ಇಂದಿನ ಇತಿಹಾಸ
ಡಿಸೆಂಬರ್ 19
ಮೂಡಬಿದಿರೆಯ ಮಿಜಾರಿನ ಶೋಭಾವನದಲ್ಲಿ ನಡೆಯುವ `2008ರ ಆಳ್ವಾಸ್ ವಿರಾಸತ್'ನಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರನ್ನು 'ವಿರಾಸತ್ ಪ್ರಶಸ್ತಿ- 2007' ನೀಡಿ ಗೌರವಿಸಲು ನಿರ್ಧರಿಸಲಾಯಿತು.
2007: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಈದಿನ ಬೆಳಗ್ಗೆ ಸಂಭವಿಸಿದ ರೈಲು ಅಪಘಾತದಲ್ಲಿ 58ಕ್ಕೂ ಹೆಚ್ಚು ಜನ ದುರ್ಮರಣಕ್ಕೀಡಾದರು. 120 ಜನರು ಗಾಯಗೊಂಡರು. ಕರಾಚಿಯಿಂದ 300 ಕಿ.ಮೀ ದೂರದಲ್ಲಿರುವ ನೌಶೇರ್ ಫೆರೊಜ್ ಎಂಬಲ್ಲಿ ಕರಾಚಿ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಯಿತು. ವೇಗವಾಗಿ ಚಲಿಸುತ್ತಿದ್ದಾಗ, ರೈಲಿನ ಎಂಜಿನ್ನಿನಿಂದ 15 ಬೋಗಿಗಳು ಪ್ರತ್ಯೇಕಗೊಂಡು ಹಳಿ ತಪ್ಪಿದ ಕಾರಣ ದುರ್ಘಟನೆ ಸಂಭವಿಸಿತು.
2007: ಐಎಎಸ್ ಅಧಿಕಾರಿ ಡಾ.ವಿ. ಚಂದ್ರಶೇಖರ್, ಇಬ್ಬರು ಮುಖ್ಯ ಎಂಜಿನಿಯರುಗಳು, ವಾಣಿಜ್ಯ ತೆರಿಗೆ ಇಲಾಖೆಯ ಒಬ್ಬ ಜಂಟಿ ಆಯುಕ್ತ, ಒಬ್ಬ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ 13 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 30 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಬೆಂಗಳೂರು ನಗರ, ಗ್ರಾಮಾಂತರ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ 13 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಯಿತು.
2007: ತನ್ನ ಊರಿನ 50 ಸಾವಿರ ಜನರಿಗೆ ಕುಡಿಯುವ ನೀರು ಒದಗಿಸಲೇ ಬೇಕು ಎಂದು ಹಠ ಹಿಡಿದ ಯುವಕ ಬಸವರಾಜ ನಂದಿಕೇಶ್ವರ ಎಂಬ ಯುವಕನೊಬ್ಬ ತಲೆಯ ಮೇಲೆ 25 ಕೆ.ಜಿ ಭಾರದ ಕಲ್ಲು ಹೊತ್ತುಕೊಂಡು ವಿಜಾಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತತ ಮೂರು ಗಂಟೆಗಳ ಕಾಲ `ಗಾಂಧೀಗಿರಿ' ನಡೆಸುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದರು. ಮುದ್ದೇಬಿಹಾಳ ಪಟ್ಟಣದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ನಡೆಸುತ್ತಾ ಬಂದ ನಾಲ್ಕು ವರ್ಷಗಳ ಹೋರಾಟ ಇದರೊಂದಿಗೆ ವಿಶಿಷ್ಟ ಸ್ವರೂಪ ಪಡೆದುಕೊಂಡಿತು.
2007: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಮೂವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡದ ಜತೆ 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1991-92ರ ಅವಧಿಯಲ್ಲಿ 6.29 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದ ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬಿನಯ್ ಕುಮಾರ್ ಸಹಾಯ್ ಅವರು 43 ಜನರು ತಪ್ಪಿತಸ್ಥರು ಎಂದು ತೀರ್ಪು ನೀಡಿದರು. ಈ ಪೈಕಿ ಜೆ. ಬೆಂಗರಾಜ್, ಡಾ.ಕೃಷ್ಣಮೋಹನ್ ಪ್ರಸಾದ್ ಮತ್ತು ಡಾ.ಕೀರ್ತಿ ನಾರಾಯಣ್ ಝಾ ಅವರಿಗೆ ತಲಾ ಒಂದು ಕೋಟಿ ರೂಪಾಯಿ ದಂಡ ಮತ್ತು 6 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಉಳಿದ 40 ಮಂದಿಗೆ 5 ಲಕ್ಷ ದಿಂದ 45 ಲಕ್ಷ ರೂಪಾಯಿವರೆಗೆ ದಂಡ ಹಾಗೂ 5 ರಿಂದ 6 ವರ್ಷಗಳ ಶಿಕ್ಷೆ ನೀಡಲಾಯಿತು. ಮೇವು ಹಗರಣದ ಇತರ ಪ್ರಕರಣಗಳಿಗೆ ಹೋಲಿಸಿದರೆ ಈ ತೀರ್ಪು ಅಭೂತಪೂರ್ವ. ಇಲ್ಲಿಯವರೆಗೆ ಮೇವು ಹಗರಣದಲ್ಲಿ ಯಾರಿಗೂ ಇಷ್ಟು ದಂಡ ವಿಧಿಸಿರಲಿಲ್ಲ.
2007: ಅಮೆರಿಕದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ `ಬಿಕಿನಿ ಕೊಲೆಗಾರ' ಚಾರ್ಲ್ಸ್ ಶೋಭರಾಜ್ ಗೆ ವಿಧಿಸಲಾದ ಮರಣ ದಂಡನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲು ನಿರಾಕರಿಸಿದ ನೇಪಾಳದ ಸುಪ್ರೀಂಕೋರ್ಟ್ `ಯಥಾಸ್ಥಿತಿ' ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ತೀರ್ಪು ನೀಡಿದ ಸುಪ್ರೀಂಕೋರ್ಟ್, ಶೋಭರಾಜ್ ವಿರುದ್ಧದ ಮತ್ತೊಂದು ನಕಲಿ ಪಾಸ್ ಪೋರ್ಟ್ ಪ್ರಕರಣದ ವಿಚಾರಣೆಯನ್ನು ಪುನಃ ಆರಂಭಿಸುವಂತೆ ಆದೇಶ ನೀಡಿತು. ಎರಡೂ ಪ್ರಕರಣಗಳ ವಿಚಾರಣೆಯನ್ನು ಏಕಕಾಲದಲ್ಲಿ ನಡೆಸಲೂ ನ್ಯಾಯಪೀಠ ನಿರ್ಧರಿಸಿತು. ಅಮೆರಿಕದ ಮಹಿಳೆ ಕೊನಿ ಬ್ರೊಂಜಿಕ್ ಅವರ ಕೊಲೆಗೆ ಸಂಬಂಧಿಸಿದಂತೆ ಶೋಭರಾಜ್ ಗೆ ಕಠ್ಮಂಡು ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ಇದನ್ನು ಶೋಭರಾಜ್ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದ. 1970ರ ದಶಕದಲ್ಲಿ ಭಾರತ, ಥಾಯ್ಲೆಂಡ್, ನೇಪಾಳದಲ್ಲಿ 12ಕ್ಕೂ ಹೆಚ್ಚು ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಶೋಭರಾಜ್ ಮೇಲಿತ್ತು.
2007: ಮೂಡಬಿದಿರೆಯ ಮಿಜಾರಿನ ಶೋಭಾವನದಲ್ಲಿ ನಡೆಯುವ `2008ರ ಆಳ್ವಾಸ್ ವಿರಾಸತ್'ನಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರನ್ನು 'ವಿರಾಸತ್ ಪ್ರಶಸ್ತಿ- 2007' ನೀಡಿ ಗೌರವಿಸಲು ನಿರ್ಧರಿಸಲಾಯಿತು.
2007: ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ `ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಈ ವರ್ಷ ದೆಹಲಿಯ ಕರ್ನಾಟಕ ಸಂಘಕ್ಕೆ ನೀಡಲಾಯಿತು.
2006: ವಿಶ್ವಕಪ್ ಚಾಂಪಿಯನ್ ಇಟಲಿ ಫುಟ್ಬಾಲ್ ತಂಡದ ನಾಯಕ ಫ್ಯಾಬಿಯೋ ಕನಾವಾರೋ ಅವರು ಫಿಫಾ `ವರ್ಷದ ಶ್ರೇಷ್ಠ ಆಟಗಾರ' ಪ್ರಶಸ್ತಿ ಗೆದ್ದರು. ಇದರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ರಕ್ಷಣಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನಾವಾರೋ ಅವರು ಈ ಹಾದಿಯಲ್ಲಿ ಫ್ರಾನ್ಸಿನ ಜೆನಡಿನ್ ಜಿಡಾನ್ ಹಾಗೂ ಬ್ರೆಜಿಲಿನ ರೋನಾಲ್ಡಿನೋ ಅವರನ್ನು ಹಿಂದೆ ಹಾಕಿದರು.
2006: ಡಿಸ್ಕವರಿ ಬಾಹ್ಯಾಕಾಶ ನೌಕೆಯ ಸೌರಶಕ್ತಿ ಸಂಗ್ರಹ ಪೆಟ್ಟಿಗೆಯಲ್ಲಿ ಕಾಣಿಸಿಕೊಂಡ ದೋಷವನ್ನು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶ ನಡಿಗೆ ನಡೆಸಿ ಸರಿ ಪಡಿಸಿದರು.
2005: ಖ್ಯಾತ ಗ್ಲೈಡರ್ ಹಾರಾಟಗಾರ ಹಾಗೂ ರೇಮಂಡ್ ಲಿಮಿಟೆಡ್ ಅಧ್ಯಕ್ಷ ವಿಜಯಪಥ್ ಸಿಂಘಾನಿಯಾ ಮುಂಬೈ ಷರೀಫ್ ಆಗಿ ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಸಿಂಘಾನಿಯಾ ಅವರಿಗೆ ಮುಂಬೈಯ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.
2005: ತಾರ್ ಶಹನಾಯಿ ವಾದಕ ಹಾಗೂ ಭಾರತೀಯ ಅರಣ್ಯಪಡೆ ಸೇವೆಯ ನಿವೃತ್ತ ಅಧಿಕಾರಿ ಎಚ್.ಟಿ. ಕೊಪ್ಪಿಕರ್ (88) ಹೊಸಪೇಟೆಯಲ್ಲಿ ನಿಧನರಾದರು. ಕೊಪ್ಪಿಕರ್ ಮೂಲದವರಾದ ಕೊಪ್ಪಿಕರ್ ಅವರು ತಮ್ಮ ಸಂಬಂಧಿಯೊಬ್ಬರು ಸೃಷ್ಟಿಸ್ದಿದ `ತಾರ್ ಶಹನಾಯಿ' ಎಂಬ ಆಧುನಿಕ ತಂತಿವಾದ್ಯ ಕಂಡು ಆಕರ್ಷಿತರಾಗಿ ಅವರಿಂದ ಒಂದು ಉಪಕರಣ ಮಾಡಿಸಿಕೊಂಡು ಅಭ್ಯಾಸ ಮಾಡಿದರು. ಅದರಲ್ಲೇ ಸಾಧನೆಗೈದು ರಾಷ್ಟ್ರದಲ್ಲಿ ಆಧುನಿಕ ವಾದ್ಯವನ್ನು ಪರಿಚಯಿಸಿ, ಆಕಾಶವಾಣಿ ಸೇರಿದಂತೆ ಹಲವೆಡೆ ಕಾರ್ಯಕ್ರಮವನ್ನೂ ನೀಡಿದರು. ಈ ಸಂಗೀತ ಸಾಧನೆಗೆ ಇವರಿಗೆ ಹಲವು ಸನ್ಮಾನ ಮತ್ತು ಪ್ರಶಸ್ತಿ ಬಂದಿದ್ದವು.
2005: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷರಾಗಿ ಓಮರ್ ಅಬ್ದುಲ್ಲಾ ಸತತ ಎರಡನೇ ಬಾರಿಗೆ ಆಯ್ಕೆಯಾದರು.
2005: ಸಂಸದರ ಪ್ರದೇಶಾಭಿವೃದ್ಧಿ ನಿಧಿುಂದ ಹಣ ಮಂಜೂರು ಮಾಡಲು ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರು ರುಷುವತ್ತು ಕೇಳಿದ ಇನ್ನೊಂದು ಸ್ಫೋಟಕ ಸುದ್ದಿಯನ್ನು ಸ್ಟಾರ್ ನ್ಯೂಸ್ ಪ್ರಸಾರ ಮಾಡಿತು. 'ಚಕ್ರವ್ಯೂಹ' ಹೆಸರಿನ ಈ ಕಾರ್ಯಾಚರಣೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮಾವೊ, ಎನ್ ಡಿ ಎ ಸರ್ಕಾರದಲ್ಲಿ ಸಚಿವರಾಗಿದ್ದ ಫಗನ್ ಸಿಂಗ್ ಕುಲಾಸ್ತೆ ಸೇರಿದಂತೆ 7 ಮಂದಿ ಸಂಸತ್ ಸದಸ್ಯರು ಸಿಕ್ಕಿ ಬಿದ್ದಿರುವುದಾಗಿ ಸ್ಟಾರ್ ನ್ಯೂಸ್ ಪ್ರಕಟಿಸಿತು. ಆರೋಪಿ ಸಂಸದರು: ಅಲೆಮಾವೊ ಚರ್ಚಿಲ್ (ಕಾಂಗ್ರೆಸ್), ಫಗನ್ ಸಿಂಗ್ ಕುಲಾಸ್ತೆ, ರಾಮಸ್ವರೂಪ ಕೋಲಿ, ಚಂದ್ರಪ್ರತಾಪ ಸಿಂಗ್ (ಎಲ್ಲರೂ ಬಿಜೆಪಿ), ಪಾರಸನಾಥ್ ಯಾದವ್ (ಎಸ್ ಪಿ). ರಾಜ್ಯಸಭೆಯಲ್ಲಿ ಆರೋಪಿಗಳು: ಸಾಕ್ಷಿ ಮಹಾರಾಜ್ (ರಾಷ್ಟ್ರೀಯ ಕ್ರಾಂತಿದಳ), ಈಶನ್ ಸಿಂಗ್ (ಬಿ ಎಸ್ ಪಿ).
2001: ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಖ್ಯಾತ ಸೃಷ್ಟಿ `ದಿ ಕಾಮನ್ ಮ್ಯಾನ್' ಪ್ರತಿಮೆಯನ್ನು ಅನಾವರಣಗೊಳಿಸಿದರು. ಪುಣೆಯ ಸಿಂಬಿಯೋಸಿಸ್ ಸೊಸೈಟಿಯ ನೂತನ ಕಟ್ಟಡ ವಿಶ್ವಭವನದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. `ಕಾರ್ಟೂನ್ ವ್ಯಕ್ತಿತ್ವ' ಒಂದರ ಅತ್ಯಂತ ಎತ್ತರದ ಲೋಹದ ಪ್ರತಿಮೆ ಇದು. ಈ ಕಂಚಿನ ಪ್ರತಿಮೆಯ ಎತ್ತರ ಎಂಟು ಅಡಿಗಳು.
1997: ಜೇಮ್ಸ್ ಕ್ಯಾಮೆರೋನ್ ಅವರ `ಟೈಟಾನಿಕ್' ಚಲನಚಿತ್ರ ಅಮೆರಿಕಾದ ಚಿತ್ರ ಮಂದಿರಗಳಲ್ಲಿ ಪ್ರದರ್ಶನಗೊಂಡಿತು.
1988: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗುಜರಾತಿ ಸಾಹಿತಿ ಉಮಾಶಂಕರ ಜೋಶಿ ನಿಧನ.
1984: ಹಾಂಕಾಂಗನ್ನು 1997ರ ಜುಲೈ 1ರಂದು ಚೀನೀ ಸಾರ್ವಭೌಮತ್ವಕ್ಕೆ ಹಿಂತಿರುಗಿಸುವ ಒಪ್ಪಂದಕ್ಕೆ ಬ್ರಿಟನ್ ಮತ್ತು ಚೀನಾ ಸಹಿ ಹಾಕಿದವು.
1961: ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾ ಮುಕ್ತಗೊಂಡಿತು. ದಾಮನ್ ಹಾಗೂ ದಿಯು ಕೂಡಾ ಇದೇ ದಿನ ವಿದೇಶೀ ಆಳ್ವಿಕೆಯಿಂದ ವಿಮುಕ್ತಗೊಂಡಿತು. ಮೇಜರ್ ಜನರಲ್ ಜೆ.ಪಿ. ಕ್ಯಾಂಡೆತ್ ಗೋವಾದ ಸೇನಾ ಗವರ್ನರ್ ಆಗಿ ನೇಮಕಗೊಂಡರು.
1956: ವಿನಯಶೀಲರಾದ 48ರ ಹರೆಯದ ಸದಸ್ಯ ಎಸ್. ಆರ್. ಕಂಠಿ ಅವರನ್ನು ಈದಿನ ಆರಂಭಗೊಂಡ ವಿಧಾನಸಭೆಯು ತನ್ನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಚುನಾಯಿಸಿತು.
1952: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರು.
1918: ರಾಬರ್ಟ್ ರಿಪ್ಲೀ ಅವರ ಕಾಮಿಕ್ `ಬಿಲೀವ್ ಇಟ್ ಆರ್ ನಾಟ್!' ನ್ಯೂಯಾರ್ಕ್ ಗ್ಲೋಬ್ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಇದಕ್ಕೆ ಓದುಗರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹೀಗಾಗಿ ಇದು ವಾರಕ್ಕೊಮ್ಮೆ ಹಾಗೂ ನಂತರ ಪ್ರತಿದಿನ ಬರಲು ಆರಂಭವಾಯಿತು.
1916: ಬರ್ಮಾದ (ಈಗಿನ ಮ್ಯಾನ್ಮಾರ್) ಕೊನೆಯ ದೊರೆ ಥೈಬಾ ಅವರು ಭಾರತದ ರತ್ನಗಿರಿ ಕೋಟೆಯಲ್ಲಿ ದೇಶಭ್ರಷ್ಟರಾಗಿದ್ದಾಗ ನಿಧನರಾದರು. ಬ್ರಿಟಿಷರು 1885ರಲ್ಲಿ ಅಪ್ಪರ್ ಬರ್ಮಾ ಮೇಲೆ ದಾಳಿ ನಡೆಸಿ ಥೈಬಾ ಅವರನ್ನು ಪದಚ್ಯುತಿಗೊಳಿಸಿದ್ದರು. ಅಪ್ಪರ್ ಬರ್ಮಾವನ್ನು ಬ್ರಿಟಿಷ್ ಬರ್ಮಾದೊಳಗಿನ ರಾಜ್ಯಕ್ಕೆ ಸೇರಿಸಿಕೊಳ್ಳಲಾಗಿತ್ತು.
1906: ಲಿಯೋನಿದ್ ಇಲಿಚ್ ಬ್ರೆಜ್ನೇವ್ (1906-1982) ಹುಟ್ಟಿದ ದಿನ. ಸೋವಿಯತ್ ಮುತ್ಸದ್ದಿ ಹಾಗೂ ಕಮ್ಯೂನಿಸ್ಟ್ ಪಕ್ಷದ ಮುಖ್ಯಸ್ಥರಾಗಿದ್ದ ಇವರು 18 ವರ್ಷಗಳ ಕಾಲ ಸೋವಿಯತ್ ಒಕ್ಕೂಟದ ನಾಯಕರಾಗಿದ್ದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment