Sunday, October 11, 2009

ಇಂದಿನ ಇತಿಹಾಸ History Today ಅಕ್ಟೋಬರ್ 10

ಇಂದಿನ ಇತಿಹಾಸ

ಅಕ್ಟೋಬರ್ 10

ಭಾರತದ ನಾಲ್ವರು ಗಣ್ಯ ವ್ಯಕ್ತಿಗಳು ಈ ದಿನ ಜನಿಸಿದರು. ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕಡಲ ಕರೆಯ ಭಾರ್ಗವ, ನಡೆದಾಡುವ ವಿಶ್ವಕೋಶ, ಒಂದು ವಿಶ್ವವಿದ್ಯಾಲಯ ಎಂದೇ ಖ್ಯಾತರಾದ ಶಿವರಾಮ ಕಾರಂತ (10-10-1902ರಿಂದ-9-12-1997) ಅವರು 1902 ರಲ್ಲಿ ಈದಿನ ಜನಿಸಿದರು. ಭಾರತೀಯ ವಕೀಲ ಹಾಗೂ ರಾಷ್ಟ್ರೀಯವಾದಿ ಬದ್ರುದ್ದೀನ್ ತ್ಯಾಬ್ಜಿ (1844-1906) ಅವರು 1844ರಲ್ಲಿ ಈದಿನ ಹುಟ್ಟಿದರು. ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ಎಂದೇ ಪ್ರಸಿದ್ಧರಾದ ರಾಸಿಪುರಂ ಕೃಷ್ಣಸ್ವಾಮಿ ನಾರಾಯಣ್ (1906-2001) ಅವರು 1906ರಲ್ಲಿ ಈದಿನ ಜನಿಸಿದರು. ಭಾರತದ ಖ್ಯಾತ ಚಿತ್ರನಟಿ ರೇಖಾ ಅವರು 1954ರಲ್ಲಿ ಇದೇ ದಿನ ಹುಟ್ಟಿದರು.
2014: ಓಸ್ಲೊ:: ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿ (60) ಮತ್ತು ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್ಝೈ ಅವರು 2014ರ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾದರು. ಹದಿನೇಳು ವರ್ಷದ ಮಲಾಲ ನೊಬೆಲ್ ಶಾಂತಿ ಪುರಸ್ಕಾರ ಪಡೆಯುತ್ತಿರುವ ಅತ್ಯಂತ ಕಿರಿಯ ಸಾಧಕಿ ಎನಿಸಿದರು. ಕೈಲಾಸ್ ಸತ್ಯಾರ್ಥಿ ಅವರು ೩೦ ವರ್ಷಗ­ಳಿಂದಲೂ ‘ಬಚಪನ್ ಬಜಾವೊ’ ಆಂದೋಲನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡವರು. ಮಕ್ಕಳ ಮಾರಾಟ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಈ ಸಂಸ್ಥೆ ಮುಂಚೂಣಿ­ಯಲ್ಲಿ ನಿಂತು ಕೆಲಸ ಮಾಡುತ್ತಿದೆ.  ‘ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣದ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಿದ ಚಳವಳಿಗಾಗಿ ಕೈಲಾಸ್ ಮತ್ತು ಮಲಾಲ ಅವರಿಗೆ ಪುರಸ್ಕಾರ ನೀಡಲಾಗುತ್ತಿದೆ’ ಎಂದು ಆಯ್ಕೆ ಸಮಿತಿ ಹೇಳಿತು. ‘ಗಾಂಧೀವಾದಿಯಾಗಿರುವ ಕೈಲಾಸ್ ಸತ್ಯಾರ್ಥಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಕಳ್ಳಸಾಗಣೆ ತಡೆಗೆ ಆಂದೋಲನ ರೂಪಿಸಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಸಂದರ್ಭದಲ್ಲೆಲ್ಲಾ ಅವರು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ’ ಎಂದು ಸಮಿತಿ ಹೇಳಿತು. ‘ಮಲಾಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ದನಿಯಾಗಿದ್ದಾರೆ. ಹಿಂದುಳಿದ ರಾಷ್ಟ್ರಗಳ ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮಲಾಲ ಅವರ ಕಾರ್ಯ ಪರಿಣಾಮಕಾರಿಯಾಗಿದೆ. ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಿದೆ’ ಎಂದು ಸಮಿತಿ ತಿಳಿಸಿತು. ‘ಕೈಲಾಸ್ ಮತ್ತು ಮಲಾಲ ಅವರನ್ನು ಶಾಂತಿ ಪುರಸ್ಕಾರಕ್ಕೆ ಜಂಟಿಯಾಗಿ ಆಯ್ಕೆ ಮಾಡಿರುವುದು ಒಬ್ಬ ಹಿಂದೂ– ಒಬ್ಬ ಮುಸ್ಲಿಂ ಹಾಗೂ ಒಬ್ಬ ಭಾರತೀಯ– ಒಬ್ಬ ಪಾಕಿಸ್ತಾನಿ ಒಂದೇ ವಿಷಯದ ಬಗ್ಗೆ ಹೋರಾಟ ನಡೆಸುತ್ತಿರುವುದನ್ನು ಗುರುತಿಸಿದಂತಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿತು. ‘ಈ ಪುರಸ್ಕಾರ ಮಕ್ಕಳ ಹಕ್ಕುಗಳ ಹೋರಾಟಕ್ಕೆ ಸಂದಿರುವ ಗೌರವ’ ಎಂದು ಕೈಲಾಸ್ ಸತ್ಯಾರ್ಥಿ ಪ್ರತಿಕ್ರಿಯಿಸಿದರು. ಮದರ್ ತೆರೆಸಾ ಬಳಿಕ ಭಾರತಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಂದಿರುವುದು ಇದು ಎರಡನೇ ಬಾರಿ.

2014: ವಾಷಿಂಗ್ಟನ್ : ಪ್ರತಿಷ್ಠಿತ ಜೇಮ್ಸ್ ಬಿಯರ್ಡ್ ಪ್ರತಿ­ಷ್ಠಾನ ನೀಡುವ ‘ಲೀಡರ್ಶಿಪ್’ ಪ್ರಶಸ್ತಿಗೆ ಭಾರತೀಯ ಮೂಲದ ಅಮೆರಿಕ ಕಾರ್ಯ­ಕರ್ತೆ ನವಿನಾ ಖನ್ನಾ ಆಯ್ಕೆಯಾದರು. ಆಹಾರ, ಪಾನೀಯ ವೃತ್ತಿಪರ­ರಿಗೆ ಅಮೆರಿಕದ ಅತ್ಯುನ್ನತ ಗೌರವ ಇದು.

2008: ಆರ್ಬಿಐ ಹಾಗೂ ಕೇಂದ್ರ ಹಣಕಾಸು ಸಚಿವರ ತಕ್ಷಣದ ಕ್ರಮಗಳು ಹಾಗೂ ನಿರೀಕ್ಷೆ ಮೀರಿ ಹಣದುಬ್ಬರದ ಕುಸಿತ ಹಣಹೂಡಿಕೆದಾರರಲ್ಲಿ ವಿಶ್ವಾಸ ಮರಳಿಸುವುದು ಸಾಧ್ಯವಾಗದೆ, ಮುಂದುವರೆದ ತೀವ್ರ ಮಾರಾಟ ಒತ್ತಡದಿಂದಾಗಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸುಮಾರು 801 ಅಂಶಗಳಷ್ಟು ಕುಸಿತ ಕಂಡಿತು. ಬೆಳಗ್ಗೆ ವಹಿವಾಟು ಆರಂಭವಾದಾಗಲೇ ಸೂಚ್ಯಂಕ 1,000 ಅಂಶಗಳಷ್ಟು ಕುಸಿಯಿತು. ದಿನದ ವಹಿವಾಟು ಅಂತ್ಯವಾದಾಗ ಒಂದಷ್ಟು ನಷ್ಟವನ್ನು ತುಂಬಿಕೊಂಡ ಷೇರು ಸಂವೇದಿ ಸೂಚ್ಯಂಕ 10,527.85ರಲ್ಲಿ ಅಂತ್ಯ ಕಂಡು 800.51 ಅಂಶ ಅಥವಾ ಶೇ. 7.07ರಷ್ಟು ಕುಸಿತವನ್ನು ದಾಖಲಿಸಿತು.

2008: ಕುಖ್ಯಾತ ಅಪರಾಧಿ ಚಾರ್ಲ್ಸ್ ಶೋಭರಾಜ್, ನೇಪಾಳಿ ಮೂಲದ ತನ್ನ ಹದಿಹರೆಯದ ಪ್ರಿಯತಮೆ ನಿಹಿತಾ ಬಿಸ್ವಾಸಳನ್ನು ವಿಜಯ ದಶಮಿ ದಿನದಂದು ಮದುವೆಯಾಗಿರುವುದಾಗಿ ಭಾರತೀಯ ಮೂಲದ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು `ವದಂತಿ' ಎಂದು ಕಠ್ಮಂಡುವಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ಸ್ಪಷ್ಟ ಪಡಿಸಿದರು. `ಭಾರತೀಯ ಮಾಧ್ಯಮಗಳಲ್ಲಿ ಮದುವೆಯ ಕುರಿತು ವರದಿಗಳು ಪ್ರಕಟಗೊಳ್ಳುವ ಮೊದಲು ತಮಗೆ ಈ ಮಾಹಿತಿ ಇರಲಿಲ್ಲ' ಎಂದು ಕಾರಾಗೃಹದ ಭದ್ರತೆಯ ಜವಾಬ್ದಾರಿ ಹೊಂದಿರುವ ಹಿರಿಯ ಅಧಿಕಾರಿ ಹೇಳಿದರು.

2008: ಕಾನೂನು ಸುವ್ಯವಸ್ಥೆ ಸಂಬಂಧಿತ ಸಮಸ್ಯೆಗಳಲ್ಲಿ ಷಾಮೀಲಾಗುವ ಮಹಿಳೆಯರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲು ಹಾಗೂ ಎಲ್ಲ ಜಿಲ್ಲೆಗಳ ಕೇಂದ್ರ ಕಚೇರಿಗಳಲ್ಲಿ ಮಹಿಳಾ ಕಮಾಂಡೋ ಘಟಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಲು ಮಣಿಪುರ ಸರ್ಕಾರ ನಿರ್ಧರಿಸಿತು. ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಕೇಂದ್ರದ 2008-09ರ ಸಾಲಿನ ವಿಶೇಷ ಯೋಜನಾ ನೆರವು ಕಾರ್ಯಕ್ರಮದಲ್ಲಿ ಹಣ ನಿಗದಿ ಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಈ ಮಹಿಳಾ ಕಮಾಂಡೋಗಳು ಉಗ್ರಗಾಮಿಗಳನ್ನೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಮೂಲಗಳು ಹೇಳಿದವು. ಕಾನೂನು ಸುವ್ಯವಸ್ಥೆ ಸಮಸ್ಯೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಸ್ಪಷ್ಟ ಪಡಿಸಿದವು.

2008: ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ಅವರಿಗೆ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಪಿತ್ತಕೋಶ ಸರ್ಜರಿ ನಡೆಸಲಾಯಿತು. ನೊಬೆಲ್ ಪುರಸ್ಕೃತರಾದ 73 ವರ್ಷದ ದಲಾಯಿ ಲಾಮಾ ಅವರನ್ನು ಕಿಬ್ಬೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2008: ಕೊಸೊವೊದಿಂದ ಇಂಡೋನೇಷ್ಯಾದವರೆಗೆ ಹಲವಾರು ವಲಯಗಳಲ್ಲಿ ಬೇರುಬಿಟ್ಟಿರುವ ಸಂಘರ್ಷದ ವಾತಾವರಣ ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಿನ್ಲೆಂಡ್ನ ಮಾಜಿ ಅಧ್ಯಕ್ಷ ಮಾರ್ಟಿ ಅಹಿಸ್ತಾರಿ (71) ಅವರು ಈ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾದರು. ಸುಮಾರು ಮೂರು ದಶಕಕ್ಕೂ ಹೆಚ್ಚಿನ ಸಮಯದಿಂದ ಹಲವಾರು ಖಂಡಗಳಲ್ಲಿ ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸಲು ಅವರು ಪಟ್ಟಿರುವ ಶ್ರಮ ಅಪಾರ ಎಂದು ನಾರ್ವೆ ನೊಬೆಲ್ ಸಮಿತಿಯ ಮುಖ್ಯಸ್ಥ ಓಲೆ ಡ್ಯಾನ್ ಬೋಲ್ಟ್ ಮೊಯೇಸ್ ಹೇಳಿದರು. ಮಾರ್ಟಿ ಅವರ ಈ ಶ್ರಮವು ವಿವಿಧ ರಾಷ್ಟ್ರಗಳ ಮಧ್ಯೆ ಭ್ರಾತೃತ್ವ ನಿರ್ಮಿಸಿ ಶಾಂತಿಗೆ ಕಾರಣವಾಗಿದ್ದು ಅಲ್ಫ್ರೆಡ್ ನೊಬೆಲ್ಲರ ಆಶಯಕ್ಕೆ ಅನುಗುಣವಾಗಿದೆ ಎಂದೂ ಹೇಳಿದರು.

2007: ಅವಿಭಜಿತ ಜನತಾ ಪರಿವಾರದ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ (84) ಅವರು ಈದಿನ ಬೆಂಗಳೂರಿನಲ್ಲಿ ನಿಧನರಾದರು. ಕೆಲ ಕಾಲದಿಂದ ಅಸ್ವಸ್ಥರಾಗಿ ವೊಕ್ಹಾರ್ಡ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ರಾತ್ರಿ 8.45ರ ವೇಳೆಗೆ ಕೊನೆಯುಸಿರೆಳೆದರು. ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ 1924ರ ಜೂನ್ ಆರರಂದು ರಾಯಪ್ಪ ಹಾಗೂ ಶಿವಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಬೊಮ್ಮಾಯಿ, 1988ರಲ್ಲಿ 10 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ, 1996ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸ್ವಂತ ಊರಾದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದ ಬೊಮ್ಮಾಯಿ ಅವರಿಗೆ ಅವರ ತಾಯಿ ಪರ ಊರಿನಿಂದ ಬರುತ್ತಿದ್ದ ಬಡ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಊಟವೇ ಸಮಾಜವಾದದ ಮೊದಲ ಪಾಠವಾಗಿ ಪರಿಣಮಿಸಿತು. ಕಾನೂನು ವ್ಯಾಸಂಗ ಮಾಡುವಾಗ ಎಡಪಂಥೀಯ ವಿಚಾರಗಳಿಗೆ ಮನಸೋತು ಪಶ್ಚಿಮ ಬಂಗಾಳದ ಎಂ.ಎನ್. ರಾಯ್ ಅವರ ರ್ಯಾಡಿಕಲ್ ಹ್ಯೂಮನಿಸ್ಟ್ ಪಕ್ಷಕ್ಕೆ ಸೇರಿದ್ದ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಕ್ರಾಂತಿಕಾರಿ ಮುರುಗೋಡು ಮಹದೇವಪ್ಪ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡರು. ಇದೇ ಕಾರಣದಿಂದ ಬ್ರಿಟಿಷರು ಬಂಧನ ವಾರೆಂಟ್ ಹೊರಡಿಸಿದಾಗ, ಕಣ್ಣು ತಪ್ಪಿಸಿ ಕೆಲ ಕಾಲ ದೇಶ ಪರ್ಯಟನೆ ಮಾಡಿದರು. ಈ ಸಂದರ್ಭದಲ್ಲೇ ಸುಭಾಶ್ ಚಂದ್ರ ಬೋಸರನ್ನು ಹುಬ್ಬಳ್ಳಿಗೆ ಆಹ್ವಾನಿಸಿ ಬಹಿರಂಗ ಸಭೆ ಏರ್ಪಡಿಸಿದ್ದರು. ಕಾನೂನು ವ್ಯಾಸಂಗ ಮುಗಿಸಿದ ನಂತರ ಗೋವಾ ವಿಮೋಚನ ಚಳವಳಿ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿ, ಬಂಧಿತರ ಪರ ವಕಾಲತ್ತು ಸಹ ಮಾಡಿದ್ದರು. 1967ರಲ್ಲಿ ಕುಂದಗೋಳ ಕ್ಷೇತ್ರದಿಂದ ಲೋಕಸೇವಕ ಸಂಘದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 69ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಒತ್ತಡದಿಂದ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ವಿಭಜನೆಯಾದಾಗ ವೀರೇಂದ್ರ ಪಾಟೀಲರ ಸಂಸ್ಥಾ ಕಾಂಗ್ರೆಸ್ ಜೊತೆ ಸೇರಿದರು. 1971ರಲ್ಲಿ ಕುಂದಗೋಳದಿಂದ ಸ್ಪರ್ಧಿಸಿ ಸೋತು, 1972ರಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ಆಯ್ಕೆಯಾದರು. 75ರಿಂದ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದರು. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಕೆಲ ಕಾಲ ಭೂಗತರಾಗಿದ್ದರು. 1977ರಲ್ಲಿ ರಾಜ್ಯ ಜನತಾಪಕ್ಷದ ಉಪಾಧ್ಯಕ್ಷರಾದರು. 1978ರಲ್ಲಿ ಹೃದಯಾಘಾತದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದರೂ ಅಲ್ಲಿಂದಲೇ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. 1980ರಲ್ಲಿ ನವಲಗುಂದ, ನರಗುಂದ ರೈತರ ಹೋರಾಟದ ಮುಂಚೂಣಿಯಲ್ಲಿದ್ದ ಬೊಮ್ಮಾಯಿ, ಮಲಪ್ರಭಾ ವ್ಯಾಪ್ತಿಯ ರೈತರಿಗೆ ನೀರಾವರಿ ಕರ, ಭೂಕಂದಾಯ ಮತ್ತಿತರ ತೆರಿಗೆ ಮನ್ನಾ ಮಾಡಿಸುವಲ್ಲಿ ಯಶಸ್ವಿಯಾದರು. 1980ರಲ್ಲಿ ಜನತಾಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ, ಕಾಂಗ್ರೆಸ್ಸೇತರ ಸರ್ಕಾರ ರಚಿಸಲು ಕ್ರಾಂತಿರಂಗದ ಜೊತೆ ಸೇರಿ ಜನತಾರಂಗ ರಚನೆ ಮಾಡಲು ಯತ್ನ. ಫಲವಾಗಿ 1983ರಲ್ಲಿ ನಡೆದ ಚುನಾವಣೆಯಲ್ಲಿ ಜನತಾರಂಗಕ್ಕೆ ಗೆಲುವು ದೊರೆತು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಹೆಗಡೆ ಸಂಪುಟದಲ್ಲಿ ಕೈಗಾರಿಕೆ ಸಚಿವ. ಇವರ ಚಿಂತನೆಯ ಫಲವಾಗಿ ಎಲೆಕ್ಟ್ರಾನಿಕ್ ಸಿಟಿ ಆರಂಭ. ರಾಜ್ಯದಪ್ರಥಮ ಐಟಿ ಕಂಪನಿ ಟೆಕ್ಸಾಸ್ ಇನ್ ಸ್ಟ್ರೂಮೆಂಟ್ ಸ್ಥಾಪನೆಗೆ ಸಾಕಷ್ಟು ಪ್ರೋತ್ಸಾಹ. 1984ರಲ್ಲಿ ಹಣಕಾಸು ಸಚಿವ. 1985ರಲ್ಲಿ ವಿಧಾನಸಭೆಗೆ ಪುನರಾಯ್ಕೆಯಾಗಿ ಕಂದಾಯ ಸಚಿವರಾಗಿ ಅಧಿಕಾರ ಸ್ವೀಕಾರ. ಇದೇ ಅವಧಿಯಲ್ಲಿ ನಾಡಕಚೇರಿ ಸ್ಥಾಪನೆ ಮತ್ತು ಬೆಂಗಳೂರು ನಗರ ಜಿಲ್ಲೆ ಸ್ಥಾಪಿಸುವ ಜೊತೆಗೆ ಜಿಲ್ಲಾ ಪುನರ್ ವಿಂಗಡಣೆಗೆ ಚಾಲನೆ ನೀಡಿದರು. 1988ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ. ಜನತಾದಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಮುಖ್ಯಮಂತ್ರಿ ಪದವಿ ಬಹುಕಾಲ ಉಳಿಯಲಿಲ್ಲ. ಆಗಿನ ರಾಜ್ಯಪಾಲ ವೆಂಕಟಸುಬ್ಬಯ್ಯ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದರು. ಸಂವಿಧಾನ ವಿರೋಧಿ ಕ್ರಮವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಸುಪ್ರೀಂಕೋರ್ಟಿನವರೆಗೂ ಹೋರಾಟ. ಫಲವಾಗಿ ಬೊಮ್ಮಾಯಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ಸರ್ಕಾರದ ಬಹುಮತ ಪರೀಕ್ಷೆಗೆ ವಿಧಾನಸಭೆಯೇ ವೇದಿಕೆಯಾಗಬೇಕು ಎನ್ನುವ ಈ ಐತಿಹಾಸಿಕ ತೀರ್ಪು 'ಬೊಮ್ಮಾಯಿ ಪ್ರಕರಣ' ಎಂದೇ ಖ್ಯಾತಿ ಪಡೆದು, ಮಹತ್ವದ ತೀರ್ಪಾಗಿ ಉಳಿಯಿತು. 1990ರಲ್ಲಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷತೆ. ಇವರು ಅಧ್ಯಕ್ಷರಾಗಿದ್ದಾಗಲೇ ಜನತಾದಳ ಉತ್ತರ ಪ್ರದೇಶ, ಗುಜರಾತ್, ಒರಿಸ್ಸಾ, ಬಿಹಾರ ಹಾಗೂ ಹರಿಯಾಣಗಳಲ್ಲಿ ಅಧಿಕಾರ ಹಿಡಿಯಿತು. 1992ರಲ್ಲಿ ಒರಿಸ್ಸಾದಿಂದ ರಾಜ್ಯಸಭೆಗೆ ಆಯ್ಕೆ. 1996ರಲ್ಲಿ ಜನತಾದಳ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಮಾನವ ಸಂಪನ್ಮೂಲ ಖಾತೆ ಸಚಿವರಾಗಿ ಅಧಿಕಾರ ದೊರಕಿತು. ಈ ಅವದಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು ಸಾಕಷ್ಟು ಅನುದಾನ ಪಡೆದರೆ, ಹೈದರಾಬಾದಿನಲ್ಲಿ ಮೌಲಾನ ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಹಾಗೂ ಇಂದೋರಿನಲ್ಲಿ ಐಐಎಂ ಸ್ಥಾಪನೆಯಾಯಿತು. 1998ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಪುನರಾಯ್ಕೆ. ಜನತಾದಳ ವಿಭಜನೆ ಬಳಿಕ 2002ರಲ್ಲಿ ಎರಡನೇ ಸಾಲಿನ ಮುಖಂಡರು ರಚಿಸಿದ ಅಖಿಲ ಭಾರತ ಪ್ರಗತಿಪರ ಜನತಾದಳದ ಅಧ್ಯಕ್ಷ. 2004ರಲ್ಲಿ ರಾಜ್ಯಸಭೆ ಸದಸ್ಯತ್ವದಿಂದ ನಿವೃತ್ತಿ. ಸಕ್ರಿಯ ರಾಜಕಾರಣದಿಂದ ದೂರ.

2007: ಭಾರತ ಹಾಗೂ ವಿಯೆಟ್ನಾಂ ದೇಶಗಳ ನಡುವಿನ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಕೇತವಾಗಿ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪ್ರತಿಮೆಯನ್ನು ವಿಯೆಟ್ನಾಮಿನ ಹನೋಯಿಯಲ್ಲಿ ಇಂದಿರಾಗಾಂಧಿ ಅವರದೇ ಹೆಸರಿನ ಉದ್ಯಾನದಲ್ಲಿ ಸ್ಥಾಪಿಸಲಾಯಿತು. ಹನೋಯ್ ಪೀಪಲ್ಸ್ ಕಮಿಟಿ ಉಪಾಧ್ಯಕ್ಷ ಥಾಯ್ ಥನ್ಹಾ ಹಂಗ್ ಪ್ರತಿಮೆ ಅನಾವರಣಗೊಳಿಸಿದರು.

2007: ಜರ್ಮನಿಯ ಗೇರ್ ಹಾರ್ಡ್ ಎರ್ತಾಲ್ ಅವರು ರಸಾಯನ ಶಾಸ್ತ್ರ ವಿಭಾಗದಲ್ಲಿ 2007ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. `ಓಜೋನ್ ಪದರ ತೆಳುವಾಗುತ್ತಿರುವ' ಕುರಿತು ಮಾಡಿದ ಸಂಶೋಧನೆಗೆ ಈ ಪ್ರಶಸ್ತಿ ಲಭ್ಯವಾಯಿತು.

2007: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೆ ಎರಡು ಹಂತದ ಚುನಾವಣೆಯನ್ನು ಚುನಾವಣಾ ಆಯೋಗ ಪ್ರಕಟಿಸಿತು. ಗುಜರಾತಿನಲ್ಲಿ ಡಿಸೆಂಬರ್ 11 ಮತ್ತು 16ರಂದು ಹಾಗೂ ಹಿಮಾಚಲ ಪ್ರದೇಶದಲ್ಲಿ ನವೆಂಬರ್ 11 ಮತ್ತು ಡಿಸೆಂಬರ್ 19ರಂದು ಚುನಾವಣೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸಿದರು.

2007: ಸ್ತನ ಕ್ಯಾನ್ಸರಿಗೂ, ತಾಯಿಯ ನಿತಂಬಕ್ಕೂ (ಪೃಷ್ಠ) ಸಂಬಂಧ ಇದೆ ಎಂದು ಬ್ರಿಟನ್ನಿನ ವಿಜ್ಞಾನಿಗಳು ಇಂಗ್ಲೆಂಡಿನಲ್ಲಿ ಪ್ರಕಟಿಸಿದರು. ತಾಯಿಯ ಪೃಷ್ಠ ದೊಡ್ಡದಾಗಿ, ಹೆಚ್ಚು ವೃತ್ತಾಕಾರವಾಗಿದ್ದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಏಳು ಪಟ್ಟು ಹೆಚ್ಚು ಎಂದು `ಡೈಲಿ ಮೇಲ್' ಪತ್ರಿಕೆ ಈ ವಿಜ್ಞಾನಿಗಳ ಸಂಶೋಧನೆಯನ್ನು ಉದ್ಧರಿಸಿ ವರದಿ ಮಾಡಿತು. ತಾಯಿಯ ನಿತಂಬ ಆಕೆಯಲ್ಲಿರುವ ಓಸ್ಟ್ರೋಜನ್ ಹಾರ್ಮೋನಿನ ಉತ್ಪತ್ತಿಯ ಗುರುತು. ದೊಡ್ಡ ಪೃಷ್ಠವೆಂದರೆ ಕಾಮೋತ್ತೇಜಕ ಹಾರ್ಮೋನುಗಳ ಸಂಗ್ರಹ ಹೆಚ್ಚಿದೆ ಎಂದರ್ಥ. ಇದರಿಂದ ಆಕೆಯ ಮಗಳಲ್ಲಿ ಸ್ತನ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕ ಎಂದು ವಿಜ್ಞಾನಿ ಪ್ರೊ. ಡೇವಿಡ್ ಬಾರ್ಕರ್ ಹೇಳಿದರು. 1934ರಿಂದ 1944ರ ನಡುವೆ ಜನಿಸಿದ ಫಿನ್ಲೆಂಡಿನ ಆರು ಸಾವಿರಕ್ಕೂ ಹೆಚ್ಚು ಮಹಿಳೆಯರ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದರು. ತಾಯಿಯ ಪೃಷ್ಠದ ಗಾತ್ರ 30 ಸೆ.ಮೀ.ಗೂ ಹೆಚ್ಚಿದ್ದರೆ ಮಗಳಲ್ಲಿ ಬರುವ ಸ್ತನ ಕ್ಯಾನ್ಸರಿನ ಪ್ರಮಾಣ ಶೇಕಡ 60ಕ್ಕೂ ಹೆಚ್ಚಿತ್ತು ಎಂಬುದು ಅವರ ಸಂಶೋಧನೆಯ ವಿವರಣೆ.

2007: ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮುಖ ಸುಕ್ಕುಗಟ್ಟುವುದನ್ನು ನಿಯಂತ್ರಿಸಬಹುದು ಎಂದು ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಕಿತ್ತಳೆಯಲ್ಲಿ ಇರುವ ವಿಟಮಿನ್ ಸಿ ಚರ್ಮ ನೆರಿಗೆಗಟ್ಟುವುದನ್ನು ತಡೆಯುತ್ತದೆ ಎಂದು ಅವರು ತಿಳಿಸಿದರು.

2006: ಭಾರತವೂ ಸೇರಿದಂತೆ ಸುಮಾರು 150 ರಾಷ್ಟ್ರಗಳ 24,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಲಂಡನ್ನಿನ ಪ್ರತಿಷ್ಠಿತ ವೆಸ್ಟ್ ಮಿನ್ ಸ್ಟರ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಅನಿವಾಸಿ ಭಾರತೀಯ ಲಾರ್ಡ್ ಸ್ವರಾಜ್ ಪಾಲ್ ಅಧಿಕಾರ ವಹಿಸಿಕೊಂಡರು. ಈ ವಿಶ್ವವಿದ್ಯಾಲಯ 1838ರಲ್ಲಿ ಸ್ಥಾಪನೆಗೊಂಡಿದೆ. ವೋಲ್ವರ್ಹಾಂಪ್ಟನ್ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ಸ್ವರಾಜ್ ಪಾಲ್ ಏಕಕಾಲದಲ್ಲಿ ಎರಡು ವಿಶ್ವವಿದ್ಯಾಲಯಗಳ ಕುಲಪತಿಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ರಕ್ಷಣಾ ಹಗರಣವನ್ನು ತೆಹೆಲ್ಕಾ ಬಹಿರಂಗಪಡಿಸಿದ ಐದು ವರ್ಷಗಳ ಬಳಿಕ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ, ಪಕ್ಷದ ಮಾಜಿ ಖಜಾಂಚಿ ಆರ್.ಕೆ. ಜೈನ್ ಹಾಗೂ ನೌಕಾದಳದ ಮಾಜಿ ಮುಖ್ಯಸ್ಥ ಅಡ್ಮಿರಲ್ ಸುಶೀಲ್ ಕುಮಾರ್ ಅವರ ವಿರುದ್ಧ ನಿಯೋಜಿತ ನ್ಯಾಯಾಲಯದಲ್ಲಿ ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಿತು. ಜಾರ್ಜ್, ಜಯಾ ಹಾಗೂ ಜೈನ್ ವಿರುದ್ಧ 2 ಕೋಟಿ ರೂಪಾಯಿಗೂ ಅಧಿಕ ಲಂಚ ಸ್ವೀಕರಿಸಿದ ಆರೋಪ ಮತ್ತು ಸುಶೀಲ್ ಕುಮಾರ್ ವಿರುದ್ಧ 2000 ದಲ್ಲಿ ಇಸ್ರೇಲಿನಿಂದ ಬರಾಕ್ ಕ್ಷಿಪಣಿ ಖರೀದಿಸುವಾಗ ಅವ್ಯವಹಾರ ನಡೆಸಿದ ಆರೋಪಕ್ಕಾಗಿ ಎಫ್ ಐ ಆರ್ ದಾಖಲಿಸಲಾಯಿತು. ಬರಾಕ್ ಕ್ಷಿಪಣಿ ವ್ಯವಸ್ಥೆಯ ಖರೀದಿ ಸೇರಿದಂತೆ ಹಲವಾರು ಶಸ್ತ್ರಾಸ್ತ್ರ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು 2001ರಲ್ಲಿ ತೆಹೆಲ್ಕಾ ಡಾಟ್ ಕಾಮ್ ವೆಬ್ಸೈಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ `ಬಹಿರಂಗ'ಗೊಂಡಿತ್ತು.

2006: ಭಾರತೀಯ ಸಂಜಾತೆ ಯುವ ಲೇಖಕಿ, ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ 35 ವರ್ಷ ವಯಸ್ಸಿನ ಕಿರಣ ದೇಸಾಯಿ ಅವರ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಕಾದಂಬರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿತು. ಕಿರಣ ದೇಸಾಯಿ ಈ ಪ್ರಶಸ್ತಿ ಪಡೆದ ಎರಡನೇ ಅತ್ಯಂತ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಮ್ಮ ಎರಡನೇ ಕಾದಂಬರಿಗೆ ಪ್ರಶಸ್ತಿ ಪಡೆದಿರುವ ಕಿರಣ 50 ಸಾವಿರ ಪೌಂಡುಗಳ ಬಹುಮಾನ ಪಡೆದರು. ಕಿರಣ ದೇಸಾಯಿ ಖ್ಯಾತ ಕಾದಂಬರಿಗಾರ್ತಿ ಅನಿತಾ ದೇಸಾಯಿ ಅವರ ಮಗಳು. ಅನಿತಾ ದೇಸಾಯಿ ಅವರ ಕಾದಂಬರಿಗಳು ಮೂರು ಬಾರಿ ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದರೂ ಅವರಿಗೆ ಪ್ರಶಸ್ತಿ ಒಲಿದಿರಲಿಲ್ಲ. 1997ರಲ್ಲಿ ಆರುಂಧತಿ ರಾಯ್ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಲೇಖಕಿ ಎನಿಸಿಕೊಂಡಿದ್ದರು. 1991ರಲ್ಲಿ ಬೆನ್ ಒಕ್ರಿ ತಮ್ಮ 32ನೇ ವಯಸ್ಸಿನ್ಲಲಿ ಬೂಕರ್ ಪ್ರಶಸ್ತಿ ಪಡೆದಿದ್ದರು. ಅವರನ್ನು ಬಿಟ್ಟರೆ ಬೂಕರ್ ಮಡಿಲಿಗೆ ಹಾಕಿಕೊಂಡ ಅತ್ಯಂತ ಕಿರಿಯ ಲೇಖಕಿ ಕಿರಣ ದೇಸಾಯಿ. ಅಮ್ಮನಿಗೆ ಸಮರ್ಪಿಸಿದ್ದ ಈ ಕಾದಂಬರಿಯನ್ನು ಬರೆಯಲು ಕಿರಣ ಎಂಟು ವರ್ಷ ತೆಗೆದುಕೊಂಡಿದ್ದರು.

2006: ಮುಂಚೂಣಿಯ ಹೋಟೆಲ್ ಉದ್ಯಮಿ, ರಾಜ್ಯಸಭಾ ಸದಸ್ಯ ಲಲಿತ್ ಸೂರಿ(60) ಅವರು ಹೃದಯಾಘಾತದಿಂದ ಲಂಡನ್ನಿನಲ್ಲಿ ನಿಧನರಾದರು. ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಸೂರಿ 1947ರಲ್ಲಿ ಈಗಿನ ಪಾಕಿಸ್ಥಾನದ ರಾವಲ್ಪಿಂಡಿಯಲ್ಲಿ ಜನಿಸಿದ್ದರು.

2006: ಮನೆಗೆಲಸ, ಹೋಟೆಲ್, ಚಹಾದಂಗಡಿ, ಡಾಬಾ, ರೆಸಾರ್ಟ್ ಮತ್ತು ಮನರಂಜನಾ ತಾಣಗಳಲ್ಲಿ 14 ವರ್ಷಕ್ಕಿಂತ ಕಿರಿಯ ಮಕ್ಕಳನ್ನು ಕೆಲಸಕ್ಕೆ ನೇಮಕಗೊಳಿಸುವುದನ್ನು ನಿಷೇಧಿಸುವ ಬಾಲ ಕಾರ್ಮಿಕ ಕಾನೂನು ಜಾರಿಗೊಂಡಿತು. ಕಾಯ್ದೆ ಉಲ್ಲಂಘಿಸಿದವರಿಗೆ ಒಂದು ವರ್ಷದ ಜೈಲು ಶಿಕ್ಷೆ ಸೇರಿದಂತೆ ವಿವಿಧ ದಂಡನೆ ವಿಧಿಸುವ ಪ್ರಸ್ತಾವನೆಯುಳ್ಳ ಅಧಿಸೂಚನೆಂಯನ್ನು ಕಾರ್ಮಿಕ ಸಚಿವಾಲಯ ಹೊರಡಿಸಿತು.

2000: ಜಗತ್ತಿನ ಮೊತ್ತ ಮೊದಲ `ಮಹಿಳಾ ಪ್ರಧಾನಿ' ಸಿಲೋನಿನ (ಈಗಿನ ಶ್ರೀಲಂಕಾ) ಸಿರಿಮಾವೋ ಬಂಡಾರನಾಯಿಕೆ ತಮ್ಮ 84ನೇ ವಯಸಿನಲ್ಲಿ ಮೃತರಾದರು. ಸಿರಿಮಾವೋ ಅವರು ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಬಂಡಾರನಾಯಿಕೆ ಕುಮಾರತುಂಗ ಅವರ ತಾಯಿ. 1994ರ ನವೆಂಬರಿನಲ್ಲಿ ಸಿರಿಮಾವೋ ಅವರು ಪುನಃ ಪ್ರಧಾನಿಯಾದಾಗ ತಾಯಿ ಮತ್ತು ಮಗಳು ರಾಷ್ಟ್ರದ ಎರಡೂ ಉನ್ನತ ಹುದ್ದೆಗಳನ್ನು (ಪ್ರಧಾನಿ ಹಾಗೂ ಆಧ್ಯಕ್ಷಸ್ಥಾನ) ಹೊಂದಿದ ವಿಶೇಷ ದಾಖಲೆ ನಿರ್ಮಾಣವಾಯಿತು.

1986: ಇಸ್ರೇಲ್ ಪ್ರಧಾನಿ ಶಿಮೋನ್ ಪೆರೆಸ್ ರಾಜೀನಾಮೆ.

1947: ಸಾಹಿತಿ ಶೇಷಾದ್ರಿ ಕಿನಾರೆ ಜನನ.

1937: ಸಾಹಿತಿ ಕುಸುಮ ಸೊರಬ ಜನನ.

1936: ಸಾಹಿತಿ ವಸಂತ ಕುಷ್ಟಗಿ ಜನನ.

1933: ಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯು ಮನೆ ಬಳಕೆಗಾಗಿ `ಡ್ರೆಫ್ಟ್' ಹೆಸರಿನ ಮೊತ್ತ ಮೊದಲ ಡಿಟರ್ಜೆಂಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. 1920ರಲ್ಲಿಪ್ರಾಕ್ಟರ್ ಅಂಡ್ ಗ್ಯಾಂಬ್ಲ್ ಸಂಸ್ಥೆಯ ಸಂಶೋಧಕರು ಗ್ರೀಸ್ ಮತ್ತಿತರ ಕೊಳೆಗಳನ್ನು ಬಟ್ಟೆಯಿಂದ ತೆಗೆಯಲು ಸಾಧ್ಯವಿರುವಂತಹ ವಿಶೇಷವಾದ `ಪವಾಡದ ಕಣ'ಗಳನ್ನು ಸೃಷ್ಟಿಸಿದ್ದರು, ಡಿಟರ್ಜೆಂಟ್ ತಂತ್ರಜ್ಞಾನದ ಸಂಶೋಧನೆ ಶುಚೀಕರಣ ತಂತ್ರಜ್ಞಾನದಲ್ಲಿಕ್ರಾಂತಿಗೆ ನಾಂದಿ ಹಾಡಿತು.

1888: ಸಾಹಿತಿ ಸಾಲಿ ರಾಮಚಂದ್ರರಾಯ ಜನನ.

1886: `ಟುಕ್ಸೆಡೊ' ಡಿನ್ನರ್ ಜಾಕೆಟ್ ಮೊತ್ತ ಮೊದಲ ಬಾರಿಗೆ ಸಾರ್ವಜನಿಕರ ಮುಂದೆ ಪ್ರದರ್ಶನಗೊಂಡಿತು. ನ್ಯೂಯಾರ್ಕಿನ ಟುಕ್ಸೆಡೊ ಪಾರ್ಕ್ ಸೆಂಚುರಿ ಕ್ಲಬ್ಬಿನಲ್ಲಿ ಮೊತ್ತ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದರಿಂದ ಅದಕ್ಕೆ ಕ್ಲಬ್ಬಿನ ಹೆಸರು ಅಂಟಿಕೊಂಡಿತು.

No comments:

Advertisement