Tuesday, October 20, 2020

ಕೇಂದ್ರ ಕೃಷಿ ಮಸೂದೆಗೆ ತಿರಸ್ಕಾರ, ೩ ರಾಜ್ಯ ಕೃಷಿ ಮಸೂದೆ ಮಂಡನೆ

 ಪದತ್ಯಾಗಕ್ಕೂ ಹೆದರುವುದಿಲ್ಲ: ಕ್ಯಾಪ್ಟನ್ ಅಮರೀಂದರ್ ಸಿಂಗ್

ಕೇಂದ್ರ ಕೃಷಿ ಮಸೂದೆಗೆ ತಿರಸ್ಕಾರ, ರಾಜ್ಯ ಕೃಷಿ ಮಸೂದೆ ಮಂಡನೆ

ಚಂಡೀಗಢ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ತಿರಸ್ಕರಿಸುವ ನಿರ್ಣಯ ಹಾಗೂ ತನ್ನದೇ ಆದ ರಾಜ್ಯ ಕೃಷಿ ಮಸೂದೆಗಳನ್ನು ಪಂಜಾಬ್ ವಿಧಾನಸಭೆಯಲ್ಲಿ 2020 ಅಕ್ಟೋಬರ್ 20 ಮಂಗಳವಾರ ಮಂಡಿಸಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು, ‘ನಾನು ರಾಜೀನಾಮೆ ನೀಡಲು ಹೆದರುವುದಿಲ್ಲಎಂದು  ಘೋಷಿಸಿದರು.

ಕೇಂದ್ರವು ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿನನ್ನ ಸರ್ಕಾರವನ್ನು ವಜಾಗೊಳಿಸುವ ಬಗ್ಗೆ ನನಗೆ ಭಯವಿಲ್ಲ. ಆದರೆ ರೈತರು ತೊಂದರೆ ಅನುಭವಿಸಲು ಅಥವಾ ಹಾಳಾಗಲು ನಾನು ಬಿಡುವುದಿಲ್ಲ’ ಎಂದು ಹೇಳಿದರು.

ಹೊಸ ಕೃಷಿ ಕಾನೂನುಗಳ ಕುರಿತು ಚಂಡೀಗಢದಲ್ಲಿ ನಡೆದ ವಿಶೇಷ ವಿಧಾನಸಭೆಯ ಅಧಿವೇಶನದ ಎರಡನೇ ದಿನದಂದು ಸದನದ ನಾಯಕರಾಗಿರುವ ಸಿಂಗ್ ಅವರು ನಿರ್ಣಯವನ್ನು ಮಂಡಿಸಿದರು. ಕೇಂದ್ರದ ಕೃಷಿ ಕಾನೂನುಗಳಿಗೆ ಬದಲಿಯಾಗಿ ಮೂರು ರಾಜ್ಯ ಮಸೂದೆಗಳನ್ನೂ ಮುಖ್ಯಮಂತ್ರಿ ಪರಿಚಯಿಸಿದರು.

ಸಾಧ್ಯವಾದಷ್ಟು ಕಾನೂನುಗಳನ್ನು ಬಳಸಿಕೊಂಡು ರಾಜ್ಯ ಮಟ್ಟದಲ್ಲಿ ಕೃಷಿ ಕಾನೂನುಗಳು ಪರಿಣಾಮ ಬೀರದಂತೆ ತಡೆಯಲು ಪಂಜಾಬ್ ಯತ್ನಿಸುತ್ತಿದೆಎಂದು ಅವರು ನುಡಿದರು. ಕೃಷಿ ಕಾನೂನುಗಳ ವಿರುದ್ಧ ರೈತರು ಮತ್ತು ರಾಜಕೀಯ ಪಕ್ಷಗಳು ನಡೆಸಿದ ಪ್ರತಿಭಟನೆಯ ಪ್ರಮುಖ ಕೇಂದ್ರಗಳಲ್ಲಿ ಪಂಜಾಬ್ ಒಂದಾಗಿತ್ತು.

"ನಾವು ನಿಮ್ಮೊಂದಿಗೆ ನಿಂತಿದ್ದೇವೆ, ಈಗ ನಮ್ಮೊಂದಿಗೆ ನಿಲ್ಲುವುದು ನಿಮ್ಮ ಸರದಿ" ಎಂದು ಅಮರೀಂದರ್ ಸಿಂಗ್ ರೈತರಿಗೆ ಮನವಿ ಮಾಡಿದರು.

ಏತನ್ಮಧ್ಯೆ, ಅಮರೀಂದರ್ ಸಿಂಗ್ ಸರ್ಕಾರವು ಕೃಷಿಯ ಬಗ್ಗೆ ಹೊಸ ಕಾನೂನಿನ ಕರಡನ್ನು ಹಂಚಿಕೊಳ್ಳದಿರುವುದನ್ನು ವಿರೋಧಿಸಿ ವಿರೋಧೀ ಆಮ್ ಆದ್ಮಿ ಪಕ್ಷದ ಶಾಸಕರು ಕಳೆದ ರಾತ್ರಿ ವಿಧಾನಸಭೆ ಕಟ್ಟಡದಲ್ಲಿ ಪ್ರತಿಭಟನೆ ನಡೆಸಿದರು.

ಅಮರಿಂದರ್ ಸಿಂಗ್ ಪರಿಚಯಿಸಿದ ಮೂರು ಮಸೂದೆಗಳು: ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ ಮಸೂದೆ ೨೦೨೦, ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ ೨೦೨೦, ಮತ್ತು ರೈತರು (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳು (ವಿಶೇಷ ನಿಬಂಧನೆಗಳು ಮತ್ತು ಪಂಜಾಬ್ ತಿದ್ದುಪಡಿ) ಮಸೂದೆ ೨೦೨೦.

ಸೋಮವಾರವೇ ಪಂಜಾಬ್ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಬೇಕಿತ್ತು ಎಂದು ರಾಜ್ಯದ ವಿರೋಧ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಪ್ರತಿಪಾದಿಸಿತು.

ಕೇಂದ್ರದ ಆಡಳಿತಾರೂಢ ಬಿಜೆಪಿಯ ವಿರುದ್ಧ ಬೃಹತ್ ರಾಜಕೀಯ ಚಂಡಮಾರುತವನ್ನೇ ಎಬ್ಬಿಸಿದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳು ಸೆಪ್ಟೆಂಬರ್ ೨೯ ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತದೊಂದಿಗೆ ಕಾನೂನುಗಳಾಗಿ ಮಾರ್ಪಟ್ಟಿವೆ. ಕೃಷಿ ಕ್ಷೇತ್ರಕ್ಕೆ ಖಾಸಗಿ ಆಟಗಾರರ ಪ್ರವೇಶದಿಂದ ರೈತರು ಚೌಕಾಶಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದಿಲ್ಲ ಎಂದು ಟೀಕಾಕಾರರು ಹೇಳಿದರೆ, ಹೊಸ ಕಾನೂನುಗಳು ಸಣ್ಣ ಮತ್ತು ಅಲ್ಪ ರೈತರಿಗೆ ಸಹಾಯ ಮಾಡುತ್ತವೆ ಎಂದು ಸರ್ಕಾರ ಪ್ರತಿಪಾದಿಸಿದೆ.

ವಿವಾದಾತ್ಮಕ ಕೃಷಿ ಮಸೂದೆಗಳ ಅಂಗೀಕಾರವನ್ನು ಪ್ರತಿಭಟಿಸಿ ಕೇಂದ್ರದ ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಲ್ಲಿ (ಎನ್ಡಿಎ) ಅಂಗಪಕ್ಷವಾಗಿದ್ದ ಶಿರೋಮಣಿ ಅಕಾಲಿದಳ ಮೈತ್ರಿಕೂಟದಿಂದ ಹೊರನಡೆದಿದೆ. ಹೀಗಾಗಿ ಸುದೀರ್ಘ ಕಾಲದ ಮಿತ್ರ ಪಕ್ಷವನ್ನು ಬಿಜೆಪಿ ಕಳೆದುಕೊಂಡಂತಾಗಿದೆ.

No comments:

Advertisement