ಮಹಾರಾಷ್ಟ್ರದ ಹಾದಿಯಲ್ಲಿ ಕೇರಳ: ಸಿಬಿಐ ತನಿಖಾ ಅನುಮತಿ ವಾಪಸ್
ನವದೆಹಲಿ: ರಾಜ್ಯzಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತನಿಖೆ ನಡೆಸಲು ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಕೇರಳ ಸರ್ಕಾರವು 2020 ನವೆಂಬರ್ 04ರ ಬುಧವಾರ ಹಿಂಪಡೆದುಕೊಂಡಿತು. ಇದರೊಂದಿಗೆ ಇಂತಹುದೇ ಕ್ರಮ ಕೈಗೊಂಡ ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಟ್ಟಿಗೆ ಕೇರಳವೂ ಸೇರ್ಪಡೆಯಾಯಿತು.
ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ತನಿಖಾ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಬುಧವಾರ ತೆರೆ ಎಳೆಯಲಾಗಿದ್ದು, ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಈ ಕುರಿತ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ.
ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸುವ ಮುನ್ನ ಕೇಂದ್ರೀಯ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು.
ಇತ್ತೀಚೆಗೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸಿಬಿಐಯನ್ನು ರಾಜ್ಯದಲ್ಲಿ ನಿರ್ಬಂಧಿಸಲು ನಿರ್ಧರಿಸಿತ್ತು. ಮಹಾರಾಷ್ಟ್ರದಲ್ಲಿ ಟಿಆರ್ಪಿ
ಹಗರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ ಮರುದಿನವೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು.
ಕೇಂದ್ರ ಸರ್ಕಾರದ ವಿರುದ್ಧ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಹೋರಾಟಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಬಿಐಯನ್ನು ನಿರ್ಬಂಧಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಒಂದು ಬಾಣದಂತೆ ಕಂಡುಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗೆಗಿನ ಮುಂಬಯಿ ಪೊಲೀಸ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಕೇಂದ್ರ ಸಿಬಿಐ ಮೂಲಕ ಪ್ರಕರಣದ ತನಿಖೆಗೆ ನಿರ್ಧರಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ಹಿಂತೆಗೆದುಕೊಳ್ಳುವ ಮೂಲಕ ತನ್ನ ಪ್ರತ್ಯಸ್ತ್ರವನ್ನು ಬಿಟ್ಟಿತ್ತು.
ಸಿಬಿಐ ಡಿಎಸ್ಪಿಇ
ಕಾಯ್ದೆ ಅಡಿಯಲ್ಲಿ ಬರುತ್ತದೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಗಳು ರಾಜ್ಯ ಸರ್ಕಾರಗಳ ಅಧೀನಕ್ಕೆ ಬರುವುದರಿಂದ ರಾಜ್ಯದೊಳಗಿನ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ತನಿಖಾ ಸಂಸ್ಥೆಗೆ ಸಾಮಾನ್ಯ ಸಮ್ಮತಿಯನ್ನು ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರಗಳು ಈ ಅನುಮತಿಯನ್ನು ನವೀಕರಿಸುತ್ತಿರುತ್ತವೆ.
೨೦೧೮ರ ಕೊನೆಯಲ್ಲಿ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶಗಳು ಸಿಬಿಐ ತನಿಖೆಗೆ ನೀಡಲಾದ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಂಡಿದ್ದವು. ಕೇಂದ್ರ ಸರ್ಕಾರವು ವಿರೋಧಿಗಳಿಗೆ ಕಿರುಕುಳ ನೀಡಲು ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಈ ರಾಜ್ಯಗಳು ಆರೋಪಿಸಿದ್ದವು. ಆದರೆ, ಆಂಧ್ರದಲ್ಲಿ ಅಧಿಕಾರಕ್ಕೆ ಬಂದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ಈ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿತು.
ಕಾಂಗ್ರೆಸ್ ಆಡಳಿತದಲ್ಲಿರುವ ಛತ್ತೀಸ್ ಗಢ, ೨೦೧೯ರ ಜನವರಿಯಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ವಾಪಸ್ ಪಡೆದಿತ್ತು. ೨೦೨೦ರ ಜುಲೈಯಲ್ಲಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವೂ ಇದೇ ದಾರಿಯನ್ನು ಹಿಡಿದಿತ್ತು.
ನಿರಾಶ್ರಿvರ ವಸತಿ ಆಶ್ರಯ ವಸತಿ ಯೋಜನೆಯಾದ ಲೈಫ್ ಮಿಷನ್ ವ್ಯವಹಾರಗಳ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಕೇರಳ ಸರ್ಕಾರ ಮತ್ತು ಸಿಬಿಐ ನಡುವೆ ಜಗ್ಗಾಟಗಳಿವೆ. ಈ ಯೋಜನೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾgದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಅಕ್ಟೋಬರಿನಲ್ಲಿ ಕೇರಳ ಹೈಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತು.
ವಿಪಕ್ಷಗಳ ಟೀಕೆ: ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಿರ್ಧಾರವನ್ನು ಪ್ರಮುಖ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಕೇರಳ ಸರ್ಕಾರವು ತನ್ನ ನಾಯಕರನ್ನು ರಕ್ಷಿಸಿಕೊಳ್ಳಲು ಈ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ದೂರಿದೆ.
No comments:
Post a Comment