Wednesday, August 23, 2023

ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಆಗಸ್ಟ್‌ 24ರಂದು ರಾಷ್ಟ್ರಮಟ್ಟದ ವರ್ಚುವಲ್‌ ಸಭೆ

ಬೆಂಗಳೂರು: ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ದಿ ಪಡಿಸಿರುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ  (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಅದನ್ನು ಬಳಸಿಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ʼವರ್ಚುವಲ್‌ ಸಭೆʼಯನ್ನು ಆಗಸ್ಟ್‌ 24ರಂದು ಕೇಂದ್ರ ಪಂಚಾಯತಿ ರಾಜ್‌ ಸಚಿವಾಲಯವು ಆಯೋಜಿಸಿದೆ. ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು -2022ರ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅದು ಶಿಫಾರಸು ಮಾಡಿದೆ.

ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯದ ನೇತೃತ್ವದಲ್ಲಿ ನಡೆಯಲಿರುವ ಈ ವರ್ಚುವಲ್‌ ಸಭೆಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್‌ ಐ ಆರ್‌ ಡಿ), ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಎನ್‌ ಎಸ್‌ ಎಸ್‌ಐಆರ್‌ಡಿ), ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ (ಎಸ್‌ ಎಸ್‌ ಎಫ್)‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಕೇರಳ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಳ್ಳಲಿವೆ.

ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು-2022ರ ಅಡಿಯಲ್ಲಿ ಗ್ರಾಮೀಣ ಸಂಸ್ಥೆಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಪ್ರಾಥಮಿಕ ಚರ್ಚೆ ನಡೆಸಲಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ರಾಜೀವ ಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪಂಚಾಯಿತಿಗಳ ಸಬಲೀಕರಣ ನಿಟ್ಟಿನ ಚರ್ಚೆಗಳ ವೇಳೆಯಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಕರ ಕೆ. ಪ್ರಸಾದ್‌ ಅವರು ಫೌಂಡೇಶನ್ನಿನ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ ಕೇಂದ್ರ ಪಂಚಾಯಿತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿಚಾರವನ್ನು ಬಹಿರಂಗ ಪಡಿಸಿದರು. 

ಏನಿದು ಎನ್‌ ಎಲ್‌ ಟಿ?

ದಿಕ್ಸೂಚಿ ಕಲಿಕಾ ತಂತ್ರಜ್ಞಾನ ಅಥವಾ ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ (ಎನ್‌ ಎಲ್‌ ಟಿ) ಎಂಬುದು ಆನ್‌ ಲೈನ್‌ ಮೂಲಕ ತಾವು ಇದ್ದ ಸ್ಥಳದಿಂದಲೇ, ತಮಗೆ ಅನುಕೂಲಕರವಾದ ಸಮಯದಲ್ಲಿ ಕಲಿಯುವ ವ್ಯವಸ್ಥೆಯಾಗಿದ್ದು ಅಮೆರಿಕ ಮೂಲದ ಎನ್‌ ಜಿಒ ಗೂರು ಫೌಂಡೇಶನ್‌ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದೆ.

ದೇಶಾದ್ಯಂತ 30 ಲಕ್ಷ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು 30 ಲಕ್ಷ ಗ್ರಾಮ ಪಂಚಾಯಿತಿ ಪದಾಧಿಕಾರಿಗಳಿಗೆ ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಮೊಬೈಲ್‌ ಬಳಸಿ, ಪಂಚಾಯಿತಿಗಳ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಬಹುದಾಗಿದೆ. ಕಲಿಕಾರ್ಥಿಗಳಿಗೆ ವ್ಯಕ್ತಿಗತವಾಗಿ ಕಲಿಯುವ ಅವಕಾಶ ಇದರಲ್ಲಿದೆ.

ಫೊಟೋ:

1) ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಬಿ.ಕೆ. ಪಾಟೀಲ್‌ ಅವರು ಗ್ರಾಮೀಣ ಅಭಿವೃದ್ಧಿಯಲ್ಲಿ ಸೀಮಾತೀತ ತಂತ್ರಜ್ಞಾನ ಬಳಕೆ ಕುರಿತಾದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಹಾಗೂ ಅದರ ಇಂಗ್ಲಿಷ್‌ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ʼ ಪುಸ್ತಕಗಳನ್ನು ಖರೀದಿಸಿದರು.

೨. ಭಾರತ ಸರ್ಕಾರದ ಐಸಿಎಂಆರ್‌ ನ್ಯಾಷನಲ್‌ ಇನ್‌ ಸ್ಟಿಟ್ಟೂಟ್‌ ಆಫ್‌ ವೈರಾಲಜಿಯ ಮಾಜಿ ನಿರ್ದೇಶಕಿ, ಕೋವಿಡ್‌ ಕಾಲದಲ್ಲಿ ಮಹಿಳಾ ಶಕ್ತಿ ಪ್ರಶಸ್ತಿ ಗಳಿಸಿದ  ಪ್ರೊ.ಪ್ರಿಯಾ ಅಬ್ರಹಾಂ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಪಡಿಸಿದ ಪೊಟಾನ್‌ ತಂತ್ರಜ್ಞಾನದ ಕುರಿತು ಡಾ. ಶಂಕರ ಕೆ. ಪ್ರಸಾದ್‌ ಜೊತೆ ಚರ್ಚಿಸಿ ಮಾಹಿತಿ ಪಡೆದರು.

3) ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಡಾ. ಶಂಕರ ಕೆ. ಪ್ರಸಾದ್‌ ಮಾತನಾಡಿದರು. ಇದರ ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.


No comments:

Advertisement