My Blog List

Thursday, April 22, 2010

ಇಂದಿನ ಇತಿಹಾಸ History Today ಏಪ್ರಿಲ್ 22

ಇಂದಿನ ಇತಿಹಾಸ

ಏಪ್ರಿಲ್ 22

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಪ್ರತಿರೂಪವನ್ನೇ ಭಾರತೀಯ ಬಾರ್ಬಿ ಗೊಂಬೆ ತಯಾರಿಕೆಯಲ್ಲಿ ಬಳಸಲಾಗುವುದು ಎಂದು ಬ್ರಿಟನ್ ಪತ್ರಿಕೆಯೊಂದು ಉಲ್ಲೇಖಿಸಿತು. ಬಾರ್ಬಿ ಗೊಂಬೆಯಾಗಿ ಮಿಂಚಬೇಕಿದ್ದ ಐಶ್ವರ್ಯಾ ರೈ ಬಚ್ಚನ್ ಬದಲಿಗೆ ಬಾರ್ಬಿ ತಯಾರಿಕಾ ಕಂಪೆನಿ ಕತ್ರಿನಾ ಅವರನ್ನೇ ಆಯ್ಕೆ ಮಾಡಿದೆ ಎಂದು ಪತ್ರಿಕೆ ತಿಳಿಸಿತು. ತೆಳು ತ್ವಚೆಯ, ಭಾರತೀಯ ಸೊಬಗನ್ನು ಹೊಂದಿರುವ 24 ವರ್ಷದ ನಟಿ ಕತ್ರಿನಾ ಅವರ ತಂದೆ ಕಾಶ್ಮೀರಿ, ತಾಯಿ ಬ್ರಿಟನ್ ಸಂಜಾತೆ.

2009: ಇಬ್ಬರು ಉನ್ನತ ಎಲ್‌ಟಿಟಿಇ ವಕ್ತಾರ ಹಾಗೂ ನಾಯಕರಾದ ದಯಾ ಮಾಸ್ಟರ್ ಮತ್ತು ಮೃತ ರಾಜಕೀಯ ಧುರೀಣ ತಮಿಳ್‌ಸೆಲ್ವನ್ ನಿಕಟವರ್ತಿ ಜಾರ್ಜ್ ಶ್ರೀಲಂಕಾ ಪಡೆಗಳಿಗೆ ಶರಣಾಗತರಾದರು. ಎಲ್‌ಟಿಟಿಇ ಮುಖ್ಯಸ್ಥ ವೇಲು ಪಿಳ್ಳೈ ಪ್ರಭಾಕರನ್‌ಗೆ ಶರಣಾಗತನಾಗಲು ನೀಡಲಾಗಿದ್ದ 24 ಗಂಟೆಗಳ ಗಡುವು ಮುಗಿಯುತ್ತಿದ್ದಂತೆಯೇ ಶ್ರೀಲಂಕಾ ಪಡೆಗಳು ಅಂತಿಮ ದಾಳಿ ಆರಂಭಿಸಿ, ತಮಿಳು ಟೈಗರ್‌ಗಳ ವಶದಲ್ಲಿದ್ದ ಇನ್ನೊಂದು ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡವು.

2009: ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಪ್ರತಿರೂಪವನ್ನೇ ಭಾರತೀಯ ಬಾರ್ಬಿ ಗೊಂಬೆ ತಯಾರಿಕೆಯಲ್ಲಿ ಬಳಸಲಾಗುವುದು ಎಂದು ಬ್ರಿಟನ್ ಪತ್ರಿಕೆಯೊಂದು ಉಲ್ಲೇಖಿಸಿತು. ಬಾರ್ಬಿ ಗೊಂಬೆಯಾಗಿ ಮಿಂಚಬೇಕಿದ್ದ ಐಶ್ವರ್ಯಾ ರೈ ಬಚ್ಚನ್ ಬದಲಿಗೆ ಬಾರ್ಬಿ ತಯಾರಿಕಾ ಕಂಪೆನಿ ಕತ್ರಿನಾ ಅವರನ್ನೇ ಆಯ್ಕೆ ಮಾಡಿದೆ ಎಂದು ಪತ್ರಿಕೆ ತಿಳಿಸಿತು. ತೆಳು ತ್ವಚೆಯ, ಭಾರತೀಯ ಸೊಬಗನ್ನು ಹೊಂದಿರುವ 24 ವರ್ಷದ ನಟಿ ಕತ್ರಿನಾ ಅವರ ತಂದೆ ಕಾಶ್ಮೀರಿ, ತಾಯಿ ಬ್ರಿಟನ್ ಸಂಜಾತೆ. ಸುವರ್ಣ ವರ್ಷಾಚರಣೆ ಸಂಭ್ರಮದಲ್ಲಿರುವ ಬಾರ್ಬಿ ತಯಾರಿಕಾ ಕಂಪೆನಿ ಮ್ಯಾಟೆಲ್ ಕತ್ರಿನಾ ಮುಖವುಳ್ಳ ಗೊಂಬೆಗಳ ಉತ್ಪಾದನೆಯನ್ನು ಸೆಪ್ಟಂಬರ್‌ನಿಂದ ಆರಂಭಿಸುವುದು ಎಂದು ಪ್ರಕಟಿಸಲಾಯಿತು.

2009: ಸರ್ಕಾರದ ವಿರುದ್ಧ ಬರೆದು ತೀವ್ರ ಸಂಕಷ್ಟಕ್ಕೆ ಗುರಿಯಾದ ಶ್ರಿಲಂಕಾದ ಪತ್ರಿಕೆ 'ದಿ ಸಂಡೇ ಲೀಡರ್' ಬ್ರಿಟನ್‌ನ ಪ್ರತಿಷ್ಠಿತ ಅಭಿವ್ಯಕ್ತಿ ಸ್ವಾತಂತ್ರ್ಯ ಪುರಸ್ಕಾರಕ್ಕೆ ಪಾತ್ರವಾಯಿತು. ದಿ ಸಂಡೇ ಲೀಡರ್ ಆರಂಭವಾದಾಗಿನಿಂದಲೂ ನಿರಂತರ ಸರ್ಕಾರದ ವಿರೋಧ ಎದುರಿಸಿತ್ತು. ಪತ್ರಿಕೆಯ ಸಂಪಾದಕ ಲಸಂತಾ ವಿಕ್ರಮತುಂಘೆ ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಹತ್ಯೆ ಮಾಡಿದ್ದ. ಇದಕ್ಕೆ ಮೊದಲು ತನ್ನ ಹತ್ಯೆ ನಿಶ್ಚಿತ ಎಂದು ತೀರ್ಮಾನಿಸಿ ನಿಧನದ ನಂತರ ಪ್ರಕಟಿಸುವ ಸಂಪಾದಕೀಯವನ್ನೇ ಅವರು ಮೊದಲೇ ಬರೆದಿಟ್ಟಿದ್ದರು.

2009: ಮಾನವಬಾಂಬ್‌ಗಳಾಗಿ ಅಲ್‌ಖೈದಾ ತರಬೇತಿ ನೀಡ್ದಿದ ನಾಲ್ವರು ಮಕ್ಕಳನ್ನು ಇರಾಕ್ ಪೊಲೀಸರು ಬಂಧಿಸಿದರು. ತೈಲ ನಗರಿ ಕಿರ್ಕುಕ್ ಸಮೀಪದ ಹಳ್ಳಿಯೊಂದರಲ್ಲಿ ಈ ಮಕ್ಕಳನ್ನು ಪತ್ತೆ ಹಚ್ಚಲಾಯಿತು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಂಕಿತರು ಆತ್ಮಾಹುತಿ ದಳ 'ಬರ್ಡ್ಸ್ ಆಫ್ ಪ್ಯಾರಡೈಸ್'ಗೆ ಸೇರಿದವರು ಎನ್ನಲಾಯಿತು.

2009: ಕನ್ನಡದ ಹಿರಿಯ ಕವಿ, ಕಥೆ ಗಾರ, ವಿಮರ್ಶಕ ದೇಶ ಕುಲಕರ್ಣಿ (71) ಬೆಂಗಳೂರಿನಲ್ಲಿ ಈದಿನ ನಿಧನರಾದರು. 'ದೇಶ ಕುಲಕರ್ಣಿ' ಎಂಬ ಕಾವ್ಯನಾಮದಿಂದ ಪರಿಚಿತರಾಗಿದ್ದ ಅವರ ನಿಜವಾದ ಹೆಸರು ಡಿ.ಎಲ್.ಉಪೇಂದ್ರನಾಥ್. ಅವರು ಇಲ್ಲಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅನೇಕ ವರ್ಷಗಳ ಕಾಲ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಕನ್ನಡದ ನವ್ಯ ಲೇಖಕರಲ್ಲಿ ದೇಶ ಕುಲಕರ್ಣಿ ಒಬ್ಬರು. 'ನೆಪವಿಲ್ಲದ ಪ್ರೀತಿ', 'ಕೊಂಪೆಯಲ್ಲಿ ಕೋಗಿಲೆ', 'ಕೊಂಪೆ: ಋತು ಸಂಹಾರ', 'ಪಂಪಾ ಯಾತ್ರೆ', 'ಕೂಡಿಕೊಂಡ ಸಾಲು', 'ಪದ್ಯ ಗಂಧ' ಎಂಬ ಕವನ ಸಂಗ್ರಹಗಳನ್ನು ಅವರು ಪ್ರಕಟಿಸ್ದಿದರು. 'ಸೋಲೋ', 'ಚಿತ್ರದಲ್ಲಿನ ನೆರಳು' ಅವರ ಕಥಾ ಸಂಗ್ರಹಗಳು. 'ಪಾರುಪತ್ಯ' ಎಂಬ ನಾಟಕವನ್ನು ಅವರು ಬರೆದಿದ್ದಾರೆ. ಸಾಹಿತ್ಯ ವಿಮರ್ಶಕರೂ ಆಗಿದ್ದ ಅವರು 'ನಿರೀಕ್ಷೆ', 'ಅಂತರ', 'ಸಹಜ' ಎಂಬ ವಿಮರ್ಶಾ ಸಂಗ್ರಹಗಳನ್ನು ಪ್ರಕಟಿಸಿದ್ದರು. ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿದ ಕೆಲವೇ ಲೇಖಕರಲ್ಲಿ ಅವರೂ ಒಬ್ಬರಾಗಿದ್ದರು.

2009: ನ್ಯಾನೊ ತಂತ್ರಜ್ಞಾನ ಮೂಲಕ ಈ ಭಗವದ್ಗೀತೆಯ ಚಿಪ್ ಸೃಷ್ಟಿಸಿ ಅದಕ್ಕಾಗಿ ಪೇಟೆಂಟ್ ಕೂಡ ಪಡೆದ ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಪ್ರೊಫೆಸರ್ ಪವನ್ ಸಿನ್ಹಾ ಸಹಯೋಗದೊಂದಿಗೆ ತನಿಷ್ಕ್ ಆರು ಮಾದರಿಗಳಲ್ಲಿ ಪೆಂಡೆಂಟ್ ಸಿದ್ಧಪಡಿಸಿ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬೆಂಗಳೂರು ಸಹಿತ ದೇಶದ ಸುಮಾರು 50 ತನಿಷ್ಕ್ ಮಳಿಗೆಗಳಲ್ಲಿ ಈ ಪೆಂಡೆಂಟ್‌ಗಳನ್ನು ಮಾರಾಟಕ್ಕೆ ಇಡಲಾಯಿತು.

2009: ವಿಜಾಪುರ ಜಿಲ್ಲೆಯ ಹಾಸಂಗಿಹಾಳ್ ಕ್ರಾಸ್ ಬಳಿ 2001ರಲ್ಲಿ ನಡೆದ ಭೀಮಣ್ಣ ಸುಂಬದ್ ಕುಟುಂಬ ಸದಸ್ಯರ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಾಪುರದ ಒಂದನೇ ತ್ವರಿತ ನ್ಯಾಯಾಲಯವು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಭೀಮಣ್ಣ ಅವರ ಕುಟುಂಬದ ವಿರೋಧಿಗಳಾಗಿದ್ದ ಗುಗ್ಗೇರಿ ಕುಟುಂಬದವರು ಈ ಕೃತ್ಯ ಎಸಗಿದ್ದರು. ಭೀಮಣ್ಣ ಮತ್ತು ಅವರ ಕುಟುಂಬ ಸದಸ್ಯರು ಹಾಸಂಗಿಹಾಳ್ ಕ್ರಾಸ್ ಬಳಿ ಬಸ್‌ನಲ್ಲಿ ಹೋಗುತ್ತಿದ್ದಾಗ ಗುಗ್ಗೇರಿ ಕುಟುಂಬದವರು ಅವರನ್ನು ಕೆಳಗಿಳಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಘಟನೆಯಲ್ಲಿ ಭೀಮಣ್ಣ ಅವರ ಕುಟುಂಬದ ಐವರು ಮೃತರಾಗಿದ್ದರು.

2008: ಸಂಸತ್ ಭವನ ದಾಳಿ ಪ್ರಕರಣದ ಆರೋಪಿ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡುವ ಕುರಿತ ಮನವಿಗೆ ಗೃಹ ಸಚಿವಾಲಯವು, ರಾಷ್ಟ್ರಪತಿ ಕಲಾಂ ಅವರಿಗೆ ಅವರ ಅಧಿಕಾರಾವಧಿ ಕೊನೆಯ ದಿನದವರೆಗೂ ಸೂಚನೆ ಕಳಿಸಿರಲಿಲ್ಲ ಎಂಬ ವಿಚಾರ ಬಹಿರಂಗಗೊಂಡಿತು. ಇದರೊಂದಿಗೆ ಕಲಾಂ ಅವರು ಉದ್ದೇಶಪೂರ್ವಕವಾಗಿ ಕ್ಷಮಾದಾನದ ಮನವಿಯನ್ನು ಪರಿಶೀಲಿಸದೇ ಹಾಗೇ ಇಟ್ಟಿದ್ದರು ಎನ್ನುವ ವರದಿಗಳಿಗೆ ಎಳೆದಂತಾಯಿತು. ಕಲಾಂ ಅವರ ಅಧಿಕಾರಾವಧಿ ಮುಗಿದ 2007 ರ ಜುಲೈ 25 ರ ತನಕವೂ ಗೃಹ ಸಚಿವಾಲಯ ಈ ಬಗ್ಗೆ ಯಾವುದೇ ಶಿಫಾರಸು ನೀಡಿರಲಿಲ್ಲ ಎಂದು ಕಲಾಂ ಅವರಿಗೆ ಕಾರ್ಯದರ್ಶಿಯಾಗಿದ್ದ ಪಿ.ಎಂ.ನಾಯರ್ ಅವರು `ರಾಷ್ಟ್ರಪತಿಯವರೊಂದಿಗೆ ನನ್ನ ದಿನಗಳು' ಕೃತಿಯಲ್ಲಿ ಬಹಿರಂಗಪಡಿಸಿದರು.

2008: ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಾಲಯದಲ್ಲಿ ತ್ರಿಶೂರ್ ಜಿಲ್ಲೆಯ ಕುಟ್ಟೂರು ಗ್ರಾಮದ ಸತ್ಯನ್ ಎಂಬ ಭಕ್ತನೊಬ್ಬ ದೇವರ ಎದುರಿನಲ್ಲಿ ತನ್ನ ತುಲಾಭಾರಕ್ಕೆ 72 ಕಿ.ಲೋ. ತೂಕದ ಪ್ಯಾರಾಸಿಟಮಲ್ ಗುಳಿಗೆ (ಮಾತ್ರೆ)ಗಳನ್ನು ಬಳಸಿ ತುಲಾಭಾರದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ. ಈ ದೇವಾಲಯದಲ್ಲಿ ನಿತ್ಯವೂ ನೂರಾರು ಭಕ್ತರು ಬಾಳೆಹಣ್ಣಿನಿಂದ ಹಿಡಿದು ಹಲಸಿನ ಹಣ್ಣು ಹಾಗೂ ಇತರೆ ವಸ್ತುಗಳಿಂದ ತುಲಾಭಾರ ಮಾಡಿಸಿಕೊಂಡು ಆ ವಸ್ತುಗಳನ್ನು ದೇವಾಲಯಕ್ಕೆ ನೀಡುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಸತ್ಯನ್ ತಮ್ಮ 72 ಕಿ.ಲೋ. ತೂಕದ ದೇಹವನ್ನು ಗುಳಿಗೆಗಳ ಮೂಲಕ ತುಲಾಭಾರ ಮಾಡಿಸಿಕೊಂಡು ವಿಶಿಷ್ಟತೆ ಮೆರೆದರು. ದೇವಾಲಯದ ಅಧಿಕಾರಿಗಳು ಈ ಗುಳಿಗೆಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ನೀಡಿದರು.

2008: ಕರ್ನಾಟಕದಲ್ಲಿ ಮೇ 16ರಂದು ನಡೆಯುವ ಎರಡನೇ ಹಂತದ ವಿಧಾನಸಭಾ ಚುನಾವಣೆಗಳಿಗಾಗಿ ಚುನಾವಣಾ ಆಯೋಗವು ಈದಿನ ಅಧಿಸೂಚನೆ ಹೊರಡಿಸಿತು. ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಈ ಹತ್ತು ಜಿಲ್ಲೆಗಳ 66 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುವುದು.

2008: ಬ್ರಿಟನ್ ಮಹಾಚುನಾವಣೆಯಲ್ಲಿ ಹಿಂದು ಮತ್ತು ಸಿಖ್ ಸಮುದಾಯಗಳು ಅತ್ಯಂತ ಹೆಚ್ಚಿನ ಮತದಾನ ಸಾಮರ್ಥ್ಯ ಪಡೆದಿವೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. 2001ರಲ್ಲಿ ಶೇಕಡಾ 61.3ರಷ್ಟು ಹಿಂದುಗಳು ಮತದಾನ ಮಾಡಿದ್ದರೆ, ಸಿಖ್ ಸಮುದಾಯ ಶೇಕಡಾ 59.7ರಷ್ಟು ಹಾಗೂ ಮುಸ್ಲಿಂ ಸಮುದಾಯ ಶೇಕಡಾ 58.5ರಷ್ಟು ಮತದಾನ ಮಾಡಿದ್ದವು ಎಂಬ ವಿಚಾರವನ್ನು ಸಂಶೋಧನೆ ಬಹಿರಂಗಪಡಿಸಿತು. ಹಿಂದು ಕೌನ್ಸಿಲ್ ಯುಕೆ (ಎಚ್ ಸಿ ಯು ಕೆ) ಈ ಸಂಶೋಧನೆಯನ್ನು ನಡೆಸಿತು. ಸಾಮಾಜಿಕ ಸಂಶೋಧನಾ ಸಂಘಟನೆ ಜೋಸೆಫ್ ರೌನ್ ಟ್ರೀ ಫೌಂಡೇಷನ್ ಇದಕ್ಕೆ ನಿಧಿ ಸಹಾಯ ಮಾಡಿತ್ತು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಎಡ್ವರ್ಡ್ ಫೀಲ್ಡ್ ಹೌಸ್ ಮತ್ತು ಡೇವಿಡ್ ಕಟ್ಸ್ ಈ ಸಂಶೋಧನೆಗೆ ನೆರವಾಗಿದ್ದರು.

2008: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು, ರಾಮನಗರ, ದಾವಣಗೆರೆ, ಕೊಪ್ಪಳ ಮತ್ತು ಬೆಳಗಾವಿಯಲ್ಲಿ ವಿವಿಧ ಇಲಾಖೆಗಳ ಒಬ್ಬ ಡಿಸಿಪಿ, ಒಬ್ಬ ಹೆಚ್ಚುವರಿ ಎಸ್ಪಿ ಸೇರಿದಂತೆ ಎಂಟು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 45 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದರು.

2008: ಬಿಜೆಪಿ ಮಹಾರಾಷ್ಟ್ರ ಘಟಕದ ಕಾರ್ಯ ನಿರ್ವಹಣೆ ವಿರುದ್ಧ ಬಂಡಾಯದ ಬಾವುಟ ಬೀಸಿದ್ದ ಪಕ್ಷದ ಹಿರಿಯ ನಾಯಕ ಗೋಪಿನಾಥ ಮುಂಡೆ ಅವರು ನವದೆಹಲಿಗೆ ಆಗಮಿಸಿ ಪಕ್ಷದ ಹಿರಿಯ ನಾಯಕ ಎಲ್. ಕೆ. ಆಡ್ವಾಣಿ ಮತ್ತು ಅಧ್ಯಕ್ಷ ರಾಜನಾಥ್ ಸಿಂಗ್ ಅವರಲ್ಲಿ ತಮ್ಮ ದುಗುಡ ತೋಡಿಕೊಂಡರು ಹಾಗೂ ವರಿಷ್ಠರ ಸೂಚನೆ ಮೇರೆಗೆ ತಾವು ನೀಡಿದ ರಾಜೀನಾಮೆಯನ್ನು ಹಿಂದಕ್ಕೆ ಪಡೆದರು. ಇದರೊಂದಿಗೆ ಮೂರು ದಿನಗಳಿಂದ ಉದ್ಭವಿಸ್ದಿದ ಮಹಾರಾಷ್ಟ್ರ ಬಿಜೆಪಿ ಘಟಕದ ಬಿಕ್ಕಟ್ಟು ಕೊನೆಗೊಂಡಿತು.

2008: ರಾಜ್ಯದ ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಜೋಡಿ ನಿರ್ಮಿಸಿದ `ವೈಲ್ಡ್ ಡಾಗ್ ಡೈರಿಸ್'ಗೆ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ ದೊರಕಿತು. ಫ್ರಾನ್ಸ್ ಚಿತ್ರೋತ್ಸವದಲ್ಲಿ ವನ್ಯಜೀವಿ ಚಿತ್ರ ವಿಭಾಗದ ಅತ್ಯುತ್ತಮ ಪುರಸ್ಕಾರ ಹಾಗೂ ಎರಡು ಸಾವಿರ ಡಾಲರ್ ನಗದು ಈ ಚಿತ್ರಕ್ಕೆ ದೊರಕಿತು. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ಗಾಗಿ ನಿರ್ಮಿಸಿದ ಈ ಚಿತ್ರಕ್ಕೆ ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಬಿಬಿಸಿ ವೈಲ್ಡ್ ಸ್ಕ್ರೀನ್, ಬರ್ಲಿನ್ ಹಾಗೂ ಜರ್ಮನಿ ವನ್ಯಜೀವಿ ಚಿತ್ರೋತ್ಸವದಲ್ಲಿ ನಾಮಕರಣಗೊಂಡುದರ ಜೊತೆಗೆ ಜಪಾನಿನ ವನ್ಯಜೀವಿ ಚಿತ್ರೋತ್ಸವ, ಸಿಂಗಪುರದ ಏಷ್ಯನ್ ಟೆಲಿಫಿಲಂ ಪ್ರಶಸ್ತಿ ಹಾಗೂ ನವದೆಹಲಿಯಲ್ಲಿ ವಾತಾವರಣ್ ಅಂತಾರಾಷ್ಟ್ರೀಯ ಪ್ರಶಸ್ತಿ ಈ ಚಿತ್ರಕ್ಕೆ ದೊರಕಿದೆ.

2007: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂಬುದಾಗಿ ಘೋಷಿಸಿ ಗೋ ಹತ್ಯೆಯನ್ನು ದೇಶದಾದ್ಯಂತ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರವೇ ಗೋಹತ್ಯಾ ನಿಷೇದ ಮಸೂದೆ ಜಾರಿಗೊಳಿಸಬೇಕು ಎಂದು ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಅವರ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

2007: ಭಾರತ -ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯನ್ನು ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರದ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದು ಬ್ರಹ್ಮೋಸ್ನ 10ನೇ ಪ್ರಾಯೋಗಿಕ ಪರೀಕ್ಷೆ.

2007: ಕ್ರಿಕೆಟ್ ಜಗತ್ತಿನ ಧ್ರುವತಾರೆ, ದಾಖಲೆಗಳ ವೀರ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಬಾರ್ಬಡಾಸ್ ನಲ್ಲಿ ನಡೆದ ಎರಡನೇ ಹಂತದ ಕೊನೆಯ ಪಂದ್ಯದಲ್ಲಿ ತಮ್ಮ ವಿಶ್ವಕಪ್ ನ ಕೊನೆಯ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಇತಿಶ್ರೀ ಹಾಡಿದರು.

2007: ಬುದ್ಧಿ ಮಾಂದ್ಯ ಮಕ್ಕಳ ಮಧುರಂ ನಾರಾಯಣನ್ ಕೇಂದ್ರದ ಸಂಸ್ಥಾಪಕ ಹಾಗೂ ಮಾಜಿ ಏರ್ ವೈಸ್ ಮಾರ್ಷಲ್ ವಿ. ಕೃಷ್ಣಸ್ವಾಮಿ (81) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಅವರು ತಮಿಳುನಾಡಿನ ವಾಯುಪಡೆ ಮತ್ತು ಹಿರಿಯರ ಸೇವಾ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ಸ್ಥಾಪಿಸಿದ ಮಧುರಂ ನಾರಾಯಣನ್ ಕೇಂದ್ರಕ್ಕಾಗಿ 2004ರಲ್ಲಿ ಅವರನ್ನು ರಾಷ್ಟ್ರಪತಿಗಳು ಗೌರವಿಸಿದ್ದರು.

2007: ಬೆಂಗಳೂರು ಉದ್ಯಾನನಗರಿಯಲ್ಲಿ ಏಪ್ರಿಲ್ 21ರ ನಡುರಾತ್ರಿ ಸುರಿದ ಭಾರಿ ಮಳೆಗೆ ರಾಜಧಾಮಿಯ ನಿವಾಸಿಗಳು ತತ್ತರಿಸಿದರು. ಭಾರತಿ ನಗರದ ದೊಡ್ಡ ಚರಂಡಿಯಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದು ಸೇರಿ ಇಬ್ಬರು ಮೃತರಾದರು. ಮಧ್ಯರಾತ್ರಿ 12.30 ರಿಂದ ಸತತ ಮೂರು ಗಂಟೆಗಳ ಕಾಲ ಮಳೆ ಬಂದಿದ್ದು, ಒಟ್ಟಾರೆ 75 ಮಿ.ಮೀ (7.5 ಸೆಂ.ಮೀ) ಮಳೆಯಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 48 ಮಿ.ಮೀ (4.8 ಸೆಂ.ಮೀ) ಮಳೆ ಸುರಿದು, ನಗರದಲ್ಲಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಯಿತು.

2007: ದೊರೆಯ ಆಸ್ತಿಪಾಸ್ತಿ ರಾಷ್ಟ್ರೀಕರಣ ಮಾಡುವ ತನ್ನ ಬದ್ಧತೆಯನ್ನು ಈಡೇರಿಸುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಆಪಾದಿಸಿ ನೇಪಾಳದ ಮಾವೋವಾದಿಗಳು ಕಠ್ಮಂಡುವಿನಲ್ಲಿ ದೊರೆಯ ಆಸ್ತಿಪಾಸ್ತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಆರಂಭಿಸಿದರು. ದೊರೆಯ ಆಸ್ತಿಪಾಸ್ತಿ ವಶಕ್ಕೆ ಕಾನೂನು ರೂಪಿಸುವಲ್ಲಿ ಸಂಸತ್ತು ವಿಫಲವಾಗಿದೆ. ಹಾಗಾಗಿ ಈಗ ಯಂಗ್ ಕಮ್ಯೂನಿಸ್ಟ್ ಲೀಗ್ ಆ ಕಾರ್ಯ ಮಾಡಿ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸುವುದು ಎಂದು ಸಿಪಿಎನ್ ಮಾವೋವಾದಿ ಹಿಟ್ ಮನ್ ಶಾಕ್ಯದ ಕೇಂದ್ರೀಯ ಸಮಿತಿ ತಿಳಿಸಿತು.

2007: ಬಾಂಗ್ಲಾದೇಶದ ಸೇನೆ ಬೆಂಬಲಿತ ಮಧ್ಯಂತರ ಸರ್ಕಾರವು ಮಾಜಿ ಪ್ರಧಾನಿ ಹಸೀನಾ ಅವರ ಪುನರಾಗಮನಕ್ಕೆ ನಿಷೇಧ ವಿಧಿಸಿದ ಹಿನ್ನೆಲೆಯಲ್ಲಿ ಬ್ರಿಟಿಷ್ ಸರ್ಕಾರವು ಹಸೀನಾ ಅವರನ್ನು ಬ್ರಿಟನ್ ಬಿಟ್ಟು ಹೊರಡದಂತೆ ನಿರ್ಬಂಧಿಸಿತು. ಆಕೆಯನ್ನು ಢಾಕಾಗೆ ಒಯ್ಯಬೇಕಿದ್ದ ಬ್ರಿಟಿಷ್ ಏರ್ವೇಸ್ ಸಂಸ್ಥೆಯು ಟಿಕೆಟ್ ಹೊಂದ್ದಿದರೂ ಹಸೀನಾ ಅವರಿಗೆ ವಿಮಾನ ಏರಲು ಅವಕಾಶ ನಿರಾಕರಿಸಿತು. ಢಾಕಾಗೆ ಹೊರಡುವ ವಿಮಾನದ ನಿರ್ಗಮನ ವೇಳೆಯಿಂದ 90 ನಿಮಿಷಗಳಷ್ಟು ಮೊದಲೇ ಹಸೀನಾ ಹೀಥ್ರೂ ವಿಮಾನ ನಿಲ್ದಾಣ ತಲುಪಿದ್ದರು.

2006: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಮೋದ ಮಹಾಜನ್ (56) ಅವರ ಮೇಲೆ ಒಡಹುಟ್ಟಿದ ಸಹೋದರ ಪ್ರವೀಣ್ ಮಹಾಜನ್ ಮಾತಿನ ಚಕಮಕಿ ಮಧ್ಯೆ ಸಿಟ್ಟಿಗೆದ್ದು ಗುಂಡು ಹಾರಿಸಿದರು. ತೀವ್ರವಾಗಿ ಗಾಯಗೊಂಡ ಪ್ರಮೋದ್ ಮಹಾಜನ್ ಅವರನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮುಂಬೈಯ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಯಿತು. ಮುಂಬೈಯ ವರ್ಲಿಯ ಪ್ರಮೋದ್ ಮಹಾಜನ್ ಮನೆಯಲ್ಲೇ ಈ ಗುಂಡು ಹಾರಾಟದ ಘಟನೆ ನಡೆಯಿತು.

2006: ವರನಟ ಡಾ. ರಾಜ್ ಕುಮಾರ್ ಅವರ ಉತ್ತರಕ್ರಿಯೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೊ ಸಮಾಧಿ ಬಳಿ ಕುಟುಂಬ ಸದಸ್ಯರು ವಿಧಿವತ್ತಾಗಿ ನೆರವೇರಿಸಿದರು.

2006: ಗಣ್ಯ ವ್ಯಕ್ತಿಗಳಿಂದ ಹತ್ಯೆಗೀಡಾದ ರೂಪದರ್ಶಿ ಜೆಸ್ಸಿಕಾಲಾಲ್ ಅವರ ತಂದೆ ಅಜಿತ್ ಕುಮಾರ್ ಲಾಲ್ ಅವರು ನವದೆಹಲಿಯಲ್ಲಿ ಮೆದುಳಿನ ರಕ್ತಸ್ರಾವಕ್ಕೆ ತುತ್ತಾದ ಒಂದು ತಿಂಗಳ ಬಳಿಕ ನಿಧನರಾದರು. 1999ರ ಏಪ್ರಿಲ್ 29ರಂದು ಹೋಟೆಲಿನಲ್ಲಿ ಹರ್ಯಾಣ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ ಮತ್ತು ಇತರರು ಮದ್ಯ ಸರಬರಾಜು ಮಾಡಲು ನಿರಾಕರಿಸಿದ್ದಕ್ಕಾಗಿ ಜೆಸ್ಸಿಕಾಲಾಲ್ ಅವರನ್ನು ಗುಂಡಿಟ್ಟು ಕೊಂದಿದ್ದರು. 2000ನೇ ಇಸವಿಯಲ್ಲಿ ಆಕೆಯ ತಾಯಿ ಮೃತಳಾಗಿದ್ದಳು. ತಂದೆ ಅಂದಿನಿಂದಲೇ ಅಸ್ವಸ್ಥರಾಗಿದ್ದರು.. 2006ರ ಫೆಬ್ರುವರಿ 21ರಂದು ದೆಹಲಿಯ ನ್ಯಾಯಾಲಯವೊಂದು ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಿದ ಬಳಿಕ ಆಕೆಯ ತಂದೆ ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದರು.

1994: ಅಮೆರಿಕದ 37ನೇ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ತಮ್ಮ 81ನೇ ವಯಸ್ಸಿನಲ್ಲಿ ನ್ಯೂಯಾರ್ಕಿನ ಆಸ್ಪತ್ರೆಯೊಂದರಲ್ಲಿ ಮೃತರಾದರು.

1970: ಅಮೆರಿಕವು ಮೊತ್ತ ಮೊದಲ `ಅರ್ಥ್ ಡೇ' (ಭೂ ದಿನ) ಆಚರಿಸಿತು. ಕೈಗಾರಿಕೀಕರಣದ ದುಷ್ಪರಿಣಾಮ ಮತ್ತು ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಪ್ರಥಮ ಪ್ರಯತ್ನ ಇದಾಗಿತ್ತು.

1967: ಕಲಾವಿದ ರವೀಂದ್ರ ಎಲ್. ಜನನ.

1965: ಕಲಾವಿದೆ ಶಾಂತಲಕ್ಷ್ಮಿ ಜನನ.

1950: ಕಲಾವಿದ ಗಂಗಾಧರ ಸ್ವಾಮಿ ಜನನ.

1949: ಕಲಾವಿದ ವಸಂತ ಲಕ್ಷ್ಮಿ ಬೇಲೂರು ಜನನ.

1945: ಹಾಸ್ಯನಟರಾಗಿ ಪ್ರಖ್ಯಾತರಾಗಿರುವ ಎಂ.ಎಸ್. ಉಮೇಶ್ ಅವರು ಎ.ಎಲ್. ಶ್ರೀಕಂಠಯ್ಯ ಮತ್ತು ತಾಯಿ ನಂಜಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಮಗುವಾಗಿದ್ದಾಗಲೇ ರಂಗಪ್ರವೇಶ ಮಾಡಿ ರಂಗಭೂಮಿಯತ್ತ ಒಲವು ಬೆಳೆಸಿಕೊಂಡ ಉಮೇಶ್, ಕೆ. ಹಿರಣ್ಣಯ್ಯ ಮಿತ್ರ ಮಂಡಳಿಯಲ್ಲಿ ಅನಕೃ ಅವರು ಬರೆದ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಪಾತ್ರಧಾರಿಯಾಗಿ ರಂಗಪ್ರವೇಶಿಸಿದರು. ಮುಂದೆ ಕಥಾ ಸಂಗಮ ಚಲನ ಚಿತ್ರದ ತಿಮ್ಮರಾಯಿ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರವೇಶಿಸಿ ಉತ್ತಮ ನಟನಾಗಿ ಮಿಂಚಿದರು.

1921: ಕಲಾವಿದ ದೇವಪ್ಪಯ್ಯ ಅಪ್ಪಯ್ಯ ಜನನ.

1904: ಜ್ಯೂಲಿಯಸ್ ರಾಬರ್ಟ್ ಒಪ್ಪೆನ್ಹೀಮರ್ (1904-67) ಜನ್ಮದಿನ. ಈತ ಅಣುಬಾಂಬ್ ಅಭಿವೃದ್ಧಿ ಕಾಲದಲ್ಲಿ (1943-45) ಲಾಸ್ ಅಲಮೋಸ್ ಲ್ಯಾಬೋರೇಟರಿ ಹಾಗೂ ಪ್ರಿನ್ಸ್ ಟನ್ನ ಇನ್ ಸ್ಟಿಟ್ಯೂಟ್ ಫಾರ್ ಅಡ್ವಾನ್ಸಡ್ ಸ್ಟಡಿಯ ನಿರ್ದೇಶಕನಾಗಿದ್ದ.

1500: ಪೆಡ್ರೊ ಅಲ್ವರೆಝ್ ಕಾಬ್ರೆಲ್ ಬ್ರೆಜಿಲನ್ನು ಶೋಧಿಸಿದ. ಆತ ಇದಕ್ಕೆ `ಐಲ್ಯಾಂಡ್ ಆಫ್ ಟ್ರು ಕ್ರಾಸ್' ಎಂದು ಹೆಸರು ಇಟ್ಟ. ನಂತರ ದೊರೆ ಮ್ಯಾನ್ಯುಯೆಲ್ `ಹೋಲಿ ಕ್ರಾಸ್' ಎಂಬುದಾಗಿ ಮರುನಾಮಕರಣ ಮಾಡಿದ. ಅಂತಿಮವಾಗಿ ಅದಕ್ಕೆ ಈಗಿನ ಬ್ರೆಜಿಲ್ ಎಂಬ ಹೆಸರು ಬಂತು. ಇದಕ್ಕೆ ಅಲ್ಲಿ ಸಿಗುವ `ಪೌ-ಬ್ರೆಸಿಲ್' ಎಂಬ ಬಣ್ಣದ ಮರ (ಡೈವುಡ್) ಕಾರಣ.

No comments:

Advertisement