Thursday, February 26, 2009

ಇಂದಿನ ಇತಿಹಾಸ History Today ಫೆಬ್ರುವರಿ 22

ಇಂದಿನ ಇತಿಹಾಸ

ಫೆಬ್ರುವರಿ 22

ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2008: ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗೆ 
ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ಶೋಯೆಬ್ ಕಸಂ ಘನ್ಸರ್ ಎಂಬಾತನಿಗೆ ನೀಡಲಾದ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಆರ್. ವಿ. ರವೀಂದ್ರನ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ ಟಾಡಾ ನ್ಯಾಯಾಲಯ ತಮ್ಮನ್ನು ದೋಷಿಯನ್ನಾಗಿ ಮಾಡಿ ಮರಣ ದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಸ್ವೀಕರಿಸಿತು.

2008: ತೀವ್ರ ವಿವಾದಕ್ಕೆ ಒಳಗಾಗಿದ್ದ ಸಕ್ರಮ ಯೋಜನೆಯನ್ನು ಪರಿಷ್ಕರಿಸಿದ ಕರ್ನಾಟಕ ರಾಜ್ಯ ಸರ್ಕಾರ, 20 ಗುಣಿಸು 30 ಮತ್ತು 30 ಗುಣಿಸು 40 ಅಡಿ ಅಳತೆಯ ಅನಧಿಕೃತ ನಿವೇಶನಗಳಿಗೆ ನಿಗದಿ ಪಡಿಸಿದ್ದ ದಂಡ ಶುಲ್ಕದಲ್ಲಿ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ಪ್ರಕಟಿಸಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬಂದ 118 ಗ್ರಾಮ ಠಾಣಾಗಳಲ್ಲಿನ ನಿವೇಶನಗಳ ಮಾಲೀಕರು ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಈ ಪರಿಷ್ಕೃತ ಸಕ್ರಮ ಯೋಜನೆಗೆ ಸರ್ಕಾರದ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿತು.

2008: ವಾಣಿಜ್ಯ ಉದ್ಧೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿದ ಹೈಕೋರ್ಟ್ ಆದೇಶ ವಿರೋಧಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ನೀಡಿದ ಕರೆಯ ಮೇರೆಗೆ ಈದಿನ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಯಿತು.

2008: ದೋಡಾ ಜಿಲ್ಲೆ ಬದೇರ್ ವಾ ಪಟ್ಟಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭೇಟಿಗೆ ಒಂದು ಗಂಟೆ ಮೊದಲು  ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಭಾರಿ ಹಿಮಪಾತದಿಂದ ಉಂಟಾದ ಪರಿಸ್ಥಿತಿ ಅವಲೋಕಿಸಲೆಂದು ಸೋನಿಯಾ ಹಾಗೂ ಶಿವರಾಜ್ ಪಾಟೀಲ್ ಪಟ್ಟಣಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ  ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕೂಲಂಕಷ ಪರಿಶೀಲನೆ ಕೈಗೊಂಡಿತ್ತು. ಆಗ ಬದೇವಾರಿನಿಂದ  3 ಕಿ.ಮೀ.ದೂರದ ದಲಿಘರದಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಇದನ್ನು ಹಿಮದೊಳಗೆ ಹುದುಗಿಸಿಡಲಾಗಿತ್ತು.

2008:  ವಿವಾದದ ಸುಳಿಗೆ  ಸಿಲುಕಿ ರಾಜಸ್ಥಾನದಲ್ಲಿ ನಿಷೇಧಕ್ಕೆ ಒಳಗಾದ  `ಜೋಧಾ ಅಕ್ಬರ್' ಸಿನೆಮಾ ಮಧ್ಯ ಪ್ರದೇಶ ಸರ್ಕಾರದ ಕೆಂಗಣ್ಣಿಗೂ ಗುರಿಯಾಯಿತು. ಚಿತ್ರ ಪ್ರದರ್ಶನಕ್ಕೆ ಮಧ್ಯಪ್ರದೇಶದ ರಜಪೂತ ಸಮುದಾಯದಿಂದ ಭಾರಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜಾರಿಗೆ ಬರುವಂತೆ ಚಿತ್ರ ಪ್ರದರ್ಶನ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.

2008: ವೆನಿಜುವೆಲಾ ವಿಮಾನವೊಂದು ದಟ್ಟಾರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ 46 ಪ್ರಯಾಣಿಕರು ಮೃತರಾದರು. ಅತಿಎತ್ತರದ ಮೆರಿಡಾ ನಗರದಿಂದ ಕಾರಕಾಸ್ಗೆ ಹೊರಟಿದ್ದ ವಿಮಾನ ಮಾರ್ಗ ಮಧ್ಯೆ ದಟ್ಟ ಅರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

2008: ಉತ್ತರ ಶ್ರೀಲಂಕಾದಲ್ಲಿ ಸೇನೆ ಮತ್ತು ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 45 ಮಂದಿ ಮೃತರಾದರು. ಮೃತರಲ್ಲಿ 43 ಉಗ್ರರು ಮತ್ತು ಇಬ್ಬರು ಯೋಧರು.

2008: 20 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸದ ಕಾರಣ ನಟಿ, ಸಮಾಜವಾದಿ ಸಂಸದೆ ಜಯಪ್ರದಾ ಮಾಲಿಕತ್ವದ ಪ್ರಸಿದ್ಧ `ಜಯಪ್ರದಾ' ಚಿತ್ರಮಂದಿರ ಸಂಕೀರ್ಣವನ್ನು ಚೆನ್ನೈ ಮಹಾನಗರ ಪಾಲಿಕೆ ಜಪ್ತಿ ಮಾಡಿತು.

2007: ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2007: ದೆಹಲಿಯ ಪ್ರತಿಷ್ಠಿತ `ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ'ಗೆ ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಆಯ್ಕೆಯಾದರು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದ ಕಲಾವಿದ. 

2007: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸುವುದರ ಜೊತೆಗೆ ಎರಡು ಆಸ್ಪತ್ರೆ, ವೈದ್ಯಕೀಯ ದಂತವಿಜ್ಞಾನ, ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು.

2007: ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟಿಗೆ ಆಯ್ಕೆಯಾದರು.

2007: ಇಟಲಿ ಪ್ರಧಾನಿ ರೊಮಾನೊ ಪ್ರೊಡಿ ಅವರು ತಮ್ಮ ವಿದೇಶ ನೀತಿ ಮತ್ತು ಆಫ್ಘಾನಿಸ್ಥಾನದಲ್ಲಿ ಇಟಲಿ ಸೇನೆ ಕಾರ್ಯಾಚರಣೆ ವಿಷಯಗಳ ಕುರಿತ ಸರ್ಕಾರದ ಮಸೂದೆಗೆ ಸೆನೆಟಿನಲ್ಲಿ ಸೋಲು ಉಂಟಾದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

2006: ಹಿರಿಯ ಇತಿಹಾಸಕಾರ್ತೆ, ರಾಷ್ಟ್ರೀಯ ಇಂದಿರಾಗಾಂಧಿ ಕಲಾ ಕೇಂದ್ರದ ಅಧ್ಯಕ್ಷೆ ಕಪಿಲಾ ವಾತ್ಸಾಯನ ಅವರು ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಪ್ರಮಾಣವಚನ ಬೋಧಿಸಿದರು.

2006: ಮುಂಬೈ ಕರ್ನಾಟಕ ಸಂಘವು ಪ್ರತಿವರ್ಷವೂ ಕೊಡುವ ವರದರಾಜ ಆದ್ಯ ಪ್ರಶಸ್ತಿಗೆ ಲೇಖಕ- ಕಲಾವಿದ ಡಿ.ಎಸ್ ಚೌಗಲೆ ಆಯ್ಕೆಯಾದರು. 

2006: ಇರಾಕಿನ ಸಮರ್ರಾದಲ್ಲಿ ಇಮಾಮ್ ಅಲಿ ಹಲ್-ಹದಿ ಮತ್ತು ಇಮಾಮ್ ಹಸನ್ ಅಲ್-ಅಸ್ಕರಿ ಸ್ಮರಣಾರ್ಥ ನಿರ್ಮಿಸಲಾದ ಅಲ್ ಅಸ್ಕರಿ ಮಸೀದಿ ಮೇಲೆ ಬಾಂಬ್ ದಾಳಿ ನಡೆದು ಅದನ್ನು ಭಾಗಶಃ ಹಾನಿಗೊಳಿಸಲಾಯಿತು. ಮಸೀದಿಯ ಸ್ವರ್ಣಗುಮ್ಮಟ ಕುಸಿದುಬಿತ್ತು. ನಂತರ ಸಂಭವಿಸಿದ ಗಲಭೆಗಳಲ್ಲಿ ಮೂವರು ಪತ್ರಕರ್ತರು ಸೇರಿದಂತೆ ಹಲವರು ಮೃತರಾದರು.

1965: ಕಲಾವಿದ ಮೈಸೂರು ಕೆ. ಕುಮಾರ್ ಜನನ.

1964: ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ `ಗೊಂಡ' ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.

1958: ಭಾರತದ ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಆಜಾದ್ ನಿಧನರಾದರು.

1957: ಇಂಗ್ಲೆಂಡಿನ ರಾಣಿ ಎಲಿಜಬೆತ್ ಅವರು ತಮ್ಮ ಪತಿ ಡ್ಯೂಕ್ ಆಫ್ ಎಡಿನ್ ಬರ್ಗ್ ಅವರಿಗೆ `ರಾಜಕುಮಾರ' ಎಂಬ ಬಿರುದನ್ನು ದಯಪಾಲಿಸಿದರು.

1949: ನಿಕಿ ಲೌಡಾ ಹುಟ್ಟಿದ ದಿನ. ಈತ ಆಸ್ಟ್ರೇಲಿಯಾದ ಮೋಟಾರ್ ರೇಸಿಂಗ್ ಚಾಂಪಿಯನ್.

1944: ಮಹಾತ್ಮಾ ಗಾಂಧೀಜಿ ಪತ್ನಿ ಕಸ್ತೂರಬಾ ಗಾಂಧಿ ನಿಧನರಾದರು.

1932: ಅಮೆರಿಕಾದ ಸೆನೆಟರ್ ಹಾಗೂ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಸಹೋದರ ಎಡ್ವರ್ಡ್ ಕೆನಡಿ ಹುಟ್ಟಿದ ದಿನ. 

1918: ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಮೆರಿಕನ್ ರಾಬರ್ಟ್ ಪರ್ಶಿಂಗ್ ವಾಡ್ಲೊ (1918-1940) ಹುಟ್ಟಿದ ದಿನ. ಈತನ ಎತ್ತರ 8 ಅಡಿ 11 ಅಂಗುಲಗಳು.

1902: ಫ್ರಿಟ್ಜ್ ಸ್ಟ್ರಾಸ್ ಮಾನ್ (1902-1980) ಹುಟ್ಟಿದ ದಿನ. ಜರ್ಮನ್ ಭೌತ ರಾಸಾಯನಿಕ ತಜ್ಞರಾಗಿದ್ದ ಇವರು ಒಟ್ಟೋ ಹಾನ್ ಜೊತೆ ಸೇರಿ ಯುರೇನಿಯಮ್ಮಿನಲ್ಲಿ ನ್ಯೂಟ್ರಾನ್ ಪ್ರಚೋದಿತ ಪರಮಾಣು ವಿದಳನವನ್ನು ಕಂಡು ಹಿಡಿದರು. 

1892: ಇಂದುಲಾಲ್ ಯಾಜ್ಞಿಕ್ (1892-1972) ಹುಟ್ಟಿದ ದಿನ. ಇವರು ಭಾರತದ ತತ್ವಜ್ಞಾನಿಯೂ ಸಮಾಜವಾದಿ ನಾಯಕರೂ ಆಗಿದ್ದರು.

1891: ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು (22-2-1891ರಿಂದ 20-5-1981) ಅಕ್ಕಿಹೆಬ್ಬಾಳು ನರಸಿಂಹಯ್ಯ- ವೆಂಕಮ್ಮ ದಂಪತಿಯ ಮಗನಾಗಿ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು. ಎಲ್. ಶ್ರೀನಿವಾಸ ಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ್, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಈ ಕಲಾಮಂದಿರದಿಂದ ಬಂದವರೇ. ಕಲಾವಿದ ಎ.ಎಸ್. ಮೂರ್ತೆ ಅವರು ಸುಬ್ಬರಾಯರ ಪುತ್ರ.

1857: ಬ್ರಿಟಿಷ್ ಸೇನಾ ಅಧಿಕಾರಿ ಲಾರ್ಡ್ ಬೇಡೆನ್ ಪೊವೆಲ್ (1857-1941) ಹುಟ್ಟಿದರು. ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ ್ಸನ ಸ್ಥಾಪಕರಾಗಿ ಇವರು ಖ್ಯಾತರಾಗಿದ್ದಾರೆ. 1889ರಲ್ಲಿ ಇದೇ ದಿನ ಬೇಡೆನ್ ಪೊವೆಲ್ ಅವರ ಪತ್ನಿ ಒಲೇವ್ ಬೇಡೆನ್ ಪೊವೆಲ್ (1889-1977) ಹುಟ್ಟಿದರು. ಇವರು 1930ರಿಂದ ಗರ್ಲ್ ಗೈಡ್ಸ್ ಜಾಗತಿಕ ಮುಖ್ಯಸ್ಥೆಯಾಗಿ ಸಂಘಟನೆಯನ್ನು ಮುನ್ನಡೆಸಿದರು.

1732: ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ (1732-1799) ಹುಟ್ಟಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement