ಇಂದಿನ ಇತಿಹಾಸ
ಮಾರ್ಚ್ 21
ಜಗತ್ತಿನ ಮೊತ್ತ ಮೊದಲ `ಪ್ರನಾಳ ಶಿಶು' (ಟೆಸ್ಟ್ ಟ್ಯೂಬ್ ಬೇಬಿ) ಲೂಯಿ ಬ್ರೌನ್ ಹುಟ್ಟಿಗೆ ಕಾರಣವಾದ `ಇನ್ ವಿಟ್ರೋ ಫರ್ಟಿಲೈಸೇಷನ್' ವಿಧಾನದ ಸಂಶೋಧಕ ಬ್ರಿಟನ್ನಿನ ಪ್ಯಾಟ್ರಿಕ್ ಸ್ಟೆಪ್ ಟೋ (1913-1988) ತನ್ನ 74ನೇ ವಯಸ್ಸಿನಲ್ಲಿ ಮೃತನಾದ.
2008: ಕರ್ನಾಟಕ ರಾಜ್ಯದಲ್ಲಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮುಂದುವರೆದ ಅಕಾಲಿಕ ಮಳೆಗೆ ಮೂವರು ಬಲಿಯಾಗಿ, ಕೆಲವೆಡೆ ಬೆಳೆ ಹಾನಿ ಸಂಭವಿಸಿತು. ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ ಕೇವಲ 3.6 ಕಿ.ಮೀ. ಎತ್ತರದಲ್ಲಿ ವಾಯುಭಾರ ಕುಸಿತ ಉಂಟಾಗಿ ಕರ್ನಾಟಕದ ವಿವಿಧೆಡೆ ವ್ಯಾಪಕವಾಗಿ ಮಳೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಅತಿ ಹೆಚ್ಚು 6 ಸೆಂಟಿಮೀಟರ್ ಮಳೆ ಬಿದ್ದಿತು. ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಯಿತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾರಮಡು ಗ್ರಾಮದಲ್ಲಿ ಮನೆ ಮಾಳಿಗೆ ಕುಸಿದು ಒಬ್ಬರು ಮೃತರಾದರು. ಗುಲ್ಬರ್ಗ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ದನ ಕಾಯಲು ಹೋಗಿದ್ದ ಬಾಲಕನೊಬ್ಬ ಸಿಡಿಲಿಗೆ ಬಲಿಯಾದ. ಕಾಸರಗೋಡು ಜಿಲ್ಲೆ ಕುಂಬಳೆಯ ಕೋಟೆಕಾರಿನಲ್ಲಿ ಸಿಡಿಲು ಬಡಿದು ಅಧ್ಯಾಪಕರೊಬ್ಬರು ಮೃತರಾದರು.
2008: ಟಿಬೆಟ್ ಸ್ವಾತಂತ್ರ್ಯಕ್ಕಾಗಿನ ದಲೈಲಾಮ ಅನುಯಾಯಿಗಳ ಹೋರಾಟವನ್ನು ಬೆಂಬಲಿಸಿ ಅನೇಕ ಟಿಬೆಟನ್ನರು ನವದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಮತ್ತು ತಡೆಗೋಡೆಗಳನ್ನು ಭೇದಿಸಿ, ಚೀನಾ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದರು.
2008: ಚೀನಾದ ವಾಯವ್ಯ ಭಾಗದ ಕ್ಸಿಜಿಯಾಂಗಿನಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 7.3ರಷ್ಟಿದ್ದ ಕಂಪನವು ಇಡೀ ಪಟ್ಟಣವನ್ನು ನಾಲ್ಕು ಬಾರಿ ನಡುಗಿಸಿತು.
2008: ಇಬ್ಬರು ಮೀನುಗಾರರ ಸಾವಿಗೆ ಕಾರಣವಾದ ನೌಕಾ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪಾನ್ ರಕ್ಷಣಾ ಸಚಿವರು ನೌಕಾದಳದ ಮುಖ್ಯಸ್ಥರನ್ನು ಸೇವೆಯಿಂದ ವಜಾ ಮಾಡಿದರು. ಹಾಗೂ ನೌಕಾಪಡೆಯ ಇತರ 90 ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಿದರು. ಟೋಕಿಯೊ ಕೊಲ್ಲಿ ಪ್ರದೇಶದಲ್ಲಿ ಕಳೆದ ತಿಂಗಳು ಜಪಾನಿನ ಅತ್ಯಾಧುನಿಕ ಜಲಫಿರಂಗಿಯು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಒಬ್ಬ ಮೀನುಗಾರ ಹಾಗೂ ಆತನ ಮಗ ಸಾವಿಗೀಡಾಗಿ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ರಕ್ಷಣಾ ಸಚಿವಾಲಯವು ನೌಕಾ ಮುಖ್ಯಸ್ಥ ಅಡ್ಮಿರಲ್ ಕೈಜಿ ಅಕಹೋಶಿ ಅವರನ್ನು ಸೇವೆಯಿಂದ ವಜಾ ಮಾಡಿತು. ರಕ್ಷಣಾ ಸಚಿವರು ಈ ಬಗ್ಗೆ ಸಾರ್ವಜನಿಕರ ಕ್ಷಮೆ ಕೋರಿದರು.
2008: ಸಂಸತ್ತಿನ ಅಧ್ಯಕ್ಷರ ಭ್ರಷ್ಟಾಚಾರವನ್ನು ವಿರೋಧಿಸಿ 44 ವರ್ಷದ ವ್ಯಕ್ತಿಯೊಬ್ಬ ಬ್ಯಾಂಕಾಕಿನಲ್ಲಿ ಸಂಸತ್ ಭವನದ ಎದುರು ಗ್ಯಾಸೋಲಿನ್ ಸುರಿದುಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆಯಿತು. ಸಂಸತ್ತಿನ ಅಧ್ಯಕ್ಷ ಯೋಂಗ್ಯುಟ್ ಟೈಪರೈಟ್ ಅವರು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡಲು ಉತ್ತರ ಥೈಲ್ಯಾಂಡಿನಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ್ದರಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಆತ್ಮಾಹುತಿಗೆ ಯತ್ನಿಸಿದ ಟ್ರುತ್ಮಾಂಕಾನ ದೇಹದ ಶೇಕಡಾ 90ರಷ್ಟು ಭಾಗಗಳು ಸುಟ್ಟುಹೋಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದವು.
2008: ಖ್ಯಾತ ಕಲಾವಿದ ಎಂ. ಎಫ್. ಹುಸೇನ್ ಅವರು ರಚಿಸಿದ ಸಮಕಾಲೀನ ಭಾರತದ ಕಲಾಕೃತಿ ನ್ಯೂಯಾರ್ಕಿನಲ್ಲಿ 1.6 ದಶಲಕ್ಷ ಅಮೆರಿಕ ಡಾಲರಿಗೆ ಹರಾಜಾಗುವುದರೊಂದಿಗೆ ದಾಖಲೆ ಬೆಲೆ ಕಂಡಿತು. ಹುಸೇನ್ ಅವರ ವಿವಾದಾತ್ಮಕ ಕೃತಿಗಳ ಬಗ್ಗೆ ಹರಾಜು ನಡೆದ ಕಟ್ಟಡದ ಹೊರ ಭಾಗದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಆದರೂ ಅನಾಮಧೇಯ ವ್ಯಕ್ತಿಯೊಬ್ಬರು `ಬ್ಯಾಟಲ್ ಆಫ್ ಗಂಗಾ ಆಂಡ್ ಜಮುನಾ; ಮಹಾಭಾರತ 12' ಕೃತಿಯನ್ನು 1.6 ದಶಲಕ್ಷ ಡಾಲರಿಗೆ ಖರೀದಿಸಿದರು.
2008: ಟಿಬೆಟ್ ಜನ ನೆಲೆಸಿರುವ ನೈಋತ್ಯದ ಸಿಚುವಾನ್ ಪ್ರಾಂತ್ಯದಲ್ಲಿ ಗುಂಡು ಹಾರಿಸಿ 4 ಜನ ಪ್ರತಿಭಟನಾಕಾರರನ್ನು ಗಾಯಗೊಳಿಸಿರುವುದಾಗಿ ಚೀನಾ ಒಪ್ಪಿಕೊಂಡಿತು. ಲ್ಹಾಸಾದಲ್ಲಿ ಹಿಂದಿನವಾರ ಚೀನಾ ವಿರೋಧಿ ಪ್ರತಿಭಟನೆ ಭುಗಿಲೆದ್ದಾಗ ಸಿಚುವಾನಿನಲ್ಲಿಯೂ ಇದು ಪ್ರತಿಧ್ವನಿಸಿತ್ತು.
2008: ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪೊಲೀಸರಿಗಾಗಿ ವಿಶ್ವವಿದ್ಯಾಲಯವನ್ನು ಜಲಂಧರಿನ ಫಿಲ್ಲೂರಿನಲ್ಲಿಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಕಟಿಸಿದರು.
2008: ಶ್ರವಣ ಬೆಳಗೊಳದ ಶ್ರುತ ಕೇವಲಿ ಟ್ರಸ್ಟ್ ಹಾಗೂ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥಾನದ ವತಿಯಿಂದ ನೀಡಲಾಗುವ `ಪ್ರಾಕೃತ ಜ್ಞಾನಭಾರತಿ' ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಜರ್ಮನಿಯ ಪ್ರಾಕೃತ ವಿದ್ವಾಂಸರಾದ ಪ್ರೊ. ವಿಲ್ಲೆಂ ಬೊಲ್ಲಿ ಮತ್ತು ಪ್ರೊ. ಕ್ಲಾಸ್ ಬ್ರೂನ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಈ ಪುರಸ್ಕಾರವನ್ನು 2004 ರಲ್ಲಿ ಆರಂಭಿಸಲಾಗಿತ್ತು. ಬೊಲ್ಲಿ ಅವರನ್ನು 2005ನೇ ಸಾಲಿನ ಹಾಗೂ ಬ್ರೂನ್ ಅವರನ್ನು 2006ನೇ ಸಾಲಿನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಬೊಲ್ಲಿ ಅವರು ಜಗತ್ತಿನ ಹಿರಿಯ ಪ್ರಾಕೃತ ವಿದ್ವಾಂಸರಲ್ಲಿ ಒಬ್ಬರಾಗಿದ್ದು, ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಒಂದೂವರೆ ಸಾವಿರ ವರ್ಷಗಳಷ್ಟು ಹಳೆಯದಾದ `ಪಯೇಸಿಯ ಕಥೆ' ಎಂಬ ಕೃತಿಯನ್ನು ಸಂಪಾದಿಸಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿ. ಮತ್ತೊಬ್ಬ ಹಿರಿಯ ವಿದ್ವಾಂಸರಾದ ಬ್ರೂನ್ ಮಧ್ಯಪ್ರದೇಶದ ದೇವಗಢದಲ್ಲಿ ಸಂಶೋಧನೆ ಕೈಗೊಂಡು ಕೃತಿಗಳನ್ನು ಪ್ರಕಟಿಸಿದ್ದರು.
2007: ವೃದ್ಧರು ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಪಾಲಕರ ರಕ್ಷಣೆಗಾಗಿ ಲೋಕಸಭೆಯಲ್ಲಿ ನಿರ್ವಹಣೆ ಮತ್ತು ಪಾಲಕರ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಮಸೂದೆ- 2007ನ್ನು ಲೋಕಸಭೆಯಲ್ಲಿ ಸರ್ಕಾರ ಮಂಡಿಸಿತು. ಇದರ ಪ್ರಕಾರ 60 ವರ್ಷಕ್ಕೂ ಮೇಲ್ಪಟ್ಟ ತಂದೆ- ತಾಯಿಯನ್ನು ಕಡೆಗಣಿಸುವವರಿಗೆ 5000 ರೂಪಾಯಿ ದಂಡ ಅಥವಾ ಮೂರು ತಿಂಗಳು ಸೆರೆಮನೆವಾಸ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
2007: ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಪ್ರೊ. ಎನ್. ಬಾಲಸುಬ್ರಹ್ಮಣ್ಯ ಸೇರಿದಂತೆ ಐವರು ಹಿರಿಯ ಅನುವಾದಕರಿಗೆ 2006-07ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಿತು. ಹಿರಿಯ ಅನುವಾದಕರಾದ ಎಂ.ಬಿ. ಅಬ್ದುಲ್ ಘನಿ, ಲವ್ಲೀನ್ ಜೋಲಿ, ಸಿ. ರಾಘವನ್ ಮತ್ತು ಡಾ. ತಿಪ್ಪೇಸ್ವಾಮಿ ಅವರನ್ನೂ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಪ್ರಕಟಿಸಿದರು.
2007: ಹೊಸನಗರದಲ್ಲಿ ಏಪ್ರಿಲ್ 21ರಿಂದ 29ರವರೆಗೆ ನಡೆಯುವ ವಿಶ್ವ ಗೋ ಸಮ್ಮೇಳನದ ಬಳಿಕ ರಾಜ್ಯದಲ್ಲಿ ಕಾಮಧೇನು ವಿಶ್ವ ವಿದ್ಯಾಲಯ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.
2007: ಕೈಗಾರಿಕಾ ಉದ್ದೇಶ ಹಾಗೂ ವಿಶೇಷ ಆರ್ಥಿಕ ವಲಯಗಳಿಗೆ (ಎಸ್ ಇ ಜೆಡ್) ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಎದ್ದ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಸ್ ಇ ಜೆಡ್ ನಿಯಮಾವಳಿಗಳಿಗೆ ಬದಲಾವಣೆ ತಂದಿತು. ಈ ನಿಯಮಾವಳಿಗಳಲ್ಲಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಉದ್ಯಮಿಗಳ ಮೇಲೆ ಹೊರಿಸಲಾಯಿತು.
2006: ಪೊಲೀಸರಿಗೆ ಬೇಕಾಗಿದ್ದ 191 ಕ್ರಿಮಿನಲ್ ಅಪರಾಧಿಗಳ ಭಾರಿ ದೊಡ್ಡ ಗುಂಪೊಂದು ಉತ್ತರ ಬಿಹಾರದ ಸುಪೌಲ್ ಮತ್ತು ಮಾಧೇಪುರದಲ್ಲಿ ನಡೆದ ಎರಡು ಪ್ರತ್ಯೇಕ ಶರಣಾಗತಿ ಸಮಾರಂಭಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮುಂದೆ ಶರಣಾಗತವಾಯಿತು. ಎನ್ ಡಿ ಎ ಸರ್ಕಾರವು ಅಪರಾಧಗಳನ್ನು ನಿಯಂತ್ರಿಸಲು ಹೊಸದಾಗಿ ಪ್ರಕಟಿಸಿರುವ `ಶರಣಾಗತಿ ಮತ್ತು ಪುನರ್ ವಸತಿ ನೀತಿ' ಫಲನೀಡಿದ ಪರಿಣಾಮವಾಗಿ 131 ಮಂದಿ ಅಪರಾಧಿಗಳು ಸುಪೌಲ್ನಲ್ಲಿ ಮುಖ್ಯಮಂತ್ರಿಯ ಎದುರಲ್ಲಿ ಹಾಗೂ 60 ಮಂದಿ ಅಪರಾಧಿಗಳು ಮಾಧೇಪುರ ಜಿಲ್ಲೆಯ ಸಿಂಘೇಶ್ವರದಲ್ಲಿ ಶರಣಾಗತರಾದರು. ಇವರೆಲ್ಲ ಕೊಲೆ, ಸುಲಿಗೆ , ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವರು.
1990: ನಮೀಬಿಯಾ ಸ್ವತಂತ್ರ ರಾಷ್ಟ್ರವಾಯಿತು. ಈ ರಾಷ್ಟ್ರದ ಮೇಲಿನ ಬಿಳಿಯರ 75 ವರ್ಷಗಳ ಆಳ್ವಿಕೆ ಕೊನೆಗೊಂಡಿತು.
1988: ಜಗತ್ತಿನ ಮೊತ್ತ ಮೊದಲ `ಪ್ರನಾಳ ಶಿಶು' (ಟೆಸ್ಟ್ ಟ್ಯೂಬ್ ಬೇಬಿ) ಲೂಯಿ ಬ್ರೌನ್ ಹುಟ್ಟಿಗೆ ಕಾರಣವಾದ `ಇನ್ ವಿಟ್ರೋ ಫರ್ಟಿಲೈಸೇಷನ್' ವಿಧಾನದ ಸಂಶೋಧಕ ಬ್ರಿಟನ್ನಿನ ಪ್ಯಾಟ್ರಿಕ್ ಸ್ಟೆಪ್ ಟೋ (1913-1988) ತನ್ನ 74ನೇ ವಯಸ್ಸಿನಲ್ಲಿ ಮೃತನಾದ.
1985: ಇಂಗ್ಲಿಷ್ ರಂಗಭೂಮಿ ಹಾಗೂ ಸಿನಿಮಾ ನಟ ಮೈಕೆಲ್ ರೆಡ್ ಗ್ರೇವ್ ತನ್ನ 77ನೇ ಹುಟ್ಟುಹಬ್ಬದ ಒಂದು ದಿನದ ಬಳಿಕ ಈದಿನ ಮೃತರಾದರು.
1938: ಕಲಾವಿದರಾದ ಕೃಷ್ಣಾ ಬಾಳಾಶೇಟ್ ಕರ್ಡೇಕರ ಜನನ.
1931: ಕಲಾವಿದೆ ಬಿ.ಎಸ್. ಚಂದ್ರಕಲಾ ಜನನ.
1924: ಖ್ಯಾತ ವಾಗ್ಗೇಯಕಾರ, ಗಾಯಕ, ಸಂಗೀತ ಶಿಕ್ಷಕ, ಪ್ರಸಾರಕ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿ (21-3-1924ರಿಂದ 19-3-2003) ಅವರು ರಾಜಾಪುರ ವೆಂಕಟಸುಬ್ಬರಾವ್- ತಿಮ್ಮಮ್ಮ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು. `ಗಾಯನ ಗಂಗಾ' ಸಂಗೀತ ಮಾಸಪತ್ರಿಕೆ, `ಉರುಗಾಚಲ' ಅಂಕಿತದಲ್ಲಿ ಕೃತಿಗಳ ರಚನೆ, 500ಕ್ಕೂ ಹೆಚ್ಚು ಭಕ್ತಿಗೀತೆಗಳಿಗೆ ಸ್ವರ ಸಂಯೋಜನೆ ಇತ್ಯಾದಿ ಇವರ ಜೀವನದ ಸಾಧನೆಗಳು. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದ ಸಂಗೀತ ಮಹೋಪಾಧ್ಯಾಯ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಇವರ ಸೇವೆಗೆ ಸಂದಿವೆ.
1916: ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (1916) ಜನ್ಮದಿನ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಹಾಗೂ 1997ರಲ್ಲಿ 50ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ಪ್ರದರ್ಶನ ನೀಡಿದ ವಿಶಿಷ್ಟ ಕಲಾವಿದರು ಇವರು.
1791: ಲಾರ್ಡ್ ಕಾರ್ನವಾಲಿಸ್ ಬೆಂಗಳೂರನ್ನು ವಶಪಡಿಸಿಕೊಂಡ. ಮೂರನೇ ಮೈಸೂರು ಯುದ್ಧದ ಸಮಯದಲ್ಲಿ ಈ ಘಟನೆ ಸಂಭವಿಸಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment