Sunday, May 10, 2009

ಇಂದಿನ ಇತಿಹಾಸ History Today ಮೇ 10

ಇಂದಿನ ಇತಿಹಾಸ

ಮೇ 10

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಎಂದೇ ಹೆಸರುವಾಸಿಯಾಗಿದ್ದ ಖ್ಯಾತ ಸಂಗೀತಗಾರ ಪಂಡಿತ್ ಫಿರೋಜ್ ದಸ್ತೂರ್  (89) ಹಿಂದಿನ ದಿನ ರಾತ್ರಿ ಮುಂಬೈಯಲ್ಲಿ ನಿಧನರಾದರು.  ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು.

ಇಂದು ಮಾತೆಯರ ದಿನ. ಅಮೆರಿಕನ್ ಅಂತರ್ಯುದ್ಧದ ಬಳಿಕ ಈ `ಮಾತೆಯರ ದಿನ' ಆಚರಣೆ ಬಳಕೆಗೆ ಬಂತು. ಜೂಲಿಯಾ ವಾರ್ಡ್ ಹೋವೆ ಎಂಬ ಸಮಾಜ ಸೇವಕಿ ಯುದ್ಧದ ವಿರುದ್ಧ ಮಹಿಳೆಯರನ್ನು ಒಗ್ಗೂಡಲು ಕರೆ ನೀಡುವುದರೊಂದಿಗೆ ಈ ದಿನದ ಆಚರಣೆ ಆರಂಭವಾಯಿತು. ನಂತರ ಈದಿನ ಮಾತೆಯರಿಗೆ ಧನ್ಯವಾದ ಅರ್ಪಿಸುವ ದಿನವಾಗಿ ಬದಲಾಯಿತು. ಗ್ರೀಕ್ ಇತಿಹಾಸದ ಪ್ರಕಾರ ಮಾತೆಯರನ್ನು ದೇವರೆಂದು ಪೂಜಿಸುವುದರಿಂದ ಈ ಆಚರಣೆ ಬೆಳೆದು ಬಂತು. ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ಮಾತೆಯರ ದಿನ ಆಚರಿಸಲಾಗುತ್ತದೆ. 

2008: ತಮಿಳುನಾಡಿನ ರಾಮನಾಥ ಪುರಂ ಜಿಲ್ಲೆಯ 21 ವರ್ಷದ ಯುವಕ ವೇಲಿಪಟ್ಟಿಣಂ ನಿವಾಸಿ  ವಿ. ಶಂಕರನಾರಾಯಣನ್ ಒಂದೇ ಉಸಿರಿಗೆ 151 ಮೇಣದ ಬತ್ತಿಗಳ (ಕ್ಯಾಂಡಲ್) ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ ನಿರ್ಮಿಸಿದ್ದು ಗಿನ್ನೆಸ್ ದಾಖಲೆಗೆ ಸೇರಿತು. ಕಳೆದ ಜನವರಿ ತಿಂಗಳಲ್ಲಿ ಈ ಸಾಧನೆ ಮಾಡಿದ್ದ ವಿ.  ಶಂಕರನಾರಾಯಣನ್ ಅವರಿಗೆ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ಅಧಿಕಾರಿಗಳಿಂದ ಬಂದ ಈ ಸಂಬಂಧಿ ಪ್ರಮಾಣಪತ್ರ ವನ್ನು ಜಿಲ್ಲಾಧಿಕಾರಿ ಎ. ಕಿಶೋರಕುಮಾರ್ ಅವರು ನೀಡಿದರು. ಫ್ರಾನ್ಸಿನ ಡೇವಿಡ್ ಲಾಮೆ ಅವರು 2001ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು  ಶಂಕರನಾರಾಯಣನ್ ಮುರಿದಿದ್ದಾರೆ. ಡೇವಿಡ್ ಲಾಮೆ  ಅವರು ಒಂದೇ ಉಸಿರಿಗೆ 117 ಕ್ಯಾಂಡಲ್ಲುಗಳ ಜ್ವಾಲೆಯನ್ನು ಆರಿಸಿ ವಿಶ್ವದಾಖಲೆ  ನಿರ್ಮಿಸಿದ್ದರು. ಉಸಿರು ನಿಯಂತ್ರಣದಲ್ಲಿ ತಜ್ಞರೆನಿಸಿಕೊಂಡಿರುವ ಶಂಕರನಾರಾಯಣನ್ ಅವರು ಈ ಕಲೆಯನ್ನು  ತಮ್ಮ ಯೋಗ ಗುರುವಿನಿಂದ ಕಲಿತರು. 

2008: ಚಂಡಮಾರುತದ ಪರಿಣಾಮವಾಗಿ ಸಹಸ್ರಾರು ಮಂದಿ ಅಸುನೀಗಿ, ಇತರರು ಸಂಕಟದಲ್ಲಿ ನರಳುತ್ತಿರುವಾಗಲೇ, ನೂತನ  ಸಂವಿಧಾನಕ್ಕೆ  ಅಂಗೀಕಾರ ನೀಡುವ ಸಲುವಾಗಿ ಮ್ಯಾನ್ಮಾರಿನ ಸೇನಾ ಸರ್ಕಾರವು ಸಂತ್ರಸ್ಥ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ತೆರೆಯಿತು. `ನರ್ಗಿಸ್' ಚಂಡಮಾರುತದಿಂದ ತೀವ್ರ ತೊಂದರೆಗೊಳಗಾದ ಪ್ರಮುಖ ನಗರ ಹಾಗೂ ಹಿಂದಿನ ರಾಜಧಾನಿ ಯಾಂಗೂನ್  ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೇನಾ ಸರ್ಕಾರವು ಮತದಾನವನ್ನು  ಎರಡು ವಾರಗಳ ಮಟ್ಟಿಗೆ ಮಾತ್ರ ವಿಳಂಬಿಸಿತು. 1990ರಲ್ಲಿ ಸೇನಾ ಆಡಳಿತವು ಮೊತ್ತ ಮೊದಲ ಮತದಾನ ನಡೆಸಿತ್ತು. ಆ ಚುನಾವಣೆಯಲ್ಲಿ ವಿರೋಧಿ  ನಾಯಕಿ ಆಂಗ್ ಸಾನ್ ಸೂ ಕೀ ಅವರ ನೇತೃತ್ವದ ನ್ಯಾಷನಲ್ ಲೀಗ್ ಟು ಡೆಮಾಕ್ರಸಿ (ಎನ್ ಎಲ್ ಡಿ) ಭಾರಿ  ವಿಜಯ ಸಾಧಿಸಿತ್ತು. ಆದರೆ ಆ ಫಲಿತಾಂಶವನ್ನು ಸೇನಾ ಆಡಳಿತ ಎಂದೂ ಮಾನ್ಯ ಮಾಡಲೇ ಇಲ್ಲ.  ಆ ಬಳಿಕ ಇದೇ ಮೊದಲ ಬಾರಿಗೆ ಜನಮತಗಣನೆಗೆ ವ್ಯವಸ್ಥೆಯಾಯಿತು.

2008: ಶಂಕಿತ ಉಗ್ರರ ವಿಚಾರಣೆ ನಡೆದ ಹುಬ್ಬಳ್ಳಿ ನಗರದ ನ್ಯಾಯಾಲಯದ ಸಭಾಂಗಣದೊಳಗೆ ಈದಿನ ಮಧ್ಯಾಹ್ನ ಶಕ್ತಿಶಾಲಿ ಬಾಂಬ್ ಸ್ಫೋಟಿಸಿತು. ಆದರೆ ಎರಡನೇ ಶನಿವಾರದ ರಜೆ ಇದ್ದ ಕಾರಣ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ನ್ಯಾಯಾಲಯ ಸಂಕೀರ್ಣದ ನೆಲಮಹಡಿಯಲ್ಲಿನ ಒಂದನೇ ಜೆ ಎಂ ಎಫ್ ಸಿ ನ್ಯಾಯಾಲಯದ ಸಭಾಂಗಣದಲ್ಲಿ ಮಧ್ಯಾಹ್ನ 1.25ರ ಸುಮಾರಿಗೆ ಈ ಸ್ಫೋಟ ಸಂಭವಿಸಿತು. ಭಯೋತ್ಪಾದಕರು ಅಥವಾ ದೇಶದ್ರೋಹಿ ಶಕ್ತಿಗಳು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದರು.

2008: ಕರ್ನಾಟಕ ವಿಧಾನಸಭೆಗೆ  ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

2008: ನೀತಿ ಸಂಹಿತೆ ಜಾರಿಯಲ್ಲಿ ಇರುವುದನ್ನೂ ಲೆಕ್ಕಿಸದೆ ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ 4000 ಮೆಗಾವಾಟ್ ಸಾಮರ್ಥ್ಯದ ತದಡಿ ವಿದ್ಯುತ್ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ಆಶ್ವಾಸನೆಯು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣಾಧಿಕಾರಿಗಳು ಶಿಂಧೆ ಅವರಿಗೆ ನೋಟಿಸ್ ಜಾರಿ ಮಾಡಿದರು.

2008: ಸಾಂಪ್ರದಾಯಿಕ ರಕ್ತ ಪರೀಕ್ಷೆಯ ಮೂಲಕವಲ್ಲ, ಜೊಲ್ಲುರಸದ ಮೂಲಕವೇ ಏಡ್ಸ್ ಸೋಂಕಿನ ಇರುವಿಕೆಯನ್ನು ಪರೀಕ್ಷಿಸುವ ವಿಧಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಅತ್ಯಂತ ಅಗ್ಗದ ಮತ್ತು ಸುಲಭ ವಿಧಾನದ ಈ ಜೊಲ್ಲುರಸ ಪರೀಕ್ಷೆಯನ್ನು ಯಾವುದೇ ಸಾಮಾನ್ಯ ಆಸ್ಪತ್ರೆಯಲ್ಲೂ ನಡೆಸಬಹುದು. ಗರ್ಭಿಣಿಯರು ಈ ಪರೀಕ್ಷೆ ಮಾಡಿಸಿಕೊಂಡು ಗರ್ಭದಲ್ಲಿ ಇರುವ ಮಗುವಿಗೆ ಅಗತ್ಯದ ಆರೈಕೆ ನೀಡಲು ಸಾಧ್ಯ. ಭಾರತೀಯ ವಿಜ್ಞಾನಿ ನಿಖಿತಾ ಪಂತ್ ಪೈ, ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಅವರ ಸಹೋದ್ಯೋಗಿಗಳು ಹಾಗೂ ವಾರ್ಧಾದ ಮಹಾತ್ಮಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಈ  ಎಚ್ಐವಿ/ಏಡ್ಸ್ ಪತ್ತೆ ಉಪಕರಣ ಅಭಿವೃದ್ಧಿ ಪಡಿಸಿದರು. ಜೊಲ್ಲುರಸವನ್ನು (ಉಗುಳು) ಕಡ್ಡಿಯೊಂದರಲ್ಲಿ ಸಂಗ್ರಹಿಸಿ (ಗರ್ಭಿಣಿಯೇ ಎಂಬುದನ್ನು ತಿಳಿಯಲು ನಡೆಸುವ ಪರೀಕ್ಷೆಯಂತೆ) ವಿಶೇಷ ದ್ರಾವಣ ಇರುವ ಚಿಕ್ಕ ನಳಿಕೆಯಲ್ಲಿ ಇರಿಸಿದರೆ ಮುಗಿಯಿತು. 20ರಿಂದ 40 ನಿಮಿಷಗಳ ಒಳಗೆ ಕಡ್ಡಿಯ ತುದಿಯಲ್ಲಿ ನೇರಳೆ/ಕಡುಗೆಂಪು ಬಣ್ಣ ಕಾಣಿಸಿಕೊಂಡರೆ ವ್ಯಕ್ತಿಗೆ ಎಚ್ ಐ ವಿ ಸೋಂಕು ತಗುಲಿದೆ ಎಂಬುದು ಸಾಬೀತಾಗುತ್ತದೆ. ವಾರ್ಧಾ ಆಸ್ಪತ್ರೆಯಲ್ಲಿ ಒಟ್ಟು 1,222 ಮಹಿಳೆಯರಿಗೆ ಈ ವಿಧಾನದಲ್ಲಿ ಪರೀಕ್ಷೆ ನಡೆಸಲಾಯಿತು. ಈ ಪೈಕಿ 1003 ಮಂದಿ ಈ ಮೊದಲು ಎಚ್ ಐ ವಿ ಪರೀಕ್ಷೆ ಮಾಡಿಸಿಕೊಂಡೇ ಇರಲಿಲ್ಲ. ಪರೀಕ್ಷೆಯಿಂದ ಅವರ ಎಚ್ ಐ ವಿ/ಏಡ್ಸ್ ಸ್ಥಿತಿಗತಿ ತಿಳಿಯುವಂತಾಯಿತು. `ನಮ್ಮ ಸಂಶೋಧನೆಯಿಂದ ದಿನದ 24 ಗಂಟೆಯೂ ತ್ವರಿತ ಎಚ್ ಐ ವಿ/ಏಡ್ಸ್ ಪರೀಕ್ಷೆ ನಡೆಸುವ ಮತ್ತು ಕೌನ್ಸೆಲಿಂಗ್ ನಡೆಸುವುದು ಸಾಧ್ಯವಾಗಿದೆ. ಭಾರತದ ಗ್ರಾಮೀಣ ಪ್ರದೇಶದ ಹೆರಿಗೆ ಆಸ್ಪತ್ರೆಗಳ ಹೆರಿಗೆ ಕೊಠಡಿಗಳ್ಲಲೂ ಈ ಪರೀಕ್ಷೆ ನಡೆಸುವುದು ಸಾಧ್ಯ' ಎಂದು ಡಾ. ನಿಖಿತಾ ಪೈ ಹೇಳಿದರು. 

2008: ಪೋರ್ಟ್ ಬ್ಲೇರಿನಲ್ಲಿ ಹಿಂದಿನ ರಾತ್ರಿ ಭಾರೀ ಮಳೆ ಸುರಿದು ವಿಮಾನ ನಿಲ್ದಾಣ ಜಲಾವೃತಗೊಂಡು, ಸಂಚಾರ ಸೇವೆ ಸ್ಥಗಿತವಾಯಿತು.

2008: ಕಾಂಗ್ರೆಸ್ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕೇಂದ್ರ ಸಚಿವ ಅಖಿಲೇಶ್ ದಾಸ್ ಬಿ ಎಸ್ ಪಿ ಗೆ ಸೇರ್ಪಡೆಯಾದರು.

2008: ಉತ್ತರ ಭಾರತೀಯರ ವಿರುದ್ಧ ಮಲತಾಯಿ ಧೋರಣೆ ಹೊಂದಿದ ಶಿವಸೇನಾ ನಿಲುವಿನಿಂದ ರೋಸಿಹೊದ ಉತ್ತರ ಘಟಕದ ಶಿವಸೇನಾ ಮುಖ್ಯಸ್ಥ ಜೈ ಭಗವಾನ್ ಗೋಯಲ್ ಹೊಸ ಪಕ್ಷ ಸ್ಥಾಪಿಸಿದರು.  `ರಾಷ್ಟ್ರವಾದಿ ಶಿವಸೇನಾ' ಎಂದು ಕರೆಯಲ್ಪಡುವ ಹೊಸ ಪಕ್ಷಕ್ಕೆ ಉತ್ತರ ಪ್ರದೇಶ, ರಾಜಸ್ತಾನ, ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಹಲವಾರು ಶಿವಸೇನಾ ಸದಸ್ಯರು ಶಿವಸೇನೆ ತೊರೆದು ಹೊಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ' ಎಂದು ಪಕ್ಷ ಹೇಳಿಕೆ ನೀಡಿತು.

2008: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕ, ಕಿರಾಣಾ- ಘರಾಣಾ ಸಂಗೀತ ಪ್ರಕಾರದ ಗುರು ಎಂದೇ ಹೆಸರುವಾಸಿಯಾಗಿದ್ದ ಖ್ಯಾತ ಸಂಗೀತಗಾರ ಪಂಡಿತ್ ಫಿರೋಜ್ ದಸ್ತೂರ್  (89) ಹಿಂದಿನ ದಿನ ರಾತ್ರಿ ಮುಂಬೈಯಲ್ಲಿ ನಿಧನರಾದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಧ್ರುವತಾರೆ ಸವಾಯಿ ಗಂಧರ್ವ ಅವರ ಅನುಯಾಯಿಗಳಲ್ಲಿ ಹಿರಿಯರಾದ ಪಂಡಿತ್ ದಸ್ತೂರ್ ಅವರು ಘರಾಣಾ ಪ್ರಕಾರದಲ್ಲಿ ವಿಖ್ಯಾತಿ ಪಡೆದಿದ್ದರು. ಆರು ದಶಕಗಳಿಂದ ದೇಶ ವಿದೇಶಗಳಲ್ಲಿ ತಮ್ಮ ಮಧುರ ಕಂಠಸಿರಿಯಿಂದ ಸಂಗೀತ ರಸಿಕರ ಮನಸೂರೆಗೊಂಡಿದ್ದ ಪಂಡಿತ್ ಫಿರೋಜ್ ದಸ್ತೂರ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ಸೇನ್ ಪ್ರಶಸ್ತಿ, ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ ಲಭಿಸಿವೆ. ತಮ್ಮ 7ನೇ ವಯಸ್ಸಿನಲ್ಲಿ ಸಂಗೀತ ಗುರು ಎ.ಡಿ.ಜಾವ್ಕರ್ ಅವರ ಬಳಿ ಸಂಗೀತಾಭ್ಯಾಸ ಆರಂಭಿಸಿದ ದಸ್ತೂರ್, ಸಂಗೀತ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದರು. ಸಂಗೀತ ಕ್ಷೇತ್ರದಲ್ಲಿ ಪೂರ್ಣಾವಧಿಯಲ್ಲಿ ತೊಡಗಿಸಿಕೊಳ್ಳುವ ಮುನ್ನ ವಾಡಿಯಾ ಮೂವಿಟೋನ್ ಮತ್ತು ಮಿನೆರ್ವಾ ಮೂವಿಟೋನ್ ಲಾಂಛನದ ಸಿನಿಮಾಗಳಲ್ಲಿ ಬಾಲ ನಟರಾಗಿಯೂ ಗುರುತಿಸಿಕೊಂಡಿದ್ದರು. ಕೆಲವು ಸಿನಿಮಾಗಳಿಗೆ ನಟರಿಗೆ ಧ್ವನಿಯೂ ಆಗಿದ್ದರು.

2007: ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಮೃತಧಾರಾ ಗೋಶಾಲೆಯನ್ನು ಸಚಿವ ನಾಗರಾಜ ಶೆಟ್ಟಿ ಲೋಕಾರ್ಪಣೆ ಮಾಡಿದರು.

2007: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ ಸ್ಮರಣಾರ್ಥ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸಮ್ಮಿಶ್ರ ಯುಗದಲ್ಲಿರುವ ಭಾರತದಲ್ಲಿ ಸುಸ್ಥಿರವಾದ ದ್ವಿಪಕ್ಷ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹಾರೈಸಿದರು.

2007: ಚೆನ್ನೈಯಲ್ಲಿ `ದಿನಕರನ್' ಪತ್ರಿಕಾ ಕಚೇರಿ ಮೇಲೆ ಡಿಎಂಕೆ ಕಾರ್ಯಕರ್ತರ ದಾಳಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು.

2007: ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿಯ (ನ್ಯಾಕ್) ಕಾರ್ಯಕಾರಿ ಮಂಡಳಿ ಅಧ್ಯಕ್ಷ ಪ್ರೊ. ಗೋವರ್ಧನ್ ಮೆಹ್ತಾ ಅವರು ರಸಾಯನ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ 2007ನೇ ಸಾಲಿನ ಪ್ರತಿಷ್ಠಿತ ಟ್ರೈಸ್ಟ್ ಸೈನ್ಸ್ ಪ್ರಶಸ್ತಿಗೆ ಆಯ್ಕೆಯಾದರು. ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಬಣ್ಣಿಸಲಾದ ಟ್ರೈಸ್ಟ್ ವಿಜ್ಞಾನ ಪ್ರಶಸ್ತಿಯು 50 ಸಾವಿರ ಅಮೆರಿಕನ್ ಡಾಲರ್ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

2006: ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್ ಹಾಗೂ ಮಾನ್ಯತೆ ಪಡೆದಿರುವ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕಡ್ಡಾಯ ಕನ್ನಡ ಕಲಿಕೆ ಪ್ರಸ್ತಾವವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮುಂದಿಟ್ಟರು. ಇದರೊಂದಿಗೆ ಪ್ರಾಥಮಿಕ ಹಂತದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಚರ್ಚೆಗೆ ಮತ್ತೆ ಚಾಲನೆ ದೊರೆಯಿತು.

2006: ನೇಪಾಳದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರು ತಮ್ಮ 14 ತಿಂಗಳ ಆಡಳಿತಾವದಿಯಲ್ಲಿ ಜಾರಿಗೊಳಿಸಿದ ವಿವಾದಾತ್ಮಕ ಮಾಧ್ಯಮ ಸುಗ್ರೀವಾಜ್ಞೆ ಸೇರಿ ಆರು ಆದೇಶಗಳನ್ನು ಅನೂರ್ಜಿತಗೊಳಿಸಿತು. ಮಾಧ್ಯಮ ಅಥವಾ ಉಗ್ರ ಪತ್ರಿಕಾ ಸುಗ್ರೀವಾಜ್ಞೆಯ ಮೂಲಕ ಪತ್ರಿಕಾ ಸ್ವಾತಂತ್ಯದ ಮೇಲೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿ, ದೊರೆ ಸರ್ಕಾರದ ವಿರುದ್ಧ ಬರೆದ ಪತ್ರಕರ್ತರಿಗೆ ಜೈಲು ಮತ್ತು ದಂಡ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿತ್ತು. ಈ ಕಾನೂನಿನಡಿ, ರಾಜಪ್ರಭುತ್ವ ಕುಟುಂಬವನ್ನು ಟೀಕಿಸುವ ಅಥವಾ ಉಗ್ರಗಾಮಿಗಳ ವರದಿಗಳನ್ನು ಪ್ರಕಟಿಸುವ ಪತ್ರಕರ್ತರಿಗೆ ಒಂದು ವರ್ಷ ಜೈಲು ಮತ್ತು ರೂ 500 ದಂಡಶಿಕ್ಷೆ ನಿರ್ಧರಿಸಲಾಗಿತ್ತು.

2006: ಭಾರತ ಮತು ಇಸ್ರೇಲ್ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತದಲ್ಲಿ ಪರಸ್ಪರ ಸಹಕರಿಸುವ ಸಲುವಾಗಿ ಮೂರು ವರ್ಷಗಳ ಕಾಲ ಮಹತ್ವದ ಕಾರ್ಯ ಯೋಜನೆ ರೂಪಿಸುವ ಐತಿಹಾಸಿಕ ಒಪ್ಪಂದಕ್ಕೆ ಇಸ್ರೇಲಿನ ಟೆಲ್ ಅವೀವಿನಲ್ಲಿ ಸಹಿ ಹಾಕಿದವು. ಭಾರತ ಸರ್ಕಾರದ ಕೃಷಿ ಸಚಿವ ಶರದ್ ಪವಾರ್ ಮತ್ತು ಇಸ್ರೇಲ್ ಸರ್ಕಾರದ ಕೃಷಿ ಸಚಿವ ಶಲಾಮ್ ಸೈಮ್ಹಾನ್ ಅವರು ರಾತ್ರಿ ಇಲ್ಲಿ ಈ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು.

2002: ಉರ್ದು ಕವಿ ಕೈಫಿ ಅಜ್ಮಿ ಮುಂಬೈಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಇವರು ಬಾಲಿವುಡ್ ನಟಿ ಶಬಾನಾ ಅಜ್ಮಿ ಅವರ ತಂದೆ.  

1993: ಭಾರತದ ಸಂತೋಷ ಯಾದವ್ ಎವರೆಸ್ಟ್ ಪರ್ವತವನ್ನು ಎರಡು ಸಲ ಏರಿದ ಜಗತ್ತಿನ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ 1992ರ ಮೇ 12ರಂದು ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದರು.

1977: ಕಲಾವಿದೆ ದಿವ್ಯಾ ರಾಘವನ್ ಜನನ.

1957: ಕಲಾವಿದೆ ಉಮಾಶ್ರೀ ಜನನ.

1949: ಕಲಾವಿದ ದ್ವಾರಕಾನಾಥ್ ಜನನ.

1940: ಬ್ರಿಟಿಷ್ ಪ್ರಧಾನಿ ನೆವಿಲ್ ಚೆಂಬರ್ಲಿನ್ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯಾಗಿ ವಿನ್ ಸ್ಟನ್ ಚರ್ಚಿಲ್ ಅಧಿಕಾರಕ್ಕೆ ಏರಿದರು.

1940: ಕಲಾವಿದ ರಾಘವೇಂದ್ರರಾವ್ ಎಸ್ ಜನನ.

1933: ಕರ್ನಾಟಕದ ಜಾನಪದ ಕಲೆಗಳಲ್ಲಿ ನಶಿಸಿ ಹೋಗಿದ್ದ ಸಲಾಕೆ ಗೊಂಬೆ ಕಲೆಗೆ ಮರುಹುಟ್ಟು ನೀಡಿದ ರಂಗನಾಥರಾವ್ ಅವರು ಎಂ. ರಂಗಯ್ಯ- ಪುಟ್ಟ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ದೊಡ್ಡ ಮುದಿಗೆರೆಯಲ್ಲಿ ಜನಿಸಿದರು.

1933: `ಚಿ.ಮೂ.' ಎಂದೇ ಖ್ಯಾತರಾದ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಈದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂ ಗ್ರಾಮದಲ್ಲಿ ಕೊಟ್ಟೂರಯ್ಯ- ಪಾರ್ವತವ್ವ ದಂಪತಿಯ ಪುತ್ರರಾಗಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಚಿ.ಮೂ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಜನತೆ ಪ್ರೀತಿ ಗೌರವಗಳಿಂದ ಅವರಿಗೆ ಅರ್ಪಿಸಿದ ಗೌರವ ಗ್ರಂಥ `ಸಂಶೋಧನೆ'. 

1857: ಭಾರತದ ಮೊತ್ತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮೀರತ್ತಿನಲ್ಲಿ ಆರಂಭಗೊಂಡಿತು. ಬ್ರಿಟಿಷರು ಇದನ್ನು ಸಿಪಾಯಿ ದಂಗೆ ಎಂದು ಕರೆದರು. 1844, 1849, 1850 ಹಾಗೂ 1852ರಲ್ಲಿ ಸಣ್ಣ ಪ್ರಮಾಣದ ದಂಗೆಗಳು ನಡೆದರೂ 1857ಕ್ಕೆ ಹೋಲಿಸಿದರೆ ಅವುಗಳಿಗೆ ಲಭಿಸಿದ ಮಹತ್ವ ಅತ್ಯಂತ ಕಡಿಮೆ.

1774: ಹದಿನಾರನೇ ಲೂಯಿ ಫ್ರಾನ್ಸಿನ ಸಿಂಹಾಸನ ಏರಿದ. ಆತನ ಆಡಳಿತಾವಧಿಯಲ್ಲಿ ಫ್ರೆಂಚ್ ಕ್ರಾಂತಿ ಆರಂಭವಾಯಿತು. 1793ರ ಜನವರಿ 21ರಂದು ಪ್ಯಾರಿಸ್ಸಿನಲ್ಲಿ ಆತನನ್ನು ಗಿಲೋಟಿನ್ ಯಂತ್ರದ ಮೂಲಕ ಕೊಲ್ಲಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement