Tuesday, July 8, 2008

ಇಂದಿನ ಇತಿಹಾಸ History Today ಜುಲೈ 8

ಇಂದಿನ ಇತಿಹಾಸ

ಜುಲೈ 8

ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರು ಬಹುಕಾಲದ ಅಸ್ವಸ್ಥತೆಯ ನಂತರ ಈದಿನ ನವದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ಕಾಲಕ್ಕೆ ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಹಿರಿಯ ಸಮಾಜವಾದಿ ನಾಯಕರಿವರು.


2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರು ಬಹುಕಾಲದ ಅಸ್ವಸ್ಥತೆಯ ನಂತರ ಈದಿನ ನವದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ಕಾಲಕ್ಕೆ ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದ ಹಿರಿಯ ಸಮಾಜವಾದಿ ನಾಯಕರಿವರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರಿನಿಂದ ಅವರು ಬಳಲಿದ್ದ ಅವರು ಈದಿನ ಬೆಳಗ್ಗೆ 8.45ರ ವೇಳೆಗೆ ಕೊನೆಯುಸಿರೆಳೆದರು. ಹಾಲಿ ಲೋಕಸಭಾ ಸದಸ್ಯರಾಗಿದ್ದ ಚಂದ್ರಶೇಖರ್ ದೇಶದ 11ನೇ ಪ್ರಧಾನಿಯಾಗಿ 1990ರ ನವೆಂಬರ್ 10ರಿಂದ 1991ರ ಜೂನ್ 21ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಬೆಂಬಲದೊಡನೆ ಅಲ್ಪ ಬಹುಮತದ ಸರ್ಕಾರವನ್ನು ಮುನ್ನಡೆಸಿದ್ದರು. ಉತ್ತರ ಪ್ರದೇಶದ ಬಲ್ಲಿಯಾ ಕ್ಷೇತ್ರದಿಂದ ಎಂಟು ಬಾರಿ ಲೋಕಸಭೆಗೆ ಮತ್ತು ಒಂದು ಬಾರಿ ರಾಜ್ಯಸಭೆಗೆ ಚುನಾಯಿತರಾಗಿದ್ದ ಅವರು, ಆರ್ಥಿಕ ಉದಾರೀಕರಣದ ನೀತಿಗಳು ಮತ್ತು ವೈಯಕ್ತಿಕ ರಾಜಕಾರಣವನ್ನು ಬಲವಾಗಿ ವಿರೋಧಿಸಿದವರು. ತತ್ವ-ಸಿದ್ಧಾಂತದ ರಾಜಕಾರಣಕ್ಕೆ ಹೆಸರಾಗಿದ್ದ ಅವರು ಪ್ರಧಾನಿಯಾಗುವ ಮುನ್ನ ಯಾವುದೇ ಸರ್ಕಾರಿ ಅಧಿಕಾರದ ಸ್ಥಾನವನ್ನು ಅಲಂಕರಿಸಿರಲಿಲ್ಲ. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರೊಡನೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಜನತಾದಳದಿಂದ ವಿಭಜನೆಗೊಂಡು ಸಮಾಜವಾದಿ ಜನತಾ ಪಕ್ಷ ರಚಿಸಿಕೊಂಡ ಅವರು, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಬೆಂಬಲದಿಂದ ಅಲ್ಪಮತದ ಸರ್ಕಾರ ರಚಿಸಿದರು. ಆದರೆ ಸ್ಪಲ್ಪವೇ ಸಮಯದಲ್ಲಿ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಪರಿಣಾಮ ಅವರ ಸರ್ಕಾರ ಪತನಗೊಂಡಿತು. ಇತ್ತೀಚಿನ ವರ್ಷಗಳಲ್ಲಿನ ಧನಬಲದ ರಾಜಕಾರಣದ ಮಧ್ಯೆ ತಮ್ಮ ಪಕ್ಷವನ್ನು ಬಲವಾಗಿ ಕಟ್ಟಲು ಅಸಹಾಯಕರಾಗಿದ್ದ ಚಂದ್ರಶೇಖರ್, ತಮ್ಮ ಸ್ವಕ್ಷೇತ್ರದಿಂದ ಮಾತ್ರ ಅಜಾತಶತ್ರುವಿನಂತೆ ಗೆಲ್ಲುತ್ತಲೇ ಬಂದರು. ಆದರೆ ಅವರದು ಲೋಕಸಭೆಯಲ್ಲಿ ಒಂಟಿ ದನಿಯಾಗಿತ್ತು. ನೇರ ನಡೆ-ನುಡಿಯ ಹಿರಿಯ ರಾಜಕಾರಣಿಯಾಗಿದ್ದ ಅವರು ಎಲ್ಲ ಪಕ್ಷಗಳ ಹಿರಿಯ ನಾಯಕರೊಡನೆ ಸರಾಗವಾಗಿ ಬೆರೆಯುವ `ಗೌರವಾನ್ವಿತ ವ್ಯಕ್ತಿ' ಯಾಗಿದ್ದರು.

2007: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪ್ರಸಿದ್ಧ ಯಡೆಯೂರು ಕ್ಷೇತ್ರದಲ್ಲಿ ಆನೆಯ ತುಳಿತಕ್ಕೆ ಒಳಗಾಗಿ ಸಚಿನ್ ಎಂಬ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತನಾದನು. ದೇವಾಲಯ ಆವರಣದಲ್ಲೇ ಬಾಲಕ ಆನೆಗೆ ಬಾಳೆಹಣ್ಣು ನೀಡುತ್ತಿದ್ದಾಗ ಈ ಘಟನೆ ನಡೆಯಿತು. ಈ ಬಾಲಕ ಮೂಲತಃ ಅರಕಲಗೂಡಿನವರಾದ ಮಂಜುನಾಥ ಮತ್ತು ಶ್ರೀಮತಿ ಮಂಜುನಾಥ ದಂಪತಿಯ ಪುತ್ರ. ಇವರು ಪ್ರಸ್ತುತ ಬೆಂಗಳೂರಿನ ನಂದಿನಿ ಲೇ ಔಟ್ ನಿವಾಸಿಗಳು.

2007: ಸ್ವಿಟ್ಜರ್ಲೆಂಡ್ ಆಟಗಾರ ರೋಜರ್ ಫೆಡರರ್ ಸತತ ಐದು ಬಾರಿ ವಿಂಬಲ್ಡನ್ ಪ್ರಶಸ್ತಿ ಪಡೆದ ಸಾಧನೆ ಮಾಡಿದರು. ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್ನ ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ನ ರಫೆಲ್ ನಡಾಲ್ ವಿರುದ್ಧ ಫೆಡರರ್ 7-6 (9-7), 4-6, 7-6 (7-3), 2-6, 6-2ರಲ್ಲಿ ಗೆಲುವಿನ ನಗೆ ಬೀರಿದರು. ಬೋರ್ನ್ ಬರ್ಗ್ ಅವರನ್ನು ಬಿಟ್ಟರೆ ಸತತ ಐದು ಸಲ ವಿಂಬಲ್ಡನ್ ಚಾಂಪಿಯನ್ ಆದ ಶ್ರೇಯಸ್ಸು ಫೆಡರರ್ ಒಬ್ಬರದೇ.

2007: ಸಂಪತ್ತಿನ ಗಳಿಕೆಯಲ್ಲಿ ಹಿರಿಯಣ್ಣ ಮುಖೇಶ್ ಅಂಬಾನಿ ಅವರನ್ನು ಹಿಂಬಾಲಿಸುತ್ತಿರುವ ಅನಿಲ್ ಅಂಬಾನಿ ಸಹ ಪ್ರತಿಷ್ಠಿತ `ಲಕ್ಷ ಕೋಟಿ ಕ್ಲಬ್'(ಟ್ರಿಲಿಯನರ್ ಕ್ಲಬ್)ಗೆ ಸೇರ್ಪಡೆಯಾಗಿ, ಈ ಗೌರವಕ್ಕೆ ಪಾತ್ರರಾದ ದ್ವಿತೀಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಿಯಲ್ ಎಸ್ಟೇಟ್ ಕ್ಷೇತ್ರದ ದೈತ್ಯ ಕಂಪೆನಿ ಡಿಎಲ್ಎಫ್ ನ ಅಧ್ಯಕ್ಷ ಕೆ.ಪಿ.ಸಿಂಗ್ ಅವರು ಸಂಪತ್ತಿನ ಗಳಿಕೆಯಲ್ಲಿ ಅಂಬಾನಿ ಸಹೋದರರ ನಂತರದ ಮೂರನೇ ಸ್ಥಾನವನ್ನು ಪಡೆದರು.

2007: ಜಗತ್ತಿನ ಅತ್ಯಂತ ಸುಂದರ ಸ್ಮಾರಕ ಎಂದೇ ಪರಿಗಣಿಸಲಾಗಿರುವ ತಾಜ್ ಮಹಲ್ ನಿರೀಕ್ಷೆಯಂತೆಯೇ ಹೊಸ ಏಳು ಅದ್ಭುತಗಳಲ್ಲಿ ಒಂದೆನಿಸಿತು. ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡಾ ಒಂದು ಎಂಬುದಾಗಿ ಪೋರ್ಚುಗಲ್ಲಿನ ಲಿಸ್ಬನ್ನಿನಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಬಾಲಿವುಡ್ ನಟಿ ಬಿಪಾಸಾ ಬಸು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಏಳು ಅದ್ಭುತಗಳ ಆಯ್ಕೆ ಅಧಿಕೃತವಲ್ಲದಿದ್ದರೂ ಮೊಘಲರ ಕಾಲದ್ದೆಂದು ಹೇಳಲಾಗುತ್ತಿರುವ ಈ ಅಚ್ಚರಿದಾಯಕ ಕಟ್ಟಡ ಭಾರತೀಯರು ಹೆಮ್ಮೆಪಡುವಂತೆ ಮಾಡಿತು. ವಿಶ್ವದಾದ್ಯಂತ ಹೊಸ ಏಳು ಅದ್ಭುತಗಳನ್ನು ಗುರುತಿಸುವ ಕಾರ್ಯಕ್ರಮವನ್ನು ಪೋರ್ಚುಗಲ್ಲಿನ ಚಿತ್ರ ನಿರ್ಮಾಪಕ ಬರ್ನಾರ್ಡ್ ವೆಬರ್ ಆರಂಭಿಸಿದ್ದರು. ಈ ಅಮೃತಶಿಲೆಯ ಕಟ್ಟಡ ಶೇಕಡಾವಾರು ಮತದಾನದಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಒಟ್ಟು ಚಲಾವಣೆಯಾದ ಮತಗಳ ಪೈಕಿ 20 ಶೇಕಡಾ ಮತ ಪಡೆದ ಪೆರುವಿನ ಮಾಚು ಪಿಚು ಮೊದಲ ಸ್ಥಾನ ಗಿಟ್ಟಿಸಿತು. ವಿಶ್ವದ 100 ಕೋಟಿಗೂ ಹೆಚ್ಚು ಮಂದಿ ಮತದಾನ ಮಾಡಿದ್ದರು. `ನ್ಯೂ ಸೆವೆನ್ ವಂಡರ್ಸ್ ಆಫ್ ವರ್ಲ್ಡ್' ಸಂಸ್ಥೆ ಪೋರ್ಚುಗಲ್ಲಿನ ಲಿಸ್ಬನ್ನಿನ `ಎಸ್ಟಾಡಿಯೊ ಡ ಲುಜ್' ಹಾಲ್ನಲ್ಲಿ ಸಮಾರಂಭ ಏರ್ಪಡಿಸಿತ್ತು. ತಾಜ್ ಮಹಲ್ ಮತ್ತು ಮಾಚು ಪಿಚು ಅಲ್ಲದೆ ಚೀನಾದ ಮಹಾಗೋಡೆ, ಜೋರ್ಡಾನಿನ ಪೆಟ್ರಾ ಸ್ಮಾರಕ, ಬ್ರೆಜಿಲ್ ನಲ್ಲಿರುವ ಏಸುಕ್ರಿಸ್ತನ ಪ್ರತಿಮೆ, ಮೆಕ್ಸಿಕೊದ ಚಿಚೆನ್ ಇಟ್ಜಾ ಪಿರಾಮಿಡ್ ಮತ್ತು ರೋಮ್ ನಗರದ ಮಧ್ಯಭಾಗದಲ್ಲಿರುವ ಕಲೊಸಿಯಂ (ವೃತ್ತಕಾರದ ಬೃಹತ್ ರಂಗಮಂಟಪ) ಏಳು ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದವು ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು. ತಾಜ್ ಮಹಲ್ ಗೆ ಸಂಬಂಧಿಸಿದ ಪ್ರಶಸ್ತಿ ಪತ್ರವನ್ನು ಆಗ್ರಾದ ಮೇಯರ್ ಅಂಜುಲಾ ಸಿಂಗ್ ಸ್ವೀಕರಿಸಿದರು.

2007: ವರ್ಷದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿರುವ ಮೇಘಾಲಯದ ಕಣ್ಸೆಳೆಯುವ ಪಟ್ಟಣ ಚಿರಾಪುಂಜಿಗೆ 'ಸೊಹ್ರಾ' ಎಂಬುದಾಗಿ ಮರುನಾಮಕರಣ ಮಾಡಲು `ಸಯೆಮ್' ಬುಡಕಟ್ಟಿನ ಮುಖ್ಯಸ್ಥ, ಪ್ರಭಾವಶಾಲಿ ಖಾಸಿ
ವಿದ್ಯಾರ್ಥಿ ಸಂಘಟನೆ (ಕೆಎಸ್ಯು) ಹಾಗೂ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡವು. ಸ್ಥಳೀಯರು `ಸೊಹ್ರಾ'ಎಂದೇ ಕರೆಯುವ ಇದನ್ನು ಬ್ರಿಟಿಷ್ ಆಡಳಿತಗಾರರು ಸರಿಯಾಗಿ ಉಚ್ಚರಿಸಲಾಗದೇ `ಚೆರ್ರಾ' ಎಂದು ಅಪಭ್ರಂಶಗೊಳಿಸಿದ್ದರು. 1830ರಲ್ಲಿ `ಸೊಹ್ರಾ'ದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದ್ದ ಬ್ರಿಟಿಷರು `ಪುಂಜೊ' ಎಂಬ ಬಂಗಾಳಿ ಪದವನ್ನು `ಚೆರ್ರಾ'ಕ್ಕೆ ಸೇರಿಸಿದರು. ಆಗ ಅದು ಚಿರಾಪುಂಜಿ ಎಂದು ಬಳಕೆಗೆ ಬಂದಿತು.

2007: ಕೋಲ್ಕತ್ತ ಸಮೀಪದ ಚಿತ್ತೂರಿನಿಂದ ಸಂಚಾರವನ್ನು ಆರಂಭಿಸಿದ ಪ್ರಾಯೋಗಿಕ ರೈಲು ಈದಿನ ಬೆಳಗ್ಗೆ ಭಾರತೀಯ ಕಾಲಮಾನ 10.45ರ ಹೊತ್ತಿಗೆ ಬಾಂಗ್ಲಾದೇಶದ ದರ್ಶನಾ ರೈಲ್ವೆ ನಿಲ್ದಾಣವನ್ನು ತಲುಪಿತು. ಇದರೊಂದಿಗೆ ಬಂಗಾಳದಿಂದ ಬಾಂಗ್ಲಾ ನಡುವೆ ರೈಲು ಸಂಚಾರ ಆರಂಭಿಸುವ ಉದ್ದೇಶ ಭಾಗಶಃ ಯಶಸ್ಸು ಕಂಡಿತು.

2007: ನಾಟಿಂಗ್ ಹ್ಯಾಮಿನಲ್ಲಿ ಅಂತ್ಯಗೊಂಡ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗಿನಲ್ಲ್ಲಿ ಸೊಗಸಾದ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡ ವಿಜಯದುಂಧುಬಿ ಮೊಳಗಿಸಿತು. ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ 93 ರನ್ನುಗಳಿಂದ ಆತಿಥೇಯ ಇಂಗ್ಲೆಂಡ್ ತಂಡವನ್ನು ಪರಾಭವಗೊಳಿಸಿತು.

2006: ಉಡುಪಿ ಅಂಬಾಗಿಲಿನ ಸುಸಿ ಗ್ಲೋಬಲ್ ರೀಸರ್ಚ್ ಸೆಂಟರ್ ಅಧ್ಯಕ್ಷ ಬಿ. ವಿಜಯ ಕುಮಾರ್ ಹೆಗ್ಡೆ ಅವರು ಕಡಲ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸಂಶೋಧನೆಗೆ ಬೌದ್ಧಿಕ ಹಕ್ಕು (ಪೇಟೆಂಟ್) ಪಡೆದುಕೊಂಡಿರುವುದಾಗಿ ಪ್ರಕಟಿಸಿದರು. 27 ವರ್ಷಗಳಿಂದ ನಡೆಸಿದ ಸಂಶೋಧನೆಗೆ ಮೂರೇ ವರ್ಷದಲ್ಲಿ ಕೇಂದ್ರ ಸರ್ಕಾರಿ ಆಧೀನದ ಪೇಟೆಂಟ್ ಕಚೇರಿ ಬೌದ್ಧಿಕ ಹಕ್ಕನ್ನು ನೀಡಿದ್ದು, ಅಧ್ಯಯನ ಯೋಜನೆಗಾಗಿ 2.5 ಕೋಟಿ ರೂಪಾಯಿಗಳನ್ನು ವ್ಯಯಿಸಿ, ಯೋಜನೆ ಅನುಷ್ಠಾನಕ್ಕೆ ಕಂಪೆನಿ ಸ್ಥಾಪಿಸಲಾಗುವುದು ಎಂದು ಹೆಗ್ಡೆ ಹೇಳಿದರು.

2006: ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಕನ್ನಡಿಗ, ಹಾಸನದ ರಾಜಾರಾವ್ ಅವರು ಅಮೆರಿಕದ ಟೆಕ್ಸಾಸ್ ನ ಆಸ್ಟಿನ್ ನಲ್ಲಿ (98) ನಿಧನರಾದರು. 1908ರಲ್ಲಿ ಹಾಸನದಲ್ಲಿ ಎಚ್. ಎಸ್. ಕೃಷ್ಣಸ್ವಾಮಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ್ದ ರಾಜಾರಾವ್ ಅವರ ಸ್ವಂತ ಊರು ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ. 1969ರಲ್ಲಿ ಭಾರತ ಸರ್ಕಾರದ `ಪದ್ಮಭೂಷಣ', 1988ರಲ್ಲಿ ಸಾಹಿತಿ ವಲಯದ ಅತ್ಯಂತ ಪ್ರತಿಷ್ಠಿತ `ನ್ಯೂಸ್ಟಾಡ್ಟ್ ಇಂಟರ್ ನ್ಯಾಷನಲ್ ಪ್ರೈಜ್' ಪಡೆದಿದ್ದ ರಾಜಾರಾವ್ ತಮ್ಮ ಕೃತಿಗಳ ಮೂಲಕ ಹುಟ್ಟೂರನ್ನು ಇಡೀ ಜಗತ್ತಿಗೆ ಪರಿಚಯಿಸಿದ ವ್ಯಕ್ತಿ. ಯೌವನದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿಸಿಕೊಂಡಿದ್ದ ಅವರ ಕೃತಿಗಳಲ್ಲಿ `ಕಾಂತಾಪುರ', `ದಿ ಕೌ ಆಫ್ ದಿ ಬ್ಯಾರಿಕೇಡ್ಸ್ ಮತ್ತು ಇತರ ಕಥೆಗಳು', `ವಿದರ್ ಇಂಡಿಯಾ' `ದಿ ಸರ್ಪೆಂಟ್ ಅಂಡ್ ದಿ ರೋಪ್', `ದಿ ಕ್ಯಾಟ್ ಅಂಡ್ ಶೇಕ್ಸ್ ಪಿಯರ್' `ದಿ ಮೀನಿಂಗ್ ಆಫ್ ಇಂಡಿಯಾ' ಇತ್ಯಾದಿ ಪ್ರಮುಖವಾದವು.

2006: ಹಿರಿಯ ಸಾಹಿತಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ `ಅನಕೃ- ನಿರ್ಮಾಣ್ ಪ್ರಶಸ್ತಿ' ಪ್ರದಾನ ಮಾಡಲಾಯಿತು.

2006: ಲಂಡನ್ನಿನಲ್ಲಿ ನಡೆದ ಮಹಿಳಾ ವಿಂಬಲ್ಡನ್ ಟೆನಿಸ್ ಸಿಂಗಲ್ಸ್ ಫೈನಲ್ ನಲ್ಲಿ ಫ್ರಾನ್ಸಿನ ಅಮೆಲಿ ಮೌರೆಸ್ಮೊ ಅವರು ಬೆಲ್ಜಿಯಂನ ಜಸ್ಟಿನ್ ಹೆನಿನ್ ಹಾರ್ಡಿನ್ ಅವರನ್ನು 2-6, 6-3, 6-4 ಅಂತರದಲ್ಲಿ ಪರಾಭವಗೊಳಿಸಿ ಚೊಚ್ಚಲ `ಮಹಿಳಾ ವಿಂಬಲ್ಡನ್ ಕಿರೀಟ'ಕ್ಕೆ ಪಾತ್ರರಾದರು.
2006: ಮಾಲೀಕರಿಂದ ಪತ್ರಿಕೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆಪಾದಿಸಿ ಕ್ಯಾಲಿಫೋರ್ನಿಯಾದ `ಸಂಟಾ ಬಾರ್ಬಾರಾ ನ್ಯೂಸ್ ಪ್ರೆಸ್' ಪತ್ರಿಕೆಯ ಆರು ಮಂದಿ ಹಿರಿಯ ಸಂಪಾದಕರು ಮತ್ತು ದೀರ್ಘ ಕಾಲದ ಅಂಕಣಕಾರರೊಬ್ಬರು ಪತ್ರಿಕೆಗೆ ರಾಜೀನಾಮೆ ನೀಡಿದರು ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿತು.

1981: ಬೆಂಗಳೂರು ನಗರದ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಸತ್ತವರ ಸಂಖ್ಯೆ 224ಕ್ಕೆ ಏರಿತು. ಮೈಸೂರಿನಲ್ಲೂ ಕಳ್ಳಬಟ್ಟಿ ಸಾರಾಯಿ ಸೇವನೆಯಿಂದ 25 ಮಂದಿ ಪೌರ ಕಾರ್ಮಿಕರ ಪೈಕಿ 12 ಮಂದಿ ಅಸು ನೀಗಿದರು.

1936: ಶಿವರಾಮು ಎಂದೇ ಖ್ಯಾತರಾಗಿದ್ದ ಸಾಹಿತಿ ಎಂ.ಎಸ್. ಶಿವರಾಮಯ್ಯ ಅವರು ಸೀತಾರಾಮಯ್ಯ- ಶಿವಮ್ಮ ದಂಪತಿಯ ಮಗನಾಗಿ ಮಳವಳ್ಳಿಯಲ್ಲಿ ಜನಿಸಿದರು. ಸಾವರ್ಕರ್ ಅವರ `ಗೋಮಾಂತಕ' ಗದ್ಯರೂಪವನ್ನು `ನೆತ್ತರು ತಾವರೆ' ಹೆಸರಿನಲ್ಲಿ ಕನ್ನಡಕ್ಕೆ ತಂದ ಶಿವರಾಮು `ರಣವೀಳ್ಯ', `ಅಕ್ಕ ನಿವೇದಿತಾ', `ಕನ್ನಡ ಕಡುಗಲಿಗಳು' ಕೃತಿಗಳ ಮೂಲಕ ಜನರಿಗೆ ಸುಪರಿಚಿತರು. ಸಾವರ್ಕರ್ ಜೀವನ ಚರಿತ್ರೆಯ ಕಾದಂಬರಿ ರೂಪ `ಆತ್ಮಾಹುತಿ', ಉಜ್ವಲ ರಾಷ್ಟ್ರಗೀತೆ ವಂದೇ ಮಾತರಂಗೆ ಬಂದ ದುಸ್ಥಿತಿಯನ್ನು ಬಣ್ಣಿಸುವ `ಒಂದು ಕಥೆ ಒಂದು ವ್ಯಥೆ' ಕೃತಿಗಳು ಅವರ ಕೃತಿಗಳಲ್ಲಿ ಅತ್ಯಂತ ಪ್ರಮುಖ ಕೃತಿಗಳು. ಶಿವರಾಮ ಕಾರಂತರಿಂದ ಹೊಗಳಿಕೆಗೆ ಪಾತ್ರರಾದ ಶಿವರಾಮು 1999ರ ನವೆಂಬರ್ 14ರಂದು ನಿಧನರಾದರು.

No comments:

Advertisement