My Blog List

Friday, October 9, 2009

ಇಂದಿನ ಇತಿಹಾಸ History Today ಅಕ್ಟೋಬರ್ 08

ಇಂದಿನ ಇತಿಹಾಸ

ಅಕ್ಟೋಬರ್ 08


ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ 77ನೇ ಹುಟ್ಟು ಹಬ್ಬಕ್ಕಿಂತ ಮೂರುದಿನಗಳ ಮೊದಲು ಪಟ್ನಾದಲ್ಲಿ ನಿಧನರಾದರು.

2014: ನ್ಯೂಯಾರ್ಕ್ : ಸಾಮೂಹಿಕ ಶುಚಿತ್ವ ಕಾರ್ಯ­ಕ್ರಮ­­ಕ್ಕಾಗಿ ಭಾರ­ತದ ಯುವಕ ಅನೂಪ್ ಜೈನ್ ಅವರು 2014ರ ಸಾಲಿನ ‘ವೈಸ್ ಲಿಟ್ಜ್ ಜಾಗತಿಕ ನಾಗರಿಕ’ ಪ್ರಶಸ್ತಿಗೆ ಆಯ್ಕೆ­ಯಾದರು. ಪ್ರಶಸ್ತಿ ಸುಮಾರು ₨61 ಲಕ್ಷ (1 ಲಕ್ಷ ಡಾಲರ್) ನಗದು ಒಳ­ಗೊಂಡಿದೆ. ಬಿಹಾರದಲ್ಲಿ 2011ಕ್ಕೆ ‘ಹ್ಯೂಮ­ನರ್ ಪವರ್ (ಎಚ್­ಪಿ)’ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾರತದಲ್ಲಿ ಸಮುದಾಯ ನಿರ್ಮಲೀ­ಕರಣ ಸೌಲಭ್ಯಗಳನ್ನು ಅಭಿ­ವೃದ್ಧಿ­ಪಡಿಸಿ ವಿಶ್ವಕ್ಕೆ ಮಾದ­ರಿ­ಯಾಗುವ ಮೂಲಕ ಅನೂಪ್ ಜೈನ್ ಈ ಪ್ರಶಸ್ತಿಗೆ ಭಾಜನರಾದರು. ಕಾಕತಾಳಿಯವೆಂದರೆ, ಇಲ್ಲಿನ ಸೆಂಟ್ರ­ಲ್­­ಪಾರ್ಕ್­­ನಲ್ಲಿ ನಡೆದ ವಿಶ್ವ ನಾಗರಿಕ ಉತ್ಸವದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಜನ­ರನದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲೇ ಈ ಪ್ರಶಸ್ತಿ ಘೋಷಣೆಯಾಯಿತು. ‘ಅನೂಪ್ ಅವರು ಮಾಡಿರುವ ಕಾರ್ಯ­ಗಳು 2019ರೊಳಗೆ ಭಾರತ­ವನ್ನು ಶೌಚಾ­ಲಯ ಮುಕ್ತ­ ರಾಷ್ಟ್ರ­ವ­ನ್ನಾಗಿ­ಸ­ಬೇಕೆಂಬ ಪ್ರಧಾನಿ ಮೋದಿ ಅವರ ಆಶಯಕ್ಕೆ ಅನುಗುಣವಾಗಿದೆ’ ಎಂದು ಸಂಘಟಕರು ತಿಳಿಸಿದರು. ಅನೂಪ್ ಮಾಡಿರುವ ಪ್ರಯತ್ನ­ಗಳು ರೋಗ ತಡೆಯಲು ಸಹಾಯ ಮತ್ತು ಮಲಮೂತ್ರ ನೀರಿನಲ್ಲಿ ಬೆರೆತು ಜಲಜನ್ಯ ಕಾಯಿಲೆ ಹರಡುವುದನ್ನು ಶೌಚಾಲಯಗಳು ತಡೆಗಟ್ಟುತ್ತವೆ. ಇದು ಭಾರತಕ್ಕೆ ತೀರಾ ಅಗತ್ಯವಿರುವ ಸದೃಢ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ  ಕಾರಣ­ವಾಗಲಿದೆ. ‘ಜನರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಏನು ಮಾಡ­­ಬೇಕು ಎನ್ನುವುದನ್ನು ಅನೂಪ್ ತೋರಿಸಿ­ಕೊಟ್ಟಿದ್ದಾರೆ. ಇದು ಸಾವಿ­ರಾರು ಜನ­ರಿಗೆ ಸ್ಫೂರ್ತಿಯಾಗಲಿದೆ’ ಎಂದು ಮೆಲ್ಬರ್ನ್ ಮೂಲದ ವೈಸ್ಲಿಟ್ಜ್ ಫೌಂಡೇ­ಶನ್ನ ಸ್ಥಾಪಕ ಮತ್ತು ಅಧ್ಯಕ್ಷ ಅಲೆಕ್ಸ್ ವೈಸ್ಲಿಟ್ಜ್ ಹೇಳಿದರು.

2014: ಸ್ಟಾಕ್ಹೋಂ : ‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿ­ಗಳು 2014ರ ಸಾಲಿನ ರಸಾಯನ­ಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ­ಯಾದರು. ಅಮೆರಿಕದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೊಯೆರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಈ ಗೌರ­ವಕ್ಕೆ ಪಾತ್ರರಾದವರು. ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮ­­­ದರ್ಶಕವು ಸಾಂಪ್ರದಾಯಿಕ ದ್ಯುತಿ­ಸೂಕ್ಷ್ಮ­ದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್ ಸ್ವೀಡಿಸ್ ಅಕಾ­ಡೆಮಿ ಹೇಳಿತು.  ‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮ­ದರ್ಶ­ಕ­ದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯ­ವಾಗಿದೆ’ ಎಂದು ಸ್ವೀಡಿಸ್ ಅಕಾಡೆಮಿ ತಿಳಿಸಿತು. 54 ವರ್ಷದ ಬೆಟ್ಜಿಗ್ ಅವರು ವರ್ಜಿನಿ­ಯಾದ ಆಶ್ಬರ್ನ್ನ ಹೊವಾರ್ಡ್ ಹ್ಯೂಸ್ ಮೆಡಿಕಲ್ ವೈದ್ಯ­ಕೀಯ ಸಂಸ್ಥೆ­ಯಲ್ಲಿ ಉದ್ಯೋಗಿ­. ಮೊಯೆರ್ನರ್ ಅವರು ಕ್ಯಾಲಿ­ಫೋರ್ನಿಯಾದ ಸ್ಟ್ಯಾನ್­ಫೊರ್ಡ್ ವಿಶ್ವ­ವಿದ್ಯಾಲಯದಲ್ಲಿ  ಪ್ರೊಫೆ­ಸರ್. 51 ವರ್ಷದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿ­ಟ್ಯೂಟ್ ಫಾರ್ ಬಯೋಪಿಸಿಕಲ್ ಕೆಮೆ­ಸ್ಟ್ರಿಯ ನಿರ್ದೇಶಕರು. ‘ನನಗೆ ಆಶ್ಚರ್ಯವಾಗಿದೆ. ಈ ಸುದ್ದಿ  ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಹೆಲ್ ಪ್ರತಿಕ್ರಿಯಿಸಿದ್ದಾರೆ.
2008: ಶಾಸ್ತ್ರೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತು. ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿತು. 'ದೀರ್ಘ ಕಾಲದಿಂದ ಗಂಡ-ಹೆಂಡತಿಯಂತೆ ಒಟ್ಟಿಗೇ ವಾಸಿಸುವ ಪುರುಷ-ಮಹಿಳೆಯರ ಕೆಲ ಪ್ರಕರಣಗಳಲ್ಲಿ ಮಹಿಳೆಯರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಸಂಘರ್ಷ ನಡೆಸುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಪುರುಷರು ಹಿಂದೂ ವಿವಾಹ ಕಾಯ್ದೆ ಹಾಗೂ ಇತರೆ ಮದುವೆ ಕಾಯ್ದೆಗಳನ್ನು ಮುಂದಿಟ್ಟುಕೊಂಡು ತಾವು ಈ ಮಹಿಳೆಯೊಂದಿಗೆ ಮದುವೆಯೇ ಆಗಿಲ್ಲ ಎಂದೇ ವಾದಿಸುತ್ತಿರುವ ಸಂದರ್ಭಗಳು ಅಧಿಕವಾಗಿ ಕಂಡು ಬರುತ್ತಿವೆ. ಇವರು ತಮ್ಮ ಜವಾಬ್ದಾರಿ ಹಾಗೂ ಪರಿಹಾರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ ಈ ದಿಸೆಯಲ್ಲಿ ಅಪರಾಧ ದಂಡ ಸಂಹಿತೆ ಕಲಂ 125ಕ್ಕೆ ತಿದ್ದುಪಡಿ ತರಬೇಕು' ಎಂದು ನ್ಯಾಯಮೂರ್ತಿ ವಿ.ಎಸ್. ಮಳೀಮಠ್ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಮಹಾರಾಷ್ಟ್ರ ಸರ್ಕಾರ ಈದಿನ ಒಪ್ಪಿಕೊಂಡಿತು.

2008: ಹಿಂದಿನ ಎಲ್ಲ ದಾಖಲೆಗಳನ್ನು ದಾಟಿಕೊಂಡು ಏರಿಕೆ ಕಂಡ ಚಿನ್ನದ ದರ, ಪ್ರತಿ 10 ಗ್ರಾಂಗೆ ಈದಿನ ರೂ 450 ರಷ್ಟು ಹೆಚ್ಚಳವಾಗಿ ರೂ. 13,850 ಆಯಿತು. ಜುಲೈ 15 ರಂದು ಚಿನ್ನದ ದರ ಗರಿಷ್ಠ ಪ್ರತಿ 10 ಗ್ರಾಂಗೆ ರೂ 13,650 ರಷ್ಟು ಏರಿಕೆ ಕಂಡಿತ್ತು.

2008: ಫ್ರೆಂಚ್ ಪ್ರಜೆ ಹಾಗೂ ಕುಖ್ಯಾತ ಕೊಲೆಗಾರ 64 ವರ್ಷದ ಚಾರ್ಲ್ಸ್ ಗುರುಮುಖ್ ಶೋಭರಾಜ್ ಈದಿನ ತನ್ನ 20 ವರ್ಷದ ನೇಪಾಳಿ ಪ್ರಿಯತಮೆ ನಿಹಿತಾ ಬಿಸ್ವಾಸ್ ಜೊತೆ ಮದುವೆಯಾದ. ಇಡೀ ನೇಪಾಳ ದಸರಾ ಸಂಭ್ರಮದಲ್ಲಿ ಮುಳುಗಿದ್ದಾಗ ಕಠ್ಮಂಡು ಜೈಲಿನಲ್ಲಿ ಕಾನೂನು ವಿಧಿ ವಿಧಾನಗಳ ಮೂಲಕ ಶೋಭರಾಜ್ ಮದುವೆಯಾದ. ಸರಳ-ಕ್ಲುಪ್ತ ಘಳಿಗಯಲ್ಲಿ ಸಾಂಪ್ರದಾಯಿಕವಾಗಿ ಆತ ನಿಹಿತಾಳ ಪಾಣಿಗ್ರಹಣ ಮಾಡಿದ ಎಂದು ವಧುವಿನ ಹಿರಿಯ ಸಹೋದರ ವಿಜಯ್ ತಿಳಿಸಿದರು. ಈ ಸಂದರ್ಭದಲ್ಲಿ ನಿಹಿತಾಳ ತಾಯಿ ಹಾಗೂ ಶೋಭರಾಜ್ ಪರ ವಕಾಲತ್ತು ವಹಿಸಿರುವ ವಕೀಲೆ ಶಕುಂತಲಾ ಥಾಪಾ ಹಾಜರಿದ್ದರು. ಈ ವರ್ಷದ ಆರಂಭದಲ್ಲಿ ಜೈಲಿನಲ್ಲಿ ಶೋಭರಾಜ್ ಗೆ ಫ್ರೆಂಚ್ ದ್ವಿಭಾಷಿಯಾಗಿ ಕೆಲಸ ಮಾಡಲು ನಿಹಿತಾ ಆಗಮಿಸಿದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಮೊದಲ ನೋಟದಲ್ಲೇ ಪ್ರೇಮ ಗಟ್ಟಿಗೊಂಡ ಪರಿಣಾಮ ಇವರು ಜುಲೈ ತಿಂಗಳಲ್ಲಿ ತಮ್ಮ `ನಿಶ್ಚಿತಾರ್ಥ' ಕಾರ್ಯಕ್ರಮವನ್ನೂ ಪೂರೈಸಿಕೊಂಡಿದ್ದರು.

2007: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ಸಂಜೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಜನತಾದಳ (ಎಸ್) ಶಾಸಕರು ಮಿತ್ರ ಪಕ್ಷವಾದ ಬಿಜೆಪಿಗೆ ಸರ್ಕಾರ ರಚಿಸಲು ಬೆಂಬಲ ನೀಡಲು ಕೊನೆ ಗಳಿಗೆಯಲ್ಲಿ ತೆಗೆದುಕೊಂಡ ತೀರ್ಮಾನ ಅರ್ಥ ಕಳೆದುಕೊಂಡಿತು. ಆದರೆ ಸರ್ಕಾರ ರಚಿಸುವ ಯಾವ ಪ್ರಸ್ತಾವವನ್ನೂ ಬಿಜೆಪಿ ಮಂಡಿಸಿರಲಿಲ್ಲ. ಮುಖ್ಯಮಂತ್ರಿ ರಾಜೀನಾಮೆಗೆ ಮುನ್ನ ಇಡೀ ದಿನ ರಾಜಧಾನಿಯಲ್ಲಿ ಹಠಾತ್ ರಾಜಕೀಯ ಬೆಳವಣಿಗೆಗಳು ನಡೆದವು. ಬೆಳಿಗ್ಗೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಸರ್ಕಾರವನ್ನು ತತ್ ಕ್ಷಣವೇ ವಜಾ ಮಾಡಬೇಕೆಂದು ಆಗ್ರಹಿಸಿತು. ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ರಾಜಭವನಕ್ಕೆ ಕರೆಸಿದ ರಾಜ್ಯಪಾಲರು ಸರ್ಕಾರಕ್ಕೆ ಇರುವ ಬಹುಮತ ಸಾಬೀತುಪಡಿಸಲು ಸೂಚಿಸಿ, ಸರ್ಕಾರಕ್ಕೆ ಬೆಂಬಲ ನೀಡಿದ 113 ಶಾಸಕರ ಹೆಸರು ನೀಡಲು ಆದೇಶಿಸಿದರು. ಸಂಜೆ 7.30ರೊಳಗೆ ಈ ಪ್ರಕ್ರಿಯೆ ಪೂರ್ಣವಾಗದಿದ್ದರೆ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಸಂಜೆ 6.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಆರಂಭವಾದ ದಳ (ಎಸ್) ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಪಕ್ಷದ ವರಿಷ್ಠರ ತೀರ್ಮಾನಕ್ಕೆ ವಿರುದ್ಧವಾದ ನಿರ್ಧಾರ ತೆಗೆದುಕೊಂಡರು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನೀಡುವ ಪತ್ರ ಸಿದ್ಧಗೊಂಡು, ಮುಖ್ಯಮಂತ್ರಿ ರಾಜೀನಾಮೆಯೊಂದಿಗೆ ಆ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಅತ್ತ ಜನತಾದಳ ವಿರುದ್ಧ ಧರ್ಮಯಾತ್ರೆ ಆರಂಭಿಸಿದ್ದ ಬಿಜೆಪಿ ಧುರೀಣ ಯಡಿಯೂರಪ್ಪ ಅವರಿಗೆ ಈ ಸಂದೇಶ ರವಾನೆಯಾಗಿ, ಯಡಿಯೂರಪ್ಪ ಪಕ್ಷಾಧ್ಯಕ್ಷ ಡಿ.ವಿ. ಸದಾನಂದಗೌಡರ ಜೊತೆಗೆ ಬೆಂಗಳೂರಿಗೆ ಧಾವಿಸಿದರು. ಆದರೆ ರಾಷ್ಟ್ರೀಯ ನಾಯಕರಿಂದ ಒಪ್ಪಿಗೆ ಲಭಿಸದ ಕಾರಣ ಬಿಜೆಪಿ ಧುರೀಣರು ಸರ್ಕಾರ ರಚನೆಯ ಕೋರಿಕೆ ಮಂಡಿಸಲು ಮುಂದಾಗಲಿಲ್ಲ. ರಾಷ್ಟ್ರಪತಿ ಆಡಳಿತದ ಹೇರಿಕೆಯೇ ಖಚಿತವಾಯಿತು.
2006ರ ಜನವರಿ 18ರಂದು ಬಿಜೆಪಿ ಜತೆ ಕೈ ಜೋಡಿಸಿದ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಬಹುಮತ ಕಳೆದುಕೊಂಡ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ರಾಜ್ಯಪಾಲ ಟಿ.ಎನ್. ಚತುರ್ವೇದಿ ಸೂಚನೆಯಂತೆ ಜನವರಿ 27ರಂದು ವಿಶ್ವಾಸ ಮತ ಗಳಿಸಲು ವಿಫಲರಾಗಿ 28ರಂದು ರಾಜೀನಾಮೆ ಸಲ್ಲಿಸಿದ್ದರು. ಫೆಬ್ರುವರಿ 3ರಂದು ಜನತಾದಳ- ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

2007: ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ್ದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜನತಾದಳ ಎಸ್. ಮುಖಂಡ ಮಹಿಮ ಪಟೇಲ್ ಮೌಲ್ಯ- ಆದರ್ಶಗಳನ್ನು ಪ್ರತಿಪಾದಿಸುವ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದರು.

2007: ಈಗ ಎಲ್ಲರ ಕೈಯಲ್ಲೂ ಮೊಬೈಲ್. ಅದರೊಂದಿಗೆ ಬಿಡಲಾಗದ ನಂಟು. ಅದನ್ನು ಅಂಗಿಯ ಜೇಬಲ್ಲಿ ಇಟ್ಟುಕೊಂಡರೆ ಹೃದಯ ಸಂಬಂಧಿ ಕಾಯಿಲೆ, ಪ್ಯಾಂಟಿಗೆ ಸಿಕ್ಕಿಸಿಕೊಂಡ ಮೊಬೈಲ್ ಪೌಚಿನಲ್ಲಿ ಇಟ್ಟುಕೊಂಡರೆ ಕಿಡ್ನಿ ಪ್ರಾಬ್ಲೆಮ್ ಹೀಗೆ ಮೊಬೈಲ್ ಬಳಕೆಯ ಅಪಾಯಗಳ ಸುದ್ದಿ ಬರುತ್ತಿರುವಾಗಲೇ ಲಂಡನ್ನಿನಿಂದ ಬಂದ ಸುದ್ದಿ ಇನ್ನಷ್ಟು ಆತಂಕಕಾರಿ. ದಶಕಕ್ಕೂ ಹೆಚ್ಚು ಕಾಲ ಮೊಬೈಲ್ ಬಳಸುವುದರಿಂದ ಮೆದುಳು ಸಂಬಂಧಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸ್ವೀಡನ್ನಿನ ಸಂಶೋಧಕರು ವಿಶ್ವಮಟ್ಟದಲ್ಲಿ ನಡೆಸಿದ 11 ಅಧ್ಯಯನಗಳು ತಿಳಿಸಿವೆ ಎಂಬ ಸುದ್ದಿ ಲಂಡನ್ನಿನಿಂದ ಪ್ರಕಟಗೊಂಡಿತು. ಮೊಬೈಲ್ ಹೊರಹಾಕುವ ವಿಕಿರಣಗಳೇ ಈ ಅವಾಂತರಕ್ಕೆ ಮುಖ್ಯ ಕಾರಣ. ದೀರ್ಘಕಾಲ ಮೊಬೈಲ್ ಬಳಸುವವರಲ್ಲಿ ಮೆದುಳು ಸಂಬಂಧಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಎರಡರಷ್ಟು ಹೆಚ್ಚು ಎನ್ನುತ್ತದೆ ಒರೆಬ್ರೋ ವಿಶ್ವವಿದ್ಯಾಲಯದ ಪ್ರೊಫೆಸರ್ ಲರ್ನೆಟ್ ಹಾರ್ಡೆಲ್ ಅವರ ನೇತ್ವತ್ವದ ಸಂಶೋಧಕರ ತಂಡ. ಮೆದುಳಿನ ಬಳಿ ಕ್ಯಾನ್ಸರ್ ಗಡ್ಡೆ ಬೆಳೆಯಲು ಸಾಕಷ್ಟು ಸಮಯ ಹಿಡಿಯಬಹುದು. ಹಾಗಾಗಿ 10 ವರ್ಷಗಳ ಕಾಲ ದಿನಕ್ಕೆ 1 ಗಂಟೆಗೂ ಹೊತ್ತು ಮೊಬೈಲ್ ಬಳಸಿದರೂ ಮೆದುಳಿನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿವೆ ಈ ಅಧ್ಯಯನಗಳು. ಮಕ್ಕಳು ಮೊಬೈಲ್ ಬಳಸುವುದಕ್ಕೆ ಕಡಿವಾಣ ಹಾಕದಿದ್ದರೆ ಅವರ ಸುಕೋಮಲ ಕೆನ್ನೆಗಳಿಗೆ ಹಾಗೂ ಇಡೀ ನರ ವ್ಯವಸ್ಥೆಗೆ ಧಕ್ಕೆಯುಂಟಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬುದು ಅಧ್ಯಯನಗಳ ಎಚ್ಚರಿಕೆ.

2007: ವೈದ್ಯಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಆಕರಕೋಶಗಳ ಸಂಶೋಧನೆಗಾಗಿ ಮಾರಿಯೊ ಕೇಪ್ಚಿ, ಮಾರ್ಟಿನ್ ಇವಾನ್ಸ್ ಹಾಗೂ ಆಲಿವರ್ ಸ್ಮಿತ್ಸ್ ತಂಡಕ್ಕೆ 2007ನೇ ಸಾಲಿನ ನೊಬೆಲ್ (ವೈದ್ಯಕೀಯ) ಪ್ರಶಸ್ತಿ ಘೋಷಿಸಲಾಯಿತು. ಆಕರಕೋಶಗಳನ್ನು ಬಳಸಿ ವಂಶವಾಹಿಯಲ್ಲಿ ಬದಲಾವಣೆ ತರುವುದರ ಕುರಿತು ಇಲಿಗಳ ಮೇಲೆ ನಡೆಸಿದ ಸಂಶೋಧನೆಗಾಗಿ ಈ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ದೊರಕಿತು. ಪ್ರಶಸ್ತಿಯು 10 ದಶಲಕ್ಷ ಸ್ವೀಡಿಷ್ ಕ್ರೌನ್ (15.40 ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸ್ವೀಡನ್ನಿನ ಕಾರ್ಲೊನಿಸ್ಕಾ ಸಂಸ್ಥೆ ಪ್ರಕಟಿಸಿತು. ಇಟಲಿಯಲ್ಲಿ ಜನಿಸಿದ ಕೇಪ್ಚಿ ಸದ್ಯ ಅಮೆರಿಕದ ಪ್ರಜೆ. ಇವಾನ್ ಹಾಗೂ ಸ್ಮಿತ್ಸ್ ಅವರು ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಆದರೆ ಈಗ ಇವಾನ್, ಬ್ರಿಟನ್ನಿನ ಹಾಗೂ ಸ್ಮಿತ್ಸ್ ಅಮೆರಿಕದ ಪ್ರಜೆ.

2007: ಅತಿ ಕಡಿಮೆ ದರದಲ್ಲಿ ಚಲನಚಿತ್ರಗಳ ವಿಸಿಡಿ ಮತ್ತು ಡಿವಿಡಿಗಳನ್ನು ಬಿಡುಗಡೆ ಮಾಡಿ ಗೃಹ ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಪ್ರಮುಖ ಐಟಿ ಸಂಸ್ಥೆ `ಮೌಸರ್ ಬೇರ್' ಭಾರತದ ಅತಿ ದೊಡ್ಡ ವಿಡಿಯೋ ಸಂಸ್ಥೆ `ಅಲ್ಟ್ರಾ ವಿಡಿಯೋ'ದಿಂದ 900 ಚಲನಚಿತ್ರಗಳ ಹಕ್ಕು ಖರೀದಿಸಿತು. `ಅಲ್ಟ್ರಾ ವಿಡಿಯೋ'ದಿಂದ 800 ಹಿಂದಿ ಮತ್ತು 100 ಗುಜರಾತಿ ಚಲನಚಿತ್ರಗಳ ಹಕ್ಕು ಖರೀದಿಸಿರುವುದಾಗಿ `ಮೌಸರ್ ಬೇರ್' ಪ್ರಕಟಣೆ ತಿಳಿಸಿತು. ಮೌಸರ್ ಬೇರ್ ಪ್ರಸ್ತುತ 2,200 ಚಿತ್ರಗಳ ಹಕ್ಕು ಸ್ವಾಮ್ಯ ಪಡೆದಿದೆ. ಈ ಹೊಸ ಖರೀದಿಯಿಂದ ಸಂಸ್ಥೆಗೆ ಒಟ್ಟು 2,500 ಹಿಂದಿ ಮತ್ತು 400 ಗುಜರಾತಿ ಚಿತ್ರಗಳ ಹಕ್ಕು ಸಿಕ್ಕಿದಂತಾಯಿತು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ (ಮನರಂಜನಾ ವ್ಯಾಪಾರ) ಹರೀಶ್ ದಯಾನಿ ಹೇಳಿದರು. ಅಲ್ಟ್ರಾ ವಿಡಿಯೋದಿಂದ ಹಕ್ಕು ಖರೀದಿಸಿರುವ ಚಿತ್ರಗಳಲ್ಲಿ ಶೋಲೆ, ಕೋಯಿ ಮಿಲ್ ಗಯಾ, ಬಾಂಬೆ ಟು ಗೋವಾ, ಹೀರೋ ನಂ.1, ಸಾಗರ್, ಮೈನೇ ಪ್ಯಾರ್ ಕಿಯಾ, ಹಂ ಆಪ್ಕೇ ಹೈ ಕೌನ್, ಆರಾಧನಾ, ಆಂದಾಜ್ ಅಪ್ನಾ ಅಪ್ನಾ, ಅಮರ್ ಪ್ರೇಮ್, 36 ಚೈನಾ ಟೌನ್, ಇಕ್ಬಾಲ್ ಹಾಗೂ ಇತರ ಚಿತ್ರಗಳೂ ಸೇರಿವೆ.

2006: ದಲಿತ ಮಹಿಳೆಯೊಬ್ಬಳು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತಹ ರಾಜಕೀಯ ವೇದಿಕೆ ಕಲ್ಪಿಸಿ, ಮನುವಾದಿ ಸಂಸ್ಕೃತಿ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿ 1981ರಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಒಕ್ಕೂಟ ರಚಿಸಿ, 1984ರಲ್ಲಿ ಅದನ್ನೇ ಬಹುಜನ ಸಮಾಜ ಪಕ್ಷವಾಗಿ (ಬಿಎಸ್ಪಿ) ಪರಿವರ್ತಿಸಿದ ದಲಿತ ನಾಯಕ ಕಾನ್ಶಿರಾಂ (1934-2006) ನವದೆಹಲಿಯಲ್ಲಿ ನಿಧನರಾದರು. 72 ವರ್ಷಗಳ ಕಾನ್ಶಿರಾಂ ಅವಿವಾಹಿತರಾಗಿ ಉಳಿದು ತಾವು ಹೊಂದಿದ್ದ ಸರ್ಕಾರಿ ಉದ್ಯೋಗವನ್ನೂ 1971ರಲ್ಲಿ ತ್ಯಜಿಸಿ ದಲಿತರು ಮತ್ತು ಶೋಷಿತ ವರ್ಗಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1992ರಲ್ಲಿ ಉತ್ತರ ಪ್ರದೇಶದ ಇತವಾಹ್ ಮತ್ತು 1996ರಲ್ಲಿ ಪಂಜಾಬಿನ ಹಾಶೀರ್ಪುರ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜ್ಯಸಭೆ ಸದಸ್ಯರೂ ಆಗಿದ್ದರು. 1934ರಲ್ಲಿ ಪಂಜಾಬಿನ ರೋಪರ್ ಜಿಲ್ಲೆಯ ಖವಾಸ್ಪುರ ಗ್ರಾಮದ ಸಿಖ್ ದಲಿತ ಕುಟುಂಬದಲ್ಲಿ ಹರಿಸಿಂಗ್ ಎಂಬ ಸಾಮಾನ್ಯ ರೈತನ ಮಗನಾಗಿ ಜನಿಸಿದ್ದರು. ಅವರು ಸ್ಥಾಪಿಸಿದ ಬಿಎಸ್ಪಿ 90ರ ದಶಕದಲ್ಲಿ ರಾಷ್ಟ್ರೀಯ ಪಕ್ಷವಾಗಿ ಮನ್ನಣೆ ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿಯಿತು. ಅವರ ಶಿಷ್ಯೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.

2005: ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಭೂಕಂಪ ಸಂಭವಿಸಿ 73,000ಕ್ಕೂ ಹೆಚ್ಚು ಮಂದಿ ಮೃತರಾದರು. ಭಾರತದ ಭಾಗದಲ್ಲಿ ಇರುವ ಕಾಶ್ಮೀರದಲ್ಲೂ ಭೂಕಂಪಕ್ಕೆ ಸಿಲುಕಿ 1500ಕ್ಕೂ ಹೆಚ್ಚು ಜನ ಅಸು ನೀಗಿದರು.

1979: ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ 77ನೇ ಹುಟ್ಟು ಹಬ್ಬಕ್ಕಿಂತ ಮೂರುದಿನಗಳ ಮೊದಲು ಪಟ್ನಾದಲ್ಲಿ ನಿಧನರಾದರು.

1958: ಸ್ಟಾಕ್ ಹೋಮಿನ ಕರೋಲಿನ್ ಸ್ಕಾ ಇನ್ ಸ್ಟಿಟ್ಯೂಟಿನಲ್ಲಿ ಡಾ. ಆರ್ನಿ ಸೆನ್ನಿಂಗ್ ಅವರು ಮೊತ್ತ ಮೊದಲ ಆಂತರಿಕ ಹೃದಯ ಪೇಸ್ ಮೇಕರನ್ನು ಸ್ವೀಡಿಷ್ ವ್ಯಕ್ತಿ ಅರ್ನೆ ಲಾರ್ಸೆನ್ ಗೆ ಅಳವಡಿಸಿದರು. ಈ ಪೇಸ್ ಮೇಕರಿನ ಮಾದರಿ (ಪ್ರೊಟೊಟೈಪ್) ಕೇವಲ 3 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿತು. ಆದರೆ ಅರ್ನೆ ಲಾರ್ಸೆನ್ ನಂತರ 26 ಪೇಸ್ ಮೇಕರುಗಳನ್ನು ಕಾಲ ಕಾಲಕ್ಕೆ ಅಳವಡಿಸಿಕೊಂಡು 40 ವರ್ಷಗಳ ಕಾಲ ಎಲ್ಲರಂತೆಯೇ ಬದುಕಿದ.

1955: ಸಾಹಿತಿ ಡಿ. ನಂಜಪ್ಪ ಜನನ.

1952: ಸಾಹಿತಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಜನನ.

1936: ಖ್ಯಾತ ಹಿಂದಿ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರರಾದ ಮುನ್ಶಿ ಪ್ರೇಮ್ ಚಂದ್ (1880-1936) ಅವರು ತಮ್ಮ 56ನೇ ವಯಸ್ಸಿನಲ್ಲಿ ವಾರಾಣಸಿಯಲ್ಲಿ ನಿಧನರಾದರು.

1935: ಭಾರತೀಯ ಅಥ್ಲೆಟ್ ಮಿಲ್ಖಾಸಿಂಗ್ ಜನ್ಮದಿನ. 1960ರ ರೋಮ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಒಲಿಂಪಿಕ್ ದಾಖಲೆಯನ್ನು ಅವರು ಸೃಷ್ಟಿಸಿದರು. ಆದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

1933: ಸಾಹಿತಿ, ಗ್ರಂಥಪಾಲಕ ಟಿ.ವಿ. ವೆಂಕಟರಮಣಯ್ಯ ಅವರು ವೆಂಕಟರಮಣಯ್ಯ, ತಿಮ್ಮಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ ಜನಿಸಿದರು.

1929: ಸಾಹಿತಿ ಮಾಲತಿ ಸುಬ್ರಹ್ಮಣ್ಯಂ ಜನನ.

1918: ಯೂರೋಪಿನ ಕಾಲಾಳು ಸೇನೆಯ 82ನೇ ವಿಭಾಗದ ಅಮೆರಿಕನ್ ಸಾರ್ಜೆಂಟ್ ಆಲ್ವಿನ್ ಸಿ. ಯಾರ್ಕ್ ಏಕಾಂಗಿಯಾಗಿ ಒಬ್ಬ ಜರ್ಮನ್ ಮೇಜರ್ ಹಾಗೂ 132 ಮಂದಿಯನ್ನು ಸೆರೆ ಹಿಡಿದು 35 ಮೆಷಿನ್ಗನ್ಗಳನ್ನು ವಶಪಡಿಸಿಕೊಂಡದ್ದಲ್ಲದೆ ವೈರಿ ಪಡೆಯ 25 ಸೈನಿಕರನ್ನು ಕೊಂದು ಮೊದಲನೇ ಜಾಗತಿಕ ಸಮರದ ಹೀರೊ ಎನ್ನಿಸಿಕೊಂಡರು.

1871: ಶಿಕಾಗೋ ನಗರದ ಕೈಗಾರಿಕಾ ಪ್ರದೇಶ ಸೇರಿದಂತೆ ನಾಲ್ಕು ಚದರ ಮೈಲುಗಳ ವ್ಯಾಪ್ತಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ನಗರದ ನೈಋತ್ಯಭಾಗದಿಂದ ಆರಂಭವಾದ ಬೆಂಕಿ ಮರದ ಕಟ್ಟಡಗಳು ಸೇರಿದಂತೆ ಸಿಕ್ಕಿದ್ದೆಲ್ಲವನ್ನೂ ನುಂಗಿ ಹಾಕಿತು. ಮಿಶಿಗನ್ ಪಟ್ಟಣಕ್ಕೆ ತಲುಪುವ ವೇಳೆಗೆ ಬೆಂಕಿಯ ಕೆನ್ನಾಲಿಗೆ ದುರ್ಬಲಗೊಂಡು ಆರಿತು. ಅಕ್ಟೋಬರ್ 8ರಿಂದ 10ರವರೆಗೆ ನಡೆದ ಈ ಅಗ್ನಿಕಾಂಡದ್ಲಲಿ 250 ಜನ ಪ್ರಾಣ ಕಳೆದುಕೊಂಡರು. 90,000 ಜನ ನಿರಾಶ್ರಿತರಾದರು. ಅಂದಾಜು 20 ಲಕ್ಷ ಡಾಲರ್ ಮೊತ್ತದ ಆಸ್ತಿಪಾಸ್ತಿ ನಷ್ಟವಾಯಿತು.

No comments:

Advertisement