ಕೋಟಿ ಲೂಟಿಗಾಗಿ ಕಾನೂನಿಗೇ ಕೊಡಲಿ..!
'ಅಕ್ರಮ' ನಿನ್ನ ಹೆಸರೇ 'ಸಕ್ರಮ'..!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಖಚಿತವಾಗುತ್ತಿದ್ದಂತೆಯೇ ಸುಗ್ರೀವಾಜ್ಞೆ ಮೂಲಕ 'ಅಕ್ರಮ ಸಕ್ರಮ' ಕಾಯ್ದೆ ಜಾರಿಗೆ ತರಲು ಸಿದ್ಧತೆಗಳು ನಡೆದಿವೆ. ಇದು 'ಸಂಕ್ರಾಂತಿ' ಕೊಡುಗೆ ಎಂದೂ ಬಣ್ಣಸಲಾಗುತ್ತಿದೆ..! ಆದರೆ ಇದು ನಿಜವಾಗಿಯೂ 'ಜನರಿಗೆ ಕೊಡುಗೆಯೇ?' ಅಥವಾ ಜನರನ್ನು ಸುಲಿಯಲು ಅಧಿಕಾರಿಗಳು ರಾಜಕಾರಣಿಗಳಿಗೆ ಹೆದ್ದಾರಿಯೇ? ಈ ಲೇಖನದ ಜೊತೆಗೆ ಅವುಗಳಿಗೆ ಇರುವ ಕೊಂಡಿಗಳನ್ನೂ (Links) ದಯವಿಟ್ಟು ತೆರೆದು ಓದಿಕೊಳ್ಳಿ.
ನೆತ್ರಕೆರೆ ಉದಯಶಂಕರ
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ. ‘When laws are multiple, coruption multiplies’ ಅಂತ. ಅಂದರೆ ಕಾನೂನುಗಳು ಹಲವು ಆದಾಗ ಭ್ರಷ್ಟಾಚಾರ ಬಹುಪಟ್ಟು ಆಗುತ್ತದೆ ಅಂತ. ಅದರ ಅರ್ಥ: ಭ್ರಷ್ಟಾಚಾರ ಬೆಳೆಸಬೇಕು ಅಂದರೆ ಕಾನೂನುಗಳನ್ನು ಹೆಚ್ಚಿಸುತ್ತಾ ಹೋಗಬೇಕು ಎಂದೇ. 'ಅಕ್ರಮ ಸಕ್ರಮ' ಎಂಬ ಅದ್ಭುತ ಕಾನೂನು ಇದಕ್ಕೆ ಒಂದು ಅಮೋಘ ಉದಾಹರಣೆ.
ಸಮಾಜದಲ್ಲಿ ಹರಡಿರುವ ವ್ಯಾಪಕ ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಮಾನ ಹೊಣೆಗಾರರು ಎಂದು ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದರು. ಭ್ರಷ್ಟರ ಮೇಲೆ ಹೆಚ್ಚು ಕಡಿಮೆ ನಿತ್ಯ ದಾಳಿ ನಡೆದು ಅವರ ಭ್ರಷ್ಟಹಣದ ಖಜಾನೆಗಳೇ ಬೆಳಕಿಗೆ ಬರುತ್ತಿದ್ದರೂ, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತಹ ವ್ಯವಸ್ಥೆಯನ್ನು ಸೃಷ್ಟಿಸದ ರಾಜಕಾರಣಿಗಳ 'ಹುನ್ನಾರ'ವನ್ನು ಕಂಡೇ ಲೋಕಾಯುಕ್ತರು ಈ ಮಾತು ಹೇಳಿದ್ದಾರೆ ಎಂಬುದರಲ್ಲಿ ಸಂಶಯವೇನೂ ಇಲ್ಲ.
ಭ್ರಷ್ಟಾಚಾರವನ್ನು ವ್ಯವಸ್ಥಿತವಾಗಿ ಬೆಳೆಸುವುದು ಮತ್ತು ಉಳಿಸುವುದು ಹೇಗೆ ಎಂಬುದು ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿತ್ಯ ಚಿಂತನೆಯ ವಿಷಯ ಎಂಬುದು 'ಅಕ್ರಮ ಸಕ್ರಮ' ಕಾನೂನನ್ನು ಅಧ್ಯಯನ ಮಾಡಬಯಸುವ ಯಾರಿಗಾದರೂ ತತ್ ಕ್ಷಣವೇ ಹೊಳೆದುಬಿಡುತ್ತದೆ.ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ, ನಾಗರಿಕರನ್ನು ಬೆದರಿಸುವುದರ ಜೊತೆಗೆ ನ್ಯಾಯಾಲಯದ ಮೆಟ್ಟಲನ್ನೂ ಏರಿರುವ ಈ 'ಅಕ್ರಮ ಸಕ್ರಮ' ಕಾಯ್ದೆಯ ಅಂತಿಮ ರೂಪಕ್ಕೆ ಕರ್ನಾಟಕ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ನೀಡಿತು. ಈ ಕಾಯ್ದೆಯ ಜಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 10,000 ಕೋಟಿ ರೂಪಾಯಿಗಳು ಹರಿದು ಬರುತ್ತದೆ ಎಂದು ಸಚಿವರು, ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ.
ದಂಡಶುಲ್ಕ ಪಡೆದು 'ಅಕ್ರಮ'ಗಳನ್ನು 'ಸಕ್ರಮ' ಎಂಬುದಾಗಿ ಘೋಷಿಸಿ 'ಪ್ರಮಾಣ ಪತ್ರ' ನೀಡುವುದು ಈ ಕಾಯ್ದೆಯ ಉದ್ದೇಶ. ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳು, ಬಡಾವಣೆಗಳನ್ನು ಸಕ್ರಮಗೊಳಿಸಲು ಈ ಕಾಯ್ದೆಯಡಿಯಲ್ಲಿ ಅವಕಾಶ ಉಂಟು. ಇದಕ್ಕಾಗಿ ಹಿಂದೆ ನಿಗದಿ ಪಡಿಸಲಾಗಿದ್ದ 'ದಂಡಶುಲ್ಕ'ವನ್ನು ಈ ಬಾರಿ ಅರ್ಧಕ್ಕರ್ಧ ಇಳಿಸಲಾಗಿದೆ. ಹೀಗಾಗಿ ನಾಗರಿಕರಿಗೆ ಇದು ಹೊರೆಯಾಗುವುದಿಲ್ಲ ಎಂಬುದು ಸಚಿವರ, ಅಧಿಕಾರಿಗಳ ವಿವರಣೆ.
ಆದರೆ ವಾಸ್ತವಾಂಶ ಹಾಗಿಲ್ಲ, ದಂಡ ಶುಲ್ಕದ ಪ್ರಮಾಣ ಏನೇನೂ ಕಡಿಮೆಯಾಗಿಲ್ಲ ಎಂಬ ಆಕ್ಷೇಪ ಈಗಾಗಲೇ ನಾಗರಿಕರಿಂದ ವ್ಯಕ್ತವಾಗಿದೆ. ಇದಕ್ಕೂ ಹೆಚ್ಚಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಸಕ್ರಮ ಮಾಡುವುದೇ ಸರಿಯಲ್ಲ ಎಂಬಗ ತಕರಾರು ತೆಗೆದು ಈ ಹಿಂದೆಯೇ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳು ಇನ್ನೂ ಇತ್ಯರ್ಥವಾಗದೆ ವಿಚಾರಣಾ ಹಂತದಲ್ಲಿವೆ. ಇಂತಹ ಸಂದರ್ಭದಲ್ಲಿ ಈ "ಅಕ್ರಮ ಸಕ್ರಮ' ಕಾನೂನು ಜಾರಿ ಎಷ್ಟು ಸಮಂಜಸ ಎಂಬ ಪ್ರಶ್ನೆಗೂ ಉತ್ತರ ಲಭಿಸಿಲ್ಲ.
ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ ಕೆಲವು ಕಾನೂನು ಸಂಬಂಧಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಈ ಕಾನೂನು ತರುವ ಮೂಲಕ ಜನರನ್ನು ವಂಚಿಸುವ ಹಾಗೂ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುವ ಹುನ್ನಾರ ಈ ಯೋಜನೆಯ ಹಿಂದಿದೆ ಎಂಬುದರತ್ತ ಬೆಳಕು ಚೆಲ್ಲುವುದು ಈ ಲೇಖನದ ಯತ್ನ.
ಅಕ್ರಮ ಸಕ್ರಮ ಕಾಯ್ದೆಯ ವ್ಯಾಪ್ತಿಗೆ 'ಭೂ ಪರಿವರ್ತನೆಯಾಗದ ಕಂದಾಯ ನಿವೇಶನಗಳು/ ಬಡಾವಣೆಗಳು' ಬರುತ್ತವೆ ಎಂಬುದಾಗಿ ಸಚಿವರು, ಅಧಿಕಾರಿಗಳು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇದರ ಅಗತ್ಯ ಏನಿದೆ ಎಂಬುದು ಇಲ್ಲಿನ ಪ್ರಶ್ನೆ.
ದಾರಿ ತಪ್ಪಿಸುವ ಕ್ರಮ: ಅಧಿಕಾರಿಗಳು ಮತ್ತು ರಾಜಕಾರಣಿಗಳು ಜನರನ್ನು ದಾರಿ ತಪ್ಪಿಸುತ್ತಿರುವುದು ಇಲ್ಲೇ. ವಾಸ್ತವವಾಗಿ ನಗರ ಪ್ರದೇಶಗಳಲ್ಲಿ 'ನಗರಗಳ ವ್ಯವಸ್ಥಿತ ಅಭಿವೃದ್ಧಿಯ ಸಲುವಾಗಿ ನಗರ ಭೂಮಿ (ಮಿತಿ ಮತ್ತು ನಿಯಂತ್ರಣ) ಕಾಯ್ದೆ (Urban Land (Ceiling And Regulation) Act ) ಹಾಗೂ ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ (Town Planning Act) ಎಂಬ ಕಾಯ್ದೆಗಳು ದಶಕಗಳಷ್ಟು ಹಿಂದೆಯೇ ಜಾರಿಗೆ ಬಂದಿವೆ. ಹಾಗೆಯೇ ಬೆಂಗಳೂರು ನಗರ ಅಭಿವೃದ್ಧಿಗಾಗಿ ಬೆಂಗಳೂರು ನಗರ ಪ್ರಾಧಿಕಾರ ಕಾಯ್ದೆ (Bangalore Development Authority Act) ಕೂಡಾ ಜಾರಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ಭೂಮಿಯ ಬಳಕೆ ವಿಚಾರಗಳಿಗೆ ಸಂಬಂಧಿಸಿದಂತೆ ಈ ಕಾಯ್ದೆಗಳು ಅನ್ವಯಿಸುತ್ತವೆ ಹೊರತು, ಗ್ರಾಮೀಣ ಪ್ರದೇಶಗಳಲ್ಲಿ ಅನ್ವಯ ಆಗುವ ಕಂದಾಯ ಕಾಯ್ದೆಗಳು ಅಲ್ಲ. ಆದರೆ ಅಧಿಕಾರಿಗಳು/ ರಾಜಕಾರಣಿಗಳು ನಗರಗಳಲ್ಲೂ ಕಂದಾಯ ಕಾಯ್ದೆಗಳೇ ಅನ್ವಯವಾಗುತ್ತವೆ ಎಂದು ನಿರಂತರ 'ಬುರುಡೆ' ಬಿಡುತ್ತಿದ್ದಾರೆ.
ಕರ್ನಾಟಕ ಕಂದಾಯ ಕಾಯ್ದೆಯ ಪ್ರಕಾರ ಕೃಷಿಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸಬೇಕಾದಲ್ಲಿ ಭೂ ಪರಿವರ್ತನಾ ಶುಲ್ಕ (Land Conversion Charges) ಪಾವತಿ ಮಾಡಬೇಕು. ಆದರೆ ನಗರ ಭೂಮಿ (ಮಿತಿ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ಟೌನ್ ಪ್ಲಾನಿಂಗ್ ಕಾಯ್ದೆ ಅನ್ವಯವಾಗುವ ಪ್ರದೇಶಗಳಲ್ಲಿ ಕರ್ನಾಟಕ ಕಂದಾಯ ಕಾಯ್ದೆಯ (1964) (Karnataka Land Revenue Act-1964) ವಿಧಿಗಳು ಸೇರಿದಂತೆ ಇತರ ಭೂ ಸಂಬಂಧಿ ಕಾಯ್ದೆಗಳು ಅನ್ವಯಿಸುವುದಿಲ್ಲ. ನಗರಗಳ ಅಭಿವೃದ್ಧಿ ಸಲುವಾಗಿ ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ -ಒಡಿಪಿ, ಸಮಗ್ರ ಅಭಿವೃದ್ಧಿ ಯೋಜನೆ (ಕಾಂಪ್ರಹೆನ್ಸಿವ್ ಡೆವಲಪ್‌ಮೆಂಟ್ ಪ್ಲಾನ್- ಸಿಡಿಪಿ) ಅಥವಾ ಮಾಸ್ಟರ್ ಪ್ಲಾನ್ ರೂಪಿಸಿ ಅವುಗಳ ವ್ಯಾಪ್ತಿಗೆ ಯಾವ ಪ್ರದೇಶಗಳನ್ನು ಸೇರಿಸಲಾಗಿದೆಯೋ ಅಂತಹ ಪ್ರದೇಶಗಳಲ್ಲಿ ಈ ರೀತಿ ಪ್ರತ್ಯೇಕವಾಗಿ ಶುಲ್ಕ ಪಾವತಿಸಿ ಭೂ ಪರಿವರ್ತನೆ ಮಾಡಿಸಿಕೊಳ್ನಬೇಕಾಗಿಲ್ಲ. ಇಂತಹ ಪ್ರದೇಶಗಳಲ್ಲಿ ಟೌನ್ ಪ್ಲಾನಿಂಗ್ ಕಾನೂನಿನ ಅಡಿಯಲ್ಲೇ ಈ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಇದು ಈ ಕಾನೂನಿನ ವಿಧಿಗಳಲ್ಲೇ ಸ್ಪಷ್ಟವಾಗಿ ನಮೂದಿತವಾಗಿವೆ.
ಇಂತಹ ಭೂಮಿ ಕೃಷಿ ಭೂಮಿಯಾಗಿದ್ದರೂ ಕ್ರಮೇಣ ವಸತಿ ಪ್ರದೇಶಗಳಾಗಿ ಪರಿವರ್ತನೆಯಾಗುತ್ತದೆ. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಇಂತಹ ಭೂಮಿಯನ್ನು ವ್ಯವಸ್ಥಿತ ಅಭಿವೃದ್ಧಿಯ ಸಲುವಾಗಿ ಒಡಿಪಿ/ ಸಿಡಿಪಿ ಅಥವಾ ಮಾಸ್ಟರ್ ಪ್ಲಾನ್‌ಗಳ ಪ್ರಕಾರ ನಿರ್ದಿಷ್ಟ ಉದ್ದೇಶಗಳಿಗಾಗಿ ಅಂದರೆ ವಸತಿ/ ಹಸಿರುವಲಯ/ ಕೆರೆ ಕಾಲುವೆ ಪ್ರದೇಶ/ ಔದ್ಯೋಗಿಕ ಪ್ರದೇಶ ಇತ್ಯಾದಿಗಳಿಗಾಗಿ ಮೀಸಲು ಇಡಲಾಗುತ್ತದೆ. ಕಾಯ್ದೆಯ ಪ್ರಕಾರ ಇಂತಹ ಪ್ರದೇಶಗಳಲ್ಲಿ ನಿರ್ದಿಷ್ಟ ಪಡಿಸಲಾದ ಉದ್ದೇಶದ ಹೊರತಾಗಿ ಬೇರಾವುದಾದರೂ ಉದ್ದೇಶಕ್ಕೆ ಭೂಮಿಯನ್ನು ಬಳಸುವುದಿದ್ದರೆ ಶುಲ್ಕ ಪಾವತಿಸಿ ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕು ವಿನಃ ನಿರ್ದಿಷ್ಟ ಪಡಿಸಲಾದ ಉದ್ದೇಶಕ್ಕಾಗಿಯೇ ಆ ಭೂಮಿಯ ಬಳಕೆಯಾದರೆ ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ.
ನ್ಯಾಯಾಲಯಗಳ ತೀರ್ಪು: ಕಾನೂನಿನಲ್ಲಿ ಅತ್ಯಂತ ಸ್ಪಷ್ಟವಾಗಿರುವ ಈ ವಿಧಿಗಳನ್ನು ಕನಿಷ್ಠ ಐದು ಪ್ರಕರಣಗಳಲ್ಲಿ ಉನ್ನತ ನ್ಯಾಯಾಲಯಗಳು ಎತ್ತಿ ಹಿಡಿದಿವೆ.
(1) ವಿಶೇಷ ಜಿಲ್ಲಾಧಿಕಾರಿಗಳು ವರ್ಸಸ್ ನಾರಾಯಣಪ್ಪ (ಐಎಲ್ ಆರ್ 1988 ಕೆ ಎಆರ್ 1398) ಪ್ರಕರಣದಲ್ಲಿ 'ನಿರ್ದಿಷ್ಟ ಭೂಮಿಯು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಪ್ರದೇಶಕ್ಕಾಗಿ ಸಿದ್ಧ ಪಡಿಸಲಾದ ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್, ಅಥವಾ ಕಾಂಪ್ರಹೆನ್ಸಿವ್ ಡೆವಲಪ್‌ಮೆಂಟ್ ಪ್ಲಾನ್ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರೆ, ಪ್ಲಾನಿಂಗ್ ಕಾಯ್ದೆಯ 76-ಎಂ ಸೆಕ್ಷನ್ ವಿಧಿಯ ಪರಿಣಾಮವಾಗಿ, ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿಗಳು ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರ ಪ್ರಕಾರ ಹೊಂದಿದ ಅಧಿಕಾರವೂ ಸೇರಿದಂತೆ ಎಲ್ಲ ಕಾನೂನುಗಳ ಅಡಿಯಲ್ಲಿ ತಮಗೆ ಪ್ರಾಪ್ತವಾದ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ' ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಅರ್ಜಿದಾರರ ಭೂಮಿಯ ಬಳಕೆ ವಸತಿ ಉದ್ದೇಶದ್ದಾಗಿದ್ದು ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ ಮತ್ತು ಕಾಂಪ್ರಹೆನ್ಸಿವ್ ಡೆವೆಲಪ್‌ಮೆಂಟ್ ಪ್ಲಾನ್ ಎರಡರಲ್ಲೂ ಇದೇ ಉದ್ದೇಶಕ್ಕಾಗಿ ಪ್ರದೇಶವನ್ನು ನಿರ್ದಿಷ್ಟ ಪಡಿಸಿದ್ದರಿಂದ ಮತ್ತೊಮ್ಮೆ ಪ್ರತ್ಯೇಕ ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕಾದ ಅಗತ್ಯ ಉದ್ಭವಿಸುವುದೇ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಸಾರಿದೆ.
(2) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ತೀರ್ಪಿನ ವಿರುದ್ಧ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಮೇಲ್ಮನವಿ (ರಿಟ್ ಅಪೀಲ್ 2436ರಿಂದ 2444 ಆಫ್ 1985) ಸಲ್ಲಿಸಿತು. ಹೈಕೋರ್ಟಿನ ವಿಭಾಗೀಯ ಪೀಠವು 8-3-1989ರಂದು ನೀಡಿದ ತೀರ್ಪಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲ್ಮನವಿಯನ್ನು ತಿರಸ್ಕರಿಸಿ, ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.
(3) ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆಯ ಮಾದರಿಯ ನಿಯಮಗಳೇ ಇದ್ದ ಇಂತಹ ಪ್ರಕರಣವೊಂದು ದೆಹಲಿ ಹೈಕೋರ್ಟ್ ಮುಂದೆಯೂ ಬಂದಿತ್ತು. ಈ ಕಮಲಾ ಭಕ್ಷಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಎ.ಐ.ಆರ್.1987 ದೆಹಲಿ 180) ಪ್ರಕರಣದಲ್ಲಿ 'ದೆಹಲಿ ಅಭಿವೃದ್ಧಿ ಕಾಯ್ದೆಯ ಶಾಸನಾತ್ಮಕ ವಿಧಿಗಳ ಅಡಿಯಲ್ಲಿ ನಡೆಯುವ ಭೂ ಪರಿವರ್ತನೆಯು ಮಾಸ್ಟರ್ ಪ್ಲಾನ್ ಅಥವಾ ವಲಯ ಯೋಜನೆಗೆ ಸೇರ್ಪಡೆಯಾದ ಕ್ಷಣದಲ್ಲಿಯೇ ಶಾಸನಬದ್ಧ ಭೂ ಪರಿವರ್ತನೆಯಾಗುತ್ತದೆ' ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.
(4) ಕಾನೂನು ವರದಿ ಮಂಡಳಿಯ ಸದಸ್ಯರಾಗಿ, ನಂತರ ನ್ಯಾಯಾಧೀಶರಾಗಿ ಬಳಿಕ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಉತ್ತಮ ಹೆಸರು ಪಡೆದಿದ್ದ ಹಾಸನದವರಾದ ನ್ಯಾಯಮೂರ್ತಿ ಎಚ್.ಜಿ. ಬಾಲಕೃಷ್ಣ ಅವರು ತಮ್ಮ ಮುಂದೆ ಬಂದಿದ್ದ ವಿಶ್ವಭಾರತಿ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿ ವರ್ಸಸ್ ಬಿ ಡಿ ಎ (ರಿಟ್ ಅರ್ಜಿ 7910 ಆಫ್ 1986) ಪ್ರಕರಣಕ್ಕೆ ಸಂಬಂಧಿಸಿದಂತೆ 1990ರ ಮಾರ್ಚ್ 8ರಂದು ನೀಡಿದ ತೀರ್ಪಿನಲ್ಲಿ ಮೇಲಿನ ಮೂರೂ ಪ್ರಕರಣಗಳನ್ನು ಉಲ್ಲೇಖಿಸಿ, 'ಈ ತೀರ್ಪುಗಳನ್ನು ನಾನು ಒಪ್ಪುವುದಷ್ಟೇ ಅಲ್ಲ, ಗೌರವಿಸುತ್ತೇನೆ' ಎಂದು ಹೇಳಿ, 'ಕರ್ನಾಟಕ ಭೂ ಕಂದಾಯ ಕಾಯ್ದೆಯ ಅಡಿಯಲ್ಲಿ ಪ್ರತ್ಯೇಕ ಭೂ ಪರಿವರ್ತನಾ ಆದೇಶ ಪಡೆಯಬೇಕಾದ ಅಗತ್ಯವಿಲ್ಲ' ಎಂದು ಘೋಷಿಸಿದ್ದರು.
(5) ಈ ತೀರ್ಪಿನ ವಿರುದ್ಧವೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಮುಖ್ಯ ನ್ಯಾಯಮೂರ್ತಿ ಎಸ್.ಪಿ. ಭರೂಚಾ ಮತ್ತು ನ್ಯಾಯಮೂರ್ತಿ ಎಸ್. ಹಕೀಮ್ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ (ರಿಟ್ ಅಪೀಲ್ ನಂ.1844 ಆಫ್ 1990) ಸಲ್ಲಿಸಿತ್ತು. ಬೆಂಗಳೂರು ಯೋಜನಾ ಪ್ರದೇಶದ ವ್ಯಾಪ್ತಿಯಲ್ಲೇ ಇದ್ದು ಔಟ್‌ಲೈನ್ ಡೆವಲಪ್‌ಮೆಂಟ್ ಪ್ಲಾನ್ ಮತ್ತು ಕಾಂಪ್ರಹೆನ್ಸಿವ್ ಡೆವಲಪ್‌ಮೆಂಟ್ ಪ್ಲಾನ್‌ನಲ್ಲಿ ನಿಗದಿ ಪಡಿಸಿದ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಭೂಮಿ ಬಳಕೆಯಾಗುತ್ತಿರುವುದರಿಂದ ಏಕಸದಸ್ಯ ಪೀಠದ ನ್ಯಾಯೋಚಿತ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವ ಅಗತ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಸಾರುವ ಮೂಲಕ ನ್ಯಾಯಮೂರ್ತಿ ಭರೂಚ ನೇತೃತ್ವದ ಪೀಠ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲ್ಮನವಿಯನ್ನು ತಳ್ಳಿ ಹಾಕಿತು.
ಮೇಲಿನ ತೀರ್ಪುಗಳು ಮತ್ತು ಕಾನೂನಿನ ವಿಧಿಗಳು ಅತ್ಯಂತ ಸ್ಪಷ್ಟವಾಗಿರುವಾಗ ನಗರಗಳ ವಸತಿ ಪ್ರದೇಶಗಳಲ್ಲಿ ವಸತಿ ಉದ್ದೇಶಕ್ಕಾಗಿ ನಿಗದಿ ಪಡಿಸಲಾದ ಜಮೀನಿನಲ್ಲಿ ಭೂ ಪರಿವರ್ತನೆ ಆಗಿಲ್ಲ ಎಂಬ ನೆಪ ತೆಗೆದು ಬಡಾವಣೆಗಳನ್ನು ಅಕ್ರಮ ಎಂಬುದಾಗಿ ಘೋಷಿಸುವ ಕಂದಾಯ ಅಧಿಕಾರಿಗಳ ಕ್ರಮವೇ ಅಕ್ರಮವಾಗಿದ್ದು, ಇಂತಹ ಜಮೀನುಗಳನ್ನು 'ಸಕ್ರಮ'ಗೊಳಿಸುವ ಪ್ರಶ್ನೆ ಉದ್ಬವಿಸುವುದಾದರೂ ಹೇಗೆ?
ಹಾಗೆಯೇ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಮುನ್ನವೇ ಗ್ರಾಮ ಪಂಚಾಯ್ತಿ, ನಗರಸಭೆಗಳಿಂದ ಅನುಮತಿ ಪಡೆದು, ಅವುಗಳ ಖಾತೆ ಪಡೆದು ಕಂದಾಯ ಪಾವತಿ ಮಾಡಿದ್ದರೂ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದೊಡನೆಯೇ ಭೂ ಪರಿವರ್ತನೆಯಾಗಿಲ್ಲ ಎಂಬ ಕಾರಣಕ್ಕಾಗಿ ಅಂತಹ ಬಡಾವಣೆಗಳನ್ನು 'ಅಕ್ರಮ ಬಡಾವಣೆ'ಗಳ ವ್ಯಾಪ್ತಿಗೆ ಸೇರಿಸಿ, ಭಾರಿ ದಂಡ ಶುಲ್ಕ ವಿಧಿಸುವ 'ಅಕ್ರಮ ಸಕ್ರಮ' ಕಾಯ್ದೆ ಕಾನೂನು ಬದ್ಧವಾಗಲು ಹೇಗೆ ಸಾಧ್ಯ?
2 comments:
Law always blind, tresspassers always behind, judges love publicity, how can we get reality ? your article is noteworthy, be useful to next generations.
www.kodakkal.ning.com
ಹರೇ ರಾಮ
ಉದಯಣ್ಣಾ.....
ನೋಡಿದೆ, ಓದಿಸಿಗೊಂಡು ಹೋತು
ಧನ್ಯವಾದಗಳು
Hare Rama
KP
kp.edappady@yahoo.com
Post a Comment