My Blog List

Thursday, June 16, 2011

ಜನಲೋಕಪಾಲ ಮಸೂದೆ 'ಬಿಸಿಲ್ಗುದುರೆಯೇ'? Breakdown is official: Lokpal dream over?

ಜನಲೋಕಪಾಲ ಮಸೂದೆ 'ಬಿಸಿಲ್ಗುದುರೆಯೇ'?

Breakdown is official: Lokpal dream over?



ಲೋಕಪಾಲ ಮಸೂದೆ ಕರಡು ಸಮಿತಿಯ ಏಳು ಸಭೆಗಳು ಮುಗಿದುಹೋದವು. ಆದರೆ ಅಣ್ಣಾ ಹಜಾರೆ ತಂಡ ಸರ್ಕಾರ ಕಡೆಯ  ತಂಡಗಳ ಭಿನ್ನಾಭಿಪ್ರಾಯ  ಮುಂದುವರೆದಿದೆ. ಉಭಯರೂ ತಮ್ಮ ತಮ್ಮ ಸ್ಥಳಗಳಿಂದ ಕದಲಿಲ್ಲ!
ಕೇಂದ್ರ ಸರ್ಕಾರ ತನ್ನ ವ್ಯೂಹ ರಚನೆಗಾಗಿ ಶೀಘ್ರದಲ್ಲೇ ಜೂನ್ 21ರ ಮಂಗಳವಾರ ಸಭೆ ಸೇರಲಿದೆ. ಸಚಿವ ಸಂಪುಟವು ಮಸೂದೆಯ ಎರಡು ಅವತರಣಿಕೆಗಳನ್ನು  ಪರಿಶೀಲಿಸಬೇಕಾದ ಸಾಧ್ಯತೆಯೇ ಹೆಚ್ಚಿದೆ.!


ತಮ್ಮ ತಮ್ಮ ನಿಲುವುಗಳಿಂದ ತಾವು  ಸರಿದಿಲ್ಲ ಎಂಬುದನ್ನು ಮಸೂದೆಯ ಕರಡು ಸಮಿತಿಯ ಉಭಯ ಕಡೆಗಳವರೂ ಒಪ್ಪಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಅಂಕುಶ ಹಾಕುವ ಜನಲೋಕಪಾಲ ಮಸೂದೆ ವಿಚಾರದಲ್ಲಿ ಸಿವಿಲ್ ಸೊಸೈಟಿ ಮತ್ತು ಸಚಿವರ ತಂಡಗಳ ನಡುವಣ ಭಿನ್ನಮತ ಪರಿಹರಿಸಲಾಗದೆ ವಿವಾದಾತ್ಮಕ ವಿಷಯಗಳು ವಿವಾದಾತ್ಮಕವಾಗಿಯೇ ಉಳಿದಿವೆ. ಹೀಗಾಗಿ ಕೇಂದ್ರ ಸಂಪುಟಕ್ಕೆ ಸಮಿತಿ ಮಂಡಿಸಲಿರವ ಕರಡು  ಮಸೂದೆಯ ಎರಡು ಅವತರಣಿಕೆಗಳನ್ನು ಪರಿಶೀಲಿಸಬೇಕಾದ  ಅನಿವಾರ್ಯತೆ ಸ್ಪಷ್ಟವಾದಂತೆಯೇ ಕಾಣುತ್ತಿದೆ.

'ನಾವು ಒಮ್ಮತ ಸಾಧ್ಯವಿರುವ ವಿಷಯಗಳ ಮೇಲೆ ಮಸೂದೆಯ ಕರಡನ್ನು ಸಿದ್ಧ ಪಡಿಸುತ್ತೇವೆ. ಒಮ್ಮತ ಸಾಧಿಸಲು  ಪ್ರಯತ್ನವನ್ನೂ ಮಾಡುತ್ತೇವೆ. ಆಮೇಲೆ ಕೂಡಾ ಒಮ್ಮತ ಸಾಧ್ಯವಾಗದಿದ್ದರೆ, ಆಗ ಸಂಪುಟಕ್ಕೆ ಕರಡು ಮಸೂದೆಯ ಎರಡು ಅವತರಣಿಕೆಗಳನ್ನು ಕಳುಹಿಸುತ್ತೇವೆ.' ಎಂಬುದು  ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಉವಾಚ.

ಭಿನ್ನಮತದ ಮುಖ್ಯ ಅಂಶಗಳಾದರೂ ಯಾವುವು? (1) ಉನ್ನತ ಸ್ಥಾನಗಳಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ 11 ಸದಸ್ಯಬಲದ ಸ್ಥಾಯೀ ಸಮಿತಿ ರಚಿಸಬೇಕು ಎಂಬುದು ಅಣ್ಣಾ ಹಜಾರೆ ತಂಡದ ಬಯಕೆ. ಇದಕ್ಕೆ ಬದಲಾಗಿ ಅರೆ ನ್ಯಾಯಾಂಗ ಸಂಸ್ಥೆಯೊಂದನ್ನು ರಚಿಸಬೇಕು ಎಂಬುದು ಸರ್ಕಾರದ ಸಲಹೆ. (2) ಪ್ರಧಾನಿಯನ್ನು ಲೋಕಪಾಲ  ವ್ಯಾಪ್ತಿಗೆ ತರಬೇಕು ಎಂಬುದರ ಬಗೆಗಂತೂ ಉಭಯರ ಮಧ್ಯೆ ಅಜ-ಗಜಾಂತರ. ಸಿವಿಲ್ ಸೊಸೈಟಿ ಸದಸ್ಯರು ಇದಕ್ಕೆ ಪರವಾಗಿದ್ದರೆ, ಸರ್ಕಾರಿ ಪರ ತಂಡದ್ದು ಇದಕ್ಕೆ ಉಗ್ರ ವಿರೋಧ. (3) ಮೂರನೆಯದಾಗಿ ನ್ಯಾಯಾಂಗದ ಮುಖ್ಯಸ್ಥರನ್ನೂ ಮಸೂದೆಯ  ವ್ಯಾಪ್ತಿಯೊಳಗೆ ತರಬೇಕು  ಎಂಬುದರ ಬಗೆಗೂ ಉಭಯ ತಂಡಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ.

ನಮ್ಮ ಹಾಗೂ ಸರ್ಕಾರದ ಕಲ್ಪನೆಗಳಲ್ಲೇ ಮೂಲಭೂತ ಭಿನ್ನಾಭಿಪ್ರಾಯಗಳು ಇರುವುದರಿಂದ ಮಸೂದೆಯ ಎರಡು ಅವತರಣಿಕೆಗಳನ್ನು ಸಿದ್ಧ ಪಡಿಸಲು ನಾವು ನಿರ್ಧರಿಸಿದ್ದೇವೆ ಎಂಬುದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್ ಹೇಳಿಕೆ.

ಮಿತ್ರ ಪಕ್ಷಗಳನ್ನು ಜೊತೆಯಲ್ಲಿಯೇ ಇಟ್ಟುಕೊಂಡು  ಇತರ ರಾಜಕೀಯ ಪಕ್ಷಗಳ ನೆರವು ಪಡೆಯುವತ್ತ ಮುನ್ನಡೆಯಬೇಕು ಎಂಬುದು ಕಾಂಗ್ರೆಸ್ ಹಂಚಿಕೆ. ವಿರೋಧ ಪಕ್ಷಗಳು ಮತ್ತು ಮುಖ್ಯಮಂತ್ರಿಗಳಿಂದ ಸ್ಪಷ್ಟ ಅಭಿಪ್ರಾಯಗಳು ಬಾರದೇ ಇರುವ ಕಾರಣ  ಪ್ರಧಾನಿಯನ್ನು ಮಸೂದೆಯ ವ್ಯಾಪ್ತಿಯೊಳಗೆ ತರುವ ವಿಚಾರದಲ್ಲಿ ಉಪಾಯವಾಗಿ ಪಾರಾಗಬಹುದು ಎಂಬುದು ಅದರ ಚಿಂತನೆ.

ಸಿವಿಲ್ ಸೊಸೈಟಿಯು ಇದನ್ನು ಮಸೂದೆ ತರಲು ಸರ್ಕಾರಕ್ಕೆ ಆಸಕ್ತಿ ಇಲ್ಲದೇ ಇರುವುದರ ದ್ಯೋತಕ ಇದು ಎಂಬುದಾಗಿ ಭಾವಿಸಿದೆ.

ಸಮರ ವ್ಯೂಹಗಳು ಸಿದ್ಧವಾಗಿವೆ. ಜೂನ್ 20ರ ಮುಂದಿನ ಸಭೆಯಲ್ಲಿ ಕರಡು ಸಮಿತಿಯ ವಿಭಜನೆ ಪೂರ್ಣಗೊಳ್ಳಲಿದೆ!

ಭ್ರಷ್ಟಾಚಾರದ ವಿರುದ್ಧ ಜನಲೋಕಪಾಲ  ಮಸೂದೆಯನ್ನು  ಜಾರಿಗೆ ತರುವ ನಿಟ್ಟಿನ ಹೋರಾಟಕ್ಕಿಳಿದ ಅಣ್ಣಾ ಹಜಾರೆ ಮತ್ತು ಅವರ ತಂಡ ಒಂದೆಡೆಯಿಂದ ಜನಾಂದೋಲನದ ಹೆದ್ದೆರೆ ಎಬ್ಬಿಸಿದರೆ, ವಿದೇಶೀ ಬ್ಯಾಂಕುಗಳಲ್ಲಿ  ಇರುವ ಕಪ್ಪು  ಹಣವನ್ನು ಸ್ವದೇಶಕ್ಕೆ ತರಬೇಕೆಂಬ ಆಂದೋಳನಕ್ಕೆ ಇಳಿದ ಯೋಗ ಗುರು ಬಾಬಾ ರಾಮ ದೇವ್ ಇನ್ನೊಂಡೆಯಿಂದ ಜನತಾ ಆಂದೋಲನದ ತೆರೆ ಎಬ್ಬಿಸಿದರು.

ಈ ಆಂದೋಲನಗಳ ಭರಾಟೆಯಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿ  ಮುಳುಗಿದ ಕೇಂದ್ರ ಸರ್ಕಾರ ಅಣ್ಣಾ ಹಜಾರೆ ನೇತೃತ್ವದ ಹೋರಾಟದ ಅಲೆಯನ್ನು  ತಾತ್ಕಾಲಿಕವಾಗಿ  ಶಮನಗೊಳಿಸಲು  ಲೋಕಪಾಲ ಮಸೂದೆ ರಚನೆಯ ಕಸರತ್ತು ಆರಂಭಿಸಿದ ಅದಕ್ಕಾಗಿ ಕರಡು ಮಸೂದೆ ಸಮಿತಿಯನ್ನು  ರಚಿಸಿತು. ಆದರೆ ಸಮಿತಿ ರಚಿಸಿದ ದಿನದಿಂದಲೂ  ಅದರಲ್ಲಿ ಇರುವ ಸಿವಿಲ್ ಸೊಸೈಟಿ ಸದಸ್ಯರ ಬಗ್ಗೆ ಟೀಕಾ ಪ್ರಹಾರಗಳನ್ನು ಪಕ್ಷದ ಧುರೀಣರ ಮೂಲಕ ಮಾಡಿಸುತ್ತಾ  ಈ ಸದಸ್ಯರ ನೈತಿಕ ಬಲ ಕುಗ್ಗಿಸುವ ನಿರಂತರ ಯತ್ನ ಮಾಡುತ್ತಿದೆ.

ಇತ್ತ ಜನಾಂದೋಲನದ ಇನ್ನೊಂದು ಹೆದ್ದೆರೆ ಎಬ್ಬಿಸಿದ ಬಾಬಾ ರಾಮದೇವ್ ಅವರ ಸತ್ಯಾಗ್ರಹ ಶಿಬಿರದ ಮೇಲೆ ನಡುರಾತ್ರಿಯಲ್ಲಿ ದಾಳಿ ನಡೆಸಿ ಒಂದೇ ರಾತ್ರಿಯಲ್ಲಿ ಸಹಸ್ರಾರು ಜನರನ್ನ ದಮನಿಸಿ ಯೋಗಗುರುವಿನ ಆಂದೋಲನವನ್ನು ಮಟ್ಟ ಹಾಕಿತು. ದಿಗ್ವಿಜಯ್ ಸಿಂಗ್ ಅವರಂತಹ ಕಾಂಗ್ರೆಸ್ ಧುರೀಣರು ರಾಮದೇವ್ ಹಾಗೂ ಅಣ್ಣಾ ಹಜಾರೆ ಮೇಲೆ ನಿತ್ಯವೂ ಬೆಂಕಿ ಉಗುಳುತ್ತಾ ನಿರಂತರ ಟೀಕಾಕಾರ್ಯದಲ್ಲಿ  ನಿರತರಾಗಿದ್ದಾರೆ.

ಉಭಯ ಆಂದೋಲನಗಳ ಮೇಲೆ ಕಾಂಗ್ರೆಸ್ಸಿಗರು ಹರಿಹಾಯುತ್ತಿರುವುದರ ಹಿಂದೆ ತಮ್ಮ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಅವರ ಕಟುಂಬ ಸದಸ್ಯರನ್ನು ರಕ್ಷಿಸುವ ತಂತ್ರ ಅಡಗಿರುವಂತೆ ಭಾಸವಾಗುತ್ತಿದೆ. ಪ್ರೊ. ಸುಬ್ರಮಣಿಯನ್ ಸ್ವಾಮಿ ಅವರು ಹೊರಹಾಕಿರುವ ವಿಚಾರ ಈ ಗುಮಾನಿಯನ್ನು ನಂಬುವಂತೆ ಮಾಡುತ್ತದೆ.

ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಇಷ್ಟಂದು  ದೊಡ್ಡ ಆಂದೋಲನ ನಡೆಯುತ್ತಿರುವಾಗ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಅವರ ನಿಕಟವರ್ತಿಗಳು  ಸ್ವಿಜರ್ಲೆಂಡಿಗೆ ತೆರೆಳಿದ್ದಾರೆ ಎಂಬ ವಿಚಾರವನ್ನು ಸುಬ್ರಮಣಿಯನ್ ಸ್ವಾಮಿ ಬಹಿರಂಗ ಪಡಿಸಿದ್ದಾರೆ. ವಲಸೆ ಅಧಿಕಾರಿಗಳು (ಐಜಿಐ) ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರ ಜೊತೆಗೆ ರಾಹುಲ್ ಗಾಂಧಿ, ಸುಮನ್ ದುಬೆ (ರಾಜೀವ್ ಗಾಂಧಿ ಪ್ರತಿಷ್ಠಾನ), ರಾಬರ್ಟ್ ವಡೇರಾ, ವಿನ್ಸೆಂಟ್ ಜಾರ್ಜ್ (ಸೋನಿಯಾ ಗಾಂಧಿ ಅವರ ಆಪ್ತ ಕಾರ್ಯದರ್ಶಿ) ಮತ್ತು  ಇತರ 12 ಮಂದಿ ಸಲಹೆಗಾರರು ಜೂನ್ 8ರಂದು ಖಾಸಗಿ ವಿಮಾನವೊಂದರಲ್ಲಿ  ಸ್ವಜರ್ಲೆಂಡಿನ ಜುರಿಚ್ ನಗರಕ್ಕೆ ತೆರಳಿದ್ದಾರೆ  ಸ್ವಿಜರ್ಲೆಂಡಿನ ರಹಸ್ಯ  ಬ್ಯಾಂಕುಗಳು ಸ್ವರ್ಗವಾದ ಜುಗ್ ಎಂಬಲ್ಲಿ ಈ ತಂಡ ಬೀಡುಬಿಟ್ಟಿದೆ. ತಮ್ಮ ಸ್ವಿಸ್ ಖಾತೆಗಳಲ್ಲಿನ ಹಣವನ್ನು ಬೇರೆ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ  ಈ ತಂಡ ನಿರತವಾಗಿದೆ ಎಂಬ ಗಂಭೀರ ಆರೋಪವನ್ನು ಸ್ವಾಮಿ ಮಾಡಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಅವರ ಚಿತ್ರವನ್ನು ಕ್ಲಿಕ್ಕಿಸಿ ವೀಡಿಯೋವನ್ನು ಗಮನಿಸಿ.

ಈ ಬಗ್ಗೆ ತನಿಖೆಯಾಗಬೇಕಾದ ಅಗತ್ಯ ಇದೆ. ಆದರೆ ತನಿಖೆ ಮಾಡುವವರು ಯಾರು? ಬೇಲಿಯೇ ಹೊಲವನ್ನು ಮೇಯುತ್ತಿರುವ ಇಂದಿನ ಸನ್ನಿವೇಶ ಲಿಬಿಯಾ ಮತ್ತಿತರ ರಾಷ್ಟ್ರಗಳಲ್ಲಿ ನಡೆದ  ಮಾದರಿಯ ಜನಾಂದೋಲನಕ್ಕೆ ಭಾರತದಲ್ಲೂ  ದಾರಿ ಮಾಡಿಕೊಡುತ್ತಿದೆಯೇ?

(ನಮ್ಮ ಆಡಳಿತಗಾರರ ಭ್ರಷ್ಟಾಚಾರ, ಕಪ್ಪುಹಣ ಶೇಖರಣೆಯ ಪರಿಚಯಕ್ಕಾಗಿ  www.iretireearly.com ನ ಈ ಕೆಳಗಿನ ವೀಡಿಯೋ  ಕ್ಲಿಕ್ಕಿಸಿ ನೋಡಿ.





ಇಷ್ಟೆಲ್ಲವನ್ನೂ ನೋಡಿದ ಮೇಲೆಯೂ ಸರ್ಕಾರದ, ಕಾಂಗ್ರೆಸ್ ಧುರೀಣರ ಪ್ರಯತ್ನಗಳು, ಟೀಕೆಗಳು, ದಮನಕಾರ್ಯಾಚರಣೆಗಳ ಬಳಿಕವೂ 'ಜನಲೋಕಪಾಲ ' ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಅಥವಾ ಅದು ಕೇವಲ ಬಿಸಿಲ್ಗುದುರೆಯೇ?

-ನೆತ್ರಕರೆ ಉದಯಶಂಕರ

 (ಮಾಹಿತಿ ಸಹಕಾರಕ್ಕಾಗಿ ಪತ್ರಕರ್ತ ಮಿತ್ರ ಓಂ ಪ್ರಕಾಶ್ ಅಗರ್ ವಾಲ್ ಅವರಿಗೆ ಧನ್ಯವಾದಗಳು)

1 comment:

Nanda Kishor B said...

hmmm.
i worry..
i am really confused...

Advertisement