My Blog List

Friday, October 17, 2008

ಇಂದಿನ ಇತಿಹಾಸ History Today ಅಕ್ಟೋಬರ್

ಇಂದಿನ ಇತಿಹಾಸ

ಅಕ್ಟೋಬರ್ 17

ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವ ಶ್ರೀ ಪ್ರಶಸ್ತಿ'ಯನ್ನು ಈ ಬಾರಿ ಹರಿಯಾಣದ ಸಮಾಜ ಸೇವಕ ಸ್ವಾಮಿ ಅಗ್ನಿವೇಶ್ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯು 1ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಕ್ರೆಗ್ ಮೆಕ್ ಮಿಲನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವೆಲ್ಲಿಂಗ್ಟನ್ನಿನಲ್ಲಿ ವಿದಾಯ ಘೋಷಿಸಿದರು. ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ 31ರ ಹರೆಯದ ಅವರು ಈ ನಿರ್ಧಾರ ಕೈಗೊಂಡರು. ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಕೊನೆಗೊಂಡ ಟ್ವೆಂಟಿ 20 ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಪ್ರಕಟಿಸಲು ಬಯಸಿದ್ದೆ ಎಂದು ಅವರು ತಿಳಿಸಿದರು. ಟ್ವೆಂಟಿ 20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕಿವೀಸ್ ಪರ ಅತ್ಯಧಿಕ ರನ್ ಪೇರಿಸಿದ್ದರು.

2007: ತೆಲುಗು ಚಿತ್ರ ನಟ ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ (19) ತಂದೆಯ 'ಗೃಹ ಬಂಧನ'ದಿಂದ ತಪ್ಪಿಸಿಕೊಂಡು ಹೋಗಿ ತನ್ನ ಪ್ರಿಯಕರ ಸಿರೀಶ್ ಭಾರದ್ವಾಜ್ ಅವರನ್ನು ಮದುವೆಯಾದ ಘಟನೆ ಬೆಳಕಿಗೆ ಬಂತು. ಚಾರ್ಟರ್ಡ್ ಅಕೌಂಟೆಂಟ್ ಪದವಿ ಓದುತ್ತಿದ್ದ ಶ್ರೀಜಾ, ನಾಲ್ಕು ವರ್ಷದಿಂದ ಸಿರೀಶನನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿಗೆ ಚಿರಂಜೀವಿ ಕುಟುಂಬ ಸುತರಾಂ ಒಪ್ಪಿರಲಿಲ್ಲ. ಆಕೆಯ ಓದನ್ನೂ ಮೊಟಕುಗೊಳಿಸಿ ಒಂದು ವರ್ಷದಿಂದ ಮನೆಯಲ್ಲೇ ಇಟ್ಟಿದ್ದರು. ಈದಿನ ಮುಂಜಾನೆ ಮನೆಯಿಂದ ತಪ್ಪಿಸಿಕೊಂಡ ಶ್ರೀಜಾ, ಹೈದರಾಬಾದಿನಲ್ಲಿ ಆರ್ಯ ಸಮಾಜದಲ್ಲಿ ತಾನು ಪ್ರೀತಿಸಿದ ಸಿರೀಶನೊಂದಿಗೆ ರಹಸ್ಯವಾಗಿ ಮದುವೆಯಾದರು. ನಂತರ ಮಾಧ್ಯಮಗಳ ಮುಂದೆ ಬಂದು ತಮ್ಮ 'ಪ್ರೇಮ ಕಥೆ'ಯನ್ನು ಬಹಿರಂಗ ಪಡಿಸಿದರು. ಕಳೆದ ವರ್ಷ ಚಿರಂಜೀವಿ ಅವರ ಹಿರಿಯ ಪುತ್ರಿಯ ಮದುವೆ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿಜೃಂಭಣೆಯಿಂದ ನಡೆದಿತ್ತು.

2007: ಪಾಕಿಸ್ಥಾನವು ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ನೀಡಿದ ಅತ್ಯುತ್ತಮ ಅಂಪೈರ್ ಅಲೀಮ್ ದಾರ್ ಮಟ್ಟಿಗೆ ಈದಿನ ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಹಣಾಹಣಿಯ ಪಂದ್ಯದಲ್ಲಿ ತಮ್ಮ ನೂರನೇ ಏಕದಿನ ಪಂದ್ಯದ ಸಂಭ್ರಮವನ್ನು ಅನುಭವಿಸಿದರು. ನಾಗಪುರ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅದು ಅವರ 99 ನೆಂಯ ಏಕದಿನ ಪಂದ್ಯವಾಗಿತ್ತು. 2003ರಲ್ಲಿ ಢಾಕಾದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಅವರು ಮೊತ್ತ ಮೊದಲ ಬಾರಿಗೆ ಟೆಸ್ಟ್ ಅಂಪೈರ್ ಆಗಿದ್ದರು. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಅವರು ಪದಾರ್ಪಣೆ ಮಾಡಿದ್ದು ಆತಿಥೇಯ ಪಾಕಿಸ್ಥಾನ ಹಾಗೂ ಪ್ರವಾಸಿ ಶ್ರೀಲಂಕಾ ತಂಡಗಳು 2000 ಇಸವಿಯ ಫೆಬ್ರುವರಿಯಲ್ಲಿ ಹಣಾಹಣಿ ನಡೆಸಿದ್ದಾಗ.

2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವ ಶ್ರೀ ಪ್ರಶಸ್ತಿ'ಯನ್ನು ಈ ಬಾರಿ ಹರಿಯಾಣದ ಸಮಾಜ ಸೇವಕ ಸ್ವಾಮಿ ಅಗ್ನಿವೇಶ್ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯು 1ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯ ಸಂಗೀತ ವಿದ್ವಾನ್ ಗೌರವ ಪುರಸ್ಕಾರಕ್ಕೆ ನಾಡಿನ ಹಿರಿಯ ಹಿಂದೂಸ್ಥಾನಿ ಗಾಯಕ ಪಂಡಿತ್ ಸಿದ್ದರಾಮಸ್ವಾಮಿ ಕೋರವಾರ ಅವರು ಆಯ್ಕೆಯಾದರು.

2007: ಮುಂಬೈ: ಬ್ಯಾಟಿಂಗಿನಲ್ಲೂ ಬೌಲರುಗಳು ಮಿಂಚಿದ್ದರಿಂದ ಮುಂಬೈಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ವಿಕೆಟುಗಳ ರೋಚಕ ಗೆಲುವು ಸಾಧಿಸಿತು.

2007: ಕರ್ನಾಟಕ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ವಿದ್ಯುತ್ ಸರಬರಾಜು ಮಾಡಲು ಅಥವಾ ಅಗತ್ಯವಾದ ಲೈನು/ ಇತರ ಕೆಲಸಗಳಿಗಾಗಿ ಗ್ರಾಹಕರಿಂದ ಎರಡು ತಿಂಗಳ ವಿದ್ಯುತ್ ಬಿಲ್ (2 ಎಂಎಂಡಿ) ಮೊತ್ತಕ್ಕೆ ಸಮಾನವಾದ ಠೇವಣಿಯನ್ನು ಪಡೆಯಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) ಆದೇಶ ನೀಡಿತು. ಒಂದು ವೇಳೆ ಎರಡು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ನೀಡುವ ಕ್ರಮ ಇದ್ದರೆ 3 ತಿಂಗಳ ಬಿಲ್ (3 ಎಂಎಂಡಿ) ಮೊತ್ತವನ್ನು ಭದ್ರತೆಯಾಗಿ ಪಡೆಯಬಹುದು, ಅಕ್ಟೋಬರ್ 11ರಿಂದ ಈ ಆದೇಶ ಜಾರಿಗೆ ಬಂದಿದೆ ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಿಸಿದರು.

2007: ರಿಜ್ವಾನುರ್ ರೆಹಮಾನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡಿತು. ಕೋಲ್ಕತ್ತಾ ಪೊಲೀಸ್ ಆಯುಕ್ತ ಪ್ರಸುನ್ ಮುಖರ್ಜಿ, ಪೊಲೀಸ್ ಉಪ ಕಮಿಷನರುಗಳಾದ ಗ್ಯಾನ್ವಂತ್ ಸಿಂಗ್ ಮತ್ತು ಅಜಯ್ ಕುಮಾರ್, ರೌಡಿ ನಿಗ್ರಹ ದಳದ ಸಹಾಯಕ ಕಮಿಷನರ್ ಸುಕಾಂತಿ ಚಕ್ರವರ್ತಿ, ಸಬ್ ಇನ್ಸ್ಪೆಕ್ಟರ್ ಕೃಷ್ಣೇಂದು ಘೋಷ್ ಅವರ ವಿರುದ್ಧ ಈ ತನಿಖೆಗೆ ಹೈಕೋರ್ಟ್ ಆಜ್ಞಾಪಿಸಿತ್ತು.

2007: ಸಾಹಿತ್ಯ ಲೋಕದ ಅತ್ಯುನ್ನತ `ಬೂಕರ್' ಪ್ರಶಸ್ತಿ ಐರಿಷ್ ಲೇಖಕಿ ಅನ್ನೆ ಎನ್ ರೈಟ್ (45) ಅವರಿಗೆ ಲಭಿಸಿತು. ಭಾರತದ ಇಂದ್ರಾ ಸಿನ್ಹಾ ಹಾಗೂ ಇತರ ನಾಲ್ವರನ್ನು ಹಿಂದಿಕ್ಕಿ ಅನ್ನೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇಂದ್ರಾ ಅವರ `ಅನಿಮಲ್ಸ್ ಪೀಪಲ್', ಇಯಾನ್ ಮೆಕ್ ವಾನ್ ಅವರ `ಆನ್ ಚೆಸಿಲ್ ಬೀಚ್' ಹಾಗೂ ಲಾಯ್ಡ್ ಜೋನ್ಸ್ ಅವರ `ಮಿಸ್ಟರ್ ಪಿಪ್' ಪುಸ್ತಕಗಳನ್ನು ಅನ್ನೆ ಅವರ `ದಿ ಗ್ಯಾದರಿಂಗ್' ಹಿಂದಿಕ್ಕಿತು. ಹೋವರ್ಡ್ ಡೇವೀಸ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿತು. ಪ್ರಶಸ್ತಿಯು 50 ಸಾವಿರ ಪೌಂಡುಗಳ ನಗದು ಬಹುಮಾನ ಹೊಂದಿದೆ.

2007: ಸುಮಾರು 140 ದಶಲಕ್ಷ ವರ್ಷಗಳ ಹಿಂದೆ `ಗೊಂಡ್ವಾನಾಲ್ಯಾಂಡ್' ಎಂದೇ ಕರೆಯಲ್ಪಡುವ ಮಹಾಖಂಡ ಒಡೆದು ನಂತರ ಅದರ ಒಂದು ಭಾಗವಾದ ಭಾರತ ಉಪಖಂಡ ಅತಿ ವೇಗವಾಗಿ ಯುರೇಷಿಯಾಕ್ಕೆ ಅಪ್ಪಳಿಸಿದ ಪರಿಣಾಮ ಹಿಮಾಲಯ ಪರ್ವತ ಮತ್ತು ಟಿಬೆಟ್ ಪ್ರಸ್ಥಭೂಮಿ ರಚನೆಯಾಗಿರುವುದಾಗಿ ಬ್ರಿಟನ್ನಿನ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿತು. ಈ ಮಹಾಖಂಡದಲ್ಲಿ ಆಧುನಿಕ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಮೆರಿಕ ಉಪಖಂಡಗಳು ಸೇರಿದ್ದವು. ಇತರ ಭಾಗಗಳಿಗಿಂತಲೂ ಭಾರತ ಅತಿವೇಗವಾಗಿ (ವರ್ಷಕ್ಕೆ 18ರಿಂದ 20 ಸೆಂಟಿ ಮೀಟರಿನಷ್ಟು) ಚಲಿಸಿ, ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಯುರೇಷಿಯಾಕ್ಕೆ ಅಪ್ಪಳಿಸಿ ಹಿಂದಕ್ಕೆ ಸರಿದಾಗ ಭೂಮಿ ದೊಡ್ಡ ಪರ್ವತವಾಗಿ ಮಾರ್ಪಟ್ಟು ವಿಶ್ವದ ಅತಿ ಎತ್ತರದ ಶಿಖರ ನಿರ್ಮಾಣವಾಯಿತು. ಆದರೆ ಆಸ್ಟ್ರೇಲಿಯಾ ಮತ್ತು ಆಫ್ರಿಕಾ ನಿಧಾನಗತಿಯಲ್ಲಿ ವರ್ಷಕ್ಕೆ 4 ಸೆಂಟಿ ಮೀಟರಿನಷ್ಟು ಚಲಿಸಿತು. ದಕ್ಷಿಣ ಅಮೆರಿಕ ಸ್ವಲ್ಪ ವೇಗವಾಗಿ ಚಲಿಸಿತು. ಅಂಟಾರ್ಕ್ಟಿಕಾ ಮಾತ್ರ ಅಲ್ಲೇ ಉಳಿಯಿತು ಎಂದು ಜರ್ಮನ್ ಮತ್ತು ಭಾರತೀಯ ತಜ್ಞ ಲೇಖಕರು ನಂಬುವುದಾಗಿ ಪತ್ರಿಕೆ ಪ್ರಕಟಿಸಿತು.

2007:  ಬರ್ಕಿನಾ ಫಾಸೋ, ಕೋಸ್ಟಾ ರಿಕಾ, ಕ್ರೊವೇಷಿಯಾ, ಲಿಬಿಯಾ ಹಾಗೂ ವಿಯೆಟ್ನಾಂ ದೇಶಗಳನ್ನು ಮುಂದಿನ ಎರಡು ವರ್ಷಗಳ ಅವಧಿಗಾಗಿ ಭದ್ರತಾ ಮಂಡಲಿಗೆ ಹಂಗಾಮಿ ಸದಸ್ಯರನ್ನಾಗಿ ವಿಶ್ವಸಂಸ್ಥೆಯ ಮಹಾಸಭೆ ಆಯ್ಕೆ ಮಾಡಿತು.

2006: ಭಾರತೀಯ ಸಂಜಾತ ವಿಜ್ಞಾನಿ ಮಂಡ್ಯಮ್ ಶ್ರೀನಿವಾಸನ್ (56) ಅವರಿಗೆ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ ಆಸ್ಟ್ರೇಲಿಯಾದ ಪ್ರತಿಷ್ಠಿತ ಪ್ರಧಾನ ಮಂತ್ರಿ ಪ್ರಶಸ್ತಿ ಲಭಿಸಿತು. ಮೂರು ಲಕ್ಷ ಡಾಲರ್ ಮೌಲ್ಯದ ಈ ಪ್ರಶಸ್ತಿಯನ್ನು ಮೆಲ್ಬೋರ್ನಿನಲ್ಲಿ ಪ್ರದಾನ ಮಾಡಲಾಯಿತು. ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀನಿವಾಸನ್ ಅವರು ಜೇನ್ನೊಣಗಳ ಹಾರಾಟ ಕೌಶಲ ಬಗ್ಗೆ ಮಾಡಿದ ಸಂಶೋಧನೆ ಹಾಗೂ ಅದನ್ನು ರೊಬೋಟಿಕ್ ವಿಮಾನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.

2006: ಕುತೂಹಲ ಕೆರಳಿಸಿದ್ದ ಪ್ರಿಯದರ್ಶಿನಿ ಮಟ್ಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿಯ ಪುತ್ರ ಸಂತೋಷ ಕುಮಾರ ಸಿಂಗ್ ತಪ್ಪಿತಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. 1996ರ ಜುಲೈ 23ರಂದು ಈ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಎಸ್. ಸೋಧಿ, ಹಾಗೂ ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಅವರನ್ನು ಒಳಗೊಂಡ ಪೀಠವು ಆರೋಪಿಯನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು.

2006: ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪಾರಿತೋಷಕ ನೀಡದೆ ಆಯ್ಕೆ ಸಮಿತಿ ಈವರೆಗಿನ ಅತಿದೊಡ್ಡ ತಪ್ಪು ಎಸಗಿದೆ ಎಂದು ನಾರ್ವೆಯ ನೊಬೆಲ್ ಸಂಸ್ಥೆ ನಿರ್ದೇಶಕ ಗೀರ್ ಲುಂಡೆಸ್ಟ್ಯಾಂಡ್ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವ ಪ್ರಸ್ತಾವನೆ ಇತ್ತು, ಆದರೆ 1948ರಲ್ಲಿ ಗಾಂಧೀಜಿ ನಿಧನರಾದ ಬಳಿಕ ಆ ಯೋಚನೆ ಕೈಬಿಡಲಾಯಿತು ಎಂದು ಲುಂಡೆ ಸ್ಟ್ಯಾಂಡ್ ನಾರ್ವೆಯ ರಾಜಧಾನಿ ಓಸ್ಲೊದಲ್ಲಿ ಭಾರತೀಯ ಪತ್ರಕರ್ತರಿಗೆ ತಿಳಿಸಿದರು.

1997: ಕ್ರಾಂತಿಕಾರಿ ಅರ್ನೆಸ್ಟೋ `ಚೆ' ಗ್ಯುವೇರಾ ಅವರ ಅವಶೇಷಗಳನ್ನು 30 ವರ್ಷಗಳ ಬಳಿಕ ಕ್ಯೂಬಾದಲ್ಲಿ ಸಮಾಧಿ ಮಾಡಲಾಯಿತು. ಮೂವತ್ತು ವರ್ಷಗಳ ಹಿಂದೆ ಬೊಲಿವಿಯಾದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

1979: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

1970: ಅನಿಲ್ ಕುಂಬ್ಳೆ ಜನ್ಮದಿನ. 300 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದ ಏಕೈಕ ಭಾರತೀಯ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

1970: ಅನ್ವರ್ ಸಾದತ್ ಅವರು ಅಬ್ದುಲ್ ನಾಸ್ಸೇರ್ ಅವರ ಉತ್ತರಾಧಿಕಾರಿಯಾಗಿ ಈಜಿಪ್ಟಿನ ಅಧ್ಯಕ್ಷ ಸ್ಥಾನಕ್ಕೆ ಏರಿದರು.

1941: ಹಿರಿಯ ಭಾಷಾ ವಿಜ್ಞಾನಿ, ಘನ ವಿದ್ವಾಂಸ, ವಿಮರ್ಶಕ ಡಾ. ಕೆ.ಜಿ. ಶಾಸ್ತ್ರಿ ಅವರು ಗಣೇಶ ಶಾಸ್ತ್ರಿ- ಮೀನಾಕ್ಷಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.

1941: ಸಾಹಿತಿ ಶಾಂತಾ ಸನ್ಮತಿಕುಮಾರ್ ಜನನ.

1933: ಆಲ್ಬರ್ಟ್ ಐನ್ ಸ್ಟೀನ್ ಅವರು ನಾಜಿ ಜರ್ಮನಿಯಿಂದ ನಿರಾಶ್ರಿತರಾಗಿ ಅಮೆರಿಕಕ್ಕೆ ಆಗಮಿಸಿದರು.

1932: ಸಾಹಿತಿ ಎಚ್. ಬಿ. ಚಂಪಕಮಾಲಾ ಜನನ.

1932: ಸಾಹಿತಿ ರಾಜೀವ್ ತಾರಾನಾಥ ಜನನ.

1926: ಸಾಹಿತಿ ಎಂ.ಎನ್. ಸರೋಜಮ್ಮ ಜನನ.

1920: ಭಾರತದ ಕಮ್ಯೂನಿಸ್ಟ್ ಪಕ್ಷವು ತಾಷ್ಕೆಂಟಿನಲ್ಲಿ ಸ್ಥಾಪನೆಗೊಂಡಿತು. ಏಳುಮಂದಿ ಸದಸ್ಯರಲ್ಲಿ ಎಂ.ಎನ್. ರಾಯ್ ಮತ್ತು ಬೀರೇಂದ್ರ ಚಟ್ಟೋಪಾಧ್ಯಾಯ ಸೇರಿದ್ದರು.

1919: ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಗೊಂಡಿತು. ಮುಸ್ಲಿಂ ನಾಯಕ ಮೌಲಾನಾ ಜೌಹರ್ ಅಲಿ ಮತ್ತು ಮೌಲಾನಾ ಶೌಕತ್ ಅಲಿ ಸೋದರರು ಮತ್ತು ಅಬ್ದುಲ್ ಕಲಾಂ ಆಜಾದ್ ನೇತೃತ್ವದಲ್ಲಿ ಚಳವಳಿಗೆ ನಾಂದಿ ಹಾಡಲಾಯಿತು.

1912: ಪೋಪ್ ಒಂದನೇ ಜಾನ್ ಪಾಲ್ (1912-78) ಜನ್ಮದಿನ. 1978ರಲ್ಲಿ ಪೋಪ್ ಪದವಿಗೆ ಏರಿದ ಇವರು ಆ ಹುದ್ದೆಯಲ್ಲಿ ಇದ್ದುದು 34 ದಿನ ಮಾತ್ರ. ಆಧುನಿಕ ಕಾಲದಲ್ಲಿ ಈ ಹುದ್ದೆಯಲ್ಲಿ ಅತ್ಯಂತ ಕಡಿಮೆ ದಿನ ಇದ್ದವರು ಇವರು.

1906: ಸ್ವಾಮಿ ರಾಮತೀರ್ಥ ಜನನ.

1817: ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯದ ಸ್ಥಾಪಕ ಸರ್ ಸೈಯದ್ ಅಹಮದ್ ಖಾನ್ (1817-98) ಜನ್ಮದಿನ. ಮುಸ್ಲಿಂ ಶಿಕ್ಷಣತಜ್ಞ, ನ್ಯಾಯವಾದಿ ಹಾಗೂ ಗ್ರಂಥಕರ್ತರಾಗಿದ್ದ ಇವರು 19ನೇ ಶತಮಾನದಲ್ಲಿ ಭಾರತೀಯ ಮುಸ್ಲಿಮರ ಪುನರುತ್ಥಾನಕ್ಕೆ ಮಹತ್ವದ ಕಾಣಿಕೆ ನೀಡಿದರು.

1777: ಸ್ವಾತಂತ್ರ್ಯ ಸಮರ ಕಾಲದ ಸರಟೋಗಾ  ಕದನದಲ್ಲಿ ಅಮೆರಿಕನ್ ವಸಾಹತುಗಾರರಿಗೆ (ಕೊಲೊನಿಸ್ಟ್) ಜನರಲ್ ಹೊರಾಷಿಯೋ ಗೇಟ್ಸ್  ನಾಯಕತ್ವದಲ್ಲಿ ವಿಜಯ ಲಭಿಸಿತು. ಜಾನ್ ಬರ್ಗೊಯೆನ್ ನೇತೃತ್ವದ ಬ್ರಿಟಿಷ್ ಪಡೆಗಳು ಪರಾಭವ ಅನುಭವಿಸಿದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement