Wednesday, August 12, 2009

ಇಂದಿನ ಇತಿಹಾಸ History Today 11

ಇಂದಿನ ಇತಿಹಾಸ

ಆಗಸ್ಟ್ 11


ಶಿವಮೊಗ್ಗದಲ್ಲಿ ನಡೆಯುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಆಯ್ಕೆಯಾದರು. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಿಸಾರ್ ಅವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡಿತು.

2008: ಚಂಬಲ್ ಕಣಿವೆಯ ಪ್ರಸಿದ್ಧ ಜೆಪರನಾಥ್ ಗುಹಾ ದೇವಾಲಯದ ಏಣಿ ಕುಸಿದ ಘಟನೆಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಎಲ್ಲಾ ಭಕ್ತಾದಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಸೈನಿಕರು ಯಶಸ್ವಿಯಾದರು. 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ಶೈವ ದೇವಾಲಯದಲ್ಲಿನ ದೇವರ ದರ್ಶನಕ್ಕ್ಕೆ 300 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಭಾರಿ ಮಳೆ ಹಾಗೂ ಜನ ದಟ್ಟಣೆಯಿಂದ ಮೆಟ್ಟಿಲ ಏಣಿ ಕುಸಿದು ಬಿದ್ದಿತ್ತು.

2015: ಭಾರತದ ಜನಪ್ರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದರು. ಕ್ರೀಡಾ ಸಚಿವಾಲಯ ಇದನ್ನು ಖಚಿತ ಪಡಿಸಿತು. ಲಿಯಾಂಡರ್ ಪೇಸ್ (1996-97ನೇ ಸಾಲಿನಲ್ಲಿ) ಬಳಿಕ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಎರಡನೇ ಟನಿಸ್ ತಾರೆ ಎನ್ನುವ ಕೀರ್ತಿ ಸಾನಿಯಾ ಅವರದ್ದಾಯಿತು. ಕಳೆದ ಋತುವಿನಲ್ಲಿನ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2015: ನವದೆಹಲಿ: ಅಡುಗೆ ಅನಿಲ (ಎಲ್ಪಿಜಿ)ವಿತರಣೆ ಮತ್ತು ಸಾರ್ವಜನಿಕರ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಹೊರತು ಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ಇನ್ನು ಮುಂದೆ ಐಚ್ಛಿಕವಾಗಿ ಉಳಿಯಲಿದೆ. ಆಧಾರ್ ಕಾರ್ಡ್ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಈದಿನ ನೀಡಿದ ತೀರ್ಪಿನಲ್ಲಿ ಈ ವಿಚಾರವನ್ನು ಸ್ಪಷ್ಟ ಪಡಿಸಿದ ಸುಪ್ರೀಂಕೋರ್ಟ್, ಆಧಾರ್ ಕಾರ್ಡದಾರರು ನೀಡಿದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಬೇರೆ ಯಾರ ಜೊತೆಗೂ ಹಂಚಿಕೊಳ್ಳುವಂತಿಲ್ಲ ಎಂದು ಹೇಳಿತು. ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ ಖಾತರಿ ಪಡಿಸಬೇಕು ಎಂಬುದಾಗಿಯೂ ನ್ಯಾಯಮೂರ್ತಿ ಚಲಮೇಶ್ವರ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಆಜ್ಞಾಪಿಸಿತು. ಇದಕ್ಕೆ ಮುನ್ನ

ಸರ್ಕಾರದ ಮಹತ್ವಾಕಾಂಕ್ಷಿ ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳೆಲ್ಲವನ್ನೂ ಸುಪ್ರೀಂಕೋರ್ಟ್ ಬೆಳಗ್ಗೆ ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು. ಖಾಸಗಿತನದ ಹಕ್ಕು ಮೂಲಭೂತ ಹಕ್ಕೇ ಅಥವಾ ಅಲ್ಲವೇ ಎಂಬ ಬಗ್ಗೆ ಅಧಿಕೃತ ಘೋಷಣೆ ಬೇಕು ಎಂದು ಸುಪ್ರೀಂಕೋರ್ಟ್ ಈದಿನ ನೀಡಿದ ತನ್ನ ತೀರ್ಪಿನಲ್ಲಿ ಕೋರಿತ್ತು. ನ್ಯಾಯಮೂರ್ತಿ ಚಲಮೇಶ್ವರ ನೇತೃತ್ವದ ತ್ರಿಸದಸ್ಯ ಪೀಠವು ವಿಷಯನ್ನು ವಿಶಾಲ ಪೀಠಕ್ಕೆ ಒಪ್ಪಿಸಬೇಕೆ ಎಂಬ ಕುರಿತ ತನ್ನ ತೀರ್ಪನ್ನು ಆಗಸ್ಟ್ 4ರ ಮಂಗಳವಾರ ಕಾಯ್ದಿರಿಸಿತ್ತು. ಖಾಸಗಿತನದ ಉಲ್ಲಂಘನೆಯಾಗುವುದರಿಂದ ಆಧಾರ್ ಕಾರ್ಡ್ ಯೋಜನೆ ಸಾವಿಧಾನಿಕವಾಗಿ ಸಿಂಧುವಲ್ಲ ಎಂದು ಅರ್ಜಿಗಳಲ್ಲಿ ವಾದಿಸಲಾಗಿತ್ತು. ಆದರೆ ಖಾಸಗಿತನದ ಹಕ್ಕು ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಮನವಿ ಮಾಡಿತ್ತು. ಖರಕ್ ಸಿಂಗ್ ಪ್ರಕರಣದಲ್ಲಿ 6 ಸದಸ್ಯರ ಸುಪ್ರೀಂಕೋರ್ಟ್ ಪೀಠ ಮತ್ತು ಎಂಪಿ ಶರ್ಮಾ ಪ್ರಕರಣದಲ್ಲಿ 8 ಸದಸ್ಯರ ಸುಪ್ರೀಂ ಕೋರ್ಟ್ ಪೀಠ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಖಾಸಗಿತನದ ಹಕ್ಕು ಭಾರತೀಯ ಸಂವಿಧಾನದ ಮೂರನೇ ಭಾಗದಲ್ಲಿ ಖಾತರಿ ನೀಡಲಾಗಿರುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದು ಪ್ರಶ್ನಾರ್ಹ ಎಂದು ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದರು.

2015: ನವದೆಹಲಿ: ಕಾಂಗ್ರೆಸ್ ಪಕ್ಷದ ವಿರೋಧ ಹಾಗೂ ಕೋಲಾಹಲದ ಮಧ್ಯೆಯೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಅವರು ರಾಜ್ಯಸಭೆಯಲ್ಲಿ ವಸ್ತುಗಳು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ ಬಿಲ್) ಮಂಡಿಸಿದರು. ಆದರೆ ಕಾಂಗ್ರೆಸ್ ಪ್ರತಿಭಟನೆ, ಕೋಲಾಹಲ ಪರಿಣಾಮವಾಗಿ ಚರ್ಚೆಗೆ ಎತ್ತಿಕೊಳ್ಳುವ ಮೊದಲೇ ಕಲಾಪ ಮುಂದೂಡಲ್ಪಟ್ಟಿತು. ಹಣಕಾಸು ಸಚಿವರು ಮಸೂದೆ ಮಂಡನೆ ಮಂಡಿಸುವುದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಕಲಾಪ ಸಲಹಾ ಸಮಿತಿಯಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ನೀಡಲಾಗಿಲ್ಲ ಎಂದು, ಸಂವಿಧಾನ ತಿದ್ದುಪಡಿ ಮಸೂದೆಗೆ ಸಮಯ ನೀಡಲಾಗಿಲ್ಲ ಎಂದು ಕಾಂಗ್ರೆಸ್ಸಿನ ಆನಂದ ಶರ್ಮಾ ವಾದಿಸಿದರು. ಅದರೂ ಗದ್ದಲದ ಮಧ್ಯೆ ಅರುಣ್ ಜೇಟ್ಲಿ ಅವರು ಮಸೂದೆ ಮಂಡನೆ ಮಾಡಿದರು. ತತ್ ಕ್ಷಣವೇ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠದ ಮುಂಭಾಗಕ್ಕೆ ನುಗ್ಗಿದರು. ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವುದಕ್ಕೂ ಮೊದಲೇ ಸದನ ಕಲಾಪಗಳನ್ನು ಕೋಲಾಹಲದ ಮಧ್ಯೆ ನಾಲ್ಕನೇ ಬಾರಿಗೆ ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಲಲಿತ್ ಮೋದಿ ಮತ್ತು ವ್ಯಾಪಂ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಪರಿಣಾಮವಾಗಿ ಉಂಟಾದ ಕೋಲಾಹಲದ ಮಧ್ಯೆ ರಾಜ್ಯಸಭಾ ಕಲಾಪಗಳು ಪದೇ ಪದೇ ಮುಂದೂಡಲ್ಪಟ್ಟವು.

2015: ನವದೆಹಲಿ: ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂಬುದಾಗಿ ಖಂಡಿಸಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕಾಗದಪತ್ರಗಳನ್ನೂ ಹರಿದು ಹಾಕಿ ಪ್ರತಿಭಟಿಸಿದ ಬೆನ್ನಲ್ಲೇ ಸದನ ಕಲಾಪಗಳನ್ನು ದಿನ ಮಟ್ಟಿಗೆ ಮುಂದೂಡಿದರು. ಉದ್ರಿಕ್ತ ಕಾಂಗ್ರೆಸ್ ಸದಸ್ಯರು ಕಾಗದಪತ್ರಗಳನ್ನು ಹರಿದು ಹಾಕಿ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಉಪಸಭಾಧ್ಯಕ್ಷ ಎಂ. ತಂಬಿದುರೈ ಅವರು ಹಠಾತ್ತನೆ ಲೋಕಸಭಾ ಕಲಾಪಗಳನ್ನು ಮುಂದೂಡಿದರು. ಅದಕ್ಕೂ ಮುನ್ನ ಮೂವರು ಬಿಜೆಪಿ ನಾಯಕರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ  ಬೆಳಗ್ಗೆಯಿಂದಲೇ ತೀವ್ರ ಕೋಲಾಹಲ ನಡೆಸಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಇದನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ಬಣ್ಣಿಸಿದರು. ಕಾಂಗ್ರೆಸ್ ಸದಸ್ಯರ ವರ್ತನೆಯಿಂದ ರೊಚ್ಚಿಗೆದ್ದ ಸುಮಿತ್ರಾ ಅವರು ಒಂದು ಹಂತದಲ್ಲಿ ‘ಈ ಪ್ರತಿಭಟನೆಗಳನ್ನು ಲೋಕಸಭಾ ಟಿವಿಯಲ್ಲಿ ತೋರಿಸಿ. ಈ ದೃಶ್ಯಗಳನ್ನು ಜನರು ಸ್ವತಃ ನೋಡಲಿ’ ಎಂದೂ ಹೇಳಿದರು.

2015: ನವದೆಹಲಿ: ಅಕ್ರಮ ದೂರವಾಣಿ ವಿನಿಮಯ ಕೇಂದ್ರ (ಟೆಲಿಫೋನ್ ಎಕ್ಸ್ಚೇಂಜ್) ಸ್ಥಾಪನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಪಡಿಸಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಮಾಜಿ ಸಚಿವ, ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದರು. ಪ್ರಕರಣದ ಮುಖ್ಯ ಆರೋಪಿ ಮಾರನ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಪಡಿಸಿದ ಮದ್ರಾಸ್ ಹೈಕೋರ್ಟ್ ಶರಣಾಗಲು ಮೂರು ದಿನಗಳ ಗಡುವು ನೀಡಿತ್ತು.

2015: ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ದೆಹಲಿ ಮುಖ್ಯಮಂತ್ರಿಯೊಂದಿಗೆ ಗುರುತಿಸಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಬೇಡಿ. ಒಂದೊಮ್ಮೆ ಮುಂದಾದರೆ ಜೀವ ಕಳೆದುಕೊಳ್ಳುತ್ತೀರಿ ಎನ್ನುವುದಾಗಿ ಬೆದರಿಕೆ ಹಾಕಲಾಯಿತು. ಆಗಸ್ಟ್ 7ರಂದು ಬರೆಯಲಾದ ಈ ಪತ್ರದಲ್ಲಿ ಹೆಚ್ಚೂ ಕಡಿಮೆ ಇಂಗ್ಲಿಷ್ ಭಾಷೆಯನ್ನೇ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದರು. 78 ವರ್ಷ ಪ್ರಾಯದ ಹಜಾರೆ ಅವರಿಗೆ ಬೆದರಿಕೆ ಪತ್ರ ಬರೆದಿರುವವರ ವಿರುದ್ಧ ಸೆಕ್ಷನ್ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.

2015: ನವದೆಹಲಿ: ‘ಸ್ವರಾಜ್ ಅಭಿಯಾನ’ಕ್ಕೆ ಅಣಿಯಾಗಿದ್ದ ಆಪ್ ಬಂಡಾಯ ನಾಯಕ ಯೋಗೇಂದ್ರ ಯಾದವ್ ಅವರನ್ನು ಹಿಂದಿನ ದಿನ ತಡರಾತ್ರಿ ದೆಹಲಿ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಯೋಗೇಂದ್ರ ಯಾದವ್ ಅವರನ್ನು ಹಠಾತ್ತಾಗಿ ಬಂಧಿಸಿದ ಸಂಸತ್ ಮಾರ್ಗ ಪೊಲೀಸರ ಕ್ರಮವನ್ನು ಉಳಿದ ಸದಸ್ಯರಾದ ಪ್ರಶಾಂತ್ ಭೂಷಣ್ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್  ಖಂಡಿಸಿದರು. ಘಟನೆ ಬಗ್ಗೆ ಟ್ವಿಟರ್ನಲ್ಲಿ ಫೋಟೊ ಸಹಿತ ಘಟನೆ ಬಗ್ಗೆ ವಿವರಿಸಿದ ಯೋಗೇಂದ್ರ ಯಾದವ್, ಪೊಲೀಸರು ಬಲಾತ್ಕಾರವಾಗಿ ಎಳೆದೊಯ್ದಿದ್ದಾರೆ. ತಳ್ಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. ಬಂಧನಕ್ಕೂ ಮೊದಲು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರೈತರ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ನಿವಾಸದೆದುರು ಟ್ರಾಕ್ಟರ್ ರ‍್ಯಾಲಿ ನಡೆಸಿದ್ದರು.

2015: ನ್ಯೂಯಾರ್ಕ್: ಭಾರತ ಮೂಲದ ಸುಂದರ್ ಪಿಚೈ ‘ಆಲ್ಪಬೆಟ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂದು ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಜನಪ್ರಿಯತೆ ಗಳಿಸಿರುವ ‘ಗೂಗಲ್’ ಸಂಸ್ಥೆ ಪ್ರಕಟಿಸಿತು. ‘ಆಲ್ಪಬೆಟ್’ ಗೂಗಲ್ನ ಅಂಗ ಸಂಸ್ಥೆ. ಈ ಕುರಿತು ಸಂಸ್ಥೆಯ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಈದಿನ ಪ್ರಕಟಿಸಿದರು. ಗೂಗಲ್ ಕಾಯನಿರ್ವಹಣಾ ಕ್ಷೇತ್ರದಲ್ಲಿ ಅಲ್ಪಾಬೆಟ್ ವಿಶೇಷವಾದ ಪಾತ್ರವಹಿಸಲಿದೆ. ಸುಂದರ್, ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸುತ್ತಾರೆನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಅಂತೆಯೇ ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕರಾದ ಸೆರ್ಜಿ ಬ್ರಿನ್ ‘ಆಲ್ಪಬೆಟ್’ಗೆ ಅಧ್ಯಕ್ಷರಾಗಿರುತ್ತಾರೆ ಎಂದೂ ತಿಳಿಸಿದರು. ಸುಂದರ್ ಪಿಚೈ ಹುಟ್ಟಿದ್ದು ಚೆನ್ನೈನಲ್ಲಿ. ಅವರಿಗೀಗ 43 ವರ್ಷ ಪ್ರಾಯ. ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಅಂತರ್ಜಾಲ ಕ್ಷೇತ್ರದಲ್ಲಿ ವಿಶೇಷವಾದ ಅನುಭವ ಇವರದ್ದಾಗಿದೆ. ಕಳೆದ ವರ್ಷ ಗೂಗಲ್ ಸಂಸ್ಥೆಗೆ ಸೇರಿ, ಇದೀಗ ಅದರದೇ ಅಂಗ ಸಂಸ್ಥೆ ‘ಆಲ್ಪಬೆಟ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸುಂದರ್ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಅಷ್ಟೇ ಅಲ್ಲ, ಸ್ವತಃ ಕ್ರಿಕೆಟಿಗರೂ ಹೌದು. ಶಾಲಾ ದಿನಗಳಲ್ಲಿ ಶಾಲಾ ತಂಡದ ನಾಯಕನಾಗಿ ತಂಡ ಮುನ್ನಡೆಸಿ ತಮಿಳುನಾಡು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಲ್ಲದೇ ಸುಂದರ್ ಪಿಚೈಗೆ ವಾಣಿಜ್ಯ ಉದ್ಯಮದಲ್ಲೂ ವಿಶೇಷವಾದ ಆಸಕಿ.

2007: ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಭಾರತದ 13ನೇ ಉಪರಾಷ್ಟ್ರಪತಿಯಾಗಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಮಾಣವಚನ ಬೋಧಿಸಿದರು. ಮಾಜಿ ರಾಯಭಾರಿ 70 ವರ್ಷದ ಅನ್ಸಾರಿ ಅವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸುವರು.

2007: ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಎಂಐಎಂ ಸಂಘಟನೆಯಿಂದ ಹಲ್ಲೆಗೆ ಒಳಗಾದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ವಿರುದ್ಧ `ಕೋಮುಗಳ ಮಧ್ಯೆ ಕೆಟ್ಟ ಭಾವನೆ' ಮೂಡಿಸಿದ ಆಪಾದನೆ ಹೊರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದರು. ಧರ್ಮ, ಜನಾಂಗ ಮತ್ತು ಭಾಷೆಯ ಆಧಾರದ ಮೇಲೆ ವೈರತ್ವ ಅಥವಾ ಕೆಟ್ಟ ಭಾವನೆ ಮೂಡಿಸಿದ ಕಾರಣಕ್ಕೆ ಭಾರತೀಯ ದಂಡ ಸಂಹಿತೆ ಕಲಂ 153(ಎ) ಅನ್ವಯ ಪ್ರಕರಣ ದಾಖಲು ಮಾಡಲಾಯಿತು. ಎಂಐಎಂನ ಶಾಸಕ ಅಕ್ಬರ್ದುದೀನ್ ಒಯಸಿ ಅವರು ನೀಡಿದ ದೂರಿನ ಆಧಾರದ ಮೇಲೆ ನಸ್ರೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

2007: ಈದಿನ ಬೆಳಗಿನ ಜಾವ ಜಮ್ಮು ನಗರದ ಮಧ್ಯ ಭಾಗದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ದಾಳಿಯಲ್ಲಿ 2005ರ ಅಯೋಧ್ಯೆ ದಾಳಿಯ ಸೂತ್ರಧಾರ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರಗಾಮಿ ಹತನಾದ. ಆತನ ಐವರು ಸಹಚರರನ್ನು ಸೆರೆ ಹಿಡಿಯಲಾಯಿತು. ನಗರದ ಜಾನಿಪುರ ಪ್ರದೇಶದ ಮೇಲೆ ದೆಹಲಿ ಮತ್ತು ಜಮ್ಮು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಜೈಷ್ ಎ ಮೊಹಮ್ಮದ್ ನ ವಿಭಾಗೀಯ ಕಮಾಂಡರ್ ಸೈಫುಲ್ಲಾ ಕರಿ ಹತನಾದ ಎಂದು ಜಮ್ಮು ವಿಭಾಗದ ಐಜಿಪಿ ಎಸ್.ಪಿ. ವೈದ್ ಪ್ರಕಟಿಸಿದರು.

2007: ಕಾಶ್ಮೀರದ ಅನಂತನಾಗ್ ಜಿಲ್ಲೆ ಖಂದ್ರೂದಲ್ಲಿರುವ ಸೇನೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿದ ಬೆಂಕಿ ದುರಂತದದಲ್ಲಿ ಮೂವರು ಮೃತರಾಗಿ, ಸೇನೆ ಹಾಗೂ ಅಗ್ನಿ ಶಾಮಕ ದಳದ ಯೋಧರು ಸೇರಿದಂತೆ 50 ಜನರು ಗಾಯಗೊಂಡರು. 21ನೇ ಸಂಖ್ಯೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಬೆಳಗ್ಗೆ 9. 15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲಿಯೇ ಸರಣಿ ಸ್ಫೋಟಗಳು ಸಂಭವಿಸಿದವು.

2007: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ (ನೀರು ಕುದುರೆ ) ವಿದ್ಯಾ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿತು. ಹದಿನೈದು ವರ್ಷ ವಯಸ್ಸಿನ ಕಾರ್ತಿಕ್ ಎಂಬ ಹಿಪ್ಪೊ ಹಾಗೂ ಆರು ವರ್ಷದ ಹಿಪ್ಪೊ ವಿದ್ಯಾಳ ದಾಂಪತ್ಯದಿಂದ ಜನಿಸಿದ ಈ ಮರಿ ಆಕರ್ಷಕವಾಗಿದ್ದು ಆರೋಗ್ಯವಾಗಿದೆ. ಇದು ವಿದ್ಯಾಳಿಗೆ ಜನಿಸಿದ ಮೊದಲನೆ ಮರಿ. ನೂತನ ಅತಿಥಿಯ ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ ಕುಟುಂಬದ ಸದಸ್ಯರ ಸಂಖ್ಯೆ ಏಳಕ್ಕೇರಿತು.

2006: ಡಾ. ರಾಜಕುಮಾರ್ ಅವರು ಜೀವನಧಾರೆ ಚಿತ್ರಕ್ಕಾಗಿ ಕಟ್ಟ ಕಡೆಯದಾಗಿ ಹಾಡಿದ್ದ ಧ್ವನಿ ಸುರುಳಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಧರ್ಮಸಿಂಗ್ ಮುಖ್ಯ ಅತಿಥಿಯಾಗಿದ್ದರು.

2006: ಶಿವಮೊಗ್ಗದಲ್ಲಿ ನಡೆಯುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಆಯ್ಕೆಯಾದರು. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಿಸಾರ್ ಅವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡಿತು.

2006: ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲಾದ ಹಕ್ಕುಚ್ಯುತಿ ನೋಟಿಸನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ತಿರಸ್ಕರಿಸಿದರು.

2006: ಚೀನಾದ ಜೇಜಿಯಾಂಗ್ ಪಶ್ಚಿಮ ಪ್ರಾಂತ್ಯದ ಕಾಂಗ್ಲಾನ್ ಕೌಂಟಿಯಲ್ಲಿ ಕಳೆದ 50 ವರ್ಷಗಳ ಅವಧಿಯಲ್ಲಿ ಬೀಸಿದ ಪ್ರಚಂಡ ಬಿರುಗಾಳಿಗೆ ಸಿಲುಕಿ ಕನಿಷ್ಠ 98 ಜನ ಮೃತರಾಗಿ, 149 ಜನ ನಾಪತ್ತೆಯಾದರು.

2004: ಖ್ಯಾತ ಬರಹಗಾರ ಶಂಕರ ಮೊಕಾಶಿ ಪುಣೇಕರ ನಿಧನರಾದರು.

2000: ಭಾರತದ ಕೊನೇರು ಹಂಪಿ ಅವರು ಸ್ಮಿತ್ ಮತ್ತು ವಿಲಿಯಮ್ ಸನ್ ಬ್ರಿಟಿಷ್ ಚೆಸ್ ಚಾಂಪಿಯನ್ ಶಿಪ್ ನ ಹನ್ನೊಂದನೆಯ ಹಾಗೂ ಅಂತಿಮ ಸುತ್ತಿನಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಲೇಡೀಸ್ ಚೆಸ್ ಚಾಂಪಿಯನ್ ಆಗಿ ಆಯ್ಕೆಯಾದರು. 10, 12 ಮತ್ತು 14 ವಯೋಮಿತಿಯೊಳಗಿನ ಜಾಗತಿಕ ಪ್ರಶಸ್ತಿಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿದ ಹಾಗೂ ಚೆಸ್ ನಲ್ಲಿ ಜಾಗತಿಕ ಚೆಸ್ ಪ್ರಶಸ್ತಿ ಗೆದ್ದ ಭಾರತದ ಪ್ರಥಮ ಹುಡುಗಿ ಎಂಬ ಹೆಗ್ಗಳಿಕೆಗೂ ಆಕೆ ಪಾತ್ರರಾದರು.

1956: ಅಮೂರ್ತ ಕಲಾವಿದ ಜಾಕ್ಸನ್ ಪೊಲ್ಲೋಕ್ ಅವರು ನ್ಯೂಯಾರ್ಕಿನ ಈಸ್ಟ್ ಹ್ಯಾಂಪ್ಟನ್ನಲ್ಲಿ ಅಪಘಾತ ಒಂದರಲ್ಲಿ ಅಸು ನೀಗಿದರು. ಆಗ ಅವರಿಗೆ 44 ವರ್ಷ ವಯಸ್ಸು.

1954: ಭಾರತದ ಮಾಜಿ ಕ್ರಿಕೆಟ್ ಆಟಗಾರ ಯಶಪಾಲ್ ಶರ್ಮಾ (1954) ಜನ್ಮದಿನ.

1944: ಸಾಹಿತಿ ಗಣಪತಿ ಶಿವರಾಮ ಅವಧಾನಿ (ಜಿ.ಎಸ್. ಅವಧಾನಿ) (11-8-1944ರಿಂದ 20-8-2000) ಅವರು ಶಿವರಾಮ ಅವಧಾನಿ- ಸಾವಿತ್ರಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮೂಡಗೇರಿಯಲ್ಲಿ ಈದಿನ ಜನಿಸಿದರು.

1932: ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತವು ಅಮೆರಿಕವನ್ನು 24-1 ಅಂತರದಿಂದ ಸೋಲಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಅಂತರದಲ್ಲಿ ವಿಜಯ ಸಾಧಿಸಿದ ದಾಖಲೆ ಇದು.

1922: ಖ್ಯಾತ ತಾರೆ ಮನಮೋಹನ ಕೃಷ್ಣ ಜನನ.

1919: ಸ್ಕಾಟಿಷ್ ಸಂಜಾತ ಅಮೆರಿಕನ್ ಕೈಗಾರಿಕೋದ್ಯಮಿ ಹಾಗೂ ದಾನಿ ಆಂಡ್ರ್ಯೂ ಕಾರ್ನೆಗೀ ಅವರು ಮೆಸಾಚ್ಯುಸೆಟ್ಸಿನ ಲೆನೋಕ್ಸಿನಲ್ಲಿ 83ನೇ ವಯಸ್ಸಿನಲ್ಲಿ ಮೃತರಾದರು. ಇವರು 35 ಕೋಟಿ ಡಾಲರುಗಳಿಗೂ ಹೆಚ್ಚಿನ ದಾನ ರೂಪದ ನೆರವನ್ನು ಗ್ರೇಟ್ ಬ್ರಿಟನ್ ಮತ್ತು ಅಮೆರಿಕಕ್ಕೆ ನೀಡಿದ್ದರು.

1914: ಸಾಹಿತಿ ವಿ.ಜಿ. ಕೃಷ್ಣಮೂರ್ತಿ ಜನನ.

1911: ಖ್ಯಾತ ಪತ್ರಕರ್ತ ಪ್ರೇಮ್ ಭಾಟಿಯಾ ಜನನ.

1908: ಭಾರತದ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿದ್ದ 19 ವರ್ಷದ ತರುಣ ಖುದೀರಾಮ್ ಬೋಸ್ ಅವರನ್ನು ಬ್ರಿಟಿಷರು ಈದಿನ ಮರಣದಂಡನೆಗೆ ಗುರಿಪಡಿಸಿದರು. ಈ ದಿನವನ್ನು ಭಾರತದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೊಬ್ಬ ದೇಶಭಕ್ತ ಪ್ರಫುಲ್ಲ ಚಾಕಿ ಅವರೊಡನೆ ಸೇರಿಕೊಂಡು ಖುದೀರಾಮ್ ಬೋಸ್ ಅವರು 1908ರ ಏಪ್ರಿಲ್ 30ರಂದು ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ಪ್ರಯಾಣಿಸುತ್ತಿದ್ದ ಗಾಡಿಯ ಮೇಲೆ ಬಾಂಬ್ ಹಾಕಿದ್ದರು. ಆದರೆ ಕಿಂಗ್ಸ್ ಫೋರ್ಡ್ ಬದುಕಿ ಉಳಿದು ಇತರ ಇಬ್ಬರು ಐರೋಪ್ಯ ಮಹಿಳೆಯರು ಅಸು ನೀಗಿದ್ದರು. ಗಲ್ಲಿಗೇರುವ ಮುನ್ನ ಉಚ್ಚರಿಸಿದ `ವಂದೇ ಮಾತರಂ' ಘೋಷಣೆಯೇ ಖುದೀರಾಮ್ ಬೋಸ್ ಅವರ ಕೊನೆಯ ವಾಕ್ಯವಾಯಿತು.

1897: ಬ್ರಿಟಿಷ್ ಕಥೆಗಾರ ಎನಿಡ್ ಬ್ಲೈಟನ್ (1897-1968) ಜನ್ಮದಿನ. ಮಕ್ಕಳ ಪುಸ್ತಕಗಳನ್ನು ಬರೆಯುವುದದಲ್ಲಿ ಸಿದ್ದಹಸ್ತರು ಎಂದು ಇವರು ಖ್ಯಾತಿ ಪಡೆದಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement