Monday, May 19, 2008

ಆರೋಗ್ಯ ವರ್ಧನೆ, ಭೂ ತಾಪ ಇಳಿಕೆಗೆ ಬೈಸಿಕಲ್..!

ಆರೋಗ್ಯ ವರ್ಧನೆ, ಭೂ ತಾಪ

ಇಳಿಕೆಗೆ ಬೈಸಿಕಲ್..!

ಬೈಸಿಕಲ್ ಪಯಣದಿಂದ ಪ್ರತಿದಿನ ಹೃದಯ ಸೇರಿದಂತೆ ದೇಹಾರೋಗ್ಯ ಸುಧಾರಿಸುತ್ತದೆ. ಕೆಲವು ಬಗೆಯ ಕ್ಯಾನ್ಸರುಗಳು ದೂರವಾಗುತ್ತವೆ. ಬೊಜ್ಜು ಇಳಿಯುತ್ತದೆ. ಇಂಧನವನ್ನೇ ಬೇಡದ ಈ ಬೈಸಿಕಲ್ ಬಳಸಿ, ಆರೋಗ್ಯ ರಕ್ಷಣೆ ಜೊತೆಗೆ ಭೂಮಿಯ `ತಾಪ'ದ ಶಾಪ ವಿಮುಕ್ತಿಗೆ ನಾವೂ ಏಕೆ ಕಾಣಿಕೆ ಕೊಡಬಾರದು?

ನೆತ್ರಕೆರೆ ಉದಯಶಂಕರ

ಇನ್ನು ಏಳು ವರ್ಷಗಳು ಮಾತ್ರ. ಈ ನಮ್ಮ ಭುವಿಯನ್ನು ಉಳಿಸಬೇಕೋ ಅಥವಾ ಅಳಿಸಬೇಕೋ ಎಂಬ ನಿರ್ಧಾರವನ್ನು ನಾವು ಮಾಡಬೇಕಾಗಿದೆ. ಜಗ ತಾಪ ಏರಿಕೆ ವಿಶ್ವದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಇದರ ತಡೆಗೆ ಮುಂದಿನ 7-8 ವರ್ಷಗಳಲ್ಲಿ ಕ್ರಮ ಕೈಗೊಳ್ಳದೇ ಹೋದರೆ ವಿಶ್ವ ವಿನಾಶದತ್ತ ಸಾಗುತ್ತದೆ. ವಿಶ್ವ ಸಂಸ್ಥೆಯ ಹವಾಮಾನ ಉನ್ನತ ಸಮಿತಿ ಬಿಡುಗಡೆ ಮಾಡಿರುವ ವರದಿ ಈ ಎಚ್ಚರಿಕೆ ನೀಡಿದೆ.

ಕೈಗಾರಿಕೀಕರಣಕ್ಕೆ ಮೊದಲು ಇದ್ದ ಜಾಗತಿಕ ತಾಪಮಾನ ಏರಿಕೆ ಪ್ರಮಾಣ ಸರಾಸರಿ 2 ಡಿಗ್ರಿ ಸೆಲ್ಸಿಯಸ್ಸಿಗೂ ಕಡಿಮೆ. ಆದರೆ ಈಗಿನ ಪ್ರಮಾಣದಲ್ಲೇ ಹವಾಮಾನ ಬದಲಾವಣೆಗಳಿಗೆ ಕಾರಣವಾಗುವ ಮಾನವ ಚಟುವಟಿಕೆಗಳು ಎಗ್ಗಿಲ್ಲದೆ ಮುಂದುವರೆದರೆ 2100ರ ವೇಳೆಗೆ ಜಗ ತಾಪ ಏರಿಕೆ ಸರಾಸರಿ 6 ಡಿಗ್ರಿ ಸೆಲ್ಸಿಯಸ್ಸಿಗೆ ತಲುಪುತ್ತದೆ. ಇದು ಅನಾಹುತಕ್ಕೆ ದಾರಿ.

ಈ ಹಿನ್ನೆಲೆಯಲ್ಲಿ ಜಾಗತಿಕ ಉಷ್ಣಾಂಶವನ್ನು 2 ಡಿಗ್ರಿಯಿಂದ 4 ಡಿಗ್ರಿ ಸೆಲ್ಸಿಯಸ್ಸಿನಲ್ಲೇಮಿತಿಗೊಳಿಸಿದರೂ ನೀರಿನ ಅಭಾವ ಸೇರಿದಂತೆ ಕಲ್ಪನಾತೀತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ರತಿವರ್ಷ ಬಿಡುಗಡೆ ಆಗುತ್ತಿರುವ 2500 ಕೋಟಿ ಟನ್ ಕಾರ್ಬನ್ ಡೈ ಆಕ್ಸೈಡ್ ಈ ತಾಪ ಪ್ರಮಾಣ ಏರಿಕೆಗೆ ಕಾರಣ. ನಿರಂತರ ಅರಣ್ಯನಾಶ, ಬಸ್ಸು, ಕಾರು, ದ್ವಿಚಕ್ರ ವಾಹನಗಳು, ರೈಲು, ವಿಮಾನಗಳು, ಜೊತೆಗೆ ನಾವು ಮನೆಯಲ್ಲಿ ನಿತ್ಯ ಬಳಸುವ ಫ್ರಿಜ್, ಹವಾನಿಯಂತ್ರಿತ ಉಪಕರಣಗಳು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಾ ಹಸಿರುಮನೆ ಒಳಗೆ ದುಷ್ಪರಿಣಾಮ ಬೀರುವಂತಹ ಮಾಲಿನ್ಯ ಉಂಟು ಮಾಡಿರುವುದು ಇದಕ್ಕೆ ಕಾರಣ.

ಇದಕ್ಕೆ ಕಡಿವಾಣ ಹಾಕಲು ತತ್ ಕ್ಷಣ ಕ್ರಮ ಕೈಗೊಳ್ಳಿ ಎಂಬುದಾಗಿ 105 ರಾಷ್ಟ್ರಗಳ ವಿಜ್ಞಾನಿಗಳು, ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ವಿಶ್ವದ ಎಲ್ಲ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ವಿಶ್ವವನ್ನು ರಕ್ಷಿಸಬೇಕು ಎಂದರೆ ಜಗ ತಾಪ ಏರಿಕೆಯ ಪ್ರಮಾಣವನ್ನು ಈಗಿನ 2 ಡಿಗ್ರಿ ಸೆಲ್ಸಿಯಸ್ಸಿನಲ್ಲೇ ಉಳಿಸಿಕೊಳ್ಳಬೇಕು, ಸಾಧ್ಯವಾದರೆ ಅದನ್ನು ಕಡಿಮೆಗೊಳಿಸಬೇಕು. ಅದಕ್ಕಾಗಿ ಸಾಂಪ್ರದಾಯಿಕ ಇಂಧನ ಮೂಲಗಳಾದ ನೀರು, ಪರಮಾಣು ಸೌರಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು.

ಕಡಿಮೆ ಇಂಧನ ಬಳಸುವ ಇಲ್ಲವೇ ಶೂನ್ಯ ಇಂಧನ ಬೇಡುವ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ರೈಲು ಹಾಗೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು - ಇತ್ಯಾದಿ ಮೂಲಕ ಜಗ ತಾಪ ಏರಿಕೆಯನ್ನು ನಿಯಂತ್ರಿಸಬಹುದು.

ಸುಲಭ ಸಾಧನ: ಜಗ ತಾಪ ಏರಿಕೆ ತಡೆಗೆ ಪ್ರತಿಯೊಬ್ಬ ವ್ಯಕ್ತಿಯೂ ಕಾಣಿಕೆ ಸಲ್ಲಿಸಲು ಸಾಧ್ಯವಿರುವ ಸುಲಭ ಸಾಧನವೊಂದು ನಮ್ಮ ನಡುವೆಯೇ ಇದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ, ಸಾಧ್ಯ ಇರುವ ಎಲ್ಲ ಕಡೆಗಳಲ್ಲಿ ಬಳಸಿದ್ದೇ ಆದರೆ ಜಗ ತಾಪ ಏರಿಕೆ ತಡೆಗೆ ಬಹುದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ.

ಆ ವಾಹನವೇ `ಸೈಕಲ್' ಎಂದೇ ಜನಪ್ರಿಯವಾಗಿರುವ `ಬೈಸಿಕಲ್'.

ಹೌದು. ಬೈಸಿಕಲ್- ಜಗ ತಾಪ ಏರಿಕೆ ನಿಯಂತ್ರಣಕ್ಕೆ ಮಾತ್ರವೇ ಅಲ್ಲ ನಮ್ಮ ಆರೋಗ್ಯ ಸಂರಕ್ಷಣೆಗೂ ಬಹುದೊಡ್ಡ ಕಾಣಿಕೆ ನೀಡಬಲ್ಲುದು. ದೇಹಾರೋಗ್ಯ ರಕ್ಷಣೆಗೂ ಸೈ, ಭೂಮಿಯ ರಕ್ಷಣೆಗೂ ಜೈ.

ಮಕ್ಕಳು ಶಾಲೆಗೆ ಹೋಗುವಾಗ ಬೈಸಿಕಲ್ ಬಳಸುವ ಪರಿಪಾಠ ಬಹಳ ಹಳೆಯದು. ಆದರೆ ಈಗ ಇದು ಬದಲಾಗುತ್ತಿದೆ. ಶಾಲೆಗಳಿಗೂ ದ್ವಿಚಕ್ರ ವಾಹನಗಳು ಲಗ್ಗೆ ಹಾಕಿವೆ. ಸ್ಕೂಟರ್, ಬೈಕಿನಲ್ಲಿ ಶಾಲೆ ಕಾಲೇಜಿಗೆ ಬರುವುದು ಪ್ರತಿಷ್ಠೆಯ ವಿಷಯವಾಗಿ ಕಾಣತೊಡಗಿದೆ.

ಬಡ ಶಾಲಾ ಮಕ್ಕಳಿಗೆ ಬೈಸಿಕಲ್ ಕೊಡುವ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನತಾದಳ- ಬಿಜೆಪಿ ಕೂಟದ ಸಮ್ಮಿಶ್ರ ಸರ್ಕಾರ ನಿಜಕ್ಕೂ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಬಡ ಮಕ್ಕಳಷ್ಟೇ ಅಲ್ಲ, ಶಾಲೆಗೆ ಬರುವ ಎಲ್ಲ ಮಕ್ಕಳಿಗೂ ಬೈಸಿಕಲ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯ ಇದೆ.

ಹಾಗೆ ನೋಡಿದರೆ ಭಾರತ, ಚೀನಾದಂತಹ ರಾಷ್ಟ್ರಗಳು ಮಾತ್ರವೇ ಅಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬೈಸಿಕಲ್ ಸಂಚಾರಕ್ಕೆ ಬಳಕೆಯಾಗುತ್ತಿದೆ. ಬಾಹ್ಯಾಕಾಶಗಳಲ್ಲೂ ಮಡಚುವ ಬೈಸಿಕಲ್ಲುಗಳ ಬಳಕೆಯಾಗುತ್ತಿದೆ.

ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸೈಕಲ್ ಬಳಸುವ ಪರಿಪಾಠ ಇದೆ. ಕೆಲವೆಡೆ ಸಂಚಾರ ಕಾಲದಲ್ಲಿ ಸೈಕಲ್ಲುಗಳನ್ನು ತಮ್ಮ ಜೊತೆಗೆ ಒಯ್ದರೆ, ಇನ್ನು ಕೆಲವು ಕಡೆ ನಿಲ್ದಾಣಗಳಲ್ಲಿ ಬೈಸಿಕಲ್ಲುಗಳನ್ನು ಪಾರ್ಕ್ ಮಾಡಿ ಬೇಕೆಂದಾಗ ಬಳಸುತ್ತಾರೆ. ಹಾಂ. ನಮ್ಮಲ್ಲಿ ದ್ವಿಚಕ್ರ ವಾಹನಗಳನ್ನು ಬಸ್ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ ಬಸ್ಸುಗಳಲ್ಲಿ ಸಂಚಾರ ಮಾಡಿ ಬರುವಂತೆ!

ಬೈಸಿಕಲ್ಲಿನಲ್ಲಿ ದೂರದ ಪ್ರಯಾಣವನ್ನೆಲ್ಲ ಮಾಡಲು ಸಾಧ್ಯವೇ ಎಂದು ಕೆಲವರಾದರೂ ಕಾಲೆಳೆಯಬಹುದು. ಖಂಡಿತ. ದೂರದ ಪ್ರಯಾಣವನ್ನು ಸೈಕಲ್ಲಿನಲ್ಲಿ ಮಾಡಲು ಸಾಧ್ಯವಿಲ್ಲ. ಎಷ್ಟು ದೂರ ಸೈಕಲ್ಲಿನಲ್ಲಿ ಪ್ರಯಾಣ ಮಾಡಬಹುದು ಎಂಬುದು ವ್ಯಕ್ತಿಯ ಸಾಮರ್ಥ್ಯ, ದೈಹಿಕ ಪ್ರಕೃತಿ, ವಯಸ್ಸು, ಲಿಂಗ, ಪ್ರಯಾಣ ಮಾಡುವ ಸ್ಥಳ ಇವನ್ನೆಲ್ಲ ಅವಲಂಬಿಸಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ 15 ಕಿ.ಮೀ. (10) ಮೈಲಿಗಿಂತ ಹೆಚ್ಚು ದೂರವನ್ನು ಬೈಸಿಕಲ್ಲಿನಲ್ಲಿ ಪ್ರಯಾಣಿಸುವುದಿಲ್ಲವಂತೆ. ಹೆಚ್ಚು ದೂರದ ಪಯಣ ಮಾಡಬೇಕಾಗಿ ಬಂದಾಗ `ಮಿಶ್ರ ವಾಹನ ಪಯಣ'ದ ಕ್ರಮವನ್ನು ಅವಲಂಬಿಸುತ್ತಾರೆ. ಅಂದರೆ ಬೈಸಿಕಲ್ ಮತ್ತು ರೈಲು ಇಲ್ಲವೇ ಬಸ್ಸುಗಳಲ್ಲಿ ಪಯಣ.

ಲಂಡನ್ನಿನಲ್ಲಿ ರೈಲು ನಿಲ್ದಾಣಗಳಲ್ಲಿ ವಿಶಾಲವಾದ ಬೈಸಿಕಲ್ ಪಾರ್ಕುಗಳಿವೆ. ಅಂದರೆ ರೈಲಿನಲ್ಲಿ ಬರುವ ವ್ಯಕ್ತಿಗಳು ಅಲ್ಲಿಂದ ತಮ್ಮ ಕಚೇರಿಗೆ ಹೋಗಲು ಮತ್ತು ವಾಪಸಾಗಲು ಈ ಬೈಸಿಕಲ್ ಪಾರ್ಕಿನಲ್ಲಿ ನಿಲಗಡೆ ಮಾಡಿದ ಬೈಸಿಕಲ್ಲುಗಳನ್ನು ಬಳಸುತ್ತಾರೆ.

ಕೆಲವರು ಪ್ರಯಾಣ ಮಾಡುವಾಗ ತಮ್ಮ ಲಗ್ಗೇಜುಗಳ ಜೊತೆಗೆ ಮಡುಚುವ ಬೈಸಿಕಲ್ಲುಗಳನ್ನು ಒಯ್ಯುತ್ತಾರೆ. ಇನ್ನು ಕೆಲವರು ತಮ್ಮ ಬೈಸಿಕಲ್ಲುಗಳಲ್ಲಿ ಬಸ್ಸು, ರೈಲು ನಿಲ್ದಾಣಗಳಿಗೆ ಬಂದು ಅಲ್ಲಿಂದ ಮುಂದಕ್ಕೆ ರೈಲು/ ಭೂಗತ ಬಸ್ಸುಗಳಲ್ಲಿ ಪಯಣಿಸುತ್ತಾರೆ.

ಸುರಕ್ಷತೆ ಸಮಸ್ಯೆ: ಬೈಸಿಕಲ್ ಪಯಣ ಅಂದೊಡನೆ ಎದುರಾಗುವ ದೊಡ್ಡ ಸಮಸ್ಯೆ ಸುರಕ್ಷತೆಯದ್ದು. ಮೋಟಾರು ವಾಹನಗಳು ಡಿಕ್ಕಿ ಹೊಡೆದಾಗ ಮಾರಣಾಂತಿಕ ಗಾಯ ಬೀಳುವುದು ಬೈಸಿಕಲ್ ಸವಾರರಿಗೆ. ಬೈಸಿಕಲ್ ಪಯಣಿಗರ ಸಂಖ್ಯೆ ಹೆಚ್ಚಬೇಕು ಎಂದರೆ ಇದಕ್ಕೊಂದು ಪರಿಹಾರ ಬೇಕಾಗುತ್ತದೆ. ಮೋಟಾರು ವಾಹನಗಳು ಮತ್ತು ಮೋಟಾರು ರಹಿತ ವಾಹನಗಳ ಪಯಣಕ್ಕೆ ಪ್ರತ್ಯೇಕ ಮಾರ್ಗ/ ಲೇನುಗಳ ರಚನೆಯ ಸಲಹೆ ಇದಕ್ಕೊಂದು ಪರಿಹಾರ.

ದ್ವಿಚಕ್ರ ವಾಹನಗಳು ಅಥವಾ ಮೋಟಾರು ವಾಹನಗಳಲ್ಲಿ ಹೆಚ್ಚು ಲಗ್ಗೇಜು, ಸರಕು ಒಯ್ಯಬಹುದು. ಬೈಸಿಕಲ್ಲಿನಲ್ಲಿ ಅದು ಕಷ್ಟ ಎಂಬುದು ಬೈಸಿಕಲ್ ಪಯಣಕ್ಕೆ ಇರುವ ಇನ್ನೊಂದು ಅನಾನುಕೂಲ. ವಿದೇಶಗಳಲ್ಲಿ ಈ ಸಮಸ್ಯೆ ನಿವಾರಣೆಗಾಗಿ ಬೈಸಿಕಲ್ಲುಗಳ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಕ್ಯಾರಿಯರ್, ಬಾಕ್ಸುಗಳನ್ನು ಅಳವಡಿಸುವ ಯತ್ನಗಳು ನಡೆದಿವೆ. ಲ್ಯಾಪ್ ಟ್ಯಾಪ್ ಕಂಪ್ಯೂಟರುಗಳನ್ನು ಸುರಕ್ಷಿತವಾಗಿ ಒಯ್ಯಬಲ್ಲಂತಹ ವಿಶೇಷ ಲಗ್ಗೇಜು ಕ್ಯಾರಿಯರನ್ನೂ ರೂಪಿಸಲಾಗಿದೆ.

ಬೈಸಿಕಲ್ ಸವಾರರಿಗೆ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಕಳ್ಳತನದ್ದು. ಇದಕ್ಕೆ ಬೈಸಿಕಲ್ಲುಗಳನ್ನು ಸುಲಭವಾಗಿ ಕಳವು ಮಾಡದಂತೆ ವಿನ್ಯಾಸ ಗೊಳಿಸಬೇಕಾಗುತ್ತದೆ. ಬೈಸಿಕಲ್ ಪಾರ್ಕಿಂಗ್ ಜಾಗಗಳಲ್ಲಿ ಬೈಸಿಕಲ್ ರೇಕುಗಳನ್ನು ಇರಿಸಬೇಕಾಗುತ್ತದೆ. ಸುಲಭವಾಗಿ ಬೈಸಿಕಲ್ ಕಳ್ಳತನ ಆಗದಂತೆ ಮಾಡಲು ಯು ಲಾಕ್ ಮತ್ತು ಚೈನ್ ಬಳಸಿ ಬೈಸಿಕಲ್ಲುಗಳಿಗೆ ಬೀಗ ಹಾಕಬಹುದು. ಎಲ್ಲ ಚಕ್ರಗಳು ಮತ್ತು ಬೈಸಿಕಲ್ ಫ್ರೇಮನ್ನು ಒಂದೇ ಸರಪಳಿಯಿಂದ ಬೈಸಿಕಲ್ ರೇಕ್ ಜೊತೆಗೆ ಬಂಧಿಸಿ ಬೀಗ ಹಾಕಬಹುದು. ಬೈಸಿಕಲ್ ರೇಕ್ ಇಲ್ಲದೇ ಇದ್ದಲ್ಲಿ ಕಬ್ಬಿಣದ ಕಂಬಕ್ಕೆ ಬಿಗಿದು ಕಟ್ಟಿ ಬೀಗ ಹಾಕಬಹುದು. ಮಳೆ, ತೇವ, ಬಿಸಿಲು, ಧೂಳಿನಿಂದ ರಕ್ಷಿಸಲು ಬೈಸಿಕಲ್ಲನ್ನು ಮುಚ್ಚಿಡುವುದರಿಂದಲೂ ಬೈಸಿಕಲ್ ಕಳ್ಳತನ ನಿಯಂತ್ರಿಸಬಹುದು.

ಬೆವರಿನ ಸಮಸ್ಯೆ: ಬೈಸಿಕಲ್ ತುಳಿದು ಬಂದ ವ್ಯಕ್ತಿ ನಂತರ ಶಾಲೆಯಲ್ಲಿ/ ಕಚೇರಿಯಲ್ಲಿ ಬೆವರು ಸುರಿಸುತ್ತಾ ಕುಳಿತುಕೊಂಡು ಅಧ್ಯಯನ/ ಕೆಲಸ ಮಾಡುವುದು ಹೇಗೆ? ಶಾಲೆ ಕಚೇರಿಗಳಲ್ಲಿ ಮೈ, ಕೈಕಾಲು, ಮುಖ ತೊಳೆದುಕೊಳ್ಳಲು, ಒರೆಸಿಕೊಳ್ಳಲು ಬಟ್ಟೆಯ ವ್ಯವಸ್ಥೆ ಬೇಕು. ಶಾಲೆ/ ಕಚೇರಿಗಳಲ್ಲಿ ಸಾರ್ವಜನಿಕ ವಿಶ್ರಾಂತಿಕೊಠಡಿ ಮಾಡಿ ಅಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಂಡು ಸುಧಾರಿಸಲು ವ್ಯವಸ್ಥೆ ಮಾಡುವ ಮೂಲಕ ಈ ಸಮಸ್ಯೆ ನಿವಾರಣೆ ಸಾಧ್ಯ. ಸಮವಸ್ತ್ರ ಧರಿಸಬೇಕಾದ ಕಡೆಗಳಲ್ಲಿ ಬೈಸಿಕಲ್ ಪಯಣ ಕಾಲದಲ್ಲಿ ಬೇರೆ ಉಡುಪು ಧರಿಸಿ, ಗಮ್ಯ ತಲುಪಿದ ಬಳಿಕ ಅಲ್ಲಿ ಬೇಕಾದ ಸಮವಸ್ತ್ರ ಧರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕು.

ಆರೋಗ್ಯ ವರ್ಧಕ: ಬೈಸಿಕಲ್ ಪಯಣದಿಂದ ಪ್ರತಿದಿನ ಹೃದಯಕ್ಕೆ ವ್ಯಾಯಾಮ ಆಗುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಹೃದ್ರೋಗದ ಸಮಸ್ಯೆ, ಕೆಲವು ಬಗೆಯ ಕ್ಯಾನ್ಸರುಗಳು ದೂರವಾಗುತ್ತವೆ. ಬೊಜ್ಜು ಇಳಿಯುತ್ತದೆ ಎಂದು ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಸಲಾದ ಅಧ್ಯಯನವೊಂದು ಹೇಳುತ್ತದೆ. ಸಂಚಾರದ ವೇಳೆ ಸುಮ್ಮನೇ ಕುಳಿತುಕೊಂಡು ಕಾಲ ಕಳೆಯುವ ಬದಲು ಬೈಸಿಕಲ್ ಸವಾರಿ ಮಾಡುವುದರಿಂದ ನಿಮ್ಮ ಆರೋಗ್ಯ ಗಮನಾರ್ಹವಾಗಿ ಸುಧಾರಿಸುತ್ತದೆ ಎಂಬುದು ಇನ್ನೊಂದು ಅಧ್ಯಯದ ಸಾರ.

ಜರ್ಮನಿಯಲ್ಲಿ ಬೈಸಿಕಲ್ ಸಂಚಾರ ಹೆಚ್ಚಿಸುವ ಸಲುವಾಗಿ `ಮಿಟ್ ಡೆಮ್ ರೆಡ್ ಝುರ್ ಆರ್ಬಿಟ್' ಎಂಬ ಸಂಸ್ಥೆಯೊಂದು ಪ್ರಾದೇಶಿಕ ಪ್ರಚಾರ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ಇದು ಎಷ್ಟು ಯಶಸ್ವಿಯಾಯಿತು ಎಂದರೆ 11,740 ಕಂಪೆನಿಗಳು ಮತ್ತು 1,01,529 ಜನ ಇದರಲ್ಲಿ ಪಾಲ್ಗೊಂಡರು.

ಅಮೆರಿಕದ ಲೀಗ್ ಆಫ್ ಅಮೆರಿಕನ್ ಬೈಸಿಕಲಿಸ್ಟ್ ಸಂಘಟನೆಯು ಪ್ರತಿವರ್ಷ ಮೇ 15-19ರ ಅವಧಿಯಲ್ಲಿ `ಬೈಕ್ (ಬೈಸಿಕಲ್) ಟು ವರ್ಕ್' ಸಪ್ತಾಹ ಆಚರಿಸುತ್ತಿದೆ. ಸಪ್ತಾಹದ ಕೊನೆಯ ದಿನ ಮೇ 19ರಂದು `ಬೈಸಿಕಲ್ ದಿನ'ವನ್ನು ಆಚರಿಸುತ್ತದೆ. ಇದರ ಉದ್ದೇಶ- ಬೈಸಿಕಲ್ ಜನಪ್ರಿಯತೆಯನ್ನು ಹೆಚ್ಚಿಸುವುದು.

ಈಗ ಹೇಳಿ- ಇಂಧನವನ್ನೇ ಬೇಡದ ಬೈಸಿಕಲ್ ಬಳಸುವ ಮೂಲಕ ನಮ್ಮ ಆರೋಗ್ಯ ರಕ್ಷಣೆ ಜೊತೆಗೆ ಭೂಮಿಗೆ ಎದುರಾಗಿರುವ `ತಾಪ'ದ ಶಾಪ ವಿಮುಕ್ತಿಗೆ ನಾವೂ ಏಕೆ ನಮ್ಮ ಕೊಡುಗೆ ಕೊಡಬಾರದು?

No comments:

Advertisement