My Blog List

Tuesday, February 17, 2009

ಇಂದಿನ ಇತಿಹಾಸ History Today ಫೆಬ್ರುವರಿ 13

ಇಂದಿನ ಇತಿಹಾಸ

ಫೆಬ್ರುವರಿ 13

ಸುಮಾರು ಏಳು ತಿಂಗಳುಗಳಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಧಾರವಾಡ ವಿವಿಯ ನಿವೃತ್ತ ಭಾಷಾ ಶಾಸ್ತ್ರಜ್ಞ ಡಾ. ಎ. ಮುರಿಗೆಪ್ಪ ಅವರನ್ನು ನೇಮಿಸಿ ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಡಾ. ಚಿರಂಜೀವಿ ಸಿಂಗ್ ನೇತೃತ್ವದ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಮೂವರನ್ನು ಕರೆಸಿ ವೈಯಕ್ತಿಕವಾಗಿ ಸಂದರ್ಶನ ನಡೆಸಿದ ರಾಜ್ಯಪಾಲರು ಅಂತಿಮವಾಗಿ ಮುರಿಗೆಪ್ಪ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ನೀಡಿದರು

2008: ಬೆಲ್ಜಿಯಂ ಸರ್ಕಾರದಿಂದ ಗೌರವ ಸ್ವೀಕರಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಲು ಚುನಾವಣಾ ಆಯೋಗ ತೀರ್ಮಾನಿಸಿತು. 2006ರಲ್ಲಿ ಬೆಲ್ಜಿಯಂ ಸರ್ಕಾರ ನೀಡಿದ್ದ `ಆರ್ಡರ್ ಆಫ್ ಲಿಯೋಪೋಲ್ಡ್' ಪುರಸ್ಕಾರವನ್ನು ಒಪ್ಪಿಕೊಂಡ ಆಧಾರದ ಮೇಲೆ ಅವರ ಲೋಕಸಭಾ ಸದಸ್ಯತ್ವ ವಜಾ ಮಾಡಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗ ಈ ನಿರ್ಧಾರಕ್ಕೆ ಬಂದಿತು.

2008: ಚಿತ್ರಕಲಾ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ದಾವಣಗೆರೆಯ ಮಲ್ಲಿಕಾರ್ಜುನ ಜಾದವ್, ಬೆಂಗಳೂರಿನ ಜೆ.ಎಂ.ಎಸ್. ಮಣಿ, ಬೆಳಗಾವಿಯ ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ 2007ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಚಿತ್ರಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲೂ ಅಕಾಡೆಮಿ ನಿರ್ಧರಿಸಿತು. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಚಿತ್ರಕಲಾವಿದರಲ್ಲ. ಆದರೆ ಚಿತ್ರಕಲಾ ಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆಗಾಗಿ ರಾಜ್ಯಮಟ್ಟದ ಒಬ್ಬರಿಗೆ ನೀಡಲಾಗುವ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಲು ಕಾರಣ ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪುರಾತನ ಮತ್ತು ಸಮಕಾಲೀನ ಕಲಾಕೃತಿಗಳ ಸಂಗ್ರಹಾಲಯವಾಗಿ `ಮಂಜೂಷಾ' ವನ್ನು ರೂಪಿಸಿರುವುದು, 39 ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರನ ಪ್ರತಿಷ್ಠಾಪನೆ, ಯಕ್ಷಗಾನ ಮೇಳಗಳಿಗೆ ಉತ್ತೇಜನ, ಜನಪದ ಸಾಹಿತ್ಯ ಮತ್ತು ಕಲಾ ಪ್ರಕಾರಗಳ ಸಂಗ್ರಹಣೆ,  ತಾಳೆಯೋಲೆಗಳ ಸಂಗ್ರಹ, ಅಧ್ಯಯನ ಮತ್ತು ಸಂಶೋಧನೆ, ಶಿಲ್ಪಿಗಳು, ಕಲಾವಿದರಿಗೆ ಪ್ರೋತ್ಸಾಹ- ಇವೇ ಮೊದಲಾದ ರೀತಿಯಲ್ಲಿ ಕಲಾ ಪೋಷಣೆ ಮಾಡಿರುವುದು. ಮಲ್ಲಿಕಾರ್ಜುನ ಜಾದವ್ ಅವರು ಮೈಸೂರಿನ `ಕಾವಾ'ದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರೆ, ಜೆ.ಎಸ್.ಎಂ.ಮಣಿ ದೇಶ ವಿದೇಶಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಕಲಾವಿದರು. ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರು ಗಡಿ ಪ್ರದೇಶದದವರು. ಇವರು ನಿರುಪಯೋಗಿ ವಸ್ತುಗಳನ್ನು ಬಳಸಿ ಕಲಾತ್ಮಕ ಅಭಿವ್ಯಕ್ತಿ ನೀಡಬಲ್ಲ ಕಲಾವಿದ.

2008: ಉತ್ತರ ಕರ್ನಾಟಕದಲ್ಲಿ ಶಂಕಿತ ಉಗ್ರರ ಬೇಟೆ ಮುಂದುವರೆಸಿದ ಸಿಓಡಿ ಪೊಲೀಸರು ನಿಷೇಧಿತ ಸಿಮಿ ಸಂಘಟನೆಯ ಸಕ್ರಿಯ ಕಾರ್ಯಕರ್ತ ಶಕೀಲ ಮಹ್ಮದ್ ಮಾಳಿ ಎಂಬಾತನನ್ನು ಬಂಧಿಸಿದರು. ಬಂಧಿತ ಆರೋಪಿ ಟೈಮರ್ ಬಾಂಬ್ ತಯಾರಿಸಲು ಇಂಟರ್ನೆಟ್ ಮೂಲಕ ಮಾಹಿತಿ ಪಡೆದಿರುವ ಅಂಶ ವಿಚಾರಣೆಯ ವೇಳೆ ಬಹಿರಂಗವಾಗಿದ್ದು, ಎಲೆಕ್ಟ್ರಿಕಲ್ ಕೆಲಸದಲ್ಲಿ ಪರಿಣತಿ ಹೊಂದಿದ್ದುದರಿಂದ ಟೈಮರ್ ಬಾಂಬ್ ತಯಾರಿಸುವ ಬಗ್ಗೆ ಆಸಕ್ತಿ ಹೊಂದಿ, ಈ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿದ್ದುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದವು.

2008: ಪ್ರಾದೇಶಿಕತೆಯ ಆಧಾರದಲ್ಲಿ ಜನರ ನಡುವೆ ದ್ವೇಷ ಭಾವನೆ ಹರಡಲು ಯತ್ನಿಸಿದ್ದಕ್ಕಾಗಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂ ಎನ್ ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಬಂಧಿಸಲಾಯಿತು. ನಂತರ ನ್ಯಾಯಾಲಯ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಿತು.

2008: ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು ನಗರದಲ್ಲಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. 

2008: ಮಲೇಷ್ಯಾ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬದಾವಿ ಅವರು ಲೋಕಸಭೆ ವಿಸರ್ಜನೆ ಮಾಡುವ ಮೂಲಕ ಅವಧಿಗೆ ಮುನ್ನವೇ ಚುನಾವಣೆಗೆ ದಾರಿ ಮಾಡಿ ಕೊಟ್ಟರು.

2008: ಸುಮಾರು ಏಳು ತಿಂಗಳುಗಳಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಧಾರವಾಡ ವಿವಿಯ ನಿವೃತ್ತ ಭಾಷಾ ಶಾಸ್ತ್ರಜ್ಞ ಡಾ. ಎ. ಮುರಿಗೆಪ್ಪ ಅವರನ್ನು ನೇಮಿಸಿ ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು. ನಿವೃತ್ತ ಐಎಎಸ್ ಅಧಿಕಾರಿ ಡಾ. ಚಿರಂಜೀವಿ ಸಿಂಗ್ ನೇತೃತ್ವದ ಶೋಧನಾ ಸಮಿತಿ ಶಿಫಾರಸು ಮಾಡಿದ್ದ ಮೂವರನ್ನು ಕರೆಸಿ ವೈಯಕ್ತಿಕವಾಗಿ ಸಂದರ್ಶನ ನಡೆಸಿದ ರಾಜ್ಯಪಾಲರು ಅಂತಿಮವಾಗಿ ಮುರಿಗೆಪ್ಪ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ನೀಡಿದರು. ಮೂಲತಃ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ರೈತ ಕುಟುಂಬದವರಾದ ಮುರಿಗೆಪ್ಪ ಅವರು ಕರ್ನಾಟಕ ವಿವಿಯಲ್ಲಿ ಬಿ.ಎಸ್ಸಿ ಪದವಿ ಪಡೆದು, ಕನ್ನಡದಲ್ಲಿ (ಭಾಷಾ ವಿಜ್ಞಾನ) ಸ್ನಾತಕೋತ್ತರ ಪದವಿ ಪಡೆದವರು. `ಬೀದರ್ ಜಿಲ್ಲೆಯಲ್ಲಿನ ಕನ್ನಡ ಭಾಷೆ' ಕುರಿತು ಅವರು ರಚಿಸಿದ ಮಹಾಪ್ರಬಂಧಕ್ಕೆ ಪಿ. ಎಚ್ ಡಿ ಪದವಿ ಪಡೆದಿದ್ದರು. ಡಿ.ಲಿಟ್ ಪದವಿಯನ್ನೂ ಪಡೆದಿರುವ ಅವರು ವೃತ್ತಿ ಜೀವನ ಆರಂಭಿಸಿದ್ದು ತಮಿಳುನಾಡಿನ ಅಣ್ಣಾಮಲೈ ವಿವಿಯಲ್ಲಿ. ಅಲ್ಲಿ ಆರು ವರ್ಷ ಸೇವೆ ಸಲ್ಲಿಸಿದ ನಂತರ ರೀಡರ್ ಆಗಿ ಧಾರವಾಡದ ಕರ್ನಾಟಕ ವಿವಿಗೆ  ಆಗಮಿಸಿದ್ದರು. ಅಲ್ಲಿ ವಿದ್ಯಾರ್ಥಿ ಕಲ್ಯಾಣನಿಧಿ ಅಧಿಕಾರಿ, ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ವಿವಿಯ ಹಂಗಾಮಿ ಕುಲಸಚಿವ ಹಾಗೂ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇತ್ತೀಚೆಗೆ ಮೂರು ತಿಂಗಳು ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. `ಜಾನಪದ ಹೊಸದೃಷ್ಟಿ' ಹಾಗೂ `ಡೊಂಬರು ಒಂದು ಅಧ್ಯಯನ' ಪುಸ್ತಕಗಳನ್ನು ಅವರು ಬರೆದಿದ್ದಾರೆ.

2007: ಒರಿಯಾ ಭಾಷಾ ಸಾಹಿತಿ ಡಾ. ಜಗನ್ನಾಥ ಪ್ರಸಾದ ದಾಸ್ ಅವರ `ಪರಿಕ್ರಮ' ಕವನ ಸಂಕಲನವು 2006ನೇ ಸಾಲಿನ ಪ್ರತಿಷ್ಠಿತ `ಸರಸ್ವತಿ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾಯಿತು. ಈ ಪ್ರಶಸ್ತಿ ಪಡೆದವರಲ್ಲಿ ದಾಸ್ 16ನೆಯವರು. 5 ಲಕ್ಷ ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿರುವ ಈ ಪ್ರಶಸ್ತಿಯನ್ನು ಕೆ.ಕೆ. ಬಿರ್ಲಾ ಪ್ರತಿಷ್ಠಾನವು 1991ರಲ್ಲಿ ಸ್ಥಾಪಿಸಿತು.

2007: ಎನ್. ತಿಪ್ಪಣ್ಣ ಅವರನ್ನು ಹಂಗಾಮೀ ಸಭಾಪತಿಯನ್ನಾಗಿ ಒಪ್ಪದೆ ಹತ್ತನೇ ದಿನವೂ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ 26 ಮಂದಿ ಕಾಂಗ್ರೆಸ್ ಸದಸ್ಯರನ್ನು ವಿಧಾನ ಪರಿಷತ್ ಅಧಿವೇಶನ ಉಳಿದ ಅವಧಿಗೆ ಸಾಮೂಹಿಕವಾಗಿ ಅಮಾನತುಗೊಳಿಸಲಾಯಿತು.

2007: ಹೃದಯ ಮತ್ತು ಶ್ವಾಸಕೋಶದಲ್ಲಿನ ಖಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಪಶ್ಚಿಮ ಇಂಗ್ಲೆಂಡಿನ ಬ್ರಿಸ್ಟಲ್ ನ 30ರ ಹರೆಯದ ಮಹಿಳೆ ಕ್ಲೆಲಿ ಟೈಲರ್ ಸ್ವತಃ ಸಾವಿಗೆ ತಲೆಬಾಗಲು ಬಿಡುವಂತೆ ತನ್ನ ವೈದ್ಯರ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿ ಕಾನೂನು ಸಮರಕ್ಕೆ ಇಳಿದರು. ಅತಿಯಾದ ನೋವಿನಿಂದ ನರಳುತ್ತಿರುವ ತನ್ನನ್ನು ಪ್ರಜ್ಞೆ ತಪ್ಪುವಂತೆ ಮಾಡಲು ನೋವು ನಿವಾರಕ ಮಾರ್ಫಿನ್ ಗುಳಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿನೀಡಲು ವೈದ್ಯರಿಗೆ ನಿರ್ದೇಶನ ನೀಡಬೇಕು ಎಂದು ಆಕೆ ಬಯಸಿದರು.

2007: ಪಾಕಿಸ್ಥಾನದ ವೇಗದ ಬೌಲರುಗಳಾದ ಶೋಯೆಬ್ ಅಖ್ತರ್ ಮತ್ತು ಮೊಹಮ್ಮದ ಆಸಿಫ್ ಮತ್ತೆ ಉದ್ದೀಪನ ಮದ್ದು ಪರೀಕೆಯಲ್ಲಿ ಸಿಕ್ಕಿಬಿದ್ದರು. ರಹಸ್ಯವಾಗಿ ನಡೆಸಿದ ಪರೀಕ್ಷೆಯಲ್ಲಿ ಈ ಇಬ್ಬರೂ ನಿಷೇಧಿತ ಮದ್ದು ನಂಡ್ರೋಲೋನ್ ಸೇವಿಸಿದ್ದು ಸಾಬೀತಾಗಿದೆ ಎಂದು `ದಿ ನ್ಯೂಸ್' ದಿನಪತ್ರಿಕೆ ವರದಿ ಮಾಡಿತು.

2007: ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ಚಿಲ್ಲರೆ ವಹಿವಾಟು ಸಂಸ್ಥೆ ವಾಲ್ ಮಾರ್ಟ್ ಜೊತೆಗೆ ಭಾರ್ತಿ ಗ್ರೂಪ್ ಬಾರ್ಸಿಲೋನಾದಲ್ಲಿ ಒಪ್ಪಂದ ಮಾಡಿಕೊಂಡಿತು. ಭಾರ್ತಿ ಗ್ರೂಪ್ ಅಧ್ಯಕ್ಷ ಸುನೀಲ್ ಮಿತ್ತಲ್ ಈ ವಿಷಯ ಪ್ರಕಟಿಸಿದರು. ಸಾಮಾನ್ಯ ಜನರ ಹಿತಾಸಕ್ತಿ  ರಕ್ಷಣೆಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಅವರ ಪ್ರತಿಪಾದನೆ.

2007: ಮಂಗಳೂರಿನ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರನ್ನು ಕನ್ನಡ ಪರಿಚಾರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ `ಭಾರತೀಯ ರೈಲ್ವೆ ವಲಯದ ಮಹಾನ್ ಸುಧಾರಕ' ಎಂಬುದಾಗಿ ಹೊಗಳಿಸಿಕೊಂಡ ಬೆನ್ನಲ್ಲೇ ರೈಲ್ವೇ ಸಚಿವ ಲಾಲೂ ಪ್ರಸಾದ್ ಅವರು, ಇದರ ನೆನಪು ಮಾಸುವ ಮುನ್ನವೇ ಮಾವ ಶಿವಪ್ರಸಾದ್ ಚೌಧುರಿ (ಲಾಲೂ ಪತ್ನಿ ರಾಬ್ಡಿ ದೇವಿ ತಂದೆ) ಮತ್ತು ಅತ್ತೆ ಮಹಾರಾಜೋದೇವಿ ಅವರು ಬಿಹಾರಿನ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ಸಿನ ಹವಾನಿಯಂತ್ರಿತ ಬೋಗಿಯಲ್ಲಿ ಟಿಕೆಟಿಲ್ಲದೆ ಪ್ರಯಾಣ ಮಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡ ಪರಿಣಾಮ ಮುಜುಗರಕ್ಕೆ ಒಳಗಾದರು.

2007: ಕಾವೇರಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಹಿರಿಯ ನಟ ವಿಷ್ಣುವರ್ಧನ್ನೇತೃತ್ವದಲ್ಲಿ ಸಾವಿರಾರು ಮಂದಿ ಬೆಂಗಳೂರಿನಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರಾಜಭವನದವರೆಗೆ ಬೃಹತ್ ರ್ಯಾಲಿ ನಡೆಸಿದರು. ಚಿತ್ರರಂಗದ ಬಹುತೇಕ ಕಲಾವಿದರು ಹಾಗೂ ಇತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

2006: ವಿಶಾಖ ಪಟ್ಟಣದಿಂದ ಜಲಾಂತರ್ಗಾಮಿಯ ಮೂಲಕ ಕಡಲಾಳ ಯಾನ ಕೈಗೊಂಡು ಇತಿಹಾಸ ಸೃಷ್ಟಿಸಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕಡಲಾಳ ಪ್ರಯಾಣ ಕೈಗೊಂಡ ಭಾರತದ ಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ನೌಕಾಪಡೆಗೆ ಸೇರಿದ ರಷ್ಯ ಮೂಲದ ಐ ಎನ್ ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸುಮಾರು ಮೂರೂವರೆ ತಾಸು ಕಾಲ ಅವರು ಪ್ರಯಾಣ ಮಾಡಿದರು. 2003ರಲ್ಲಿ ಅಂದಿನ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಐ ಎನ್ ಎಸ್ ಸಿಂಧುವೀರ್ ಜಲಾಂತರ್ಗಾಮಿಯಲ್ಲಿ ಒಂದು ರಾತ್ರಿಯನ್ನು ಕಡಲಾಳದಲ್ಲಿ ಕಳೆದಿದ್ದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ವಿಶಾಖಪಟ್ಟಣಂನಲ್ಲಿ ಐ ಎನ್ ಎಸ್ ಚಕ್ರ ಜಲಾಂತರ್ಗಾಮಿಗೆ ಭೇಟಿ ನೀಡಿದ್ದರು. ಕಲಾಂ ಅವರು ಹಿಂದೆ ರಕ್ಷಣಾ ಸಚಿವಾಲಯದಲ್ಲಿ ವೈಜ್ಞಾನಿಕ ಸಲಹೆಗಾರರಾಗಿದ್ದಾಗ ಬಂದರಿನಲ್ಲಿದ್ದ ಒಂದು ಜಲಾಂತರ್ಗಾಮಿಗೆ ಭೇಟಿ ನೀಡಿದ್ದರು.

2006: ಸುಮಾರು 14 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿ, ಜನ ಚಳಿಯಲ್ಲಿ ಗಡ ಗಡ ನಡುಗಿದರು. ಈ ದಿನ ನಗರದಲ್ಲಿ ದಾಖಲಾದ ತಾಪಮಾನ 7.8 ಡಿಗ್ರಿ ಸೆಲ್ಸಿಯಸ್. 1992ರ ಫೆಬ್ರವರಿಯಲ್ಲಿ 7.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 1990ರ ಫೆಬ್ರವರಿಯಲ್ಲಿ 12.5, 1992ರ ಜನವರಿಯಲ್ಲಿ 10, 1992ರ ಮಾರ್ಚಿಯಲ್ಲಿ 14.1, 1994ರ ಮಾರ್ಚಿಯಲ್ಲಿ 14.1, 2005ರ ಫೆಬ್ರವರಿಯಲ್ಲಿ 14.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 

2006: ಆರೋಪಿಗಳ ಪರ ವಕೀಲರ ಬಹಿಷ್ಕಾರದ ಮಧ್ಯೆ ಬಾಗ್ದಾದಿನಲ್ಲಿ ಪುನರಾರಂಭವಾದ ವಿಚಾರಣಾ ಕಲಾಪಕ್ಕೆ ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ `ಡೌನ್ ವಿತ್ ಬುಷ್' (ಬುಷ್ ಗೆ ಧಿಕ್ಕಾರ) ಘೋಷಣೆಯೊಂದಿಗೆ ಹಾಜರಾದರು. ಫೆಬ್ರುವರಿ 2ರಂದು ನಾಟಕೀಯ ಬೆಳವಣಿಗೆಯಲ್ಲಿ ಸದ್ದಾಂ ಮತ್ತು 7 ಮಂದಿ ಸಹಚರರು ವಿಚಾರಣೆ ಕಲಾಪಗಳನ್ನೇ ಬಹಿಷ್ಕರಿಸಿದ್ದರು.

2006: ಗುಜರಾತಿನ ಡ್ಯಾಂಗ್ ಜಿಲ್ಲೆಯ ಶಬರಿ ಕುಂಭ ಮೇಳದಲ್ಲಿ ನಸುಕಿನ ಜಾವದಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ, ಮೂರು ದಿನಗಳ ಹಿಂದೂ ತೀರ್ಥಯಾತ್ರೆಗಾಗಿ ಆಗಮಿಸಿದ ಸಹಸ್ರಾರು ಮಂದಿ ಹಿಂದೂ ಭಕ್ತರು ಭಯಗ್ರಸ್ತರಾದರು. ಅಗ್ನಿ ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿಯನ್ನು ಆರಿಸಲಾಯಿತು. ಚಳಿ ನಿವಾರಿಸಿಕೊಳ್ಳಲು ಕೈಲಾಸ ಪರ್ವತದ ಬುಡದಲ್ಲಿ ಕೆಲವು ಭಕ್ತರು ಹಾಕಿದ ಅಗ್ಗಿಷ್ಟಿಕೆಯಿಂದ ಹಾರಿದ ಕಿಡಿ ಪರ್ವತದ ಗಿಡಗಂಟಿಗಳಿಗೆ ಹರಡಿ ಈ ದುರಂತ ಸಂಭವಿಸಿತು. ಪರ್ವತದ ತುದಿಯಲ್ಲಿ ಹಲವಾರು ಪ್ರಮುಖರು, ಸಾಧುಗಳು ಸಂತರು ಶಿಬಿರಗಳಲ್ಲಿ ಬಿಡಾರ ಹೂಡಿದ್ದರು. ಜ್ಯೋತಿರ್ಮಠದ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ಅವರೂ ಈ ಶಿಬಿರದಲ್ಲಿ ಇದ್ದರು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಲಿಲ್ಲ.

1948: ರಂಗಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಗಿರಿಯಪ್ಪ- ಜಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗ ಪ್ರತಿಷ್ಠಾನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಿಗೆ ಪಾತ್ರರಾದ ಕಪ್ಪಣ್ಣ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ, ದೇಶ- ವಿದೇಶಗಳಲ್ಲಿ ಕನ್ನಡ ನಾಟಕಗಳನ್ನು ನಿರ್ದೇಶಿಸಿ ಖ್ಯಾತರಾದವರು.

1946: ಜಗತ್ತಿನ ಮೊತ್ತ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ `ಈನ್ಯಾಕ್' (ದಿ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟೆಗ್ರೇಟರ್ ಅಂಡ್ ಕ್ಯಾಲ್ಕುಲೇಟರ್) ಮೊದಲ ಬಾರಿಗೆ ಜಾನ್ ಡಬ್ಲ್ಯೂ ಮೌಕ್ಲಿ ಮತ್ತು ಜೆ. ಪ್ರಸ್ಪರ್ ಎಕರ್ಟ್ ಅವರಿಂದ  ಪೆನ್ಸಿಲ್ವೇನಿಯಾದ ಮೂರೆ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಪ್ರದರ್ಶನಗೊಂಡಿತು. ಜಗತ್ತಿನಲ್ಲೇ ಅತ್ಯಂತ ದೊಡ್ಡ ಏಕೈಕ ಕಂಪ್ಯೂಟರ್ ಇದಾಗಿತ್ತು. ಇದು 30-40 ಅಡಿ ಅಳತೆಯ ಇಡೀ ಕೊಠಡಿಯನ್ನು ವ್ಯಾಪಿಸಿತ್ತು. ಆಧುನಿಕ ಎಲೆಕ್ಟ್ರಾನಿಕ್ ಗಣಕ ಉದ್ಯಮಕ್ಕೆ ಬುನಾದಿ ಹಾಕಿದ್ದರಿಂದ ಇದು ಚಾರಿತ್ರಿಕ ಘಟನೆಯಾಯಿತು. ಆಗ ಲಭ್ಯವಿದ್ದ ವ್ಯಾಕ್ಯೂಂ ಟ್ಯೂಬ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗಣಕದ ವೇಗವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ಈ ಕಂಪ್ಯೂಟರ್ ಪ್ರದರ್ಶನದಿಂದ ಬೆಳಕಿಗೆ ಬಂತು.

1941: ಮೊತ್ತ ಮೊದಲ ಬಾರಿಗೆ ಆಕ್ಸ್ ಫರ್ಡ್ ನ ಒಬ್ಬ ಪೊಲೀಸ್ ಆಲ್ಬರ್ಟ್ ಅಲೆಗ್ಸಾಂಡರ್ ಎಂಬ ವ್ಯಕ್ತಿಯ ಮೇಲೆ ಪೆನ್ಸಿಲಿನ್ ಪ್ರಯೋಗಿಸಲಾಯಿತು. ಈತ ಗಡ್ಡ ಕ್ಷೌರ ಮಾಡುವಾಗ ಗಾಯವಾಗಿ ಬಳಿಕ ರಕ್ತ ವಿಷಮಯಗೊಂಡು ಸ್ಟೆಫೈಲೊಕೋಕಸ್ ಎಂಬ ಸೋಂಕಿಗೆ ತುತ್ತಾಗಿದ್ದ. ಈತನಿಗೆ ನೀಡಲಾದ ಯಾವುದೇ ಔಷಧಿಯೂ ಫಲ ನೀಡದೆ ಹೋದಾಗ ಆಸ್ಪತ್ರೆ ಅಧಿಕಾರಿಗಳು ಹೊವರ್ಡ್ ಫ್ಲೋರೇ ಮತ್ತು ಅರ್ನೆಸ್ಟ್ ಚೈನ್ ಅವರಿಗೆ ಸ್ವತಃ ತಾವೇ ತಯಾರಿಸಿದ ಹೊಸ ಔಷಧಿ ಪ್ರಯೋಗಿಸಲು ಒಪ್ಪಿಗೆ ನೀಡಿದರು. ಅವರು ತಯಾರಿಸಿದ್ದ ಪೆನ್ಸಿಲಿನನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಲಾಯಿತು. ಸೋಂಕು ಹಾಗೇ ಮುಂದುವರಿಯಿತು. ರೋಗಿ ಮೃತನಾದ.

1849: ಲಾರ್ಡ್ ರಾಂಡೋಲ್ಫ್ ಚರ್ಚಿಲ್ ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಇವರು ವಿನ್ ಸ್ಟನ್ ಚರ್ಚಿಲ್ ಅವರ ತಂದೆ.

1788: ವಾರನ್ ಹೇಸ್ಟಿಂಗ್ಸ್ ನನ್ನು ಹೌಸ್ ಆಫ್ ಕಾಮನ್ಸ್ ನಲ್ಲಿ ಉನ್ನತ ಮಟ್ಟದ ಅಪರಾಧಗಳಿಗಾಗಿ ವಿಚಾರಣೆಗೆ ಗುರಿಪಡಿಸಲಾಯಿತು. 1795ರಲ್ಲಿ ಆತನನ್ನು ದೋಷಮುಕ್ತನನ್ನಾಗಿ ಮಾಡಲಾಯಿತು. ಈ ದೀರ್ಘಕಾಲದ ವಿಚಾರಣೆ  ಒಂದು ಗಂಭೀರ ಅನ್ಯಾಯ ಎಂದು ಪರಿಗಣನೆಗೊಂಡಿದೆ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

1 comment:

sogemane said...

KONEGOO NEEVU DORETIRI
PARYAYA NODI KUSHI AYTU
Ramesh Sogemane

Advertisement