ಇಂದಿನ ಇತಿಹಾಸ
ಜನವರಿ 30
ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು.
ಇಂದು `ಹುತಾತ್ಮದಿನ'. 1948ರಲ್ಲಿ ಈದಿನ ಸಂಜೆ 5.10 ಗಂಟೆಗೆ ನವದೆಹಲಿಯ ಬಿರ್ಲಾ ಹೌಸಿನಲ್ಲಿ ಮಹಾತ್ಮಾ ಗಾಂಧೀಜಿ ಅವರು ನಾಥೂರಾಂ ಗೋಡ್ಸೆಯ ಗುಂಡೇಟಿಗೆ ಬಲಿಯಾಗಿ ಅಸು ನೀಗಿದರು. ಭಾರತದಲ್ಲಿ ಈ ದಿನವನ್ನು `ಹುತಾತ್ಮ ದಿನ'ವಾಗಿ ಆಚರಿಸಲಾಗುತ್ತದೆ.
2008: ಪ್ರಸಿದ್ಧ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (85) ಅವರು ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಸ್ವಂತ ಮನೆ 'ಉತ್ತರಾಯಣ'ದಲ್ಲಿ ಈದಿನ ರಾತ್ರಿ ನಿಧನರಾದರು. ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು (ಜನನ: ಡಿ.1, 1923) ಕನ್ನಡ ಸಾರಸ್ವತ ಲೋಕದಲ್ಲಿ `ಬಂಡಾಯದ ಬಲ್ಲಾಳ' ಎಂದೇ ಪ್ರಸಿದ್ಧರು. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಜಗತ್ತು ಹಾಗೂ ಸಂವೇದನೆಗಳನ್ನು ಪರಿಚಯಿಸಿದ `ಬಂಡಾಯ' ಬಲ್ಲಾಳರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಾದಂಬರಿ. `ಆಕಾಶಕ್ಕೊಂದು ಕಂದೀಲು', `ಹೇಮಂತಗಾನ', `ವಾತ್ಸಲ್ಯ ಪಥ', `ಉತ್ತರಾಯಣ', `ಬಂಡಾಯ`, `ಅನುರಕ್ತೆ ', `ಹೆಜ್ಜೆ' (ಎರಡು ಭಾಗಗಳು) ಅವರ ಪ್ರಸಿದ್ಧ ಕಾದಂಬರಿಗಳು. ಬಲ್ಲಾಳರದ್ದು ಹೋರಾಟದ ಬದುಕು. ಅವರ ತಂದೆ ರಾಮದಾಸ ಸಂಸ್ಕೃತ ಹಾಗೂ ಕನ್ನಡದಲ್ಲಿ ವಿದ್ವಾಂಸರು. ಬಡತನ ಕಟ್ಟಿಕೊಟ್ಟ ನೋವಿನ ಬುತ್ತಿಯನ್ನು ಹೊತ್ತುಕೊಂಡೇ ಮುಂಬೈಗೆ ತೆರಳಿದ ಅವರು, ಆ ಮಹಾನಗರಿಯಲ್ಲಿ ಅನ್ನದ ಹಸಿವು ಹಾಗೂ ಸೃಜನಶೀಲತೆಯ ಹಸಿವನ್ನು ಇಂಗಿಸುವ ಮಾರ್ಗಗಳನ್ನು ಕಂಡುಕೊಂಡರು. ಮುಂಬೈಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡೇ ಮಹಾನಗರದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂಬೈ ನಗರದ ಜೀವಂತಿಕೆ ಹಾಗೂ ನಗರದ ಬದುಕಿನ ತಳಮಳಗಳನ್ನು ತಮ್ಮ ಕೃತಿಗಳಲ್ಲಿ ಕಲಾತ್ಮಕವಾಗಿ ಚಿತ್ರಿಸಿದರು. ನವೋದಯ, ಪ್ರಗತಿಶೀಲ, ನವ್ಯ- ಹೀಗೆ ಸಾಹಿತ್ಯ ಚಳವಳಿಗಳಿಗೆ ಮುಖಾಮುಖಿಯಾದರೂ ತಮ್ಮದೇ ಆದ `ವ್ಯಾಸ(ರಾಯ) ಮಾರ್ಗ' ರೂಪಿಸಿಕೊಂಡ ಹೆಗ್ಗಳಿಕೆ ಅವರದು. ಮುಂಬೈಯ `ಕರ್ನಾಟಕ ಸಂಘ', `ಸಾಹಿತ್ಯಕೂಟ', `ಕನ್ನಡ ಕಲಾ ಕೇಂದ್ರ'ಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು, `ನುಡಿ' ಪತ್ರಿಕೆಯಲ್ಲಿ ಕೆಲಸ ಮಾಡುವ ಮೂಲಕ ಬರವಣಿಗೆಯ ಇನ್ನೊಂದು ಸಾಧ್ಯತೆಗೆ ತಮ್ಮನ್ನು ತೆರೆದುಕೊಂಡವರು. `ಸಂಪಿಗೆ', `ಮಂಜರಿ', `ಕಾಡು ಮಲ್ಲಿಗೆ' ಹಾಗೂ `ಸಮಗ್ರ ಕಥೆಗಳು' ಬಲ್ಲಾಳರಿಗೆ ಹೆಸರು ತಂದುಕೊಟ್ಟ ಕೃತಿಗಳು. ಇಬ್ಸನ್, ಬರ್ನಾಡ್ ಷಾ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿರುವ ಅವರ ಪ್ರವಾಸ ಕಥನ `ನಾನೊಬ್ಬ ಭಾರತೀಯ ಪ್ರವಾಸಿ'. ನಿವೃತ್ತಿಯ ನಂತರ ಬಲ್ಲಾಳರು ಬೆಂಗಳೂರಿನಲ್ಲಿ ನೆಲೆಸಿದ್ದರು.
2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈಯಲ್ಲಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈಯ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು. ಉದ್ಯಮಿಯ ಹೆತ್ತವರು 1948ರಿಂದೀಚೆಗೆ ಈ ಚಿತಾಭಸ್ಮವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಚಿತಾಭಸ್ಮದ ಕಲಶವನ್ನು ವಿಸರ್ಜಿಸುವವರೆಗೂ ಗಾಂಧೀಜಿ ನಗರಕ್ಕೆ ಆಗಮಿಸುತ್ತಿದ್ದಾಗಲೆಲ್ಲಾ ತಂಗುತ್ತಿದ್ದ ಈ ಮಣಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಕೊನೆಯ ದಿನದ ತನಕವೂ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು. ಮಹಾತ್ಮನ ಚಿತಾಭಸ್ಮವನ್ನು 1948ರ ಫೆಬ್ರುವರಿ 12ರಂದು ದೇಶದ ವಿವಿಧ ನದಿಗಳಲ್ಲಿ ಮತ್ತು ಸಮುದ್ರಗಳಲ್ಲಿ ವಿಸರ್ಜಿಸಲಾಗಿತ್ತು. ಆದರೆ ಇನ್ನೂ ಕೆಲವು ಅಸ್ತಿಕಲಶಗಳನ್ನು ವಿಸರ್ಜಿಸದ ಅಭಿಮಾನಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಕಳೆದ 60 ವರ್ಷಗಳಲ್ಲಿ ಹೀಗೆ ದೊರೆತ 2ನೇ ಚಿತಾಭಸ್ಮ ಇದು. 1997ರಲ್ಲಿ ಭುನವೇಶ್ವರದ ಬ್ಯಾಂಕ್ ಲಾಕರ್ ಒಂದರಲ್ಲಿ ಪತ್ತೆಯಾಗಿದ್ದ ಮಹಾತ್ಮ ಅವರ ಚಿತಾಭಸ್ಮವನ್ನು ಬಳಿಕ ಅಲಹಾಬಾದಿನಲ್ಲಿ ವಿಸರ್ಜಿಸಲಾಗಿತ್ತು.
2008: ಇಸ್ಲಾಮ್ ಅರ್ಥವನ್ನು ಅಪಾರ್ಥಗೊಳಿಸಿದ ಸಾಹಿತ್ಯ ಒಳಗೊಂಡಿದೆ ಎಂಬ ಆಪಾದನೆ ಮೇರೆಗೆ ಅಮೆರಿಕ ಪ್ರಕಟಣೆಯ 11 ಪುಸ್ತಕಗಳನ್ನು ಮಲೇಷ್ಯಾ ಸರ್ಕಾರ ನಿಷೇಧಿಸಿತು. ಮಲೇಷ್ಯಾದ ಆಂತರಿಕ ಭದ್ರತಾ ಸಚಿವಾಲಯ ಈ ಪುಸ್ತಕಗಳನ್ನು ನಿಷೇಧಿಸಿದ್ದು ಅವುಗಳಲ್ಲಿ 8 ಪುಸ್ತಕಗಳು ಇಂಗ್ಲಿಷಿನಲ್ಲಿ ಹಾಗೂ 3 ಸ್ಥಳೀಯ ಮಲಯ ಭಾಷೆಯಲ್ಲೂ ಇದ್ದವು. ಪುಸ್ತಕಗಳಲ್ಲಿ ಭಯೋತ್ಪಾದಕರ ಜೊತೆ ಮುಸ್ಲಿಮರನ್ನು ತಳಕು ಹಾಕಲಾಗಿದೆ ಹಾಗೂ ಇಸ್ಲಾಮ್ ಧರ್ಮ ಮಹಿಳೆಯರನ್ನು ಅನುಚಿತವಾಗಿ ನಡೆಸಿಕೊಳ್ಳುತ್ತದೆ ಎಂಬುದಾಗಿ ಮುದ್ರಿಸಲಾಗಿದೆ ಎಂದು ಮಲೇಷ್ಯಾ ಆಪಾದಿಸಿತು.
2008: ವೇಗದ ಬೌಲರುಗಳಾದ ಜಹೀರ್ ಖಾನ್, ಆರ್ ಪಿ ಸಿಂಗ್ ಮತ್ತು ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು `ಕ್ರಿಕ್ ಇನ್ಫೋ' ಪ್ರಶಸ್ತಿಗೆ ಆಯ್ಕೆಯಾದರು. ಭಾರತದ ಈ ಮೂವರಲ್ಲದೆ ಶ್ರೀಲಂಕಾ ತಂಡದ ಕುಮಾರ ಸಂಗಕ್ಕಾರ ಮತ್ತು ಲಸಿತ್ ಮಾಲಿಂಗ ಹಾಗೂ ಆಸ್ಟ್ರೇಲಿಯಾ ತಂಡದ ಆಡಮ್ ಗಿಲ್ ಕ್ರಿಸ್ಟ್ ಅವರೂ ಇದೇ ಮೊದಲ ಬಾರಿ `ಕ್ರಿಕ್ ಇನ್ಫೋ' ಪ್ರಕಟಿಸಿದ ಪ್ರಶಸ್ತಿಗೆ ಭಾಜನರಾದರು.
2007: ಭೋಪಾಲ್ ರಂಗಮಂಡಲದ ಹಿರಿಯ ನಟಿ- ನಿದರ್ೆಶಕಿ ವಿಭಾ ಮಿಶ್ರ ನವದೆಹಲಿಯಲ್ಲಿ ನಿಧನರಾದರು. ರಾಷ್ಟ್ರೀಯ ನಾಟಕಶಾಲೆ ನಿರ್ದೇಶಕ ದೇವೇಂದ್ರ ಕುಮಾರ್ ಅಂಕುರ್ ಹಾಗೂ ದೇಶದ ಹೆಸರಾಂತ ಕನ್ನಡದ ರಂಗ ನಿರ್ದೇಶಕ ಬಿ.ವಿ. ಕಾರಂತರ ಶಿಷ್ಯೆಯಾಗಿದ್ದ ವಿಭಾ ಮಿಶ್ರ ಎರಡು ವರ್ಷಗಳ ಹಿಂದೆ ಮೈಸೂರಿನ ರಂಗಾಯಣದಲ್ಲಿ ತಮ್ಮ ತಂಡದ ವತಿಯಿಂದ ನಾಟಕ ಪ್ರದರ್ಶಿಸಿದ್ದರು.
2007: ವಿಶ್ವದಲ್ಲೇ ಅತಿದೊಡ್ಡ ರಕ್ತದಾನ ಶಿಬಿರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು. 50ಕ್ಕೂ ಹೆಚ್ಚು ಸಂಸ್ಥೆಗಳು ಸಹಯೋಗ ನೀಡಿದ್ದ ಈ ಶಿಬಿರದಲ್ಲಿ 400ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಲಾಗಿತ್ತು. 100ಕ್ಕೂ ಹೆಚ್ಚು ತಜ್ಞ ವೈದ್ಯರು, 500ಕ್ಕೂ ಹೆಚ್ಚು ದಾದಿಯರು, 1000ಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡ ಈ ಶಿಬಿರದಲ್ಲಿ 7000ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಇತಿಹಾಸ ನಿರ್ಮಿಸಿದರು. 2003ರಲ್ಲಿ ಮುಂಬೈಯಲ್ಲಿ ನಡೆದ ಈ ಮಾದರಿ ಶಿಬಿರದಲ್ಲಿ 5600 ಜನ ರಕ್ತದಾನ ಮಾಡಿದ್ದರು.
2007: ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ (59) ಅವರನ್ನು ಕೇಂದ್ರ ಸರ್ಕಾರವು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.
2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ಎಎಸ್ಐ) ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
2006: ಲಾಹೋರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ 46 ಮಂದಿ ಮೃತರಾದರು. ಪಾಕಿಸ್ಥಾನದ ಈ ರೈಲು ರಾವಲ್ಪಿಂಡಿಯಿಂದ ಲಾಹೋರಿಗೆ ತೆರಳುತ್ತಿತ್ತು.
1991: ಟ್ರಾನ್ಸಿಸ್ಟರಿನ ಜಂಟಿ ಸಂಶೋಧಕ ಜಾನ್ ಬರ್ಡೀನ್ (1908-1991) ತನ್ನ 82ನೇ ವಯಸ್ಸಿನಲ್ಲಿ ಮೃತನಾದ. 1956ರಲ್ಲಿ ಭೌತವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡ ಈತ ಸೂಪರ್ ಕಂಡಕ್ಟಿವಿಟಿ ಸಂಶೋಧನೆಯಲ್ಲೂ ಪಾತ್ರ ವಹಿಸಿದ ವ್ಯಕ್ತಿ.
1965: ಸರ್ ವಿನ್ ಸ್ಟನ್ ಚರ್ಚಿಲ್ ಅಂತ್ಯಕ್ರಿಯೆ ನೆರವೇರಿತು. 90 ವರ್ಷಗಳ ಹಿಂದೆ ಅವರು ಹುಟ್ಟಿದ ಬೆನ್ಹೀಮ್ ಅರಮನೆಯ ಸಮೀಪದ ಬ್ಲಾಡನ್ ಚರ್ಚ್ ಯಾರ್ಡಿನಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
1958: ಕಲಾವಿದೆ ಎಚ್.ಎಸ್. ಇಂದಿರಾ ಜನನ.
1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ. ಇದು ಜರ್ಮನಿಯ ಪ್ರಜಾತಾಂತ್ರಿಕ ಸಂಸದೀಯ ವ್ಯವಸ್ಥೆಯ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಕೆಲ ದಿನಗಳ ಒಳಗಾಗಿಯೇ ಹಿಟ್ಲರ್ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ಸರ್ಕಾರಕ್ಕೆ ನೀಡಿದ.
1927: ಈದಿನ ಹುಟ್ಟಿದ ಒಲೋಫ್ ಪಾಮೆ (Olof Palme) (1927-1986) ಮುಂದೆ ಸ್ವೀಡನ್ನಿನ ಪ್ರಧಾನಿಯಾದರು. ಅವರು 1986 ರಲ್ಲಿ ಹತ್ಯೆಗೀಡಾದರು.
1913: ಹಂಗೆರಿ ಸಂಜಾತ ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ (1913-1956) ಹುಟ್ಟಿದ ದಿನ. ನಗ್ನ ಚಿತ್ರಗಳನ್ನು ರಚಿಸಿದ ಈಕೆ ಭಾರತೀಯ ಚಿತ್ರಕಲೆಗೆ ಆಧುನಿಕತೆಯ ಸ್ಪರ್ಶ ನೀಡಿದವರು.
1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವೀರಪ್ಪ- ಶರಣವ್ವ ದಂಪತಿಯ ಮಗನಾಗಿ ವಿಜಾಪುರದಲ್ಲಿ ಜನಿಸಿದರು.
1785: ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ (1785-1846) ಹುಟ್ಟಿದ ದಿನ. ಬ್ರಿಟಿಷ್ ಆಡಳಿತಗಾರನಾದ ಈತ ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment