ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...
ಭಾನುವಾರ ಲೋಕಾರ್ಪಣೆ, ಅಯೋಧ್ಯೆಯ ನಂಟೂ ಉಂಟು..
ಬೆಂಗಳೂರು: ಇದು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಂಡ ಕಲ್ಲಿನ
ದೇಗುಲ. ಅಷ್ಟೇ ಅಲ್ಲ ಅಯೋಧ್ಯೆಯ ಬಾಲರಾಮನ ಜೊತೆ ನಂಟು ಹೊಂದಿರುವ ದೇವಾಲಯ. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ
ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಕೇವಲ 30 ದಿನಗಳ
ಅವಧಿಯಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಇತಿಹಾಸ ಸೃಷಿಸಿದೆ.
ವಾಸ್ತವವಾಗಿ ಈ ಬಡಾವಣೆಯಲ್ಲಿ ದೇವಾಲಯದ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಿವಾಸಿಗಳ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅವಧಿಯ ಕನಸು. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣ ಮಾಡುವ ಸಮಯದಲ್ಲೇ ಬಡಾವಣೆಯ ನಿರ್ಮಾಪಕರು ಇಲ್ಲಿ ದೇವಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟದ್ದಲ್ಲದೆ ಅದಕ್ಕಾಗಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.
ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮುಂದಕ್ಕೆ ಹೋಗುತ್ತಲೇ
ಬಂದಿತ್ತು. ಒಂದು ವರ್ಷದ ಹಿಂದೆ ಬಡಾವಣೆಯ ಹಿರಿಯ ಸದಸ್ಯರು ದೇವಾಲಯ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ರಚಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು.
ಬಡಾವಣೆಯ ನಿರ್ಮಾಪಕರೂ ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಹಸ್ತ ನೀಡುವ ಭರವಸೆ ಕೊಟ್ಟರು.
ಆದರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿಲ್ಲ. ಮತ್ತೆ ಮತ್ತೆ
ಅಡ್ಡಿ ಆತಂಕಗಳು ಎದುರಾಗುತ್ತಲೇ ಬಂದವು. ಕೊನೆಗೆ ಸಾದಹಳ್ಳಿಯ ಸಾಲಿಗ್ರಾಮ ಭೂ ವರಾಹ ಸ್ವಾಮಿ ಸನ್ನಿಧಿಗೆ
ತೆರಳಿ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡ ಸಮಿತಿಯ ಸದಸ್ಯರು ಅಲ್ಲಿನ
ಆನಂದ ಗುರೂಜಿ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.
2024 ಜನವರಿ 11ರ ನಸುಕಿನಲ್ಲಿ ಅತ್ಯಂತ ಶ್ರೇಷ್ಠ ಮುಹೂರ್ತ ಎಂಬುದಾಗಿ ಪರಿಗಣಿಸಲಾಗಿರುವ ಬ್ರಾಹ್ಮೀ ಮುಹೂರ್ತದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಪಾಯ ನಿರ್ಮಾಣದ ಕೆಲಸ ಆರಂಭಿಸಿದರು. ಸಮಿತಿಯ ಒಂದು ತಂಡವು ತಮಿಳುನಾಡಿನ ಮಹಾಬಲಿಪುರಂಗೆ ತೆರಳಿ ಇಡೀ ದಿನ ಹುಡುಕಾಡಿ ಶ್ರೀ ವೆಂಕಟೇಶ್ವರ (ಬಾಲಾಜಿ) ಮತ್ತು ಅಭಯ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಆಯ್ಕೆ ಮಾಡಿಕೊಂಡು ಬಂದಿತು.
ಅಯೋಧ್ಯೆಯ ಸಂಬಂಧ!
ಬಡಾವಣೆಯ ಶಿಲ್ಪಿ ಎನ್. ಎಂ. ಬಡಿಗೇರ ಅವರು ಸುಮಾರು ನಾಲ್ಕು ವರ್ಷಗಳ
ಹಿಂದೆ ಮೈಸೂರಿನ ಹೆಗ್ಗಡದೇವನ ಕೋಟೆಯಿಂದ ಕೆಲವು ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಗಳನ್ನು ಆಯ್ಕೆ ಮಾಡಿಕೊಂಡು
ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಗ್ರಹಗಳನ್ನು ಕೆತ್ತಲೆಂದೇ ತಂದಿದ್ದರು. ಈ ಬಂಡೆಗಳಲ್ಲಿ ಅವರು ಮಹಾಗಣಪತಿ
ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು
ನಿರ್ಮಿಸಿದ್ದಾರೆ. ಅತ್ಯಂತ ವಿಶೇಷವೆಂದರೆ ಈ ವರ್ಷ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ಚಾರಿತ್ರಿಕ ರಾಮ
ಮಂದಿರದಲ್ಲಿ ಈಗ ಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಕೂಡಾ ಇದೇ ಪ್ರದೇಶದ ಕೃಷ್ಣಶಿಲೆಯಿಂದ ನಿರ್ಮಾಣಗೊಂಡಿರುವ
ವಿಗ್ರಹ.
ಬಡಾವಣೆಯಲ್ಲಿ ದೇವಾಲಯ ನಿರ್ಮಾಣದ ಪ್ರಸ್ತಾಪ ಬರುತ್ತಿದ್ದಂತೆಯೇ ಬಡಿಗೇರ
ಅವರು ತಾವು ನಾಲ್ಕು ವರ್ಷಗಳ ಶ್ರಮದಲ್ಲಿ ನಿರ್ಮಿಸಿದ ಇದೇ ಕೃಷ್ಣ ಶಿಲೆಯ ಶ್ರೀ ಮಹಾಗಣಪತಿ ವಿಗ್ರಹವನ್ನು
ದೇವಾಲಯಕ್ಕೆ ನೀಡುವುದಾಗಿ ಘೋಷಿಸಿದರು.
ಅತ್ತ ಮಹಾಬಲಿಪುರಂನಲ್ಲಿ ಬಾಲಾಜಿ ಮತ್ತು ಅಭಯ ಆಂಜನೇಯ ವಿಗ್ರಹದ ಹುಡುಕಾಟಕ್ಕಾಗಿ ತೆರಳಿದ್ದ ತಂಡಕ್ಕೆ ಇಡೀ ದಿನ ಹುಡುಕಾಡಿದರೂ ಯಾವುದೇ ವಿಗ್ರಹ ಮನಸ್ಸಿಗೆ ತೃಪ್ತಿ ನೀಡಿರಲಿಲ್ಲ. ಕೊನೆಗೆ ವಾಪಸಾಗಬೇಕೆಂದು ಯೋಚಿಸಿ ಹೊರಟಾಗ ವಿಗ್ರಹಗಳಿದ್ದ ಪುಟ್ಟ ಅಂಗಡಿಯೊಂದು ಕಂಡಿತು. ಅಲ್ಲಿದ್ದ ವೆಂಕಟೇಶ್ವರ ವಿಗ್ರಹ ಎಲ್ಲರಿಗೂ ತೃಪ್ತಿ ನೀಡಿತು. ಬೆಂಗಳೂರಿನ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಈ ವಿಗ್ರಹ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿತ್ತು ಎಂಬುದು ಅಂಗಡಿಕಾರರ ಜೊತೆಗೆ ಮಾತನಾಡಿದಾಗ ತಿಳಿಯಿತು.
ಈ ಬಾಲಾಜಿ ವಿಗ್ರಹದ ಎದುರಿನಲ್ಲೇ ಇದ್ದ ಅಭಯ ಆಂಜನೇಯ ಸ್ವಾಮಿಯ ವಿಗ್ರಹವೂ
ತಂಡದ ಗಮನ ಸೆಳೆಯಿತು. ವಿಗ್ರಹ ಆಯ್ಕೆಯ ತಂಡ ಈ ಎರಡೂ ವಿಗ್ರಹಗಳನ್ನು ದೇವಾಲಯದ ಸಲುವಾಗಿ ಆಯ್ಕೆ ಮಾಡಿತು.
ಮರುದಿನವೇ ಎರಡೂ ವಿಗ್ರಹಗಳು ಬಡಾವಣೆಗೆ ಬಂದಿಳಿದವು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ಬಡಾವಣೆಯ ಮಂದಿರದ ಉದ್ಘಾಟನೆಯೂ
ನೆರವೇರಬೇಕು ಎಂಬುದು ಸಮಿತಿಯ ಸದಸ್ಯರ ಆಶಯವಾಗಿತ್ತು. ಆದರೆ ಮತ್ತೆ ವಿಘ್ನಗಳು ಎದುರಾಗಿ ಸುಮಾರು
ಜನವರಿ 16ಕ್ಕೆ ದೇವಾಲಯ ನಿರ್ಮಾಣ ಕಾಮಗಾರಿ ನಿಂತಿತು.
ಛಲ ಬಿಡದ ತ್ರಿವಿಕ್ರಮನಂತೆ ಸಮಿತಿ ಸದಸ್ಯರು ಫೆಬ್ರುವರಿ ಮೊದಲ ವಾರದಲ್ಲಿ
ಮತ್ತೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾದರು. ಫೆಬ್ರುವರಿ 3ಕ್ಕೆ ದೇವಾಲಯ ನಿರ್ಮಾಣ ಕಾರ್ಯ
ಪುನರಾರಂಭ ಮಾಡಿ, ಫೆಬ್ರುವರಿ 29ರ ವೇಳೆಗೆ ಅದನ್ನು ಪೂರ್ಣಗೊಳಿಸಿದರು.
ಇದೀಗ ಭವ್ಯವಾಗಿ ಎದ್ದು ನಿಂತಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ದೇವರುಗಳ ಪ್ರಾಣ ಪ್ರತಿಷ್ಠಾಪನೆ 2024ರ ಭಾನುವಾರ ಮಾಘ ಬಹುಳ ಸಪ್ತಮೀ ಅನೂರಾಧ ನಕ್ಷತ್ರ ಪ್ರಾತಃಕಾಲ 9.15ರಿಂದ 10.30ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ನೆರವೇರಲಿದೆ.
ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯಿಂದಲೇ ಗಂಗಾಪೂಜೆ ಮತ್ತಿತರ
ಧಾರ್ಮಿಕ ವಿಧಿಗಳು ಆರಂಭವಾಗಲಿದೆ.
No comments:
Post a Comment