ಗ್ರಾಹಕರ ಸುಖ-ದುಃಖ

My Blog List

Tuesday, February 17, 2009

ಇಂದಿನ ಇತಿಹಾಸ History Today ಫೆಬ್ರುವರಿ 12

ಇಂದಿನ ಇತಿಹಾಸ

ಫೆಬ್ರುವರಿ 12

 ಬೋಸ್ಟನ್ನಿನಲ್ಲಿ 1636ರಲ್ಲಿ ಸ್ಥಾಪನೆಗೊಂಡಿದ್ದ ಹಾರ್ವರ್ಡ್ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಕ್ಷ ಸ್ಥಾನವನ್ನು ನಾಲ್ಕೂವರೆ ಶತಮಾನಗಳ ನಂತರ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಲಂಕರಿಸಿದರು. ದಕ್ಷಿಣ ಅಮೆರಿಕದ ಖ್ಯಾತ ಇತಿಹಾಸ ತಜ್ಞೆ ಡ್ರ್ಯೂ ಗಿಲ್ ಪಿನ್ ಫೌಸ್ಟ್ (59) ಅವರು ಈ ಸ್ಥಾನಕ್ಕೆ ಏರಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ದುಬಾರಿ ಬಟ್ಟೆಗಳನ್ನು ಆತಂಕದಲ್ಲಿಯೇ ಅಗಸನಿಗೆ ನೀಡುವ ದಿನಗಳಿಗೆ ಕೊನೆ ಬರಲಿದೆ. ಸಂಶೋಧಕರು ಈಗ ತಾನೇತಾನಾಗಿ ಸ್ವಚ್ಛಗೊಳ್ಳುವ ವಸ್ತ್ರವನ್ನು ವಿಜ್ಞಾನಿಗಳು ಕಂಡುಹಿಡಿದರು. ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ಆಸ್ಟ್ರಿಯಾದ ಮೋನಾಷ್ ವಿಶ್ವವಿದ್ಯಾಲಯ ಮತ್ತು ಹಾಂಕಾಂಗಿನ ಪಾಲಿಟೆಕ್ನಿಕ್ ವಿವಿಯ ಸಂಶೋಧಕರು ಈ ವಸ್ತ್ರವನ್ನು ಅಭಿವೃದ್ಧಿಪಡಿಸಿದವರು. ಕೊಳೆಯಾದ ಬಟ್ಟೆಯನ್ನು ಬಿಸಿಲಿಗೆ ಸ್ವಲ್ಪ ಹೊತ್ತು ಹಿಡಿದರೆ ಸಾಕು ಬಟ್ಟೆಯೇ ಕೊಳೆ ಕೊಡವಿಕೊಂಡು ಶುಭ್ರವಾಗಿ ಕಾಣಿಸುತ್ತದೆ.  
2008: 2008ರ ಜುಲೈ 1ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲ ಅಧಿಸೂಚಿತ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕವನ್ನು ಕಡ್ಡಾಯ ಮಾಡಿ ಹೈಕೋರ್ಟ್ ಆದೇಶ ನೀಡಿತು. ವೇಗ ನಿಯಂತ್ರಕ ಅಳವಡಿಸಿಕೊಳ್ಳದ ಯಾವುದೇ ಸಾರಿಗೆ ವಾಹನಗಳು ಜೂನ್ 30ರ ನಂತರ ರಸ್ತೆಗೆ ಇಳಿಯುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್  ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು. 2007ರ ಜುಲೈ 1ರ ನಂತರ ಸಾಮರ್ಥ್ಯ ಪ್ರಮಾಣ ಪತ್ರ (ಫಿಟ್ ನೆಸ್ ಸರ್ಟಿಫಿಕೇಟ್) ಪಡೆದಿರುವ ವಾಹನಗಳ ಚಾಲಕರಿಗೆ ಇದರ ಅಳವಡಿಕೆಗೆ ಫೆಬ್ರುವರಿ 12ರಿಂದ ಒಂದು ತಿಂಗಳ ಕಾಲಾವಕಾಶವನ್ನು ಪೀಠ ನೀಡಿತು. ಹೊಸ ವಾಹನಗಳು ವೇಗ ನಿಯಂತ್ರಕ ಅಳವಡಿಸಿಕೊಂಡ ನಂತರವಷ್ಟೇ ಅವುಗಳನ್ನು ನೋಂದಣಿ ಮಾಡುವಂತೆ ಮತ್ತು ಇದನ್ನು ಅಳವಡಿಕೆ ಮಾಡಿಕೊಳ್ಳದ ವಾಹನಗಳಿಗೆ ಸಾಮರ್ಥ್ಯ ಪ್ರಮಾಣ ಪತ್ರ ನೀಡದಂತೆ ಕೋರ್ಟ್ ಸರ್ಕಾರಕ್ಕೆ  ತಾಕೀತು ಮಾಡಿತು. ವೇಗ ನಿಯಂತ್ರಕದ ಅಳವಡಿಕೆಯನ್ನು ಕಡ್ಡಾಯ ಮಾಡಿ 2005ರ ಮಾರ್ಚ್ 28ರಂದು ಸರ್ಕಾರವೇ ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಮೋಟಾರು ವಾಹನ ಕಾಯ್ದೆಯ 118ನೇ ನಿಯಮದ ಪ್ರಕಾರ ಇದರ ಅಳವಡಿಕೆ ಕಡ್ಡಾಯ ಆಗಿತ್ತು. ಆದರೂ ಮೇಲಿಂದ ಮೇಲೆ ಅಳವಡಿಕೆಯ ದಿನಾಂಕವನ್ನು ವಿಸ್ತರಣೆ ಮಾಡುತ್ತ ಬಂದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿತು.

 2008: ಉತ್ತರಪ್ರದೇಶದ ಲಖನೌನಲ್ಲಿ ಸೆರೆ ಸಿಕ್ಕಿದ ಐಐಎಸ್ಸಿ (ಭಾರತೀಯ ವಿಜ್ಞಾನ ಸಂಸ್ಥೆ) ದಾಳಿಯ ಪ್ರಮುಖ ಆರೋಪಿ ಸಲಾವುದ್ದೀನ್ ತನ್ನ ಸಹಚರರೊಡನೆ ಸೇರಿಕೊಂಡು ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಿಸುವ ಮತ್ತು ಆತಂಕ ಸೃಷ್ಟಿಸುವ ಸಂಚು ನಡೆಸಿದ್ದ ಎಂಬುದು ಬೆಳಕಿಗೆ ಬಂತು. ತಮ್ಮ ವಶಕ್ಕೆ ತೆಗೆದುಕೊಳ್ಳಲು ಲಖನೌಗೆ ತೆರಳಿದ ಕರ್ನಾಟಕ ರಾಜ್ಯದ ಪೊಲೀಸರ ವಿಶೇಷ ತಂಡಕ್ಕೆ ಸಲಾವ್ದುದೀನ್ ದಾಳಿ ಸಂಚು, ರೂಪುರೇಷೆ ಮತ್ತು ಇತರ ಬೆಚ್ಚಿಬೀಳುವ ಮಾಹಿತಿ ನೀಡಿದ.

2008: ಭೂಮಿಗಿಂತ 350 ಕಿ.ಮೀ. ಎತ್ತರದಲ್ಲಿ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಯುರೋಪಿನ ಬಾಹ್ಯಾಕಾಶ ಪ್ರಯೋಗಾಲಯ `ಕೊಲಂಬಸ್' ನ್ನು  ಜೋಡಿಸುವಲ್ಲಿ ಖಗೋಳ ವಿಜ್ಞಾನಿಗಳು ಸಫಲರಾದರು. ಹಾಗೂ ಈ ಮೂಲಕ ಬಾಹ್ಯಾಕಾಶದ ಬಗ್ಗೆ ಆಳವಾದ ಅಧ್ಯಯನ ನಡೆಸಲು ಯೂರೋಪ್ ರಾಷ್ಟ್ರಗಳಿಗೆ ಭಾರಿ ಅವಕಾಶ ಲಭಿಸಿತು. `ಯುರೋಪಿಯನ್ ಕೊಲಂಬಸ್ ಪ್ರಯೋಗಾಲಯ ಈಗ ಅಧಿಕೃತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭಾಗವಾಗಿಬಿಟ್ಟಿದೆ' ಎಂದು ಫ್ರಾನ್ಸಿನ ಬಾಹ್ಯಾಕಾಶ ಎಂಜಿನಿಯರ್ ಲಿಯೊಪೋಲ್ಡ್ ಐಹಾರ್ಟ್ಸ್ ಹೇಳಿದ್ದನ್ನು ಹಾಗೂ ಉಪಗ್ರಹದ ಕಾರ್ಯಚಟುವಟಿಕೆಗಳನ್ನು ನೇರವಾಗಿ ಬಿತ್ತರಿಸಿದ ನಾಸಾ ಬ್ರಾಡ್ ಕಾಸ್ಟಿಂಗ್ ತಿಳಿಸಿತ್ತು. ಅಮೆರಿಕದ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ಸಿನ ಇಬ್ಬರು ವ್ಯೋಮಯಾನಿಗಳು ಇದಕ್ಕೆ ಮೊದಲು 7 ಗಂಟೆಗಳ ಬಾಹ್ಯಾಕಾಶ ನಡಿಗೆ ಮಾಡಿ ನಿಲ್ದಾಣದಲ್ಲಿ ಕೊಲಂಬಸ್ ನಿಲುಗಡೆಗೊಳ್ಳುವುದಕ್ಕೆ ಸಿದ್ಧತೆ ನಡೆಸಿದ್ದರು. ಇದುವರೆಗೆ ರಷ್ಯ ಮತ್ತು ಅಮೆರಿಕ ಮಾತ್ರ ಈ ನಿಲ್ದಾಣದಲ್ಲಿ ಕಾರ್ಯಾಚರಣೆ  ನಡೆಸುತ್ತಿದ್ದವು. ಮುಖ್ಯವಾಗಿ ಮಂಗಳನತ್ತ ತೆರಳುವುದಕ್ಕೆ ಸಿದ್ಧತೆ ಮಾಡುವುದೇ ಈ ಯೋಜನೆಯ ಉದ್ದೇಶ.

2008: ಪಾಕಿಸ್ಥಾನದ ಪರಮಾಣು ಇಂಧನ ಆಯೋಗದ ಇಬ್ಬರು ಸಿಬ್ಬಂದಿಯೂ ಸೇರಿದಂತೆ ಎಂಟು ಮಂದಿಯನ್ನು ಅಪರಿಚಿತ ಬಂದೂಕುಧಾರಿಗಳು ಪಾಕಿಸ್ಥಾನದ ಗಲಭೆಪೀಡಿತ ಅಫ್ಘಾನಿಸ್ಥಾನದ ಗಡಿ ಭಾಗದಿಂದ ಅಪಹರಿಸಿದರು.

2008: ಆಕ್ಸ್ ಫರ್ಡ್ ವಿಶ್ವವಿದ್ಯಾಲಯವು ತನ್ನ ಹಳೆ ವಿದ್ಯಾರ್ಥಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್  ಸಿಂಗ್  ಅಹ್ಲುವಾಲಿಯಾ ಅವರಿಗೆ ಜೂನ್ 18ರಂದು ಗೌರವ ಡಾಕ್ಟರೇಟ್ (ಡಾಕ್ಟರ್ ಆಫ್  ಸಿವಿಲ್ ಲಾ) ಪ್ರದಾನ ಮಾಡಲು ನಿರ್ಧರಿಸಿತು. ಇದೇ ವಿವಿಯಿಂದ  ಪ್ರಧಾನಿ ಮನಮೋಹನ್ ಸಿಂಗ್ ಈ ಗೌರವಕ್ಕೆ ಪಾತ್ರರಾಗಿದ್ದರು.

2008: ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಪ್ರಥಮ ಪಂಚಮಸಾಲಿ ಮಹಾಪೀಠ ಸ್ಥಾಪನೆಗೊಂಡಿತು. ಬಸವ ಜಯಮೃತ್ಯುಂಜಯ ಸ್ವಾಮಿ ಪೀಠಾರೋಹಣ ಮಾಡಿ       ಲಿಂಗಾಯತ, ಪಂಚಮ ಸಾಲಿ ಮಹಾಪೀಠದ ಪ್ರಥಮ ಜಗದ್ಗುರುಗಳಾಗಿ ಪೀಠಾರೋಹಣ ಮಾಡಿದರು.

2008: ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಡಾ. ಸುಖದೇವ್ ಥೋರಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ, ಗುಲ್ಬರ್ಗದ ಕೈಗಾರಿಕೋದ್ಯಮಿ ಗಳಂಗಳಪ್ಪ ಪಾಟೀಲ, ಖಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಗೂ ಖಾಜಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಹಾಗೂ ಬೀದರಿನ ಚೆನ್ನಬಸಪ್ಪ ಹಾಲಹಳ್ಳಿ ಈ ಐವರನ್ನು ಗುಲ್ಬರ್ಗ ವಿಶ್ವ ವಿದ್ಯಾಲಯವು 2008ರ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿತು.

2007: ಬೋಸ್ಟನ್ನಿನಲ್ಲಿ 1636ರಲ್ಲಿ ಸ್ಥಾಪನೆಗೊಂಡಿದ್ದ ಹಾರ್ವರ್ಡ್ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಕ್ಷ ಸ್ಥಾನವನ್ನು ನಾಲ್ಕೂವರೆ ಶತಮಾನಗಳ ನಂತರ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಅಲಂಕರಿಸಿದರು. ದಕ್ಷಿಣ ಅಮೆರಿಕದ ಖ್ಯಾತ ಇತಿಹಾಸ ತಜ್ಞೆ ಡ್ರ್ಯೂ ಗಿಲ್ ಪಿನ್ ಫೌಸ್ಟ್ (59) ಅವರು ಈ ಸ್ಥಾನಕ್ಕೆ ಏರಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ರಾಜ್ಯವ್ಯಾಪಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜನ ಜೀವನ, ಸಾರಿಗೆ ಸಂಚಾರ ಬಹುತೇಕ ಸ್ಥಗಿತಗೊಂಡಿತು.

2007: ಸಂಸತ್ ಸದಸ್ಯರ ಮತ್ತು ಶಾಸಕರ ಕ್ಷೇತ್ರ ಅಭಿವೃದ್ಧಿ ಯೋಜನೆಗಳ ರದ್ದು, ರಾಷ್ಟ್ರೀಯ ನ್ಯಾಯ ಮಂಡಳಿ ಸ್ಥಾಪನೆ, ಗಂಭೀರ ವಂಚನೆಗಳ ತನಿಖಾ ಸಂಸ್ಥೆ ರಚನೆ, ರಾಷ್ಟ್ರೀಯ ಲೋಕಾಯುಕ್ತಕ್ಕೆ ಅಂಬುಡ್ಸ್ ಮನ್ ನೇಮಕ ಸೇರಿದಂತೆ ಮಹತ್ವದ ಹಲವಾರು ಶಿಫಾರಸುಗಳನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗವು ನಾಲ್ಕನೇ ವರದಿಯಲ್ಲಿ ಮಾಡಿತು. ವರದಿಯನ್ನು ಮೊಯಿಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿದರು.

2007: ಬೆಂಗಳೂರಿನ 80 ವರ್ಷಗಳಷ್ಟು ಹಳೆಯದಾದ ಎಂಟಿಆರ್ ಫುಡ್ಸ್ ಕಂಪೆನಿಯನ್ನು ನಾರ್ವೆಯ ಓರ್ ಕ್ಲಾ ಕಂಪೆನಿಯು 443 ಕೋಟಿ ರೂಪಾಯಿಗಳಿಗೆ (100 ದಶಲಕ್ಷ ಡಾಲರ್) ಖರೀದಿಸಿದೆ ಎಂಬ ಸುದ್ದಿಯನ್ನು ಹಾಂಕಾಂಗಿನ ಫೈನಾನ್ಸ್ ಏಷ್ಯಾ ಡಾಟ್ ಕಾಂ ವೆಬ್ ಸೈಟ್ ಪ್ರಕಟಿಸಿತು.

2007: ಸಂಗೀತ ಲೋಕದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯು ಈ ಬಾರಿ ಸಂಗೀತ ತಂಡ ಡಿಕ್ಸಿ ಚಿಕ್ಸ್ ನ `ನಾಟ್ ರೆಡಿ ಟು ಮೇಕ್ ನೈಸ್' ಚಿತ್ರದ ಪಾಲಾಯಿತು. ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರ ಧೋರಣೆ ಟೀಕಿಸಿದ್ದಕ್ಕೆ ವ್ಯಕ್ತವಾದ ಟೀಕೆಗೆ ಪ್ರತಿಯಾಗಿ ಈ ಹಾಡು ರಚಿಸಲಾಗಿದೆ.

2007: ಆಂಧ್ರ ಪ್ರದೇಶದ ವಿಜಯವಾಡ ಸಮೀಪದ ಕೊಂಡಪಲ್ಲಿ ಗ್ರಾಮದಲ್ಲಿ ತಯಾರಾಗುವ ಸಾಂಪ್ರದಾಯಿಕ ಶೈಲಿಯ ಅತ್ಯಾಕರ್ಷಕ ಮರದ ಬೊಂಬೆಗಳಿಗೆ ಜಿಐ (ಜಿಯಾಗ್ರಾಫಿಕಲ್ ಇಂಡಿಕೇಟರ್) ಮಾನ್ಯತಾ ಪ್ರಮಾಣ ಪತ್ರವನ್ನು ಚೆನ್ನೈನ ಪೇಟೆಂಟ್ ಕಚೇರಿಯು ನೀಡಿತು. ಇದರಿಂದಾಗಿ ಕೊಂಡಪಲ್ಲಿಯ ಬೊಂಬೆಗಳಿಗೆ ವಿಶ್ವಮಾನ್ಯತೆ ಲಭಿಸುವುದರ ಜೊತೆಗೆ ಈ ವಿನ್ಯಾಸಕ್ಕೆ ಈ ಗ್ರಾಮದ ಕುಶಲಕರ್ಮಿಗಳಿಗೆ ಪೇಟೆಂಟ್ ಕೂಡಾ ಲಭಿಸಿತು.

2007: ಮುಲ್ ಬೆರ್ರಿ ರೇಷ್ಮೆ ಕೃಷಿಯ ಅನುಕೂಲಕ್ಕಾಗಿ ಕರ್ನಾಟಕದ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹೂಗಾರೆಯ ದಿವಂಗತ ಅಣ್ಣೇಗೌಡ ಅವರು ನಿರ್ಮಿಸಿದ `ಚಂದ್ರಿಕೆ' ರೇಷ್ಮೆಗೂಡು ಸ್ಟ್ಯಾಂಡ್ ಮತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಣ್ಣಾ ಸಾಹೇಬ ಭಾವು ಉದ್ಗವಿ ಅವರು ನಿರ್ಮಿಸಿದ ಬಹೂಪಯೋಗಿ ಕಬ್ಬು ಅರೆಯುವ ಯಂತ್ರಗಳು ರಾಷ್ಟ್ರೀಯ ಗ್ರಾಮಮಟ್ಟದ ತಂತ್ರಜ್ಞಾನ ಆವಿಷ್ಕಾರ ಪ್ರಶಸ್ತಿ ಗಳಿಸಿದವು.

2007: ಕರ್ನಾಟಕದ ರೇಹಾನ್ ಪೂಂಚಾ ಅವರು ಗುವಾಹಟಿಯಲ್ಲಿ ನಡೆದ 33ನೇ ರಾಷ್ಟ್ರೀಯ ಕ್ರೀಡೆಗಳ ಪುರುಷರ 400 ಮೀಟರ್ ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯಲ್ಲಿ 10 ವರ್ಷಗಳ ಹಿಂದಿನ ದಾಖಲೆ ಮುರಿದು ಚಿನ್ನ ಗಳಿಸಿದರು. ಪೂಂಚಾ ಅವರು ಈ ದೂರವನ್ನು 4:44:32 ಸೆಕೆಂಡುಗಳಲ್ಲಿ ಕ್ರಮಿಸಿ, 1997ರಲ್ಲಿ ಜೆ. ಅಭಿಜೀತ್ ಸ್ಥಾಪಿಸಿದ್ದ 4:47:94 ಸೆಕೆಂಡುಗಳ ದಾಖಲೆಯನ್ನು ಮುರಿದರು.

2007: ಭಾರತದ ಮುಂಚೂಣಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ಬಿರ್ಲಾ ಸಮೂಹವು ಅಮೆರಿಕ ಮೂಲದ ನೊವೆಲಸ್ ಕಂಪೆನಿಯನ್ನು ಸುಮಾರು 27000 ಕೋಟಿ ರೂಪಾಯಿಗಳಿಗೆ (600 ಕೋಟಿ ಡಾಲರ್) ಖರೀದಿಸಲು ಸಜ್ಜಾಯಿತು. ಕೋರಸ್ ಉಕ್ಕು ಕಂಪೆನಿಯನ್ನು ಟಾಟಾ ಸ್ಟೀಲ್ ಕಂಪೆನಿ ವಶಕ್ಕೆ ತೆಗೆದುಕೊಂಡ ಬೆನ್ನಲೇ ಈ ಬೆಳವಣಿಗೆ ನಡೆಯಿತು.

2007: ಬಾಗ್ದಾದ್ ನಗರದ ಹೃದಯಭಾಗದಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಪ್ರತ್ಯೇಕ ಕಾರುಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 68 ಜನ ಮೃತರಾಗಿ 100ಕ್ಕೂ ಹೆಚ್ಚು ಜನ ಗಾಯಗೊಂಡರು. 

 2006: ತಮಿಳುನಾಡಿನ ಚೆನ್ನೈ ಲೈಫ್ ಲೈನ್ ಆಸ್ಪತ್ರೆಯ ಡಾ. ಜೆ.ಎಸ್. ರಾಜಕುಮಾರ್ ಅವರು 13 ಗಂಟೆ 41 ನಿಮಿಷ, 19 ಸೆಕೆಂಡುಗಳಲ್ಲಿ 41 ಶಸ್ತ್ರಚಿಕಿತ್ಸೆ ನಡೆಸಿ ಹೊಸ ದಾಖಲೆ ಸ್ಥಾಪಿಸಿದರು. 24 ಗಂಟೆಯಲ್ಲಿ 41 ಶಸ್ತ್ರಚಿಕಿತ್ಸೆ ನಡೆಸಿದ ದಾಖಲೆ ಇತ್ತು. ರಾಜ ಕುಮಾರ್ ಅವರು ಈ ದಾಖಲೆಯನ್ನು ಮುರಿದರು.

2006: ಮುಂಬೈನ ಸಂಕಲ್ಪ ಹೋಟೆಲ್ ಸಮೂಹ 30 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಿತು. ಈ ಹಿಂದೆ 25 ಅಡಿ ಉದ್ದದ ದೋಸೆಯನ್ನು ಸಹಾ ಇದೇ ಸಮೂಹ ಮಾಡಿತ್ತು.

2006: ಕಕ್ಷಿದಾರ ದೆಹಲಿಯ ಸುಭಾಶ್ ಚಂದ್ರ ಅಗರ್ವಾಲ್ ಅವರಿಗೆ ಅಗತ್ಯ ಮಾಹಿತಿ ನೀಡದೆ ಸತಾಯಿಸಿದ್ದಕ್ಕಾಗಿ ಸುಪ್ರೀಂಕೋರ್ಟಿನ ಆಡಳಿತ ವಿಭಾಗಕ್ಕೆ ಕೇಂದ್ರ ಮಾಹಿತಿ ಆಯೋಗ ತೀವ್ರ ಎಚ್ಚರಿಕೆ ನೀಡಿತು. ಎಂಟು ತಿಂಗಳ ಹಿಂದೆ ಮಾಹಿತಿ ಹಕ್ಕು ಜಾರಿಗೆ ಬಂದ ಬಳಿಕ ಆಯೋಗದ ಎದುರು ನ್ಯಾಯಾಲಯಕ್ಕೆ ಸಂಬಂಧಿಸಿದ ಇಂತಹ ಪ್ರಕರಣ ಬಂದದ್ದು ಮತ್ತು ತೀರ್ಮಾನ ಕೈಗೊಂಡಿರುವ ಪ್ರಕರಣಗಳು ಎರಡೂ ಪ್ರಪ್ರಥಮ. 

2000: `ಪೀನಟ್ಸ್' ಕಾಮಿಕ್ ಸ್ಟ್ರಿಪ್ ಸೃಷ್ಟಿಕರ್ತ ಚಾರ್ಲ್ಸ್ ಶುಲ್ಜ್ ತಮ್ಮ 77ನೇ ವಯಸ್ಸಿನಲ್ಲಿ ಮೃತರಾದರು. ತಮ್ಮ ಕೊನೆಯ ಕಾಮಿಕ್ ಸ್ಟ್ರಿಪ್ಪನ್ನು ಅವರು 2000ದ ಜನವರಿ 3ರಂದು ಪ್ರಕಟಿಸಿದ್ದರು. `ಪೀನಟ್ಸ್' ಕಾಮಿಕ್ ಸ್ಟ್ರಿಪ್ 75 ರಾಷ್ಟ್ರಗಳ 2620 ವೃತ್ತ ಪತ್ರಿಕೆಗಳಲ್ಲಿಪ್ರಕಟವಾಗುತ್ತದೆ.

1999: ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ವಿರುದ್ಧ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಾಡಿದ್ದ ದೋಷಾರೋಪವನ್ನು ಅಮೆರಿಕಾದ ಸೆನೆಟ್ ತಿರಸ್ಕರಿಸಿತು. ಈ ಚಾರಿತ್ರಿಕ ನಿರ್ಣಯವು ಕ್ಲಿಂಟನ್ ಅವರನ್ನು ದೋಷಾರೋಪ ಪ್ರಕ್ರಿಯೆಯಿಂದಲೇ ಮುಕ್ತರನ್ನಾಗಿ ಮಾಡಿತು.

1949: ಭಾರತೀಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಹುಟ್ಟಿದ ದಿನ. ಇವರು ತಮ್ಮ ಚೊಚ್ಚಲ ಪ್ರಥಮ ದರ್ಜೆ ಹಾಗೂ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಸೆಂಚುರಿ ಸಿಡಿಸಿದರು. ಇವರು ಸುನಿಲ್ ಗಾವಸ್ಕರ್ ಅವರ ಸಹೋದರಿಯನ್ನು ವಿವಾಹವಾದರು.

1948: ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಅಲಹಾಬಾದ್ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸುವ ಸಲುವಾಗಿ ತೃತೀಯ ದರ್ಜೆಯ ಬೋಗಿ ಸಂಖ್ಯೆ 2949ರಲ್ಲಿ ತರಲಾಯಿತು. ಚಿತಾಭಸ್ಮದಲ್ಲಿ ಸ್ವಲ್ಪ ಭಾಗವನ್ನು ಪರಮಹಂಸ ಯೋಗಾನಂದ ಅವರಿಗೆ ನೀಡಲಾಯಿತು. ಅವರು ಅದನ್ನು ಕ್ಯಾಲಿಫೋರ್ನಿಯಾದ ಗಾಂಧಿ ಶಾಂತಿ ಪ್ರತಿಷ್ಠಾನ ಸ್ಮಾರಕದಲ್ಲಿ ಇರಿಸಿದರು.

1945: ಕಲಾವಿದ ಇ.ಕೆ. ಜನಾರ್ದನ್ ಜನನ.

1940: ಕಲಾವಿದ ಕೆ. ದೇವರಾಜ ಜನನ.

1934: ಚಿತ್ರ ಕಲಾವಿದ ವಿ.ಟಿ. ಕಾಳೆ ಅವರು ತುಳಜಾರಾಮ- ಭರಮವ್ವ ದಂಪತಿಯ ಮಗನಾಗಿ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು.

1925: ಕಲಾವಿದ ಹುಸೇನ್ ಸಾಬ್ ನದಾಫ್ ಜನನ.

1922: ಭಾರತದಲ್ಲಿ ಅಸಹಕಾರ ಚಳವಳಿ ಕೊನೆಗೊಂಡಿತು. ಚಳವಳಿ ಹಿಂತೆಗೆದುಕೊಳ್ಳುವ ತಮ್ಮ ನಿರ್ಧಾರವನ್ನು ಅನುಮೋದಿಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಮನವೊಲಿಸುವಲ್ಲಿ ಮಹಾತ್ಮ ಗಾಂಧೀಜಿಯವರು ಯಶಸ್ವಿಯಾದರು. ಫೆಬ್ರುವರಿ 5ರಂದು ಚೌರಿಚೌರಾದಲ್ಲಿ ಸಂಭವಿಸಿದ ಹಿಂಸಾತ್ಮಕ ಘಟನೆಯಲ್ಲಿ 22 ಪೊಲೀಸರು ಮೃತರಾದುದೇ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಿಂತೆದುಕೊಳ್ಳಲು ಕಾರಣ. 

1824: ಸ್ವಾಮಿ ದಯಾನಂದ ಸರಸ್ವತಿ (1824-83) ಜನ್ಮದಿನ. ಭಾರತದ ಧಾರ್ಮಿಕ ನಾಯಕರಾದ ಇವರು ಆರ್ಯ ಸಮಾಜದ ಸ್ಥಾಪಕರು. 

1809: ಅಮೆರಿಕಾದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್ (1809-1865) ಹುಟ್ಟಿದರು.

1809: ವಿಕಾಸ ವಾದದ ಮೂಲಕ ಜನಪ್ರಿಯರಾದ ಚಾರ್ಲ್ಸ್ ಡಾರ್ವಿನ್ ಈದಿನ ಇಂಗ್ಲೆಂಡಿನಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement