Tuesday, May 20, 2008

ಇಂದಿನ ಇತಿಹಾಸ History Today ಮೇ 20

ಇಂದಿನ ಇತಿಹಾಸ

ಮೇ 20

ವೇದಾಂತ ಭಾರತಿ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟಿಸಿದ ಅಭೂತಪೂರ್ವ `ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣ' ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಶಂಕರ ಭಗವತ್ಪಾದ ವಿರಚಿತ ಸೌಂದರ್ಯ ಲಹರಿ ಸ್ತೋತ್ರಗಳನ್ನು ಪಠಿಸಿ ಇತಿಹಾಸ ನಿರ್ಮಿಸಿದರು.

2007: ವೇದಾಂತ ಭಾರತಿ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟಿಸಿದ ಅಭೂತಪೂರ್ವ `ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣ' ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಶಂಕರ ಭಗವತ್ಪಾದ ವಿರಚಿತ ಸೌಂದರ್ಯ ಲಹರಿ ಸ್ತೋತ್ರಗಳನ್ನು ಪಠಿಸಿ ಇತಿಹಾಸ ನಿರ್ಮಿಸಿದರು.

2007: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪೆನಿಯ ಸಣ್ಣ ಕಾರುಗಳ ಉತ್ಪಾದನಾ ಘಟಕಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮತ್ತೆ ಜನರ ವಶಕ್ಕೆ ತೆಗೆದುಕೊಳ್ಳಲು ಕೃಷಿ ಜಮೀನು ರಕ್ಷಾ ಸಮಿತಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗಾಗಿ ರಕ್ತದಲ್ಲಿ ಸೋಡಿಯಂ ಕ್ಲೋರೈಡ್ ಅಂಶವನ್ನು ನಿಯಂತ್ರಿಸುವ `ಸಲೋನಿ-ಕೆ' ಎಂಬ ಹೆಸರಿನ ಸಸ್ಯಜನ್ಯ ಉಪ್ಪು ತಯಾರಿಸಿರುವುದಾಗಿ ಗುಜರಾತಿನ ಭಾವನಗರದ ಕೇಂದ್ರ ಉಪ್ಪು ಮತ್ತು ಸಮುದ್ರ ರಾಸಾಯನಿಕ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಸಮುದ್ರ ಕಳೆ ಮತ್ತು ಸಲಿಕೋರ್ನಿಯಾ ಬ್ರಚಿಟಾ ಎಂಬ ಸಸ್ಯವನ್ನು ಈ ಉಪ್ಪು ತಯಾರಿಸಲು ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಕೆ. ಘೋಷ್ ಪ್ರಕಟಿಸಿದರು.

2007: ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ಅತಿವೃಷ್ಟಿ ಹಾಗೂ ಭಾರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ವಿಕೋಪದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಧ್ಯಯನವೊಂದು ಎಚ್ಚರಿಕೆ ನೀಡಿತು.

2006: ರಾಷ್ಟ್ರದ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾದ ರಾಜಸ್ತಾನದ ಜೈಪುರದ ಹಿರಿಯಜ್ಜ ಬಡೇ ಮಿಯಾ 130ನೇ ಜನ್ಮದಿನ ಆಚರಿಸಿಕೊಂಡು ಗಿನ್ನೆಸ್ ಪುಸ್ತಕದಲ್ಲಿ ಅತೀ ಹೆಚ್ಚು ವರ್ಷ ಬದುಕಿದ ವ್ಯಕ್ತಿ ಎಂಬುದಾಗಿ ಹೆಸರು ದಾಖಲುಸುವ ಇಚ್ಛೆ ವ್ಯಕ್ತಪಡಿಸಿದರು. ಪಿಂಚಣಿ ಕಾರ್ಡ್ ಪ್ರಕಾರ ಅವರು ಹುಟ್ಟಿದ್ದು 1878ರ ಮೇ 20ರಂದು. ಆದರೆ ತಾನು ಇನ್ನೂ ಹಿಂದೆಯೇ ಹುಟ್ಟಿರುವುದಾಗಿ ಈ ಅಜ್ಜನ ವಾದ.

2006: ದಕ್ಷಿಣ ಚೀನಾ ಸಮುದ್ರದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ ಸಿಲುಕಿ 160ಕ್ಕೂ ಹೆಚ್ಚು ಮೀನುಗಾರರು ಮೃತರಾದರು.
1982: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವು 77 ಸ್ಥಾನಗಳನ್ನು ಗೆದ್ದುಕೊಂಡು 140 ಸ್ಥಾನಬಲದ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಗಳಿಸಿಕೊಂಡಿತು.

1975: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಗಢದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.

1957: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಖ್ಯಾತ ಕಾಂಗ್ರೆಸ್ ಧುರೀಣ ಟಿ. ಪ್ರಕಾಶಂ ಅವರು ಹೈದರಾಬಾದಿನಲ್ಲಿ ನಿಧನರಾದರು.

1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂ ಎಸ್ ಹೂಡ್ ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.

1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬುದಾಗಿ ಖ್ಯಾತಿ ಪಡೆದ ವ್ಯಕ್ತಿ.

1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.

1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಹಾಗೂ ಉಷ್ಣಮಾಪಕವನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement