ಇಂದಿನ ಇತಿಹಾಸ
ಡಿಸೆಂಬರ್ 13
ಸಂಸತ್ ಭವನದ ಮೇಲಿನ ದಾಳಿಯ ಅಪರಾಧಿ ಮಹಮ್ಮದ್ ಅಫ್ಜಲನಿಗೆ ನ್ಯಾಯಾಲಯದ ತೀರ್ಪಿನಂತೆ ಮರಣದಂಡನೆ ವಿಧಿಸಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಪ್ರತಿಭಟಿಸಿ ದಾಳಿ ಸಂದರ್ಭದಲ್ಲಿ ಮೃತರಾದ ಭದ್ರತಾ ಸಿಬ್ಬಂದಿಗೆ ನೀಡಿದ ಶೌರ್ಯ ಪದಕಗಳನ್ನು ಅವರ ಕುಟುಂಬ ಸದಸ್ಯರು ರಾಷ್ಟ್ರಪತಿ ಭವನಕ್ಕೆ ಹಿಂತಿರುಗಿಸಿದರು.
2007: 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದಾಗ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೃತ ಯೋಧನ ಪತ್ನಿಯ ಅಳಲು ಹಾಗೂ ಕಣ್ಣೀರಿನಿಂದಾಗಿ ಮುಜುಗರ ಎದುರಿಸಬೇಕಾಯಿತು. ಭಯೋತ್ಪಾದಕರ ದಾಳಿಯಲ್ಲಿ ಮೃತರಾಗಿರುವ ಎ ಎಸ್ ಐ ನಾಯಕ ಚಂದ್ ಅವರ ಪತ್ನಿ ವಿಮಲಾ ದೇವಿ ಕಣ್ಣೀರುಹಾಕುತ್ತಲೇ ಎಲ್ಲರ ಎದುರು ತಮ್ಮ ಅಳಲು ತೋಡಿಕೊಂಡರು. ಪರಿಹಾರದ ಭಾಗವಾಗಿ ತಮಗೆ ನೀಡಲಾಗಿರುವ ಪೆಟ್ರೋಲ್ ಪಂಪ್ ಆರಂಭಿಸಲು ಸರ್ಕಾರ ಇನ್ನೂ ಜಾಗ ನೀಡಿಲ್ಲ. ಈ ಶ್ರದ್ಧಾಂಜಲಿ, ಗೌರವ ಬೇಕಿಲ್ಲ. ನನ್ನ ಬಳಿ ಏನೂ ಇಲ್ಲ, ನಮ್ಮ ಸಮಸ್ಯೆಯನ್ನು ಯಾರೂ ಆಲಿಸುತ್ತಿಲ್ಲ ಎಂದು ಆಕೆ ಹೇಳಿದರು.
2007: ಮಲೇಷ್ಯಾದಲ್ಲಿ ಇರುವ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹಿಂದೂ ಹಕ್ಕುಗಳ ಸಂಘಟನೆಯ ಐವರು ನಾಯಕರನ್ನು ಆಂತರಿಕ ಭದ್ರತಾ ಕಾನೂನಿನ ಅಡಿಯಲ್ಲಿ ಈದಿನ ಕ್ವಾಲಾಲಂಪುರದಲ್ಲಿ ಬಂಧಿಸಲಾಯಿತು. ಬಂಧಿತ ಮುಖಂಡರು:ಪಿ. ಉದಯಕುಮಾರ್, ಎಂ.ಮನೋಹರನ್, ಆರ್. ಕೆಂಘಧರನ್, ವಿ.ಗಣಬತಿರು ಹಾಗೂ ವಿ.ವಸಂತಕುಮಾರ್. ದೇಶದ ಆಂತರಿಕ ಭದ್ರತೆಗೆ ಧಕ್ಕೆ ಬಂದಾಗ ಶಂಕಿತ ವ್ಯಕ್ತಿಗಳನ್ನು ಬಂಧಿಸಲು ಸರ್ಕಾರ ಈ ಕಾಯ್ದೆಯನ್ನು ಬಳಸುತ್ತದೆ. ಆಂತರಿಕ ಭದ್ರತಾ ಕಾನೂನಿನ ಪ್ರಕಾರ ವಿಚಾರಣೆ ನಡೆಸದೆಯೇ ಶಂಕಿತ ವ್ಯಕ್ತಿಗಳನ್ನು ಅನಿರ್ದಿಷ್ಟಾವಧಿಗೆ ಬಂಧನದಲ್ಲಿ ಇಡಬಹುದು. ಸರ್ಕಾರೇತರ ಹಿಂದೂ ಹಕ್ಕುಗಳ ಕಾರ್ಯಪಡೆಯ ಮುಖಂಡರ ನೇತೃತ್ವದಲ್ಲಿ ನವೆಂಬರ್ ತಿಂಗಳಲ್ಲಿ 20,000 ಭಾರತೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು.
2007: ತಮಿಳು ಚಿತ್ರನಟಿ ಖುಷ್ಬೂ ಅವರಿಗೆ ನ್ಯಾಯಾಲಯವೊಂದು ಮತ್ತೊಂದು ನೋಟಿಸ್ ಜಾರಿಗೊಳಿಸಿತು. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ದೇವರ ಮೂರ್ತಿ ಇಟ್ಟಿರುವ ಸ್ಥಳದಲ್ಲಿ ಚಪ್ಪಲಿ ಹಾಕಿಕೊಂಡು ಕುಳಿತಿದ್ದುದನ್ನು ಪ್ರಶ್ನಿಸಿ ಖುಷ್ಬೂಗೆ ತಮಿಳುನಾಡು ನ್ಯಾಯಾಲಯ ನೋಟಿಸ್ ನೀಡಿತು. ಇದೇ ಪ್ರಕರಣದಲ್ಲಿ ಹಿಂದೆ ಎರಡು ದೂರುಗಳು ದಾಖಲಾಗಿದ್ದವು.
2007: ಬಿಜೆಪಿ ಧುರೀಣ ದಿವಂಗತ ಪ್ರಮೋದ್ ಮಹಾಜನ್ ಪುತ್ರ ರಾಹುಲ್ ಮಹಾಜನ್ ದಾಂಪತ್ಯ ವಿಚ್ಛೇದನ ಹಂತಕ್ಕೆ ತಲುಪಿತು. ಕಳೆದ ವರ್ಷವಷ್ಟೇ ರಾಹುಲ್ ಮಹಾಜನ್ ತಮ್ಮ ಪ್ರೇಯಸಿ, ಪೈಲಟ್ ಶ್ವೇತಾಳನ್ನು ಮದುವೆಯಾಗಿದ್ದರು. ಈ ಬಹುಚರ್ಚಿತ ಮದುವೆ ನಡೆದು ಕೇವಲ ತಿಂಗಳೊಳಗೆ ಶ್ವೇತಾ ಅವರು ಗುಡಗಾಂವ್ ಕೋರ್ಟಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
2007: ಉತ್ತರ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಮಧ್ಯರಾತ್ರಿ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ಸಿನಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಐವರು ಮೃತರಾದರು. 9 ಜನ ಗಾಯಗೊಂಡರು.
2007: ಛತ್ತೀಸ್ ಗಡದ ಬಸ್ತಾರ್ ಜಿಲ್ಲೆಯ ಬಿಶ್ರಮ್ ಪುರ್ ಪೊಲೀಸ್ ಠಾಣೆಯ ಮೇಲೆ ಸುಮಾರು ನೂರಕ್ಕೂ ಹೆಚ್ಚು ನಕ್ಸಲೀಯರು ದಾಳಿ ನಡೆಸಿ ಒಬ್ಬ ಅಧಿಕಾರಿ ಮತ್ತು ಇಬ್ಬರು ಕಾನ್ ಸ್ಟೇಬಲ್ಗಳನ್ನು ಹತ್ಯೆಗೈದರು. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಮಾವೋವಾದಿ ಸಂಘಟನೆಯ ಉಗ್ರರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಮನಬಂದಂತೆ ಗುಂಡು ಹಾರಿಸಿದ್ದರಿಂದ ಸ್ಥಳದಲ್ಲಿಯೇ ಮೂವರು ಸತ್ತರೆ, ಇನ್ನೊಬ್ಬ ಕಾನ್ ಸ್ಟೇಬಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.
2007: `ವಜ್ರಮಹೋತ್ಸವ' ಸಂಭ್ರಮದ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಸಂಘಟಿಸಲು ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿಯು ಗುಪ್ತ ಮತದಾನದ ಮೂಲಕ ನಿರ್ಧರಿಸಿತು.
2007: ಹೈದರಾಬಾದಿನ ಮೆಕ್ಕಾ ಮಸೀದಿ ಬಳಿ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕ್ಷಮೆಯಾಚಿಸಿದರು. ಅನುಮತಿ ಇಲ್ಲದೇ ಮಸೀದಿಯ ಆವರಣದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಕ್ಕೆ ಮಸೀದಿ ಆಡಳಿತ ಮಂಡಳಿಯು ಸಾನಿಯಾ ಹಾಗೂ ಜಾಹೀರಾತು ಸಂಸ್ಥೆಯ ವಿರುದ್ಧ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಿತ್ತು. `ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕೆ' ಕ್ಷಮೆ ಯಾಚಿಸುವುದಾಗಿ ಸಾನಿಯಾ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ತಿಳಿಸಿದ್ದಲ್ಲದೆ ಮಸೀದಿಯ ಆಡಳಿತ ಮಂಡಳಿ ಬಳಿಯೂ ಕ್ಷಮೆಯಾಚಿಸಿದರು.
2006: ಶ್ರೀಗಂಧದ ಸುವಾಸನೆ ಬೀರುವ ಭಾರತದ ಮೊತ್ತ ಮೊದಲ ಅಂಚೆ ಚೀಟಿಯನ್ನು ಚೆನ್ನೈಯಲ್ಲಿ ಅಂಚೆ ಇಲಾಖೆ ಬಿಡುಗಡೆ ಮಾಡಿತು. 15 ರೂಪಾಯಿ ಮುಖಬೆಲೆಯ ಈ ಅಂಚೆ ಚೀಟಿಗೆ ಶ್ರೀಗಂಧವನ್ನು ಲೇಪಿಸಲಾಗಿದ್ದು, ಮೇಲ್ಭಾಗವನ್ನು ನವಿರಾಗಿ ಸವರಿದಾಗ ಸುವಾಸನೆ ಹೊರಬರುವುದು. ಶ್ರೀಗಂಧ ಭಾರತೀಯ ಸಂಸ್ಕೃತಿಯ ಭಾಗವೇ ಆಗಿರುವ ಕಾರಣ ಈ ಸ್ಮರಣಾರ್ಹ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು ಎಂದು ಅಂಚೆ ಇಲಾಖೆ ತಿಳಿಸಿತು.
2006: ಡಿಸ್ಕವರಿ ನೌಕೆಯ ಇಬ್ಬರು ಗಗನಯಾತ್ರಿಗಳಾದ ಅಮೆರಿಕದ ರಾಬರ್ಟ್ ಕರ್ಬೀಮ್ ಹಾಗೂ ಯುರೋಪಿನ ಕ್ರಿಸ್ಟರ್ ಫ್ಯೂಗಲ್ ಸಾಂಗ್ ನೌಕೆಯಿಂದ ಹೊರಬಂದು ಮೊದಲ ಸಲ ಬಾಹ್ಯಾಕಾಶದಲ್ಲಿ ನಡೆದಾಡಿದರು.
2006: ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಪ್ರತಿಷ್ಠಿತ `ಫ್ರೆಂಚ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ ಎಂದು ಮುಂಬೈಯಲ್ಲಿನ ಫ್ರೆಂಚ್ ರಾಯಭಾರ ಕಚೇರಿ ಪ್ರಕಟಿಸಿತು.
2006: ಸಂಸತ್ ಭವನದ ಮೇಲಿನ ದಾಳಿಯ ಅಪರಾಧಿ ಮಹಮ್ಮದ್ ಅಫ್ಜಲನಿಗೆ ನ್ಯಾಯಾಲಯದ ತೀರ್ಪಿನಂತೆ ಮರಣದಂಡನೆ ವಿಧಿಸಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆಯನ್ನು ಪ್ರತಿಭಟಿಸಿ ದಾಳಿ ಸಂದರ್ಭದಲ್ಲಿ ಮೃತರಾದ ಭದ್ರತಾ ಸಿಬ್ಬಂದಿಗೆ ನೀಡಿದ ಶೌರ್ಯ ಪದಕಗಳನ್ನು ಅವರ ಕುಟುಂಬ ಸದಸ್ಯರು ರಾಷ್ಟ್ರಪತಿ ಭವನಕ್ಕೆ ಹಿಂತಿರುಗಿಸಿದರು.
2005: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಗುರಿಯಾದ ಬಿಜೆಪಿ ಸಂಸದ ಡಾ. ಛತ್ರಪಾಲ್ ಸಿಂಗ್ ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಯಿತು. ಲಂಚ ಪಡೆದ ಪಕ್ಷದ ಐವರು ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡುವಂತೆ ಕೋರಲು ಬಿಜೆಪಿ ನಿರ್ಧರಿಸಿತು.
2005: ಯುರೇಕಾ ಫೋಬ್ಸ್ ಲಿಮಿಟೆಡ್ಡಿನ ಸುರಕ್ಷಿತ ನೀರು ಸಂಗ್ರಹ ಸಂಸ್ಕರಣೆ ಯಂತ್ರ ಅಕ್ವಾಸೂರ್ ಗೆ ಭಾರತದಲ್ಲಿನ ನೀರು ಸಂಸ್ಕರಣೆಯ ಅತ್ಯುನ್ನತ ತಂತ್ರಜ್ಞಾನದ ಪೇಟೆಂಟ್ ಲಭಿಸಿತು.
2005: ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆ ಕಾರ್ಯಗತಗೊಳಿಸುವಲ್ಲಿನ ಪ್ರಮುಖ ಅಡಚಣೆಯನ್ನು ಸುಪ್ರೀಂಕೋರ್ಟ್ ನಿವಾರಿಸಿತು. 2250 ಕೋಟಿ ರೂಪಾಯಿಗಳ ಕಾಮಗಾರಿ ಕೈಗೆತ್ತಿಕೊಳ್ಳಲು, ತನ್ನ ಸ್ವಾಧೀನದಲ್ಲಿ ಇರುವ ಜಮೀನನ್ನು ಮಾರಾಟ, ಪರಭಾರೆ ಅಥವಾ ಒತ್ತೆ ಇಡಲು ನಂದಿ ಇನ್ ಪ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿಮಿಟೆಡ್ ಗೆ (ನೈಸ್) ಕೋರ್ಟ್ ತನ್ನ ಪರಿಷ್ಕತ ಆದೇಶದಲ್ಲಿ ಅನುಮತಿ ನೀಡಿತು.
1981: ಸಾಲಿಡಾರಿಟಿ ಕಾರ್ಮಿಕ ಚಳವಳಿಯನ್ನು ಹತ್ತಿಕ್ಕುವ ಸಲುವಾಗಿ ಪೋಲಂಡಿನಲ್ಲಿ ಮಾರ್ಷಲ್ ಲಾ ಹೇರಲಾಯಿತು. ಈ ಮಾರ್ಷಲ್ ಲಾ 1983ರಲ್ಲಿ ಕೊನೆಗೊಂಡಿತು.
1904: ಈದಿನ ಲಂಡನ್ನಿನ ಮೆಟ್ರೋಪಾಲಿಟನ್ ರೈಲ್ವೇಯಲ್ಲಿ ಮೊತ್ತ ಮೊದಲ ವಿದ್ಯುತ್ ರೈಲುಸೇವೆ ಆರಂಭವಾಯಿತು.
1816: ವೆರ್ನರ್ ವೋನ್ ಸೀಮೆನ್ಸ್ (1816-1892) ಹುಟ್ಟಿದ ದಿನ. ಜರ್ಮನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆದ ಈತ ಟೆಲಿಗ್ರಾಫ್ ಉದ್ಯಮ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.ಮೆಡಿಟರೇನಿಯನ್ ಉದ್ದಕ್ಕೆ ಹಾಗೂ ಯುರೋಪಿನಿಂದ ಭಾರತಕ್ಕೆ ಕೇಬಲ್ಲುಗಳನ್ನು ಅಳವಡಿಸಿದ ವ್ಯಕ್ತಿ ಈತ.
1642: ಡಚ್ ನಾವಿಕ ಅಬೆಲ್ ಟಾಸ್ಮಾನ್ ಈದಿನ ನ್ಯೂಜಿಲ್ಯಾಂಡಿಗೆ ಆಗಮಿಸಿದ.
1577: ಇಂಗ್ಲೆಂಡಿನ ಫ್ರಾನ್ಸಿಸ್ ಡ್ರೇಕ್ ಈದಿನ ಗೋಲ್ಡನ್ ಹಿಂದ್ ನ ಪ್ಲೈಮೌತ್ನಿಂದ ಜಗತ್ತಿಗೆ ಸುತ್ತು ಹಾಕುವ ಸಲುವಾಗಿ ಯಾನ ಹೊರಟ. ಜಗತ್ತಿಗೆ ಸುತ್ತು ಹಾಕಲು ಆತ ಮೂರೂವರೆ ವರ್ಷಗಳ ಕಾಲ ಯಾನ ಮಾಡಿದ.
1553: ಫ್ರಾನ್ಸಿನ ಮೊದಲ ಬೋರ್ಬೋನ್ ದೊರೆ ನಾಲ್ಕನೇ ಹೆನ್ರಿ (1553-1610) ಹುಟ್ಟಿದ ದಿನ. ಫ್ರಾನ್ಸನ್ನು ಏಕೀಕರಣಗೊಳಿಸಿ ಪ್ಯಾರಿಸ್ಸನ್ನು ಗೆಲ್ಲುವ ಸಲುವಾಗಿ ಈತ ಫ್ರೆಂಚರನ್ನು ರೋಮನ್ ಕ್ಯಾಥೋಲಿಕ್ ಗೆ ಮತಾಂತರಿಸಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment