ಸಮುದ್ರ ಮಥನ 7: ರಾಮನ ಸಂಯಮ
ರಾಮ ಎಷ್ಟು ಸಂಯಮಿ! ಅನಿಸದಿರದು. ಅದು ಹೌದು ಕೂಡ. ಯಾವ ರೀತಿಯಲ್ಲಿ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಬೇಕಷ್ಟೆ. ಆ ಸಂಯಮ ನಮ್ಮ ಸ್ಪರ್ಧಾತ್ಮಕ ಯುಗದಲ್ಲಿ ಇರುವಂತಹದ್ದಲ್ಲ. ಒಳಗಿನ ಯಾವುದೇ ಒತ್ತಡವನ್ನು ಸಹಿಸಿ, ಸಂಯಮವನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಅವನಿಗೆ ಇರಲಿಲ್ಲ.
ರಾಮಾಯಣದ ಬಾಲಕಾಂಡದಲ್ಲೊಂದು ಪ್ರಕರಣ. ವಿಶ್ವಾಮಿತ್ರರು ಅನೇಕ ದಿವ್ಯಾಸ್ತ್ರಗಳನ್ನು ರಾಮನಿಗೆ ಕೊಡುತ್ತಾರೆ. ಅವು ಅಂತಿಂಥವುಗಳಲ್ಲ. ಅವುಗಳ ಪ್ರಯೋಗದಿಂದ ಶತ್ರುಗಳು ನಿದ್ದೆಮಾಡುವಂತೆ, ಅಳುವಂತೆ, ಉರುಳಾಡುವಂತೆ, ಎಚ್ಚರತಪ್ಪುವಂತೆ ಮಾಡಬಹುದಾಗಿದ್ದ ಚಿತ್ರ-ವಿಚಿತ್ರ ಸಾಮರ್ಥ್ಯವುಳ್ಳ ದಿವ್ಯಾಸ್ತ್ರಗಳು. ಕೊಟ್ಟ ಅನಂತರದಲ್ಲಿ ಅವು ಹೇಳಿದವಂತೆ (ಅಸ್ತ್ರಗಳು ದೇವತಾ ಶಕ್ತಿಗಳಾದುದರಿಂದ ಹೀಗೆ). 'ನಾವು ನಿನ್ನ ಕಿಂಕರರು, ನೀನು ಅಪ್ಪಣೆಕೊಟ್ಟಿದ್ದನ್ನು ಮಾಡುತ್ತೇವೆ'.ಆಗ ರಾಮ ಒಂದೇ ಮಾತಿನಲ್ಲಿ 'ಮಾನಸಾಮೇ ಭವಿಷಧ್ವಮ್' - ನೀವು ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಇದ್ದುಕೊಳ್ಳಿ ಎಂದು ಕಡ್ಡಿಮುರಿದಂತೆ ಹೇಳಿಯೇಬಿಟ್ಟ. 'ಬೇಕೆಂದಾಗ ಕರೆಯುತ್ತೇನೆ. ಆಗ ಬಂದರೆ ಸಾಕು' ಎಂದು ಮುಂದುವರೆಸಿದ.
ಹಾಗೇ ಇನ್ನೊಮ್ಮೆ. ಲಂಕೆಯಲ್ಲಿ ಕಾಳಗ ಬಿರುಸಾಗಿತ್ತು. ರಾವಣನ ಮಗ ಇಂದ್ರಜಿತು ರಣರಂಗ ಪ್ರವೇಶಿಸಿದ. ಶಸ್ತ್ರಾಸ್ತ್ರಗಳನ್ನು ಮಳೆಯಂತೆ ಸುರಿಸಿ, ಕಪಿಗಳ ರಕ್ತದ ಕೋಡಿಯನ್ನು ಹರಿಸಿದ. ಅಷ್ಟು ಸಾಲದೆಂಬಂತೆ ಮಾಯಾ ಯುದ್ಧವನ್ನು ಪ್ರಾರಂಭಿಸಿ ರಾಮ-ಲಕ್ಷ್ಮಣರ ಮೇಲೂ ಬಾಣಗಳ ಮಳೆಗರೆಯುತ್ತಾನೆ. ಲಕ್ಷ್ಮಣನಿಗೆ ತಡೆದುಕೊಳ್ಳಲು ಆಗುವುದಿಲ್ಲ.
ಅಣ್ಣ ರಾಮನಲ್ಲಿ 'ಅಣ್ಣಾ, ಅಷ್ಟೂ ರಾಕ್ಷಸರನ್ನು ಗುರಿಯಾಗಿಸಿ ಅಸ್ತ್ರವೊಂದನ್ನು ಪ್ರಯೋಗಿಸು' ಎಂದ.
ಒಂದು ಮಾತು. ಅಸ್ತ್ರವೆಂದರೆ ಸಾಮಾನ್ಯ ಬಾಣ, ಬಿರುಸಿನಂತಲ್ಲ. ಅದು ದೇವತಾ ಶಕ್ತಿ ಸಂಭೂತವಾದದ್ದು. ಹಾಗಿರುವುದರಿಂದ ಅಸ್ತ್ರವನ್ನು ಹೀಗಾಗಬೇಕು ಎಂದು ಸಂಕಲ್ಪಿಸಿ ಪ್ರಯೋಗಿಸಿದರೆ ಅದು ಹಾಗೆಯೇ ಆಗಿ ತೀರುತ್ತದೆ. 'ಎಲ್ಲ ರಾಕ್ಷಸರೂ ಕೆಟ್ಟವರಲ್ಲ. ಒಳ್ಳೆಯವರೂ ಬಹಳ ಮಂದಿ ಇದ್ದಾರೆ' ಎಂದ ರಾಮ ಹಾಗೇ ಸುಮ್ಮನೆ ಉಳಿದ.
ಈ ಎರಡೂ ಪ್ರಕರಣಗಳನ್ನು ಗಮನಿಸಬೇಕು. ವಿಶ್ವಾಮಿತ್ರರು ದಿವ್ಯಾಸ್ತ್ರಗಳನ್ನು ರಾಮನಿಗೆ ಕೊಟ್ಟಾಗ ಅವನು ಮೇರೆಮೀರಿ ಸಂಭ್ರಮಿಸಲಿಲ್ಲ. ಕೇವಲ ಕುತೂಹಲವನ್ನು ತಣಿಸಿಕೊಳ್ಳಲು ಆ ಕ್ಷಣದಲ್ಲಿಯೇ ಪ್ರಯೋಗಮಾಡಿ ನೋಡಲು ಹೊರಡಲಿಲ್ಲ. ಅವನಿಗೆ ಅವುಗಳನ್ನು ಕೊಟ್ಟ ವಿಶ್ವಾಮಿತ್ರರು ಎಂತಹ ಮಹಾಮಹಿಮರು ಮತ್ತು ಅವುಗಳ ಬಳಕೆ ಎಲ್ಲಿ, ಹೇಗೆ ಎಂಬ ವಿವೇಕ ಇತ್ತಾದ್ದರಿಂದ ಆ ಅಸ್ತ್ರಗಳಿಗೆ ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿರಲು ಹೇಳಿದ. ಇಂದ್ರಜಿತುವಿನೊಡನೆ ಕಾದಾಡುವಾಗಲೂ ಆ ವಿವೇಕವನ್ನೇ ಮೆರೆದ.
ರಾಮ ಎಷ್ಟು ಸಂಯಮಿ! ಅನಿಸದಿರದು. ಅದು ಹೌದು ಕೂಡ. ಯಾವ ರೀತಿಯಲ್ಲಿ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಬೇಕಷ್ಟೆ.
ಆ ಸಂಯಮ ನಮ್ಮ ಸ್ಪರ್ಧಾತ್ಮಕ ಯುಗದಲ್ಲಿ ಇರುವಂತಹದ್ದಲ್ಲ. 'ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಇಂತಿಷ್ಟು ಮಂದಿ ಪೋಲೀಸರನ್ನೂ, ಇಂತಿಷ್ಟು ಮಂದಿ ಅರೆ ಸೇನಾಪಡೆಯವರನ್ನೂ ನಿಯೋಜಿಸಲಾಗಿದೆ' ಎಂಬ ಮಾತು ಬಹಳ ಚಾಲ್ತಿಯಲ್ಲಿದೆ. ಒಳಗೆ ಕೊತ ಕೊತ ಕುದಿಯುತ್ತಿರುವ ಬೆಂಕಿಗೆ ಮೇಲಿಂದ ಸಂಯಮದ ಲೇಬಲ್ ಹಚ್ಚಿದಂತಲ್ಲದೇ ಮತ್ತೇನೂ ಅಲ್ಲ.
ರಾಮನ ಸಂಯಮ ಹಾಗಿರಲಿಲ್ಲ. ಒಳಗಿನ ಯಾವುದೇ ಒತ್ತಡವನ್ನು ಸಹಿಸಿ, ಸಂಯಮವನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಅವನಿಗೆ ಇರಲಿಲ್ಲ. ಅದು ಯುಕ್ತಾಯುಕ್ತ ವಿವೇಚನೆಯೊಂದಿಗೆ ಒಳಗಿನಿಂದ ಒತ್ತರಿಸಿಕೊಂಡು ಬಂದದ್ದಾಗಿತ್ತು.
ಇವೇ ಪ್ರಕರಣ ಎಂದಲ್ಲ. ರಾಮಾಯಣದ ಯಾವ ಪ್ರಕರಣವನ್ನು ತೆಗೆದುಕೊಂಡರೂ ರಾಮ ನಿಲ್ಲುವುದು ಹೀಗೇ. ಅದು ಹೊರಗಿನ ಲೇಪನವಾಗಿದ್ದರೆ ಎಲ್ಲೋ ಒಂದುಕಡೆ ಕಳಚಿ ಬೀಳುತ್ತಿತ್ತು. ಹಾಗಾಗದಿರುವ ರಾಮನ ಸಂಯಮದ ಆಳವನ್ನು ಊಹಿಸಿ. ಧರಿಸಿ. ಒಳಗಿನಿಂದ ಪ್ರಾರಂಭಿಸಿ.
No comments:
Post a Comment