Friday, June 19, 2009

ಇಂದಿನ ಇತಿಹಾಸ History Today ಜೂನ್ 16

ಇಂದಿನ ಇತಿಹಾಸ

ಜೂನ್ 16

ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು.

2008: ಸಮುದ್ರದ ನೀರು ಹಾಗೂ ಸವಳು ನೀರನ್ನು ಕಡಿಮೆ ವೆಚ್ಚದಲ್ಲಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಭೌತ ರಸಾಯನ ಶಾಸ್ತ್ರದ ಪಾಲಿಮರ್ ವಿಜ್ಞಾನ ವಿಭಾಗದಿಂದ ಅಮೆರಿಕದ ಪೇಟೆಂಟಿಗೆ ಸಲ್ಲಿಸಿದ್ದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಮೊದಲನೇ ರ್ಯಾಂಕ್ ದೊರಕಿತು. ಜಗತ್ತಿನಲ್ಲಿಯೇ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲ ಸ್ಥಾನ ಪಡೆದ್ದದರಿಂದ ಕವಿವಿ ಮುಕುಟಕ್ಕೆ ಮತ್ತೊಂದು ಗರಿ ಇಟ್ಟಂತಾಯಿತು. ಇಡೀ ರಾಜ್ಯದ ಇತಿಹಾಸದಲ್ಲಿಯೇ ಕವಿವಿ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲನೇ ಸ್ಥಾನ ಪಡೆದದ್ದು ಇದೇ ಮೊದಲು.

2007: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು. ಅಮೆರಿಕದ ಗಗನಯಾತ್ರಿ ಶಾನನ್ ಲುಸಿದ್ 1996ರಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿ 188 ದಿನ ಮತ್ತು 4 ಗಂಟೆಗಳನ್ನು ಕಳೆದದ್ದು ಈವರೆಗಿನ ದಾಖಲೆಯಾಗಿತ್ತು. ಸುನೀತಾ ಅದನ್ನು ಈದಿನ ಮುರಿದರು. 2006ರ ಡಿಸೆಂಬರ್ 10ರಿಂದ ಬಾಹ್ಯಾಕಾಶ ಕೇಂದ್ರವಾಸಿಯಾದ ಸುನೀತಾ ದಾಖಲೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ 29 ಗಂಟೆ ಮತ್ತು 17 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡು ನೂತನ ದಾಖಲೆ ಮಾಡಿದ್ದರು. ಈ ಗೌರವ ಗಗನಯಾತ್ರಿ ಕ್ಯಾಥರಿನ್ ತಾರ್ನ್ ಟನ್ ಅವರ ಹೆಸರಲ್ಲಿ ಇತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದುಕೊಂಡೇ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಏಪ್ರಿಲ್ ತಿಂಗಳಲ್ಲಿ ಸುನೀತಾ ಮತ್ತೊಂದು ದಾಖಲೆ ಸ್ಥಾಪಿಸಿದ್ದರು.

2007: ಭಾರತೀಯ ಕ್ರಿಕೆಟ್ ಆಟಗಾರ ದೊಡ್ಡ ನರಸಯ್ಯ ಗಣೇಶ್ ಈದಿನ ಮುಸ್ಸಂಜೆ ಕ್ರಿಕೆಟ್ಟಿಗೆ ವಿದಾಯ ಹೇಳಿದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗಣೇಶ್ ಐದು ವಿಕೆಟ್ ಪಡೆದಿದ್ದರು. ಜಿಂಬಾಬ್ವೆ ವಿರುದ್ಧ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದ್ದರು. 104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 29.42 ಸರಾಸರಿಯಲ್ಲಿ 365 ವಿಕೆಟ್ ಕಬಳಿಸಿದ್ದರು.

2007: ನೈಜೀರಿಯಾದ ಉಗ್ರಗಾಮಿಗಳು ತಾವು ಅಪಹರಿಸಿದ್ದ 10 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಎಂದು ಭದ್ರತಾ ಮೂಲಗಳು ಪ್ರಕಟಿಸಿದವು. ಹದಿನೈದು ದಿನಗಳ ಹಿಂದೆ ಈ 10 ಮಂದಿಯನ್ನು ಅಪಹರಿಸಲಾಗಿತ್ತು.

2007: ಭಾರತೀಯ ಮೂಲದ ಬರಹಗಾರ ಸಲ್ಮಾನ್ ರಷ್ದಿ ಅವರನ್ನು ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಪ್ರತಿಷ್ಠಿತ `ನೈಟ್ಹುಡ್' ಪದವಿಗೆ ಆಯ್ಕೆ ಮಾಡಿದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.

2007: ಮುಸ್ಲಿಂ ಪ್ರತ್ಯೇಕವಾದಿಗಳು ಮತ್ತು ಫಿಲಿಪ್ಪೀನ್ಸ್ ಸರ್ಕಾರದ ಮಧ್ಯೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಲ್ವೆಸ್ಟರ್ ಅಘಬ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಶಾಂತಿ ಸ್ಥಾಪನೆಯ ಯತ್ನಕ್ಕೆ ಹಿನ್ನಡೆಯಾಯಿತು.

2006: ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ `ಪ್ರತಿಷ್ಠಿತ ಕ್ರಿಸ್ಟಲ್ ಪಿರಮಿಡ್' ಪ್ರಶಸ್ತಿ ಲಭಿಸಿತು. ದಕ್ಷಿಣ ಏಷ್ಯ ಸಿನೆಮಾ ಪ್ರತಿಷ್ಠಾನವು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಲಂಡನ್ನಿನ ನೆಹರೂ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಹೈಕಮೀಷನರ್ ಕಮಲೇಶ ಶರ್ಮಾ ಪ್ರಧಾನ ಮಾಡಿದರು.

2006: ಇಂಧನ ಕ್ಷೇತ್ರದ ಬ್ರಿಟನ್ನಿನ ಮುಂಚೂಣಿ ಸಂಸ್ಥೆ ಪವರ್ ಜೆನ್ ಭಾರತದಲ್ಲಿರುವ ತನ್ನ ಎಲ್ಲ ಕಾಲ್ ಸೆಂಟರುಗಳನ್ನು ಮುಚ್ಚಲು ನಿರ್ಧರಿಸಿತು. ಹೊರಗುತ್ತಿಗೆಯಿಂದ ಗ್ರಾಹಕರಿಗೆ ಕಿರಿಕಿರಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಇನ್ನು ಮುಂದೆ ಸಂಸ್ಥೆಯ ಎಲ್ಲ 60 ಲಕ್ಷ ಗ್ರಾಹಕರಿಗೂ ಬ್ರಿಟನ್ನಿನಲ್ಲೇ ಉತ್ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಿಸಿತು.

2006: ಭಾರಿ ವಾದ ವಿವಾದಕ್ಕೆ ಕಾರಣವಾದ ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ (ಬಿಎಂಐಸಿ) ಭಾಗವಾದ ಕೆಂಗೇರಿ- ತಲಘಟ್ಟಪುರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಫರಿಫೆರಲ್ ರಸ್ತೆ) ಸರ್ಕಾರದ ವಿರೋಧದ ಮಧ್ಯೆಯೇ ಈದಿನ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು. 9 ಕಿ.ಮೀ. ಉದ್ದದ ಈ ರಸ್ತೆಯನ್ನು 58 ಪುಟಾಣಿಗಳು ಟೇಪು ಕತ್ತರಿಸಿ ಉದ್ಘಾಟಿಸಿದರು. 98 ವರ್ಷದ ರಾಮಕ್ಕ ಜ್ಯೋತಿ ಬೆಳಗಿ ಕಾರ್ಯಕಮಕ್ಕೆ ಚಾಲನೆ ನೀಡಿದರು.

2006: ವಿಶ್ವದ ಅತ್ಯಂತ ಕಿರಿಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಓ) ಸುಹಾಸ ಗೋಪಿನಾಥ ಅವರು ತಮ್ಮ `ಗ್ಲೋಬಲ್ ಇಂಕ್' ಕಂಪೆನಿಯ ಕೇಂದ್ರ ಕಚೇರಿಯನ್ನು ಕ್ಯಾಲಿಫೋರ್ನಿಯಾದಿಂದ ತಮ್ಮ ತಾಯ್ನೆಲವಾದ ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಬೆಂಗಳೂರಿನಲ್ಲಿ ಈದಿನ ಪ್ರಕಟಿಸಿದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಚೇರಿಗೆ ಸ್ಥಳಾವಕಾಶ ಒದಗಿಸುವುದಾಗಿ ಭೇಟಿ ಕಾಲದಲ್ಲಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ಗೋಪಿನಾಥ ಈ ನಿರ್ಧಾರ ಕೈಗೊಂಡರು. ಭಾರತದಲ್ಲಿ 18 ವರ್ಷವಾಗದ ವಿನಃ ಕಂಪೆನಿ ಆರಂಭಿಸಲು ಸಾಧ್ಯವಿಲ್ಲವಾದ ಕಾರಣ 2000 ದಲ್ಲಿ, 14ನೇ ವಯಸ್ಸಿನಲ್ಲಿ ಗೋಪಿನಾಥ ಅವರು ಕ್ಯಾಲಿಫೋರ್ನಿಯಾದಲ್ಲಿ ತಮ್ಮ `ಗ್ಲೋಬಲ್ ಇಂಕ್' ನ್ನು ಸ್ಥಾಪಿಸಿದ್ದರು. ಪ್ರಸ್ತುತ 13 ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಕಂಪೆನಿಯಲ್ಲಿ 2006ರ ವೇಳೆಗೆ 600ಕ್ಕೂ ಹೆಚ್ಚು ಜನ ದುಡಿಯುತ್ತಿದ್ದರು.

1990: ಮುಂಬೈಯಲ್ಲಿ 42 ಸೆಂ.ಮೀ. ದಾಖಲೆ ಮಳೆ. 1986ರಲ್ಲಿ 41 ಸೆಂ.ಮೀ. ಮಳೆ ಒಂದೇ ದಿನ ಸುರಿದಿತ್ತು.

1977: ಲಿಯೋನಿದ್ ಬ್ರೆಜ್ನೇವ್ ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ) ಅಧ್ಯಕ್ಷರಾದರು.

1974: ಸಾಹಿತಿ ಗವಿಸಿದ್ದ ಎನ್. ಬಳ್ಳಾರಿ ಜನನ.

1963: ಸೋವಿಯತ್ ಗಗನಯಾನಿ ವಾಲೆಂಟಿನಾ ತೆರೆಸ್ಕೋವಾ ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಮಹಿಳೆಯಾದರು. ಬಾಹ್ಯಾಕಾಶ ನೌಕೆ ವೊಸ್ತೋಕ್ 6 ಮೂಲಕ ಅವರು ಬಾಹ್ಯಾಕಾಶಕ್ಕೆ ಏರಿದರು.

1961: ಸೋವಿಯತ್ ಬ್ಯಾಲೆ ನೃತ್ಯಪಟು ರುಡೋಲ್ಫ್ ನ್ಯೂರೆಯೆವ್ ತಮ್ಮ ತಂಡವು ಪ್ಯಾರಿಸ್ಸಿನಲ್ಲಿ ಇದ್ದಾಗ ಪಶ್ಚಿಮಕ್ಕೆ ರಾಷ್ಟ್ರಾಂತರ ಮಾಡಿದರು.

1950: ಹಿಂದಿ ಚಿತ್ರನಟ ಮಿಥುನ್ ಚಕ್ರವರ್ತಿ ಜನನ.

1946: ಮಧ್ಯಂತರ ಸರ್ಕಾರ ರಚನೆಗೆ ಭಾರತೀಯ ನಾಯಕರನ್ನು ಬ್ರಿಟನ್ ಲಂಡನ್ನಿಗೆ ಆಹ್ವಾನಿಸಿತು.

1942: ರಂಗಭೂಮಿ, ಟಿವಿ, ಸಿನಿಮಾ ಕ್ಷೇತ್ರಗಳಲ್ಲಿ ಉತ್ತಮ ಕಲಾವಿದರೆಂದು ಹೆಸರು ಪಡೆದ ಸಿ.ಆರ್. ಸಿಂಹ ಅವರು ರಾಮಸ್ವಾಮಿ ಶಾಸ್ತ್ರಿ- ಲಲಿತಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣದಲ್ಲಿ ಜನಿಸಿದರು.

1931: ಕಲಾವಿದ ಎಸ್. ವೆಂಕಟಸ್ವಾಮಿ ಜನನ.

1925: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ, ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಕಟ್ಟಲಾದ ಸ್ವರಾಜ್ (ಸ್ವತಂತ್ರ) ಪಕ್ಷದ ಧುರೀಣರೂ ಆಗಿದ್ದ ವಕೀಲ ಚಿತ್ತರಂಜನ್ ದಾಸ್ ಅವರು ಡಾರ್ಜಿಲಿಂಗಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1924: ಸಾಹಿತಿ ಬಿ. ವಿರೂಪಾಕ್ಷಪ್ಪ ಜನನ.

1924: ಕಲಾವಿದ ಕಲಾವಿದ ಎಂ.ಎಸ್. ಚಂದ್ರಶೇಖರ್ ಜನನ.

1920: ಖ್ಯಾತ ಗಾಯಕ ಹೇಮಂತ್ ಚೌಧರಿ ಜನನ.

1917: ಅಮೆರಿಕದ ಪ್ರಸಿದ್ಧ ಪತ್ರಿಕೆ `ವಾಷಿಂಗ್ಟನ್ ಪೋಸ್ಟ್' ನ ಪ್ರಕಾಶಕಿ ಮತ್ತು ಅಮೆರಿಕದ 20ನೇ ಶತಮಾನದ ಪ್ರಭಾವಿ ಮಹಿಳೆ ಕ್ಯಾಥರಿನ್ ಗ್ರಾಹಂ ಈ ದಿನ ಜನಿಸಿದರು. ರಿಚರ್ಡ್ ನಿಕ್ಸನ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಎರಡು ದಶಕಗಳ ಕಾಲ ಅಮೆರಿಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳಿಗೆ ವಾಷಿಂಗ್ಟನ್ ಪೋಸ್ಟ್ ಕಾರಣವಾಯಿತು.

1903: ಡೆಟ್ರಾಯಿಟ್ ಹೂಡಿಕೆದಾರರು ಫೋರ್ಡ್ ಕಂಪೆನಿಯನ್ನು ಕಟ್ಟಿದರು. ಈ ಸಂಸ್ಥೆಯ ಉಪಾಧ್ಯಕ್ಷರೂ, ಮುಖ್ಯ ಎಂಜಿನಿಯರರೂ ಆಗಿದ್ದ ಹೆನ್ರಿ ಫೋರ್ಡ್ ಕಂಪೆನಿಯಲ್ಲಿ ಶೇಕಡಾ 25 ಷೇರುಗಳನ್ನು ಹೊಂದಿದ್ದರು.

1900: ಖ್ಯಾತ ಸಾಹಿತಿ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿ ರಾವ್ (ಎ.ಎನ್. ಮೂರ್ತಿರಾವ್) (16-6-1900ರಿಂದ 23-8-2003) ಅವರು ಸುಬ್ಬರಾವ್- ಪುಟ್ಟಮ್ಮ ದಂಪತಿಯ ಮಗನಾಗಿ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು.

1890: ಸ್ಟಾನ್ ಲಾರೆಲ್ ಎಂದೇ ಖ್ಯಾತರಾದ ಆರ್ಥರ್ ಸ್ಟ್ಯಾನ್ಲಿ ಜೆಫರ್ ಸನ್ (1890-1965) ಜನ್ಮದಿನ. ಒಲಿವರ್ ಹಾರ್ಡಿ ಅವರ ಪಾಲುದಾರಿಕೆಯೊಂದಿಗೆ ಮೊತ್ತ ಮೊದಲ ಹಾಲಿವುಡ್ ಚಲನಚಿತ್ರ ಹಾಸ್ಯ ತಂಡವನ್ನು ಇವರು ಕಟ್ಟಿದರು.

1873: ಲೇಡಿ ಒಟ್ಟೋಲಿನ್ ಮೊರ್ರೆಲ್(1873-1950) ಜನ್ಮದಿನ. ಕಲೆಗಳ ಪೋಷಕಿಯಾಗಿದ್ದ ಈಕೆ ತನ್ನ ಸಮಕಾಲೀನರಾದ ಹಲವಾರು ಬರಹಗಾರರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿದವರು. ಆಕೆ ಹೀಗೆ ಒಟ್ಟುಗೂಡಿಸಿದವರಲ್ಲಿ ಡಿ.ಎಚ್. ಲಾರೆನ್ಸ್, ವರ್ಜೀನಿಯಾ ವೂಲ್ಫ್, ಆಲ್ಡವಸ್ ಹಕ್ಸ್ಲೆ, ಬರ್ಟ್ರೆಂಡ್ ರಸೆಲ್ ಮತ್ತಿತರರು ಸೇರಿದ್ದಾರೆ.

1605: ಮೊಘಲ್ ದೊರೆ ಅಕ್ಬರ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement