Sunday, January 25, 2009

ಇಂದಿನ ಇತಿಹಾಸ History Today ಜನವರಿ 21

ಇಂದಿನ ಇತಿಹಾಸ

ಜನವರಿ 21

ಹಿರಿಯ ರಾಜಕಾರಣಿ ಮಧು ದಂಡವತೆ ಈ ದಿನ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಪ್ರಕ್ರಿಯೆಗೆ ಮೂಲ ಕಾರಣರಾದ ವ್ಯಕ್ತಿ. 

2008: ವಿಶ್ವದಲ್ಲಿನ ಸಮಸ್ತ ಗ್ರಹಗಳು, ನಕ್ಷತ್ರಗಳೆಲ್ಲ ಅಗೋಚರ ಮತ್ತು ಅನಂತ ದಾರವೊಂದರಿಂದ ಬಂಧಿಸಲ್ಪಟ್ಟಿವೆ ಹಾಗೂ ಆ ದಾರ ಬಿಡುಗಡೆ ಮಾಡುವ  ಶಕ್ತಿಯನ್ನೇ ಬಳಸಿಕೊಳ್ಳುತ್ತಿವೆ ಎಂಬುದಾಗಿ ನ್ಯೂಯಾರ್ಕಿನ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧನಾ ನಿರತ ವಿಜ್ಞಾನಿಗಳು ಪ್ರತಿಪಾದಿಸಿದರು. ಬ್ರಹ್ಮಾಂಡದಲ್ಲಿನ ಅಗೋಚರ ಶಕ್ತಿಯ ಬಲವನ್ನು ಸದ್ಯ ಅಳೆಯುತ್ತಿರುವ `ನಾಸಾ'ದ `ವಿಲ್ಕಿನ್ ಸನ್ ಮೈಕ್ರೊವೇವ್ ಅನಿಸೊಟ್ರೊಫಿ ಪ್ರೋಬ್' ಕಲೆಹಾಕಿದ ಮಾಹಿತಿ ಆಧಾರದಲ್ಲಿ ಈ ನಿರ್ಣಯಕ್ಕೆ ಬರಲಾಯಿತು. `ಈ ದಾರವನ್ನು ನಾವು ನೋಡಲು ಸಾಧ್ಯವಿಲ್ಲ, ಅದು ಎಷ್ಟೋ ಶತಕೋಟಿ ಜ್ಯೋತಿರ್ವರ್ಷಗಳಾಚೆ ಇದೆ. ಈ ವರ್ಷ ಹಾರಿಬಿಡಲಾಗುವ ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಪ್ಲಾಂಕ್ ಉಪಗ್ರಹ ಯಾನದ ಬಳಿಕ ಇದು ದೃಢಪಡಲಿದೆ' ಎಂದು  ತಂಡದ ಮುಖ್ಯಸ್ಥ ಡಾ. ಮಾರ್ಕ್ ಹಿಂಡ್ ಮಾರ್ಷ್ ಹೇಳಿದ್ದನ್ನು `ಸೈನ್ಸ್ ಡೈಲಿ' ವರದಿ ಮಾಡಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೇಲಿನ `ಬೇಹುಗಾರಿಕೆ' ಉಪಗ್ರಹವೊಂದನ್ನು ಧ್ರುವಗಾಮಿ ಕಕ್ಷೆಗೆ ಹಾರಿಬಿಡಲಾಯಿತು. ಇದರೊಂದಿಗೆ ವಾಣಿಜ್ಯ ಉದ್ದೇಶದ ಉಪಗ್ರಹ ಉಡಾವಣೆಯಲ್ಲಿ ಭಾರತ ಇನ್ನೊಂದು ಹೆಜ್ಜೆ  ಕ್ರಮಿಸಿತು. ಇದರಿಂದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿತು. ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ- ಸಿ10) 300 ಕೆ.ಜಿ. ತೂಕದ ಇಸ್ರೇಲಿನ ಟೆಕ್ಸಾರ್ (ಪೋಲಾರಿಸ್) ಉಪಗ್ರಹವನ್ನು ಉಡಾವಣೆಯಾದ 1185 ಸೆಕೆಂಡುಗಳ ನಂತರ (19.75 ನಿಮಿಷ) ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಿತು. ಮೋಡ ಹಾಗೂ ಮಂಜು ಮುಸುಕಿದ ವಾತಾವರಣದ ಮಧ್ಯೆಯೂ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ `ಟೆಕ್ಸಾರ್' ಉಪಗ್ರಹಕ್ಕೆ ಇದ್ದು, ಹಗಲು, ರಾತ್ರಿ ಚಿತ್ರಗಳನ್ನು ಸೆರೆಹಿಡಿಯುವುದು.

2008: ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್ ಅವರು ಶೈಕ್ಷಣಿಕ ರಂಗಕ್ಕೆ ನೀಡಿರುವ ಕೊಡುಗೆ ಮತ್ತು ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅವರಿಗೆ ದೆಹಲಿ ವಿಶ್ವವಿದ್ಯಾ ನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈದಿನ ನಡೆದ ವಿಶೇಷ ಘಟಿಕೋತ್ಸವದಲ್ಲಿ ವಿವಿಯ ಕುಲಪತಿಗಳೂ ಆದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಗಾರ್ಡನ್ ಅವರಿಗೆ ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಅಂತಾರಾಷ್ಟ್ರೀಯ ಟೆನಿಸ್ ಕ್ಷೇತ್ರಕ್ಕೆ ಕಾಲಿಟ್ಟ ಹೊಸದರಲ್ಲಿ ಮೋಸದಾಟ ಆಡಲು ಆಮಿಷ ಒಡ್ಡಲಾಗಿತ್ತು ಎಂಬುದನ್ನು ಭಾರತದ ಖ್ಯಾತ ಡಬಲ್ಸ್ ಆಟಗಾರ ಮಹೇಶ್ ಭೂಪತಿ ಮೆಲ್ಬೋರ್ನಿನಲ್ಲಿ ಬಹಿರಂಗಪಡಿಸಿದರು.

2008: ದೇಶದ ಬಂಡವಾಳ ಪೇಟೆಯಲ್ಲಿ ಹಣ ತೊಡಗಿಸಿರುವ ಹೂಡಿಕೆದಾರರ ಪಾಲಿಗೆ ಸೋಮವಾರದ ಈದಿನವು ವಾರದ ವಹಿವಾಟಿಗೆ ಶುಭಾರಂಭದ ಶ್ರೀಕಾರ ಹಾಕದೇ ಭಯಾನಕ ದುಃಸ್ವಪ್ನವಾಗಿ ಕಾಡಿತು. ಒಂದು ಹಂತದಲ್ಲಿ ಬಿ ಎಸ್ ಇ ಸೂಚ್ಯಂಕವು  16,951.50 ಅಂಶಗಳಿಗೆ  (17,000 ಅಡಿಗಿಂತ ಕೆಳಗೆ)  ಕುಸಿದರೆ, ಎನ್ ಎಸ್ ಇ 5 ಸಾವಿರ ಅಂಶಗಳಿಗಿಂತ (4977) ಕೆಳಗೆ ಇಳಿದಿತ್ತು. ಈ ಕರಾಳ ಸೋಮವಾರ ಅನಿರೀಕ್ಷಿತವಾಗಿ ಆರು ಲಕ್ಷ ಕೋಟಿಗಳಷ್ಟು ಸಂಪತ್ತನ್ನು ಕರಗಿಸಿತು. 

2008: ಕಾರ್ಗಿಲ್ ಕದನ ಸಮಯದಲ್ಲಿ ಪ್ರಚಾರ ಪಡೆದಿದ್ದ ಕಾಶ್ಮೀರದ ದ್ರಾಸ್ ಪ್ರದೇಶ ಸೈಬೀರಿಯಾ ಪ್ರಾಂತ್ಯದ ನಂತರದ ಅತ್ಯಂತ ಚಳಿಯುಕ್ತ ಪ್ರದೇಶ ಎಂದು ಹೆಸರಾಯಿತು. ದ್ರಾಸ್ ಪ್ರದೇಶ ಶೂನ್ಯಕ್ಕಿಂತ 27 ಡಿ.ಸೆ. ಕಡಿಮೆ ಉಷ್ಣಾಂಶ ಹೊಂದುವ ಮೂಲಕ ಈ ವರ್ಷದ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿದ ದಾಖಲೆಗೆ ಪಾತ್ರವಾಯಿತು. ಈದಿನ ಇಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ -13.5 ಡಿ.ಸೆ.!

2008: ಪಾಕಿಸ್ಥಾನದ `ನ್ಯೂಸ್ ಲೈನ್' ನಿಯತಕಾಲಿಕ ನೀಡುವ 2007ನೇ ಸಾಲಿನ ಕುಖ್ಯಾತರ ಪ್ರಶಸ್ತಿ `ಹಾಲ್ ಆಫ್  ಶೇಮ್' ಪಡೆದವರ ಪಟ್ಟಿಯಲ್ಲಿ ದೇಶದ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಹೆಸರುಗಳೂ ಸೇರಿದವು.

2008: ಮ್ಯಾನ್ಮಾರಿನ ದಕ್ಷಿಣ ಭಾಗದಲ್ಲಿ ಭಾನುವಾರ ಬಸ್ಸೊಂದು ಹೆದ್ದಾರಿಯಿಂದ 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದುದರಿಂದ 27 ಪ್ರಯಾಣಿಕರು ಸತ್ತು ಇತರ 10 ಮಂದಿ ಗಾಯಗೊಂಡರು. 

2008: ಪಾಕಿಸ್ಥಾನ ತಂಡದವರು ಕರಾಚಿಯಲ್ಲಿ ನಡೆದ ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 104 ರನ್ನುಗಳ ಗೆಲುವು ಸಾಧಿಸಿದರು. ಜೊತೆಗೆ ಐದು ಮಂದಿ ಬ್ಯಾಟ್ಸ್ ಮನ್ನರು ಅರ್ಧ ಶತಕ ದಾಖಲಿಸಿದ್ದು ಇದೊಂದು ವಿಶ್ವದಾಖಲೆಯಾಯಿತು.

2008: ಗುಜರಾತಿನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಹಾಗು ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು 11ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ 12 ಮಂದಿ ಆರೋಪಿಗಳ ಹೆಸರನ್ನು ಜನವರಿ 18ರಂದು ನ್ಯಾಯಾಲಯವು ಪ್ರಕಟಿಸಿತ್ತು. ಇತರ 7 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತರನ್ನಾಗಿಸಿ ತೀರ್ಪು ನೀಡಲಾಯಿತು. ಹನ್ನೆರಡನೇ ಆರೋಪಿಯೂ ಆಗಿರುವ ಪೊಲೀಸ್ ಸಿಬ್ಬಂದಿ ಸೋಮಾಬಾಯ್ ಗೋರಿಗೆ ಮೂರು ವರ್ಷಗಳ ಕಠಿಣ ಸಜೆಯ ಶಿಕ್ಷೆ ನೀಡಲಾಯಿತು. ಆರೋಪಿಗಳನ್ನು ರಕ್ಷಿಸಲು ಯತ್ನಿಸಿದನೆಂಬ ಆರೋಪ ಸೋಮಾಬಾಯ್ ಮೇಲಿತ್ತು. ವಿಚಾರಣೆಯನ್ನು ಎದುರಿಸುತ್ತಿದ್ದವರಲ್ಲಿ ನರೇಶ್ ಮೊರ್ಧಿಯ ವಿಚಾರಣೆಯ ಸಂದರ್ಭದಲ್ಲಿಯೇ ಸಾವನ್ನಪ್ಪಿದ್ದರು. ಜಸ್ವಂತಿಬಾಯ್ ನೈ, ಗೋವಿಂದಬಾಯ್ ನೈ, ಶೈಲೇಶ್ ಭಟ್, ರಾಧೇ ಶ್ಯಾಮ್ ಶಹಾ, ಬಿಪಿನ್ ಜೋಷಿ, ಕೇಸರ್ ಬಾಯ್ ವೊಹಾನಿಯ, ಪ್ರದೀಪ್ ಮೊರ್ಧಿಯ, ಬಾಕಾಬಾಯ್ ವೊಹಾನಿಯ, ರಾಜನ್ ಬಾಯ್ ಸೋನಿ, ನಿತೇಶ್ ಭಟ್, ರಮೇಶ್ ಚಂದನ ಅವರು ಜೀವಾವಧಿ ಶಿಕ್ಷೆಗೆ ಒಳಗಾದರು. 2002ರ ಮಾರ್ಚಿ 3ರಂದು ಚಪರ್ ವಾಡಾದಿಂದ ಪನಿವೇಲಾದತ್ತ 17ಜನರ ಗುಂಪು ಪ್ರಯಾಣಿಸುತಿತ್ತು. ಇದರಲ್ಲಿ ಬಿಲ್ಕಿಸ್ ಬಾನು ಕೂಡ ಇದ್ದರು. ಈ ಗುಂಪಿನ ಮೇಲೆ ನಡೆದ ಆಕ್ರಮಣದ ಸಂದರ್ಭದಲ್ಲಿ 8 ಮಂದಿ ಸತ್ತು, 6ಮಂದಿ ಕಾಣೆಯಾಗಿದ್ದರು. ಆಗ ಆರು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ಘಟನೆಯಲ್ಲಿ ಬಿಲ್ಕಿಸ್ ಮತ್ತು ಇಬ್ಬರು ಮಕ್ಕಳು ಮಾತ್ರ ಬದುಕುಳಿದಿದ್ದರು.

2007: ಮಲೇಷ್ಯಾದ ಕ್ವಾಲಾಲಂಪುರಕ್ಕೆ ಸಮೀಪದ ಕ್ಲಾಂಗಿನಲ್ಲಿರುವ ಶ್ರೀ ಸುಂದರರಾಜ ಪೆರುಮಾಳ್ ದೇವಾಲಯವು ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯ ಸಾಧನೆಗಾಗಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟ ಸೇವಾ `ಐಎಸ್ ಓ 9001:2000' ಪ್ರಮಾಣಪತ್ರವನ್ನು ಪಡೆದುಕೊಂಡಿತು. 100 ವರ್ಷಗಳ ಹಿಂದೆ ನಿರ್ಮಿಸಲಾದ ಈ ವೈಷ್ಣವ ದೇವಾಲಯ `ಆಗ್ನೇಯ ಏಷ್ಯಾದ ತಿರುಪತಿ' ಎಂದೇ ಖ್ಯಾತಿ ಗಳಿಸಿದೆ. ಶಾಲೆಗಳು, ಅನಾಥಾಲಯಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಮಾನವೀಯ ಅಭಿವೃದ್ಧಿ ಕಾರ್ಯಗಳಿಗೆ ಈ ದೇವಾಲಯವು ನೆರವು ನೀಡುತ್ತಿದೆ.

2007: `ಪೈಲೆಟ್ ಬಾಬಾ' ಅವರ ಶಿಷ್ಯೆ ಜಪಾನಿನ ಕಿಕೊ ಅಜ- ಕಾವಾ (40) ಅವರು ಅಲಹಾಬಾದಿನ ಅರ್ಧ ಕುಂಭ ನಗರದಲ್ಲಿ ವಿಶ್ವಶಾಂತಿ ಹಾಗೂ ಜ್ಞಾನೋದಯಕ್ಕಾಗಿ ಕೈಗೊಂಡಿದ್ದ 72 ಗಂಟೆಗಳ ಸುದೀರ್ಘ ಸಮಾಧಿಯನ್ನು ಪೂರ್ಣಗೊಳಿಸಿ ಹೊರಬಂದರು. 9 ಅಡಿ ಆಳದ ಗುಂಡಿಯಲ್ಲಿ 3 ದಿನಗಳ ಕಾಲ ಧ್ಯಾನ ಕೈಗೊಂಡಿದ್ದ ಅವರನ್ನು ಮರಳಿನಿಂದ ಮುಚ್ಚಲಾಗಿದ್ದ ಗುಂಡಿಯ ಒಳಗಿಡಲಾದ ಪೆಟ್ಟಿಗೆಯಿಂದ ಹೊರತೆಗೆಯಲಾಯಿತು.

2007: ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದ ಅಡಿಯಲ್ಲಿ ಭಾರೀ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತು.

 2006: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ತೂರಿನಲ್ಲಿ ಸಂಭವಿಸಿದ ಕಾರು ಮತ್ತು ಟೆಂಪೋ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ತಾಯಿ ರತ್ನಮ್ಮ ಹೆಗ್ಗಡೆ (78) ಮತ್ತು ಕಾರಿನ ಚಾಲಕ ಸಂಸೆ ನಿರಂಜನಕುಮಾರ್ ನಿಧನರಾದರು. ಕಾರು ಧರ್ಮಸ್ಥಳದಿಂದ ಕಾರ್ಕಳಕ್ಕೆ ಹೊರಟಿತ್ತು.

2006: ಸರ್ಬಿಯಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುಮಾರು 2 ದಶಕಗಳ ಕಾಲ ಹೋರಾಟ ನಡೆಸಿ ಯಶಸ್ಸು ಪಡೆದ ಗಾಂಧಿವಾದಿ, ಕೊಸಾವೊ ಅಧ್ಯಕ್ಷ ಇಬ್ರಾಹಿಂ ರುಗ್ವೊ (61) ಸರ್ಬಿಯಾದ ಪ್ರಿಸ್ಟಿನಾದಲ್ಲಿ ನಿಧನರಾದರು.

2006: ಭಾರತೀಯ ವಿಜ್ಞಾನ ಮಂದಿರದ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಸಂಬಂಧ ಬೆಂಗಳೂರಿನ ವಿಶೇಷ ಪೊಲೀಸ್ ತಂಡವು ಚಿಂತಾಮಣಿ ಸಮೀಪದ ನಿಗೂಢ ಸ್ಥಳದಲ್ಲಿ ಬಂಧಿತ ಉಗ್ರರು ಅಡಗಿಸಿ ಇಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ ಪಡಿಸಿಕೊಂಡಿತು. ಆರೋಪಿಗಳಾದ ಚಿಂತಾಮಣಿ ಮೂಲದ ಅಪ್ಸರ್ ಪಾಶ ಮತ್ತು ಉತ್ತರಪ್ರದೇಶ ಮೂಲದ ಮೌಲ್ವಿ ಮೊಹಮ್ಮದ್ ಇರ್ಫಾನ್ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

1972: ಮಣಿಪುರ, ಮಿಜೋರಂ ಮತ್ತು ತ್ರಿಪುರಾ ಪೂರ್ಣ ಪ್ರಮಾಣದ ರಾಜ್ಯಗಳಾದವು.

1954: ಅಮೆರಿಕಾದ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ 'ನಾಟಿಲಸ್' ಕನೆಕ್ಟಿಕಟ್ಟಿನ ನಾಟಿಲಸ್ನಲ್ಲಿ ಚಾಲನೆಗೊಂಡಿತು.

1952: ಬಾಂಬೆಯ ಮುಖ್ಯಮಂತ್ರಿ ಬಿ.ಜಿ .ಖೇರ್ ಅವರು ಜಹಾಂಗೀರ್ ಆರ್ಟ್ ಗ್ಯಾಲರಿಯನ್ನು ಬಾಂಬೆಯಲ್ಲಿ ಈಗಿನ ಮುಂಬೈಯಲ್ಲಿ ಉದ್ಘಾಟಿಸಿದರು. ಸರ್ ಗೋಸ್ವಾಜೀ ಜಹಾಂಗೀರ್ ಅವರು 7,04,112 ರೂಪಾಯಿಗಳನ್ನು ದೇಣಿಗೆ ನೀಡಿದ ಕಾರಣ ಈ ಆರ್ಟ್ ಗ್ಯಾಲರಿಗೆ ಅವರ ಹೆಸರನ್ನೇ ಇಡಲಾಯಿತು. ತಮ್ಮ ಮೃತಪುತ್ರ ಜಹಾಂಗೀರ್ ನೆನಪಿಗಾಗಿ ಈ ದೇಣಿಗೆಯನ್ನು ಗೋಸ್ವಾಜೀ ನೀಡಿದರು.

1951: ಕಲಾವಿದೆ ಲಕ್ಷ್ಮಿ ಎಂ. ಜನನ.

1950: ಬ್ರಿಟಿಷ್ ಬರಹಗಾರ ಜಾರ್ಜ್ ಆರ್ವೆಲ್ ಕ್ಷಯರೋಗದ ಪರಿಣಾಮವಾಗಿ ಲಂಡನ್ನಿನಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಮೃತರಾದರು. 

1945: ಭಾರತದ ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಟೋಕಿಯೋದಲ್ಲಿ ಮೃತರಾದರು.

1942: ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಅವರು ತಬಲಾವಾದಕ ಬುಡ್ಲಪ್ಪ- ಭಕ್ತಿಗೀತೆಗೆ ಗಾಯಕಿ ರಂಗಮ್ಮ ದಂಪತಿಯ ಮಗನಾಗಿ ರಾಯಚೂರು ಜಿಲ್ಲೆಯ ವಡವಾಟಿಯಲ್ಲಿ ಜನಿಸಿದರು.

1924: ಸೋವಿಯತ್ ಯೂನಿಯನ್ ಶಿಲ್ಪಿ, ನಿರ್ಮಾಪಕ ಹಾಗೂ ಮೊದಲ ಮುಖ್ಯಸ್ಥ ವ್ಲಾಡಿಮೀರ್ ಇಲಿಚ್ ಲೆನಿನ್ ತಮ್ಮ 53ನೇ ವಯಸ್ಸಿನಲ್ಲಿ ಮಾಸ್ಕೋ ಸಮೀಪದ ಗೋರ್ಕಿಯಲ್ಲಿ (ಈಗ ಗೋರ್ಕಿ ಲೆನಿನ್ ಸ್ಕೀ) ಪಾರ್ಶ್ವವಾಯುವಿಗೆ ತುತ್ತಾಗಿ ಅಸು ನೀಗಿದರು. ಮಹಾನ್ ಕ್ರಾಂತಿಕಾರಿ ಮುತ್ಸದ್ಧಿ ಎಂದು ಇವರು ಇತಿಹಾಸದಲ್ಲಿ ಪರಿಗಣಿತರಾಗಿದ್ದಾರೆ.

1924: ಹಿರಿಯ ರಾಜಕಾರಣಿ ಮಧು ದಂಡವತೆ ಈ ದಿನ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಪ್ರಕ್ರಿಯೆಗೆ ಮೂಲ ಕಾರಣರಾದ ವ್ಯಕ್ತಿ. ವಿ.ಪಿ. ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವ, 1990ರಲ್ಲಿ ಹಾಗೂ 1996ರಿಂದ 1998ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 2005ರ ನವೆಂಬರ್ 12ರಂದು ನಿಧನರಾದರು.

1793: ಹದಿನಾರನೇ ಲೂಯಿಯನ್ನು ಪ್ಯಾರಿಸ್ಸಿನಲ್ಲಿ ಗಿಲೊಟಿನ್ ಯಂತ್ರದ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement