Wednesday, October 15, 2008

ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!

ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!


ಅರ್ಜಿದಾರ ಬೇಡದೇ ಇದ್ದರೂ ಭಾರಿ ಮೊತ್ತದ ಸಾಲ ಮಂಜೂರು ಮಾಡಿ, ಡಿಮ್ಯಾಂಡ್ ಡ್ರಾಫ್ಟ್ ಕಳುಹಿಸಿದ ಹಾಗೂ ಸಂಧಾನಾಧಿಕಾರಿಯ ಆದೇಶದಂತೆ ಸಾಲ ವಸೂಲಿಗಾಗಿ ಮುರಿದ ಹಣವನ್ನು ಹಿಂತಿರುಗಿಸಿದರೂ, ಕ್ರೆಡಿಟ್ ಕಾರ್ಡ್ ಹಿಂಪಡೆದು ಗ್ರಾಹಕನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಿದ್ದು ಬ್ಯಾಂಕಿನ ಪಾಲಿನ ಸೇವಾಲೋಪ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನೆತ್ರಕೆರೆ ಉದಯಶಂಕರ

'ಸಾಲವನು ಕೊಂಬಾಗ ಹಾಲೋಗರುಂಡಂತೆ.....' ಸರ್ವಜ್ಞ ವಚನ ಯಾರಿಗೆ ಗೊತ್ತಿಲ್ಲ? ಸಾಲ ಪಡೆಯುವಾಗ ಆಗುವ ಖುಷಿ, ಸಾಲಿಗ ಬಂದು ಹಣ ವಾಪಸಾತಿಗಾಗಿ ಒತ್ತಾಯಿಸತೊಡಗಿದಾಗ ಕಿಬ್ಬದಿಯ ಕೀಲು ಮುರಿಯುವಂತಹ ಅನುಭವನ್ನು ಕೊಡುತ್ತದೆ.
ಆದರೆ ಈಗ ಇಡೀ ಜಗತ್ತು ಸಾಲದ ಮೇಲೆಯೇ ನಿಂತಿದೆ. ಬ್ಯಾಂಕುಗಳು ನಾ ಮುಂದು ತಾ ಮುಂದು ಎಂದು ಸಾಲ ನೀಡಲು ದುಂಬಾಲು ಬೀಳುತ್ತವೆ. ಸಾಲ ಬೇಡವಾಗಿದ್ದರೂ ಒತ್ತಾಯಪೂರ್ವಕವಾಗಿ ಸಾಲ ನೀಡಲೂ ಹಿಂಜರಿಯುವುದಿಲ್ಲ! 

ತನಗೆ ಬೇಡವಾದ ಸಾಲ ನೀಡಿ, ನಂತರ ಕಿಬ್ಬದಿಯ ಕೀಲು ಮುರಿಯಲು ಬ್ಯಾಂಕು ಆರಂಭಿಸಿದರೆ ಗ್ರಾಹಕ ಏನು ಮಾಡಬೇಕು? ತನ್ನ ಮುಂದೆ ಬಂದ ಇಂತಹ ಕುತೂಹಲಕರ ಮೇಲ್ಮನವಿ ಪ್ರಕರಣವೊಂದರಲ್ಲಿ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯ ಗ್ರಾಹಕನಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು: ಉಡುಪಿ ಕುಂಜಿಬೆಟ್ಟಿನ ಮೂಡನಿಡಂಬೂರು ಗ್ರಾಮದ ನಿವಾಸಿ ದಿವಂಗತ. ಟಿ.ಎನ್. ಬಾಲಕೃಷ್ಣನ್ ನಂಬಿಯಾರ್ ಅವರ ಪುತ್ರ ಸಿ.ಪಿ. ನಂಬಿಯಾರ್. ಪ್ರತಿವಾದಿಗಳು: 1) ಸಿಟಿಬ್ಯಾಂಕ್ ಎನ್. ಎ. ಸಿಟಿಬ್ಯಾಂಕ್ ಕಾರ್ಡ್ ಸೆಂಟರ್ ಅಣ್ಣಾ ಸಲೈ, ಚೆನ್ನೈ. 2) ಇಂಗ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಉಡುಪಿ.

ಅರ್ಜಿದಾರ ಸಿ.ಪಿ. ನಂಬಿಯಾರ್ ಅವರು ಒಂದನೇ ಪ್ರತಿವಾದಿ ಸಿಟಿಬ್ಯಾಂಕ್ ನೀಡಿದ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಯಾವುದೇ ಮನವಿ ಮಾಡದೇ ಇದ್ದರೂ ಬ್ಯಾಂಕು ಸಾಲ ಮಂಜೂರು ಮಾಡಿ 90,000 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟನ್ನು ಅವರಿಗೆ ಕಳುಹಿಸಿಕೊಟ್ಟಿತು.

ತನಗೆ ಹಣದ ಅಗತ್ಯ ಇಲ್ಲದೇ ಇದ್ದುದರ ಜೊತೆಗೆ ಸಾಲಕ್ಕಾಗಿ ಯಾವುದೇ ಮನವಿಯನ್ನೂ ಮಾಡದೇ ಇದ್ದುದರಿಂದ ನಂಬಿಯಾರ್ ಅವರು ತನಗೆ ಬಂದಿದ್ದ ಡಿಮ್ಯಾಂಡ್ ಡ್ರಾಫ್ಟನ್ನು ಪ್ರತಿವಾದಿಗೆ ಹಿಂದಿರುಗಿಸಿದರು.

ಆದರೆ ಡಿಮ್ಯಾಂಡ್ ಡ್ರಾಫ್ಟನ್ನು ಹಿಂದಿರುಗಿಸಿದ ನಂತರವೂ ಒಂದನೇ ಪ್ರತಿವಾದಿ ಸಿಟಿಬ್ಯಾಂಕ್ ಈ ಸಾಲಖಾತೆಗೆ ಅರ್ಜಿದಾರನ ಖಾತೆಯಿಂದ ಸಾಲ ಮರುಪಾವತಿ ಸಲುವಾಗಿ ಹಣ ಮುರಿಯಲು ಆರಂಭಿಸಿತು. ನಂಬಿಯಾರ್ ಅವರು ಸಾಲ ಖಾತೆಗೆ ಹಣ ಮುರಿಯುವುದನ್ನು ನಿಲ್ಲಿಸುವಂತೆ ಹಲವಾರು ಸಲ ಮನವಿ ಮಾಡಿದರು. ಆದರೆ ಒಂದನೇ ಪ್ರತಿವಾದಿ ಹಣ ಮುರಿದುಕೊಳ್ಳುವುದನ್ನು ನಿಲ್ಲಿಸಲಿಲ್ಲ.

ಕೊನೆಗೆ ಅರ್ಜಿದಾರರು ಸಂಧಾನಾಧಿಕಾರಿಯನ್ನು (ಓಂಬುಡ್ಸ್ಮನ್)  ಸಂಪರ್ಕಿಸಿ ದೂರು ನೀಡಿದರು.

ಸಂಧಾನಾಧಿಕಾರಿಯ ಆದೇಶದ ಮೇರೆಗೆ ಅರ್ಜಿದಾರರ ಖಾತೆಯಿಂದ ಮುರಿದುಕೊಳ್ಳಲಾದ ಹಣವನ್ನು ಅವರ ಖಾತೆಗೇ ಹಿಂದಿರುಗಿಸಲಾಯಿತು. ಜೊತೆಗೇ ಅರ್ಜಿದಾರರ ಕ್ರೆಡಿಟ್ ಕಾರ್ಡನ್ನೂ ಹಿಂತೆಗೆದುಕೊಳ್ಳಲಾಯಿತು.

ಕ್ರೆಡಿಟ್ ಕಾರ್ಡ್ ಹಿಂತೆಗೆದುಕೊಂಡ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ ನಂಬಿಯಾರ್ ಅವರು ಇದು ಒಂದನೇ ಪ್ರತಿವಾದಿ ಸಿಟಿ ಬ್ಯಾಂಕಿನ ಸೇವಾಲೋಪ ಎಂದು ದೂರಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು. ಅವರ ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಒಂದು ಲಕ್ಷ ರೂಪಾಯಿಗಳ ನಷ್ಟ ಪರಿಹಾರ, ಮತ್ತು ಮಾನಸಿಕ ಯಾತನೆಗಾಗಿ 50,000 ರೂಪಾಯಿಗಳ ಪರಿಹಾರ ನೀಡುವಂತೆ ಒಂದನೇ ಪ್ರತಿವಾದಿಗೆ ಆಜ್ಞಾಪಿಸಿತು. 585 ರೂಪಾಯಿಗಳ ಬಡ್ಡಿ, 3000 ರೂಪಾಯಿಗಳ ಸಂಪರ್ಕ ವೆಚ್ಚ, ಹಾಗೂ 5000 ರೂಪಾಯಿಗಳ ಖಟ್ಲೆ ವೆಚ್ಚವನ್ನೂ ತೆರುವಂತೆಯೂ ಒಂದನೇ ಪ್ರತಿವಾದಿಗೆ ಆದೇಶ ನೀಡಿತು. 

ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಒಂದನೇ ಪ್ರತಿವಾದಿ ಸಿಟಿಬ್ಯಾಂಕ್ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಟಿ. ಹರಿಯಪ್ಪ ಗೌಡ ಅವರನ್ನು ಒಳಗೊಂಡ ಪೀಠವು ಒಂದನೇ ಪ್ರತಿವಾದಿ ಸಿಟಿಬ್ಯಾಂಕ್ ಪರ ವಕೀಲ ಎಂ.ವಿ. ಕಿಣಿ, ಅರ್ಜಿದಾರ ನಂಬಿಯಾರ್ ಪರ ವಕೀಲ ಕಿಶೋರ ಶೆಟ್ಟಿ ಮತ್ತು ಎರಡನೇ ಪ್ರತಿವಾದಿ ಇಂಗ್ ವೈಶ್ಯ ಬ್ಯಾಂಕ್ ಪರ ವಕೀಲ ಡಿ.ಎನ್. ಕಾಗವಾಡ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರ ನಂಬಿಯಾರ್ ಅವರು ಸಾಲಮಂಜೂರು ಮಾಡುವಂತೆ ಕೋರಿದ್ದನ್ನು ತೋರಿಸುವಂತಹ ಯಾವುದೇ ಸಾಕ್ಷ್ಯಾಧಾರವನ್ನು ಒಂದನೇ ಪ್ರತಿವಾದಿ ಸಿಟಿಬ್ಯಾಂಕ್ ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಸಾಲ ಮಂಜೂರು ಮಾಡಿ ಡಿಮ್ಯಾಂಡ್ ಡ್ರಾಫ್ಟನ್ನು ಅರ್ಜಿದಾರರಿಗೆ ಕಳುಹಿಸಿದ್ದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಭಾವಿಸಿತು. ಅರ್ಜಿದಾರರು ಆ ಡಿಮ್ಯಾಂಡ್ ಡ್ರಾಫ್ಟನ್ನು ಹಿಂತಿರುತಿಸಿದ ಬಳಿಕವೂ ಸಾಲ ಮರುಪಾವತಿ ಹೆಸರಿನಲ್ಲಿ ಬಡ್ಡಿ ಹಾಗೂ ಅಸಲಿಗಾಗಿ ಹಣ ಮುರಿದುಕೊಳ್ಳುವುದನ್ನು ಮುಂದುವರಿಸಿದ್ದು, ಅರ್ಜಿದಾರರ ಆಕ್ಷೇಪಗಳನ್ನು ಗಮನಿಸದೇ ಇದ್ದದ್ದು, ಹಾಗೂ ಸಂಧಾನಾಧಿಕಾರಿಯ ಆದೇಶದ ಬಳಿಕ ಮುರಿದುಕೊಂಡ ಹಣವನ್ನು ಹಿಂತಿರುಗಿಸಿದ್ದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಪ್ರಕರಣದಲ್ಲಿ ಅರ್ಜಿದಾರರ ಮುಖ್ಯ ತಕರಾರು ಇದ್ದುದು ಇಷ್ಟೆಲ್ಲಾ ಆದ ಬಳಿಕ ಒಂದನೇ ಪ್ರತಿವಾದಿ ಮುರಿದುಕೊಂಡ ಹಣ ಹಿಂತಿರುಗಿಸಿದರೂ, ಕ್ರೆಡಿಟ್ ಕಾರ್ಡನ್ನು ಹಿಂದಕ್ಕೆ ಪಡೆದುಕೊಂಡದ್ದಕ್ಕೆ. ತಾನು ಯಾವುದೇ ತಪ್ಪನ್ನೂ ಮಾಡದೇ ಇದ್ದರೂ, ಕ್ರೆಡಿಟ್ ಕಾರ್ಡನ್ನು ಹಿಂತೆಗೆದುಕೊಂಡು ತನ್ನ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದ್ದರಿಂದ ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಯಿತು ಎಂಬುದು ಅವರ ಅಳಲು. ಇದರ ಜೊತೆಗೆ ಇಷ್ಟೆಲ್ಲ ವ್ಯವಹಾರದ ಮಧ್ಯೆ ಒಂದನೇ ಪ್ರತಿವಾದಿಯಿಂದ ತನಗೆ ಬೆದರಿಕೆ ಕರೆಗಳೂ ಬಂದಿದ್ದವು ಎಂಬುದು ಅವರ ದೂರು. ಆದರೆ ಈ ವಾದಗಳನ್ನು ಸಮರ್ಥಿಸುವಂತಹ ಯಾವುದೇ ಪುರಾವೆಗಳನ್ನು ಅವರು ನ್ಯಾಯಾಲಯಕ್ಕೆ ಒದಗಿಸಲಿಲ್ಲ.

ಈ ಪ್ರಕರಣದ ವಾಸ್ತವಾಂಶಗಳು ಒಂದನೇ ಪ್ರತಿವಾದಿ ತನ್ನ ಗ್ರಾಹಕರ ಜೊತೆಗಿನ ವ್ಯವಹಾರದಲ್ಲಿ ಪ್ರಾಮಾಣಿಕವಾಗಿಲ್ಲ ಎಂಬುದನ್ನು ತೋರಿಸುತ್ತವೆ. ಕ್ರೆಡಿಟ್ ಕಾರ್ಡ್ ಹಿಂತೆಗೆದುಕೊಂಡದ್ದರಿಂದ ಅರ್ಜಿದಾರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಯಿತೆಂಬುದೂ ನಿಜ. ಅರ್ಜಿದಾರರು ಮುರಿದ ಹಣ ಮರುಪಾವತಿ ಮಾಡುವಂತೆ ಹಲವಾರು ಮನವಿ ಮಾಡಿದರೂ ಸ್ಪಂದಿಸದ ಬ್ಯಾಂಕಿನ ವರ್ತನೆ ಸೇವಾಲೋಪ ಎಂಬುದೂ ಸ್ಪಷ್ಟ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅದರೆ ತನಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಯಾತನೆಗೆ ಸಂಬಂಧಿಸಿದಂತೆ ಅರ್ಜಿದಾರರು ಸಮರ್ಪಕ ಪುರಾವೆಗೆ ಒದಗಿಸದೇ ಇದ್ದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾ ನ್ಯಾಯಾಲಯವು 1.50 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ನಷ್ಟ ಪರಿಹಾರ ನೀಡಿದ್ದು ಸಮರ್ಪಕವಲ್ಲ. ಪರಿಹಾರ ಮೊತ್ತವಾಗಿ 50,000 ರೂಪಾಯಿಗಳನ್ನು ನೀಡುವುದರಿಂದ ಅರ್ಜಿದಾರರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪರಿಷ್ಕರಿಸಿದ ರಾಜ್ಯ ಗ್ರಾಹಕ ನ್ಯಾಯಾಲಯವು 50,000 ರೂಪಾಯಿಗಳನ್ನು ಎರಡು ತಿಂಗಳುಗಳ ಒಳಗಾಗಿ ಅರ್ಜಿದಾರರಿಗೆ ಪಾವತಿ ಮಾಡುವಂತೆಯೂ, ತಪ್ಪಿದಲ್ಲಿ ಈ ಮೊತ್ತಕ್ಕೆ ಶೇಕಡಾ 12ರ ಬಡ್ಡಿಯನ್ನೂ ಹಣ ಪಾವತಿ ಮಾಡುವವರೆಗೂ ನೀಡುವಂತೆಯೂ ಒಂದನೇ ಪ್ರತಿವಾದಿ ಬ್ಯಾಂಕಿಗೆ ಆಜ್ಞಾಪಿಸಿತು. 

ಪ್ರತಿವಾದಿಯು ನ್ಯಾಯಾಲಯಕ್ಕೆ ಕಟ್ಟಿದ 25,000 ರೂಪಾಯಿಗಳ ಠೇವಣಿ ಹಣವನ್ನು ಅರ್ಜಿದಾರರಿಗೆ ನೀಡಬೇಕು. ಉಳಿದ ಪರಿಹಾರ ಹಣವನ್ನು ಒಂದನೇ ಪ್ರತಿವಾದಿ ಅರ್ಜಿದಾರರಿಗೆ ಪಾವತಿ ಮಾಡಬೇಕು ಎಂದೂ ಪೀಠವು ನಿರ್ದೇಶನ ನೀಡಿತು.

1 comment:

ಯಜ್ಞೇಶ್ (yajnesh) said...

ಸಿಟಿ ಬ್ಯಾಂಕಿಗೆ ಸರಿಯಾದ ಶಾಸ್ತಿಯಾಯಿತು. ಕನಿಷ್ಟ ವಾರಕ್ಕೆ ಎರಡರಿಂದ ಮೂರು ಬಾರಿ ಫೋನ್ ಮಾಡಿ ನಿಮಗೆ ಲೋನ್ ಅಪ್ರೂವ್ ಆಗಿದೆ ಅಂತ ತಲೆ ತಿನ್ತಾರೆ. ಬೇಡ ಅಂದರೂ ಕೇಳೋದಿಲ್ಲ. ಮತ್ತೆ ಮತ್ತೆ ಫೋನ್ ಮಾಡ್ತಾರೆ. ಹೀಗೆ ಆಗಿ ಅಮೇರಿಕಾದಲ್ಲಿ ಬಹಳಷ್ಟು ಬ್ಯಾಂಕುಗಳು ಮುಚ್ಕೊಂಡು ಹೋಗ್ತಾಯಿರೋದು. ಕಂಡ ಕಂಡವರಿಗೆ ಮನೆ ಕಟ್ಟಲು ಸಾಲ ನೀಡಿದರೆ ಮತ್ತೇನಾಗತ್ತೆ!!!

Advertisement