My Blog List

Thursday, October 23, 2008

ಇಂದಿನ ಇತಿಹಾಸ History Today ಅಕ್ಟೋಬರ್ 23

ಇಂದಿನ ಇತಿಹಾಸ

ಅಕ್ಟೋಬರ್ 23
ವಾಷಿಂಗ್ಟನ್ ಯುನಿವರ್ಸಿಟಿ ಮೆಡಿಕಲ್ ಸ್ಕೂಲಿನ ದಂಪತಿ ಕಾರ್ಲ್ ಮತ್ತು ಗೆರ್ಟಿ ಗೋರಿ ಜಂಟಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. ವೈದ್ಯಕೀಯ ಕ್ಷೇತ್ರ ಸಾಧನೆಗೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ದಂಪತಿ ಜೋಡಿ ಇದು.

2007: ಡೊಳ್ಳು ಕುಣಿತ, ಕೋಲಾಟ, ವೈವಿಧ್ಯಮಯ ರೂಪಕ ವಾಹನಗಳನ್ನು ಒಳಗೊಂಡ ಆಕರ್ಷಕ ಮೆರವಣಿಗೆಯೊಂದಿಗೆ ಐತಿಹಾಸಿಕ ಕಿತ್ತೂರಿನಲ್ಲಿ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಯಿತು. ಬೈಲಹೊಂಗಲದ ವೀರರಾಣಿ ಚನ್ನಮ್ಮನ ಸಮಾಧಿಯಿಂದ ಹೊರಟು ಕಿತ್ತೂರು ತಲುಪಿದ ವಿಜಯ ಜ್ಯೋತಿಯನ್ನು ಜನಸಾಗರದ ಮಧ್ಯೆ ಸಂಸದ ಸುರೇಶ ಅಂಗಡಿ ಬರಮಾಡಿಕೊಂಡರು. ಬೆಳಗ್ಗೆ ಚನ್ನಮ್ಮನ ತವರೂರಾದ ಕಾಕತಿ ಗ್ರಾಮದಲ್ಲಿ ಸಹ ಚನ್ನಮ್ಮ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

2007: ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯದ ಮುಕ್ತ ಪ್ರವೇಶಕ್ಕಾಗಿ ರಾಜಸ್ಥಾನ ಸರ್ಕಾರವು ಜೈಪುರ ರಾಷ್ಟ್ರೀಯ ವಿಶ್ವವಿದ್ಯಾಲಯ, ಅಮಿಥಿ ವಿಶ್ವವಿದ್ಯಾಲಯ ಜೈಪುರ, ಸಿಂಘಾನಿಯಾ ವಿಶ್ವ ವಿದ್ಯಾಲಯ ಝುಂಝುನು ಮತ್ತು ಸರ್ ಪದ್ಮಪತ್ ವಿಶ್ವವಿದ್ಯಾಲಯ ಉದಯಪುರ- ಈ ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡಿತು.  

2007: ಸರ್ಕಾರಿ ನೌಕರರು ನಿವೃತ್ತಿ ವೇತನ ಪಡೆಯಲು ಇರುವ ಕನಿಷ್ಠ ಅರ್ಹತಾ ಸೇವೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ಲೆಕ್ಕ ಹಾಕಲು ಜಾರಿ ಇರುವ ನಿಯಮವನ್ನು ಪರಿಷ್ಕರಿಸಿ ಸರ್ಕಾರವು ಆದೇಶ ಹೊರಡಿಸಿತು. ಅದರಂತೆ ನಿವೃತ್ತಿ ಸೌಲಭ್ಯ ಪಡೆಯಲು ಅಗತ್ಯವಿರುವ ಕನಿಷ್ಠ ಅರ್ಹತಾ ಸೇವೆಯ ನಿಬಂಧನೆಯನ್ನು 15 ವರ್ಷಗಳಿಂದ 10 ವರ್ಷಗಳಿಗೆ ಇಳಿಸಲಾಯಿತು. ಈ ಮೊದಲು ಜಾರಿಯಲ್ಲಿದ್ದ ಇದೇ ಪದ್ಧತಿಯನ್ನು ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರ ಬದಲಾಯಿಸಿತ್ತು. ಇದನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿತ್ತು. 

2007: ಭಾರತ-ಭೂತಾನ್ ಗಡಿ ಬಳಿಯ ತಮಲ್ಪುರ ಸೇನಾ ಶಿಬಿರದಲ್ಲಿ ಒಟ್ಟು 33 ಉಗ್ರಗಾಮಿಗಳು ಸೇನಾ ಮತ್ತು ಪೊಲೀಸ್ ಆಡಳಿತದ ಮುಂದೆ ಶರಣಾಗತರಾದರು. ಶರಣಾಗತರಲ್ಲಿ 31 ಉಲ್ಫಾ ಮತ್ತು ಇಬ್ಬರು ಕರ್ಬಿ ಉಗ್ರಗಾಮಿಗಳು. ಮೂರು ವರ್ಷಗಳಲ್ಲಿ ನಡೆದ ಅತಿ ಹೆಚ್ಚಿನ ಉಗ್ರರ ಶರಣಾಗತಿ ಇದು. ಕೇಂದ್ರ ಮತ್ತು ದಕ್ಷಿಣ ಅಸ್ಸಾಮಿನಲ್ಲಿ ಪ್ರಬಲರಾಗಿದ್ದ ಈ ಉಗ್ರರ ಶರಣಾಗತಿಯಿಂದ ಉಲ್ಫಾ ಸಂಘಟನೆಗೆ ದೊಡ್ಡ ಹೊಡೆತ ಬಿದ್ದಿತು.

2007: ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿ, ಶಿಕ್ಷಣ ತಜ್ಞ ಹಾಗೂ ದಕ್ಷ ಆಡಳಿತಗಾರ ಎಂಬ ಕಾರಣಕ್ಕೆ ಬ್ರಿಟನ್ನಿನ ವೊಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯವು ಡಾ. ಅಬ್ದುಲ್ ಕಲಾಂ ಅವರಿಗೆ ವಿಜ್ಞಾನ ಕ್ಷೇತ್ರದ ಗೌರವ ಡಾಕ್ಟರೇಟ್ ನೀಡಿತು. ಈದಿನ ಸಂಜೆ ಲಂಡನ್ನಿನ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಕುಲಪತಿ, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು 76 ವರ್ಷ ವಯಸ್ಸಿನ ಕಲಾಂ ಅವರನ್ನು ಗೌರವ ಡಾಕ್ಟರೇಟ್  ಪದವಿ ನೀಡಿ ಗೌರವಿಸಿದರು. ಇದು ಕಲಾಂ ಅವರಿಗೆ ದೊರಕಿದ 33ನೇ ಗೌರವ ಡಾಕ್ಟರೇಟ್  ಪದವಿ. ಇದುವರೆಗೆ ಭಾರತ ಮತ್ತು ಇತರ ಅನೇಕ ದೇಶಗಳ ವಿಶ್ವವಿದ್ಯಾಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್  ಪದವಿ ನೀಡಿ ಅವರ ಜ್ಞಾನ ಮತ್ತು ಸೇವೆಯನ್ನು ಗೌರವಿಸಿವೆ.

2007: ಬಾಂಡ್ ಕಾದಂಬರಿಯ ಲೇಖಕ ಇಯಾನ್ ಫ್ಲೆಮಿಂಗ್ ಅವರ ನೂರನೇ ಜನ್ಮ ದಿನಾಚರಣೆ  (1908-2008) ಅಂಗವಾಗಿ ಹೊಸ ಅಂಚೆ ಚೀಟಿಗಳನ್ನು ಈದಿನ ಬಿಡುಗಡೆ ಮಾಡಲಾಯಿತು. ಬ್ರಿಟನ್ನಿನ ಪತ್ರಗಳ ಮೇಲೆ ಇನ್ನು ಮುಂದೆ ಬಾಂಡ್ ಕಾದಂಬರಿಯ ಪ್ರಮುಖ ಕಥೆಗಳ ನಾಯಕನ ಚಿತ್ರ ರಾರಾಜಿಸುವುದು.

2007: ಬೆಂಗಳೂರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿ ಚಿಟ್ಟೆ ಉದ್ಯಾನ ನಿರ್ಮಾಣಕ್ಕೆ ಜಮೀನು ಸ್ವಾಧೀನ ಪಡಿಸಿಕೊಂಡ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಜಿಗಣಿಯ ಬೈರಪ್ಪನಹಳ್ಳಿ ಗ್ರಾಮದ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ವಜಾ ಮಾಡಿದರು.

2006: ಹಿರಿಯ ಸಾಹಿತಿ ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಅವರ ಪತ್ನಿ ಕುಂಞ್ಞೆಕ್ಕ (80) ಅವರು ಬದಿಯಡ್ಕ ಸಮೀಪದ ಪೆರಡಾಲದ ತಮ್ಮ ಸ್ವಗೃಹ `ಕವಿತಾ ಕುಟೀರ'ದಲ್ಲಿ ನಿಧನರಾದರು. ಕುಂಞ್ಞೆಕ್ಕ ಅವರು ಪತಿ ಕಯ್ಯಾರ ಕಿಂಞ್ಞಣ್ಣ ರೈ, ಆರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರು. ಕಯ್ಯಾರರಿಗೆ ಈ ದಿನವೇ ಕರ್ನಾಟಕ ಸರ್ಕಾರದ `ಏಕೀಕರಣ ಪ್ರಶಸ್ತಿ' ಘೋಷಣೆಯಾಗಿದ್ದು, ಈ ಸಂತೋಷದ ದಿನವೇ ಅವರಿಗೆ ಪತ್ನಿ ವಿಯೋಗದ ದುಃಖ ಎರಗಿ ಬಂದ್ದದು ವಿಪರ್ಯಾಸವೆನಿಸಿತು.

2006: ಕಯ್ಯಾರ ಕಿಂಞಣ್ಣ ರೈ, ಪಾಟೀಲ ಪುಟ್ಟಪ್ಪ ಸೇರಿದಂತೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ 36 ಮಹನೀಯರು ಮತ್ತು ನಾಲ್ಕು ಸಂಘ ಸಂಸ್ಥೆಗಳಿಗೆ `ಏಕೀಕರಣ ಪ್ರಶಸ್ತಿ' ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 48 ಗಣ್ಯರು ಹಾಗೂ ಎರಡು ಸಂಸ್ಥೆಗಳಿಗೆ 2006ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನಿಸಿತು.

1996: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಶಂಕರ ಸಿಂಗ್ ವಘೇಲ ಅಧಿಕಾರ ಸ್ವೀಕಾರ.

1992: ಕರ್ನಾಟಕದಲ್ಲಿ ಬಂಗಾರಪ್ಪ ನೇತೃತ್ವದ ಸರ್ಕಾರದ ಬಂಡಾಯ ಸಚಿವರ ರಾಜೀನಾಮೆ.

1980: ಅನಾರೋಗ್ಯ ಕಾರಣ ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ರಾಜೀನಾಮೆ.

1947: ವಾಷಿಂಗ್ಟನ್ ಯುನಿವರ್ಸಿಟಿ ಮೆಡಿಕಲ್ ಸ್ಕೂಲಿನ ದಂಪತಿ ಕಾರ್ಲ್ ಮತ್ತು ಗೆರ್ಟಿ ಗೋರಿ ಜಂಟಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. ಈ ಪ್ರಶಸ್ತಿಯನ್ನು ಅವರು ಅರ್ಜೆಂಟೀನಾದ ಬರ್ನಾರ್ಡೊ ಹೌಸ್ಸೆ ಅವರ ಜೊತೆಗೆ ಹಂಚಿಕೊಂಡರು. ಸಕ್ಕರೆಯನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಮಾಡಿದ ಸಂಶೋಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ವೈದ್ಯಕೀಯ ಕ್ಷೇತ್ರ ಸಾಧನೆಗೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ದಂಪತಿ ಜೋಡಿ ಇದು. ಭೌತ ವಿಜ್ಞಾನದಲ್ಲಿ ಕ್ಯೂರಿ ದಂಪತಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ದಂಪತಿ ಜೋಡಿ.

1934: ಅಖಿಲ ಭಾರತ ಕಾಂಗ್ರೆಸ್ ನಾಯಕತ್ವಕ್ಕೆ ಗಾಂಧೀಜಿ ರಾಜೀನಾಮೆ.

1920: ಜಪಾನಿ ಸಂಜಾತೆ ಸಂಶೋಧಕಿ ಟೆಟ್ಸುಯಾ `ಟೆಡ್' ಫ್ಯೂಜಿತಾ (1920-98) ಜನ್ಮದಿನ. ಈಕೆ ಸುಂಟರಗಾಳಿಗಳ ತೀವ್ರತೆಯನ್ನು ಅವುಗಳು ಉಂಟುಮಾಡುವ ಹಾನಿಯ ಆಧಾರದಲ್ಲಿ ಅಳೆಯುವ `ಫ್ಯೂಜಿತಾ ಸ್ಕೇಲ್' ಸಂಶೋಧಿಸಿದವರು. 

1900: ಖ್ಯಾತ ಕ್ರಿಕೆಟ್ ಆಟಗಾರ ಡಗ್ಲಾಸ್ ಜಾರ್ಡಿನ್ ಅವರು ಬಾಂಬೆಯ (ಈಗಿನ ಮುಂಬೈ) ಮಲಬಾರ್ ಹಿಲ್ನಲ್ಲಿ ನಿಧನರಾದರು.

1906: ಗೆರ್ ಟ್ರೂಡ್ ಕರೋಲಿನ್ ಎಡೆರ್ಲೆ ಜನ್ಮದಿನ. ಈಕೆ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ.  1920ರ ದಶಕದಲ್ಲಿ ಅಮೆರಿಕದ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎಂದು ಖ್ಯಾತಿ ಪಡೆದಿದ್ದವರು.

1883: ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ (1883-1959) ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement