My Blog List

Thursday, October 16, 2008

ಸಮುದ್ರ ಮಥನ 6: ಕ್ರೋಧವೆಂಬುದು ದೋಷ ಮಾತ್ರವಲ್ಲ, ಗುಣವೂ ಹೌದು

ಸಮುದ್ರ ಮಥನ 6: ಕ್ರೋಧವೆಂಬುದು

ದೋಷ ಮಾತ್ರವಲ್ಲ, ಗುಣವೂ ಹೌದು


ಬೇರೆ ದಾರಿಯೇ ಗೋಚರಿಸದಿದ್ದಾಗ ಕೊನೆಯ ಅಸ್ತ್ರವಾಗಿ ಕ್ರೋಧ ಜಾಗೃತವಾಗುತ್ತದೆ. ದಮ್ಮು, ಕಿಮ್ಮತ್ತು ಇಲ್ಲದ ಒಂದು ದುರ್ಬಲ ಕ್ರೋಧ. ಹಾಗಿದ್ದಾಗ ಅದನ್ನು ಕ್ರೋಧ ಎಂದು ಸಂಬೋಧಿಸಲೂ ಹೆದರಿಕೆ ಆಗುತ್ತದೆ. ಅದರ ಘನತೆಗೆ 'ಸಿಟ್ಟು' ಎನ್ನಬಹುದೇನೋ ಅಷ್ಟೆ. ಸಿಟ್ಟು ಆವರಿಸಿಕೊಂಡವರ ಆಟ, ಅದಾರಿದ ನಂತರ ವಾತಾವರಣ ತಿಳಿಗೊಳಿಸಲು ಪಡುವ ಪರದಾಟ ಅದರ ಗಂಭೀರತೆಯನ್ನು ತೋರಿಸುತ್ತದೆ.

ಕ್ರೋಧ ಎಂಬುದು ಮಹಾದೋಷ, ಅರಿಷಡ್ವರ್ಗಗಳಲ್ಲಿ ಒಂದು ಎಂಬ ದೃಷ್ಟಿ ಗಟ್ಟಿಯಾಗಿ 
ಬಲಿತಿದೆ. ಕ್ರೋಧ ಗುಣವೂ ಹೌದು ಎಂದರೆ ನಂಬಬಹುದೇ? ನಂಬುವುದು, ನಂಬದಿರುವುದರಿಂದ ಅದಕ್ಕೇನೂ ಬಾಧಕವಿಲ್ಲ. ಏನಾಗುವುದಿದ್ದರೂ ಅದು ನಮಗೆ ಅಷ್ಟೆ.
ಕ್ರೋಧ ನಮ್ಮ ಕೈಯ್ಯಲ್ಲಿ ಇದ್ದರೆ ಗುಣ. ಅದರ ಕೈಯ್ಯಲ್ಲಿ ನಾವಿದ್ದರೆ ದುರ್ಗುಣ. ನಮ್ಮ ಕೈಲಿ ಅದಿದ್ದರೆ ಅದು ರಾಮನ ಕ್ರೋಧ. ಜಿತಕ್ರೋಧ ಅವನು. ನಮ್ಮ ಕೈಯ್ಯಲ್ಲಿದೆ ಅಂದಾಗ ಅದು ಬಾ ಅಂದರೆ ಬರುತ್ತೆ, ಹೋಗು ಅಂದರೆ ನಿರಾಯಾಸವಾಗಿ ಹೋಗುತ್ತೆ. ಅಯ್ಯೋ! ಬರುವುದು ಬಂತು, ಹೋಗುವುದು ಹೇಗೋ, ಹೋಗಲೇಬೇಕೋ ಎಂಬ ಪರಿಸ್ಥಿತಿಯಲ್ಲಿ ಸಿಕ್ಕಿಬೀಳುವಂತೆ ಮಾಡುವುದಿಲ್ಲ. 

ನಮ್ಮದು ಹಾಗಿಲ್ಲ ಅನಿಸುತ್ತೆ. ಅನಿವಾರ್ಯ ಒತ್ತಡದಲ್ಲಿ ಸಿಲುಕಿದಾಗ ಬಿಡುಗಡೆ ಹೊಂದಲು ಬೇರೆ ದಾರಿಯೇ ಗೋಚರಿಸದಿದ್ದಾಗ ಕೊನೆಯ ಅಸ್ತ್ರವಾಗಿ ಕ್ರೋಧ ಜಾಗೃತವಾಗುತ್ತದೆ. ದಮ್ಮು, ಕಿಮ್ಮತ್ತು ಇಲ್ಲದ ಒಂದು ದುರ್ಬಲ ಕ್ರೋಧ. ಹಾಗಿದ್ದಾಗ ಅದನ್ನು ಕ್ರೋಧ ಎಂದು ಸಂಬೋಧಿಸಲೂ ಹೆದರಿಕೆ ಆಗುತ್ತದೆ. ಅದರ ಘನತೆಗೆ 'ಸಿಟ್ಟು' ಎನ್ನಬಹುದೇನೋ ಅಷ್ಟೆ. ಸಿಟ್ಟು ಆವರಿಸಿಕೊಂಡವರ ಆಟ, ಅದಾರಿದ ನಂತರ ವಾತಾವರಣ ತಿಳಿಗೊಳಿಸಲು ಪಡುವ ಪರದಾಟ ಅದರ ಗಂಭೀರತೆಯನ್ನು ತೋರಿಸುತ್ತದೆ.

ಕ್ರೋಧ ಗುಣ ಎನ್ನುವಾಗ ಇದ್ದರೆ ರಾಮನ ಕ್ರೋಧದಂತಿರಬೇಕು ಅಂದೆವು. ಸುಮ್ಮನೆ ಹೇಳಲಿಲ್ಲ. ರಾಮ ಕ್ರೋಧವನ್ನೂ ತನ್ನ ವಶದಲ್ಲಿಟ್ಟುಕೊಂಡು, ಅನಿವಾರ್ಯ ಸಂದರ್ಭದಲ್ಲಲ್ಲ, ಬಳಸಲೇಬೇಕಾದ ಸಂದರ್ಭದಲ್ಲಿ, ಅಂದರೆ ಅದಕ್ಕೊಪ್ಪುವ ಆದರ್ಶಪ್ರಾಯವಾದ ಸಂದರ್ಭದಲ್ಲಿ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದ.

ಗಮನಿಸಬೇಕು. ರಾವಣನ ವಧೆಯ ಸಂದರ್ಭದಲ್ಲಿ ಶ್ರೀರಾಮ ಕೋಪವನ್ನು ಕರೆದ ಅಂತ ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. 'ಕ್ರೋಧಂ ಆಹಾರಯಾಮಾಸ'. ನಾವು ಆಹಾರವನ್ನು ಸ್ವೀಕರಿಸುವಷ್ಟೇ ಸಹಜವಾಗಿ ಕ್ರೋಧವನ್ನು ತನ್ನೊಳಗೆ ಸ್ವೀಕರಿಸಿದ. ಹೊರಗೆಲ್ಲೋ ಅದು ನೆಲೆಸಿತ್ತು, ಅಷ್ಟರವರೆಗೂ ರಾಮನಿಗೂ ಅದಕ್ಕೂ ಸಂಬಂಧವೇ ಇರಲಿಲ್ಲವೇನೋ ಅನ್ನುವಂತೆ ವರ್ಣಿಸುತ್ತಾರೆ. 

ಅವನೊಳಗೇ ಸುಪ್ತವಾಗಿ ಮಲಗಿದ್ದ ಕ್ರೋಧವನ್ನು (ಬಡಿದೆಬ್ಬಿಸಿಯಲ್ಲ) ಎಬ್ಬಿಸಿ ಘೋರ ಯುದ್ಧವನ್ನು ಗಂಭೀರವಾಗಿ ಮಾಡಿದ ಅಂತ ಸಾಗುತ್ತದೆ ವರ್ಣನೆ.

 ಸ್ವಭಾವದ ಮೇಲೆ ಅಷ್ಟು ನಿಯಂತ್ರಣ ಸಾಧ್ಯವೇ! ಅಂತ ಅನ್ನಿಸಿದರೂ ಸಾಧ್ಯ ಅನ್ನುತ್ತದೆ ರಾಮಾಯಣ. ರಾಮನನ್ನು ತಂದು ಮನ್ಮಂದಿರದಲ್ಲಿ ನಿಲ್ಲಿಸುತ್ತದೆ. ಅಷ್ಟಾದರೂ ಆಶ್ಚರ್ಯದ ಎಪಿಸೋಡ್ ಮುಗಿಯುವುದಿಲ್ಲ. ಅಲ್ಲ ನಮ್ಮಿಂದ ಸಾಧ್ಯವಾಗದ್ದು ಇವನಿಗೆ ಹೇಗೆ ಸಾಧ್ಯವಾಯಿತು!

ಆ ರಾಮನ ಕ್ರೋಧ ಎಷ್ಟು ನಿಯಂತ್ರಿತ ಮತ್ತು ವೈಜ್ಞಾನಿಕ! (ತರ್ಕಕ್ಕೆ ನಿಲುಕುತ್ತದೆ ಎಂಬ ಧ್ವನಿಯಲ್ಲಿ). ರಾಮ ಕ್ರೋಧವನ್ನು ಆವಾಹಿಸಿಕೊಂಡ. ರಾವಣ ಧರೆಗೆ ಉರುಳಿದ. ರಾಮನ ಸ್ವರೂಪವನ್ನು ಅರಿತು ಶರಣಾದ. ಆಗ ರಾಮ ಕ್ರೋಧವನ್ನು ಸ್ವಸ್ಥಾನಕ್ಕೆ ಕಳಿಸಿದ. ಅದು ಇಳಿದಿದ್ದಲ್ಲ. ರಾವಣನನ್ನು ಧರೆಗುರುಳಿಸಲು ಅದು ಬೇಕಿತ್ತು. ಉರುಳಿಸಿ ಆಯಿತು. ಅದರ ಕೆಲಸ ಮುಗಿಯಿತು. ನಂತರ ಪರಮ ಪ್ರೀತಿಯಿಂದ ಅನುಗ್ರಹ ಸ್ವರೂಪನಾದ. ರಾವಣನ ಅಂತಿಮ ಸಂಸ್ಕಾರಕ್ಕೆ ವಿಭೀಷಣನಿಗೆ ಅಪ್ಪಣೆ ಕೊಡಿಸಿದ.

- ಶ್ರೀಮಜ್ಜಗದ್ಗುರು ಶಂಕರಾಚಾರ್ಯ 

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

 

No comments:

Advertisement