Wednesday, January 28, 2009

ಇಂದಿನ ಇತಿಹಾಸ History Today ಜನವರಿ 26

ಇಂದಿನ ಇತಿಹಾಸ

ಜನವರಿ 26

ಇಂದು ಗಣರಾಜ್ಯದಿನ. 1950ರಲ್ಲಿ ಈದಿನ  ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಾಮ್ರಾಟ ಅಶೋಕನ ಲಾಂಛನ `ಸಿಂಹ'ವನ್ನು ರಾಷ್ಟ್ರೀಯ ಲಾಂಛನವಾಗಿ ಅಂಗೀಕರಿಸಲಾಯಿತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. 1965ರಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅಂಗೀಕರಿಸಲಾಯಿತು. 1930ರಲ್ಲಿ ಈದಿನವನ್ನು `ಪೂರ್ಣ ಸ್ವರಾಜ್' ದಿನವಾಗಿ ಆಚರಿಸಲಾಗಿತ್ತು. ಈ ದಿನವನ್ನು ಪೂರ್ಣ ಸ್ವರಾಜ್ ದಿನವಾಗಿ ಆಚರಿಸಲು 1930ರ ಜನವರಿ 17ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಂಡಿತ್ತು. 

2008: ಚೀನಾದಲ್ಲಿ ದಶಕದಲ್ಲೇ ಕಂಡರಿಯದಂತಹ ಭಾರಿ ಹಿಮಪಾತ ಸಂಭವಿಸಿ, ದೇಶದ ಹಲವು ಭಾಗಗಳಲ್ಲಿ ಜನಜೀವನ  ತೀವ್ರ ಅಸ್ತವ್ಯಸ್ತಗೊಂಡಿತು. ಕೇಂದ್ರ ಭಾಗದ ಹುನಾನ್ ಪ್ರಾಂತದಲ್ಲಿ ಹಿಮಪಾತದಿಂದ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗಿ, 136 ವಿದ್ಯುತ್ ಚಾಲಿತ ಪ್ರಯಾಣಿಕ ರೈಲುಗಳು ಸ್ಥಗಿತಗೊಂಡವು ಇಲ್ಲವೇ ವಿಳಂಬವಾಗಿ ಚಲಿಸಿದವು. ಕೆಟ್ಟುಹೋದ ವಿದ್ಯುತ್  ಪೂರೈಕೆ ವ್ಯವಸ್ಥೆ ಸರಿಪಡಿಸಲು 10 ಸಾವಿರ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬೀಜಿಂಗ್ ಮತ್ತು ಗ್ವಾಂಗ್ ಜುವಾ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲೂ 40 ಸಾವಿರಕ್ಕೂ ಅಧಿಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಕ್ಕಿ ಹಾಕಿಕೊಂಡರು.

2008: ಹಿರಿಯ ಕಾಂಗ್ರೆಸ್ಸಿಗ, ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬ್ಲೇಸಿಯಸ್ ಎಂ. ಡಿಸೋಜ (69) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಬ್ಲೇಸಿ ಪತ್ನಿ ಐರಿನ್ ಜಾಯ್ಸ್ ಡಿಸೋಜ 1979ರಲ್ಲೇ ನಿಧನರಾಗಿದ್ದರು. 1938ರ ಫೆಬ್ರವರಿ 22ರಂದು ಜನಿಸಿದ ಬ್ಲೇಸಿಯಸ್ ಡಿಸೋಜಾ ಅವರು ಬಿಕಾಂ, ಎಲ್ ಎಲ್ ಬಿ ಪದವೀಧರರು. 1980ರಿಂದ 1985ರ ತನಕ ವಿಧಾನ ಪರಿಷತ್ ಸದಸ್ಯ, 1985ರಿಂದ 1994ರ ತನಕ ವಿಧಾನಸಭೆ ಸದಸ್ಯ, ಎಂ.ವೀರಪ್ಪ ಮೊಯಿಲಿ ಅವರ ಮಂತ್ರಿ ಮಂಡಲದಲ್ಲಿ 1991-92ರಲ್ಲಿ ರಾಜ್ಯ ಕಾನೂನು ಸಚಿವ, 1992ರಿಂದ 1994ರ ತನಕ ರಾಜ್ಯ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ 1979ರಿಂದ 1992ರ ತನಕ ಹಾಗೂ 2001ರಿಂದ 2007ರ ತನಕ ಕರ್ತವ್ಯ ನಿರ್ವಹಿಸಿದ್ದರು. 1998ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. 2004ರಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.

2008: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಟಿ ಟಿ ಇ ನಾಯಕ ಮುರುಳಿಧರನ್ ಅಲಿಯಾಸ್ ಕರ್ನಲ್ ಕರುಣಾ ಅವರಿಗೆ ಬ್ರಿಟನ್ ನ್ಯಾಯಾಲಯ ಒಂಬತ್ತು ತಿಂಗಳ ಸಜೆ ವಿಧಿಸಿತು. ನಕಲಿ ರಾಜತಾಂತ್ರಿಕ ಪಾಸ್ ಪೋರ್ಟ್ ಹೊಂದಿದ  ಆರೋಪದ ಮೇಲೆ ಇವರನ್ನು  ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.

2008: ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಅವರು ಆಗ್ರಾದ ಅಮರ ಪ್ರೇಮದ ಸಂಕೇತ ವಿಶ್ವವಿಖ್ಯಾತ ತಾಜ್ ಮಹಲಿಗೆ ಭೇಟಿ ನೀಡಿದರು. ಆದರೆ ಅವರ ಗೆಳತಿ ಹಾಗೂ ಖ್ಯಾತ ರೂಪದರ್ಶಿ ಕಾರ್ಲಾ ಬ್ರೂನಿ ಮಾತ್ರ  ಜೊತೆಗೆ ಇರಲಿಲ್ಲ.

2008: ಭಾರತ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಶೀತಮಾರುತದ ತೀವ್ರತೆ ಹೆಚ್ಚಿತು. ಗುಜರಾತಿನ ಸಬರ್ ಕಾಂತ ಜಿಲ್ಲೆಯಲ್ಲಿ ಕೊರೆಯುವ ಚಳಿಯಿಂದಾಗಿ ಮೂವರು ಮೃತರಾದರು. ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಚಳಿ ಇಷ್ಟೊಂದು ತೀವ್ರತೆ ಪಡೆದದ್ದು ಇದೇ ಮೊದಲು.

2008: ರೈಲ್ವೆ ಅಪಘಾತ ತಪ್ಪಿಸಿದ ಚಿಕ್ಕಮಗಳೂರಿನ ಮಂಜುನಾಥ್, 200 ಮಂದಿ ಬಡ ಹೃದ್ರೋಗಿಗಳಿಗೆ ಧನ ಸಹಾಯ ಮಾಡಿದ ಬಿ.ಶಾಂತಿಲಾಲ್ ಕಂಕಾರಿಯಾ ಸೇರಿದಂತೆ 11 ಮಂದಿ ಸಾಧಕರಿಗೆ ಹಾಗೂ ಎರಡು ಸಂಸ್ಥೆಗಳಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

2008: ಅಡಿಲೇಡಿನಲ್ಲಿ ಒಂದು ದಿನ ಹಿಂದೆ ಅತಿ ಹೆಚ್ಚು ವಿಕೆಟ್ ಪತನಕ್ಕೆ ಕಾರಣರಾದ ವಿಕೆಟ್ ಕೀಪರ್ ಎನ್ನುವ ವಿಶ್ವ ದಾಖಲೆ ಶ್ರೇಯ ಪಡೆದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಈದಿನ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಹಿಂದಿನ ದಿನವಷ್ಟೇ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಅವರನ್ನು ಹಿಂದೆ ಹಾಕಿ 414 `ಬಲಿ'ಗಳ ಸಾಧನೆಯೊಂದಿಗೆ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿಯೇ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

 2008: ಇಷ್ಟಾರ್ಥ ಸಿದ್ಧಿಯಾದ ಮೇಲೆ ದೇವತೆಗೆ ಹರಕೆ ತೀರಿಸುವ ಸಲುವಾಗಿ 24 ಅಡಿ ಎತ್ತರದ ರಥದ ಮೇಲಿಂದ ಮಕ್ಕಳನ್ನು ಕೆಳಗೆ ಎಸೆಯುವ ವಿಶಿಷ್ಟ ಸಂಪ್ರದಾಯ ವಿಜಾಪುರ ಜಿಲ್ಲೆಯಲ್ಲಿ ಜೀವಂತವಾಗಿದ್ದು ಸಮೀಪದ ವಂದಾಲ ಗ್ರಾಮದಲ್ಲಿ ಈದಿನ ಜಾತ್ರೆಯಲ್ಲಿ 20ಕ್ಕೂ ಹೆಚ್ಚು ಮಕ್ಕಳನ್ನು ರಥದಿಂದ ಕೆಳಕ್ಕೆ ಎಸೆಯಲಾಯಿತು. ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿನ ವಂದಾಲ ಗ್ರಾಮದಲ್ಲಿ ಕ್ರಿಸ್ತಶಕ 1825ರಿಂದ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತ ಬಂದಿದ್ದು, ರಥೋತ್ಸವದ ದಿನದಂದು ಗ್ರಾಮಸ್ಥರು ತಮ್ಮ ಹರಕೆ ಈಡೇರಿದ್ದಕ್ಕಾಗಿ ಹಸುಗೂಸುಗಳನ್ನು ಎಸೆಯುವ ಸಂಪ್ರದಾಯ ಪೋಷಿಸಿಕೊಂಡು ಬಂದಿದ್ದರು.

2008: ಅದ್ಭುತ ಟೆನಿಸ್ ಆಟದ ಪ್ರದರ್ಶನ ನೀಡಿದ ರಷ್ಯಾದ ಮರಿಯಾ ಶರ್ಪೋವಾ ಮೆಲ್ಬೋರ್ನಿನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿದರು. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಶರ್ಪೋವಾ 7-5, 6-3 ರಲ್ಲಿ ಸರ್ಬಿಯಾದ ಅನಾ ಇವನೋವಿಕ್ ಅವರನ್ನು ಮಣಿಸಿ ಇದೇ ಮೊದಲ ಬಾರಿಗೆ ಮೆಲ್ಬೋರ್ನ್ ಪಾರ್ಕಿನ `ರಾಣಿ' ಎನಿಸಿಕೊಂಡರು. 20ರ ಹರೆಯದ ರಷ್ಯನ್ ಚೆಲುವೆ ವೃತ್ತಿಜೀವನದಲ್ಲಿ ಪಡೆದ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದು. ಈ ಹಿಂದೆ 2004ರಲ್ಲಿ ವಿಂಬಲ್ಡನ್ ಹಾಗೂ 2006ರಲ್ಲಿ ಅಮೆರಿಕ ಓಪನ್ನಿನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

2008: ಬೆಳಗಾವಿ ಹೋಟೆಲ್ ಉದ್ಯಮಿ ಕೆ. ಅಣ್ಣೆ ಭಂಡಾರಿ ಅವರಿಗೆ ಬೆಂಗಳೂರಿನಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟವು ಬಸವನಗುಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಕೂಟದ 23ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಎ. ವಿವೇಕ ರೈ ಪ್ರಶಸ್ತಿ ಪ್ರದಾನ ಮಾಡಿದರು.  

2008: ಗಣರಾಜ್ಯೋತ್ಸವದ ದಿನ ಬೆಳಗ್ಗೆ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್, ಮಂಗಳೂರಿನಲ್ಲಿ ನಿರಂತರ ಸಮೂಹ ಗಾಯನದ ಮೂಲಕ ವಿಶ್ವದಾಖಲೆ ಸ್ಥಾಪಿಸುವ ಸಾಹಸಕ್ಕೆ ಚಾಲನೆ ನೀಡಿತು. ಬೆಳಗಿನ ಚಳಿ ಕರಗುತ್ತಿದ್ದಂತೆಯೇ ಶಕ್ತಿನಗರ ಕಲಾಂಗಣದ ಆಂಫಿ ಥಿಯೇಟರಿನಲ್ಲಿ ಸರಿಯಾಗಿ ಆರು ಗಂಟೆಗೆ `ಕೊಂಕಣಿ ನಿರಂತರಿ' ಆರಂಭವಾಯಿತು. ವಿಶ್ವದಾಖಲೆಗೆ ಸೇರುವ ಯತ್ನವಾಗಿ ಸತತ 40 ಗಂಟೆಗಳ ಈ ನಿರಂತರ ಸಮೂಹ ಗಾಯನ ಕಾರ್ಯಕ್ರಮ `ಕೊಂಕಣಿ ನಿರಂತರಿ'ಗೆ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ ಶುಭ ಹಾರೈಸಿದರು.

2008: ಇನ್ಫೋಸಿಸ್ಸಿನ ಎನ್. ಆರ್. ನಾರಾಯಣ ಮೂರ್ತಿ ಅವರಿಗೆ  ಫ್ರಾನ್ಸ್ ಸರ್ಕಾರದ ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2008: ಪ್ರಜಾಕೋಟಿಗೆ ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತಿಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ನಡೆದ 59ನೇ ಗಣರಾಜ್ಯೋತ್ಸವ ಪೆರೇಡಿಗೆ ದೇಶ ಸಾಕ್ಷಿಯಾಯಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೇನೆಯಿಂದ ಗೌರವವಂದನೆ ಸ್ವೀಕರಿಸುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎಂಬ ದಾಖಲೆಯೂ ಈ ಬಾರಿಯ ಗಣರಾಜ್ಯೋತ್ಸವ ಇತಿಹಾಸಕ್ಕೆ ಸೇರ್ಪಡೆಯಾಯಿತು.

2007: ಬೆಂಗಳೂರು ನಗರದ ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಆರೋಗ್ಯ ಸಚಿವ ಆರ್. ಅಶೋಕ ಅನಾವರಣಗೊಳಿಸಿದರು.

2007: ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ. ನ್ಯಾಯಾಲಯಗಳು ಇಂತಹ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಮಹಿಳೆಯೊಬ್ಬಳು ಯೋಜನೆಯೊಂದರ ಒಂದೇ ಹುದ್ದೆಯಲ್ಲಿ 29 ವರ್ಷಗಳ ಕಾಲ ದುಡಿದಿದ್ದರೂ, ಕೆಲಸದ ಕಾಯಮಾತಿ ಪಡೆಯುವ ಯಾವುದೇ ಹಕ್ಕನ್ನು ಆಕೆ ಹೊಂದುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಪ್ರತಿವಾದಿ ಕೆ. ರಾಜ್ಯಲಕ್ಷ್ಮಿ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿ ಆಕೆಯ ನೇಮಕಾತಿಯನ್ನು ಕಾಯಂಗೊಳಿಸುವಂತೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಚೆನ್ನೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕುತ್ತಾ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ಕೆ. ರಾಜ್ಯಲಕ್ಷ್ಮಿ ಅವರು 1975ರ ಏಪ್ರಿಲ್ 1ರಂದು ಒಂದು ವರ್ಷದ ಯೋಜನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್) ನೇಮಕಗೊಂಡಿದ್ದರು. ಕೇಂದ್ರ ಸರ್ಕಾರದಿಂದ ಲಭಿಸುವ ಅನುದಾನವನ್ನು ಅನುಸರಿಸಿ ವರ್ಷದಿಂದ ವರ್ಷಕ್ಕೆ ಈ ನೇಮಕಾತಿಯನ್ನು ವಿಸ್ತರಿಸಬಹುದು ಎಂಬುದು ನೇಮಕಾತಿಯ ಷರತ್ತಾಗಿತ್ತು. ಈ ಯೋಜನೆ ಹಲವಾರು ವರ್ಷಗಳವರೆಗೆ ಮುಂದುವರೆಯುತ್ತಾ ಸಾಗಿತು. ಹೀಗಾಗಿ ರಾಜ್ಯಲಕ್ಷ್ಮಿ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮನವಿ ಸಲ್ಲಿಸಿದರು. ಆದರೆ ಐಸಿಎಂಆರ್ ಆಕೆಯ ಮನವಿಯನ್ನು ತಳ್ಳಿಹಾಕಿತು. ರಾಜ್ಯಲಕ್ಷ್ಮಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದರು. 1998ರ ಫೆಬ್ರವರಿ 25ರಂದು ನ್ಯಾಯಮಂಡಳಿಯು ಆಕೆಯ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿತು. ಐಸಿಎಂಆರ್ ಈ ತೀರ್ಪನ್ನು ಚೆನ್ನೈ ಹೈಕೋರ್ಟಿನಲ್ಲಿ ಪ್ರಶ್ನಿಸಿತು. ರಾಜ್ಯಲಕ್ಷ್ಮಿ ಕೂಡಾ 1975ರ ಏಪ್ರಿಲ್ 1ರಿಂದ ಅನ್ವಯವಾಗುವಂತೆಯೇ ತನ್ನ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕೋರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯದ ಆಧಾರದಲ್ಲಿ ರಾಜ್ಯಲಕ್ಷ್ಮಿ ಅವರ ಸೇವೆಯನ್ನು ನೇಮಕಾತಿ ದಿನದಿಂದಲೇ ಕಾಯಂಗೊಳಿಸಬೇಕು ಎಂದು ಆಕೆ ಪರ ವಕೀಲರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡೂ ಕಡೆ ವಾದಿಸಿದ್ದರು. ಸೇವಾ ನ್ಯಾಯಶಾಸ್ತ್ರದ ಪ್ರಕಾರ ಯಾವುದೇ ಒಂದು ಹುದ್ದೆಯ ಸೃಷ್ಟಿ ಅಥವಾ ಮಂಜೂರಾತಿ ಕಾರ್ಯಾಂಗದ ವಿಶೇಷ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಮಂಡಳಿಯ ಮನವಿಯನ್ನು ಎತ್ತಿ ಹಿಡಿಯಿತು.  

2007: ಒರಿಸ್ಸಾದ ದಕ್ಷಿಣ ಮಲ್ಕಾನ್ ಗಿರಿ ಜಿಲ್ಲೆಯ ಎಂವಿ-126 ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಾವೋವಾದಿ ಉಗ್ರಗಾಮಿಗಳು ಹುದುಗಿಸಿ ಇಟ್ಟಿದ್ದ ಭೂಸ್ಫೋಟಕ ಸ್ಫೋಟಗೊಂಡ ಪರಿಣಾಮವಾಗಿ ಒಬ್ಬ ಸಿ ಆರ್ ಪಿ ಎಫ್ ಯೋಧ ಮೃತನಾಗಿ ಇತರ ಇಬ್ಬರು ಯೋಧರು ಗಾಯಗೊಂಡರು. ಸಿ ಆರ್ ಪಿ ಎಫ್ ಮತ್ತು ಪೊಲೀಸ್ ಪಡೆಗಳು ತೆಲರಾಯ್ ಮತ್ತು ಎಂವಿ-126 ಗ್ರಾಮದ ನಡುವೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿತು. ಗಣರಾಜ್ಯ ದಿನೋತ್ಸವವನ್ನು ವಿರೋಧಿಸಿ ಮಾವೋವಾದಿಗಳು ಹೆದ್ದಾರಿಯಲ್ಲಿ ಕಡಿದುರುಳಿಸಿದ್ದ ಅಸಂಖ್ಯಾತ ಮರಗಳನ್ನು ತೆರವುಗೊಳಿಸುವ ಸಲುವಾಗಿ ಸಿ ಆರ್ ಪಿ ಎಫ್ ಮತ್ತು ಪೊಲೀಸರು ಹೊರಟಿದ್ದಾಗ ಈ ಘಟನೆ ನಡೆಯಿತು.

2007: ವಿದ್ಯಾರ್ಥಿಗಳಲ್ಲಿನ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು `ಸಾಕ್ಷಾತ್' ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ  ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ವಿದ್ಯಾರ್ಥಿಗಳು ಈ ಅಂತರ್ಜಾಲ ವಿಳಾಸಗಳಲ್ಲಿನ "ಟಿಣಜಡಿಚಿಛಿಣ'  ಪದವನ್ನು ಒತ್ತಿ ನಂತರ "ಣಚಿಟಞ ಣಠ ಣಜಚಿಛಿಜಡಿ'  ಆಯ್ಕೆಯನ್ನು ಒತ್ತುವ ಮೂಲಕ ಆನ್ ಲೈನ್ ಸಂವಾದದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಕೇಳುವ ವಿವಿಧ ವಿಷಯಗಳಿಗೆ ಅಂತರ್ಜಾಲದ ಮೂಲಕ ತಜ್ಞರು ಉತ್ತರ ನೀಡುವ ವ್ಯವಸ್ಥೆ ಇದು. ಅಂತರ್ಜಾಲದ ವಿಳಾಸ: "www.sakshat.ac.in  ಅಥವಾ http.sakshat.ignou.ac.in/sakshat/index.aspx ಅಥವಾ  http/www.sakshat.gov.in'.

2006: ಕರ್ನಾಟಕದ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಮುಂದುವರೆಸುವ ಬಗ್ಗೆ ಜನತಾದಳ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಮತ್ತು ಅವರ ಪುತ್ರ ಎಚ್. ಡಿ. ಕುಮಾರಸ್ವಾಮಿ ನಡುವಣ ಮಾತುಕತೆ ಮುರಿದು ಬಿದ್ದು, ಇಬ್ಬರೂ ಕವಲುದಾರಿಯಲ್ಲಿ ಸಾಗಿದರು. ಇದರಿಂದ ಜೆಡಿ(ಎಸ್) - ಬಿಜೆಪಿ ಪರ್ಯಾಯ ಸರ್ಕಾರ ರಚನೆಗೆ ಇದ್ದ ತೊಡಕು ಬಗೆಹರಿದಂತಾಯಿತು.

2006: ಬಿಹಾರಿನ ಹಿಂದಿನ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿ ವಿವಾದಕ್ಕೆ ಸಿಲುಕಿಕೊಂಡು ಸುಪ್ರೀಂಕೋರ್ಟಿನಿಂದ ಛೀಮಾರಿಗೆ ಒಳಗಾಗಿದ್ದ ಬಿಹಾರ ರಾಜ್ಯಪಾಲ ಬೂಟಾಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿದ ಕೆಲವು ಗಂಟೆಗಳ ಬಳಿಕ ಈ ದಿಢೀರ್ ಬೆಳವಣಿಗೆ ಸಂಭವಿಸಿತು.

2006: ಪ್ಯಾಲೆಸ್ಟೈನ್ ಸಂಸದೀಯ ಚುನಾವಣೆಯಲ್ಲಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹಮಾಸ್ ಬಹುತೇಕ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಯ ಹಾದಿಯಲ್ಲಿ ಮುನ್ನಡೆಯಿತು. ಒಂದು ದಶಕದಿಂದ ಆಡಳಿತದಲ್ಲಿರುವ ಫತಾಹ್ ಪಕ್ಷದ ಎಲ್ಲ ಸಚಿವರು ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು.

2006: ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ಅವರ ಮಗ , ಭಾರತದ ಪರಮಾಪ್ತ ಮಿತ್ರ ಖಾನ್ ಅಬ್ದುಲ್ ವಲೀಖಾನ್ (89) ಪಾಕಿಸ್ಥಾನದ ಪೇಶಾವರದಲ್ಲಿ ನಿಧನರಾದರು.

2006: ಖ್ಯಾತ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು. ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.

1944: ಕಲಾವಿದ ಶ್ರೀನಿವಾಸ ಕೆ.ಆರ್. ಜನನ.

1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಪಾಂಡಪ್ಪ- ವರದಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು.

1918: ನಿಕೊಲಾಯಿ ಸಿಯಾಸೆಸ್ಕು (1918-1989) ಹುಟ್ಟಿದ ದಿನ. ಈತ 1965ರಿಂದ 1989ರಲ್ಲಿ ನಡೆದ ಕ್ರಾಂತಿಯಲ್ಲಿ ಪದಚ್ಯುತಿಗೊಂಡು ಕೊಲೆಗೀಡಾಗುವವರೆಗೆ ರೊಮೇನಿಯಾದ ಸರ್ವಾಧಿಕಾರಿಯಾಗಿದ್ದ.

1915: ಹೆಸರಾಂತ ಕವಿ ಕೆ.ಎಸ್. ನರಸಿಂಹಸ್ವಾಮಿ (1915-2003) ಹುಟ್ಟಿದ ದಿನ.

1912: ಕಲಾವಿದ ಎಲ್. ನಾಗೇಶ ರಾಯರ ಜನನ.

1905: ಜಗತ್ತಿನಲ್ಲೇ ಅತ್ಯಂತ ದೊಡ್ಡದೆಂದು ಹೇಳಲಾದ ಗುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಟ್ರಾನ್ಸ್ ವಾಲಿನ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು. ಕ್ಯಾಪ್ಟನ್ ವೆಲ್ಸ್ ಕಂಡು ಹಿಡಿದ ಈ ವಜ್ರದ ಕಚ್ಚಾ ರೂಪದ ತೂಕ 3,106 ಕ್ಯಾರೆಟ್ಟುಗಳು. ಮೂರು ವರ್ಷಗಳ ಹಿಂದೆ ಈ ಗಣಿಯನ್ನು ಪತ್ತೆ ಹಚ್ಚಿದ ಸರ್ ಥಾಮಸ್ ಗುಲಿನಿನ್ ಹೆಸರನ್ನೇ ಈ ವಜ್ರಕ್ಕೆ ಇಡಲಾಯಿತು. 

1556: ಪಾವಟಿಗೆಗಳಿಂದ ಬಿದ್ದು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ ಮೊಘಲ್ ಚಕ್ರವರ್ತಿ ಹುಮಾಯೂನ್ ತನ್ನ 48ನೇ  ವಯಸ್ಸಿನಲ್ಲ್ಲಿಲಿ ಮೃತನಾದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement