Sunday, December 4, 2022

ನಮ್ಮ ಲಾಂಛನ.

 ನಮ್ಮ ಲಾಂಛನ...


ಇದು ಸುವರ್ಣ ನೋಟ

ಇದು ನಮ್ಮ ಲಾಂಛನ. ವಿಧಾನ ಸೌಧದ ಮೇಲಿರುವ ಈ ಲಾಂಛನ ಮುಂಜಾವಿನ ಹೊತ್ತಿನಲ್ಲಿ ಕಂಗೊಳಿಸಿದ ಬಗೆ ಇದು. ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ವಾಕಿಂಗ್‌ ಮಾಡುವ ಹೊತ್ತಿನಲ್ಲಿ ಕಂಡ ದೃಶ್ಯ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ. ಸಮೀಪ ದೃಶ್ಯಕ್ಕಾಗಿ ಚಿತ್ರವನ್ನು ಕ್ಲಿಕ್‌ ಮಾಡಿ.

ಇನ್ನಷ್ಟು ಚಿತ್ರಗಳ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:

Wednesday, November 30, 2022

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!

ಇದು ಸುವರ್ಣ ನೋಟ

ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಾನವಾಗುವುದು ಸೂರ್ಯನ ಪ್ರತಿನಿತ್ಯದ ಕಾಯಕ. ಇದರಲ್ಲಿ ವಿಶೇಷವೂ ಬದಲಾವಣೆಯೂ ಇಲ್ಲ.

ಆದರೆ ಕಾಣುವ ಕಣ್ಣುಗಳಿಗೆ ಇದೇ ಸೂರ್ಯ ಹೊಸ ಹೊಸ ರೂಪ ತಾಳುತ್ತಾನೆ.

೨೦೨೨ರ ನವೆಂಬರ್‌ ೨೯ರ ಮಂಗಳವಾರ ಸೂರ್ಯ ಇದೇ ರೀತಿ ತನ್ನ ಮಾರ್ಗದಲ್ಲಿ ಸಾಗಿದ್ದ. ಸಂಜೆಯ ಹೊತ್ತು ಇನ್ನೇನು ಮುಳುಗಬೇಕು. ಅಷ್ಟರಲ್ಲಿ….


ಅಲ್ಲಿಗೆ…. ಅಂದರೆ ಶಕ್ತಿಸೌಧದ ಬಳಿಗೆ ಬಂದದ್ದು ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ. ದಿನವೂ ಅದೇ ಮಾರ್ಗದಲ್ಲಿ ಸಾಗಿ ಹೋಗುವ ಸೂರ್ಯ ಸುವರ್ಣರ ಕ್ಯಾಮರಾಕಣ್ಣುಗಳಿಗೆ ಬೇರೆಯೇ ರೀತಿಯಲ್ಲಿ ಕಾಣಿಸಿದ. ಅಷ್ಟೆ ಕೆಲವು ಕ್ಷಣಗಳು ಸುವರ್ಣರ ಕ್ಯಾಮರಾ ಅತ್ತಿಂದಿತ್ತ ಇತ್ತಿಂದತ್ತ ಚಲಿಸಿತು. ಅದರ ಫಲಿತಾಂಶ ಇದು.

ಇಲ್ಲಿ ಒಂದರೆಡು ಚಿತ್ರಗಳನ್ನು ಹಾಕುತ್ತಿದ್ದೇನೆ. ಪೂರ್ತಿ ನೋಡಬೇಕು ಎಂದರೆ ಕೆಳಗಿನ ಫೊಟೋ ಕ್ಲಿಕ್ಲಿಸಿ. ಅಥವಾ ಅದಕ್ಕೂ ಕೆಳಗಿರುವ ವಿಡಿಯೋ ಕ್ಲಿಕ್ಕಿಸಿ

-ನೆತ್ರಕೆರೆ ಉದಯಶಂಕರ  
Friday, November 4, 2022

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ಪಿಂಚಣಿ (ತಿದ್ದುಪಡಿ) ಯೋಜನೆ ಸಿಂಧು, ರೂ. 15,000 ವೇತನ ಮಿತಿ ರದ್ದು

ನವದೆಹಲಿ: ಭವಿಷ್ಯನಿಧಿ ಸಂಸ್ಥೆಯು ರೂಪಿಸಿದ 2014 ರ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ 2022 ನವೆಂಬರ್‌ 04ರ ಶುಕ್ರವಾರ ಎತ್ತಿಹಿಡಿಯಿತು. ಆದರೆ ಪಿಂಚಣಿ ನಿಧಿಗೆ ಸೇರಲು ವಿಧಿಸಲಾದ 15,000 ರೂ ಮಾಸಿಕ ವೇತನದ ಮಿತಿಯನ್ನು ರದ್ದು ಪಡಿಸಿತು.

2014 ರ ತಿದ್ದುಪಡಿಯು ಗರಿಷ್ಠ ಪಿಂಚಣಿ ವೇತನವನ್ನು (ಮೂಲ ವೇತನ ಮತ್ತು ತುಟ್ಟಿಭತ್ಯೆ) ತಿಂಗಳಿಗೆ 15,000 ರೂ. ಎಂಬುದಾಗಿ ಪರಿಷ್ಕರಿಸಿತ್ತು.  ತಿದ್ದುಪಡಿಗೆ ಮೊದಲು, ಗರಿಷ್ಠ ಪಿಂಚಣಿ ವೇತನವನ್ನು ತಿಂಗಳಿಗೆ 6,500 ರೂ. ಎಂಬುದಾಗಿ ನಿಗದಿ ಪಡಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು 2014ರ ಪಿಂಚಣಿ ಯೋಜನೆಯನ್ನು ಕಾನೂನುಬದ್ಧ ಎಂಬುದಾಗಿ ಹೇಳಿತಾದರೂ ಅದರ ಕೆಲವು ನಿಬಂಧನೆಗಳು ಮಾನ್ಯವಲ್ಲ ಎಂದು ಹೇಳಿತು.

2014ರ ಯೋಜನೆಯಲ್ಲಿ ನೌಕರರು 15,000 ರೂ.ಗಿಂತ ಹೆಚ್ಚಿನ ವೇತನದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆಯನ್ನು ನೀಡಬೇಕೆಂಬ ಷರತ್ತನ್ನು ಅಮಾನ್ಯವೆಂದು ಪೀಠವು ಪರಿಗಣಿಸಿತು.

ಪಿಂಚಣಿ ಯೋಜನೆಗೆ ಸೇರುವ ಆಯ್ಕೆಯನ್ನು ಚಲಾಯಿಸದ ನೌಕರರು ಆರು ತಿಂಗಳೊಳಗೆ ಹಾಗೆ ಮಾಡಬೇಕು ಎಂದು ಪೀಠ ಹೇಳಿತು. ತನ್ಮೂಲಕ ಭವಿಷ್ಯನಿಧಿಯ ಹಾಲಿ ಸದಸ್ಯ ನೌಕರರಿಗೆ ಯೋಜನೆ ಸೇರುವ ಆಯ್ಕೆ ಚಲಾಯಿಸಲು ಕಾಲಾವಕಾಶವನ್ನು ಆರು ತಿಂಗಳ ಕಾಲ ನೀಡಿತು.

ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳು ನೀಡಿದ ತೀರ್ಪಿನ ದೃಷ್ಟಿಯಿಂದ, ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದರಿಂದ ಕಟ್-ಆಫ್ ದಿನಾಂಕದೊಳಗೆ ಯೋಜನೆಗೆ ಸೇರಲು ಸಾಧ್ಯವಾಗದ ಅರ್ಹ ಉದ್ಯೋಗಿಗಳಿಗೆ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಅದು ಹೇಳಿತು.

ನ್ಯಾಯಾಲಯವು ಆರ್‌ಸಿ ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಪ್ರಕರಣದ ತೀರ್ಪನ್ನು ಒಪ್ಪಿಕೊಂಡಿರುವಾಗಿ ಹೇಳಿತು.

ಆರ್.‌ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯನಿಧಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ವಿಭಾಗೀಯ ಪೀಠವು ಆಯ್ಕೆಯನ್ನು ಚಲಾಯಿಸಲು ಯಾವುದೇ ಕಟ್-ಆಫ್ ದಿನಾಂಕ ಇರುವಂತಿಲ್ಲ ಎಂದು ಹೇಳಿತ್ತು.

ಮಿತಿಯನ್ನು ಮೀರಿದ ಸಂಬಳದ ಮೇಲೆ ಶೇ.1.16 ರಷ್ಟು ಹೆಚ್ಚಿನ ಕೊಡುಗೆ ನೀಡಬೇಕೆಂಬ ಷರತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್‌ ಹೇಳಿತು. ಆದರೆ ಅಧಿಕಾರಿಗಳಿಗೆ ಹಣವನ್ನು ಹೊಂದಿಸಲು ಸಾಧ್ಯವಾಗುವಂತೆ ತೀರ್ಪಿನ ಈ ಭಾಗವನ್ನು ಆರು ತಿಂಗಳವರೆಗೆ ಅಮಾನತಿನಲ್ಲಿ ಇಡಲಾಗುವುದು ಎಂದು ಅದು ಹೇಳಿತು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2014 ರ ಯೋಜನೆಯನ್ನು ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿಯ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿದ್ದವು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

Wednesday, November 2, 2022

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಈ ವಾರ ಸುಪ್ರೀಂ ತೀರ್ಪು?

ನವದೆಹಲಿ: ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, 2014 ರದ್ದುಗೊಳಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್ ತೀರ್ಪುಗಳನ್ನು ಪ್ರಶ್ನಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಸಲ್ಲಿಸಿದ ಮೇಲ್ಮನವಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ವಾರ ಪ್ರಕಟಿಸುವ ಸಾಧ್ಯತೆಯಿದೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಮೂರ್ತಿಗಳ  ಪೀಠವು 6 ದಿನಗಳ ವಿಚಾರಣೆಯ ನಂತರ 2022 ಆಗಸ್ಟ್ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು 2022 ನವೆಂಬರ್ 8ರಂದು ನಿವೃತ್ತರಾಗಲಿರುವ ಕಾರಣ, ಅದಕ್ಕೂ ಮುನ್ನ ಪೀಠವು ತೀರ್ಪು ನೀಡುವ ಸಾಧ್ಯತೆಯಿದೆ. ರಾಷ್ಟ್ರಪತಿಯವರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್‌  ಅವರು ಹಾಲಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

2018 ರಲ್ಲಿ, ಕೇರಳ ಹೈಕೋರ್ಟ್, ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ, (2014] ಅನ್ನು ರದ್ದುಪಡಿಸುವಾಗ, ತಿಂಗಳಿಗೆ ರೂ 15,000 ಮಿತಿ ಮಿತಿಗಿಂತ ಹೆಚ್ಚಿನ ಸಂಬಳಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ಮಾಡಿಕೊಟ್ಟಿತು. ಪಿಂಚಣಿ ಯೋಜನೆಗೆ ಸೇರಲು ಯಾವುದೇ ಕಟ್-ಆಫ್ ದಿನಾಂಕ ಇರಬಾರದು ಎಂದು ಹೈಕೋರ್ಟ್ ಹೇಳಿತ್ತು.

2019 ರಲ್ಲಿ, ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಇಪಿಎಫ್‌ಒ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು (ಎಸ್‌ ಎಲ್‌ ಪಿ) ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ನಂತರ, ಇಪಿಎಫ್‌ಒ ಮತ್ತು ಕೇಂದ್ರ ಸರ್ಕಾರವು ಕೋರಿದ ಪರಿಶೀಲನಾ ಕೋರಿಕೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್‌,  ಎಸ್‌ಎಲ್‌ಪಿ ವಜಾ ಮಾಡಿದ ತನ್ನ ತೀರ್ಪನ್ನು ಹಿಂಪಡೆದಿತ್ತು ಮತ್ತು ಅರ್ಹತೆಯ ಮೇಲೆ ವಿಚಾರಣೆಗಾಗಿ ವಿಷಯವನ್ನು ಪುನಃ ತೆರೆದಿತ್ತು.

2021ರ ಆಗಸ್ಟ್ ತಿಂಗಳಲ್ಲಿ , ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಈ ಕೆಳಗಿನ ಸಮಸ್ಯೆಗಳನ್ನು ಪರಿಗಣಿಸಲು ತ್ರಿಸದಸ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಮೇಲ್ಮನವಿಗಳನ್ನು ಒಪ್ಪಿಸಿತ್ತು:

1. ಉದ್ಯೋಗಿಗಳ ಪಿಂಚಣಿ ಯೋಜನೆಯ ಪ್ಯಾರಾಗ್ರಾಫ್ 11(3) ಅಡಿಯಲ್ಲಿ ಕಟ್-ಆಫ್ ದಿನಾಂಕ ಇರುವುದೇ ಮತ್ತು

2. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸಲು ಆರ್.ಸಿ. ಗುಪ್ತ ವಿರುದ್ಧ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು (2016) ಪ್ರಕರಣದ ತೀರ್ಪು ಆಧಾರ ತತ್ವವಾಗಿದೆಯೇ?

ಪಿಂಚಣಿ ನಿಧಿ ಮತ್ತು ಭವಿಷ್ಯ ನಿಧಿಗಳು ವಿಭಿನ್ನವಾಗಿವೆ ಮತ್ತು ನಂತರದ ಸದಸ್ಯತ್ವವು ಮೊದಲಿನ ಸದಸ್ಯತ್ವಕ್ಕೆ ಸ್ವಯಂಚಾಲಿತವಾಗಿ ಅನುವಾದಿಸುವುದಿಲ್ಲ. ಪಿಂಚಣಿ ಯೋಜನೆಯು ಕಡಿಮೆ ವಯಸ್ಸಿನ ಉದ್ಯೋಗಿಗಳಿಗೆ ಉದ್ದೇಶಿಸಲಾಗಿದೆ ಮತ್ತು ಕಟ್-ಆಫ್ ಮಿತಿಗಿಂತ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳಿಗೆ ಪಿಂಚಣಿ ಪಡೆಯಲು ಅವಕಾಶ ನೀಡಿದರೆ, ಅದು ನಿಧಿಯೊಳಗೆ ದೊಡ್ಡ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ಎಂದು ಇಪಿಎಫ್‌ ಒ ಸುಪ್ರೀಂಕೋರ್ಟಿನಲ್ಲಿ ವಾದಿಸಿತ್ತು.

2014 ರ ತಿದ್ದುಪಡಿಗಳನ್ನು ಪಿಂಚಣಿ ಮತ್ತು ಭವಿಷ್ಯ ನಿಧಿಗಳ ನಡುವಿನ ಅಡ್ಡ-ಸಬ್ಸಿಡಿಕರಣದ ಸಮಸ್ಯೆಯನ್ನು ಪರಿಹರಿಸಲು ತರಲಾಯಿತು ಎಂದು ಅದು ನ್ಯಾಯಾಲಯದಲ್ಲಿ ಪ್ರತಿಪಾದಿಸಿತ್ತು.

 ಇಪಿಎಫ್‌ಒ ಎತ್ತಿರುವ ಆರ್ಥಿಕ ಹೊರೆಯ ವಾದವನ್ನು ಪಿಂಚಣಿದಾರರು ಆಕ್ಷೇಪಿಸಿದ್ದರು. ಮೂಲನಿಧಿಯು (ಕಾರ್ಪಸ್ ಫಂಡ್) ಹಾಗೆಯೇ  ಉಳಿದಿದೆ ಮತ್ತು ಬಡ್ಡಿಯಿಂದ ಪಿಂಚಣಿ ಪಾವತಿ ಮಾಡಲಾಗಿದೆ ಎಂದು ಅವರು ವಾದಿಸಿದ್ದರು. ಪಿಂಚಣಿ ಯೋಜನೆಗೆ ಸೇರಲು ಕಟ್-ಆಫ್ ಅವಧಿಯೊಳಗೆ ಪ್ರತ್ಯೇಕ ಆಯ್ಕೆಯನ್ನು ಬಳಸಬೇಕು ಎಂಬ ಇಪಿಎಫ್‌ಒನ ವಾದವನ್ನು ಪಿಂಚಣಿದಾರರು ವಿರೋಧಿಸಿದ್ದರು ಮತ್ತು ಇಪಿಎಫ್‌ಒ ನಿಲುವು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು.

ವಿವಿಧ ದಿನಗಳ ವಿಚಾರಣೆಗಳ ವಿವರವಾದ ವರದಿಗಳು ಈ ಕೆಳಗೆ ಕ್ಲಿಕ್‌ ಮಾಡಿರಿ:

ಭವಿಷ್ಯನಿಧಿ ಪಿಂಚಣಿ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಇಪಿಎಫ್ ಪಿಂಚಣಿ ಪ್ರಕರಣ: ಭವಿಷ್ಯ ನಿಧಿಸದಸ್ಯರು ಇಪಿಎಸ್ ಅಡಿಯಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುವುದಿಲ್ಲ

 ಸಬ್ಸಿಡಿಹಣಕಾಸಿನ ಹೊರೆಯ ವಿವರ ತೋರಿಸಿ: ಕೇಂದ್ರಇಪಿಎಫ್‌ಒಗೆ ಸುಪ್ರಿಂ ಕೋರ್ಟ್ ನಿರ್ದೇಶನ

ಇಪಿಎಫ್ ಪಿಂಚಣಿ ಪ್ರಕರಣ : 'ಪಿಂಚಣಿ ನಿಧಿಯಲ್ಲಿ ಕೊರತೆ ಇಲ್ಲ'

ಭವಿಷ್ಯ ನಿಧಿ ಪಿಂಚಣಿ ಪ್ರಕರಣ: ಆಗಸ್ಟ್‌ 10ಕ್ಕೆ ಮುಂದಿನ ವಿಚಾರಣೆ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಆರ್ಥಿಕ ಸುಸ್ಥಿರತೆ ಪ್ರಶ್ನೆಯೇ ಅಲ್ಲ

ಭವಿಷ್ಯನಿಧಿ ಪಿಂಚಣಿ ಪ್ರಕರಣ: ಪಿಂಚಣಿ ಮೂಲನಿಧಿ ಸ್ಥಿರ 

Friday, October 28, 2022

ಮೊಳಗಿತು ಕೋಟಿ ಕಂಠ ಗಾಯನ

 ಮೊಳಗಿತು ಕೋಟಿ ಕಂಠ ಗಾಯನ

ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂಠʼ ಗಾಯನ ಮೊಳಗಿತು.

ನೆಲದಲ್ಲಷ್ಟೇ ಅಲ್ಲ ಜಲದಲ್ಲೂ ದೋಣಿಗಳಲ್ಲಿ, ಆಕಾಶದಲ್ಲಿ ವಿಮಾನದಲ್ಲಿ ಕೂಡಾ ʼಕನ್ನಡ ಡಿಂಡಿಮʼ ಭಾರಿಸಿತು.

ಬೆಂಗಳೂರಿನಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು.

ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು  ಬೆಂಗಳೂರಿನಲ್ಲಿ ತೆಗೆದ ಛಾಯಾಚಿತ್ರಗಳ ವಿಡಿಯೋ ಇಲ್ಲಿದೆ.  ಕ್ಲಿಕ್‌ ಮಾಡಿ ನೋಡಿ:


ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಕರ್ನಾಟಕದಾದ್ಯಂತ ಕನ್ನಡದ ಹಾಡು ಮೊಳಗಿದ ಪರಿಯನ್ನು ವೀಕ್ಷಿಸಿ:


Monday, October 24, 2022

ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

 ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ಹಿರಿತಲೆಗಳ ನಾಲಿಗೆಯಲ್ಲಿ ಬರುತ್ತಿರುತ್ತದೆ:” ಭಾರತೀಯರು ಸ್ವಾತಂತ್ರ್ಯಕ್ಕೆ ಲಾಯಕ್ಕಲ್ಲ. ಸಿಕ್ಕಿದರೂ ಅವರು ಸ್ವಾತಂತ್ರ್ಯ ಉಳಿಸಿಕೊಳ್ಳಲಾರರು… ಅವರು ಆಡಳಿತ ನಡೆಸಲು ಸಾಧ್ಯವಿಲ್ಲ” ಅಂತ.

ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತದ ಹಿರಿಮೆ ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ.

ಆದರೆ, ವಿಶ್ವವನ್ನೇ ಆಳಿದ್ದ ದೇಶ. ಇಂಗ್ಲೆಂಡ್…‌ ಈಗಿನ ಯುನೈಟೆಡ್‌ ಕಿಂಗ್‌ ಡಮ್‌ʼ (ಯುಕೆ) ಆರ್ಥಿಕವಾಗಿ ನಲುಗುತ್ತಿದೆ. ಗೆದ್ದಿದ್ದ ಪ್ರಧಾನಿ ಲಿಜ್‌ ಟ್ರಸ್‌ ಕೇವಲ ೪೫ ದಿನ ಆಡಳಿತ ನಡೆಸಿ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ೨೦೨೨ರ ಅಕ್ಟೋಬರ್‌ ೨೪ರ ಸೋಮವಾರ ಭಾರತದ ಅದರಲ್ಲೂ ಕರ್ನಾಟಕದ ಅಳಿಯ ಯುವ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಯುನೈಟೆಡ್‌ ಕಿಂಗ್‌ ಡಮ್‌ ಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಆಡಳಿತ ಮುನ್ನಡೆಸುವಂತಹ ಸ್ಥಿತಿ ಬಂದಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಯುಕೆಯ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು ಯುಕೆಯ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿಸ್ಪರ್ಧಿಯಾಗಬಯಸಿದ್ದ ಬೋರಿಸ್‌ ಜಾನ್ಸನ್‌ ಪುನರಾಯ್ಕೆ ಬಯಸುವುದಿಲ್ಲ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಸೋಮವಾರ ಸಂಜೆಯ ವೇಳೆಗೆ ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕಟಣೆ ಹೊರಬಿದ್ದಿತು. ಸುನಕ್‌ ಅವರು ಅಕ್ಟೋಬರ್‌ ೨೮ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.

ವಿಶ್ವವನ್ನೇ ಆಳಿದ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ನಾಲಾಯಕ್‌ ಜನ ಎಂದು ಹೇಳಿದ ದೇಶಕ್ಕೆ ಇದೀಗ ಆಡಳಿತ ನಡೆಸಲು ಭಾರತೀಯರೇ ಬರಬೇಕಾಯಿತು. ಇದಕ್ಕೇ ಹೇಳುವುದು: ಕಾಲಾಯ ತಸ್ಮೈ ನಮಃ.

Advertisement