Monday, March 23, 2009

ಇಂದಿನ ಇತಿಹಾಸ History Today ಮಾರ್ಚ್ 20

ಇಂದಿನ ಇತಿಹಾಸ

ಮಾರ್ಚ್ 20
2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು (71) ಅವರು ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು. ಶೋಭನ್ ಬಾಬು ಅವರು ದಶಕಗಳಿಂದ  ತೆಲುಗು ಚಿತ್ರರಂಗದಲ್ಲಿದ್ದು, ಎನ್.ಟಿ. ರಾಮರಾವ್, ಎ. ನಾಗೇಶ್ವರ ರಾವ್ ಅವರಂತೆ  ಜನಪ್ರಿಯರಾಗಿದ್ದರು. ತಮ್ಮ ಎಂದಿನ  ದಿನಚರಿಯಂತೆ ಶೋಭನ್ ಬಾಬು ಅವರು ಹಿಂದಿನ ದಿನ ಬೆಳಗ್ಗೆ ಯೋಗಾಸನ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಾಗ ಅವರ ಮೂಗಿನಲ್ಲಿ ತೀವ್ರ ರಕ್ತಸ್ರಾವ ಕಂಡು ಬಂದಿತ್ತು. ತತ್ ಕ್ಷಣವೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.  

2008: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕರ್ನಾಟಕ ಮತ್ತು ಕೇರಳಕ್ಕೆ ಸಮೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು  ಜಿಲ್ಲೆಗಳಲ್ಲಿ ಮಳೆಯಾಯಿತು. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸಿ. ನಂದಿಹಳ್ಳಿ ಗ್ರಾಮದ ಮರಾಠಿ ಪಾಳ್ಯದಲ್ಲಿ ಸಿಡಿಲು ಬಡಿದು ಮರಿಯಪ್ಪ (55) ಎಂಬವರು ಮೃತರಾದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಿತ್ರದುರ್ಗ, ಕೋಲಾರ, ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಾಧಾರಣ ಹಾಗೂ ಇನ್ನು ಕೆಲವೆಡೆ ರಭಸದ ಮಳೆಯಾಯಿತು.

2008: ಅಮೆರಿಕವು ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಮಾಡಲು ಆರಂಭಿಕ ಪ್ರಯತ್ನಗಳನ್ನು ಬಿಟ್ಟರೆ ಹೆಚ್ಚಿನ ಆಸಕ್ತಿ ತೋರಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅಸಮಾಧಾನ ಸೂಚಿಸಿದರು. ಮಾಜಿ ಉಪಪ್ರಧಾನಿ ಮತ್ತು ಹಾಲಿ ಲೋಕಸಭೆಯ ಪ್ರತಿಪಕ್ಷ ನಾಯಕರಾದ ಅಡ್ವಾಣಿಯವರು ತಮ್ಮ ``ನನ್ನ ರಾಷ್ಟ್ರ, ನನ್ನ ಜೀವನ'' ಎಂಬ ಆತ್ಮಕಥನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

2008: ಪತ್ರಕರ್ತೆ ಶಿವಾನಿ  ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈದಿನ ಘೋಷಿಸಬೇಕಾಗಿದ್ದ ತೀರ್ಪನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಮಾರ್ಚ್ 24ರವರೆಗೆ ಕಾಯ್ದಿರಿಸಿತು.

2008: ಉದ್ಯೋಗ ನೀಡುವ ಸಂಸ್ಥೆಯೊಂದು ತನ್ನ ಒಬ್ಬ ನೌಕರನ ಹೆಸರಲ್ಲಿ ಹಲವು ಎಚ್-1ಬಿ ವೀಸಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ನೂತನ ವೀಸಾ ನೀತಿಯನ್ನು ಅಮೆರಿಕ ಜಾರಿಗೆ ತಂದಿತು. 

2007: ರಷ್ಯಾದ ಸೈಬೇರಿಯಾ ಕಲ್ಲಿದ್ದಲು ಗಣಿಯಲ್ಲಿ ದಶಕದ ಅವಧಿಯಲ್ಲಿ ಸಂಭವಿಸಿದ ಅತಿ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 106 ಮಂದಿ ಮೃತರಾದರು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಪಾಕಿಸ್ಥಾನದ ಎಫ್-16 ಯುದ್ಧ ವಿಮಾನಗಳನ್ನು ಎದುರಿಸಲು ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸುವ ಮೂಲಕ ತೆರೆಮರೆಗೆ ಸರಿದವು.

2006: ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಮೂರು ತಿಂಗಳ ನಂತರ ಮತ್ತೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ನವೆಂಬರ್ ತಿಂಗಳಲ್ಲಿ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಮಿತಾಭ್ ಈ ದಿನ ಕರಣ್ ಜೋಹರ್ ಅವರ ಕಬಿ ಅಲ್ವಿದ ನಾ ಕೆಹನಾ ಚಿತ್ರಕ್ಕಾಗಿ ಕೆಲವು ಸನ್ನಿವೇಶಗಳಲ್ಲಿ ನಟಿ ರಾಣಿ ಮುಖರ್ಜಿ ಜೊತೆಗೆ ಅಭಿನಯಿಸಿದರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ, ಮಹಿಳೆಯರಿಗೆ ಕಂಚು ಲಭಿಸಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಡೇರಿ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು 3600 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ (ಜಿಸಿಎಂಸಿಎಫ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹರೆಯದ ಕುರಿಯನ್ ವಿರುದ್ಧ ಇತ್ತೀಚೆಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಅವಿಶ್ವಾಸ ನಿರ್ಣಯ ಮಂಡನೆಯಿಂದ ನೊಂದು ಅವರು ಈ ಕ್ರಮ ಕೈಗೊಂಡರು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಜನತಾದಳ (ಎಸ್) - ಬಿಜೆಪಿ ಮೈತ್ರಿ ಕೂಟದ ಕರ್ನಾಟಕ ಅಭಿವೃದ್ಧಿ ರಂಗದ ಚೊಚ್ಚಲ ಮುಂಗಡಪತ್ರವನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದರು. ರೈತರು, ನೇಕಾರರು, ಮೀನುಗಾರರಿಗೆ ಶೇಕಡಾ 4ರ ಬಡ್ಡಿದರದಲ್ಲಿ ಸಾಲಸೌಲಭ್ಯ, ದೇಸೀ ಗೋ ತಳಿ ಸಂರಕ್ಷಣೆಗೆ ಕಾರ್ಯಕ್ರಮಗಳು ಮುಂಗಡ ಪತ್ರದ ವಿಶೇಷತೆಗಳಲ್ಲಿ ಪ್ರಮುಖವಾದವು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹಮ್ಮಿಕೊಂಡ ದೇಸೀ ಗೋ ತಳಿ ಸಂರಕ್ಷಣೆ ಆಂದೋಲನದಿಂದ ಪ್ರೇರಣೆ ಪಡೆದು ದೇಸೀ ಗೋ ತಳಿ ಅಭಿವೃದ್ಧಿ ಪಡಿಸುವವರಿಗೆ ಪ್ರತಿ ಜಿಲ್ಲೆಯಲ್ಲಿ 20 ಎಕರೆ ಜಮೀನು ಗುತ್ತಿಗೆ ನೀಡಿಕೆ, ಅಲ್ಲಿ ಕನಿಷ್ಠ 100 ಹಸು ಸಾಕಣೆ ಮತ್ತು ಗೋಮೂತ್ರ ಸಂಗ್ರಹ ಕಡ್ಡಾಯಗೊಳಿಸಲು, ಗೋ ಮೂತ್ರ ಉಪಯುಕ್ತತೆ ಬಗ್ಗೆ ಸಂಶೋಧನೆಗೆ ಒತ್ತು ನೀಡಲು ನಿರ್ಧರಿಸಿದ್ದು ಮುಂಗಡಪತ್ರಗಳ ಇತಿಹಾಸದಲ್ಲೇ ಪ್ರಥಮ.

2003: ಅಮೆರಿಕವು ಬಾಗ್ದಾದ್ ಮೇಲೆ ವಿಮಾನದಾಳಿ ನಡೆಸಿ ಇರಾಕ್ ವಿರುದ್ಧ ಸಮರ ಆರಂಭಿಸಿತು

1999: ಬ್ರಿಟನ್ನಿನ ಬ್ರೈನ್ ಜೋನ್ಸ್ ಮತ್ತು ಸ್ವಿಟ್ಸರ್ಲೆಂಡಿನ ಬರ್ಟ್ರಂಡ್ ಪಿಕ್ಕಾರ್ಡ್ ಅವರು ಎಲ್ಲೂ ನಿಲ್ಲದೆ ಬಲೂನ್ ಮೂಲಕ ಜಗತ್ತಿಗೆ ಸುತ್ತು ಹಾಕಿದ ಮೊದಲ ಹಾರಾಟಗಾರರೆನಿಸಿದರು. ಮಾರ್ಚ್ 1ರಿಂದ 19 ದಿನಗಳ ಕಾಲ ನಡೆದ ಅವರ ಈ ಬಲೂನ್ ಹಾರಾಟ 19 ದಿನ 1 ಗಂಟೆ 49 ನಿಮಿಷಗಳ ಕಾಲ ನಡೆಯಿತು. 

1962: ಭಾರತದ ಕ್ರಿಕೆಟ್ ಕ್ಯಾಪ್ಟನ್ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್  ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ  ತೀವ್ರವಾಗಿ ಗಾಯಗೊಂಡರು. ತುರ್ತು ಶಸ್ತ್ರಚಿಕಿತ್ಸೆ ನಡೆದರೂ ನಂತರ ಅವರು ಪಂದ್ಯದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.

1856: ಫ್ರೆಡರಿಕ್ ವಿನ್ ಸ್ಲೋ ಟೇಲರ್ (1856-1915) ಹುಟ್ಟಿದ ದಿನ. ಅಮೆರಿಕನ್ ಸಂಶೋಧಕನಾದ ಈತ `ವೈಜ್ಞಾನಿಕ ಸಂಶೋಧನಾ ನಿರ್ವಹಣೆಯ ಜನಕ' ಎಂದೇ ಖ್ಯಾತನಾಗಿದ್ದಾನೆ. 

1952: ಭಾರತದ ಮಾಜಿ ಟೆನಿಸ್ ಆಟಗಾರ ಆನಂದ್ ಅಮೃತರಾಜ್ ಹುಟ್ಟಿದ ದಿನ.

1951: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮದನ ಲಾಲ್ (ಶರ್ಮಾ) ಹುಟ್ಟಿದ ದಿನ.

1855: ಸಿಮೆಂಟ್ ಉದ್ಯಮವನ್ನು ಅಭಿವೃದ್ಧಿ ಪಡಿಸಿದ ಮುಂಚೂಣಿ ಬ್ರಿಟಿಷ್ ಸಿಮೆಂಟ್ ಉದ್ಯಮಿ ಜೋಸೆಫ್ ಆಸ್ಪ್ ಡಿನ್ ತನ್ನ 77ನೇ ವಯಸ್ಸಿನಲ್ಲಿ ಮೃತನಾದ. ಪೋರ್ಟ್ ಲ್ಯಾಂಡ್ ಸಿಮೆಂಟಿಗೆ ಈತ ಪೇಟೆಂಟ್ ಪಡೆದಿದ್ದ. ಸಿಮೆಂಟಿನ ಬಣ್ಣ ಪೋರ್ಟ್ ಲ್ಯಾಂಡಿನ ಕಲ್ಲಿನ ಬಣ್ಣವನ್ನೇ ಹೋಲುತ್ತಿದ್ದುದರಿಂದ ಅದಕ್ಕೆ ಆತ ಪೋರ್ಟ್ ಲ್ಯಾಂಡ್ ಸಿಮೆಂಟ್ ಎಂದು ಹೆಸರು ನೀಡಿದ್ದ.

1727: ಖ್ಯಾತ ಭೌತವಿಜ್ಞಾನಿ, ಗಣಿತಜ್ಞ ಹಾಗೂ ಖಗೋಳತಜ್ಞ ಐಸಾಕ್ ನ್ಯೂಟನ್ ಲಂಡನ್ನಿನಲ್ಲಿ ತನ್ನ 84ನೇ ವಯಸ್ಸಿನಲ್ಲಿ ಮೃತನಾದ.

1413: ದೊರೆ 4ನೇ ಹೆನ್ರಿ ವೆಸ್ಟ್ ಮಿನ್ ಸ್ಟರ್ ಅಬ್ಬೆಯ ಜೆರುಸಲೇಂ ಚೇಂಬರಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಮೃತನಾದ. ಆತನ ಹಿರಿಯ ಪುತ್ರ ಐದನೇ ಹೆನ್ರಿ ಸಿಂಹಾಸನ ಏರಿದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement