Thursday, December 18, 2025

ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ…

 ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ

ಇದು ಸುವರ್ಣ ನೋಟ

ಕುಂದಾ ನಗರಿ ಎಂಬುದಾಗಿಯೇ ಹೆಸರು ಪಡೆದಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನ ಸಂದರ್ಭದ ಚಿತ್ರಗಳನ್ನು ತೆಗೆಯುವ ಸಲುವಾಗಿಯೇ ಬೆಳಗಾವಿಗೆ ತೆರಳಿದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ʼಪರ್ಯಾಯ ಡಾಟ್‌ ಕಾಮ್‌ʼ ವೆಬ್‌ಸೈಟಿಗೆ ಕೆಲವೊಂದು ಚಿತ್ರಗಳನ್ನು ಕಳುಹಿಸಿದ್ದಾರೆ. 

ಸುವರ್ಣ ಸೌಧದ ಮುಂಭಾಗದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿರುವ ಸುಂದರ ಕಾರಂಜಿಗಳ ಚಿತ್ರಗಳು ಅವು. ಆ ಚಿತ್ರಗಳು ಮತ್ತು ಅಧಿವೇಶನ ಕುರಿತು ಹಿರಿಯ ಪತ್ರಕರ್ತ ನೆತ್ರಕೆರೆ ಉದಯಶಂಕರ ಪದ್ಯವೊಂದನ್ನು ಬರೆದರು.

ಆ ಕವನ ಇಲ್ಲಿದೆ:

ಶೀರ್ಷಿಕೆ: ಸುವರ್ಣ ಸೌಧದ ಕಾರಂಜಿ ಕೇಳುತ್ತಿದೆ


ಮೈಯ ನಡುಗಿಸುವ ಚಳಿಯಲಿ|
ಚರ್ಚೆ ನಡೆದಿದೆ ಕಾವೇರಿ ಸದನದಿ|
ಕುಂದ ನಗರಿಯ ಭವ್ಯಸೌಧದ|
ಒಳ ಸಭಾಂಗಣದಿ||

ಚಂದದಿಂದಲಿ ತಕ ತಕನೆ ಕುಣಿದಿದೆ|
ಮಂದ ಬೆಳಕಿನ ನಡುವೆ ನೀರಿನ|
 
ಭವ್ಯ ವರ್ಣದ ಛಾಪು ಚೆಲ್ಲುತ|
ದಿವ್ಯ ಕಾರಂಜಿ||

ಹಾಡು ಹಗಲಲಿ ನಡೆವ ಮಾತಿನ|
ಜೋರು ಚರ್ಚೆಯ ಬಳಿಕ ಬರುವುದೇ|
ನಾಕು ಜನಕನುಕೂಲವಾಗುವ|
ಖಚಿತ ಆಡಳಿತ? ||

ಮುಗಿಲು ಮುಟ್ಟಿದ ಕಾಡಿ|
ಕೆಣಕುವ ಅಟ್ಟಹಾಸದ ಭ್ರಷ್ಟ|
ಬಲಗಳ ಮೆಟ್ಟಿಹಾಕುವ ಶುಭ್ರ|
ವರ್ಣದ ಜಗ ಜಟ್ಟಿ ನಿರ್ಧಾರ? ||

ಹಾಲು ಬಂದಿತೇ ಬೆಣ್ಣೆ ಬಂದಿತೇ|
ವಿಷವು ಬಂದಿತೇ ಅಮೃತ|
ಬಂದಿತೆ ಕೋಪತಾಪದ ಬಿರುಸು|
ಮಾತಿನ ಮಥನ ಕಾಲದಲಿ? ||

ಕೋಟಿ ಜನರ ಸಂಕಷ್ಟ ನೀಗುವ|
ಮೇಟಿ ಮಾಡುವ ಕೃಷಿಕ|
ಮಂದಿಯ ತಾಪ ಕಳೆವ|
ವಿವೇಕ ಮೆರೆವುದೇ ಚರ್ಚೆಕಾಲದಲಿ? ||

ಈ ಕವನ ಮತ್ತು ಅದರ ವಿಶ್ಲೇಷಣೆಯ ವಿಡಿಯೋ  👇👇  ಇಲ್ಲಿದೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌  ( https://youtu.be/VmUnrkngtQE ) ಕ್ಲಿಕ್‌ ಮಾಡಿರಿ.  ಮೇಲಿನ ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.


No comments:

Advertisement