ಗ್ರಾಹಕರ ಸುಖ-ದುಃಖ
My Blog List
Thursday, September 10, 2009
ಇಂದಿನ ಇತಿಹಾಸ History Today ಸೆಪ್ಟೆಂಬರ್ 06
ಇಂದಿನ ಇತಿಹಾಸ
ಸೆಪ್ಟೆಂಬರ್ 06
ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಕ್ಷದ ಮುಖಂಡ ಹಾಗೂ ದಿವಂಗತ ಬೆನಜೀರ್ ಭುಟ್ಟೋ ಪತಿ ಆಸೀಫ್ ಅಲಿ ಜರ್ದಾರಿ ಪಾಕಿಸ್ಥಾನದ 13ನೇ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು.
2008: ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಕ್ಷದ ಮುಖಂಡ ಹಾಗೂ ದಿವಂಗತ ಬೆನಜೀರ್ ಭುಟ್ಟೋ ಪತಿ ಆಸೀಫ್ ಅಲಿ ಜರ್ದಾರಿ ಪಾಕಿಸ್ಥಾನದ 13ನೇ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಇಸ್ಲಾಮಾಬಾದಿನಲ್ಲಿ ನಡೆದ ಚುನಾವಣೆಯಲ್ಲಿ ಜರ್ದಾರಿ ತಮ್ಮ ಸಮೀಪದ ಪ್ರತಿಸ್ಫರ್ಧಿಗಳಾದ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿ ಸಯೀದ್-ಉಜ್- ರಹಮಾನ್ ಹಾಗೂ ಪಿಎಂಎಲ್-ಕ್ಯೂ ಅಭ್ಯರ್ಥಿ ಮುಷಾಹಿದ್ ಹುಸೇನ್ ಸಯೀದ್ ಅವರನ್ನು ಹಿಮ್ಮೆಟ್ಟಿಸಿ ಭಾರಿ ಜಯ ಸಾಧಿಸಿದರು.
2008: ಪರಮಾಣು ಪೂರೈಕೆ ಮಾಡುವ 45 ದೇಶಗಳ ಗುಂಪಾದ `ಎನ್ ಎಸ್ ಜಿ'ಯು ವಿಯೆನ್ನಾದಲ್ಲಿ ತನ್ನ ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ ಮಾಡಿಕೊಂಡು ಭಾರತಕ್ಕೆ ತನ್ನ ನಿಯಮಾವಳಿಗಳಿಂದ `ಸಂಪೂರ್ಣ ವಿನಾಯಿತಿ' ನೀಡಿತು. ಈ ಮೂಲಕ ಭಾರತ- ಅಮೆರಿಕ ಪರಮಾಣು ಒಪ್ಪಂದಕ್ಕೆ ಹಾಗೂ ಭಾರತಕ್ಕೆ ಇತರ ದೇಶಗಳೊಂದಿಗೆ ಪರಮಾಣು ವಹಿವಾಟು ನಡೆಸಲು ರಹದಾರಿ ನಿರ್ಮಾಣವಾಯಿತು. ಎನ್ ಎಸ್ ಜಿ ಯ ಈ ಒಪ್ಪಿಗೆ ಸಿಗುವುದರೊಂದಿಗೆ, ಅಮೆರಿಕದ ಜತೆಗಿನ ಅಣು ಒಪ್ಪಂದ ಪ್ರಕ್ರಿಯೆಯ ಮುಂದಿನ ನಡೆಯು ಅಮೆರಿಕದ ಸಂಸತ್ತಿಗೆ ವರ್ಗಾವಣೆಯಾಯಿತು.
2007: ಕಜಕಿಸ್ತಾನದಲ್ಲಿನ ಬೈಕಾನುರ್ ಉಡಾವಣಾ ಕೇಂದ್ರದಿಂದ ರಷ್ಯಾದ ರಾಕೆಟ್ ಮೂಲಕ ಉಡಾವಣೆಯಾದ ಪಾನ್ ದೂರಸಂಪರ್ಕ ಉಪಗ್ರಹ `ಜೆಸಿಸ್ಯಾಟ್-11' ನಭಕ್ಕೆ ಚಿಮ್ಮಿದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡಿತು. ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಲಿಲ್ಲ. ಈ ಉಪಗ್ರಹವು ಜಪಾನ್, ಏಷ್ಯಾ ಪೆಸಿಫಿಕ್ ಪ್ರದೇಶ ಮತ್ತು ಹವಾಯಿ ದ್ವೀಪ ಸಮೂಹದಲ್ಲಿ ಟೆಲಿವಿಷನ್ ಪ್ರಸಾರಕ್ಕೆ ಸಹಾಯವಾಗುವ ಮರುಪ್ರಸಾರ ಕಾರ್ಯವನ್ನು ನಿರ್ವಹಿಸುವ ಉದ್ದೇಶ ಹೊಂದಿತ್ತು.
2007: ಡೆನ್ ಡೆನ್ ಹಡಗು ಮುಳುಗಿದ ದುರಂತ ನೆನಪಿನಿಂದ ಮಾಸುವ ಮುನ್ನವೇ ಮಂಗಳೂರಿನ ತಣ್ಣೀರುಬಾವಿ ಕಡಲ ತೀರದ ಅದೇ ಸ್ಥಳದಲ್ಲಿ ಚೀನಾ ಮೂಲದ ಚಾಂಗ್-ಲೆ-ಮೆನ್ ಎಂಬ ಹಡಗಿನ ತಳ ಈದಿನ ಮಧ್ಯಾಹ್ನ ಮರಳಿನಲ್ಲಿ ಹುದುಗಿ, ಲಂಬಕ್ಕಿಂತ 15 ಡಿಗ್ರಿಯಷ್ಟು ವಾಲಿತು. ತಣ್ಣೀರುಬಾವಿ ತೀರದಲ್ಲಿ ಕೆಲವೇ ವರ್ಷಗಳಲ್ಲಿ ತೊಂದರೆಗೆ ಸಿಲುಕಿದ ಮೂರನೇ ಹಡಗು ಇದು. ಕೆರಿಬಿಯನ್ ದ್ವೀಪ ಸಮೂಹದ ಸೇಂಟ್ ವಿನ್ಸೆಂಟ್ ದ್ವೀಪದಲ್ಲಿ ನೋಂದಣಿ ಹೊಂದಿದ ಹಡಗು ಇದು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ಇದರಲ್ಲಿದ್ದರು. ಮಂಗಳೂರಿನ ಎನ್ಎಂಪಿಟಿ ಬಂದರಿನಿಂದ ಅಲ್ವಾರಿಸ್ ಥಾಮ್ಸನ್ ಎಂಬ ಕಂಪೆನಿಯಿಂದ 16,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಮಧ್ಯಾಹ್ನ 11ಕ್ಕೆ ಚೀನಾಕ್ಕೆ ಪ್ರಯಾಣ ಆರಂಭಿಸಿತ್ತು. ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಹಡಗಿನ ತಳಪಾಯ ಮರಳಿನಲ್ಲಿ ಹುದುಗಿ, ತಾಂತ್ರಿಕ ತೊಂದರೆ ಎದುರಾಯಿತು. ನವಮಂಗಳೂರು ಬಂದರಿನಿಂದ ಏಳು ನಾಟಿಕಲ್ ಮೈಲಿ ದೂರ ಹಡಗು ಸಿಲುಕಿಕೊಂಡಿತು.
2007: ಭಾರತದ ಪ್ರಪ್ರಥಮ ಮೂಳೆ ಬ್ಯಾಂಕ್ ಚೆನ್ನೈಯ ಜನರಲ್ ಆಸ್ಪತ್ರೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮೃತದೇಹಗಳಿಂದ ಪಡೆದ ಮೂಳೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗುವುದು ಎಂದು ಆಸ್ಪತ್ರೆಯ ಮೂಳೆತಜ್ಞ ಎಂ. ನಟರಾಜನ್ ಬಹಿರಂಗಪಡಿಸಿದರು. ಅಪಘಾತದಲ್ಲಿ ಗಾಯಗೊಂಡವರು, ಕ್ಯಾನ್ಸರ್ ರೋಗಿಗಳಿಗೆ ಮೂಳೆ ಬ್ಯಾಂಕ್ ಹೊಸ ಆಶಾಕಿರಣವಾಗಲಿದೆ. ದಾನಿಗಳಿಂದ ಅಥವಾ ವಿದೇಶಗಳ ಕಳೇಬರದಿಂದ ಪಡೆದ ಮೂಳೆಗಳನ್ನು ಇದಕ್ಕಾಗಿ ಆಮದು ಮಾಡಿಕೊಳ್ಳಲಾಗುವುದು. ಆಮದು ಮೂಳೆಗಳ ಬೆಲೆ ಸ್ವಲ್ಪ ದುಬಾರಿ. 15ರಿಂದ 20 ಸೆ.ಮೀ. ಉದ್ದದ ತೊಡೆಯ ಮೂಳೆಗೆ ಸುಮಾರು ನಾಲ್ಕರಿಂದ ಐದು ಸಾವಿರ ಡಾಲರುಗಳಾಗಬಹುದು. ಶ್ರೀಲಂಕಾದಲ್ಲಿ ಮೂಳೆಗಳು ಸುಲಭವಾಗಿ ದೊರೆಯುತ್ತವೆ. ಕೃತಕ ಮೂಳೆಗಳಿಗಿಂತ ಕಳೇಬರಗಳಿಂದ ಪಡೆದ ಮೂಳೆಗಳು ಹೆಚ್ಚು ಉತ್ತಮ ಎಂಬುದು ನಟರಾಜನ್ ಅಭಿಪ್ರಾಯ.
2007: ಬೆಳಗಾವಿ ಜನತೆಗೆ ದುಃಸ್ವಪ್ನವಾಗಿದ್ದ ಬಾಡಿಗೆ ಹಂತಕ ಪ್ರವೀಣ ಶಿಂತ್ರೆ (32) ಕರಾಳ ಅಧ್ಯಾಯ ಪೊಲೀಸ್ ಎನ್ಕೌಂಟರಿನಲ್ಲಿ ಅಂತ್ಯ ಕಂಡಿತು. ಕೊಲೆ, ಅತ್ಯಾಚಾರದಂತಹ ಕುಕೃತ್ಯಗಳಿಗೆ ತಾನು ಬಳಸಿಕೊಂಡಿದ್ದ ಬಂಗಲೆಯಲ್ಲೇ ಪೊಲೀಸರ ಗುಂಡಿಗೆ ಈತ ಬಲಿಯಾದ. ಸುಪಾರಿ ಸರಣಿ ಕೊಲೆ ಸೇರಿದಂತೆ ದರೋಡೆ, ಅತ್ಯಾಚಾರ ಮೊದಲಾದ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿಂತ್ರೆಯನ್ನು ವಿಚಾರಣೆ ಸಲುವಾಗಿ ಈದಿನ ಬೆಳಗಿನ ಜಾವ ಬೆಳಗಾವಿ ನಗರದ `ರಾಜದೀಪ' ಹೆಸರಿನ ಬಂಗಲೆಗೆ ಕರೆತರಲಾಗಿತ್ತು.
2007: ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಗುಲ್ಬರ್ಗ ನಗರದ ಕೆಲವೆಡೆ ಈದಿನ ಮಧ್ಯಾಹ್ನ 12.39ರ ಸುಮಾರಿಗೆ ಲಘು ಭೂಕಂಪ ಸಂಭವಿಸಿ, ಜನ ಗಾಬರಿಯಾದರು. ಆಳಂದ ತಾಲ್ಲೂಕಿನ ಖಜೂರಿ, ಚಿತ್ತಾಪುರ ತಾಲ್ಲೂಕಿನ ಶಹಾಬಾದ್, ಚಿಂಚೋಳಿ ಹಾಗೂ ಸೇಡಂನಲ್ಲೂ ಭೂಮಿ ಕಂಪಿಸಿತು. ಭೂಮಿ ಕಂಪಿಸಿದಾಗ ಕೆಲ ಸೆಕೆಂಡುಗಳ ಕಾಲ ಅದರ ಅನುಭವವಾಯಿತು. ಮೇಜಿನ ಮೇಲಿನ ವಸ್ತುಗಳು ಅಲುಗಾಡಿದವು. ಲಾತೂರಿನಲ್ಲಿ ಕೂಡಾ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1ರಷ್ಟಿತ್ತು. ಕೆಲವು ವರ್ಷಗಳ ಹಿಂದೆ ಇಲ್ಲಿ ಭಾರೀ ಭೂಕಂಪ ಸಂಭವಿಸಿತ್ತು.
2006: ಮುಂಬೈ ಮಾಜಿ ಪೊಲೀಸ್ ಆಯುಕ್ತ ಆರ್. ಎಸ್. ಶರ್ಮಾ ನೇಮಕದಲ್ಲಿ ಛಾಪಾ ಹಣ ಬಳಕೆಯಾಗಿದ್ದು ಕಾಂಗ್ರೆಸ್ ಹಾಗೂ ಎನ್ಸಿಪಿಯ ಪ್ರಮುಖ ನಾಯಕರು ಹಗರಣದಲ್ಲಿ ಪಾಲುದಾರರಾಗಿದ್ದಾರೆ ಎಂಬ ಅಂಶವು ಕನ್ನಡಿಗೆ ಪೊಲೀಸ್ ಅಧಿಕಾರಿ ದಿಲೀಪ್ ಕಾಮತ್ ಅವರು ನಡೆಸಿದ `ಬ್ರೈನ್ ಮ್ಯಾಪಿಂಗ್' ಪರೀಕ್ಷೆಯಲ್ಲಿ ಬಹಿರಂಗಗೊಂಡಿತು. ಎರಡು ಕಡೆ ದಾಳಿ ನಡೆಸಿದ್ದ ಕಾಮತ್ ಸಾಕಷ್ಟು ನಕಲಿ ಛಾಪಾಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
2006: ಚಿತ್ರದುರ್ಗದ ಮುರುಘಾಮಠ ನೀಡುವ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಗೆ ರಾಜ್ಯಸಭೆ ಸದಸ್ಯೆ ಖ್ಯಾತ ನಟಿ ಶಬಾನಾ ಆಜ್ಮಿ ಆಯ್ಕೆಯಾದರು. `ಬಸವಶ್ರೀ' ಪ್ರಶಸ್ತಿ ಸಿನೆಮಾ ತಾರೆಯೊಬ್ಬರಿಗೆ ಲಭಿಸಿದ್ದು ಇದೇ ಮೊದಲು.
1995: ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಸಲೀಲ್ ಚೌಧರಿ ನಿಧನ.
1990: ಪ್ರಸಾರ ಭಾರತಿ ಮಸೂದೆಗೆ ಸಂಸತ್ ಒಪ್ಪಿಗೆ.
1988: ದಕ್ಷಿಣ ಲಂಡನ್ನಿನ ಹನ್ನೊಂದು ವರ್ಷ ಹನ್ನೊಂದು ದಿನ ವಯಸ್ಸಿನ ಥಾಮಸ್ ಗ್ರೆಗೋರಿ ಇಂಗ್ಲಿಷ್ ಕಡಲ್ಗಾಲುವೆಯನ್ನು 11 ಗಂಟೆ 54 ನಿಮಿಷಗಳಲ್ಲಿ ಈಜಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.
1972: ಖ್ಯಾತ ಹಿಂದುಸ್ತಾನಿ ಸಂಗೀತಗಾರ ಉಸ್ತಾದ್ ಅಲಾವುದ್ದೀನ್ ಖಾನ್ ಅವರು ತಮ್ಮ 110ನೇ ವಯಸ್ಸಿನಲ್ಲಿ ನಿಧನರಾದರು.
1963: ಖ್ಯಾತ ಸಾಹಿತಿ ಮಂಜೇಶ್ವರ ಗೋವಿಂದ ಪೈ ನಿಧನ.
1960: ಭಾರತದ ಮಿಲ್ಖಾಸಿಂಗ್ ರೋಮ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಓಟದ ಒಲಿಂಪಿಕ್ ದಾಖಲೆಯನ್ನು ಮುರಿದರು. ಆದರೆ ದಕ್ಷಿಣ ಆಫ್ರಿಕಾದ ಮಾಲ್ಕೋಮ್ ಸ್ಪೆನ್ಸ್ ಅವರಿಂದ 0.1 ಸೆಕೆಂಡುಗಳಷ್ಟು ಹಿಂದೆ ಬಿದ್ದು ಕಂಚಿನ ಪದಕ ಕಳೆದುಕೊಂಡರು. ಇದೊಂದು ಅತ್ಯದ್ಭುತ ಓಟದ ಸ್ಪರ್ಧೆಯಾಗಿತ್ತು. ಮೊದಲ ಇಬ್ಬರು ಜಾಗತಿಕ ದಾಖಲೆಗಳನ್ನು ಮುರಿದರೆ, ಅವರನ್ನು ಹಿಂಬಾಲಿಸಿದ್ದ ಮೂವರು ಒಲಿಂಪಿಕ್ ದಾಖಲೆಗಳನ್ನು ಮುರಿದರು. ರಾಷ್ಟ್ರದ 38 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ 400 ಮೀಟರ್ ಓಡಿದ ಮಿಲ್ಖಾಸಿಂಗ್ ಒಲಿಂಪಿಕ್ಸಿನಲ್ಲಿ ಅಥ್ಲೆಟಿಕ್ಸಿನ ಅಂತಿಮ ಸ್ಪರ್ಧೆಗೆ ಅರ್ಹತೆಪಡೆದ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಭಾಜನರಾದರು.
1956: ರಾಜ್ಯಗಳ ಪುನರ್ ವಿಂಗಡಣಾ ಯೋಜನೆ ಜಾರಿಗೆ ತರುವ ಶಾಸನಾಂಶವಾದ ರಾಜ್ಯಾಂಗ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಈ ಯೋಜನೆ ನವೆಂಬರ್ 1ರಂದು ಜಾರಿಗೆ ಬರಲಿದ್ದು ದೇಶದ ಎಲ್ಲ ಜನರ, ಎಲ್ಲ ರಾಜಕೀಯ ಪಕ್ಷಗಳ ಸಹಕಾರ ದೊರೆಯುವ ನಂಬಿಕೆ ಇದೆ ಎಂದು ಗೃಹ ಸಚಿವ ಪಂಡಿತ ಗೋವಿಂದ ವಲ್ಲಭ ಪಂತ್ ಹೇಳಿದರು.
1956: ಕೊಡಗು ವಿಧಾನಸಭೆಯ ಅಂತಿಮ ಅಧಿವೇಶನವು `ಕೊಡಗು ಕಾಫಿ ಹೊಟ್ಟು ಹತೋಟಿ (ತಿದ್ದುಪಡಿ) ಮಸೂದೆ'ಯನ್ನು ಅಂಗೀಕರಿಸಿತು. ವಿಧಾನಸಭಾಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.
1948: ನೆದರ್ಲೆಂಡ್ಸ್ ರಾಣಿಯಾಗಿ ಜೂಲಿಯಾನಾ ಆಯ್ಕೆ.
1941: ಜರ್ಮನ್ ಆಕ್ರಮಿತ ಪ್ರದೇಶಗಳಲ್ಲಿ ಆರು ವರ್ಷ ಮೀರಿದ ಎಲ್ಲ ಯಹೂದಿಗಳು ಡೇವಿಡ್ ನ ಹಳದಿ ನಕ್ಷತ್ರಗಳನ್ನು ಧರಿಸಬೇಕು ಎಂದು ಆಜ್ಞಾಪಿಸಲಾಯಿತು.
1889: ಕಾಂಗ್ರೆಸ್ ನಾಯಕ, ದೇಶಭಕ್ತ, ವಕೀಲ ಶರತ್ ಚಂದ್ರ ಬೋಸ್ (6-9-1889ರಿಂದ 20-2-1950) ಅವರು ಬಂಗಾಳದ ಕಲ್ಕತ್ತಾದಲ್ಲಿ ಜಾನಕಿನಾಥ ಅವರ ಮಗನಾಗಿ ಜನಿಸಿದರು. ಇವರು ಉಗ್ರ ರಾಷ್ಟ್ರೀಯವಾದಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಹೋದರ. ಬಂಗಾಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಮತ್ತು ಫಾರ್ವರ್ಡ್ ಬ್ಲಾಕ್ ನೇತಾರರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದ ಶರತ್ ಚಂದ್ರ ಬೋಸ್ 1936ರಲ್ಲಿ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾದರು. 1936ರಿಂದ 1945ರವರೆಗೆ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಬಂಗಾಳ ವಿಭಜನೆಗೆ ಅವರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.
1888: ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ತಂದೆ ವರ್ತಕ ಹಾಗೂ ಗ್ರೇಟ್ ಬ್ರಿಟನ್ನಿಗೆ 1937-40ರಲ್ಲಿ ರಾಯಭಾರಿಯಾಗಿದ್ದ ಜೋಸೆಫ್ ಪ್ಯಾಟ್ರಿಕ್ ಕೆನಡಿ (1888-1969) ಜನ್ಮದಿನ.
1880: ಲಂಡನ್ನಿನ ಓವಲ್ ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಜೊತೆಗೆ ಕ್ರಿಕೆಟ್ ಆಟವಾಡಿತು. ಇದು ಇಂಗ್ಲೆಂಡಿನಲ್ಲಿ ನಡೆದ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
Subscribe to:
Post Comments (Atom)
No comments:
Post a Comment