ಇಂದಿನ ಇತಿಹಾಸ
ನವೆಂಬರ್ 13
ನ್ಯೂಯಾರ್ಕಿನ ಮೇರಿ ಫೆಲ್ ಪ್ಸ್ ಜಾಕೋಬ್ ಅವರಿಗೆ `ಬ್ಯಾಕ್ ಲೆಸ್ ಬ್ರಾಸಿಯರ್' ಗೆ ಪೇಟೆಂಟ್ ಲಭಿಸಿತು. ಸ್ತನಗಳನ್ನು ಸಹಜವಾಗಿ ಬೇರೆ ಬೇರೆಯಾಗಿ ಕಾಣುವಂತಹ ವಿನ್ಯಾಸದ ಮೃದುವಾದ, ಚಿಕ್ಕದಾದ ಹೊಸ ಮಾದರಿಯ ಈ `ಬ್ರಾ'ವನ್ನು ಈಕೆ ಸಂಶೋಧಿಸಿದರು. ಈಕೆ ಅದನ್ನು `ಬ್ರಾಸಿಯರ್' ಎಂದು ಕರೆದರು.
2008: ಕಾಂಗ್ರೆಸ್ ನಂತರ ಬಿಜೆಪಿ ಸರದಿ. `ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗಿದೆ, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದು ಆರೋಪಿಸಿ ರಾಜಸ್ಥಾನದ ಭರತಪುರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಲೋಕಸಭಾ ಸದಸ್ಯ ವಿಶ್ವೇಂದ್ರ ಸಿಂಗ್ ಪಕ್ಷಕ್ಕೆ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯ ಅವರ ರಾಜಕೀಯ ಸಲಹಾಗಾರರಾಗಿದ್ದ ಸಿಂಗ್ ರಾಜೀನಾಮೆ ಪಕ್ಷಕ್ಕೆ ಭಾರಿ ಮುಜುಗರ ತಂದಿತು.
2008: ಮೆದುಳು ನಿಷ್ಕ್ರಿಯಗೊಂಡಿದ್ದ ಐದು ವರ್ಷದ ಬಾಲಕಿಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದರಿಂದ ಇತರ ಮೂರು ಜನರಿಗೆ ಅನುಕೂಲವಾದ ಘಟನೆ ತಿರುಚಿನಾಪಳ್ಳಿಯಲ್ಲಿ ನಡೆಯಿತು. `ಬ್ರೇನ್ ಸ್ಟೆಮ್ ಗ್ಲುಕೋಮ' ರೋಗಕ್ಕೆ ಎಂಟು ತಿಂಗಳಿನಿಂದ ತುತ್ತಾಗಿದ್ದ ಶುಭಾ ನಂದಿನಿಯ ಮೂತ್ರಪಿಂಡ, ಪಿತ್ತಜನಕಾಂಗ, ಪಾರದರ್ಶಕ ಪಟಲ ಹಾಗೂ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿದ್ದರು. ಮೂತ್ರಪಿಂಡವನ್ನು ತಿರುಚಿನಾಪಳ್ಳಿಯ ಎಬಿಸಿ ಆಸ್ಪತೆಯಲ್ಲಿ ಕಸಿ ಮಾಡಿ 46 ವರ್ಷದ ರೋಗಿಗೆ ಅಳವಡಿಸಲಾಯಿತು. ಪಾರದರ್ಶಕ ಪಟಲದ ಕಸಿಯನ್ನು ಸೆಂಟ್ ಜಾನ್ಸ್ ನೇತ್ರಸಂಸ್ಥೆಯಲ್ಲಿ ಮಾಡಲಾಯಿತು. ನಗರದಲ್ಲಿ ಹೃದಯ ಮತ್ತು ಪಿತ್ತಜನಕಾಂಗದ ಕಸಿಗೆ ಸೌಲಭ್ಯ ಇಲ್ಲದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಯಿತು. `ಮಗಳ ಅಂಗಾಂಗ ದಾನದಿಂದ ಮೂರು ಜನರಿಗೆ ಅನುಕೂಲವಾಗಿರುವುದು ಸಂತಸ ತಂದಿದೆ' ಎಂದು ಬಾಲಕಿಯ ತಂದೆ ಮಾಣಿಕನಂದನ್ ಹೇಳಿದರು.
2008: ಆಫ್ರಿಕ ಖಂಡದ ದೇಶಗಳೊಡನೆ ಭಾರತದ ಸಂಬಂಧವನ್ನು ಉತ್ತಮಗೊಳಿಸಿರುವುದಕ್ಕೆ ಕೃತಜ್ಞತೆಯಿಂದ ಘಾನಾ ದೇಶವು ಆ ದೇಶದ ಉನ್ನತ ಪ್ರಶಸ್ತಿಯನ್ನು ಭಾರತದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಆನಂದ ಶರ್ಮ ಅವರಿಗೆ ನೀಡುವುದಾಗಿ ಅಕ್ರಾದಲ್ಲಿ (ಘಾನ) ಪ್ರಕಟಿಸಿತು.
2008: ಪೂರ್ವ ಆಫ್ಘಾನಿಸ್ಥಾನದ ನಂಗರ್ ಹಾರ್ ಪ್ರಾಂತ್ಯದಲ್ಲಿನ ಮಾರುಕಟ್ಟೆ ಪ್ರದೇಶವೊಂದರಲ್ಲಿ ಅಮೆರಿಕ ನೇತೃತ್ವದ ಸಮ್ಮಿಶ್ರ ಸೇನಾಪಡೆಗಳ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಕಾರು ಬಾಂಬ್ ದಾಳಿ ನಡೆದು ಕನಿಷ್ಠ 21 ಮಂದಿ ಮೃತರಾಗಿ ಇತರ 74 ಜನರು ಗಾಯಗೊಂಡರು. ಮೃತರಲ್ಲಿ ಒಬ್ಬ ಯೋಧ ಮತ್ತು ಮಂದಿ 20 ನಾಗರಿಕರು.
2008: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಇರಾನ್ ರಾಜತಾಂತ್ರಿಕರೊಬ್ಬರನ್ನು ಅಪಹರಿಸಿ, ಅವರ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಘಟನೆ ನಡೆಯಿತು. ಈ ಮಧ್ಯೆ, ತನ್ನ ರಾಜತಾಂತ್ರಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೂರ್ಣಪ್ರಮಾಣದ ಭದ್ರತೆ ಒದಗಿಸುವಂತೆ ಪಾಕ್ ಸರ್ಕಾರವನ್ನು ಇರಾನ್ ಒತ್ತಾಯಿಸಿತು.
2008: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ನಗರದ ಚೈಲ್ಡ್ ರೈಟ್ಸ್ ಟ್ರಸ್ಟಿಗೆ ದೊರಕಿತು. ಇದರ ಜೊತೆಯಲ್ಲಿ ತಲಾ 25 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಪ್ರಶಸ್ತಿಯನ್ನು ಚಾಮರಾಜನಗರದ ಆದಿವಾಸಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್ ಬಸವರಾಜು ಹಾಗೂ ಕಾರವಾರದ ನಜೀರ್ ಅಹ್ಮದ್ ಯು ಶೇಖ್ ಅವರಿಗೆ ನೀಡಲಾಯಿತು.
2008: ಪೆಟ್ರೋಲಿಯಮ್ಮಿನಿಂದ ಜವಳಿ ಉದ್ಯಮದವರೆಗೂ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ (51) ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾರತೀಯ ಎಂದು `ಫೋಬ್ಸ್ ` ಪತ್ರಿಕೆ ಹೇಳಿತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಷೇರುಪೇಟೆಯಲ್ಲಿ ಆಸ್ತಿ ಮೌಲ್ಯ ಕಳೆದುಕೊಳ್ಳುತ್ತಿರುವ ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಎರಡನೇ ಸ್ಥಾನಕ್ಕಿಳಿದಿದ್ದಾರೆ ಎಂದು ಪತ್ರಿಕೆಯ ವಾರ್ಷಿಕ ಶ್ರೀಮಂತರ ಪಟ್ಟಿ ತಿಳಿಸಿತು.
2007: ಉಕ್ಕು, ಆಟೋಮೋಟಿವ್ ಮತ್ತು ದೂರವಾಣಿ ಸೇವೆ ಕ್ಷೇತ್ರಗಳಲ್ಲಿ ಜಾಗತಿಕ ಸಾಧನೆ ಮಾಡಿರುವ ಟಾಟಾ ಸಮೂಹ, ವಿಶ್ವದಲ್ಲೇ ನಾಲ್ಕನೇ ಸ್ಥಾನದ ವೇಗವನ್ನು ಹೊಂದಿರುವ ಸೂಪರ್ ಕಂಪ್ಯೂಟರ್ ಸಿದ್ಧಪಡಿಸಿರುವುದನ್ನು ಮುಂಬೈಯಲ್ಲಿ ಬಹಿರಂಗ ಪಡಿಸಿತು. ಏಕ್ (ಇಕೆಎ- 'ಏಕ' ಸಂಸ್ಕೃತದಲ್ಲಿ ಪ್ರಥಮ) ಎಂದು ಹೆಸರಿಡಲಾದ ಟಾಟಾ ಸಮೂಹದ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ 117.9 ಟ್ರಿಲಿಯನ್ ಲೆಕ್ಕ ಹಾಕುತ್ತದೆ. ಜಾಗತಿಕವಾಗಿ ಉನ್ನತ ಶ್ರೇಣಿಯ 500 ಸೂಪರ್ ಕಂಪ್ಯೂಟರ್ ಮಾದರಿಯಲ್ಲಿ ಇದೂ ಒಂದು ಎಂದು ಗುರುತಿಸಿಕೊಂಡಿದ್ದು, ವೇಗದಲ್ಲಿ ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ. ಪುಣೆಯಲ್ಲಿ ಟಾಟಾ ಸಮೂಹ ಸ್ಥಾಪಿಸಿರುವ ಕಂಪ್ಯೂಟೇಷನಲ್ ರಿಸರ್ಚ್ ಲ್ಯಾಬೋರೊಟರೀಸ್ ಘಟಕದ 60 ವಿವಿಧ ಸಂಪನ್ಮೂಲ ವ್ಯಕ್ತಿಗಳು ಸೇರಿಕೊಂಡು ಇದನ್ನು ಅಭಿವೃದ್ಧಿಗೊಳಿಸಿದ್ದಾರೆ. ಸಿ ಆರ್ ಎಲ್ ಅಧ್ಯಕ್ಷ ಎಸ್. ರಾಮಾದೊರೈ ಈ ಕುರಿತು ಮಾಹಿತಿ ನೀಡಿದರು. `ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು 30 ದಶಲಕ್ಷ ಡಾಲರ್ ವೆಚ್ಚ ತಗುಲಿತು. ಇದನ್ನು ಸಂಪೂರ್ಣವಾಗಿ ಟಾಟಾ ಸನ್ಸ್ ಭರಿಸಿದೆ. ಬರುವ ದಿನಗಳಲ್ಲಿ ಸಿ ಆರ್ ಎಲ್ ಸಿಬ್ಬಂದಿಯ ಸಂಖ್ಯೆಯು 90ಕ್ಕೆ ಹೆಚ್ಚಾಗಲಿದೆ' ಎಂದು ರಾಮಾದೊರೈ ಹೇಳಿದರು. `ಬಾಲಿವುಡ್ ಚಿತ್ರ `ಶೋಲೆ'ಯನ್ನು ಒಂದು ಆನಿಮೇಷನ್ ಸಿನಿಮಾವಾಗಿ ಪರಿವರ್ತಿಸಲು ಸೂಪರ್ ಕಂಪ್ಯೂಟರ್ ಬೇಕಾಗುತ್ತದೆ. ಅದೇ ರೀತಿ ಆಟೋಮೋಟಿವ್ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನಕ್ಕೆ ಸೂಪರ್ ಕಂಪ್ಯೂಟರಿನ ಅಗತ್ಯವಿದೆ. `ಏಕ' ಇದೊಂದು ಟಾಟಾ ಆಸ್ತಿಯಾಗಿದ್ದು, ಇದರ ಪೇಟೆಂಟ್ ಪಡೆಯಲಾಗುವುದು. ಅದೇ ರೀತಿ ಇದರ ಬಹುಪಯೋಗದ ಬಗ್ಗೆ ವಿವಿಧ ಕಂಪೆನಿಗಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ' ಎಂದು ಅವರು ನುಡಿದರು. ಸಂಸ್ಥೆಯು ಈವರೆಗೆ ದೇಶದಲ್ಲಿ 9 ಸೂಪರ್ ಕಂಪ್ಯೂಟರುಗಳನ್ನು ಅಬೀವೃದ್ಧಿ ಪಡಿಸಲಾಗಿದೆ ಎಂದೂ ಅವರು ಬಹಿರಂಗ ಪಡಿಸಿದರು.
2007: ನಿರ್ದೇಶಕ ಫಿರೋಜ್ ಅಬ್ಬಾಸ್ ಖಾನ್ ಅವರ `ಗಾಂಧಿ ಮೈ ಫಾದರ್' ಚಲನಚಿತ್ರ ಉತ್ತಮ ಚಿತ್ರಕಥೆಗಾಗಿ ಏಷ್ಯ ಪೆಸಿಫಿಕ್ ಸ್ಕ್ರೀನ್ ಪ್ರಶಸ್ತಿ ಪಡೆಯಿತು. ನಟರಾದ ಅಕ್ಷಯ್ ಖನ್ನಾ, ಭೂಮಿಕಾ ಚಾವ್ಲಾ, ಮತ್ತು ಶೆಫಾಲಿ ಷಾ ಅವರು ನಟಿಸಿದ್ದ ಈ ಚಲನಚಿತ್ರದ ಕಥೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ಅವರ ನಡುವಣ ವಿವಾದಾತ್ಮಕ ಸಂಬಂಧದ ಸುತ್ತ ಹೆಣೆಯಲಾಗಿತ್ತು. ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡಿನ ಗೋಲ್ಡ್ ಕೋಸ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಚಿತ್ರದ ಚಿತ್ರಕಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತ, ಕೊರಿಯ, ಇಂಡೋನೇಷ್ಯ, ಜಪಾನ್, ಲೆಬನಾನ್, ಇರಾನ್, ಟರ್ಕಿ, ಇಸ್ರೇಲ್ ಇತ್ಯಾದಿ ರಾಷ್ಟ್ರಗಳ ಚಿತ್ರಗಳು ಕಣದಲ್ಲಿದ್ದವು. ಖ್ಯಾತ ನಟಿ ಶಬಾನಾ ಆಜ್ಮಿ ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿತು. ಉತ್ತಮ ಚಲನಚಿತ್ರ ಪ್ರಶಸ್ತಿ ಕೊರಿಯದ `ಮಿರ್ ಯಾಂಗ್' (ರಹಸ್ಯ ಸೂರ್ಯಕಿರಣ) ಚಿತ್ರಕ್ಕೆ ದೊರೆಯಿತು.
2007: ಎಂಟು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಪತಿ ಹಾಗೂ 20 ವರ್ಷದ ಮಗನನ್ನು ಕಳೆದುಕೊಂಡ ಮಹಿಳೆಗೆ ಅಪಘಾತ ಪರಿಹಾರ ಮಂಡಳಿಯು 46.44 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿತು. 8 ವರ್ಷಗಳ ಹಿಂದೆ ಮದುರೈ ಸಮೀಪ ಮ್ಯಾಕ್ಸಿ ಕ್ಯಾಬ್ ಹಾಗೂ ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿತ್ತು. ಈಗ ಪರಿಹಾರ ಪಡೆದಿರುವ ಮಹಿಳೆಯ ಪತಿ ಹಾಗೂ ಮಗ ಮ್ಯಾಕ್ಸಿಕ್ಯಾಬಿನಲ್ಲಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯ ಅಧ್ಯಕ್ಷೆ ವಿ.ಕೆ. ಮಹೇಶ್ವರಿ ಅವರು, ಈ ಅಪಘಾತಕ್ಕೆ ಮ್ಯಾಕ್ಸಿಕ್ಯಾಬ್ ಚಾಲಕ ಹಾಗೂ ಮಾಲೀಕನೇ ಹೊಣೆ ಎಂದು ಹೇಳಿ, ಮಹಿಳೆಗೆ ಪರಿಹಾರ ಧನ ನೀಡುವಂತೆ ಆದೇಶ ನೀಡಿದರು.
2007: ಕರ್ನಾಟಕ ರಾಜ್ಯಪಾಲ ಠಾಕೂರ್ ಅವರ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವೆಂಬರ್ 19ರಂದೇ ಬಹುಮತ ಸಾಬೀತು ಪಡಿಸಲು ನಿರ್ಧರಿಸಿದರು. ಇದಕ್ಕೆ ಮುನ್ನ ಈ ತಿಂಗಳ 23 ರಂದು ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು. ಆದರೆ, ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಎಂಟು ದಿನಗಳ ಗಡುವು ವಿಧಿಸಿದ ಹಿನ್ನೆಲೆಯಲ್ಲಿ ತುರ್ತು ಸಂಪುಟ ಸಭೆ ನಡೆಸಿದ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡರು.
2007: ನೆನೆಗುದಿಗೆ ಬಿದ್ದಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಯೋಜನೆಗೆ ಮರು ಚಾಲನೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 75 ದಿನಗಳ ಒಳಗೆ 4.35 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಆದೇಶ ನೀಡಿದರು. ಸಚಿವ ಸಂಪುಟ ಸಭೆ ತೆಗೆದುಕೊಂಡ ಈ ತೀರ್ಮಾನವನ್ನು ಸಚಿವ ಡಾ. ವಿ.ಎಸ್. ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.
2007: ವಾರದ ಹಿಂದೆ ಬೆಂಗಳೂರಿನ ಹೊರವಲಯದ ನಾರಾಯಣ ಆರೋಗ್ಯ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅವಳಿ ದೇಹದ ಭಾರ ಕಳೆದುಕೊಂಡಿದ್ದ ಬಿಹಾರಿನ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಈದಿನ ತೀವ್ರ ನಿಗಾ ಘಟಕದಿಂದ (ಐಸಿಯು) ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಯಿತು. ಲಕ್ಷ್ಮಿ ತತ್ಮಾಳ ತಂದೆ ಶಂಭು ಪುಟ್ಟ ಬಾಲೆಯನ್ನು ಎತ್ತಿಕೊಂಡು ಬಂದಾಗ ಪಿಳಪಿಳನೆ ಕಣ್ಣು ಬಿಟ್ಟು ನೋಡುತ್ತಿದ್ದ ಮಗು ಹೊಸ ಜಗತ್ತಿಗೆ ಬಂದ ಹಿಗ್ಗಿನಲ್ಲಿ ಇದ್ದಂತಿತ್ತು. ಅಪಾರ ನೋವಿನಲ್ಲೂ ಮಗುವಿನ ಕಣ್ಣಲ್ಲಿ ಲವಲವಿಕೆ ನಾಟ್ಯವಾಡುತ್ತಿತ್ತು. ಲಕ್ಷ್ಮಿಯ ಅಮ್ಮ ಪೂನಂ ಮುಖದಲ್ಲಿ ಸಂತೃಪ್ತಿ, ಅಣ್ಣ ಮಿಥಿಲೇಶನಲ್ಲಿ ಖುಷಿ ಮನೆ ಮಾಡಿತ್ತು.
2007: ಭಾರತೀಯ ಮೂಲದ ಅಮೆರಿಕ ಪ್ರಜೆ ಶಾಂತನು ನರೇನ್ ಅವರನ್ನು ವಿಶ್ವವಿಖ್ಯಾತ ಅಡೋಬ್ ಸಿಸ್ಟಮ್ಸ್ ಇನ್ ಕಾರ್ಪೊರೇಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕ ಮಾಡಲಾಯಿತು. ಬ್ರೂಸ್ ನಾಗರಿಕನ ಉತ್ತರಾಧಿಕಾರಿಯಾಗಿ ಈ ಪ್ರತಿಷ್ಠಿತ ಹುದ್ದೆಗೆ ಏರಿದ ಶಾಂತನು ಅವರು ಡಿಸೆಂಬರ್ 1 ರಿಂದ ಹೊಸ ಹುದ್ದೆ ಅಲಂಕರಿಸುವರು ಎಂದು ನ್ಯೂಯಾರ್ಕಿನಲ್ಲಿ ಸಂಸ್ಥೆಯ ಪ್ರಕಟಣೆ ತಿಳಿಸಿತು.
2007: ಪಂಡಿತ್ ಜವಾಹರ ಲಾಲ್ ನೆಹರೂ ಅವರ 118ನೇ ಜನ್ಮದಿನಾಚರಣೆ ಅಂಗವಾಗಿ ಜವಾಹರ್ಲಾಲ್ ನೆಹರೂ ಸ್ಮಾರಕ ನಿಧಿ ಸಂಸ್ಥೆಯು ದೆಹಲಿ ವಿಶ್ವವಿದ್ಯಾಲಯ ಕೇಂದ್ರೀಯ ಶಿಕ್ಷಣ ಸಂಸ್ಥೆಯ ಪ್ರೊ. ಪೂನಂ ಬಾತ್ರಾ ಅವರಿಗೆ ನೆಹರೂ ಫೆಲೋಶಿಪ್ ನೀಡಿತು.
2007: ಕನ್ನಡದ ಹಿರಿಯ ಕವಿ, ಅನುವಾದಕ ಡಾ.ಬಿ.ಎ. ಸನದಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ನೀಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ನಿರಂಜನ ಪ್ರಶಸ್ತಿಗೆ ಆಯ್ಕೆ ಮಾಡಿತು. ನವ್ಯ ಮತ್ತು ನವ್ಯೋತ್ತರದ ಸಂದರ್ಭದಲ್ಲಿ ಕನ್ನಡ ಕಾವ್ಯ, ಅನುವಾದ ವಿಮರ್ಶೆ, ಶಿಶು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು.
2006: ವಿಶ್ವದ ಅತಿದೊಡ್ಡ ಪ್ರಯಾಣಿಕರ ವಿಮಾನ `ಎ 380'ರ ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ವಿಶ್ವದ ಸುತ್ತ ಪರೀಕ್ಷಾರ್ಥ ಹಾರಾಟ ಆರಂಭಿಸಿತು. ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ಗಗನಕ್ಕೆ ನೆಗೆದ ವಿಮಾನ 12 ತಾಸುಗಳ ಪ್ರಯಾಣದ ನಂತರ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿ ಮೊದಲ ನಿಲುಗಡೆ ಪಡೆಯಿತು. ಪೈಲಟ್ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ 60 ಜನ ವಿಮಾನದಲ್ಲಿ ಇದ್ದರು.
2006: ಬೆಂಗಳೂರಿನ ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರೀಸರ್ಚ್ ಸೆಂಟರಿನ ವೈದ್ಯ ಡಾ. ಅಶೋಕಕುಮಾರ ಅವರು ಮಧುಮೇಹಕ್ಕೆ `ಡಯಟ್ ಸ್ಟೀವಿಯಾ' ಎಂಬ ಸಸ್ಯಮೂಲ ಔಷಧಿ ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಸ್ಟೀವಿಯಾ ಸಸ್ಯ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಹೆಚ್ಚಲು ಸಹಕಾರಿ ಎಂದು ಅವರು ಹೇಳಿದರು.
2006: ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ ತಮಿಳುನಾಡಿನ ಕೋವಿಲ್ ಪಟ್ಟಿಯ ಮಡು ಗ್ರಾಮದ ಕಟ್ಟಡ ಕೆಲಸಗಾರ ಮುತ್ತುಕುಮಾರ್ ಎಂಬ 23 ವರ್ಷದ ಯುವಕನೊಬ್ಬ 1 ನಿಮಿಷ 38 ಸೆಕೆಂಡ್ ಕಾಲ ನೇಣಿನ ಕುಣಿಕೆಯೊಳಗೆ ನೇತಾಡಿಯೂ ಜೀವಂತವಾಗಿ ಉಳಿದ.
2006: ಬ್ರೆಜಿಲಿನ ರಿಯೋಡಿಜನೈರೋದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ (ಐಎಫ್ ಇ ಇ ಎಸ್) ಉಪಾಧ್ಯಕ್ಷರಾಗಿ ಬೆಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಅಧ್ಯಕ್ಷ ಪ್ರೊ. ಎನ್. ಆರ್. ಶೆಟ್ಟಿ ನೇಮಕಗೊಂಡರು. ಈ ಒಕ್ಕೂಟಕ್ಕೆ ನೇಮಕಗೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆ ಇವರದಾಯಿತು. ಪ್ರೊ. ಶೆಟ್ಟಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದವರು.
2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ರಹಸ್ಯ ದಾಖಲೆಗಳ ಪಟ್ಟಿಯಿಂದ ಸಾಮಾನ್ಯ ದಾಖಲೆಗಳ ಪಟ್ಟಿಗೆ ಸೇರಿಸುವ ಮೂಲಕ ಈ ಕಡತಗಳನ್ನು ಬಹಿರಂಗ ಪಡಿಸಲು ಪ್ರಧಾನಿ ಸಚಿವಾಲಯ ತೀರ್ಮಾನಿಸಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ಬಹಿರಂಗ ಪಡಿಸಿದವು. ಕೇಂದ್ರೀಯ ಮಾಹಿತಿ ಅಧಿಕಾರಿ ಕಮಲ್ ದಯಾನಿ ಅವರು ಪತ್ರವೊಂದರಲ್ಲಿ ಈ ವಿಚಾರವನ್ನು ದೆಹಲಿಯ ನೇತಾಜಿ ಮಿಷನ್ ಸಂಸ್ಥೆಗೆ ತಿಳಿಸಿದರು.
2005: ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ `ಸಾರ್ಕ್' ದೇಶಗಳು ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಒಪ್ಪಂದವನ್ನು (ಸಪ್ಟಾ)-2006ರ ಜನವರಿ 1ರಿಂದ ಜಾರಿಗೆ ತರಲು ಈದಿನ ನೇಪಾಳದ ಕಠ್ಮಂಡುವಿನಲ್ಲಿ ಮುಕ್ತಾಯಗೊಂಡ 13ನೇ ಸಾರ್ಕ್ ಸಮ್ಮೇಳನದಲ್ಲಿ ನಿರ್ಧರಿಸಿದವು. ದಕ್ಷಿಣ ಏಷ್ಯಾ ಆರ್ಥಿಕ ಒಕ್ಕೂಟ ರಚನೆ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಮೈಲಿಗಲ್ಲು. ಈ ನಿಟ್ಟಿನ ಒಪ್ಪಂದಕ್ಕೆ ಈದಿನ ಸಾರ್ಕ್ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.
2005: ಬೆಂಗಳೂರಿನಲ್ಲಿ ನಡೆದ ಜನತಾ ದಳ (ಜಾತ್ಯತೀತ) ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್. ಡಿ. ದೇವೇಗೌಡ ಅವರನ್ನು ಪುನರಾಯ್ಕೆ ಮಾಡಲಾಯಿತು.
2005: ವಿಶ್ವದಲ್ಲೇ ಮೊತ್ತ ಮೊದಲ ರಾಷ್ಟ್ರಮಟ್ಟದ 9 ದಿನಗಳ `ಮಹಾಭಾರತ ಉತ್ಸವ' ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿತು. ಗಿರಿನಗರದ ಮಹಾಭಾರತ ಸಂಶೋಧನಾ ಪ್ರತಿಷ್ಠಾನವು ಸಂಘಟಿಸಿದ ಈ ಉತ್ಸವದಲ್ಲಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಹಾಭಾರತ ಕುರಿತ ಸಾಂಪ್ರದಾಯಿಕ ವರ್ಣಚಿತ್ರಗಳು ಮತ್ತು ಸಂತೊಕ್ ಬಾ ಎಂಬ ವರ್ಣಚಿತ್ರಕಾರ ರಚಿಸಿದ ವಿಶ್ವದ ಅತ್ಯಂತ ಉದ್ದದ (ಸುಮಾರು 1.7 ಕಿ.ಮೀ) ಕ್ಯಾನ್ವಾಸ್ ಪ್ರದರ್ಶನಗೊಂಡಿತು.
2005: ಬಿಹಾರಿನ ಜೆಹಾನಾಬಾದ್ ಜಿಲ್ಲಾ ಸೆರೆಮನೆಯ ಮೇಲೆ ಬಾಂಬ್ ದಾಳಿ ನಡೆಸಿದ ಶಸ್ತ್ರಸಜ್ಜಿತ ಸಿಪಿಐ ಮಾವೋವಾದಿ ನಕ್ಸಲೀಯರು 389 ಮಂದಿ ಕೈದಿಗಳು ಪರಾರಿಯಾಗುವಂತೆ ಮಾಡಿದರು. ಸೆರೆಮನಯಲ್ಲಿದ್ದ ಭೂಮಾಲೀಕರ ರಣವೀರ ಸೇನೆಯ 15 ಮಂದಿಯನ್ನು ಅಪಹರಿಸಿ ಅವರಲ್ಲಿ 9 ಜನರನ್ನು ಕೊಲ್ಲಲಾಯಿತು. ಬಾಂಬ್ ದಾಳಿ ಸಂದರ್ಭದಲ್ಲಿ 4 ಮಂದಿ ಅಸು ನೀಗಿದರು.
1970: ನೆರೆ ಹಾವಳಿಯಿಂದ ಗಂಗಾನದಿಯ ದಡದಲ್ಲಿ ಲಕ್ಷಾಂತರ ಜನ ಅಸು ನೀಗಿದರು.
1967: ಜೂಹಿ ಚಾವ್ಲಾ ಹುಟ್ಟಿದ ದಿನ.
1914: ನ್ಯೂಯಾರ್ಕಿನ ಮೇರಿ ಫೆಲ್ ಪ್ಸ್ ಜಾಕೋಬ್ ಅವರಿಗೆ `ಬ್ಯಾಕ್ ಲೆಸ್ ಬ್ರಾಸಿಯರ್' ಗೆ ಪೇಟೆಂಟ್ ಲಭಿಸಿತು. ಸ್ತನಗಳನ್ನು ಸಹಜವಾಗಿ ಬೇರೆ ಬೇರೆಯಾಗಿ ಕಾಣುವಂತಹ ವಿನ್ಯಾಸದ ಮೃದುವಾದ, ಚಿಕ್ಕದಾದ ಹೊಸ ಮಾದರಿಯ ಈ `ಬ್ರಾ'ವನ್ನು ಈಕೆ ಸಂಶೋಧಿಸಿದರು. ಈಕೆ ಅದನ್ನು `ಬ್ರಾಸಿಯರ್' ಎಂದು ಕರೆದರು. ನಂತರ ಈಕೆ ಈ ಪೇಟೆಂಟನ್ನು ಕನೆಕ್ಟಿಕಟ್ ನ ಬ್ರಿಜ್ಪೋರ್ಟಿನ ವಾರ್ನರ್ ಬ್ರದರ್ಸ್ ಕೊರ್ಸೆಟ್ ಕಂಪೆನಿಗೆ 1500 ಡಾಲರುಗಳಿಗೆ ಮಾರಾಟ ಮಾಡಿದರು. ಕಳೆದ 30 ವರ್ಷಗಳಲ್ಲಿ ಈ ಕಂಪೆನಿ ಈ `ಬ್ರಾ'ಗಳ ಮಾರಾಟದಿಂದ 1.50 ಕೋಟಿ ಡಾಲರುಗಳಿಗೂ ಹೆಚ್ಚಿನ ಹಣ ಸಂಪಾದನೆ ಮಾಡಿತು.
1789: ಬೆಂಜಮಿನ್ ಫ್ರಾಂಕ್ಲಿನ್ ತನ್ನ ಗೆಳೆಯನೊಬ್ಬನಿಗೆ ಪತ್ರವೊಂದನ್ನು ಬರೆದರು. ಅದರಲ್ಲಿ ಅವರು ಬರೆದ ಅಮರ ಹೇಳಿಕೆ ಹೀಗಿತ್ತು: `ಈ ಜಗತ್ತಿನಲ್ಲಿ ಸಾವು ಮತ್ತು ತೆರಿಗೆಗಳ ಹೊರತಾಗಿ ಯಾವುದನ್ನೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ.'
1780: ಪಂಜಾಬಿನಲ್ಲಿ ಸಿಕ್ಖರ ರಾಜ್ಯವನ್ನು ಸ್ಥಾಪಿಸಿ 1801-1839ರ ಅವಧಿಯಲ್ಲಿ ಅದನ್ನು ಆಳಿದ ಮಹಾರಾಜ ರಣಜಿತ್ ಸಿಂಗ್ (1780-1839) ಹುಟ್ಟಿದ ದಿನ.
1834: ಪೀಟರ್ ಅರ್ರೆಲ್ ಬ್ರೌನ್ ವೈಡನರ್ (1834-1915) ಹುಟ್ಟಿದ ದಿನ. ಅಮೆರಿಕದ ಮಹಾದಾನಿಗಳಲ್ಲೊಬ್ಬರಾದ ಇವರು ಹ್ಯಾರಿ ಎಲ್ಕಿನ್ಸ್ ವೈಡ್ನರ್ ಗ್ರಂಥಾಲಯವನ್ನು ತನ್ನ ಮೊಮ್ಮಗನ ನೆನಪಿಗಾಗಿ ಹಾರ್ವರ್ಡ್ ವಿಶ್ವ ವಿದ್ಯಾಲಯಕ್ಕೆ ದಾನ ನೀಡಿದರು. ಟೈಟಾನಿಕ್ ದುರಂತದಲ್ಲಿ ಇವರ ಮೊಮ್ಮಗ ಹ್ಯಾರಿ ಅಸು ನೀಗಿದ್ದರು
1 comment:
ಸರ್ ಆಡಿಸನ್
addisonfinancialorporation@gmail.com
ಆತ್ಮೀಯ ಸರ್ / ಮ್ಯಾಡಮ್, ನಿಮ್ಮ ಮೂತ್ರಪಿಂಡವನ್ನು ಮಾರಲು ನೀವು ಬಯಸುತ್ತೀರಾ? ನೀವು ಒಂದು ಕೋರಿದ್ದೀರಾ?
ಆರ್ಥಿಕ ವಿಘಟನೆಯ ಕಾರಣದಿಂದ ಹಣಕ್ಕೆ ನಿಮ್ಮ ಮೂತ್ರಪಿಂಡವನ್ನು ಮಾರಲು ಅವಕಾಶವಿದೆ ಮತ್ತು ನೀವು ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲ, ನಂತರ ನಮ್ಮನ್ನು ಇಂದು ಸಂಪರ್ಕಿಸಿ ಮತ್ತು ನಿಮ್ಮ ಮೂತ್ರಪಿಂಡಕ್ಕೆ ನಾವು ನಿಮಗೆ ಉತ್ತಮ ಮೊತ್ತವನ್ನು ನೀಡುತ್ತೇವೆ. ನಮ್ಮನ್ನು ಸಂಪರ್ಕಿಸಿ: addisonfinancialorporation@gmail.com
Post a Comment