Monday, March 30, 2009

ಇಂದಿನ ಇತಿಹಾಸ History Today ಮಾರ್ಚ್ 25

ಇಂದಿನ ಇತಿಹಾಸ 

ಮಾರ್ಚ್ 25

ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ಮುಕ್ತಿ ವಾಹಿನಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ನೂರಾರು ಯುವಕರು ಅಸು ನೀಗಿದರು. ಈ ಆಕ್ರಮಣ ಟಿಕ್ಕಾಖಾನ್ ಗೆ `ಬಾಂಗ್ಲಾದೇಶದ ಕಟುಕ' ಎಂಬ ಕುಖ್ಯಾತಿಯನ್ನು ತಂದುಕೊಟ್ಟಿತು.

2008: ನೈಸ್ ಸಂಸ್ಥೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಏಳು ಹಿರಿಯ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತು. ರಾಜ್ಯದ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಆರು ವಾರಗಳ ಒಳಗೆ ಈ ನೋಟಿಸಿಗೆ ಉತ್ತರ ನೀಡುವಂತೆ  ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ  ನ್ಯಾಯಪೀಠ ಆದೇಶಿಸಿತು. ಬಿಎಂಐಸಿ ಕುರಿತಂತೆ 2006ರ ಏಪ್ರಿಲ್ 20ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಈ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು `ನೈಸ್' ಸಂಸ್ಥೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿತ್ತು. ಈ ಎಲ್ಲ ಅಧಿಕಾರಿಗಳು ವೈಯಕ್ತಿಕವಾಗಿ ಹಾಗೂ ಒಟ್ಟಾಗಿ, ಉದ್ದೇಶ ಪೂರ್ವಕವಾಗಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ ಎಂದು ನೈಸ್ ಆರೋಪಿಸಿತ್ತು. ಯೋಜನೆ ಶೀಘ್ರ ಪೂರ್ಣಗೊಳಿಸಲು ನೆರವಾಗುವಂತೆ ಈ ಅಧಿಕಾರಿಗಳಿಗೆ (ಪ್ರತಿವಾದಿಗಳು) ಆದೇಶಿಸುವಂತೆ ಅದು ಮನವಿ ಮಾಡಿಕೊಂಡಿತ್ತು. 2240 ಕೋಟಿ ರೂ. ವೆಚ್ಚದ ಬಿಎಂಐಸಿ ಯೋಜನೆಯಲ್ಲಿ ನೈಸ್ ಈಗಾಗಲೇ 900 ಕೋಟಿ ರೂ. ವ್ಯಯಿಸಿದೆ. 2006ರ ಏಪ್ರಿಲ್ 20ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂಕೋರ್ಟ್, ಬಿಎಂಐಸಿ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುವು ಮಾಡಿಕೊಡುವಂತೆ  ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಯೋಜನೆಗೆ ಅನಗತ್ಯ ಅಡೆತಡೆ ಉಂಟು ಮಾಡಿದ್ದಕ್ಕಾಗಿ ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ರೂ. 5 ಲಕ್ಷ ದಂಡವನ್ನೂ ವಿಧಿಸಿತ್ತು. ಯೋಜನೆ ನೆಪದಲ್ಲಿ `ನೈಸ್' ಸಂಸ್ಥೆ ಹೆಚ್ಚುವರಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ನೈಸ್ ನೊಂದಿಗೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದುಗೊಳಿಸಬೇಕು ಎಂದು ಅಂದು ಶಾಸಕರಾಗಿದ್ದ ಜೆ.ಸಿ.ಮಾಧುಸ್ವಾಮಿ (ಜೆಡಿಯು) ಹಾಗೂ ಜಿ.ವಿ. ಶ್ರೀರಾಮರೆಡ್ಡಿ (ಸಿಪಿಎಂ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

2008: ಬಾಹ್ಯಾಕಾಶದಲ್ಲಿ ಉಳಿದ ಇಬ್ಬರು ಸಿಬ್ಬಂದಿಗೆ ಹೃದಯಸ್ಪರ್ಶಿ ವಿದಾಯ ಹೇಳಿದ ಬಳಿಕ ಹಿಂದಿನ ರಾತ್ರಿ ಎಂಡೆವರ್ ಷಟಲ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಯತ್ತ ಮರುಪಯಣ ಹೊರಟಿತು. 10 ಮಂದಿ ಬಾಹ್ಯಾಕಾಶ ಯಾನಿಗಳು ದಾಖಲೆಯ ಐದು ಬಾಹ್ಯಾಕಾಶ ನಡಿಗೆ ನಡೆಸಿ ಬಾಹ್ಯಾಕಾಶ ನಿಲ್ದಾಣ ರೊಬೋಟನ್ನು ಮತ್ತು ನೂತನ ಜಪಾನೀ ಕಂಪಾರ್ಟ್ ಮೆಂಟ್ ಒಂದನ್ನೂ ಕಕ್ಷೆಯಲ್ಲಿ ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಿಸಿದರು. `ನನ್ನ ದೃಷ್ಟಿಯಲ್ಲಿ ಇದೊಂದು ಅಭೂತಪೂರ್ವ ಕಾರ್ಯವಾಗಿತ್ತು' ಎಂದು ಯೋಜನಾ ನಿರ್ವಹಣಾ ತಂಡದ ಅಧ್ಯಕ್ಷ ಲೆರೋಯ್ ಕಾಯಿನ್ ಹೇಳಿದರು.

2008: ಕೀರ್ತಿ ಮತ್ತು  ವಿವಾದಗಳ ಉತ್ತುಂಗಕ್ಕೆ ಏರಿದ್ದ ದೆಹಲಿಯ `ಪೊಲೀಸ್ ಎನ್ ಕೌಂಟರ್ ತಜ್ಞ' ರಾಜ್ ಬೀರ್ ಸಿಂಗ್ ಅವರನ್ನು  ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿ ಗುಡಗಾಂವ್ನ ಆಸ್ತಿಪಾಸ್ತಿ ಉದ್ಯಮಿಯೊಬ್ಬರು ಗುಂಡಿಟ್ಟು ಕೊಲೆಗೈದರು. `ಝೆಡ್' ದರ್ಜೆಯ ಭದ್ರತೆ ಒದಗಿಸಲಾಗಿದ್ದ ದೆಹಲಿ ಪೊಲೀಸ್ ವಿಶೇಷ ಕಾರ್ಯಾಚರಣಾ ದಳದ ಎಸಿಪಿ, 48 ವರ್ಷದ ಸಿಂಗ್ ಅವರ ತಲೆಗೆ, ಆಸ್ತಿಪಾಸ್ತಿ ಉದ್ಯಮಿ ವಿಜಯ ಭಾರಧ್ವಾಜ್ ಹಿಂದಿನ ದಿನ ರಾತ್ರಿ ಅತ್ಯಂತ ಸನಿಹದಿಂದ ಎರಡು ಬಾರಿ ಗುಂಡು ಹೊಡೆದರು ಎಂದು ಆಪಾದಿಸಲಾಯಿತು.

2008: ಶಂಕಿತ ದಿಮಾ ಹಾಲಂ ದೇವಗಾಹ್ (ಜ್ಯುವೆಲ್) ಉಗ್ರಗಾಮಿಗಳು ದಕ್ಷಿಣ ಅಸ್ಸಾಮಿನ ಉತ್ತರ ಕಾಚಾರ್ ಗುಡ್ಡಗಾಡು ಜಿಲ್ಲೆಯ ರೈಲು ನಿಲ್ದಾಣದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ರೈಲು ಸಿಬ್ಬಂದಿ ಸೇರಿ ನಾಲ್ಕು ಮಂದಿ ಗಾಯಗೊಂಡರು. `ಬ್ಲ್ಯಾಕ್ ವಿಡೋ' ಎಂಬುದಾಗಿಯೂ ಕುಖ್ಯಾತಿ ಪಡೆದಿರುವ ಡಿ ಎಚ್ ಡಿ(ಜೆ) ಉಗ್ರಗಾಮಿಗಳು ಹಿಂದಿನ ದಿನ ರಾತ್ರಿ ಹರಂಗಜಾವೊ ರೈಲು ನಿಲ್ದಾಣಕ್ಕೆ ನುಗ್ಗಿ ಏಕಕಾಲಕ್ಕೆ ಗುಂಡಿನ ಮಳೆಗರೆಯುವುದರೊಂದಿಗೆ ಕಚ್ಛಾ ಬಾಂಬನ್ನೂ ಸಿಡಿಸಿದರು. ಪರಿಣಾಮವಾಗಿ  ಇಬ್ಬರು ನಾಗರಿಕರು ಮತ್ತು ಇಬ್ಬರು ರೈಲ್ವೆ  ನೌಕರರು ಮೃತರಾದರು ಎಂದು ರೈಲ್ವೇ ಮೂಲಗಳು ತಿಳಿಸಿದವು.

2008: ಗೋಧ್ರಾ ನಂತರದ ಕೋಮು ಗಲಭೆಗಳ ಮರುತನಿಖೆಗಾಗಿ ಪಂಚಸದಸ್ಯ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚನೆಗೆ ಒಪ್ಪಿಗೆ ನೀಡಿದ ಸುಪ್ರೀಂಕೋರ್ಟ್ ಈ ತಂಡವು ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಬೇಕು ಎಂದು ಸೂಚಿಸಿತು. ಗುಜರಾತಿನ ಹಿರಿಯ ಐಪಿಎಸ್ ಅಧಿಕಾರಿಗಳಾದ ಗೀತಾ ಜೋಹ್ರಿ, ಶಿವಾನಂದ ಝಾ ಮತ್ತು  ಆಶಿಶ್ ಭಾಟಿಯಾ ಹಾಗೂ ಸಿಬಿಐ ನಿವೃತ್ತ ನಿರ್ದೇಶಕ ಆರ್. ಕೆ. ರಾಘವನ್ ಮತ್ತು  ಮಾಜಿ ಡಿಜಿಪಿ ಸಿ.ಬಿ. ಸತ್ಪಥಿ  ಈ ತಂಡದ ಸದಸ್ಯರು.

 2008: ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯ ಮಂಡಳಿಯ ಆದೇಶವನ್ನು ಉಲ್ಲಂಘಿಸಿ `ಚೆಕ್ ಡ್ಯಾಮ್' ನಿರ್ಮಿಸುವುದನ್ನು ಮತ್ತು ಹೆಚ್ಚಿನ ನೀರು ಬಳಸುವುದನ್ನು ತಡೆಯಬೇಕೆಂದು ಕೋರಿ ತಮಿಳುನಾಡು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಕರ್ನಾಟಕ ಏತ ನೀರಾವರಿ ಮತ್ತಿತರ ಯೋಜನೆಗಳನ್ನು ಮುಂದುವರೆಸದಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಈ ಅರ್ಜಿಯಲ್ಲಿ ಮನವಿ ಮಾಡಿತು. `ತನ್ನ ರಾಜ್ಯದ ನೀರಾವರಿಯ ಮೇಲೆ ಪರಿಣಾಮ ಬೀರುವ ಯಾವುದೇ ನೀರಿನ ಸಂಗ್ರಹಕ್ಕೂ ನ್ಯಾಯ ಮಂಡಳಿಯ ಅಂತಿಮ ವರದಿಯಲ್ಲಿ ಅನುಮತಿ ನೀಡಿಲ್ಲ. ಹೀಗಾಗಿ ಕರ್ನಾಟಕ ಯಾವುದೇ ನೀರಾವರಿ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ತಮಿಳುನಾಡು ವಕೀಲರಾದ ಕೆ. ಪರಾಶರನ್ ಮತ್ತು ಆರ್. ಎನ್. ಎಡುಮಾರನ್ ಅರ್ಜಿಯಲ್ಲಿ ತಿಳಿಸಿದರು.

2008: ಚೆನ್ನೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಶರದ್  ಪವಾರ್ ಅವರು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಭಾರತದ 'ಕ್ರಿಕೆಟ್ ರತ್ನ' ಅನಿಲ್ ಕುಂಬ್ಳೆ  ಅವರನ್ನು 37 ಕ್ಯಾರೆಟ್ಟಿನ 1500 ಬೆಲ್ಜಿಯಮ್ ವಜ್ರಗಳು ಹಾಗೂ 239 ಕ್ಯಾರೆಟ್ಟಿನ 640 ರೂಬೀಸ್ ಹರಳುಗಳಿಂದ ಅಲಂಕೃತವಾದ ವಜ್ರ ಲೇಪಿತ ಚಿನ್ನದ ಚೆಂಡನ್ನು ನೀಡಿ ಗೌರವಿಸಿದರು.

2008: ಪಾಕಿಸ್ಥಾನದ 25ನೇ ಪ್ರಧಾನಿಯಾಗಿ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ ಯೂಸಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು. ಆಡಳಿತಾರೂಢ ಪಕ್ಷಗಳ ಪ್ರಮುಖ ನಾಯಕರಾದ ಅಸೀಫ್ ಆಲಿ ಜರ್ದಾರಿ, ನವಾಜ್ ಷರೀಫ್, ಬಿಲ್ವಾಲ್ ಮೊದಲಾದವರ ಬಹಿಷ್ಕಾರ ಮತ್ತು ಅನುಪಸ್ಥಿತಿಯ ನಡುವೆಯೇ ಅಧ್ಯಕ್ಷೀಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಜಿಲಾನಿ (55) ಅವರಿಗೆ ಪ್ರಮಾಣವಚನ ಬೋಧಿಸಿದರು.

2008: ಭೂತಾನಿನಲ್ಲಿ ನಡೆದ ಮೊತ್ತಮೊದಲ ಸಂಸದೀಯ ಚುನಾವಣೆಯಲ್ಲಿ ಭೂತಾನ್ ಪೀಸ್ ಅಂಡ್ ಪ್ರಾಸ್ಪರಿಟಿ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿತು. ಒಟ್ಟು 47 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಪಕ್ಷ 44 ಸ್ಥಾನಗಳಲ್ಲಿ ಗೆಲುವು ಪಡೆಯಿತು. ಚುನಾವಣೆಯಲ್ಲಿ ಮತದಾರರು ದೊರೆಯ ಸಂಬಂಧಿಗಳನ್ನು ತಿರಸ್ಕರಿಸಿದರು. ಉಳಿದ ಮೂರು ಸ್ಥಾನಗಳಲ್ಲಿ ಮಾತ್ರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಗೆದ್ದಿತು.

2007: ಇಂದೋರಿನ ಡಾ. ಜೈನ್ಸ್ ಗೋಮೂತ್ರ ಥೆರೆಪಿ ಆಸ್ಪತ್ರೆಯ ಏಳನೇ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ, ಚಿತ್ರನಟ ಶ್ರೀನಾಥ್ ಅವರು ಬೆಂಗಳೂರಿನ ವಿ.ವಿ.ಪುರಂನಲ್ಲಿ ಉದ್ಘಾಟಿಸಿದರು. ಇದರೊಂದಿಗೆ ಈವರೆಗೆ ಉತ್ತರಭಾರತದಲ್ಲಿ ಮಾತ್ರ ಇದ್ದ ಡಾ. ಜೈನ್ಸ್ ಅವರ ಗೋಮೂತ್ರ ಥೆರೆಪಿ ಆಸ್ಪತ್ರೆಯ ಶಾಖೆಗಳು ದಕ್ಷಿಣ ಭಾರತಕ್ಕೂ ಕಾಲಿರಿಸಿದವು. ಆರ್ಯವೈಶ್ಯ ಮಹಾಸಭಾ ಬೆಂಗಳೂರಿನ ಈ ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುವುದು. ದೇಶಾದ್ಯಂತ 50 ಗೋಮೂತ್ರ ಥೆರೆಪಿ ಆಸ್ಪತ್ರೆಗಳ ಶಾಖೆ ತೆರೆಯುವ ಯೋಜನೆ ಜೈನ್ಸ್ ಸಂಸ್ಥೆಯದು.

2007: ಆಕಾಶದಿಂದ ಆಕಾಶಕ್ಕೆ ಗುರಿ ಇಡುವ ಭಾರತದ ಸ್ವದೇಶೀ ನಿರ್ಮಿತ `ಅಸ್ತ್ರ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಒರಿಸ್ಸಾದ ಬಾಲಸೋರ್ ಸಮೀಪದ ಚಂಡೀಪುರ ಪರೀಕ್ಷಾ ವಲಯದಲ್ಲಿ ನೆರವೇರಿತು. 

2007: ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಮಾರ್ಗದರ್ಶಕರಾಗಿದ್ದ ಮಾವೋ ನಕ್ಸಲವಾದಿ ರಾಮಯ್ಯ ಯಾನೆ ದಿಲೀಪ್ ಯಾನೆ ಮಾಸ ಯಾನೆ ರವಿ ಆಂಧ್ರಪ್ರದೇಶದ ವಾರಂಗಲ್ಲಿನಲ್ಲಿ ಪೊಲೀಸರಿಗೆ ಶರಣಾಗತನಾದ. 2004ರಲ್ಲಿ ಒರಿಸ್ಸಾದ ಕೊರಾಪಟ್ ಸೆರೆಮನೆಯ ಗೋಡೆಗಳನ್ನು ಒಡೆದು ಐದು ಶಸ್ತ್ರಾಸ್ತ್ರಗಳೊಂದಿಗೆ ಆತ ಪರಾರಿಯಾಗಿದ್ದ.

2007: ದುಬೈ ಮತ್ತು ಭಾರತದ ನಡುವೆ ಏರ್ ಇಂಡಿಯಾ ಎಕ್ಸ್ ಪ್ರೆಸ್ಸಿನ ಹೊಸ ವಿಮಾನ ತನ್ನ ಮೊದಲ ಹಾರಾಟವನ್ನು ಕತಾರ್ನ ದೋಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭಿಸಿತು.

2007: ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಬೆಂಗಳೂರಿನ ಡಾ. ಶ್ರೀಕಾಂತ ಕೆ. ಮೂರ್ತಿ ಅವರಿಗೆ ವಾಷಿಂಗ್ಟನ್ನಿನ `ಸಂಗೀತಪ್ರಿಯ ಡಾಟ್ ಆರ್ಗ್ ಸಂಸ್ಥೆಯು `ರಸಿಕಪ್ರಿಯ' ಪ್ರಶಸ್ತಿ ನೀಡಿ ಗೌರವಿಸಿತು.

2007: ಕ್ರೆಡಿಟ್ ಕಾರ್ಡ್ ಒಂದರ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರದ ಬಳಕೆಯನ್ನು ವಿರೋಧಿಸಿ ಡರ್ಬಾನಿನ ಫೋನಿಕ್ಸ್ ಸೆಟ್ಲ್ ಮೆಂಟ್ ಟ್ರಸ್ಟ್, ದಕ್ಷಿಣ ಆಫ್ರಿಕಾ ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದವು.

2006: ಬಿಜೆಪಿ ಕರ್ನಾಟಕ ಘಟಕದ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ. ಸದಾನಂದ ಗೌಡ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

2006: ಲಾಭದ ಹುದ್ದೆ ವಿವಾದದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. `ಲಾಭದ ಹುದ್ದೆ'ಗೆ ಸಮರ್ಪಕ ವ್ಯಾಖ್ಯಾನ ನೀಡಲು ಸಮಗ್ರ ಮಸೂದೆ ತರಬೇಕು ಎಂಬ ಕೂಗು ವ್ಯಾಪಕಗೊಂಡಿತು. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಜೊತೆ ಕೇಂದ್ರ ಸರ್ಕಾರ ಸಮಾಲೋಚನೆ ಆರಂಭಿಸಿತು.

2006: ಕೃಷ್ಣಾ ನದಿ ನೀರು ನ್ಯಾಯಮಂಡಳಿ ಮುಂದೆ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲ ಎಫ್. ಎಸ್. ನಾರಿಮನ್ ಅವರನ್ನು ಮುಂದುವರೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕರ್ನಾಟಕದ ಅಡ್ವೋಕೇಟ್ ಜನರಲ್ ಆರ್.ಎನ್. ನರಸಿಂಹಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1975: ಸೌದಿ ಅರೇಬಿಯಾದ ದೊರೆ ಫೈಸಲ್ ಅವರನ್ನು ರಿಯಾದಿನ ಅರಮನೆಯಲ್ಲಿ ರಾಜಕುಮಾರ ಮುಸೀದ್ ಗುಂಡಿಟ್ಟು ಕೊಂದ. ಮಾನಸಿಕ ರೋಗಿಯಾಗಿದ್ದ ಈತನನ್ನು ಜೂನ್ ತಿಂಗಳಲ್ಲಿ ಮರಣದಂಡನೆಗೆ ಗುರಿ ಪಡಿಸಲಾಯಿತು.

1971: ಜನರಲ್ ಟಿಕ್ಕಾ ಖಾನ್ ನೇತೃತ್ವದ ಪಾಕಿಸ್ಥಾನಿ ಸೇನೆಯು ಬಾಂಗ್ಲಾದೇಶಿ ಸ್ವಾತಂತ್ರ್ಯ ಹೋರಾಟದ ಕೇಂದ್ರಬಿಂದುವಾಗಿದ್ದ ಡಾಕಾ ವಿಶ್ವವಿದ್ಯಾಲಯದ ಮೇಲೆ ಹಾಗೂ ಮುಕ್ತಿ ವಾಹಿನಿಯ ಮೇಲೆ ದಾಳಿ ನಡೆಸಿತು. ಈ ದಾಳಿಯಲ್ಲಿ ನೂರಾರು ಯುವಕರು ಅಸು ನೀಗಿದರು. ಈ ಆಕ್ರಮಣ ಟಿಕ್ಕಾಖಾನ್ ಗೆ `ಬಾಂಗ್ಲಾದೇಶದ ಕಟುಕ' ಎಂಬ ಕುಖ್ಯಾತಿಯನ್ನು ತಂದುಕೊಟ್ಟಿತು.

1957: ಆರು ಐರೋಪ್ಯ ರಾಷ್ಟ್ರಗಳು ರೋಮ್ ಒಪ್ಪಂದಕ್ಕೆ ಸಹಿ ಹಾಕಿ ಐರೋಪ್ಯ ಸಮುದಾಯ (ಯುರೋಪಿಯನ್ ಕಮ್ಯೂನಿಟಿ) ಸ್ಥಾಪಿಸಿಕೊಂಡವು. ಫ್ರಾನ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್, ಪಶ್ಚಿಮ ಜರ್ಮನಿ, ಇಟೆಲಿ ಮತ್ತು ನೆದರ್ ಲ್ಯಾಂಡ್ಸ್ ಇವೇ ಈ ಆರು ರಾಷ್ಟ್ರಗಳು. 

1914: ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕನ್ ಕೃಷಿ ವಿಜ್ಞಾನಿ ನಾರ್ಮನ್ ಅರ್ನೆಸ್ಟ್ ಬೊರ್ಲಾಗ್ ಜನ್ಮದಿನ. ಈ ವಿಜ್ಞಾನಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಡೆದ `ಹಸಿರು ಕ್ರಾಂತಿ'ಗೆ ತಳಪಾಯ ಹಾಕಿದವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement