ಈ ನೃತ್ಯ ರೂಪಕ ಅದೆಷ್ಟು ಜನಪ್ರಿಯ..!
'ಮ್ಯೂಸಿಕಲ್ ಕ್ಯಾಟ್' ಎಂದರೆ ನಮ್ಮ ಯಕ್ಷಗಾನ, ದೊಡ್ಡಾಟಗಳ ಹಾಗೆ. ಹಾಡು, ನೃತ್ಯಗಳ ಮಿಶ್ರಣದಿಂದ ಜನರನ್ನು ಅಪಾರವಾಗಿ ಆಕರ್ಷಿಸುವ 'ಸಂಗೀತ ನೃತ್ಯ ರೂಪಕ'. ಇಂತಹ ನೃತ್ಯ ರೂಪಕ ತಂಡಗಳು ಸಹಸ್ರಾರು ಇದ್ದರೂ ಲಕ್ಷಾಂತರ ಮಂದಿಗೆ ಮೋಡಿ ಮಾಡಿದ್ದು `ಆಂಡ್ರ್ಯೂ ಲಾಯ್ಡ್ ವೆಬ್ಬರ್ - ಟಿಮ್ ರೈಸ್ ಮೂಸಿಕಲ್ ಕ್ಯಾಟ್ಸ್'.
ನೆತ್ರಕೆರೆ ಉದಯಶಂಕರ
`ಸಂಗೀತ ನೃತ್ಯ ರೂಪಕ' ಸಂಸ್ಥೆಯೊಂದು ಎಷ್ಟು ಜನಪ್ರಿಯವಾಗಬ್ಲಲುದು?
ನೃತ್ಯ ರೂಪಕ ಸಂಸ್ಥೆಗಳು ಸಾಮಾನ್ಯವಾಗಿ ಕೆಲವು ಪ್ರದರ್ಶನಗಳ ಬಳಿಕ ಪರದೆ ಎಳೆದುಕೊಳ್ಳುವುದೇ ಹೆಚ್ಚು. ಆದರೆ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಜನರನ್ನು ಹುಚ್ಚೆಬ್ಬಿಸಿದ ಸಂಗೀತ ನೃತ್ಯ ರೂಪಕ ಸಂಸ್ಥೆ ಒಂದಿದ್ದರೆ ಅದು ಆಂಡ್ರ್ಯೂ ಲಾಯ್ಡ್ ವೆಬ್ಬರ್ ಮತ್ತು ಟಿಮ್ ರೈಸ್ ಜೋಡಿಯ `ಮ್ಯೂಸಿಕಲ್ ಕ್ಯಾಟ್ಸ್'.
`ಆಂಡ್ರ್ಯೂ ಲಾಯ್ಡ್ ವೆಬ್ಬರ್ - ಟಿಮ್ ರೈಸ್ ಮೂಸಿಕಲ್ ಕ್ಯಾಟ್ಸ್' ನ್ಯೂಯಾರ್ಕಿನಲ್ಲಿ ಆರಂಭವಾದದ್ದು 1982ರಲ್ಲಿ ಇದೇ ವಾರ, ಅಂದರೆ ಅಕ್ಟೋಬರ್ 7ರಂದು. 2000ರಲ್ಲಿ ಅಂತಿಮ ಪರದೆ ಎಳೆದುಕೊಳ್ಳುವುದಕ್ಕೆ ಮೊದಲಿನ 18 ವರ್ಷಗಳಲ್ಲಿ ಅದು ನೀಡಿದ ಪ್ರದರ್ಶನಗಳು 7485. ಲಂಡನ್ನಿನಲ್ಲಿ ಈ ಮ್ಯೂಸಿಕಲ್ ಕ್ಯಾಟ್ಸ್ ನೀಡಿದ ಪ್ರದರ್ಶನ 9000ಕ್ಕೂ ಹೆಚ್ಚು. ಬಾಕ್ಸ್ ಆಫೀಸಿನಲ್ಲಿ ಅದರ ಗಳಿಕೆ 13.60 ಕೋಟಿ. ಅಂದರೆ ಅದರ ಜನಪ್ರಿಯತೆ ಎಷ್ಟ್ದಿದಿರಬಹುದು ಎಂದು ಲೆಕ್ಕ ಹಾಕಬಹುದು !
ವಾಸ್ತವವಾಗಿ `ಮ್ಯೂಸಿಕಲ್ ಕ್ಯಾಟ್ಸ್' ಅಂದರೆ ಏನು? `ಮ್ಯೂಸಿಕಲ್ ಕ್ಯಾಟ್ಸ್' ಅಂದರೆ ಹೆಚ್ಚಾಗಿ ಟಿ.ಎಸ್. ಎಲಿಯಟ್ ನ `ಓಲ್ಡ್ ಪೋಸಮ್ಸ್ ಬುಕ್ ಆಫ್ ಪ್ರಾಕ್ಟಿಕಲ್ ಕ್ಯಾಟ್ಸ್' ಆಧರಿಸಿದ ಸಂಗೀತ ನೃತ್ಯ ರೂಪಕ. ಹಾಡು ಮತ್ತು ನೃತ್ಯದ ಮಿಶ್ರಣದಿಂದ ಇದು ಜನರನ್ನು ಅದ್ಭುತವಾಗಿ ಸೆಳೆಯುತ್ತದೆ - ನಮ್ಮ ಯಕ್ಷಗಾನ ಬಯಲಾಟ, ದೊಡ್ಡಾಟಗಳ ಹಾಗೆ.
ಇಂತಹ `ಮ್ಯೂಸಿಕಲ್ ಕ್ಯಾಟ್' ಗಳ ಸಂಖ್ಯೆ ಸಹಸ್ರಾರು. ಆದರೆ ಅವುಗಳಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಪಡೆದದ್ದ ಆಂಡ್ರ್ಯೂ ಲಾಯ್ಡ್ ವೆಬ್ಬರ್ ಮತ್ತು ಟಿಮ್ ರೈಸ್ ಅವರ ಮ್ಯೂಸಿಕಲ್ ಕ್ಯಾಟ್.
ಆಂಡ್ರ್ಯೂ ಲಾಯ್ಡ್ ವೆಬ್ಬರ್ ಗೆ ಸಂಗೀತ ಜನ್ಮಜಾತ. ಆತನ ಕುಟುಂಬವೇ ಸಂಗೀತಮಯ. ಆತನ ತಂದೆ ವಿಲಿಯಂ ಸೌತ್ ಕೊಂಚ್ ಲಾಯ್ಡ್ ವೆಬ್ಬರ್ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಮ್ಯೂಸಿಕ್ ನ ಸಂಗೀತ ಸಿದ್ಧಾಂತ ಹಾಗೂ ರಚನಾ ವಿಭಾಗದ ಪ್ರೊಫೆಸರ್. ಆಂಡ್ರ್ಯೂನ ತಾಯಿ ಜೀನ್ ಅದೇ ಸಂಸ್ಥೆಯಲ್ಲಿ ಹಾಡುಗಾರ್ತಿ ಹಾಗೂ ವಯೋಲಿನ್ ವಾದಕಿ.
ಈ ಜೋಡಿಗೆ 1942ರಲ್ಲಿ ಹುಟ್ಟಿದ ಆಂಡ್ರ್ಯೂ ಮಕ್ಕಳಾಟದ ವಯಸ್ಸಿನಲ್ಲಿ ಹಿಡಿದದ್ದು ಆಟಿಕೆಗಳನ್ನಲ್ಲ, ಬದಲಿಗೆ ವಯೋಲಿನನ್ನು. ಮೂರನೇ ವರ್ಷಕ್ಕೆ ವಯೋಲಿನ್ ಹಿಡಿದ ಆತ ಆರನೇ ವರ್ಷದಲ್ಲಿ ಸ್ವಂತ ಹಾಡುಗಳನ್ನು ರಚಿಸಲಾರಂಭಿಸಿದ. 9ನೇ ವಯಸ್ಸಿನಲ್ಲಿ ಆತನ ಹಾಡೊಂದು `ಮ್ಯೂಸಿಕ್ ಟೀಚರ್' ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿತು.
ಆಂಡ್ರ್ಯೂನ ಚಿಕ್ಕಮ್ಮ ವಿ ಆತನ ಸಂಗೀತಾಸಕ್ತಿಗೆ ನೀರೆರೆದು ಪೋಷಿಸಿದಳು. `ಮೈ ಫೇರ್ ಲೇಡಿ'ಯಂತಹ ದೊಡ್ಡ ಸಂಗೀತ ನೃತ್ಯ ರೂಪಕಗಳಿಗೆ, `ಗಿಗಿ', `ಸೌತ್ ಫೆಸಿಫಿಕ್' ನಂತಹ ಚಲನಚಿತ್ರಗಳಿಗೆ ಕರೆದೊಯ್ದಳು. ಸ್ವಲ್ಪ ಸಮಯದಲ್ಲೇ ಆಂಡ್ರ್ಯೂ ಮನೆಯಲ್ಲೇ ಸಣ್ಣ `ರಂಗಭೂಮಿ' ನಿರ್ಮಿಸಿದ. ಅದಕ್ಕಾಗಿ ಹಾಡುಗಳನ್ನು ರಚಿಸಿದ.
1965ರ ಏಪ್ರಿಲಿನಲ್ಲಿ ಆಂಡ್ರ್ಯೂಗೊಂದು ಪತ್ರ ಬಂತು. ಅದು ಟಿಮ್ ರೈಸ್ ನ ಪತ್ರ. `ನಿನ್ನ ಹಾಡುಗಳಿಗೆ ನಾನು ಲಿರಿಕ್ಸ್ (ಭಾವಗೀತೆ) ಬರೆಯಬಲ್ಲೆ. ನಾವು ಒಟ್ಟಾಗಿ ಪ್ರದರ್ಶನಗಳನ್ನುನೀಡೋಣವೇ?' ಎಂದು ಆತ ಕೇಳಿದ್ದ. ಆಂಡ್ರ್ಯೂ ಮತ್ತು ಟಿಮ್ ರೈಸ್ ಬದುಕಿಗೆ ಇದು ಮಹತ್ತರ ತಿರುವು ನೀಡಿತು. ಆಗ ಆಂಡ್ರ್ಯೂಗೆ 17 ವರ್ಷ. ಟಿಮ್ ಗೆ 21 ವರ್ಷ. `ದಿ ಲೈಕ್ಸ್ ಆಫ್ ಯುಎಸ್' ಸಂಗೀತ ನೃತ್ಯ ರೂಪಕದೊಂದಿಗೆ ಅವರ `ಜೊತೆಯಾಟ' ಆರಂಭವಾಯಿತು.
ಪಶ್ಚಿಮ ಲಂಡನ್ನಿನ `ಕೊಲೆಟ್ ಕೋರ್ಟ್'ನ ಸಂಗೀತ ವಿಭಾಗದ ಮುಖ್ಯಸ್ಥ ಆಲನ್ ಡೊಗ್ಗೆಟ್ ಧಾರ್ಮಿಕ ಕೃತಿ ಆಧಾರದ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ ನೀಡಿದ್ದು ಇವರಿಬ್ಬರ ಬದುಕಿಗೆ ಇನ್ನೊಂದು ತಿರುವು ನೀಡಿತು. ಬೈಬಲ್ ನ ಕಥೆ ಆಧಾರಿತ ಹದಿನೈದು ನಿಮಿಷಗಳ `ಜೋಸೆಫ್ ಅಂಡ್ ದಿ ಅಮೇಜಿಂಗ್ ಟೆಕ್ನಿಕಲರ್ ಡ್ರೀಮ್ ಕೋಟ್' ರಂಗವೇರಲು ಸಿದ್ಧವಾಯಿತು. ರಂಗದಲ್ಲಿ ಎರಡು ಗಂಟೆಗಳ ಅವಧಿಗೆ ಬೆಳೆದ ಈ ಪ್ರದರ್ಶನ ಜನರ ಮನ ಗೆದ್ದಿತು.
ಈ ಜೋಡಿ ಪ್ರದರ್ಶಿಸಿದ `ಜೀಸಸ್ ಕ್ರೈಸ್ಟ್ ಸೂಪರ್ ಸ್ಟಾರ್' (1969), `ಜೀವೆಸ್' (1975), `ಎವಿಟಾ' (1976) ಅದ್ಭುತ ಯಶಸ್ಸು ಪಡೆದವು. ಆ ಬಳಿಕ ಆಂಡ್ರ್ಯೂ ಮನಸ್ಸಿಗೆ ಬಂದದ್ದು ಟಿ.ಎಸ್. ಎಲಿಯಟ್ ನ `ಓಲ್ಡ್ ಪೋಸಮ್ಸ್ ಬುಕ್ ಆಫ್ ಪ್ರಾಕ್ಟಿಕಲ್ ಕ್ಯಾಟ್ಸ್'. ಆದರೆ ಆ ವೇಳೆಗಾಗಲೇ ಇದಕ್ಕೆ ಸಂಬಂಧಪಟ್ಟ ಭಾವಗೀತೆಗಳು ಸಾಕಷ್ಟಿದ್ದವು. ಆದರೆ ಹಾಡುಗಳಲ್ಲಿ ಕಥೆಗಳು ಇದ್ದುದು ಕಡಿಮೆ. ಎಲಿಯಟ್ ನ ಅಪ್ರಕಟಿತ ಕವನಗಳನ್ನು ಆಧರಿಸಿದ ನೃತ್ಯ ರೂಪಕಗಳ ರಚನೆಗೆ ಕೈಹಾಕಿದ ಆಂಡ್ರ್ಯೂ - ಟಿಮ್ ರೈಸ್ ಜೋಡಿ 1980ರಲ್ಲಿ ಕ್ಯಾಟ್ಸ್ ರಂಗಭೂಮಿಯನ್ನು (ಕ್ಯಾಟ್ಸ್ ಥಿಯೇಟರ್) ಸ್ಥಾಪಿಸಿತು.
`ವೇರಿಯೇಷನ್ಸ್' (1982), `ಟೆಲ್ ಮಿ ಆನ್ ಸಂಡೆ', `ಸಾಂಗ್ ಅಂಡ್ ಡ್ಯಾನ್ಸ್', `ಸ್ಟ್ರೈಟ್ ಎಕ್ಸ್ಪ್ರೆಸ್' (1984), `ಫ್ಯಾಂಟಮ್ ಆಫ್ ದಿ ಒಪೇರಾ' (1986), ಆಸ್ಪೆಕ್ಟ್ಸ್ ಆಫ್ ಲವ್' (1989) ಇತ್ಯಾದಿ ಪ್ರದರ್ಶನಗಳು ಈ ಜೋಡಿಗೆ ಅಪಾರ ಖ್ಯಾತಿ ತಂದು ಕೊಟ್ಟವು. ನ್ಯೂಯಾರ್ಕಿನಲ್ಲಿ ಮುಚ್ಚಿದರೂ, ಲಂಡನ್ ಸೇರಿದಂತೆ ಹಲವೆಡೆ ಅದರ ಪ್ರದರ್ಶನಗಳು ಮುಂದುವರಿದವು.
ಆಂಡ್ರ್ಯೂ ಲಾಯ್ಡ್ ವೆಬ್ಬರ್ ಅವರ ಇತ್ತೀಚಿನ ಯೋಜನೆಯೊಂದು ಭಾರತಕ್ಕೂ ಮುಟ್ಟಿದೆ. ಆಂಡ್ರ್ಯೂ ಮತ್ತು ಶೇಖರ್ ಕಪೂರ್ ಸಹಯೋಗದಲ್ಲಿ `ಬಾಂಬೆ ಡ್ರೀಮ್' ಎಂಬ ಮ್ಯೂಸಿಕಲ್ ಕ್ಯಾಟ್ಸ್ ಸಿದ್ಧಗೊಂಡಿದೆ. ಇದಕ್ಕೆ ಆಂಡ್ರ್ಯೂ ಸಂಗೀತವನ್ನಾಗಲೀ, ಭಾವಗೀತೆಯನ್ನಾಗಲೀ ಬರೆದಿಲ್ಲ. ಈ ಯೋಜನೆಯಲ್ಲಿ ಅವರದು ನಿರ್ಮಾಪಕನ ಪಾತ್ರ ಮಾತ್ರ.
ವೆಬ್ಬರ್ ನ ಹಲವು ರೂಪಕಗಳು ಟಿವಿಗಳಲ್ಲೂ ಪ್ರದರ್ಶನ ಕಂಡಿವೆ.
ಅಂದಹಾಗೆ ಇಲ್ಲಿ ಹೇಳಲೇ ಬೇಕಾದ ಇನ್ನೊಂದು ವಿಚಾರವಿದೆ. ಆತನ `ಸಂಗೀತ ನೃತ್ಯ ರೂಪಕ'ಮಯ ಬದುಕು ಎಷ್ಟು ವರ್ಣಮಯವೋ ಅಷ್ಟೇ ವರ್ಣರಂಜಿತ ಆತನ ಖಾಸಗಿ ಬದುಕು ಕೂಡಾ. 1972ರಲ್ಲಿ ಸಾರಾ ಹುಗಿಲ್ ಎಂಬಾಕೆಯನ್ನು ಮದುವೆಯಾದ ಆಂಡ್ರ್ಯೂ, 1984ರಲ್ಲಿ ಸಾರಾ ಬ್ರೈಟ್ಮ್ಯಾನಳನ್ನು ಮದುವೆಯಾದ. 1991ರಲ್ಲಿ ಮ್ಯಾಡಲೈನ್ ಎಂಬಾಕೆ ಆತನ ಮೂರನೇ ಪತ್ನಿಯಾದಳು.
No comments:
Post a Comment