Wednesday, May 12, 2010

ಇಂದಿನ ಇತಿಹಾಸ History Today ಮೇ 12

ಇಂದಿನ ಇತಿಹಾಸ

ಮೇ 12

ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಸಖಾನ್ ದೊಸೊವ (130) ಲಂಡನ್ನಿನಲ್ಲಿ ಮೃತರಾದರು. ಅವರು ತಮ್ಮ ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದ ನಂತರ ಸೊಂಟ ಮುರಿದುಕೊಂಡಿದ್ದರು. ಅದರಿಂದ ಅವರು ಚೇತರಿಸಿಕೊಂಡಿರಲಿಲ್ಲ. ಆನಂತರ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಜನಗಣತಿಯಿಂದ ಬೆಳಕಿಗೆ ಬಂದ ಮಾಹಿತಿಯಂತೆ ದೊಸೊವ ಜನ್ಮ ದಿನಾಂಕ 27 ನೇ ಮಾರ್ಚ್ 1879 ಎಂದು ಅಧಿಕಾರಿಗಳು ದೃಢಪಡಿಸಿದ್ದಾಗಿ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿತು.

2009: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಸಖಾನ್ ದೊಸೊವ (130) ಲಂಡನ್ನಿನಲ್ಲಿ ಮೃತರಾದರು. ಅವರು ತಮ್ಮ ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದ ನಂತರ ಸೊಂಟ ಮುರಿದುಕೊಂಡಿದ್ದರು. ಅದರಿಂದ ಅವರು ಚೇತರಿಸಿಕೊಂಡಿರಲಿಲ್ಲ. ಆನಂತರ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಜನಗಣತಿಯಿಂದ ಬೆಳಕಿಗೆ ಬಂದ ಮಾಹಿತಿಯಂತೆ ದೊಸೊವ ಜನ್ಮ ದಿನಾಂಕ 27 ನೇ ಮಾರ್ಚ್ 1879 ಎಂದು ಅಧಿಕಾರಿಗಳು ದೃಢಪಡಿಸಿದ್ದಾಗಿ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿತು. ಈಕೆಯ ದೀರ್ಘಾಯುಷ್ಯದ ಗುಟ್ಟೇನು? ಮಾರ್ಚ್ ತಿಂಗಳಲ್ಲಿ ನೀಡಿದ ಸಂದರ್ಶನದಲ್ಲಿ ಈ ಪ್ರಶ್ನೆಗೆ ತಾವೆಂದೂ ಔಷಧ, ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ, ಸಿಹಿಯನ್ನು ತಿನ್ನುತ್ತಿರಲಿಲ್ಲ ಎಂದು ಉತ್ತರಿಸಿದ್ದರು. ಎರಡು ಬಾರಿ ವಿವಾಹವಾಗಿದ್ದ ಇವರು ಎರಡನೇ ಮಹಾಯುದ್ಧದಲ್ಲಿ ಗಂಡನನ್ನು ಕಳೆದುಕೊಂಡಿದ್ದರು.

2009: ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಗಳನ್ನು ಒದಗಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೇ 11ರಂದು ದಾಖಲೆಯ ಮೊತ್ತ 2.44 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಿತು. ಮೇ 4ರಂದು ಬಿಎಂಟಿಸಿ 2.38 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಆದರೆ ಇದಕ್ಕಿಂತಲೂ ಹೆಚ್ಚು ಅಂದರೆ ಮೇ 11ರಂದು ಸಾರ್ವಕಾಲಿಕ ದಾಖಲೆಯಾದ ಮೊತ್ತವನ್ನು (2,44,21,702) ಸಂಗ್ರಹಿಸಲಾಯಿತು ಎಂದು ಬಿಎಂಟಿಸಿ ತಿಳಿಸಿತು.

2009: ನೌಕಾದಳದ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಸ್. ಎಂ. ನಂದಾ (93) ನವದೆಹಲಿಯ ಆಸ್ಪತ್ರೆಯಲ್ಲಿ ಮೃತರಾದರು. 1971ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ಥಾನದ ಯುದ್ಧದಲ್ಲಿ ಅವರು ಭಾಗವಹಿಸಿದ್ದರು. ಕೇಂದ್ರ ಸರ್ಕಾರವು ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

2009: ಹೈದರಾಬಾದ್ ನಗರದ ಲೋಟಸ್ ಲ್ಯಾಪ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ತೇಜಶ್ರೀ 999 ಅಡಿ ಉದ್ದದ ಹಾಳೆಯಲ್ಲಿ ಉರ್ದು ಲಿಪಿಯಲ್ಲಿ ಕುರಾನ್ ಗ್ರಂಥವನ್ನು ಬರೆದು ದಾಖಲೆ ಸ್ಥಾಪಿಸಿದಳು. 10ನೇ ತರಗತಿ ವಿದ್ಯಾರ್ಥಿನಿ ತೇಜಶ್ರೀಯ ತಂದೆ ಬಾಲು ಖ್ಯಾತ ಕಲಾವಿದರು. ಏಪ್ರಿಲ್ 23ರಿಂದ ಆಕೆ ಉರ್ದು ಲಿಪಿಯಲ್ಲಿ ಕುರಾನ್ ಬರೆಯಲು ಆರಂಭಿಸಿದ್ದಳು. ಈ ಅತಿ ಉದ್ದದ ಕುರಾನ್ ಪ್ರತಿಯನ್ನು ಟಿಡಿಪಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲಿಸಲಾಯಿತು.

2009: ಪ್ರತಿಷ್ಠಿತ 'ಅಮೆರಿಕನ್ ಕಾಲೇಜ್ ಆಫ್ ಫೋರೆನ್ಸಿಕ್ ಎಕ್ಸಾಮಿನರ್ಸ್‌ ಇನ್‌ಸ್ಟಿಟ್ಯೂಟ್'ನ (ಎಸಿಎಫ್‌ಇಐ) ಗೌರವ ಸದಸ್ಯರಾಗಿ ಭಾರತೀಯ ವಿಜ್ಞಾನಿ ಪ್ರೊಫೆಸರ್ ಪಕ್ಕಿರಿಸಾಮಿ ಚಂದ್ರಶೇಖರನ್ ನೇಮಕಗೊಂಡರು. ಇವರು ರಾಜೀವ್ ಗಾಂಧಿ ಹತ್ಯೆಯ ತನಿಖೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಂದ್ರಶೇಖರ್ ಅವರು ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದವರು. 2008ರಲ್ಲಿ ಇವರ 'ದಿ ಅನ್‌ಟೋಲ್ಡ್ ಹ್ಯೂಮನ್ ಬಾಂಬ್-ದಿ ಅನ್‌ಟೋಲ್ಡ್ ಸ್ಟೋರಿ ಆಫ್ ದಿ ರಾಜೀವ್ ಗಾಂಧಿ ಅಸಾಸಿನೇಷನ್'' ಎಂಬ ಪುಸ್ತಕ ಬಿಡುಗಡೆಯಾಗಿತ್ತು.

2008: ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಿಚುವಾನ್ ಪ್ರಾಂತ್ಯದಲ್ಲಿ ಸುಮಾರು 9000 ಜನರು ಪ್ರಾಣ ಕಳೆದುಕೊಂಡರು. 900 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವರೆಂದು ಶಂಕಿಸಲಾಯಿತು. ಅಂತಾರಾಷ್ಟ್ರೀಯ ಕಾಲಮಾನ ಬೆಳಗ್ಗೆ 11.58ಕ್ಕೆ ಸಂಭವಿಸಿದ ಈ ಭೂಕಂಪವು ಚೀನಾದ ಸಿಚುವಾನ್ ಪ್ರಾಂತ್ಯದ ದುಜಿಂಗಿಯಾನ್ ನಗರದ ವೆನಚುವಾನ್ ಕೌಂಟಿಯಲ್ಲಿ ಕೇಂದ್ರೀಕೃತಗೊಂಡಿತ್ತು. ಈ ನಗರವು ಪ್ರಾಂತೀಯ ರಾಜಧಾನಿ ಚೆಂಗ್ಡುವಿನಿಂದ ನೂರು ಕಿ.ಮೀ.ದೂರದಲ್ಲಿದ್ದು ಇಲ್ಲಿ ಸರಣಿ ಕಂಪನಗಳು ಉಂಟಾದವು. ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ಹೊಂದಿದ್ದ ಭೂಕಂಪದ ಬಿಸಿ ಬೀಜಿಂಗ್, ಶಾಂಘೈ ಸೇರಿದಂತೆ ದೇಶದ ಬಹುಭಾಗಗಳಲ್ಲಿ ವ್ಯಾಪಿಸಿತ್ತು.

2008: ಹಿಂದಿನ ತಿಂಗಳಷ್ಟೇ ಜೆಡಿ(ಎಸ್) ಸೇರಿದ್ದ ಮಾಜಿ ಸಚಿವ, ಬಳ್ಳಾರಿ ನಗರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಎಂ. ದಿವಾಕರಬಾಬು, ಈದಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಮರು ಸೇರ್ಪಡೆಯಾದರು.

2008: ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯಲ್ಲಿ ಲಷ್ಕರ್-ಎ- ತೊಯ್ಬಾ ಕೈವಾಡ ಖಚಿತವಾಗಿದ್ದು, ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಉಗ್ರಗಾಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆಗಳು ನಿಚ್ಚಳಗೊಂಡವು. ಬಾಂಬ್ ತಯಾರಿಕೆಗೆ ಬಳಸಿದ ಸ್ಫೋಟಕಗಳು ಕೂಡಾ ಗಡಿಯಾಚೆಯಿಂದಲೇ ಬಂದಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದರು. ಅಮೋನಿಯಂ ನೈಟ್ರೇಟ್, ಪಾಲಿ ಸ್ಯಾಕ್ರೈಡ್, ಗಾರ್ಲೊರ್ಗಮ್, ಜೆಲ್ಲಿ ಸ್ಫೋಟಕ ಮತ್ತು ಪೆಟ್ರೋಲಿಯಂ ಜೆಲ್ಲಿಯನ್ನು ಬಾಂಬ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿತು. ಹೈದರಾಬಾದಿನಲ್ಲಿ ಸಂಭವಿಸಿದ ಮೆಕ್ಕಾ ಮಸೀದಿ ಸ್ಫೋಟಕ್ಕೂ ಹುಬ್ಬಳ್ಳಿ ಸ್ಫೋಟಕ್ಕೂ ಸಾಮ್ಯತೆಯಿರುವುದೂ ಬೆಳಕಿಗೆ ಬಂತು.

2008: ಪಿಪಿಪಿ ನೇತೃತ್ವದ ಪಾಕಿಸ್ಥಾನ ಸಮ್ಮಿಶ್ರ ಸರ್ಕಾರದಿಂದ ಹೊರಬರಲು ಮಾಜಿ ಪ್ರಧಾನಿ ನವಾಜ್ ಷರೀಫ್ ನಾಯಕತ್ವದ ಪಿಎಂಎಲ್-ಎನ್ ನಿರ್ಧರಿಸಿತು. ಇದರಿಂದ ಕೇವಲ ಆರು ವಾರಗಳ ಪ್ರಧಾನಿ ಯೂಸುಫ್ ರಜಾ ಜಿಲಾನಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಹಿಂದಿನ ವರ್ಷ ತುರ್ತು ಪರಿಸ್ಥಿತಿಯಲ್ಲಿ ಪದಚ್ಯುತಗೊಳಿಸಿದ ನ್ಯಾಯಮೂರ್ತಿಗಳ ಪುನರ್ ನೇಮಕಕ್ಕೆ ಸಂಬಂಧಿಸಿ ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮಿತ್ರಪಕ್ಷ ಪಾಕಿಸ್ಥಾನ ಮುಸ್ಲಿಂಲೀಗ್-ನವಾಜ್ ಷರೀಫ್ ಬಣ ಈ ತೀರ್ಮಾನ ಕೈಗೊಂಡಿತು.

2008: ಭೀಕರ ಚಂಡಮಾರುತಕ್ಕೆ ತತ್ತರಿಸಿರುವ ಮ್ಯಾನ್ಮಾರ್ ತನ್ನ ಸದ್ಯದ ಕಷ್ಟ ಪರಿಸ್ಥಿತಿಯಲ್ಲೂ ಶ್ರೀಲಂಕಾಕ್ಕೆ 20 ಸಾವಿರ ಟನ್ ಅಕ್ಕಿಯನ್ನು ರಫ್ತು ಮಾಡಿತು. ಭಾರತ ಮತ್ತ ಪಾಕಿಸ್ಥಾನದಂತಹ ನೆರೆ ದೇಶಗಳು ಶ್ರೀಲಂಕಾಕ್ಕೆ ಅಕ್ಕಿ ರಫ್ತು ಮಾಡಲು ಹಿಂದುಮುಂದು ನೋಡುತ್ತಿದ್ದ ಸಂದರ್ಭದಲ್ಲೇ, ಮ್ಯಾನ್ಮಾರ್ ರವಾನಿಸಿದ 20 ಸಾವಿರ ಟನ್ ಅಕ್ಕಿ ಶ್ರೀಲಂಕಾವನ್ನು ತಲುಪಿತು.

2008: ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಐಐಎಂಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಆದೇಶವನ್ನು ಜಾರಿಗೆ ತರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತು.

2008: ಮಧ್ಯಪ್ರದೇಶದ ಮೊರೆನ ಜಿಲ್ಲೆಯ ಹಾರ್ ಹಳ್ಳಿಯಲ್ಲಿ ಎರಡು ದಿನಗಳಿಂದ ಬಿಸಿಲಿನ ಝಳಕ್ಕೆ ಆರಕ್ಕೂ ಅಧಿಕ ನವಿಲುಗಳು ಸತ್ತವು. ಹಿಂದಿನ ವರ್ಷ ಕೂಡ ಅತಿಯಾದ ಬಿಸಿಲಿಗೆ 61 ನವಿಲುಗಳು ಸತ್ತಿದ್ದವು. ಜಿಲ್ಲೆಯಲ್ಲಿ 72 ಸಾವಿರ ನವಿಲುಗಳಿವೆ ಎಂದು ಅಂದಾಜಿಸಲಾಗಿದೆ.

2008: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾದ ಅಬ್ದುಲ್ ಘನಿ ಇಸ್ಮಾ ಟರ್ಕ್ ವಿರುದ್ಧ ಶಿಕ್ಷೆ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಂಬೈ `ಟಾಡಾ' ನ್ಯಾಯಾಲಯ ನೀಡಿದ ಈ ತೀರ್ಪು ಪ್ರಶ್ನಿಸಿ ಟರ್ಕ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ನೇತೃತ್ವದ ಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾದ ಶೇಕ್ ಅಲಿ ಶೇಕ್ ಉಮರನ ಅರ್ಜಿಯನ್ನೂ ಸ್ವೀಕರಿಸಿದ ಪೀಠ, ಸಿಬಿಐಗೆ ನೋಟಿಸ್ ಜಾರಿಮಾಡಿತು.

2008: ಜೆಸ್ಸಿಕಾಲಾಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮನು ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಈ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸಿವುದಕ್ಕೆ ಹಾಗೂ ಅಪರಾಧಿಗೆ ಜಾಮೀನು ನೀಡುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಹೇಳಿ ನ್ಯಾಯಮೂರ್ತಿ ಸಿ. ಕೆ. ಠಕ್ಕರ್ ನೇತೃತೃದ ಪೀಠ ಈ ಕ್ರಮ ಕೈಗೊಂಡಿತು. ಪ್ರಕರಣ ಕುರಿತು ದೆಹಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸಿ ಮನು ಶರ್ಮಾನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

2008: ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮಾರ್ಲೋನ್ ಸ್ಯಾಮುಯೆಲ್ಸ್ ಅವರ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಲಾಯಿತು. 2007ರ ಜನವರಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ತಂಡದ ಬಗೆಗಿನ ಮಾಹಿತಿಯನ್ನು ಅವರು ಬುಕ್ಕಿಯೊಬ್ಬನಿಗೆ ನೀಡಿದ್ದರ ಬಗ್ಗೆ ಸಾಕ್ಷಿ ಸಿಕ್ಕಿರುವುದರಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ಈ ಕ್ರಮಕೈಗೊಂಡಿತು.

2008: ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ಭಾರತದ ಮಹಿಳಾ ವೇಟ್ ಲಿಫ್ಟರ್ ಕವಿತಾ ದೇವಿ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಿತು. 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕವಿತಾ ಅವರು ಕಳೆದ ತಿಂಗಳು ಜಪಾನಿನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ನಿಂದ ಹಿಂದೆ ಸರಿದಿದ್ದರು.

2008: ಜಮ್ಮುವಿನಲ್ಲಿ ಹಿಂದಿನ ದಿನ ನಡೆದ ಗುಂಡಿನ ಕಾಳಗದಲ್ಲಿ ಕೆಜಿಎಫ್ನ ಯೋಧ, ಅರ್ಜುನನ್ ಅವರ ಪುತ್ರ ರಘುನಾಥನ್ (29) ಗುಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿದರು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಮತ್ತು ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಬೆಂಬಲಿಗರು ವಾಣಿಜ್ಯ ರಾಜಧಾನಿ ಕರಾಚಿಯ ಪ್ರಮುಖ ಬೀದಿಗಳಲ್ಲಿ ಗುಂಡಿನ ಕಾಳಗದಲ್ಲಿ ತೊಡಗಿದ್ದರಿಂದ ಕನಿಷ್ಠ 30 ಜನ ಮೃತರಾಗಿ 150ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ಢಾಕಾದ ಮೀರ್ ಪುರದಲ್ಲಿ ನಡೆದ ಏರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡವು ಸಂಘಟಿತ ಹೋರಾಟ ನೀಡಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

2007: ಉತ್ತರ ಪ್ರದೇಶದ ಸುಲ್ತಾನಪುರ, ಪ್ರತಾಪಗಢ ಹಾಗೂ ಬಾರಾಬಂಕಿ ಜಿಲ್ಲೆಗಳಲ್ಲಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ 31 ಮಂದಿ ಬಲಿಯಾದರು.

2006: ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರು ದೋಹಾದಲ್ಲಿ ಐಎಎಎಫ್ ಸೂಪರ್ ಟೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಗಾಟ್ಲಿನ್ ಅವರು 100 ಮೀಟರ್ ದೂರವನ್ನು 9.76 ಸೆಕೆಂಡುಗಳಲ್ಲಿ ಕ್ರಮಿಸಿ ಈ ದಾಖಲೆ ಸ್ಥಾಪಿಸಿದರು. ಗಾಟ್ಲಿನ್ ಸಾಧನೆಯೊಂದಿಗೆ ಜಮೈಕಾದ ಅಸಾಫಾ ಪೊವೆಲ್ ನಿರ್ಮಿಸಿದ್ದ 9.77 ಸೆಕೆಂಡುಗಳ ದಾಖಲೆ ಅಳಿಸಿಹೋಯಿತು.

2006: ಕನ್ನಡದ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರು 2005ನೇ ಸಾಲಿನ `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ಅಗ್ರಹಾರ ಕೃಷ್ಣಮೂರ್ತಿ ಅವರ ಆಯ್ಕೆಯನ್ನು ಕೇಂದ್ರ ಸಂಸ್ಕೃತಿ ನಿರ್ದೇಶನಾಲಯ ಅನುಮೋದಿಸಿತು.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪ್ಸಿಂಗ್ ನಾಯಕ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2006: ನೇಪಾಳದ ಪ್ರಜಾಸತ್ತೆ ಪರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದವರ ವಿರುದ್ಧ ಮಹತ್ವದ ಕ್ರಮ ಕೈಗೊಂಡ ಜಿ.ಪಿ. ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮಾಜಿ ಗೃಹ ಸಚಿವ ಕಮಲ್ ಥಾಪಾ, ಮಾಜಿ ಸಂಪರ್ಕ ಖಾತೆಯ ರಾಜ್ಯ ಸಚಿವ ಶ್ರೀಶ್ ಶಂಶೇರ್ ರಾಣಾ ಮತ್ತು ಮಾಜಿ ವಿದೇಶಾಂಗ ಸಚಿವ ರಮೇಶನಾಥ ಪಾಂಡೆ ಅವರನ್ನು ಬಂಧಿಸಿತು. ನೇಪಾಳಿ ದೊರೆ ಆಳ್ವಿಕೆಯ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳಾಗಿದ್ದ ಸೇನಾ ಮುಖ್ಯಸ್ಥ ಪ್ಯಾರ್ ಜಂಗ್ ಥಾಪಾ, ಸಶಸ್ತ್ರ ಪೊಲೀಸ್ ಪಡೆ ಮುಖ್ಯಸ್ಥ ಸಹಬೀರ್ ಥಾಪಾ, ನೇಪಾಳಿ ಪೊಲೀಸ್ ಮುಖ್ಯಸ್ಥ ಶ್ಯಾಮ್ ಭಕ್ತ ಥಾಪಾ, ಮತ್ತು ರಾಷ್ಟ್ರೀಯ ತನಿಖಾ ವಿಭಾಗದ ದೇವೀರಾಮ್ ಶರ್ಮ ಅವರನ್ನು ಅಮಾನತುಗೊಳಿಸಿತು.

2006: ನೇಪಾಳದ ಸಣ್ಣ ಗ್ರಾಮ ಧುಲ್ಲುಬಾಷ್ಕೋಟ್-6 ಬಗ್ಲುಂಗಿನ 14 ವರ್ಷದ ಬಾಲಕ ಖಗೇಂದ್ರ ಥಾಪಾ ಮಗರ್ ನ ಹೆಸರು `ಭೂಮಿಯ ಮೇಲಿನ ಅತಿಕುಳ್ಳ ಮನುಷ್ಯ' ಎಂಬುದಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ನಮೂದಾಗಲಿದೆ. ಖಗೇಂದ್ರ ಥಾಪಾ ಮಗರ್ ನ ತೂಕ ಕೇವಲ 4.5 ಕಿ.ಗ್ರಾಂ.ಗಳಾಗಿದ್ದು, ಎತ್ತರ ಕೇವಲ 20 ಅಂಗುಲಗಳು. ಮಾಸ್ಟರ್ ಮಗರ್ ನ ಹೆಸರು ಈವರೆಗೆ ಭೂಮಿ ಮೇಲಿನ ಅತ್ಯಂತ ಕುಳ್ಳ ಎಂಬುದಾಗಿ ಹೆಸರು ಪಡೆದಿದ್ದ ನವದೆಹಲಿಯ ಮೊಹಮ್ಮದ್ ಅಲಿ ಸ್ಥಾನದಲ್ಲಿ ನಮೂದಾಗಲಿದೆ ಎಂದು ಖಗೇಂದ್ರ ಥಾಪಾ ಮಗರ್ ಅಕಾಡೆಮಿಯ ಅಧ್ಯಕ್ಷ ಮಿನ್ ಬಹಾದುರ್ ರಾಣಾ ಅವರನ್ನು ಉಲ್ಲೇಖಿಸಿ `ದಿ ಹಿಮಾಲಯನ್ ಟೈಮ್ಸ್' ವರದಿ ಮಾಡಿತು.

1994: ಬಿಸಿ ಕಾವಲಿಗೆ ದೋಸೆ ಅಂಟದಂತೆ ಲೇಪಿಸಬಹುದಾದ `ಟೆಫ್ಲಾನ್' ಎಂಬ ಪ್ಲಾಸ್ಟಿಕ್ಕನ್ನು ಡ್ಯೂಪಾಂಟ್ ಸಂಸ್ಥೆಗಾಗಿ ದುಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಂಡು ಹಿಡಿದ ರಾಸಾಯನಿಕ ತಜ್ಞ ರಾಯ್. ಜೆ. ಪ್ಲುಂಕೆಟ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಎರಡನೇ ವಿಶ್ವಸಮರದ ಸಂದರ್ಭದಲ್ಲಿ ಈ ಹೊಸ ಪ್ಲಾಸ್ಟಿಕ್ಕನ್ನು ಲೋಹದ ಉಪಕರಣಗಳ ಸಂರಕ್ಷಣೆಗಾಗಿ ಬಳಸಲಾಯಿತು. ರೇಡಿಯೋ ವಿಕಿರಣ (ರೇಡಿಯಾಕ್ಟಿವ್) ವಸ್ತುಗಳ ಉತ್ಪಾದನೆಯಲ್ಲೂ ಬಳಸಲಾಯಿತು. ಡ್ಯೂಪಾಂಟ್ ಸಂಸ್ಥೆಯು 1960ರಲ್ಲಿ ಟೆಫ್ಲಾನ್ ಬಳಿದ ನಾನ್ ಸ್ಟಿಕ್ ಅಡಿಗೆ ಸಲಕರಣೆಗಳನ್ನು ತನ್ನ ಟ್ರೇಡ್ ಮಾರ್ಕ್ ಹಾಕಿ ಬಿಡುಗಡೆ ಮಾಡಿತು.

1987: ಭಾರತದ ಎರಡನೆಯ ವಿಮಾನವಾಹಕ ನೌಕೆ `ಐ ಎನ್ ಎಸ್ ವಿರಾಟ್' ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.

1954: ಕಲಾವಿದ ಕುಮಾರ ದಾಸ ಡಿ.ಜನನ.

1952: ಸ್ವತಂತ್ರ ಭಾರತದ ಮೊತ್ತ ಮೊದಲನೆಯ ಸಂಸತ್ ಅಧಿವೇಶನ ಆರಂಭವಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಮರುದಿನ ಸರ್ಕಾರವನ್ನು ರಚಿಸಿದರು. ರಾಜೇಂದ್ರ ಪ್ರಸಾದ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕ್ರಮವಾಗಿ ಪ್ರಥಮ ಅಧ್ಯಕ್ಷ, ಉಪಾಧ್ಯಕ್ಷರಾದರು.

1949: ಕಲಾವಿದ ಶ್ರೀನಿವಾಸನ್ ಟಿ.ಟಿ. ಜನನ.

1938: ಕಲಾವಿದ ಬಸವರಾಜು ತು.ಮ. ಜನನ.

1937: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ದೊರೆ 6ನೇ ಜಾರ್ಜ್ ಕಿರೀಟಧಾರಣೆ ನಡೆಯಿತು.

1935: ಮದ್ಯವ್ಯಸನದಿಂದ ಸ್ವಯಂ ಮುಕ್ತಿ ಪಡೆಯಲು ನೆರವಾಗುವ `ಆಲ್ಕೋಹಾಲಿಕ್ಸ್ ಅನಾನಿಮಸ್' ಸಂಘಟನೆ ಸ್ಥಾಪನೆಗೆ ನ್ಯೂಯಾರ್ಕಿನಲ್ಲಿ ನಡೆದ ಸಭೆಯೊಂದರಲ್ಲಿ ಸ್ಟಾಕ್ ಬ್ರೋಕರ್ ವಿಲಿಯಂ ಗ್ರಿಫಿತ್ ವಿಲ್ಸನ್ ಮತ್ತು ಸರ್ಜನ್ ರಾಬರ್ಟ್ ಹೊಲ್ ಬ್ರೂಕ್ ಸ್ಮಿತ್ ನಾಂದಿ ಹಾಡಿದರು.

1926: ಕಲಾವಿದ ದ್ವಾರಕಾನಾಥ್ ಟಿ.ವಿ. ಜನನ.

1919: ಖ್ಯಾತ ವಿಮರ್ಶಕ ಕೆ. ನರಸಿಂಹ ಮೂರ್ತಿ (1919-1999) ಅವರು ಕೃಷ್ಣಮೂರ್ತಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಮಂಚೇನಹಳ್ಳಿಯಲ್ಲಿ ಜನಿಸಿದರು. ಹೈಸ್ಕೂಲು ಓದುತ್ತಿರುವಾಗಲೇ ಪದ್ಯರಚನೆ ಆರಂಭಿಸಿದ ನರಸಿಂಹಮೂರ್ತಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿ ಗಮನಾರ್ಹ ಕೃತಿಗಳನ್ನು ನೀಡಿದರು. ಆರ್. ಕಲ್ಯಾಣಮ್ಮನವರ ಪತ್ರಿಕೆ `ಸರಸ್ವತಿ' ಮದ್ರಾಸಿನ (ಈಗಿನ ಚೆನ್ನೈ) ಇಂಗ್ಲಿಷ್ ಪತ್ರಿಕೆ `ಮೈ ಮ್ಯಾಗಜಿನ್', `ಅರುಣ', `ಸುಬೋಧ', `ಪ್ರಬುದ್ಧ ಕರ್ನಾಟಕ'ಗಳಲ್ಲಿ ಅವರ ಕಥೆಗಳು, ಲೇಖನಗಳು ಪ್ರಕಟವಾಗಿದ್ದವು. ವಿಶ್ವದ ಹಲವು ಭಾಷೆಗಳ ಅತ್ಯುತ್ತಮ ಕೃತಿಗಳನ್ನೂ ಕನ್ನಡಿಗರಿಗೆ ಅವರು `ಕನ್ನಡಪ್ರಭ' ಪತ್ರಿಕೆಯ ಸಾಹಿತ್ಯ ಲೋಕ ಅಂಕಣದ ಮೂಲಕ ಪರಿಚಯಿಸಿದ್ದಾರೆ. 1999ರ ಜೂನ್ 12ರಂದು ಅವರು ನಿಧನರಾದರು.

1899: ಮೂಗೂರು ಅಮೃತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ಅಳವಡಿಸಿ ಮೂಗೂರು ಶೈಲಿ ಎಂಬ ಒಂದು ಪರಂಪರೆಯನ್ನೇ ಹುಟ್ಟು ಹಾಕಿದ ಕಲಾವಿದೆ ಮೂಗೂರು ಜೇಚಮ್ಮ (12-5-1899ರಿಂದ 15-8-1983) ಅವರು ಮೈಸೂರು ಜಿಲ್ಲೆಯ ಮೂಗೂರಿನಲ್ಲಿ ಜನಿಸಿದರು.

1895: ಚಿಂತಕ ಜಿಡ್ಡು ಕೃಷ್ಣಮೂರ್ತಿ ಈದಿನ ಮದನಪಲ್ಲಿಯಲ್ಲಿ ಜನಿಸಿದರು.

1820: `ಲೇಡಿ ವಿದ್ ದಿ ಲ್ಯಾಂಪ್' ಎಂದೇ ಖ್ಯಾತರಾದ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಈದಿನ ಇಟಲಿಯಲ್ಲಿ ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ 17ನೇ ವಯಸ್ಸಿನಲ್ಲೇ ದಾದಿ (ನರ್ಸಿಂಗ್) ವೃತ್ತಿಯನ್ನು ಬದುಕಿನ ವೃತ್ತಿಯಾಗಿ ಅಂಗೀಕರಿಸಿ ಸಮಾಜದಲ್ಲಿ ಹಿಂದುಳಿದವರು, ಆರ್ಥಿಕವಾಗಿ ಬಡವರಾದವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಸಂಕಲ್ಪ ಮಾಡಿದರು. 1854ರ ಅಕ್ಟೋಬರ್ 21ರಂದು ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ನೈಟಿಂಗೇಲ್ ತನ್ನ 38 ಮಂದಿ ದಾದಿಯರ ತಂಡದೊಂದಿಗೆ ತೆರಳಿ ಸೇವೆ ಸಲ್ಲಿಸಿದರು. ಫ್ಲಾರೆನ್ಸ್ ನೈಟಿಂಗೇಲ್ ಸೇವೆಯನ್ನು ಜನ ಮರೆಯಲಿಲ್ಲ. ಆಕೆಯ ನೆನಪಿಗಾಗಿ ಲಂಡನ್ನಿನ ವಾಟರ್ಲೂ ಅರಮನೆಯಲ್ಲಿ ಆಕೆಯ ಬೃಹತ್ ಪ್ರತಿಮೆಯನ್ನು ನಿಲ್ಲಿಸಿದರು.

No comments:

Advertisement