Friday, January 30, 2009

ಇಂದಿನ ಇತಿಹಾಸ History Today ಜನವರಿ 28


ಇಂದಿನ ಇತಿಹಾಸ

ಜನವರಿ 28

 ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು.

2008: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ವಿಕೆಟ್ ಕೀಪರ್ `ಗಿಲಿ' ಈದಿನ ಮುಕ್ತಾಯಗೊಂಡ ಅಡಿಲೇಡ್ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟಿಗೆ ಗುಡ್ ಬೈ ಹೇಳಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಆಸೀಸ್ ತಂಡದ ಪ್ರತಿಯೊಬ್ಬ ಸದಸ್ಯರೂ ಗಿಲ್ ಕ್ರಿಸ್ಟ್ ಅವರನ್ನು ತಬ್ಬಿಕೊಂಡು ವಿದಾಯ ಹೇಳಿದರು. ಈ ವೇಳೆ ಕ್ರೀಸ್ನಲ್ಲಿದ್ದ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರೂ ಗಿಲ್ಕ್ರಿಸ್ಟ್ ಅವರನ್ನು ಅಪ್ಪಿಕೊಂಡರು. ಭಾರತ ತಂಡದ ಡ್ರೆಸಿಂಗ್ ಕೋಣೆಗೆ ತೆರಳಿ ಪ್ರತಿಯೊಬ್ಬ ಆಟಗಾರನಿಗೆ ಹಸ್ತಲಾಘವ ನೀಡಿದ `ಗಿಲಿ' ಎಲ್ಲರ ಕೇಂದ್ರಬಿಂದುವಾಗಿ ಬದಲಾದರು. ಕೆಲವೊಂದು ಭಾವಪೂರ್ಣ ಕ್ಷಣಗಳಿಗೆ ಅಡಿಲೇಡಿನಲ್ಲಿ ನೆರೆದ ಪ್ರೇಕ್ಷಕರು ಸಾಕ್ಷಿಯಾದರು. 

2008: ಹೈದರಾಬಾದಿನ 21ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಈದಿನ ಮತ್ತೊಂದು ಮೈಲಿಗಲ್ಲು ನೆಟ್ಟು ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು. ಸಾನಿಯಾ ಅವರು ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯಲ್ಲಿ 29ನೇ ಸ್ಥಾನ ಪಡೆದು  ಏಷ್ಯಾದ ಅಗ್ರ ರ್ಯಾಂಕಿಂಗಿನ ಅಟಗಾರ್ತಿ ಎಂಬ ಗೌರವ ಪಡೆದುಕೊಂಡರು. ಇದುವರೆಗೂ ಈ ಗೌರವ ಚೀನಾದ ನಾ ಲೀ ಅವರ ಹೆಸರಿನಲ್ಲಿ ಇತ್ತು. ಹೊಸ ಪಟ್ಟಿಯಲ್ಲಿ ಲೀ 32ನೇ ಸ್ಥಾನಕ್ಕೆ ಕುಸಿದರು.

2008: ಜಷ್ಪುರ ಜಿಲ್ಲೆಯ ಜೈಮಾರ್ಗ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ನಕ್ಸಲರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಮಾಹಿತಿ ಆಧರಿಸಿ ಸಿ ಐ ಎಸ್ ಎಫ್ ಮತ್ತು ಪೊಲೀಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ಅಶೋಕ್ ಒರಾನ್, ವಿಶ್ವೇಶ್ವರ್ ಮತ್ತು ಜಾರ್ಜ್ ಮಿಂಜ್ ಎಂಬ ಮೂವರು ನಕ್ಸಲರನ್ನು ಬಂಧಿಸಿದರು.

2008: ಥಾಯ್ಲೆಂಡ್ ಸಂಸತ್ ಪುಗ್ನೇಸಿಯಸ್ ರೈಟ್-ವಿಂಗರ್ ಸಮಕ್ ಸುಂದರವೆಜ್ ಅವರನ್ನು ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಿತು. ಇದರಿಂದಾಗಿ 2006ರ ರಕ್ತರಹಿತ ಕ್ರಾಂತಿಯ ಬಳಿಕ ದೇಶದಲ್ಲಿ ಮತ್ತೆ ಪ್ರಾತಿನಿಧಿಕ, ನಾಗರಿಕ ಸರ್ಕಾರ ಮರಳಿದಂತಾಯಿತು. 72 ವರ್ಷದ ಈ ಮಾಜಿ ಗವರ್ನರ್, ಗಡಿಪಾರಾಗಿರುವ ಪದಚ್ಯುತ ಪ್ರಧಾನಿ ಥಕ್ಸಿನ್ ಶಿನವಾತ್ರ ಅವರನ್ನು ಮರಳಿ ಸ್ವದೇಶಕ್ಕೆ ಕರೆತರುವ ಪಣತೊಟ್ಟು, ಸೇನೆ ಮತ್ತು ರಾಜಪ್ರಭುತ್ವದ ಪ್ರಮುಖರನ್ನು ದಂಗೆಯ ರೂವಾರಿಗಳೆಂದು ದೂಷಿಸಿ, ಸಂಘರ್ಷಕ್ಕೆ ನಾಂದಿ ಹಾಡಿದ್ದರು.

2007: ಬ್ರಿಟನ್ನಿನ `ಚಾನೆಲ್ 4' ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಇದರಿಂದಾಗಿ 85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್) ನಗದು ಬಹುಮಾನ ಅವರ ಮಡಿಲಿಗೆ ಬಿದ್ದಿತು. ಕಾರ್ಯಕ್ರಮದಲ್ಲಿ ಜನಾಂಗೀಯ ನಿಂದನೆ ಆರೋಪ ಹೊತ್ತಿದ್ದ ಮಾಜಿ ಭುವನ ಸುಂದರಿ ಡೇನಿಯೆಲಾ ಲಾಯ್ಡ್ ಮತ್ತು  ಜಾಕ್ ಟ್ವೀಡ್ ಅವರು ಅಂತಿಮ ಹಣಾಹಣಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಡೇನಿಯ್ಲೆಲಾ ಈ ಮೊದಲು ಜನಾಂಗೀಯ ನಿಂದನೆ ಮಾಡಿದ್ದಕ್ಕಾಗಿ ಶಿಲ್ಪಾ ಅವರ ಕ್ಷಮೆ ಯಾಚಿಸಿದ್ದರು. ಇದಕ್ಕೂ ಮುನ್ನ ಜನಾಂಗೀಯ ನಿಂದನೆಗೈದ ಆರೋಪಕ್ಕೆ ಗುರಿಯಾದ ಜೇಡ್ ಗೂಡಿ ನಿರ್ಗಮಿಸಿದ್ದರು. ಜನವರಿ 2ರಂದು ಆರಂಭಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳನ್ನು ಒಂದು ಮನೆಯಲ್ಲಿ ಇರುವಂತೆ ಮಾಡಿ, ಅವರ ನಡವಳಿಕೆಗಳನ್ನು ಹಾಗೂ ದೈನಂದಿನ ಕೆಲಸಗಳಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಇವರೆಲ್ಲ ಹೇಗೆ ನಿಭಾಯಿಸುವರು ಎಂಬುದನ್ನೆಲ್ಲ ಚಿತ್ರೀಕರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಪರ್ಧಾಳುಗಳು ಶಿಲ್ಪಾ ವಿರುದ್ಧ ಮಾಡಲಾದ ಜನಾಂಗೀಯ ಟೀಕೆಗಳ ಬಗ್ಗೆ ಸುದ್ದಿ ಮಾಧ್ಯಮಗಳ ಕಣ್ಗಾವಲು ಸಂಸ್ಥೆಯಾದ `ಆಫ್ ಕಾಮ್'ಗೆ 40 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿದ್ದವು. ವಿವಾದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಜನ ಪ್ರತಿನಿಧಿಗಳು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಬ್ರಿಟನ್ನಿನ ಸುದ್ದಿ ಮಾಧ್ಯಮಗಳೂ ಈ ಘಟನೆಯ ವಿರುದ್ಧ ದನಿ ಎತ್ತಿದ್ದವು.

2007: ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗುವ ಸಲುವಾಗಿ `ಕರಾಟೆ ಭಾನುಮತಿ' ಎಂದೇ ಖ್ಯಾತರಾಗಿರುವ 47 ವರ್ಷದ ಮಹಿಳೆ ತಮಿಳುನಾಡಿನ ಚೆನ್ನೈಯಲ್ಲಿ ಗಾಜಿನ ಚೂರು ಹಾಗೂ 1525 ಮೊಳೆಗಳಿದ್ದ ಹಲಗೆಯಲ್ಲಿ ಪವಡಿಸಿ, ತನ್ನ ಮೈಮೇಲೆ 565 ಮೋಟಾರ್ ಸೈಕಲ್ಲುಗಳನ್ನು ಓಡಿಸಿಕೊಂಡರು. ಈ ದಾಖಲೆ ಸ್ಥಾಪನೆಯ ಒಂದು ಭಾಗವಾಗಿ ಹಲಗೆಯಲ್ಲಿ ಮಲಗಿದ್ದಾಗಲೇ ಆಕೆಯ ಮೇಲೆ 500 ಕಿ.ಗ್ರಾಂ. ತೂಕದ ಗ್ರಾನೈಟ್ ಕಲ್ಲನ್ನು ಇರಿಸಿ ಒಡೆದು ಹಾಕಲಾಯಿತು. ಈ ಸಾಹಸವನ್ನು ನಗರದ ಚಾಲೆಂಜರ್ಸ್ ಅಕಾಡೆಮಿ ಸಂಘಟಿಸಿತ್ತು. ಲಿಮ್ಕಾ ದಾಖಲೆ ಸ್ಥಾಪನೆ ಸಲುವಾಗಿ ಇನ್ನೊಂದು ಸಾಹಸದಲ್ಲಿ ಎಸ್. ರಾಜಾ ಅವರು 32 ಸೆಕೆಂಡುಗಳಲ್ಲಿ ತಮ್ಮ ಒಂದೇ ತೋಳನ್ನು 32 ಸಲ ಮೇಲಕ್ಕೆ ಬೀಸಿ ದಾಖಲೆ ನಿರ್ಮಿಸಿದರು. ಈ ಹಿಂದೆ ಮುಂಬೈಯ ನಾಯಕ್ ಅವರು 41.5 ಸೆಕೆಂಡಿನಲ್ಲಿ 27 ಸಲ ತಮ್ಮ ತೋಳನ್ನು ಮೇಲಕ್ಕೆ ಬೀಸಿ ದಾಖಲೆ  ಸ್ಥಾಪಿಸಿದ್ದರು.

2007: `ಜರಾ ಹೊಲ್ಲೆ ಹೊಲ್ಲೆ ಚಲೊ ಮೇರೆ ಸಾಜನಾ', `ಯೇ ಲೊ ಮೇ ಹಾರಿ ಪಿಯಾ'ದಂತಹ ಸುಮಧುರ ಗೀತೆಗಳಿಗೆ ಸಂಗೀತ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಓಂಕಾರ್ ಪ್ರಸಾದ್ ನಯ್ಯರ್ (ಒ.ಪಿ.ನಯ್ಯರ್) (82) ಈದಿನ  ಮಧ್ಯಾಹ್ನ ಟಿ.ವಿ. ನೋಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಆಸ್ಪತ್ರೆಗೆ ಒಯ್ಯುವ ದಾರಿಯಲ್ಲಿಯೇ ನಿಧನರಾದರು. ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿಯೇ ಇದ್ದ ನಯ್ಯರ್ ತಮ್ಮ ಕುಟುಂಬದವರಿಂದ ದೂರವಾಗಿ ಆಪ್ತರಾಗಿದ್ದ ನಖ್ವಾ ಕುಟುಂಬದ ಜೊತೆ ಥಾಣೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಪಂಜಾಬಿ ಸೊಗಡಿನ ಮಾಂತ್ರಿಕ ಸಂಗೀತದಿಂದ ನಯ್ಯರ್ ಅವರು ಸಂಗೀತ ಪ್ರೇಮಿಗಳು ಎಂದೂ ಮರೆಯಲಾರದ ಮಾಧುರ್ಯಭರಿತ ಚಿತ್ರಗೀತೆಗಳನ್ನು ನೀಡಿದ್ದರು. ತಮ್ಮ ಸಮಕಾಲೀನರಾದ ಭಾರತದ ಕೋಗಿಲೆ ಖ್ಯಾತಿಯ ಲತಾ ಮಂಗೇಶ್ಕರ್ ಜೊತೆ ಅವರು ಒಮ್ಮೆಯೂ ಕೆಲಸ ಮಾಡಿದವರಲ್ಲ. ಆದರೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 50-60 ದಶಕದಲ್ಲಿ ಗಾಯಕ ಮಹಮ್ಮದ್ ರಫಿ ಜೊತೆ ಮಧುರ ಗೀತೆಗಳನ್ನು ನೀಡಿದ ನಯ್ಯರ್, ಆಶಾ ಭೋಂಸ್ಲೆ ವೃತ್ತಿಜೀವನ ಉತ್ತಂಗಕ್ಕೆ ಏರಲು ಕಾರಣರಾಗಿದ್ದರು. `ಮೇರಾ ನಾಮ್ ಚಿನ್ ಚಿನ್ ಚೂ', `ಆಯಿಯೇ ಮೆಹರಬಾನ್ ಬೈಠಿಯೇ ಜಾನೆಜಾ' (ಹೌರಾ ಬ್ರಿಜ್), `ಮಾಂಗ್ ಕೆ ಸಾತ್ ತುಮ್ಹಾರಾ' (ನಯಾ ದೌರ್)ದಂತಹ ಗೀತೆಗಳು ನಯ್ಯರ್ ಪ್ರತಿಭೆಗೆ ಸಾಕ್ಷಿ. 1926ರಲ್ಲಿ ಅವಿಭಜಿತ ಲಾಹೋರಿನಲ್ಲಿ ಜನಿಸಿದ್ದ ನಯ್ಯರ್, ದೇಶ ವಿಭಜನೆಯ ಬಳಿಕ ಲಾಹೋರಿನಿಂದ ಅಮೃತಸರಕ್ಕೆ ಬಂದು ನೆಲೆಸಿದರು. ಸಂಗೀತದ ಹುಚ್ಚಿನಿಂದ 1949ರಲ್ಲಿ ಚಿತ್ರನಗರಿ ಮುಂಬೈಗೆ ಬಂದಿಳಿದರು. ಐದಾರು ವರ್ಷದ ಹೋರಾಟದ ನಂತರ ಗುರುದತ್ ಅವರ `ಆರ್ ಪಾರ್' ನಯ್ಯರ್ ಅವರಿಗೆ ಬ್ರೇಕ್ ನೀಡಿತು. ಅಲ್ಲಿಂದ ಹಿಂದಿರುಗಿ ನೋಡದ ನಯ್ಯರ್ 50-60 ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಅಕ್ಷರಶಃ ಆಳಿದರು. `ಹೌರಾಬ್ರಿಜ್', `ಕಾಶ್ಮೀರ್ ಕಿ ಕಲಿ', ಮಿ. ಆ್ಯಂಡ್ ಮಿಸೆಸ್ 55', `ಬಾಜ್' ನಯ್ಯರ್ ಸಂಗೀತಕ್ಕೆ ಕನ್ನಡಿ. 1957ರಲ್ಲಿ `ನಯಾ ದೌರ್' ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ನಯ್ಯರ್, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

2007: ಬಾಲಾಪರಾಧಿ ಆಶ್ರಯಧಾಮದ ಸುಮಾರು 46 ಮಕ್ಕಳು ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ, ಧಾಮದ ಕಟ್ಟಡದ ಗೋಡೆಯ ಒಂದು ಭಾಗವನ್ನು ಒಡೆದು ಪರಾರಿಯಾದ ಘಟನೆ ಬೆಂಗಳೂರು ನಗರದ ಮಡಿವಾಳದಲ್ಲಿ ನಡೆಯಿತು. ತಪ್ಪಿಸಿಕೊಂಡ ಬಾಲಕರಲ್ಲಿ ಕೆಲವರನ್ನು ಪೋಷಕರು ಆಶ್ರಯಧಾಮಕ್ಕೆ ಒಪ್ಪಿಸಿದರೆ, ಒಬ್ಬನನ್ನು ಕೋರಮಂಗಲದ ಫೋರಂ ವಾಣಿಜ್ಯ ಮಳಿಗೆ ಬಳಿ ಪೊಲೀಸರು ಬಂಧಿಸಿದರು. 

2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ ಪದ್ಮ ಭೂಷಣ ಕಮಲೇಶ್ವರ್ (74) ಹೃದಯಾಘಾತದಿಂದ ನವದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಕಮಲೇಶ್ವರ್ ಅವರು ಸುಮಾರು 30ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. 100ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಅವರು ಸ್ಕ್ರಿಪ್ಟ್ ರಚಿಸಿದ್ದಾರೆ.

2007: ಚೀನಾದ ಶಾಂಘಾಯಿ ದಕ್ಷಿಣ ರೈಲ್ವೆ ನಿಲ್ದಾಣದಿಂದ ಅತಿವೇಗದ ಬುಲೆಟ್ ರೈಲುಗಾಡಿಯು ಶಾಂಘಾಯಿಯಿಂದ ಪ್ರಯಾಣ ಹೊರಟಿತು. ಗಂಟೆಗೆ 250 ಕಿ.ಮೀ. ಪ್ರಯಾಣ ಮಾಡಬಲ್ಲ ಈ ರೈಲುಗಾಡಿ ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚರಿಸುವುದು.

2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2007: ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆಯ ವತಿಯಿಂದ ಯಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರು ಶಂಕರಾಚಾರ್ಯರ `ಸೌಂದರ್ಯ ಲಹರಿ'ಯನ್ನು ಸಾಮೂಹಿಕವಾಗಿ ಪಾರಾಯಣ ಮಾಡಿ ಇತಿಹಾಸ ನಿರ್ಮಿಸಿದರು.

2006: ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಂದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ. ಫೆ.3ರಂದು ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜನತಾದಳ (ಎಸ್) - ಬಿಜೆಪಿ ಪರ್ಯಾಯ ಸರ್ಕಾರದ ರಚನೆಗೆ ನಿರ್ಧಾರ.

2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2006: ಸಂಸದರ ಪ್ರದೇಶಾಭಿವೃದ್ಧಿ ದುರ್ಬಳಕೆಯ ತನಿಖೆ ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥರಾಗಿ ಕಿಶೋರ್ ಚಂದ್ರ ಅವರನ್ನು ನೇಮಿಸಲಾಯಿತು.

1986: ಸ್ಪೇಸ್ ಷಟಲ್ ನೌಕೆ `ಚಾಲೆಂಜರ್' ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7  ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.

1953: ಡಾ. ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.

1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಸಂಸತ್ ಕಟ್ಟಡದ ಚೇಂಬರ್ ಆಫ್ ಪ್ರಿನ್ಸಸ್ಸಿನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ ಈ ಸ್ಥಳದಲ್ಲೇ 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿತ್ತು. ಈಗಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವವರೆಗೆ ಸುಪ್ರೀಂಕೋರ್ಟ್ ಕೂಡಾ ಇದೇ ಸ್ಥಳದಿಂದ ಕಾರ್ಯ ನಿರ್ವಹಿಸಿತು.

1945: ರಂಗಭೂಮಿಯ ಪ್ರತಿಭಾನ್ವಿತ ನಟ, ಸಂಘಟಕ ರಾಜಶೇಖರ ಕದಂಬ ಅವರು ಕದಂಬರದಾಸಪ್ಪ- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.

1933: ಲಂಡನ್ನಿನ ವಾಲ್ ಡೋರ್ಫ್ ಹೋಟೆಲಿನಲ್ಲಿ ಕೇಂಬ್ರಿಜಿನ ಭಾರತೀಯ ಮುಸ್ಲಿಂ ಪದವೀಧರ ರಹಮತ್ ಅಲಿ ಚೌಧರಿ ಭಾರತದ ವಿಭಜನೆಯ ಪ್ರಸ್ತಾವವಿದ್ದ ಟಿಪ್ಪಣಿಯೊಂದನ್ನು ಓದಿದ. `ನೌ ಆರ್ ನೆವರ್' ಎಂಬ ಪುಟ್ಟ ಪುಸ್ತಕವೊಂದನ್ನು ಬರೆದಿದ್ದ ಆತ ಪಾಕಿಸ್ಥಾನಕ್ಕೆ ಈ ಹೆಸರು ಕೊಟ್ಟಿದ್ದ. (ಪಾಕಿಸ್ಥಾನ ಅಥವಾ `ಲ್ಯಾಂಡ್ ಆಫ್ ಪ್ಯೂರ್' ಪಂಜಾಬಿಗೆೆ ಪಿ, ಆಫ್ಘಾನಿಯಾಕ್ಕೆ ಎ, ವಾಯುವ್ಯ ಗಡಿ ಪ್ರಾಂತಕ್ಕೆ ರಹಮತ್ ಅಲಿ, ಕಾಶ್ಮೀರಕ್ಕೆ ಕೆ, ಸಿಂದ್ ಗೆ ಎಸ್, ಬಲೂಚಿಸ್ಥಾನಕ್ಕೆ ತಾನ್) 

1931: ಖ್ಯಾತ ಸಾಹಿತಿ ಸಾ.ಶಿ. ಮರುಳಯ್ಯ ಅವರು ಶಿವರುದ್ರಯ್ಯ- ಸಿದ್ದಮ್ಮ ದಂಪತಿಯ ಪುತ್ರನಾಗಿ ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಈದಿನ ಜನಿಸಿದರು.

1930: ಭಾರತದ ಖ್ಯಾತ ಸಂಗೀತಗಾರ ಮೋತಿರಾಮ್ ಜಸ್ ರಾಜ್ (1930) ಅವರು ಹುಟ್ಟಿದರು.

1925: ಭಾರತೀಯ ವಿಜ್ಞಾನಿ ಭಾರತೀಯ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ರಾಜಾ ರಾಮಣ್ಣ (1925) ಹುಟ್ಟಿದ ದಿನ.

1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ (1899-1993) ಅವರು ಜನಿಸಿದರು. 

1865: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ (1865-1928) ಹುಟ್ಟಿದರು. 

1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ (1809-1881) ಹುಟ್ಟಿದರು. ಪ್ರಾಣಿಗಳ ಕಥೆಗಳನ್ನು ಒಳಗೊಂಡ ಭಾರತದ `ಪಂಚತಂತ್ರ' ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿದೆ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement