Wednesday, October 8, 2008

ಇಂದಿನ ಇತಿಹಾಸ History Today ಅಕ್ಟೋಬರ್ 08

ಇಂದಿನ ಇತಿಹಾಸ

ಅಕ್ಟೋಬರ್ 8

ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ 77ನೇ ಹುಟ್ಟು ಹಬ್ಬಕ್ಕಿಂತ ಮೂರುದಿನಗಳ ಮೊದಲು ಪಟ್ನಾದಲ್ಲಿ ನಿಧನರಾದರು.

2007: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ಸಂಜೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಜನತಾದಳ (ಎಸ್) ಶಾಸಕರು ಮಿತ್ರ ಪಕ್ಷವಾದ ಬಿಜೆಪಿಗೆ ಸರ್ಕಾರ ರಚಿಸಲು ಬೆಂಬಲ ನೀಡಲು ಕೊನೆ ಗಳಿಗೆಯಲ್ಲಿ ತೆಗೆದುಕೊಂಡ ತೀರ್ಮಾನ ಅರ್ಥ ಕಳೆದುಕೊಂಡಿತು. ಆದರೆ ಸರ್ಕಾರ ರಚಿಸುವ ಯಾವ ಪ್ರಸ್ತಾವವನ್ನೂ ಬಿಜೆಪಿ ಮಂಡಿಸಿರಲಿಲ್ಲ. ಮುಖ್ಯಮಂತ್ರಿ ರಾಜೀನಾಮೆಗೆ ಮುನ್ನ ಇಡೀ ದಿನ ರಾಜಧಾನಿಯಲ್ಲಿ ಹಠಾತ್ ರಾಜಕೀಯ ಬೆಳವಣಿಗೆಗಳು ನಡೆದವು. ಬೆಳಿಗ್ಗೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಸರ್ಕಾರವನ್ನು ತತ್ ಕ್ಷಣವೇ ವಜಾ ಮಾಡಬೇಕೆಂದು ಆಗ್ರಹಿಸಿತು. ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ರಾಜಭವನಕ್ಕೆ ಕರೆಸಿದ ರಾಜ್ಯಪಾಲರು  ಸರ್ಕಾರಕ್ಕೆ ಇರುವ ಬಹುಮತ ಸಾಬೀತುಪಡಿಸಲು ಸೂಚಿಸಿ, ಸರ್ಕಾರಕ್ಕೆ ಬೆಂಬಲ ನೀಡಿದ 113 ಶಾಸಕರ ಹೆಸರು ನೀಡಲು ಆದೇಶಿಸಿದರು. ಸಂಜೆ 7.30ರೊಳಗೆ ಈ ಪ್ರಕ್ರಿಯೆ ಪೂರ್ಣವಾಗದಿದ್ದರೆ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಸಂಜೆ 6.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಆರಂಭವಾದ ದಳ (ಎಸ್) ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಪಕ್ಷದ ವರಿಷ್ಠರ ತೀರ್ಮಾನಕ್ಕೆ ವಿರುದ್ಧವಾದ ನಿರ್ಧಾರ ತೆಗೆದುಕೊಂಡರು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನೀಡುವ ಪತ್ರ ಸಿದ್ಧಗೊಂಡು, ಮುಖ್ಯಮಂತ್ರಿ ರಾಜೀನಾಮೆಯೊಂದಿಗೆ ಆ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಅತ್ತ ಜನತಾದಳ ವಿರುದ್ಧ ಧರ್ಮಯಾತ್ರೆ ಆರಂಭಿಸಿದ್ದ ಬಿಜೆಪಿ ಧುರೀಣ ಯಡಿಯೂರಪ್ಪ ಅವರಿಗೆ ಈ ಸಂದೇಶ ರವಾನೆಯಾಗಿ, ಯಡಿಯೂರಪ್ಪ ಪಕ್ಷಾಧ್ಯಕ್ಷ ಡಿ.ವಿ. ಸದಾನಂದಗೌಡರ ಜೊತೆಗೆ ಬೆಂಗಳೂರಿಗೆ ಧಾವಿಸಿದರು. ಆದರೆ ರಾಷ್ಟ್ರೀಯ ನಾಯಕರಿಂದ ಒಪ್ಪಿಗೆ ಲಭಿಸದ ಕಾರಣ ಬಿಜೆಪಿ ಧುರೀಣರು ಸರ್ಕಾರ ರಚನೆಯ ಕೋರಿಕೆ ಮಂಡಿಸಲು ಮುಂದಾಗಲಿಲ್ಲ. ರಾಷ್ಟ್ರಪತಿ ಆಡಳಿತದ ಹೇರಿಕೆಯೇ ಖಚಿತವಾಯಿತು. 2006ರ ಜನವರಿ 18ರಂದು ಬಿಜೆಪಿ ಜತೆ ಕೈ ಜೋಡಿಸಿದ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಬಹುಮತ ಕಳೆದುಕೊಂಡ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ರಾಜ್ಯಪಾಲ ಟಿ.ಎನ್. ಚತುರ್ವೇದಿ ಸೂಚನೆಯಂತೆ ಜನವರಿ 27ರಂದು ವಿಶ್ವಾಸ ಮತ ಗಳಿಸಲು ವಿಫಲರಾಗಿ 28ರಂದು ರಾಜೀನಾಮೆ ಸಲ್ಲಿಸಿದ್ದರು. ಫೆಬ್ರುವರಿ 3ರಂದು ಜನತಾದಳ- ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

2007: ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ್ದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜನತಾದಳ ಎಸ್. ಮುಖಂಡ ಮಹಿಮ ಪಟೇಲ್ ಮೌಲ್ಯ- ಆದರ್ಶಗಳನ್ನು ಪ್ರತಿಪಾದಿಸುವ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದರು.

 2007: ಈಗ ಎಲ್ಲರ ಕೈಯಲ್ಲೂ ಮೊಬೈಲ್. ಅದರೊಂದಿಗೆ ಬಿಡಲಾಗದ ನಂಟು. ಅದನ್ನು ಅಂಗಿಯ ಜೇಬಲ್ಲಿ ಇಟ್ಟುಕೊಂಡರೆ ಹೃದಯ ಸಂಬಂಧಿ ಕಾಯಿಲೆ, ಪ್ಯಾಂಟಿಗೆ ಸಿಕ್ಕಿಸಿಕೊಂಡ ಮೊಬೈಲ್ ಪೌಚಿನಲ್ಲಿ ಇಟ್ಟುಕೊಂಡರೆ ಕಿಡ್ನಿ ಪ್ರಾಬ್ಲೆಮ್ ಹೀಗೆ ಮೊಬೈಲ್ ಬಳಕೆಯ ಅಪಾಯಗಳ ಸುದ್ದಿ ಬರುತ್ತಿರುವಾಗಲೇ ಲಂಡನ್ನಿನಿಂದ ಬಂದ ಸುದ್ದಿ ಇನ್ನಷ್ಟು ಆತಂಕಕಾರಿ. ದಶಕಕ್ಕೂ ಹೆಚ್ಚು ಕಾಲ ಮೊಬೈಲ್ ಬಳಸುವುದರಿಂದ ಮೆದುಳು ಸಂಬಂಧಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸ್ವೀಡನ್ನಿನ ಸಂಶೋಧಕರು ವಿಶ್ವಮಟ್ಟದಲ್ಲಿ ನಡೆಸಿದ 11 ಅಧ್ಯಯನಗಳು ತಿಳಿಸಿವೆ ಎಂಬ ಸುದ್ದಿ ಲಂಡನ್ನಿನಿಂದ ಪ್ರಕಟಗೊಂಡಿತು. ಮೊಬೈಲ್ ಹೊರಹಾಕುವ ವಿಕಿರಣಗಳೇ ಈ ಅವಾಂತರಕ್ಕೆ ಮುಖ್ಯ ಕಾರಣ. ದೀರ್ಘಕಾಲ ಮೊಬೈಲ್ ಬಳಸುವವರಲ್ಲಿ ಮೆದುಳು ಸಂಬಂಧಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಎರಡರಷ್ಟು ಹೆಚ್ಚು ಎನ್ನುತ್ತದೆ ಒರೆಬ್ರೋ ವಿಶ್ವವಿದ್ಯಾಲಯದ ಪ್ರೊಫೆಸರ್ ಲರ್ನೆಟ್ ಹಾರ್ಡೆಲ್ ಅವರ ನೇತ್ವತ್ವದ ಸಂಶೋಧಕರ ತಂಡ. ಮೆದುಳಿನ ಬಳಿ ಕ್ಯಾನ್ಸರ್ ಗಡ್ಡೆ ಬೆಳೆಯಲು ಸಾಕಷ್ಟು ಸಮಯ ಹಿಡಿಯಬಹುದು. ಹಾಗಾಗಿ 10 ವರ್ಷಗಳ ಕಾಲ ದಿನಕ್ಕೆ 1 ಗಂಟೆಗೂ ಹೊತ್ತು ಮೊಬೈಲ್ ಬಳಸಿದರೂ  ಮೆದುಳಿನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿವೆ ಈ ಅಧ್ಯಯನಗಳು. ಮಕ್ಕಳು ಮೊಬೈಲ್ ಬಳಸುವುದಕ್ಕೆ ಕಡಿವಾಣ ಹಾಕದಿದ್ದರೆ ಅವರ ಸುಕೋಮಲ ಕೆನ್ನೆಗಳಿಗೆ ಹಾಗೂ ಇಡೀ ನರ ವ್ಯವಸ್ಥೆಗೆ ಧಕ್ಕೆಯುಂಟಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬುದು ಅಧ್ಯಯನಗಳ ಎಚ್ಚರಿಕೆ.

2007: ವೈದ್ಯಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಆಕರಕೋಶಗಳ ಸಂಶೋಧನೆಗಾಗಿ ಮಾರಿಯೊ ಕೇಪ್ಚಿ, ಮಾರ್ಟಿನ್ ಇವಾನ್ಸ್ ಹಾಗೂ ಆಲಿವರ್ ಸ್ಮಿತ್ಸ್ ತಂಡಕ್ಕೆ 2007ನೇ ಸಾಲಿನ ನೊಬೆಲ್ (ವೈದ್ಯಕೀಯ) ಪ್ರಶಸ್ತಿ ಘೋಷಿಸಲಾಯಿತು. ಆಕರಕೋಶಗಳನ್ನು ಬಳಸಿ ವಂಶವಾಹಿಯಲ್ಲಿ ಬದಲಾವಣೆ ತರುವುದರ ಕುರಿತು ಇಲಿಗಳ ಮೇಲೆ ನಡೆಸಿದ ಸಂಶೋಧನೆಗಾಗಿ ಈ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ದೊರಕಿತು. ಪ್ರಶಸ್ತಿಯು 10 ದಶಲಕ್ಷ ಸ್ವೀಡಿಷ್ ಕ್ರೌನ್ (15.40 ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸ್ವೀಡನ್ನಿನ ಕಾರ್ಲೊನಿಸ್ಕಾ ಸಂಸ್ಥೆ ಪ್ರಕಟಿಸಿತು. ಇಟಲಿಯಲ್ಲಿ ಜನಿಸಿದ ಕೇಪ್ಚಿ ಸದ್ಯ ಅಮೆರಿಕದ ಪ್ರಜೆ. ಇವಾನ್ ಹಾಗೂ ಸ್ಮಿತ್ಸ್ ಅವರು ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಆದರೆ ಈಗ ಇವಾನ್, ಬ್ರಿಟನ್ನಿನ ಹಾಗೂ ಸ್ಮಿತ್ಸ್ ಅಮೆರಿಕದ ಪ್ರಜೆ.
 
2007: ಅತಿ ಕಡಿಮೆ ದರದಲ್ಲಿ ಚಲನಚಿತ್ರಗಳ ವಿಸಿಡಿ ಮತ್ತು ಡಿವಿಡಿಗಳನ್ನು ಬಿಡುಗಡೆ ಮಾಡಿ ಗೃಹ ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಪ್ರಮುಖ ಐಟಿ ಸಂಸ್ಥೆ `ಮೌಸರ್ ಬೇರ್' ಭಾರತದ ಅತಿ ದೊಡ್ಡ ವಿಡಿಯೋ ಸಂಸ್ಥೆ `ಅಲ್ಟ್ರಾ ವಿಡಿಯೋ'ದಿಂದ 900 ಚಲನಚಿತ್ರಗಳ ಹಕ್ಕು ಖರೀದಿಸಿತು. `ಅಲ್ಟ್ರಾ ವಿಡಿಯೋ'ದಿಂದ 800 ಹಿಂದಿ ಮತ್ತು 100 ಗುಜರಾತಿ ಚಲನಚಿತ್ರಗಳ ಹಕ್ಕು ಖರೀದಿಸಿರುವುದಾಗಿ `ಮೌಸರ್ ಬೇರ್' ಪ್ರಕಟಣೆ ತಿಳಿಸಿತು. ಮೌಸರ್ ಬೇರ್ ಪ್ರಸ್ತುತ 2,200 ಚಿತ್ರಗಳ ಹಕ್ಕು ಸ್ವಾಮ್ಯ ಪಡೆದಿದೆ. ಈ ಹೊಸ ಖರೀದಿಯಿಂದ ಸಂಸ್ಥೆಗೆ ಒಟ್ಟು 2,500 ಹಿಂದಿ ಮತ್ತು 400 ಗುಜರಾತಿ ಚಿತ್ರಗಳ ಹಕ್ಕು ಸಿಕ್ಕಿದಂತಾಯಿತು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ (ಮನರಂಜನಾ ವ್ಯಾಪಾರ) ಹರೀಶ್ ದಯಾನಿ ಹೇಳಿದರು. ಅಲ್ಟ್ರಾ ವಿಡಿಯೋದಿಂದ ಹಕ್ಕು ಖರೀದಿಸಿರುವ ಚಿತ್ರಗಳಲ್ಲಿ ಶೋಲೆ, ಕೋಯಿ ಮಿಲ್ ಗಯಾ, ಬಾಂಬೆ ಟು ಗೋವಾ, ಹೀರೋ ನಂ.1, ಸಾಗರ್, ಮೈನೇ ಪ್ಯಾರ್ ಕಿಯಾ, ಹಂ ಆಪ್ಕೇ ಹೈ ಕೌನ್, ಆರಾಧನಾ, ಆಂದಾಜ್ ಅಪ್ನಾ ಅಪ್ನಾ, ಅಮರ್ ಪ್ರೇಮ್, 36 ಚೈನಾ ಟೌನ್, ಇಕ್ಬಾಲ್ ಹಾಗೂ ಇತರ ಚಿತ್ರಗಳೂ ಸೇರಿವೆ.

2006: ದಲಿತ ಮಹಿಳೆಯೊಬ್ಬಳು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತಹ ರಾಜಕೀಯ ವೇದಿಕೆ ಕಲ್ಪಿಸಿ, ಮನುವಾದಿ ಸಂಸ್ಕೃತಿ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿ 1981ರಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಒಕ್ಕೂಟ ರಚಿಸಿ, 1984ರಲ್ಲಿ ಅದನ್ನೇ ಬಹುಜನ ಸಮಾಜ ಪಕ್ಷವಾಗಿ (ಬಿಎಸ್ಪಿ) ಪರಿವರ್ತಿಸಿದ ದಲಿತ ನಾಯಕ ಕಾನ್ಶಿರಾಂ (1934-2006) ನವದೆಹಲಿಯಲ್ಲಿ ನಿಧನರಾದರು. 72 ವರ್ಷಗಳ ಕಾನ್ಶಿರಾಂ ಅವಿವಾಹಿತರಾಗಿ ಉಳಿದು ತಾವು ಹೊಂದಿದ್ದ ಸರ್ಕಾರಿ ಉದ್ಯೋಗವನ್ನೂ 1971ರಲ್ಲಿ ತ್ಯಜಿಸಿ ದಲಿತರು ಮತ್ತು ಶೋಷಿತ ವರ್ಗಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1992ರಲ್ಲಿ ಉತ್ತರ ಪ್ರದೇಶದ ಇತವಾಹ್ ಮತ್ತು 1996ರಲ್ಲಿ ಪಂಜಾಬಿನ ಹಾಶೀರ್ಪುರ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜ್ಯಸಭೆ ಸದಸ್ಯರೂ ಆಗಿದ್ದರು. 1934ರಲ್ಲಿ ಪಂಜಾಬಿನ ರೋಪರ್ ಜಿಲ್ಲೆಯ ಖವಾಸ್ಪುರ ಗ್ರಾಮದ ಸಿಖ್ ದಲಿತ ಕುಟುಂಬದಲ್ಲಿ ಹರಿಸಿಂಗ್ ಎಂಬ ಸಾಮಾನ್ಯ ರೈತನ ಮಗನಾಗಿ ಜನಿಸಿದ್ದರು. ಅವರು ಸ್ಥಾಪಿಸಿದ ಬಿಎಸ್ಪಿ 90ರ ದಶಕದಲ್ಲಿ ರಾಷ್ಟ್ರೀಯ ಪಕ್ಷವಾಗಿ ಮನ್ನಣೆ ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿಯಿತು. ಅವರ ಶಿಷ್ಯೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.

2005: ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಭೂಕಂಪ ಸಂಭವಿಸಿ 73,000ಕ್ಕೂ ಹೆಚ್ಚು ಮಂದಿ ಮೃತರಾದರು. ಭಾರತದ ಭಾಗದಲ್ಲಿ ಇರುವ ಕಾಶ್ಮೀರದಲ್ಲೂ ಭೂಕಂಪಕ್ಕೆ ಸಿಲುಕಿ 1500ಕ್ಕೂ ಹೆಚ್ಚು ಜನ ಅಸು ನೀಗಿದರು.
 
1979: ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ 77ನೇ ಹುಟ್ಟು ಹಬ್ಬಕ್ಕಿಂತ ಮೂರುದಿನಗಳ ಮೊದಲು ಪಟ್ನಾದಲ್ಲಿ ನಿಧನರಾದರು.

1958: ಸ್ಟಾಕ್ ಹೋಮಿನ ಕರೋಲಿನ್ ಸ್ಕಾ ಇನ್ ಸ್ಟಿಟ್ಯೂಟಿನಲ್ಲಿ ಡಾ. ಆರ್ನಿ ಸೆನ್ನಿಂಗ್ ಅವರು ಮೊತ್ತ ಮೊದಲ ಆಂತರಿಕ ಹೃದಯ ಪೇಸ್ ಮೇಕರನ್ನು ಸ್ವೀಡಿಷ್ ವ್ಯಕ್ತಿ ಅರ್ನೆ ಲಾರ್ಸೆನ್ ಗೆ ಅಳವಡಿಸಿದರು. ಈ ಪೇಸ್ ಮೇಕರಿನ ಮಾದರಿ (ಪ್ರೊಟೊಟೈಪ್) ಕೇವಲ 3 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿತು. ಆದರೆ ಅರ್ನೆ ಲಾರ್ಸೆನ್ ನಂತರ 26 ಪೇಸ್ ಮೇಕರುಗಳನ್ನು ಕಾಲ ಕಾಲಕ್ಕೆ ಅಳವಡಿಸಿಕೊಂಡು 40 ವರ್ಷಗಳ ಕಾಲ ಎಲ್ಲರಂತೆಯೇ ಬದುಕಿದ.

1955: ಸಾಹಿತಿ ಡಿ. ನಂಜಪ್ಪ ಜನನ.

1952: ಸಾಹಿತಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಜನನ.

1936: ಖ್ಯಾತ ಹಿಂದಿ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರರಾದ ಮುನ್ಶಿ ಪ್ರೇಮ್ ಚಂದ್ (1880-1936) ಅವರು ತಮ್ಮ 56ನೇ ವಯಸ್ಸಿನಲ್ಲಿ ವಾರಾಣಸಿಯಲ್ಲಿ ನಿಧನರಾದರು.

1935: ಭಾರತೀಯ ಅಥ್ಲೆಟ್ ಮಿಲ್ಖಾಸಿಂಗ್ ಜನ್ಮದಿನ. 1960ರ ರೋಮ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಒಲಿಂಪಿಕ್ ದಾಖಲೆಯನ್ನು ಅವರು ಸೃಷ್ಟಿಸಿದರು. ಆದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

1933: ಸಾಹಿತಿ, ಗ್ರಂಥಪಾಲಕ ಟಿ.ವಿ. ವೆಂಕಟರಮಣಯ್ಯ ಅವರು ವೆಂಕಟರಮಣಯ್ಯ, ತಿಮ್ಮಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ ಜನಿಸಿದರು.

1929: ಸಾಹಿತಿ ಮಾಲತಿ ಸುಬ್ರಹ್ಮಣ್ಯಂ ಜನನ.

1918: ಯೂರೋಪಿನ ಕಾಲಾಳು ಸೇನೆಯ 82ನೇ ವಿಭಾಗದ ಅಮೆರಿಕನ್ ಸಾರ್ಜೆಂಟ್ ಆಲ್ವಿನ್ ಸಿ. ಯಾರ್ಕ್ ಏಕಾಂಗಿಯಾಗಿ ಒಬ್ಬ ಜರ್ಮನ್ ಮೇಜರ್ ಹಾಗೂ 132 ಮಂದಿಯನ್ನು ಸೆರೆ ಹಿಡಿದು 35 ಮೆಷಿನ್ಗನ್ಗಳನ್ನು ವಶಪಡಿಸಿಕೊಂಡದ್ದಲ್ಲದೆ ವೈರಿ ಪಡೆಯ 25 ಸೈನಿಕರನ್ನು ಕೊಂದು ಮೊದಲನೇ ಜಾಗತಿಕ ಸಮರದ ಹೀರೊ ಎನ್ನಿಸಿಕೊಂಡರು.

1871: ಶಿಕಾಗೋ ನಗರದ ಕೈಗಾರಿಕಾ ಪ್ರದೇಶ ಸೇರಿದಂತೆ ನಾಲ್ಕು ಚದರ ಮೈಲುಗಳ ವ್ಯಾಪ್ತಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ನಗರದ ನೈಋತ್ಯಭಾಗದಿಂದ ಆರಂಭವಾದ ಬೆಂಕಿ ಮರದ ಕಟ್ಟಡಗಳು ಸೇರಿದಂತೆ ಸಿಕ್ಕಿದ್ದೆಲ್ಲವನ್ನೂ ನುಂಗಿ ಹಾಕಿತು. ಮಿಶಿಗನ್ ಪಟ್ಟಣಕ್ಕೆ ತಲುಪುವ ವೇಳೆಗೆ ಬೆಂಕಿಯ ಕೆನ್ನಾಲಿಗೆ ದುರ್ಬಲಗೊಂಡು ಆರಿತು. ಅಕ್ಟೋಬರ್ 8ರಿಂದ 10ರವರೆಗೆ ನಡೆದ ಈ ಅಗ್ನಿಕಾಂಡದ್ಲಲಿ 250 ಜನ ಪ್ರಾಣ ಕಳೆದುಕೊಂಡರು. 90,000 ಜನ ನಿರಾಶ್ರಿತರಾದರು. ಅಂದಾಜು 20 ಲಕ್ಷ ಡಾಲರ್ ಮೊತ್ತದ ಆಸ್ತಿಪಾಸ್ತಿ ನಷ್ಟವಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement