Thursday, November 13, 2008

ಸಮುದ್ರ ಮಥನ 10: ವರ ಬೇಡುವಾಗ ವಿವೇಚನೆ ಇರಲಿ

ಸಮುದ್ರ ಮಥನ 10:  ವರ

ಬೇಡುವಾಗ ವಿವೇಚನೆ ಇರಲಿ

ಆ ಮಗು ಆಟಿಕೆ, ಹಣ್ಣಿನಲ್ಲಿ ಒಂದನ್ನು ಆರಿಸಿಕೊಳ್ಳುತ್ತದೆ. ಅದು ಚೆಕ್ಕನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಪಾಪ ಅದಕ್ಕೇನು ಗೊತ್ತು. ಆ ಚೆಕ್ಕನ್ನು ಡ್ರಾ ಮಾಡಿಕೊಂಡರೆ ಅಂತಹ ಅದೆಷ್ಟೋ ಲಕ್ಷ ಆಟಿಕೆ, ಹಣ್ಣನ್ನು ಖರೀದಿಸಬಹುದು ಅಂತ.  

ತಿರುಪತಿಯಲ್ಲಿ ವೆಂಕಟರಮಣನ ದರ್ಶನ ಮಾಡಿರಬಹುದು. ಅವನು ಒಂದು ಕೈಯಿಂದ ತನ್ನ ಚರಣವನ್ನು ತೋರಿಸುತ್ತಾ ಇದ್ದಾನೆ. ಅದು ತನ್ನ ಚರಣವನ್ನು ಆಶ್ರಯಿಸಿ ಎಂಬುದಕ್ಕೆ ಸೂಚಕ. ಆಶ್ರಯಿಸಿದರೆ ಏನು ಎಂದು ಅನ್ನಿಸಬಹುದು. ಆಶ್ರಯಿಸಿದರೆ ಈ ಸಂಸಾರ ಸಾಗರ ನಮ್ಮ ಮೊಳಕಾಲಿಗಿಂತ ಮೇಲೆ ಬರುವುದಿಲ್ಲ ಎಂದು ಇನ್ನೊಂದು ಕೈಯಿಂದ ಸೂಚಿಸುತ್ತಿದ್ದಾನೆ. ಹಾಗಾದಾಗ ಸಂಸಾರ ಸಾಗರವನ್ನು ಸುಲಭವಾಗಿ ದಾಟಬಹುದು. ಆದರೆ ಅವನಲ್ಲಿ ಅದನ್ನು ಯಾರೂ ಕೇಳುತ್ತಿಲ್ಲ. ಎಲ್ಲರೂ ಧನಕನಕಾದಿ ಐಶ್ವರ್ಯ, ಅಧಿಕಾರ ಇವೇ ಸಣ್ಣಪುಟ್ಟ ವರಗಳನ್ನು ಕೇಳಿ ಅಲ್ಪತೃಪ್ತಿಯನ್ನು ಹೊಂದುತ್ತಿದ್ದಾರೆ. ಗುಡಿಯಲ್ಲಿ ವೆಂಕಟರಮಣ ದೊಡ್ಡದನ್ನು ಕೊಡಬೇಕು, ಕೇಳುವವರು ಬರಲಿ ಎಷ್ಟು ಕಾಲದಿಂದ ಕಾಯುತ್ತ ನಿಂತಿದ್ದಾನೋ ಏನೋ? ಯಾರೂ ಅದರ ಸುದ್ದಿಗೂ ಹೋಗುತ್ತಿಲ್ಲ. 

ಇದನ್ನು ಯೋಚಿಸಿದಾಗ ಉದಾಹರಣೆಯೊಂದು ಮನಸ್ಸಿಗೆ ಬರುತ್ತದೆ. ಪುಟ್ಟ ಮಗುವಿನ ಮುಂದೆ ಎರಡು ಪದಾರ್ಥಗಳನ್ನು ಇಡಬೇಕು. ಒಂದು ಆಟಿಕೆ, ಇನ್ನೊಂದು ಹಣ್ಣು ಎಂದಿಟ್ಟುಕೊಳ್ಳಿ ಜೊತೆಯಲ್ಲಿಯೇ ಒಂದು ಕೋಟಿ ರೂಪಾಯಿಯ ಚೆಕ್ಕನ್ನೂ ಇಡಿ. ಮಗುವಿಗೆ ಯಾವುದಾದರೂ ಒಂದನ್ನು ಆರಿಸಿಕೋ ಎಂದು ಹೇಳಿ. ನಾವು ದೇವರ ಮುಂದೆ, ಗುರುಗಳ ಸನ್ನಿಧಿಯಲ್ಲಿ ಕೇಳುವಂತೆಯೇ ಆ ಮಗು ಕೂಡ ಆಟಿಕೆ, ಹಣ್ಣಿನಲ್ಲಿ ಒಂದನ್ನು ಆರಿಸಿಕೊಳ್ಳುತ್ತದೆ. ಅದು ಚೆಕ್ಕನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಪಾಪ ಅದಕ್ಕೇನು ಗೊತ್ತು. ಆ ಚೆಕ್ಕನ್ನು ಡ್ರಾ ಮಾಡಿಕೊಂಡರೆ ಅಂತಹ ಅದೆಷ್ಟೋ ಲಕ್ಷ ಆಟಿಕೆ, ಹಣ್ಣನ್ನು ಖರೀದಿಸಬಹುದು ಅಂತ.  

ನಮ್ಮ ಕಥೆಯೂ ಹಾಗೆಯೇ ಅಲ್ಲವೇ. ಜೀವಿಯನ್ನೇ ಉದ್ಧಾರಮಾಡುವವನ ಮುಂದೆ ನಿಂತು ಯಕಃಶ್ಚಿತ್ ವರವನ್ನು ಬೇಡುತ್ತೇವಲ್ಲ. ಇದು ವಿಚಾರವಂತರ ನಡೆಯೇ?

ಅಲ್ಲ ಎಂದಾದರೆ ಜೀವಕ್ಕೆ ನಿಜವಾಗಿಯೂ ಬೇಕಾದ್ದು ಯಾವುದು ಎಂದು ವಿವೇಚಿಸಿ, ಅದನ್ನು ಆಧರಿಸಿ ಬದುಕಬೇಕು. ಇವತ್ತೇ ಎಲ್ಲವೂ ಸಿಕ್ಕಿಬಿಡುತ್ತದೆ ಎಂದಲ್ಲ. ನಾವು ಬಲಿತಾಗ ನಮ್ಮ ಜೀವಕ್ಕೆ ತಂಪನ್ನು ಎರೆಯುವಂಥದ್ದು ಸಿಕ್ಕೇಸಿಗುತ್ತದೆ. ಅದರಲ್ಲಿ ಸಂಶಯ ಬೇಡ. 
ಅಮೂಲ್ಯವಾದುದನ್ನು ಪಡೆಯಲು ಶಿಷ್ಯನಿಗೆಷ್ಟು ದಾಹವಿರುತ್ತದೋ, ಗುರುವಿಗೂ ಅದನ್ನು ತೀರಿಸುವ ಹಂಬಲ ಅಷ್ಟೇ ಇರುತ್ತದೆ.

ಯಾವುದಕ್ಕೂ ಕಾಲ ಕೂಡಿಬರಬೇಕು. ಯಾವತ್ತು, ಹೇಗೆ ಕೂಡಿಬರುತ್ತದೆ ಎಂಬುದು ಗೊತ್ತಿಲ್ಲದಿರುವುದರಿಂದ ದಾಹವನ್ನು ನೀಗೆಂದು ಹಂಬಲಿಸುವುದೊಂದೇ ನಮ್ಮ ಕರ್ತವ್ಯ ಎಂದೆನಿಸುತ್ತದೆ. 

ಹಾಗೇ ಜೀವನ ನಡೆಸುವಿರಲ್ಲವೇ? ಸುಮ್ಮನೆ ಸವೆಸದಿರಿ ಈ ಅಮೂಲ್ಯ ಜೀವನವನ್ನು. 

ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ

ಶ್ರೀರಾಮಚಂದ್ರಾಪುರಮಠ
 

No comments:

Advertisement