ಟಿಬೆಟಿನ ಅತಿಕ್ರಮಣ ಪ್ರದೇಶದಲ್ಲಿ ಚೀನಾ ಗಡಿ ಹೊರಠಾಣೆ
ನವದೆಹಲಿ: ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿನ ಬೃಹತ್ ರಸ್ತೆ ಅಭಿವೃದ್ಧಿ ಯೋಜನೆಗಳು ನದಿಗಳು ತಮ್ಮ ಹಾದಿಯನ್ನು ಬದಲಿಸಲು ಮತ್ತು ಚೀನಾದ ಗಡಿಯನ್ನು ನೇಪಾಳದ ಉತ್ತರ ಪ್ರದೇಶಗಳಿಗೆ ವಿಸ್ತರಿಸಲು ಕಾರಣವಾಗಿವೆ ಎಂದು ನೇಪಾಳದ ಕೃಷಿ ಇಲಾಖೆಯ ದಾಖಲೆಯೊಂದು ಬಹಿರಂಗ ಪಡಿಸಿದೆ.
ಹಲವಾರು ಜಿಲ್ಲೆಗಳಲ್ಲಿನ ನೇಪಾಳದ ಭೂಪ್ರದೇಶದ ಭಾಗಗಳನ್ನು ಈಗಾಗಲೇ ಚೀನಾ ಅತಿಕ್ರಮಿಸಿದೆ ಮತ್ತು ನದಿಗಳು ಹಾದಿಯನ್ನು ಬದಲಾಯಿಸುವುದನ್ನು ಮುಂದುರೆಸಿದರೆ ಚೀನಾವು ಉತ್ತರದ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ದಾಖಲೆ ಎಚ್ಚರಿಸಿದೆ.
ನದಿಗಳು ಬದಲಾಗುತ್ತಿರುವ ಹಾದಿಯಿಂದ ನೇಪಾಳದ ಭೂಪ್ರದೇಶದ ನಷ್ಟವು "ನೂರಾರು ಹೆಕ್ಟೇರ್ ಭೂಮಿ’ಗಳಷ್ಟು ಆಗಬಹುದು ಎಂದು ಅದು ಹೇಳಿದೆ.
"ಕಾಲಾನಂತರದಲ್ಲಿ, ಚೀನಾ ಆ ಪ್ರದೇಶಗಳಲ್ಲಿ ಸಶಸ್ತ್ರ ಪೊಲೀಸರ ಗಡಿ ವೀಕ್ಷಣಾ ಠಾಣೆಗಳನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಕೃಷಿ ಸಚಿವಾಲಯದ ಸಮೀಕ್ಷಾ ವಿಭಾಗದ ದಾಖಲೆ ತಿಳಿಸಿದೆ.
ಉತ್ತರದಲ್ಲಿ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ನೇಪಾಳವು ಪೂರ್ವದಿಂದ ಪಶ್ಚಿಮಕ್ಕೆ ೪೩ ಬೆಟ್ಟಗಳು ಮತ್ತು ಪರ್ವತಗಳನ್ನು ಹೊಂದಿದೆ, ಇದು ಉಭಯ ದೇಶಗಳ ನಡುವಿನ ನೈಸರ್ಗಿಕ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಉಭಯ ದೇಶಗಳು ಮುಖ್ಯವಾಗಿ ವ್ಯಾಪಾರಕ್ಕಾಗಿ ಆರು ಹೊರಠಾಣೆಗಳನ್ನು (ಚೆಕ್ ಪೋಸ್ಟ್) ಹೊಂದಿವೆ.
೧೧ ನದಿಗಳ ಬದಲಾಗುತ್ತಿರುವ ಮಾರ್ಗ ಈಗಾಗಲೇ ಹಮ್ಲಾ, ರಸುವಾ, ಸಿಂಧುಪಾಲ್ಚೌಕ್ ಮತ್ತು ಸಂಖುವಸಭ - ಈ ನಾಲ್ಕು ಜಿಲ್ಲೆಗಳಲ್ಲಿ ೩೬ ಹೆಕ್ಟೇರ್ ಅಥವಾ ೦.೩೬ ಚದರ ಕಿ.ಮೀ. ಪ್ರದೇಶವನ್ನು ನೇಪಾಳಕ್ಕೆ ನಷ್ಟವಾಗುವಂತೆ ಮಾಡಿದೆ.
ಚೀನಾವು ೩೬ ಹೆಕ್ಟೇರ್ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಕಳೆದ ವರ್ಷ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರಕ್ಕೆ ಮೊದಲು ವರದಿ ಮಾಡಲಾಗಿತ್ತು. ಸ್ಥಳೀಯ ಮಾಧ್ಯಮಗಳಲ್ಲಿ ಚೀನಾಕ್ಕೆ ನೇಪಾಳದ ಭೂಪ್ರದೇಶವನ್ನು ಕಳೆದುಕೊಂಡ ವರದಿ ಪ್ರಕಟವಾದ ಬಳಿಕ ಕೆಲವು ಬೀದಿ ಪ್ರತಿಭಟನೆಗಳು ನಡೆದವು.
ಆದರೆ ಚೀನಾದ ಕಮ್ಯುನಿಸ್ಟ್ ಪಕ್ಷದ ಸ್ನೇಹಕ್ಕಾಗಿ ಪ್ರಯತ್ನಿಸುತ್ತಿದೆ ಎಂಬುದಾಗಿ ವಿರೋಧ ಪಕ್ಷಗಳ ಆಪಾದನೆಗೆ ಗುರಿಯಾದ ಒಲಿ ಸರ್ಕಾರವು ಚೀನೀ ಅತಿಕ್ರಮಣವನ್ನು ಗೌಣಗೊಳಿಸಿ, ಕಳೆದ ನವೆಂಬರಿನಲ್ಲಿ ಭಾರತವು ಜಮ್ಮು-ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಪ್ರಕಟಿಸಿದ ಹೊಸ ನಕ್ಷೆ ವಿರುದ್ಧ ಜನರ ಆಕ್ರೋಶವನ್ನು ತಿರುಗಿಸಿತು ಎಂದು ವರದಿಗಳು ಹೇಳಿವೆ.
ಜೊತೆಗೆ, ಏಪ್ರಿಲ್ ತಿಂಗಳಲ್ಲಿ ಪಕ್ಷದ ಒಳಗೆ ತಮ್ಮ ವಿರುದ್ಧ ಭುಗಿಲೆದ್ದ ಬಂಡಾಯದಲ್ಲಿ ಬಚಾವಾಗಲು ಚೀನಾವು ಹಸ್ತಕ್ಷೇಪ ಮಾಡಿ ನೆರವು ನೀಡಿದ ಬಳಿಕ, ಒಲಿ ಸರ್ಕಾರವು ಮೇ ತಿಂಗಳಲ್ಲಿ ೩೩೦ ಚದರ ಕಿಮೀಯಲ್ಲಿ ವ್ಯಾಪಿಸಿರುವ ಕಾಲಾಪಾನಿ, ಲಿಂಪಿಯಧುರ ಮತ್ತು ಲಿಪುಲೇಖಕ್ಕೆ ಸಂಬಂಧಿಸಿದಂತೆ ಭಾರತದ ಜೊತೆಗಿನ ಭಿನ್ನಾಭಿಪ್ರಾಯಗಳ ಬೆಂಕಿಗೆ ಆಜ್ಯ ಎರೆದರು. ಆದರೂ ಕೇವಲ ಐದುದಿನಗಳಷ್ಟು ಹಿಂದೆ ಹೊರಡಿಸಲಾದ ಎರಡು ಸುಗ್ರೀವಾಜ್ಞೆಗಳನ್ನು ಅವರು ರದ್ದು ಪಡಿಸಬೇಕಾಗಿ ಬಂದಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಗಡಿಯಲ್ಲಿನ ಲಿಪುಲೇಖ ಕಣಿವೆಯವರೆಗೆ ಬರುವ ೮೦ ಕಿಮೀ ಉದ್ದದ ರಸ್ತೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಒಲಿ ಅವರು ಇದನ್ನು ಅವಕಾಶವಾಗಿ ಬಳಸಿಕೊಂಡರು.
ನೇಪಾಳದ ಹೊಸ ರಾಜಕೀಯ ನಕ್ಷೆಗೆ ಒತ್ತು ನೀಡಿರುವ ಪ್ರಧಾನಿ ಒಲಿ ಅವರ ಪ್ರಯತ್ನವು ಭಾರತದ ವಿರುದ್ಧ ನವರಾಷ್ಟ್ರೀಯ ವಾದಿ ಭಾವನೆಗಳನ್ನು ಬಡಿದೆಬ್ಬಿಸಿ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ತನ್ನ ಸ್ಥಾನವನ್ನು ಸುಭದ್ರಗೊಳಿಸಿಕೊಳ್ಳುವ ಹುನ್ನಾರ ಎಂದು ನವದೆಹಲಿ ಮತ್ತು ಕಠ್ಮಂಡುವಿನ ರಾಜಕೀಯ ವಿಶ್ಲೇಷಕರು ನಂಬಿದ್ದಾರೆ.
’ಇದೇ ಕಾರಣಕ್ಕಾಗಿ ಉಭಯ ದೇಶಗಳ ಮಧ್ಯೆ ವಿದೇಶಾಂಗ ಕಾರ್‍ಯದರ್ಶಿಗಳ ಮಧ್ಯೆ ಮಾತುಕತೆ ನಡೆಸುವ ಕೊಡುಗೆಯನ್ನು ಈ ತಿಂಗಳ ಆದಿಯಲ್ಲಿ ಮುಂದಿಟ್ಟಿದ್ದ ಪ್ರಸ್ತಾಪವನ್ನು ತಾವು ತಿರಸ್ಕರಿಸಿದ್ದ ವಿಚಾರವನ್ನು ನಕ್ಷೆಗೆ ಸಂಸತ್ತು ಅನುಮೋದನೆ ನೀಡುವುದಕ್ಕೆ ಮುಂಚಿತವಾಗಿ ಒಲಿ ಅವರು ಸಂಸತ್ತಿಗೆ ತಿಳಿಸಲಿಲ್ಲ’ ಎಂದು ನವದೆಹಲಿಯಲ್ಲಿನ ರಾಜತಾಂತ್ರಿಕರೊಬ್ಬರು ಹೇಳಿದರು.
ಇದಕ್ಕೆ ಬದಲಾಗಿ, ಭಾರತವು ಸಂಭಾಷಣೆಯ ತಮ್ಮ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ತಾವು ಈ ಕ್ರಮಕ್ಕೆ (ನಕ್ಷೆ ಪರಿಷ್ಕರಣೆ) ಮುಂದಾಗಬೇಕಾಯಿತು ಎಂಬ ಭಾವನೆಯನ್ನು ಅವರು ಸಂಸತ್ ಸದಸ್ಯರಲ್ಲಿ ಮೂಡಿಸಿದರು.
ನೇಪಾಳೀ ಸಂಸತ್ತಿನಲ್ಲಿ ವಿವಾದಾತ್ಮಕ ನಕ್ಷೆಗೆ ಅನುಮತಿ ಲಭಿಸಿದ ಬಳಿಕ ಭಾರತವು ತನ್ನ ನಿಲುವನ್ನು ಕಠಿಣಗೊಳಿಸಿತು. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆಗೆ ಆಸಕ್ತರಾಗಿದ್ದಲ್ಲಿ, ಅದಕ್ಕೆ ಪೂರಕವಾದ ಪರಿಸರ ನಿರ್ಮಿಸುವುದು ಅವರಿಗೇ ಬಿಟ್ಟ ವಿಷಯ ಎಂದು ಭಾರತ ಬಲವಾಗಿ ಹೇಳಿತು.
No comments:
Post a Comment