ಗ್ರಾಹಕರ ಸುಖ-ದುಃಖ

My Blog List

Monday, October 6, 2008

ಇಂದಿನ ಇತಿಹಾಸ History Today ಅಕ್ಟೋಬರ್ 06

ಇಂದಿನ ಇತಿಹಾಸ

ಅಕ್ಟೋಬರ್ 6

ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸಿಂಗಪುರದ ಪೀಟರ್ ಗಿಲ್ ಕ್ರಿಸ್ಟ್ ಅವರು ನ್ಯೂಜಿಲೆಂಡ್ ಓಪನ್ ಟೂರ್ನಿಯಲ್ಲಿ ಗರಿಷ್ಠ ಪಾಯಿಂಟ್ ಸಂಗ್ರಹಿಸುವ ಮೂಲಕ ಮುರಿದರು. 1992ರಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಗೀತ್ ಸೇಥಿ 1276 ಪಾಯಿಂಟುಗಳನ್ನು ಗಳಿಸಿದ್ದು ದಾಖಲೆಯಾಗಿತ್ತು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಶಿಫಾರಸಿನಂತೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಬಿಜೆಪಿಯ 17 ಸಚಿವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು. ಪಕ್ಷದ ಮುಖಂಡರಿಗೆ ರಾಜೀನಾಮೆ ಸಲ್ಲಿಸಿದ್ದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಅವರನ್ನೂ ಮುಖ್ಯಮಂತ್ರಿ ಶಿಫಾರಸಿನಂತೆ ಸಂಪುಟದಿಂದ ಕೈ ಬಿಡಲಾಯಿತು. 2006 ಫೆಬ್ರುವರಿ 3ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಇಬ್ಬರೂ ಪರಸ್ಪರ ತಬ್ಬಿಕೊಂಡು ಜನತೆಯತ್ತ ಕೈಬೀಸಿ ಸಾರಿದ್ದ ಮೈತ್ರಿಯ ಸಂದೇಶ 20 ತಿಂಗಳುಗಳಲ್ಲೇ ಖತಂಗೊಂಡಿತು.

2007: ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸಿಂಗಪುರದ ಪೀಟರ್ ಗಿಲ್ ಕ್ರಿಸ್ಟ್ ಅವರು ನ್ಯೂಜಿಲೆಂಡ್ ಓಪನ್ ಟೂರ್ನಿಯಲ್ಲಿ ಗರಿಷ್ಠ ಪಾಯಿಂಟ್ ಸಂಗ್ರಹಿಸುವ ಮೂಲಕ ಮುರಿದರು. 1992ರಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಗೀತ್ ಸೇಥಿ 1276 ಪಾಯಿಂಟುಗಳನ್ನು ಗಳಿಸಿದ್ದು ದಾಖಲೆಯಾಗಿತ್ತು. ಹ್ಯಾಮಿಲ್ಟನ್ ಕಾಸ್ಮೋಪಾಲಿಟನ್ ಕ್ಲಬ್ಬಿನಲ್ಲಿ ಈದಿನ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡಿನ ರೋಸ್ ಎಲಿಕ್ಸಿ ವಿರುದ್ಧ ಆಡಿದ ಗಿಲ್ ಕ್ರಿಸ್ಟ್ ಒಟ್ಟು 1346 ಪಾಯಿಂಟುಗಳನ್ನು ಸಂಗ್ರಹಿಸಿದರು.

2007:  ಉದ್ದೀಪನ ಮದ್ದು ಸೇವಿಸಿದ್ದು ನಿಜವಾಗಿದ್ದರೂ ಅದನ್ನು ದೀರ್ಘ ಕಾಲದವರೆಗೆ ಮುಚ್ಚಿಟ್ಟಿದ್ದ ಅಮೆರಿಕದ ಖ್ಯಾತ ಅಥ್ಲೆಟ್ ಮೇರಿಯನ್ ಜೋನ್ಸ್ ನ್ಯೂಯಾರ್ಕಿನಲ್ಲಿ ಈದಿನ ಕ್ಷಮೆ ಕೋರಿದರು. ನ್ಯಾಯಾಲಯದಿಂದ ಹೊರಬಂದ ಬಳಿಕ ಅವರು 'ನಿಮ್ಮ ನಂಬಿಕೆಗೆ ದ್ರೋಹಬಗೆದೆ' ಎಂದು ಹೇಳಿದರು. 

2007: ಪಾಕಿಸ್ಥಾನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಮುಷರಫ್ ಅವರು ಚಲಾಯಿಸಲಾದ 257 ಮತಗಳ ಪೈಕಿ 252 ಮತಗಳನ್ನು ಪಡೆದು ಭಾರಿ ಗೆಲುವು ಸಾಧಿಸಿದರು. ಆದರೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ಮುಷರಫ್ ಸ್ಪರ್ಧೆಯ ಸಂವಿಧಾನಾತ್ಮಕ ಅಂಶಗಳ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿರುವ ಕಾರಣ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿಲ್ಲ. ಎಂಟು ವರ್ಷಗಳ ಹಿಂದೆ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಷರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಗದ್ದುಗೆ ಏರಿದ ಮುಷರಫ್ ಅವರನ್ನು ಹತ್ಯೆ ಮಾಡಲು ಮೂರು ಪ್ರಯತ್ನಗಳು ನಡೆದಿದ್ದವು. 18ನೇ ವರ್ಷ ವಯಸ್ಸಿನಲ್ಲಿ ಪಾಕಿಸ್ಥಾನದ ಸೇನೆಗೆ ಸೇರಿದ ಮುಷರಫ್, ವಿವಿಧ ಸೇನಾ ಅಕಾಡೆಮಿಗಳಲ್ಲಿ ತರಬೇತಿ ಪಡೆದು 1966ರಲ್ಲಿ ಕಮಾಂಡೋ ಆದರು. ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಷರೀಫ್ ಅವರು ಮುಷರಫ್ ಅವರನ್ನು ಸೇನಾ ದಂಡನಾಯಕನನ್ನಾಗಿ 1998ರಲ್ಲಿ ನೇಮಕ ಮಾಡಿದರು. ನಂತರ 1999ರ ಅಕ್ಟೋಬರ್ 12ರಂದು ಐಎಸ್ಐ ಮುಖ್ಯಸ್ಥ ಕ್ವಾಜಾ ಜಿಯಾವ್ದುದೀನ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲು ಷರೀಫ್ ಪ್ರಯತ್ನ ಮಾಡಿದ್ದೇ ಅವರಿಗೆ ಮುಳುವಾಯಿತು. ಶ್ರೀಲಂಕಾದಿಂದ ಕರಾಚಿಗೆ ವಿಮಾನದಲ್ಲಿ ಬರುತ್ತಿದ್ದ ಮುಷರಫ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಬಾರದು ಎಂದು ಷರೀಫ್ ಆದೇಶಿಸಿದ್ದರು. ಆದರೆ ಮುಷರಫ್ ಅವರಿಗೆ ಇತರ ಸೇನಾ ಅಧಿಕಾರಿಗಳು ಬೆಂಬಲ ನೀಡಿದ್ದರಿಂದ  ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಂತರ ನಡೆದ ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ನವಾಜ್ ಷರೀಫ್ ಅಧಿಕಾರ ಕಳೆದುಕೊಂಡು ಜೈಲಿಗೆ ಹೋದರು. ಅಲ್ಲಿಂದ ಮುಷರಫ್ ಅವರ ಅಧಿಕಾರ ಚಲಾವಣೆಗೆ ಅಡ್ಡಿ ಇಲ್ಲದೆ ಎಂಟು ವರ್ಷಗಳ ಕಾಲ ದೇಶದ ಅಧ್ಯಕ್ಷರಾಗಿ ಹಾಗೂ ಸೇನಾ ಮುಖ್ಯಸ್ಥರಾಗಿ ಆಡಳಿತ ನಡೆಸುತ್ತ ಬಂದರು. ಈಗ ಮತ್ತೆ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಲು ಚುನಾವಣೆ ಎದುರಿಸಿದರು.

2006: ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮನುಶರ್ಮಾನ ತಂದೆ ಹರಿಯಾಣದ ವಿದ್ಯುತ್ ಸಚಿವ ವಿನೋದ ಶರ್ಮಾ ರಾಜೀನಾಮೆ ನೀಡಿದರು.

2006: ಫಿಲಿಪ್ಪೀನ್ಸಿನ ಮರ್ಲಿನ್ ಎಸ್ಪೆರಾಟ್ ಎಂಬ ಪತ್ರಕರ್ತೆಯನ್ನು ಹತ್ಯೆಗೈದ ಅಪರಾಧಕ್ಕಾಗಿ ಮನಿಲಾ  ನ್ಯಾಯಾಲಯ 3 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮನಿಲಾದ ಸುಲ್ತಾನ್ ಕುದರತ್ ಪ್ರಾಂತದ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಈ ಮೂವರು ಬಾಡಿಗೆ ಹಂತಕರು ಆಕೆಯ ಕೋಣೆಯನ್ನು ಸುಟ್ಟು ಹಾಕಿ ಮಕ್ಕಳ ಎದುರೇ ಆಕೆಯನ್ನು ಗುಂಡಿಟ್ಟು ಕೊಂದಿದ್ದರು.

2006: ಪೂರ್ವ ಜಪಾನಿನ ಕಮಿಸು ಕಡಲತೀರದಲ್ಲಿ  ಕಬ್ಬಿಣದ ಅದಿರು ಸಾಗಿಸುತ್ತಿದ್ದ  ಹಡಗು ಬೆಂಕಿ ತಗುಲಿ ಸಮುದ್ರದಲ್ಲಿ ಮುಳಗಿದ ಕಾರಣ ಒಬ್ಬ ಭಾರತೀಯ ನಾವಿಕ ಮೃತಪಟ್ಟು ಒಂಬತ್ತು ಮಂದಿ ಕಾಣೆಯಾದರು. ಹಡಗಿನಲ್ಲಿ ಇದ್ದ 25 ಮಂದಿ ಸಿಬ್ಬಂದಿ ಭಾರತೀಯರು. ಹಡಗಿಗೆ ಸಂಜೆ ವೇಳೆಗೆ ಬೆಂಕಿ ತಗುಲಿ ಅದರ ಎಂಜಿನ್ನುಗಳು ವಿಫಲಗೊಂಡವು. ಹಡಗು ಭಾರಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಎರಡು ಹೋಳಾಯಿತು. 

1981: ಅರಬ್ ಇಸ್ರೇಲಿ ಯುದ್ಧದ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೈರೋದಲ್ಲಿ ಸೇನಾ ಪರೇಡ್ ನಡೆಯುತ್ತಿದ್ದಾಗ ಮುಸ್ಲಿಂ ಉಗ್ರಗಾಮಿಗಳು ಈಜಿಪ್ಟ್ ಅಧ್ಯಕ್ಷ ಸಾದತ್ ಅವರನ್ನು ಹತ್ಯೆಗೈದರು. 1973ರಲ್ಲಿ ಇದೇ ದಿನ ಯಹೂದ್ಯರ ಧಾರ್ಮಿಕ ರಜಾದಿನವಾದ `ಅಟೋನ್ ಮೆಂಟ್ ದಿನ'ದಂದು (ಯೊಮ್ ಕಿಪ್ಪರ್) ಈಜಿಪ್ಟ್ ಹಾಗೂ ಸಿರಿಯಾ ಮೇಲೆ ಇಸ್ರೇಲ್ ಹಠಾತ್ ದಾಳಿ ನಡೆಸಿತ್ತು.

1974: ಮಾಜಿ ರಕ್ಷಣಾ ಸಚಿವ ವೆಂಗಾಲಿಲ್ ಕೃಷ್ಣನನ್ ಕೃಷ್ಣಮೆನನ್ ನಿಧನ.

1963: ಸ್ವಾತಂತ್ರ್ಯ ಹೋರಾಟಗಾರ ಬಾಬಾ ಖರಕ್ಸಿಂಗ್ ನಿಧನ. 

1954: ಸಾಹಿತಿ ಬಿ.ಜೆ. ಸುವರ್ಣ ಜನನ.

1946: ಬಾಲಿವುಡ್ ತಾರೆ ವಿನೋದ ಖನ್ನಾ ಜನನ.

1946: ಭಾರತೀಯ ಚಿತ್ರ ನಟ, ರಾಜಕಾರಣಿ ವಿನೋದ್ ಖನ್ನಾ ಜನ್ಮದಿನ.

1946: ಸಾಹಿತಿ ಲಲಿತಾ ವಿ. ಕೋಪರ್ಡೆ ಜನನ.

1940: ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್ ಅವರು ಶ್ರೀನಿವಾಸರಾವ್- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ತೆಂಕನಿಡಿಯೂರಿನಲ್ಲಿ ಜನಿಸಿದರು.

1927: ವಾರ್ನರ್ ಸಹೋದರರ ಪ್ರಪ್ರಥಮ ಯಶಸ್ವೀ ಟಾಕಿ ಚಲನಚಿತ್ರ `ದಿ ಜಾಝ್ ಸಿಂಗರ್' ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನಗೊಂಡಿತು. ಅಲ್ ಜೋಲ್ಸನ್ ಈ ಚಿತ್ರದಲ್ಲಿ ನಟಿಸಿದ್ದರು. ಟಾಕಿ ಚಿತ್ರಗಳ ನಿರ್ಮಾಣಕ್ಕೆ ಕಾರಣವಾದ `ವಿಟಾಫೋನ್' ಪ್ರಕ್ರಿಯೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೇಟೆಂಟ್ ಪಡೆದುಕೊಳ್ಳಲು ತಮ್ಮ ಸಹೋದರರನ್ನು ಮನವೊಲಿಸಿದ್ದ ಸ್ಯಾಮ್ ವಾರ್ನರ್ ಚಿತ್ರ  ಬಿಡುಗಡೆಗೆ 24 ಗಂಟೆ ಮೊದಲು ಅಸು ನೀಗಿದ.

1893: ಭಾರತೀಯ ಖಭೌತ ತಜ್ಞ ಮೇಘನಾದ ಎನ್. ಸಹಾ (1893-1956) ಜನ್ಮದಿನ.

1892: ಖ್ಯಾತ ಇಂಗ್ಲಿಷ್ ಕವಿ ಅಲ್ ಫ್ರೆಡ್ ಲಾರ್ಡ್ ಟೆನ್ನಿಸನ್ (1809-1892) ತಮ್ಮ 83ನೇ ವಯಸ್ಸಿನಲ್ಲಿ ಸರ್ರೇಯಲ್ಲಿ ನಿಧನರಾದರು.

1887: ಸ್ವಿಸ್ ಶಿಲ್ಪಿ, ನಗರ ಯೋಜಕ ಚಾರ್ಲ್ಸ್ -ಎಡೋರ್ಡ್ ಜೀನ್ನರೆಟ್ (1887-1965) ಜನ್ಮದಿನ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಈ ಸ್ವಿಸ್ ಶಿಲ್ಪಿ ಭಾರತದ ಚಂಡೀಗಢ ನಗರದ ವಿನ್ಯಾಸಕಾರರ ತಂಡದಲ್ಲಿ ಒಬ್ಬ.

1883: ಪ್ಯಾರಿಸ್ಸಿನಿಂದ ಕಾನ್ ಸ್ಟಾಂಟಿನೋಪಲ್ಲಿಗೆ (ಈಗಿನ ಇಸ್ತಾಂಬುಲ್) ತನ್ನ ಉದ್ಘಾಟನಾ ಪಯಣವನ್ನು ಓರಿಯಂಟ್ ಎಕ್ಸ್ಪ್ರೆಸ್ ಪೂರ್ಣಗೊಳಿಸಿತು. ಈ ಪಯಣಕ್ಕೆ ಅದು 78 ಗಂಟೆಗಳನ್ನು ತೆಗೆದುಕೊಂಡಿತು. ಈ ಲಕ್ಸುರಿ ರೈಲು ಪಯಣವು ಜಾರ್ಜ್ ನೆಗೆಲ್ ಮೇಕರನ ಮೆದುಳಿನ ಕೂಸು. ಪ್ಯಾರಿಸ್ನಿಂದ ಬಾಲ್ಟಿಕ್ ವಗಿನ ರಾಷ್ಟ್ರಗಳನ್ನು ಮತ್ತು ಗಡಿಗಳನ್ನು ಹಾದು ಅಂತಿಮವಾಗಿ ಬಲ್ಗೇರಿಯಾದ ವರ್ನಾದಿಂದ ಕಾನ್ ಸ್ಟಾಂಟಿನೋಪಲಿಗೆ ಸಮುದ್ರಯಾನದ ಮೂಲಕವಾಗಿ ತಲುಪುವಂತಹ ಪಯಣದ ಕಲ್ಪನೆ ಆತನದಾಗಿತ್ತು. ಈ ಪಯಣದ ಮಧ್ಯೆ ಸಂಭವಿಸಿದ ಘಟನಾವಳಿಗಳನ್ನೇ ಆಧರಿಸಿ ಈ ರೈಲಿನಲ್ಲಿ ಸತತ ಪ್ರಯಾಣಿಸುತ್ತಿದ್ದ ಅಗಾಥಾ ಕ್ರಿಸ್ತೀ ``ಮರ್ಡರ್ ಆನ್ ಓರಿಯಂಟ್ ಎಕ್ಸ್ಪ್ರೆಸ್'' ಕಾದಂಬರಿ ರಚಿಸಿದರು 

No comments:

Advertisement