My Blog List

Friday, November 14, 2008

ಇಂದಿನ ಇತಿಹಾಸ History Today ನವೆಂಬರ್ 14

ಇಂದಿನ  ಇತಿಹಾಸ

ನವೆಂಬರ್ 14

 ಕೆನಡಾ ನಿವಾಸಿ `ಎಡಿಬಿ'ಯ ಆಗ್ನೇಯ ಏಷ್ಯಾ ವಿಭಾಗದ ಮಹಾ ನಿರ್ದೇಶಕ, `ಎಡಿಬಿ' ಅಧ್ಯಕ್ಷರ ಸಲಹೆಗಾರ ರಜತ್ ಎಂ. ನಾಗ್ ಅವರನ್ನು ಏಷ್ಯನ್ ಡೆವೆಲಪ್ ಮೆಂಟ್ ಬ್ಯಾಂಕಿನ (ಎಡಿಬಿ) ಹೊಸ ಮಹಾ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು.


ಇಂದು ಮಕ್ಕಳ ದಿನ. ಭಾರತದಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ (1889-1964) ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಹಲವಾರು ರಾಷ್ಟ್ರಗಳಲ್ಲಿ ಜೂನ್ 1ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. 1925ರ ಜೂನ್ 1ರಂದು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಜಾಗತಿಕ ಸಮ್ಮೇಳನ ಸ್ವಿಜರ್ ಲ್ಯಾಂಡಿನ ಜಿನೇವಾದಲ್ಲಿ ನಡೆಯಿತು. ಇದೇ ಈ ದಿನಾಚರಣೆಯ ಮೂಲ.

2007: ಜನತಾದಳ (ಎಸ್) ಮುಖಂಡರ ಧೋರಣೆಯಿಂದ ಬೇಸತ್ತು ಆ ಪಕ್ಷ ತ್ಯಜಿಸಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಸಾರಥ್ಯದ `ಸುವರ್ಣ ಯುಗ' ನೂತನ ಪಕ್ಷ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಈದಿನ ಉದಯವಾಯಿತು.

2007: ಮಾಜಿ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ರೆಫ್ರಿ ಎಂ. ಕೃಷ್ಣಪ್ಪ (72) ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಬಾಲಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರು ಹಾಗೂ ಅಧ್ಯಕ್ಷರು. ಅನೇಕ ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರುಗಳು ಕೃಷ್ಣಪ್ಪ ಅವರಿಂದ ತರಬೇತಿ ಪಡೆದಿದ್ದಾರೆ. ರಥಬೀದಿಯ ಬಳಿ ಅವರು ಬೆಳೆಸಿದ ಬಾಲಾಂಜನೇಯ ವ್ಯಾಯಾಮ ಶಾಲೆಗೆೆ ಈ ವರ್ಷ ವಜ್ರ ಮಹೋತ್ಸವ ಸಂಭ್ರಮ.

2007: ಬೆಂಗಳೂರು ನಗರದ ಹೊರವಲಯದಲ್ಲಿನ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಿಹಾರದ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಕೆಯ ಆರೈಕೆಗಾಗಿ ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ನೀಡಿದರು.

2006: ಬಡಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ 10,000 ರೂಪಾಯಿ ಠೇವಣಿ ಇಡುವ ಕರ್ನಾಟಕ ಸರ್ಕಾರದ ವಿನೂತನ `ಭಾಗ್ಯಲಕ್ಷ್ಮಿ' ಯೋಜನೆಗೆ ಬೆಂಗಳೂರಿನ ಜವಾಹರ ಬಾಲ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿ, 100 ಫಲಾನುಭವಿ ಹೆಣ್ಣುಮಕ್ಕಳ ತಾಯಂದಿರಿಗೆ ಸಾಂಕೇತಿಕವಾಗಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು. ಬಿಡದಿ ಹೋಬಳಿ ಕರಿಯಪ್ಪನ ಹಳ್ಳಿಯ ಚೌಡಯ್ಯ ಮತ್ತು ಭಾಗ್ಯ ಅವರ ಮಗು ಅನುಷಾ ಠೇವಣಿ ಪತ್ರ ಪಡೆದ ಪ್ರಥಮ ಮಗು ಎನಿಸಿಕೊಂಡಿತು. ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಜರಿದ್ದರು. 

2006: ಹಿರಿಯ ಸಾಹಿತಿ ಸೂರ್ಯನಾರಾಯಣ ಚಡಗ (77) ಅವರು ಬೆಂಗಳೂರಿನ ಕಲ್ಯಾಣನಗರದ ತಮ್ಮ ನಿವಾಸದಲ್ಲಿ ನಿಧನರಾದರು. 1954ರಲ್ಲಿ ಮೊದಲ ಕಾದಂಬರಿ `ರತ್ನ ಪಡೆದ ಭಾಗ್ಯ'ದಿಂದ 2001ರಲ್ಲಿ ಬರೆದ `ನಾಟ್ಯರಶ್ಮಿ' ಕೃತಿವರೆಗೆ 30ಕ್ಕೂ ಹೆಚ್ಚು ಕೃತಿಗಳನ್ನು ಚಡಗ ರಚಿಸಿದ್ದಾರೆ.

2006: ಕೇರಳದ ಹಿರಿಯ ಸ್ವಾತಂತ್ರ್ಯ ಯೋಧ, ಕಮ್ಯೂನಿಸ್ಟ್ ಧುರೀಣ ಎನ್. ಸುಬ್ರಹ್ಮಣ್ಯ ಶೆಣೈ ಪಯ್ಯನ್ನೂರಿನಲ್ಲಿ ನಿಧನರಾದರು. ಕೇರಳದಲ್ಲಿ ಕಮ್ಯೂನಿಸ್ಟ್ ಆಂದೋಲನ ಹುಟ್ಟು ಹಾಕಿದವರಲ್ಲಿ ಶೆಣೈ ಒಬ್ಬರು.

2006: ಇರಾಕಿ ಪೊಲೀಸ್ ಕಮಾಂಡೋ ಸಮವಸ್ತ್ರ್ರ ಧರಿಸ್ದಿದ ಶಸ್ತ್ರಧಾರಿಗಳು ಕೇಂದ್ರ ಬಾಗ್ದಾದಿನ  ಉನ್ನತ ಶಿಕ್ಷಣ ಸಚಿವಾಲಯದ ಕಟ್ಟಡ, ಹಾಗೂ ಕರ್ರಾಡಾ ಸಂಶೋಧನಾ ನಿರ್ದೇಶನಾಲಯದಿಂದ ಶಿಯಾ ಹಾಗೂ ಸುನ್ನಿ ಸಮುದಾಯಗಳಿಗೆ ಸೇರಿದ 150ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದರು. ಶಸ್ತ್ರಧಾರಿಗಳು 20 ನಿಮಿಷಗಳ ಅವಧಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದರು. ದಾಳಿಗೆ ಮುನ್ನ ಇಡೀ ರಸ್ತೆಯನ್ನು ಸುತ್ತುವರೆದು, ಪ್ರತಿಭಟಿಸಿದ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಿಶ್ಯಸ್ತ್ರಗೊಳಿಸಲಾಯಿತು. ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿ ಹಾಕಿ ಅವರ ಕೈಗಳನ್ನು ಬಿಗಿದು 6 ಟ್ರಕ್ಕುಗಳಲ್ಲಿ ತುಂಬಿಕೊಂಡು ಹೋಗಲಾಯಿತು.

2006: ಕೆನಡಾ ನಿವಾಸಿ `ಎಡಿಬಿ'ಯ ಆಗ್ನೇಯ ಏಷ್ಯಾ ವಿಭಾಗದ ಮಹಾ ನಿರ್ದೇಶಕ, `ಎಡಿಬಿ' ಅಧ್ಯಕ್ಷರ ಸಲಹೆಗಾರ ರಜತ್ ಎಂ. ನಾಗ್ ಅವರನ್ನು ಏಷ್ಯನ್ ಡೆವೆಲಪ್ ಮೆಂಟ್ ಬ್ಯಾಂಕಿನ (ಎಡಿಬಿ) ಹೊಸ ಮಹಾ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು.

2005: ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಲಾರೆನ್ಸ್ ಫರ್ನಾಂಡಿಸ್ (73) ಹೃದಯದ ರಕ್ತನಾಳ ಒಡೆದ ಪರಿಣಾಮವಾಗಿ ಅಸು ನೀಗಿದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿ ಪೊಲೀಸರಿಂದ ವಿಪರೀತ ಚಿತ್ರಹಿಂಸೆ ಅನುಭವಿಸಿದ್ದ ಲಾರೆನ್ಸ್ ಅವಿವಾಹಿತರಾಗಿದ್ದರು. ಲಾರೆನ್ಸ್ ಫರ್ನಾಂಡಿಸ್ ಅವರು ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ.

1992: ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಆಫ್ರಿಕದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೆಲಿವಿಷನ್ ಸಾಕ್ಷ್ಯದ ಆಧಾರದಲ್ಲಿ (ಥರ್ಡ್ ಅಂಪೈರ್) ವಜಾಗೊಂಡ ಮೊದಲ ಕ್ರಿಕೆಟ್ ಪಟು ಎನಿಸಿಕೊಂಡರು.

1971: ಬಾಂಗ್ಲಾದೇಶದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ 3 ಲಕ್ಷ ಮಂದಿ ಬಲಿಯಾದರು.

1967: ಭಾರತದ ಮೊದಲ ಟೆಸ್ಟ್ ಕ್ಯಾಪ್ಟನ್ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಕೊಟ್ಟಾರಿ ಕನಕಯ್ಯ ನಾಯ್ಡು ಅವರು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.

1948: ವೇಲ್ಸ್ ರಾಜಕುಮಾರ ಚಾರ್ಲ್ಸ್ ಜನನ.

1944: ಭಾರತದ ಕೈಗಾರಿಕೋದ್ಯಮಿ ಆದಿತ್ಯ ವಿಕ್ರಮ್ ಬಿರ್ಲಾ (1944-95) ಹುಟ್ಟಿದ ದಿನ.

1915: ಕರಿಯ ಅಮೆರಿಕನ್ನರ ಪ್ರಭಾವಶಾಲಿ ವಕ್ತಾರ, ಸುಧಾರಕ ಬೂಕರ್ ಟಿ. ವಾಷಿಂಗ್ಟನ್ ಅವರು ತಮ್ಮ 59ನೇ ವಯಸಿನಲ್ಲಿ ನಿಧನರಾದರು.

1913: ರಬೀಂದ್ರನಾಥ ಟ್ಯಾಗೋರ್ ಅವರಿಗೆ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಯಿತು. ಆಗ ಶಾಂತಿ ನಿಕೇತನದಲ್ಲಿ ದೂರವಾಣಿ ಇರಲಿಲ್ಲ. ಹಾಗಾಗಿ ಕಲ್ಕತ್ತದಿಂದ (ಈಗಿನ ಕೋಲ್ಕತ್ತಾ) ಕೇಬಲ್ ಮೂಲಕ ಸುದ್ದಿ ಕಳುಹಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆ ಟ್ಯಾಗೋರ್ ಅವರದಾಯಿತು.

1910: ಪ್ರಾಧ್ಯಾಪಕ, ಸಾಹಿತಿ, ವಿಮರ್ಶಕ ಸ.ಸ. ಮಾಳವಾಡ ಅವರು ಸಂಗನಬಸಪ್ಪ- ಕಾಳಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ಜನಿಸಿದರು.

1891: ಸರ್ ಫ್ರೆಡರಿಕ್ ಗ್ರಾಂಟ್ ಬಂಟಿಂಗ್ (1891-1941) ಹುಟ್ಟಿದ ದಿನ. ವೈದ್ಯರಾದ ಇವರು ಚಾರ್ಲ್ಸ್ ಎಚ್. ಬೆಸ್ಟ್ ನೆರವಿನೊಂದಿಗೆ ಇನ್ಸುಲಿನನ್ನು ಕಂಡು ಹಿಡಿದರು.

1889: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (1889-1964) ಹುಟ್ಟಿದ ದಿನ.

1863: ಅಮೆರಿಕದ ಕೈಗಾರಿಕಾ ರಾಸಾಯನಿಕ ತಜ್ಞ, ಸಂಶೋಧಕ ಲಿಯೋ ಹೆಂಡ್ರಿಕ್ ಬೆಕೆಲೈಟ್ ಹುಟ್ಟಿದ ದಿನ. ಈತ ಕಂಡು ಹಿಡಿದ `ಬೆಕಲೈಟ್' ಆಧುನಿಕ ಪ್ಲಾಸ್ಟಿಕ್ ಉದ್ಯಮದ ಹುಟ್ಟಿಗೆ ಕಾರಣವಾಯಿತು.

1687: ಇಂಗ್ಲಿಷ್ ನಟಿ ಹಾಗೂ ಎರಡನೇ ಚಾರ್ಲ್ಸ್ ನ ಪ್ರೇಯಸಿ ನೆಲ್ ಗ್ವಿನ್ ತನ್ನ 37ನೇ ವಯಸ್ಸಿನಲ್ಲಿ ಮೃತಳಾದಳು.

1681: ಈಸ್ಟ್ ಇಂಡಿಯಾ ಕಂಪೆನಿಯು ಬಂಗಾಳವನ್ನು ಪ್ರತ್ಯೇಕ ಪ್ರಾಂತ್ಯ ಎಂದು ಘೋಷಿಸಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement