My Blog List

Monday, October 12, 2009

ಇಂದಿನ ಇತಿಹಾಸ History Today ಅಕ್ಟೋಬರ್ 12

ಇಂದಿನ ಇತಿಹಾಸ

ಅಕ್ಟೋಬರ್ 12


ವಿಶ್ವಾದ್ಯಂತದಿಂದ ಆಗಮಿಸಿದ ಸುಮಾರು 25,000ಕ್ಕೂ ಹೆಚ್ಚು ಭಾರತೀಯರ ಸಮ್ಮುಖದಲ್ಲಿ ಕೇರಳದ ಕೊಟ್ಟಾಯಂನ ಕ್ರೈಸ್ತ ಸನ್ಯಾಸಿನಿ ದಿವಂಗತ ಅಲ್ಫೋನ್ಸಾ ಅವರನ್ನು ಕ್ಯಾಥೋಲಿಕ್ ಚರ್ಚಿನ ಭಾರತದ ಮೊದಲ ಮಹಿಳಾ ಸಂತರನ್ನಾಗಿ ವ್ಯಾಟಿಕನ್ನಿನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ ಚೌಕದಲ್ಲಿ ನಡೆದ ಸಮಾರಂಭದಲ್ಲಿ 16 ನೇ ಪೋಪ್ ಬೆನೆಡಿಕ್ಟ್ ಅವರು ಅಲ್ಫೋನ್ಸಾ ಅವರಿಗೆ ಸಂತ ಗೌರವ ನೀಡಿದರು.


2014: ಜಮ್ಮು : ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಈದಿನ ನಸುಕಿನಲ್ಲಿ ಪಾಕಿಸ್ತಾನ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯರು ಗಾಯಗೊಂಡರು. 15 ಗಡಿ ಠಾಣೆಗಳನ್ನು ಗುರಿಯಾಗಿರಿಸಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆ ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿತು. ಪಾಕಿಸ್ತಾನದ ರೇಂಜರ್ ಗಳು ನಸುಕಿನ  2.10ರ ಸುಮಾರಿಗೆ ಜಮ್ಮುವಿನ ಆರ್ ಎಸ್ ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಂಡು ಹಾಗೂ ಷೆಲ್ ದಾಳಿ ನಡೆಸಿದ್ದು, ಮೂವರು ಗಾಯಗೊಂಡರು ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದರು. ಪ್ರಸಕ್ತ ತಿಂಗಳಲ್ಲಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಗೆ ಎಂಟು ಮಂದಿ ಭಾರತೀಯರು ಮೃತರಾಗಿದ್ದಾರೆ. ಸೇನೆಯ 13 ಯೋಧರು ಸೇರಿದಂತೆ 90 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಗಡಿಯಲ್ಲಿನ 113 ಹಳ್ಳಿಗಳಲ್ಲಿನ 32 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

2014: ವಿಶಾಖಪಟ್ಟಣ, ಹೈದರಾಬಾದ್ : ಪ್ರತಿ ಗಂಟೆಗೆ 170ರಿಂದ 180 ಕಿ.ಮೀ. ವೇಗದಲ್ಲಿ ಬೀಸಲಾರಂಭಿಸಿದ ಭೀಕರ ಗಾಳಿ, ಮಳೆಯೊಂದಿಗೆ ‘ಹುದ್ ಹುದ್’ ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸಿತು. ಮಾರುತಕ್ಕೆಸಿಲುಕಿ ಐವರು ಸಾವಿಗೀಡಾದರು. ಅಬ್ಬರದ ಗಾಳಿ ಸಹಿತ ಮಳೆಯಿಂದ ವಿದ್ಯುತ್ ಮತ್ತು ದೂರವಾಣಿ ಕಂಬಗಳಿಗೆ ಹಾನಿಯಾಗಿ, ಸಂಪರ್ಕ ಕಡಿತಗೊಂಡಿತು. ಎರಡು ರಾಜ್ಯಗಳ ಕರಾವಳಿ ತೀರದ ಜನರ ಬದುಕು ಅಸ್ತವ್ಯಸ್ಥವಾಯಿತು. ಆಂಧ್ರಪ್ರದೇಶದ ಕರಾವಳಿ ತೀರದ ನಾಲ್ಕು ಜಿಲ್ಲೆಗಳಲ್ಲಿ 90,000 ಜನರನ್ನು, ಒಡಿಶಾದ ಕರಾವಳಿ ತೀರದ ಜಿಲ್ಲೆಗಳಲ್ಲಿ 68 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಕರಾವಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಆಂಧ್ರಪ್ರದೇಶದ ಕರಾವಳಿಯಲ್ಲಿ ಮೂವರು ಹಾಗೂ ಒಡಿಶಾದ ಕರಾವಳಿಯಲ್ಲಿ ಇಬ್ಬರು ಸಾವಿಗೀಡಾದರು ಎಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿದವು.

2008: ವಿಶ್ವಾದ್ಯಂತದಿಂದ ಆಗಮಿಸಿದ ಸುಮಾರು 25,000ಕ್ಕೂ ಹೆಚ್ಚು ಭಾರತೀಯರ ಸಮ್ಮುಖದಲ್ಲಿ ಕೇರಳದ ಕೊಟ್ಟಾಯಂನ ಕ್ರೈಸ್ತ ಸನ್ಯಾಸಿನಿ ದಿವಂಗತ ಅಲ್ಫೋನ್ಸಾ ಅವರನ್ನು ಕ್ಯಾಥೋಲಿಕ್ ಚರ್ಚಿನ ಭಾರತದ ಮೊದಲ ಮಹಿಳಾ ಸಂತರನ್ನಾಗಿ ವ್ಯಾಟಿಕನ್ನಿನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ ಚೌಕದಲ್ಲಿ ನಡೆದ ಸಮಾರಂಭದಲ್ಲಿ 16 ನೇ ಪೋಪ್ ಬೆನೆಡಿಕ್ಟ್ ಅವರು ಅಲ್ಫೋನ್ಸಾ ಅವರಿಗೆ ಸಂತ ಗೌರವ ನೀಡಿದರು. ಸಿಸ್ಟರ್ ಅಲ್ಫೋನ್ಸಾ ಅಲ್ಲದೇ ಇಟಲಿ ಮೂಲದ ಗಟನೊ ಎರಿಕೊ, ಸ್ವಿಜರ್ಲ್ಯಾಂಡಿನ ಮೇರಿ ಬರ್ನಾರ್ಡ್ ಹಾಗೂ ಇಕ್ವೆಡಾರಿನ ನಾರ್ಸಿನಾ ಡಿ ಜೀಸಸ್ ಮಾರ್ಟಿಲೋ ಮೊರನ್ ಅವರಿಗೂ ಸಂತ ಗೌರವ ನೀಡಲಾಯಿತು. ಸಿಸ್ಟರ್ ಅಲ್ಫೋನ್ಸಾ ಅವರು ತಮ್ಮ 36ರ ಹರೆಯದಲ್ಲಿಯೇ ಇಹ ಲೋಕ ತ್ಯಜಿಸಿದ್ದರು. ಸುಮಾರು 50ಕ್ಕೂ ಹೆಚ್ಚು ವರ್ಷಗಳ ಕಾಲ ಅಲ್ಫೋನ್ಸಾ ಅವರ ಬದುಕು ಹಾಗೂ ಸೇವೆಗಳನ್ನು ಪರಿಶೀಲಿಸಿದ ಬಳಿಕ ವ್ಯಾಟಿಕನ್ ಚರ್ಚಿನ ಮಹೋನ್ನತ ಗೌರವವಾದ  ಸಂತ ಪದವಿಯನ್ನು ಅವರಿಗೆ ನೀಡಿತು. 2007ರ ಜೂನ್ 1ರಲ್ಲಿ ಅಲ್ಫೋನ್ಸಾ ಅವರನ್ನು ಪೋಪ್ ಬೆನೆಡಿಕ್ಟ್ ಅವರು ಸಂತ ಗೌರವಕ್ಕೆ ಆಯ್ಕೆ ಮಾಡಿದ್ದರು. ಅಲ್ಫೋನ್ಸಾ ಅವರು ಸಂತ ಗೌರವ ಪಡೆದ 2ನೇ ಭಾರತೀಯ ಸನ್ಯಾನಿಸಿ. ಇದಕ್ಕೂ ಮೊದಲು (19ನೇ ಶತಮಾನ) ಮುಂಬೈ ಮೂಲದ ಗೊನ್ಸಾಲೊ ಗಾರ್ಸಿಯಾ ಅವರಿಗೆ ಸಂತ ಗೌರವ ನೀಡಲಾಗಿತ್ತು.

2008: ಆಂಧ್ರದ ಅದಿಲಾಬಾದ್ ಜಿಲ್ಲೆ ಭೈನ್ಸಾ ಪಟ್ಟಣದಲ್ಲಿ ದುರ್ಗಾ ಮೂರ್ತಿಗಳ ವಿಸರ್ಜನೆ ವೇಳೆ ನಡೆದ ಕೋಮು ಗಲಭೆಯಲ್ಲಿ ನಾಲ್ವರು ಮೃತರಾದರು. ಈ ಪಟ್ಟಣದ ಸಮೀಪದ ವಟೋಲಿ ಗ್ರಾಮದಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಮಕ್ಕಳ ಸಹಿತ ಒಂದೇ ಕುಟುಂಬದ 6 ಮಂದಿ ಈದಿನ ಸಜೀವ ದಹನಗೊಂಡರು.

2008: ಆರನೇ ಬಾಹ್ಯಾಕಾಶ ಪ್ರವಾಸಿ ಸೇರಿದಂತೆ ಮೂವರ ತಂಡವನ್ನು ಹೊತ್ತ ರಷ್ಯಾದ ಕ್ಷಿಪಣಿ ವಾಹಕ ಸೋಯಜ್- ಎಫ್ ಜಿ ಕಜಕಸ್ಥಾನದ ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ಹಾರಿತು. ಮೂರು ಹಂತದ ಈ ವಾಹಕವು ಪೂರ್ವ ನಿಗದಿಯಂತೆ ಬೆಳಗ್ಗೆ 11.0 ಕ್ಕೆ (ಮಾಸ್ಕೊ ಕಾಲಮಾನ) ಗಗನನೌಕೆ ಸೋಯಜ್ ಟಿಎಂಎ- 12 ನೊಂದಿಗೆ ಗಗನಕ್ಕೆ ಏರಿತು. ಈ 18ನೇ ಬಾಹ್ಯಾಕಾಶ ಪ್ರಯಾಣಕ್ಕೆ ನಿಗದಿಯಾದ ಸೋಯಜ್ ನೌಕೆಯನ್ನು ಇಳಿಸಿಕೊಳ್ಳಲು ಅನುವಾಗುವಂತೆ ಅಕ್ಟೋಬರ್ 4ರಂದು ವಿಶ್ವದ ಏಕೈಕ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಉನ್ನತ ಕಕ್ಷೆಗೆ ಕಳುಹಿಸಲಾಗಿತ್ತು.

2007: ಭಾರತೀಯ ವಿಜ್ಞಾನಿ ಆರ್. ಕೆ. ಪಚೌರಿ ನೇತೃತ್ವದ ಐಪಿಸಿಸಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಅವರಿಗೆ 2007ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಯಿತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಐಪಿಸಿಸಿಯಲ್ಲಿ 130 ದೇಶಗಳ ಮೂರು ಸಾವಿರಕ್ಕೂ ಹೆಚ್ಚು ಹವಾಮಾನ ತಜ್ಞರು, ಸಾಗರ ವಿಜ್ಞಾನಿಗಳು, ಆರ್ಥಿಕ ತಜ್ಞರಿದ್ದಾರೆ. ವಿಶ್ವ ಹವಾಮಾನ ಬದಲಾವಣೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಕೆಲಸ ಮಾಡುತ್ತಿರುವ ವಿಶ್ವದ ಮುಂಚೂಣಿ ಸಂಸ್ಥೆ ಇದು. ಟಾಟಾ ಶಕ್ತಿ ಸಂಶೋಧನಾ ಸಂಸ್ಥೆಯ (ಟೆರಿ) ಮಹಾನಿರ್ದೇಶಕರೂ ಆಗಿರುವ ಪಚೌರಿ ಅವರು, `ಈ ಪ್ರಶಸ್ತಿಯಿಂದಾಗಿ ಹವಾಮಾನ ಬದಲಾವಣೆಯ ವಿಷಯ ಇನ್ನಷ್ಟು ಮಹತ್ವ ಪಡೆಯಲಿದೆ. ಸಂಸ್ಥೆಯ ಪ್ರತಿಯೊಬ್ಬರೂ ಇದಕ್ಕೆ ಭಾಜನರು' ಎಂದು ಹರ್ಷ ವ್ಯಕ್ತಪಡಿಸಿದರು. ವಿಜೇತರು ರೂ. 15.4 ಲಕ್ಷ ಡಾಲರ್ (ಸುಮಾರು 6 ಕೋಟಿ ರೂಪಾಯಿ) ನಗದು ಪಡೆಯಲಿದ್ದು ಇದನ್ನು ಸಮಾನವಾಗಿ ಹಂಚಲಾಗುತ್ತದೆ.

2007: ವಿಶ್ವಕಂಡ ಶ್ರೇಷ್ಠ ಬ್ಯಾಟ್ಸ್ ಮನ್ನರಲ್ಲಿ ಒಬ್ಬರು ಎನಿಸಿದ ಪಾಕಿಸ್ಥಾನ ತಂಡದ ಇಂಜಮಾಮ್ ಉಲ್ ಹಕ್ ಈದಿನ ಲಾಹೋರಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ `ಗುಡ್ಬೈ' ಹೇಳಿದರು. ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಇನಿಂಗ್ಸಿನಲ್ಲಿ ಕೇವಲ ಎರಡು ಎಸೆತ ಎದುರಿಸುವುದರೊಂದಿಗೆ ಇಂಜಮಾಮ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಒಡನಾಟ ಅಂತ್ಯಗೊಂಡಿತು. ತಮ್ಮ ಜೀವನದ ಕೊನೆಯ ಇನಿಂಗ್ಸಿನಲ್ಲಿ ಅವರು ಗಳಿಸಿದ್ದು ಕೇವಲ 3 ರನ್. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಅಂತಿಮ ದಿನ ಅವರು ಪಾಲ್ ಹ್ಯಾರಿಸ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಮೊದಲ ಇನಿಂಗ್ಸಿನಲ್ಲಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಟೆಸ್ಟ್ ಡಾ ಆಗಿ ಕೊನೆಗೊಂಡಿತು. 1992ರಲ್ಲಿ ಬರ್ಮಿಂಗ್ ಹ್ಯಾಮಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಜಮಾಮ್ ಪದಾರ್ಪಣೆ ಮಾಡಿದ್ದರು. ಟೆಸ್ಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಾಕ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅವರಿಗೆ ಕೇವಲ 3 ರನ್ನುಗಳ ಅವಶ್ಯಕತೆ ಇತ್ತು. ಆದರೆ ಅದನ್ನು ಸಾಧಿಸಲು ಇಂಜಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಜಾವೇದ್ ಮಿಯಾಂದಾದ್ ಅವರು 8832 ರನ್ ಪೇರಿಸಿದ್ದು, ಅದು ಈಗ ಇರುವ ದಾಖಲೆ. 120 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ಪ್ರತಿನಿದಿಸಿದ್ದ ಇಂಜಮಾಮ್ 50.07 ಸರಾಸರಿಯಲ್ಲಿ 8830 ರನ್ ಪೇರಿಸಿದ್ದಾರೆ. ಈ ಅವಧಿಯಲ್ಲಿ 25 ಶತಕ ಹಾಗೂ 46 ಅರ್ಧ ಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧ ಶತಕ ಗಳಿಸಿದ ಗೌರವವನ್ನು ಇಂಜಿ ಹೊಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಗಳಿಸಿದ 329 ರನ್ ಅತ್ಯಧಿಕ ಸ್ಕೋರ್. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಅವರದು. 37 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ಮನ್ ಕೆರಿಬಿಯನ್ ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಏಕದಿನ ಕ್ರಿಕೆಟಿಗೆ ನಮಸ್ಕಾರ ಹೇಳಿದ್ದರು. 378 ಪಂದ್ಯಗಳಿಂದ ಅವರು 11739 ರನ್ ಗಳಿಸಿದ್ದಾರೆ. ಇಂಜಿ ಅವರ ಅರ್ಧ ಶತಕದ (83) ವಿಶ್ವದಾಖಲೆಯನ್ನು ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಚಂಡೀಗಡದಲ್ಲಿ ನಡೆದ ಪಂದ್ಯದಲ್ಲಿ ಅಳಿಸಿಹಾಕಿದರು.

2007: ರಕ್ತ ಕ್ಯಾನ್ಸರಿನಿಂದ ಬಳಲುತ್ತಿದ್ದ ಮ್ಯಾನ್ಮಾರ್ ಪ್ರಧಾನಿ ಸೋ ವಿನ್(59) ಅವರು ಯಾಂಗೂನಿನ ಆಸ್ಪತ್ರೆಯಲ್ಲಿ ನಿಧನರಾದರು.

2007: ಬ್ರಿಟನ್ನಿನ ಐಷಾರಾಮಿ ಹೋಟೆಲ್ ಕ್ಲಾರಿಜ್ಸ್ ಮುಂದಿನ ತಿಂಗಳಿಂದ ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಕುಡಿವ ನೀರನ್ನು ತನ್ನ ಗ್ರಾಹಕರಿಗೆ ನೀಡಲಿದೆ ಎಂದು ಹೊಟೇಲ್ ಈದಿನ ಪ್ರಕಟಿಸಿತು. ಈ ನೀರಿನ ಬೆಲೆ ಲೀಟರಿಗೆ 50 ಪೌಂಡ್ (ಸುಮಾರು 4 ಸಾವಿರ ರೂಪಾಯಿ). ಭಾರತದ ನೀಲಗಿರಿ ಬೆಟ್ಟಗಳ ನೀರು ಸೇರಿದಂತೆ 30 ವಿವಿಧ ಬ್ರಾಂಡುಗಳ ನೀರಿನಲ್ಲಿ ಗ್ರಾಹಕ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.

2007: ಚಿಕ್ಕ ರಾಷ್ಟ್ರವಾದರೂ ಜಪಾನ್ ತಾಂತ್ರಿಕತೆಯಲ್ಲಿ ಎತ್ತಿದ ಕೈ. ಆದರೆ ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನವಾದರೂ ಕೆಲವೊಮ್ಮೆ ಕೈಕೊಡುತ್ತದೆ. ಅದಕ್ಕೊಂದು ತಾಜಾ ನಿದರ್ಶನ ರಾಜಧಾನಿ ಟೋಕಿಯೊದಲ್ಲಿ ಈದಿನ ನಡೆಯಿತು. ಟೋಕಿಯೋದ (ಕ್ಯೋಡೊ) ಸುಮಾರು 400 ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಟಿಕೆಟ್ ಕೌಂಟರುಗಳಿವೆ. ಇಲ್ಲಿ ಟಿಕೆಟ್ ಪಡೆದರೆ ಮಾತ್ರ ಪ್ರಯಾಣಿಸಲು ಸಾಧ್ಯ. ಈದಿನ ಈ ಎಲ್ಲ ಕೌಂಟರುಗಳೂ ಕೆಟ್ಟು ನಿಂತವು. ಎಲ್ಲ ನಿಲ್ದಾಣಗಳಲ್ಲಿ ಏಕಕಾಲಕ್ಕೆ ಕೌಂಟರುಗಳು ಕೈಕೊಟ್ಟದ್ದು ಇದೇ ಮೊದಲು. ಬೆಳಿಗ್ಗೆ ಕಚೇರಿಗಳಿಗೆ ಹೊರಟ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಅವರ ಒತ್ತಡಕ್ಕೆ ಮಣಿದ ಸರ್ಕಾರಿ ಹಾಗೂ ಖಾಸಗಿ ರೈಲ್ವೆ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಟ್ಟವು.

2007: ಮೀಟರ್ ಗೇಜ್ ರೈಲು ಸಂಚಾರದ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಬಾಗಲಕೋಟೆ- ಗದಗ ಪ್ಯಾಸೆಂಜರ್ ರೈಲು ಈದಿನ ತನ್ನ ಕೊನೆಯ ಸಂಚಾರದೊಂದಿಗೆ ಇತಿಹಾಸದ ಪುಟ ಸೇರಿತು. ನೂರಾರು ವರ್ಷಗಳಿಂದ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದ್ದ ಮೀಟರ್ ಗೇಜ್ ರೈಲನ್ನು ಈದಿನ ಸಂಜೆ ಬಾಗಲಕೋಟೆ ರೈಲು ನಿಲ್ದಾಣದ ಸಿಬ್ಬಂದಿ ಹಾಗೂ ಸ್ಥಳೀಯ ಜನರು ಬೀಳ್ಕೊಟ್ಟರು. ಸಂಜೆ 5.45ಕ್ಕೆ ಗದುಗಿಗೆ ಹೋಗುವ ರೈಲಿಗೆ ಪೂಜೆ ನೆರವೇರಿಸಿದ ರೈಲ್ವೆ ಸಿಬ್ಬಂದಿ ಆರತಿ ಮಾಡುವ ಮೂಲಕ ಕೊನೆಯ ಗಾಡಿಗೆ ಹೃದಯಸ್ಪರ್ಶಿ ವಿದಾಯ ಹೇಳಿದರು. ವಿಜಾಪುರ-ಗದಗ ನಡುವಿನ ಮೀಟರ್ ಗೇಜ್ ಅನ್ನು ಬ್ರಾಡ್ ಗೇಜಿಗೆ ಪರಿವರ್ತಿಸುವ ಹಿನ್ನೆಲೆಯಲ್ಲಿಮೀಟರ್ ಗೇಜ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿತು. ರಾಜ್ಯದ ಸಂಸದ ಸಿ.ಕೆ. ಜಾಫರ್ ಷರೀಫ್ ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸೋಲಾಪುರ-ಗದಗ ನಡುವಿನ ಮೀಟರ್ ಗೇಜ್ ನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ 318 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಸತ್ 1992-93 ರಲ್ಲಿ ಒಪ್ಪಿಗೆ ನೀಡಿತ್ತು. 318 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ 1999ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು ಆದರೆ ಅನಗತ್ಯ ವಿಳಂಬದಿಂದಾಗಿ ಇದುವರೆಗೆ ಪೂರ್ಣಗೊಂಡಿಲ್ಲ. ಸೊಲ್ಲಾಪುರದಿಂದ ವಿಜಾಪುರದವರೆಗಿನ ಗೇಜ್ ಪರಿವರ್ತನೆ ಪೂರ್ಣಗೊಂಡಿದ್ದು, ಬಾಗಲಕೋಟೆ-ಗದಗ ನಡುವಿನ 98 ಕಿಲೋ ಮೀಟರ್ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಹತ್ತು ವರ್ಷಗಳ ವಿಳಂಬದಿಂದ ಇದರ ವೆಚ್ಚ 318 ಕೋಟಿಯಿಂದ 778 ಕೋಟಿ ರೂಪಾಯಿಗೆ ಏರಿದೆ.

2007: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಒಳಚರಂಡಿ ಹಾಗೂ ಮಳೆ ನೀರು ಮೋರಿಗಳ ಅತ್ಯುತ್ತಮ ನಿರ್ವಹಣೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ನವದೆಹಲಿಯಲ್ಲಿ ನಡೆದ `ನರ್ಮ್' ಯೋಜನೆಯ ರಾಷ್ಟ್ರೀಯ ಸಮಾವೇಶದಲ್ಲಿ ಪಾಲಿಕೆ ಆಯುಕ್ತ ಡಾ. ಎಸ್. ಸುಬ್ರಹ್ಮಣ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ ರೆಡ್ಡಿ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆಯ (ನರ್ಮ್) ಅಡಿಯಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಪೌರಸೇವೆ, ಒಳಚರಂಡಿ ಮತ್ತು ಮಳೆ ನೀರಿನ ಮೋರಿಗಳ ಸಮರ್ಪಕ ಕಾರ್ಯ ನಿರ್ವಹಣೆಗಾಗಿ ನೀಡಲಾಗುತ್ತದೆ. ಮಹಾನಗರದಲ್ಲಿ ಈ ಬಾರಿ ಸುಮಾರು 200 ಮಿ.ಮೀ ಮಳೆಯು ಮೂರು ದಿನಗಳ ಕಾಲ ಸುರಿದಾಗ ನಗರ ಜೀವನ ಅಸ್ತವ್ಯಸ್ತವಾಗದಂತೆ ಕೂಡಲೇ ಕಾರ್ಯೋನ್ಮುಖಗೊಂಡ ಪಾಲಿಕೆ ಒಳಚರಂಡಿ ಮತ್ತು ಮೋರಿಗಳ ಕಾರ್ಯವನ್ನು ದಕ್ಷವಾಗಿ ನಿಭಾಯಿಸಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿತು.

2006: ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪ್ರಸ್ತುತ ಸಾಲಿನಲ್ಲಿ ಟರ್ಕಿಯ ಹೆಸರಾಂತ ಲೇಖಕ ಓರನ್ ಪಾಮುಖ್ ಆಯ್ಕೆಯಾದರು.

2006: ನ್ಯೂಯಾರ್ಕಿನ ಮ್ಯಾನ್ ಹಟನ್ನಿನ 52 ಮಹಡಿಗಳ ಗಗನಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ನಾಲ್ಕು ಆಸನಗಳ ವಿಮಾನದಲ್ಲಿ ಮೃತರಾದ ಇಬ್ಬರನ್ನು ಖ್ಯಾತ ಬೇಸ್ಬಾಲ್ ಆಟಗಾರ ಕೊರಿ ಲಿಡ್ಲಿ (34) ಮತ್ತು ವಿಮಾನ ಚಾಲನೆಯ ತರಬೇತುದಾರ ಎಂದು ಗುರುತಿಸಲಾಯಿತು. ನಾಲ್ಕು ಆಸನಗಳ ಈ ಪುಟ್ಟ ವಿಮಾನ ಅಕ್ಟೋಬರ್ 11ರಂದು ಗಗನಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು.

2006: ಭಾರತದ ಮೊತ್ತ ಮೊದಲ ಕ್ರಾಲ್ ತಂತ್ರಜ್ಞಾನವನ್ನು ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುವ ಗುರೂಜಿ ಡಾಟ್ ಕಾಮ್ ಮಾರುಕಟ್ಟೆಗೆ ಪರಿಚಯಿಸಿತು. ಸೀಕ್ವೋವಿಯಾ ಕ್ಯಾಪಿಟಲ್ ಇಂಡಿಯಾ ನೇತೃತ್ವದ ಗುರೂಜಿ ಡಾಟ್ ಕಾಮ್ ದೇಶೀಯ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ಈ ಪ್ರಪ್ರಥಮ ಸರ್ಚ್ ಎಂಜಿನನ್ನು ಬಿಡುಗಡೆ ಮಾಡಿತು.

2006: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ (ಭಾರತ ಸಂಚಾರ ನಿಗಮ ನಿಯಮಿತ ) 1.16 ಕೋಟಿಗೂ ಹೆಚ್ಚಿನ ತನ್ನ ಸ್ಥಿರ ದೂರವಾಣಿ ಚಂದಾದಾರರಿಗೆ ಬಾಡಿಗೆ ಮಾಸಿಕ 225 ರೂಪಾಯಿಗಳಿಂದ ರೂ. 180ಕ್ಕೆ ಇಳಿಕೆ, ಉಚಿತ ಕರೆಗಳ ದ್ವಿಗುಣ ಸವಲತ್ತುಗಳ ಜೊತೆಗೆ ಎಸ್ ಟಿಡಿ ಕರೆ ದರವನ್ನೂ ನಿಮಿಷಕ್ಕೆ ಕೇವಲ ಒಂದು ರೂಪಾಯಿಗೆ ಇಳಿಸುವ ಮೂಲಕ ದೀಪಾವಳಿ ಕೊಡುಗೆ ನೀಡಿತು.ದೇಶಾದ್ಯಂತದ ಮಾಸಿಕ 180 ರೂಪಾಯಿ ಅಥವಾ ಅದಕ್ಕೂ ಹೆಚ್ಚು ಬಾಡಿಗೆ ಪಾವತಿ ಮಾಡುವ ಎಲ್ಲ ಸ್ಥಿರ ದೂರವಾಣಿ ಚಂದಾದಾರರನ್ನೂ `ಒನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ತಂದು ಅವರಿಗೆ ಒಂದು ರೂಪಾಯಿಗೆ ಮೂರು ನಿಮಿಷಗಳ ಸ್ಥಳೀಯ ಕರೆ ಹಾಗೂ ಒಂದು ರೂಪಾಯಿಗೆ ಒಂದು ನಿಮಿಷದ ಎಸ್ಟಿಡಿ ಕರೆ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿತು. ಹೊಸ ದರಗಳು ನವೆಂಬರ್ 1ರಿಂದ ಜಾರಿಗೆ ಬರುವುದಾಗಿ ಬಿಎಸ್ಸೆನ್ನೆಲ್ ಮುಖ್ಯ ಆಡಳಿತ ನಿರ್ದೇಶಕ (ಸಿಎಂಡಿ) ಎ.ಕೆ. ಸಿನ್ಹ ಅವರು ನವದೆಹಲಿಯಲ್ಲಿಪ್ರಕಟಿಸಿದರು.

2001: ವಿಶ್ವ ಸಂಸ್ಥೆ ಮತ್ತು ವಿಶ್ವಸಂಸ್ಥೆ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಜಂಟಿಯಾಗಿ ಈ ಶತಮಾನದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಜಾಗತಿಕ ಸೌಹಾರ್ದ ವೃದ್ಧಿಗಾಗಿ ಮಾಡಿದ ಕೆಲಸ ಹಾಗೂ ಜಾಗತಿಕ ಶಾಂತಿಯ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಪಾತ್ರಕ್ಕೆ ಒತ್ತು ನೀಡಿದ್ದಕ್ಕಾಗಿ ಈ ಪ್ರಶಸ್ತಿಗಳು ಬಂದವು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೊಬ್ಬರು ವಿಶ್ವಸಂಸ್ಥೆ ಜೊತೆಗೆ ಪ್ರಶಸ್ತಿ ಹಂಚಿಕೊಂಡದ್ದು ಇದೇ ಪ್ರಥಮ.

1999: ಜನರಲ್ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಅವರ ಚುನಾಯಿತ ಸರ್ಕಾರವನ್ನು ಪಾಕಿಸ್ತಾನದ ಸೇನೆಯು ಕಿತ್ತೊಗೆಯಿತು.

1984: ಕನ್ಸರ್ ವೇಟಿವ್ ಪಕ್ಷದ ಸಮ್ಮೇಳನ ಸಂದರ್ಭದಲ್ಲಿ ಬ್ರಿಟಿಷ್ ಸಚಿವ ಸಂಪುಟವನ್ನೇ ಬಲಿ ತೆಗೆದುಕೊಳ್ಳುವ ಯತ್ನವಾಗಿ ಐರಿಷ್ ರಿಪಬ್ಲಿಕನ್ ಸೇನೆಯು ಬ್ರೈಟನ್ನಿನ ಗ್ರ್ಯಾಂಡ್ ಹೋಟೆಲ್ ಮೇಲೆ ಬಾಂಬ್ ಎಸೆಯಿತು.

1967: ಭಾರತೀಯ ಸಮಾಜವಾದಿ ನಾಯಕ ಡಾ. ರಾಮ್ ಮನೋಹರ್ ಲೋಹಿಯಾ (1910-1967) ಅವರು ನವದೆಹಲಿಯಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದರು. ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದ ಹಿಂದಿನ ಸ್ಫೂರ್ತಿಯಾಗಿದ್ದ ಲೋಹಿಯಾ ವಿದ್ವಾಂಸರೂ, ಅತ್ಯದ್ಭುತ ಸಂಸದೀಯ ಪಟುವೂ ಆಗಿದ್ದರು. ಭಾರತದಲ್ಲಿನ ರಾಜಮನೆತನಗಳ ಮಧ್ಯೆ ಹಂಚಿಹೋಗಿದ್ದ ರಾಜ್ಯಗಳನ್ನು ಏಕೀಕೃತಗೊಳಿಸುವ ಯೋಚನೆಯನ್ನು ಮೊದಲು ಬಿತ್ತಿದ್ದೇ ಲೋಹಿಯಾ. ನಂತರ ಅದನ್ನು ಸರ್ದಾರ ಪಟೇಲ್ ಕೈಗೆತ್ತಿಕೊಂಡರು.

1931: ವಾಗ್ಮಿ, ಸಾಹಿತಿ, ನಾಟಕಕಾರ ಡಾ. ವಸಂತ ಕವಲಿ (12-10-1931ರಿಂದ 17-11-1988) ಅವರು ಚೆನ್ನಬಸಪ್ಪ ಎಲ್ಲಪ್ಪ ಕವಲಿ- ಗೌರಮ್ಮ ದಂಪತಿಯ ಮಗನಾಗಿ ಬ್ಯಾಡಗಿಯಲ್ಲಿ ಜನಿಸಿದರು.

1911: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿಜಯ್ ಮರ್ಚೆಂಟ್ (1911-1987) ಜನ್ಮದಿನ.

1858: ಐಸಾಕ್ ನ್ಯೂಟನ್ ಲೆವಿಸ್ (1858-1931) ಜನ್ಮದಿನ. ಅಮೆರಿಕದ ಸೇನಾ ಅಧಿಕಾರಿಯಾಗಿದ್ದ ಈತ ಲೆವಿಸ್ ಮೆಷಿನ್ ಗನ್ ಸಂಶೋಧಕ. ಈ ಮೆಷಿನ್ ಗನ್ ಮೊದಲನೆಯ ಜಾಗತಿಕ ಸಮರ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಯಿತು.

No comments:

Advertisement