ್ ಮಾಡಿದರು.
ಕೊರೋನವೈರಸ್ ಸಾಂಕ್ರಾಮಿಕ ರೋಗದ ಕ್ಷಿಪ್ರ ಹರಡುವಿಕೆಯಿಂದಾಗಿ ಸಂಕಷ್ಟಕ್ಕೆ ಈಡಾಗಿರುವ ನಿಧಾನಗತಿಯ ಆರ್ಥಿಕತೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ಮಾನದಂಡ ಬಡ್ಡಿದರವಾದ ರೆಪೊ ದರವನ್ನು ೭೫ ಬೇಸಿಸ್ ಪಾಯಿಂಟ್ನಿಂದ ೪.೪% ಕ್ಕೆ ಇಳಿಸಲಾಗಿದೆ ಎಂದು ಪ್ರಕಟಿಸಿದ್ದರು. ಇದು ಕಳೆದ ೧೫ ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ದರ, ಇದರ ಜೊತೆಗೆ ರಿವರ್ಸ್ ರೆಪೊ ದರವನ್ನು ಕೂಡಾ ಆರ್ಬಿಐ ೯೦ ಬೇಸಿಸ್ ಪಾಯಿಂಟ್ನಿಂದ ೪% ಕ್ಕೆ ಇಳಿಸಿತು.
ಕಳೆದ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾಂಕುಗಳು ನಿರ್ವಹಿಸುತ್ತಿರುವ ನಗದು ಮೀಸಲು ಅನುಪಾತವನ್ನು (ಸಿಆರ್ಆರ್) ಕೂಡಾ ಆರ್ಬಿಐ ಕಡಿಮೆ ಮಾಡಿತು. ಬ್ಯಾಂಕಿಂಗ್ ವ್ಯವಸ್ಥೆಗೆ ೧೩೭,೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಎಲ್ಲ ಬ್ಯಾಂಕುಗಳ ಸಿಆರ್ಆರ್ ಅನ್ನು ೧೦೦ ಬೇಸಿಸ್ ಪಾಯಿಂಟ್ನಷ್ಟು ಕಡಿತಗೊಳಿಸಿತು.
ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಆರ್ಥಿಕತೆಯ ಮೇಲೆ ಕೊರೋನವೈರಸ್ಸಿನ ಪರಿಣಾಮವನ್ನು ತಗ್ಗಿಸಲು ಅಗತ್ಯವಿರುವವರೆಗೂ ತನ್ನ ಹೊಂದಾಣಿಕೆ ನಿಲುವನ್ನು ಉಳಿಸಿಕೊಳ್ಳಲು ತಾನು ನಿರ್ಧರಿಸಿರುವುದಾಗಿ ಆರ್ಬಿಐ ಹೇಳಿತು. ಇದೇ ವೇಳೆಗೆ ಹಣದುಬ್ಬರವು ಗುರಿಯೊಳಗೆ ಉಳಿಯುವುದನ್ನೂ ಬಾಂಕ್ ಖಚಿತಪಡಿಸುತ್ತದೆ ಎಂದು ಅದು ಹೇಳಿತು.
ಆರ್ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಈ ವಾರದ ಆರಂಭದಲ್ಲಿ ಸಭೆ ಸೇರಿ ನಿರ್ಧಾರಕ್ಕೆ ಬಂದಿದೆ.
No comments:
Post a Comment