ಇಂದಿನ ಇತಿಹಾಸ
ಆಗಸ್ಟ್ 29
ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು.
2015: ನವದೆಹಲಿ: ಭಾರತದ ಶ್ರೇಷ್ಠ ಟೆನಿಸ್ ತಾರೆ ಸಾನಿಯಾ ಮಿರ್ಜಾ ‘ರಾಜೀವ್ ಗಾಂಧಿ ಖೇಲ್ರತ್ನ’ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಸ್ವೀಕರಿಸಿದರು. ಉಳಿದಂತೆ 12 ಕ್ರೀಡಾ ಸಾಧಕರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಪ್ಯಾರಾ ಈಜುಪಟು ಶರತ್ ಗಾಯಕ್ವಾಡ್ ಸೇರಿದಂತೆ 12 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಸಾನಿಯಾ ಖೇಲ್ರತ್ನ ಪ್ರಶಸ್ತಿ ಪಡೆದ 2ನೇ ಟೆನಿಸ್ಪಟುವಾಗಿದ್ದಾರೆ. ಲಿಯಾಂಡರ್ ಪೇಸ್ ಮೊದಲಿಗರು. ಸಾನಿಯಾ ಮಿರ್ಜಾ ಖೇಲ್ ರತ್ನ
ಪುರಸ್ಕಾರದ ಜತೆ ಪದಕ, ಪ್ರಮಾಣಪತ್ರ ಮತ್ತು 7.5 ಲಕ್ಷ ರೂ. ನಗದು ಸ್ವೀಕರಿಸಿದರೆ, ಅರ್ಜುನ ಪ್ರಶಸ್ತಿ ಪುರಸ್ಕೃತರು ಅರ್ಜುನನ ಪ್ರತಿಮೆ, ಪ್ರಮಾಣ ಪತ್ರ ಮತ್ತು 5 ಲಕ್ಷ ರೂ ನಗದು ಪಡೆದರು. ಶೂಟರ್ ಜಿತು ರೈ, ಹಾಕಿ ಗೋಲ್ಕೀಪರ್ ಪಿಆರ್ ಶ್ರೀಜೇಶ್, ಜಿಮ್ನಾಸ್ಟ್ ದೀಪಾ ಕರ್ವಕರ್, ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್, ಕಬಡ್ಡಿ ಆಟಗಾರ ಮಂಜಿತ್ ಚಿಲ್ಲರ್ ಇವರಲ್ಲಿ ಪ್ರಮುಖರು.
ಕರ್ನಾಟಕದ ಈಜು ಕೋಚ್ ನಿಹಾರ್ ಅಮೀನ್ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದರು. ಡೇವಿಸ್ಕಪ್ ತಂಡದ ಮಾಜಿ ನಾಯಕ ಎಸ್ಪಿ ಮಿಶ್ರಾ ಸಹಿತ ಮೂವರು ಧ್ಯಾನ್ಚಂದ್ ಪ್ರಶಸ್ತಿಗೆ ಪಾತ್ರರಾದರು. ಅರುಣಿಮಾ ಸಿನ್ಹಾ, ಜೋತ್ ಸಿಂಗ್, ಪರಮ್ೕರ್ ಸಿಂಗ್, ಲೆ. ಕರ್ನಲ್ ಸತ್ಯೇಂದ್ರ ವರ್ಮ, ಕರ್ನಲ್ ಸತೀಷ್ ಚಂದರ್ ಶರ್ಮ ತೇನ್ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
2015: ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಪ್ರಯಾಣ ಬೆಳೆಸಲಿರುವ ಗಗನಯಾತ್ರಿಗಳ ‘ಪರೀಕ್ಷಾರ್ಥ ಜೀವನ’ ಆರಂಭಗೊಂಡಿತು.
ಇದೇನಿದು ‘ಪರೀಕ್ಷಾರ್ಥ ಜೀವನ’ ಎನ್ನುವ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ: ನಾಸಾ ಗಗನಯಾತ್ರಿಗಳು ಅಂದುಕೊಂಡಂತೆ ಮಂಗಳಯಾನ ಆರಂಭಕ್ಕೂ ಮುನ್ನ ಅಲ್ಲನ ಜೀವನ ಶೈಲಿಗೆ ಒಗ್ಗಿಕೊಳ್ಳುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಡೆಸಬೇಕೆಂದುಕೊಂಡ ಒಂದು ವರ್ಷದ ಜೀವನ ಆರಂಭಿಸಿದರು.
ಇದಕ್ಕೆಂದೇ ಹವಾಯಿ ದ್ವೀಪದಲ್ಲಿ ನಿರ್ಮಿಸಲಾದ ಚೆಂಡಿನಾಕಾರದ ಪರೀಕ್ಷಾರ್ಥ ಮನೆಯಲ್ಲಿ ಮುಂದಿನ 12 ತಿಂಗಳು ತಂಗಲಿದ್ದಾರೆ. ಈದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ (ಸ್ಥಳೀಯ ಸಮಯ ಮಧ್ಯಾಹ್ನ 3ಗಂಟೆ, ಶುಕ್ರವಾರ) ಆರು ಮಂದಿ ಗಗನಯಾತ್ರಿಗಳು ಮನೆ ಪ್ರವೇಶಿಸಿದರು.
ಇನ್ನೊಂದು ವರ್ಷ ಇವರು ಇಲ್ಲಿಯೇ ವಾಸವಿರಬೇಕು. ಗಗನಯಾನಿಗಳು ಅನ್ಯ ಗ್ರಹದಲ್ಲಿ ಹೇಗೆ ಇರಬೇಕೋ ಆ ಎಲ್ಲಾ ನಿಯಮಗಳನ್ನು ಅನುಸರಿಸಿ ವಾಸಿಸಬೇಕು. ಒಂದೊಮ್ಮೆ ಮನೆಯಿಂದ ಆಚೆ ಬರಬೇಕೆಂದರೆ ‘ಸ್ಪೇಸ್ ಸೂಟ್’ ಧರಿಸಿ ಬರಬೇಕು. ಮನೆಯಲ್ಲಿ ನಾಸಾ ಇದಕ್ಕಾಗಿಯೇ ಕಳುಹಿಸಿದ ಆಹಾರವನ್ನೇ ಸೇವಿಸಬೇಕು. ಅಪ್ಪಿತಪ್ಪಿಯೂ ಈ ಕೃತಕ ಮನೆಯಲ್ಲಿ ಪರಿಶುದ್ಧ ಗಾಳಿ ಸಿಗುವುದಿಲ್ಲ. ಸೌರಶಕ್ತಿ ಬೆಳಕನ್ನು ಹೊರತುಪಡಿಸಿ ಬೇರೆ ಯಾವ ಬೆಳಕೂ ಲಭ್ಯವಿಲ್ಲ. ಸ್ವಾತಂತ್ರ್ಯ ಅನ್ನೋದನ್ನು ಮರೆತು ದಿನಕಳೆಯಬೇಕು. ಇದೀಗ ಈ ಮನೆಯಲ್ಲಿ ಬಂಧಿಯಾಗಿರುವವರಲ್ಲಿ ಫ್ರಾನ್ಸ್ನ ಆಸ್ಟ್ರೋಬಯಾಲಜಿಸ್ಟ್, ಜರ್ಮನಿಯ ಭೌತವಿಜ್ಞಾನಿ ಮತ್ತು ಅಮೆರಿಕದ ಒಬ್ಬ ಪೈಲಟ್ ಇದ್ದಾರೆ. ಜೊತೆಗೆ ವಾಸ್ತು ಶಾಸ್ತ್ರಜ್ಞ, ಪತ್ರಕರ್ತ ಹಾಗೂ ಮಣ್ಣಿನ ಗುಣಲಕ್ಷಣ ಅರಿಯಬಲ್ಲ ವಿಜ್ಞಾನಿ ಸೇರಿದ್ದಾರೆ. ಇನ್ನೊಂದು ವಿಚಾರ ಗೊತ್ತಾ, ಇದು ಭಾರಿ ಗಾತ್ರದ ಬಂಗಲೇಯೇನಲ್ಲ. ಅಬ್ಬಬ್ಬಾ ಅಂದರೆ 36 ಅಡಿ ಉದ್ದಗಲ, ಅಮ್ಮಮ್ಮಾ ಅಂದ್ರೆ 20 ಅಡಿ ಎತ್ತರವಿದೆ. ಮನೆಗೆ ಸದಾಕಾಲ ಬೆಳಕು ಇರಬೇಕೆಂದು ಉತ್ತಮ ಸಾಮರ್ಥ್ಯದ ಸೌರಶಕ್ತಿ ಅಳವಡಿಸಲಾಗಿದೆ. 2030ರ ವೇಳೆಗೆ ಮಂಗಳನ ಅಂಗಳಕ್ಕೆ ಗಗನಯಾನಿಗಳನ್ನು ಕಳುಹಿಸಬೇಕೆನ್ನುವ ಯೋಜನೆ ಇರಿಸಿಕೊಂಡಿರುವ ನಾಸಾ ಈ ಪರೀಕ್ಷಾರ್ಥ ಮನೆಗೆ ಅಂದಾಜು 8 ಕೋಟಿ ರೂಪಾಯಿ ವ್ಯಯ ಮಾಡಿದೆ ಎಂದು ಪ್ರಧಾನ ಸಂಶೋಧಕಿ ಕಿಮ್ ಬಿನ್ಸ್ಟೆಡ್ ಹೇಳಿದರು.
2015: ಬೆಂಗಳೂರು: ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪ್ರಮುಖ
ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿರುವಾಗಲೇ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ರಾಜ್ಯ
ಸರ್ಕಾರ ಚಾಲನೆ ನೀಡಿತು. ನಗರಾಭಿವೃದ್ಧಿ ಇಲಾಖೆ ಮೂಲಕ ನೂತನವಾಗಿ ಆಯ್ಕೆಯಾಗಿರುವ ಬಿಬಿಎಂಪಿ ಸದಸ್ಯರ
ಪಟ್ಟಿಯನ್ನು ಅಧಿಸೂಚನೆ ಮೂಲಕ ಪ್ರಕಟಿಸಲಾಯಿತು. ಪ್ರಾದೇಶಿಕ ಆಯುಕ್ತರು ಬಹುತೇಕ ಆ.31ರಂದು ಚುನಾವಣೆ
ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. ಈ ನಡುವೆ ಈವರೆಗೂ ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದ
‘ರೆಸಾರ್ಟ್’ ರಾಜಕೀಯದ ರಂಗು ಇದೀಗ ಪಾಲಿಕೆ ಚುನಾವಣೆಗೂ ವಿಸ್ತರಣೆಯಾಯಿತು. ಸ್ವತಃ ಜೆಡಿಎಸ್ ನಾಯಕ
ಎಚ್.ಡಿ.ಕುಮಾರ ಸ್ವಾಮಿ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಬೀಡು ಬಿಟ್ಟರೆ, ಜೆಡಿಎಸ್
ಸದಸ್ಯರ ಇನ್ನೊಂದು ಗುಂಪು ಖಾಸಗಿ ಬಸ್ಸಿನಲ್ಲಿ ಕೇರಳದತ್ತ ಹೊರಟಿತು. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಪೆರೇಟರ್ಗಳು
ಆರ್. ಅಶೋಕ್ ಮನೆಯಲ್ಲಿ ಸಮಾಲೋಚನೆ ನಿರತರಾದರೆ, ಕೆಪಿಸಿಸಿ ಸಭೆ ಬೆಂಗಳೂರಿನಲ್ಲಿ ವಿಷಯ ಚರ್ಚಿಸಿತು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಜನತಾದಳ ಮುಖ್ಯಸ್ಥ ಎಚ್.ಡಿ. ದೇವೇಗೌಡರನ್ನು ಮಾತನಾಡಿಸಿ
ಬಂದರು.
2015: ನವದೆಹಲಿ: ನಿವೃತ್ತ ಯೋಧರಿಗೆ ’ಏಕ ಶ್ರೇಣಿ ಏಕ ಪಿಂಚಣಿ’ ವ್ಯವಸ್ಥೆಯ
ತ್ವರಿತ ಜಾರಿಗಾಗಿ ಆಗ್ರಹಿಸಿ ಸರದಿ ಉಪವಾಸ ಮುಷ್ಕರ ನಡೆಸುತ್ತಿದ್ದ ನಿವೃತ್ತ ಯೋಧರಲ್ಲಿ ಒಬ್ಬರಾದ
ಸೇನಾ ಹವಿಲ್ದಾರ್ ಅಭಿಲಾಸ್ ಸಿಂಗ್ ಅವರು ಈದಿನ ನಿರಶನ ಜಾಗದಲ್ಲಿ ಅಸ್ವಸ್ಥರಾದರು. ತತ್ ಕ್ಷಣವೇ ಅವರನ್ನು
ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ’ಸಿಂಗ್ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಅವರು ಸರದಿ ನಿರಶನದಲ್ಲಿ
ಪಾಲ್ಗೊಂಡಿದ್ದರು’ ಎಂದು ನಿವೃತ್ತ ಯೋಧರ ಸಂಯುಕ್ತ ರಂಗ ದ ಅಧಿಕಾರಿಯೊಬ್ಬರು ತಿಳಿಸಿದರು. ಸಿಂಗ್
ಹೊರತಾಗಿ ಆಮರಣ ನಿರಶನ ನಡೆಸುತ್ತಿರುವ ಇತರ ನಾಲ್ವರನ್ನೂ ಆರೋಗ್ಯ ವಿಷಮಿಸಿದ್ದನ್ನು ಅನುಸರಿಸಿ ಆಸ್ಪತ್ರೆಗೆ
ದಾಖಲಿಸಲಾಗಿತ್ತು. ನಿವೃತ್ತ ಯೋಧರ ಪ್ರತಿಭಟನೆಯು ಈದಿನ 76ನೇ ದಿನಕ್ಕೆ ಕಾಲಿರಿಸಿತು. ಏಕ ಶ್ರೇಣಿ,
ಏಕ ಪಿಂಚಣಿ ವ್ಯವಸ್ಥೆ ಜಾರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಹಿಂದಿನ ದಿನ
ಕೋರಿತ್ತು. 22 ಲಕ್ಷ ಮಂದಿ ನಿವೃತ್ತ ಯೋಧರು ಮತ್ತು
6 ಲಕ್ಷಕ್ಕೂ ಹೆಚ್ಚು ಮೃತ ಯೋಧರ ಪತ್ನಿಯರಿಗೆ ಯೋಜನೆ ಅನ್ವಯಿಸುತ್ತದೆ. ಒಂದೇ ಶ್ರೇಣಿಯಲ್ಲಿ ನಿವೃತ್ತರಾದ
ಎಲ್ಲ ಯೋಧರಿಗೂ ನಿವೃತ್ತಿಯ ದಿನಾಂಕದ ಮಿತಿಯನ್ನು ರದ್ದು ಪಡಿಸಿ ಸಮಾನ ಪಿಂಚಣಿ ವ್ಯವಸ್ಥೆ ಮಾಡುವಂತೆ
ನಿವೃತ್ತ ಯೋಧರು ಆಗ್ರಹಿಸಿದ್ದರು. ಹಾಲಿ ಪಿಂಚಣಿ ವ್ಯವಸ್ಥೆಯಂತೆ 1996ರಲ್ಲಿ ನಿವೃತ್ತನಾದ ಮೇಜರ್
ಜನರಲ್, 1996ರ ನಂತರ ನಿವೃತ್ತರಾದ ಮೇಜರ್ ಜನರಲ್ಗಿಂತ ಕಡಿಮೆ ವೇತನ ಪಡೆಯುತ್ತಾರೆ.
2015: ನವದೆಹಲಿ: ಮಾಜಿ ರಾಷ್ಟ್ರೀಯ ಕುಸ್ತಿ ಕೋಚ್ ಮುಖ್ಯಸ್ಥ ವಿನೋದ್
ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ನ
ಏಕಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು.
ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ನಾಥ್
ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಶೇಷ ಕಲಾಪ ನಡೆಸಿ ವಿನೋದ ಕುಮಾರ್ ಅವರಿಗೆ ಪ್ರಶಸ್ತಿ ನೀಡುವಂತೆ
ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು. ರಾಷ್ಟ್ರಪತಿ
ಭವನದಲ್ಲಿ ಈದಿನ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ನ ಏಕಸದಸ್ಯ
ಪೀಠ ಹಿಂದಿನ ದಿನ ನೀಡಿದ್ದ ಆದೇಶ ವಿರುದ್ಧ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಆ ಅರ್ಜಿಯ
ವಿಶೇಷ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸಿತು. ಹೈಕೋರ್ಟ್ನ ಏಕಸದಸ್ಯ ಪೀಠವು ನೀಡಿದ ಆದೇಶಕ್ಕೆ
ವಿಭಾಗೀಯ ಪೀಠವು ತಡೆ ನೀಡಿದೆ. ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸದೆಯೇ ಏಕಸದಸ್ಯ
ಪೀಠವು ತೀರ್ಪು ನೀಡಿದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಹೇಳಿದರು. ದ್ರೋಣಾಚಾರ್ಯ
ಪ್ರಶಸ್ತಿ ಸಮಿತಿಯು ಪ್ರತಿಷ್ಠಿತ ಪ್ರಶಸ್ತಿಗೆ ತನ್ನನ್ನು ನಿರ್ಲಕ್ಷಿಸಿದ್ದನ್ನು ಪ್ರಶ್ನಿಸಿ ವಿನೋದ್
ಕುಮಾರ್ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಗೆ ಅನೂಪ್ ಸಿಂಗ್ ದಹಿಯಾ
ಹೆಸರನ್ನು ಶಿಫಾರಸು ಮಾಡಿತ್ತು. 2010ರಿಂದ 2015ರವರೆಗೆ ರಾಷ್ಟ್ರೀಯ ಪುರುಷರ ತಂಡದ ಕೋಚ್ ಮುಖ್ಯಸ್ಥ
ವಿನೋದ್ ಕುಮಾರ್ ಅವರು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳ ಸಾಧನೆಗಳಲ್ಲಿ ತಾವು ಅನೂಪ್ ಅವರಿಗಿಂತ
ಹೆಚ್ಚು ಪಾಯಿಂಟ್ಗಳನ್ನು ಗಳಿಸಿದ್ದುದಾಗಿ ವಿನೋದ್ ಕುಮಾರ್ ಪ್ರತಿಪಾದಿಸಿದ್ದರು.
2015: ಲಂಡನ್: ಮದ್ಯ ಸೇವನೆಯ ಬಳಿಕ ನಿಮಗೆ ಇಷ್ಟವಾದ ಆಹಾರ ಅಥವಾ ನೀರು
ಸೇವಿಸುವ ಮೂಲಕ ಮರುದಿನ ಬೆಳಗಿನ ಆಲಸ್ಯ (ಹ್ಯಾಂಗೋವರ್) ತಡೆಯಲು ಸಾಧ್ಯವಿಲ್ಲ ಎಂಬ ಎಂಬ ಕುತೂಹಲಕಾರಿ
ವಿಚಾರವನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿತು. ರಾತ್ರಿ ಮದ್ಯ ಸೇವನೆಯ ಬಳಿಕ ಇಷ್ಟವಾದ ಆಹಾರ ತಿಂದರೆ
ಅಥವಾ ಚೆನ್ನಾಗಿ ನೀರು ಕುಡಿದರೆ ಮರುದಿನ ಬೆಳಗ್ಗೆ ’ಹ್ಯಾಂಗೋವರ್’ ಇರುವುದಿಲ್ಲ ಎಂಬುದು ಅತ್ಯಂತ
ಜನ ಜನಿತವಾದ ನಂಬಿಕೆ. ಶೇಕಡಾ 25ರಿಂದ 30ರಷ್ಟು ಕುಡುಕರು ಸಾಮಾನ್ಯವಾಗಿ ಇದನ್ನೇ ಪ್ರತಿಪಾದಿಸುತ್ತಾರೆ. ಆದರೆ ಯಾರಿಗಾದರೂ ಇಷ್ಟವಾದ ತಿಂಡಿ ತಿಂದ ಬಳಿಕವೋ ಅಥವಾ
ಚೆನ್ನಾಗಿ ನೀರು ಕುಡಿದ ಬಳಿಕವೋ ಹ್ಯಾಂಗೋವರ್ ಕಾಣಿಸದೇ ಇದ್ದಲ್ಲಿ ಅವರು ಕಡಿಮೆ ಕುಡಿದಿದ್ದಾರೆ
ಅಥವಾ ಅವರು ಸತ್ಯ ಹೇಳುತ್ತಿಲ್ಲ ಎಂದೇ ಅದರ ಅರ್ಥ ಎಂದು ಸಂಶೋಧನೆ ಹೇಳಿತು. ‘ಹೆಚ್ಚು ಕುಡಿದಷ್ಟೂ
ನೀವು ಹೆಚ್ಚು ಆಲಸಿಗಳಾಗುತ್ತೀರಿ ಅಥವಾ ಹೆಚ್ಚು ಹ್ಯಾಂಗೋವರ್ಗೆ ಒಳಗಾಗುತ್ತೀರಿ ಎಂಬುದು ಅತ್ಯಂತ
ಸರಳವಾದ ಸತ್ಯ’ ಎಂದು ಈ ಕುರಿತು ಸಂಶೋಧನೆ ನಡೆಸಿದ ನೆದರ್ಲ್ಯಾಂಡ್ನ ಉಟ್ರೆಚ್ಟ್ ಯುನಿವರ್ಸಿಟಿಯ
ತಂಡದ ನೇತಾರ ಡಾ. ಜೊರಿಸ್ ವರ್ಸ್ಟೆರ್ ಹೇಳಿದರು. ತಮಗೆ ಹ್ಯಾಂಗೋವರ್ ಅನುಭವವಾಗಿಲ್ಲ ಎಂದು ಹೇಳುವವರು
ಹ್ಯಾಂಗೋವರ್ಗೆ ಕಾರಣವಾಗಬಹುದು ಎಂದು ಗ್ರಹಿಸಿಕೊಂಡು ವಾಸ್ತವವಾಗಿ ಕಡಿಮೆ ಕುಡಿದಿರುತ್ತಾರೆ ಎಂಬುದು
ಜೊರಿಸ್ ಹೇಳಿಕೆ. ಈ ತೀರ್ಮಾನಕ್ಕೆ ಬರುವ ಮುನ್ನ ನೆದರ್ಲ್ಯಾಂಡ್ಸ್ ಮತ್ತು ಕೆನಡಾದ ಅಂತಾರಾಷ್ಟ್ರೀಯ
ಸಂಶೋಧಕರ ತಂಡವು ಕುಡಿತದ ಹವ್ಯಾಸ ಇದ್ದವರ ಸಮೀಕ್ಷೆ ನಡೆಸಿತ್ತು. ತಂಡವು ಸುಮಾರು 789 ಮಂದಿ ಕೆನಡಾ
ವಿದ್ಯಾರ್ಥಿಗಳ ಕುಡಿತದ ಹವ್ಯಾಸ ಮತ್ತು ಹ್ಯಾಂಗೋವರ್ ತೀವ್ರತೆಯ ಬಗ್ಗೆ ಸಮೀಕ್ಷೆ ನಡೆಸಿತ್ತು.
ಮದ್ಯ ಸೇವನೆಯ ಬಳಿಕ ಅವರು ನೇರವಾಗಿ ಏನಾದರೂ ಆಹಾರ ಸೇವಿಸಿದ್ದರೇ ಅಥವಾ ನೀರನ್ನು ಕುಡಿದಿದ್ದರೇ ಎಂಬ
ಬಗೆಗೂ ತಂಡ ಸಮೀಕ್ಷೆ ನಡೆಸಿತ್ತು. ಮದ್ಯ ಸೇವನೆಯ
ಬಳಿಕ ಆಹಾರ ತಿಂದ ಮೇಲೆ ಅಥವಾ ನೀರು ಕುಡಿದ ಬಳಿಕ ಅವರ ಹ್ಯಾಂಗೋವರ್ ಅನುಭವ ಏನು ಎಂಬ ಮಾಹಿತಿಯನ್ನೂ
ತಂಡ ಕಲೆ ಹಾಕಿತ್ತು. ಮೈಮರೆಯುವಂತೆ ಕುಡಿದ 826 ಡಚ್ ವಿದ್ಯಾರ್ಥಿಗಳನ್ನು ಅವರು ಮದ್ಯ ಸೇವನೆ ಬಳಿಕ
ಆಹಾರ ತಿಂದಿದ್ದರೇ ಅಥವಾ ನೀರು ಕುಡಿದಿದ್ದರೇ ಎಂದು ತಂಡ ಪ್ರಶ್ನಿಸಿತ್ತು. ಇವರ ಪೈಕಿ ಸುಮಾರು
450 ಮಂದಿ ಮದ್ಯ ಸೇವನೆಯ ಬಳಿಕ ಇಷ್ಟವಾದ ತಿಂಡಿ ತಿಂದಿದ್ದರು. ಅವರ ಹ್ಯಾಂಗೋವರ್ ಪ್ರಮಾಣವನ್ನು
ತಿಳಿಸುವಂತೆಯೂ ತಂಡ ಅವರಿಗೆ ಸೂಚಿಸಿತ್ತು. ಉಭಯ ತಂಡಗಳಲ್ಲಿಯೂ ಹ್ಯಾಂಗೋವರ್ ತೀವ್ರತೆ ವಿಚಾರದಲ್ಲಿ
ಹೆಚ್ಚಿನ ಭಿನ್ನಾಭಿಪ್ರಾಯ ಇರಲಿಲ್ಲ. ಮದ್ಯ ಸೇವನೆ ಬಳಿಕ ಆಹಾರ ತಿಂದ ಅಥವಾ ನೀರು ಕುಡಿದವರು ನೀಡಿದ
ಅಂಕಿ ಅಂಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವ್ಯತ್ಯಾಸವಿತ್ತು. ಅದರೆ ಅದನ್ನೊಂದು ಅರ್ಥಪೂರ್ಣ ವ್ಯತ್ಯಾಸ
ಎಂದು ಹೇಳಲು ಸಾಧ್ಯವಿರಲಿಲ್ಲ. ಈ ಸಮೀಕ್ಷೆಯಿಂದ ನಾವು ಅರಿತ ವಿಚಾರ ಏನೆಂದರೆ ಹ್ಯಾಂಗೋವರ್ನಿಂದ
ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ ಕಡಿಮೆ ಮದ್ಯ ಕುಡಿಯುವುದು ಎಂದು ಡಾ. ವರ್ಸ್ಟರ್ ಹೇಳಿದರು. ಆಮ್
ಸ್ಟರ್ ಡ್ಯಾಮಿನಲ್ಲಿ ಇತ್ತೀಚೆಗೆ ನಡೆದ ಯುರೋಪಿಯನ್ ಕಾಲೇಜ್ ಆಫ್ ನ್ಯೂರೋಸೈಕೊಫಾರ್ಮಕಾಲಜಿ (ಇಸಿಎನ್ಪಿ)
ಕಾಂಗ್ರೆಸ್ನಲ್ಲಿ ಸಂಶೋಧನೆಯನ್ನು ಪ್ರಸ್ತುತ ಪಡಿಸಲಾಗಿತ್ತು.
2015: ಮುಂಬೈ: ರಾಷ್ಟ್ರವ್ಯಾಪಿ ಕುತೂಹಲ ಕೆರಳಿಸಿದ ಶೀನಾ ಬೋರಾ ಕೊಲೆ
ಪ್ರಕರಣದ ತನಿಖೆಯ ದಿಕ್ಕು ರಾಯಗಡ ಜಿಲ್ಲೆಯಲ್ಲಿ ಲಭಿಸಿದ ಕಳೇಬರದ ಅವಶೇಷಗಳ ಬಗೆಗಿನ ವಿಧಿ ವಿಧಾನ
ತಜ್ಞರ (ಫಾರೆನ್ಸಿಕ್) ವಿಶ್ಲೇಷಣೆಯತ್ತ ತಿರುಗಿತು. ಮೂರು ವರ್ಷಗಳ ಹಿಂದೆ ಕೊಲೆಯ ಬಳಿಕ ಶೀನಾ ಶವ
ಹುಗಿದಿಡಲಾಗಿತ್ತು ಎನ್ನಲಾದ ಜಾಗದಲ್ಲಿ ಈ ಅವಶೇಷಗಳು ಲಭಿಸಿದ್ದವು. ‘ಎಲುಬು ಮತ್ತ ಅಸ್ತಿಪಂಜರದ ಅವಶೇಷಗಳನ್ನು
ನಾವು ವಿಧಿವಿಧಾನ ತಜ್ಞರಿಗೆ ವಿಶ್ಲೇಷಣೆಗಾಗಿ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ’ ಎಂದು
ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 2012ರಲ್ಲಿ ರಾಯಗಡ ಪೊಲೀಸರಿಂದ ಪಡೆದಿದ್ದ ಕೆಲವು ಎಲುಬುಗಳನ್ನು ಜೆ.ಜೆ.
ಆಸ್ಪತ್ರೆಯು ಖಾರ್ ಪೊಲೀಸರಿಗೆ ಒಪ್ಪಿಸಿತ್ತು. 2012ರ ಏಪ್ರಿಲ್ 24ರಂದು ಇಂದ್ರಾಣಿ ಮತ್ತು ಸಂಜೀವ
ಖನ್ನಾ ಅವರು ಶೀನಾ ಬೋರಾಳನ್ನು ಭೇಟಿ ಮಾಡಿ ಕರೆದೊಯ್ಯವ ಕೆಲವೇ ಗಂಟೆಗಳ ಮುನ್ನ ಇಂದ್ರಾಣಿಯು ತನ್ನ
ಮಗನಾದ ಮೈಖೆಲ್ನನ್ನೂ ಎಳೆತಂದು ಕೊಲ್ಲಲೆತ್ನಿಸಿದ್ದಳು ಎಂಬುದಾಗಿ ಮೈಖೆಲ್ ಬೋರಾ ಮಾಡಿರುವ ಪ್ರತಿಪಾದನೆ
ಬಗೆಗೂ ಪೊಲೀಸರು ತನಿಖೆ ನಡೆಸಿದರು. ವರದಿಯೊಂದರ ಪ್ರಕಾರ ಖನ್ನಾ ಅವರು ಮೈಖೆಲ್ ಬೋರಾ ಹೇಳಿಕೆಯನ್ನು
ದೃಢೀಕರಿಸಿದ್ದಾರೆ ಎನ್ನಲಾಯಿತು. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ನೆಪದಲ್ಲಿ
ವರ್ಲಿಯ ತನ್ನ ಹೋಟೇಲ್ ಕೊಠಡಿಯಲ್ಲಿ ಮಾತನಾಡಲು ಬಂದಿದ್ದ ತನಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಇಂದ್ರಾಣಿ
ಮತ್ತು ಸಂಜೀವ್ ಶೀನಾಳನ್ನು ಭೇಟಿ ಮಾಡಲು ತೆರಳಿದ್ದರು ಎಂದು ಮೈಖೆಲ್ ಪೊಲೀಸರಿಗೆ ಹೇಳಿಕೆ ನೀಡಿದ್ದ.
ಅವರು ವಾಪಸ್ ಬರುವ ಹೊತ್ತಿಗಾಗಲೇ ಸಂಶಯ ಬಂದ ಹಿನ್ನೆಲೆಯಲ್ಲಿ ಅಮಲಿನಲ್ಲೇ ಇದ್ದ ತಾನು ಪರಾರಿಯಾಗಿದ್ದುದಾಗಿ
ಮೈಖೆಲ್ ಹೇಳಿದ್ದ.
2015: ಪಟ್ನಾ: ಪರಿಸರ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮರಕ್ಕೆ ರಾಖಿ ಕಟ್ಟುವ ವಿನೂತನ ವಿಧಾನ ಅನುಸರಿಸಿ,
ಬಿಹಾರಿನ ಹಸಿರು ಉಳಿಸುವಂತೆ ಜನತೆಯನ್ನು ಒತ್ತಾಯಿಸಿದರು. ‘ಆರೋಗ್ಯಪೂರ್ಣ ಪರಿಸರಕ್ಕಾಗಿ ಹೆಚ್ಚು
ಸಸಿಗಳನ್ನು ನೆಡಲು ಮತ್ತು ಅವುಗಳನ್ನು ರಕ್ಷಿಸಲು ಜನತೆ ಮುಂದೆ ಬರಬೇಕು’ ಎಂದು ಇಲ್ಲಿನ ರಾಜಧಾನಿ
ವಾಟಿಕಾದಲ್ಲಿ ಮರಕ್ಕೆ ರಾಖಿ ಕಟ್ಟಿದ ಬಳಿಕ ನಿತೀಶ್ ಕುಮಾರ್ ಹೇಳಿದರು. ಬಿಳಿಯ ಹತ್ತಿ ಬಟ್ಟೆಯ ಕುರ್ತಾ-ಪೈಜಾಮ ಧರಿಸಿದ್ದ ಮುಖ್ಯಮಂತ್ರಿ
‘ಪರಿಸರ ಸಂರಕ್ಷಣೆಗಾಗಿ ಮರಗಳಿಗೆ ರಾಖಿ ಕಟ್ಟುವಂತೆ ನಾನು ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ.
ಭೂಮಿ ಮತ್ತು ಮನುಷ್ಯರನ್ನು ರಕ್ಷಿಸಲು ಇದು ಹೊಸ ಆರಂಭ’ ಎಂದು ನುಡಿದರು. ಗಿಡಗಳನ್ನು ನೆಡಲು ಮತ್ತು
ರಾಜ್ಯದ ಹಸಿರು ಸಂರಕ್ಷಣೆ ಮಾಡಲು ಜನರಿಗೆ ಪ್ರೋತ್ಸಾಹ ಹಾಗೂ ನೆರವನ್ನು ರಾಜ್ಯ ಸರ್ಕಾರ ನೀಡಿದೆ
ಎಂದು ನಿತೀಶ್ ಕುಮಾರ್ ಹೇಳಿದರು. ಆಡಳಿತಾರೂಢ ಜನತಾದಳದ (ಸಂಯುಕ್ತ) ಹಲವಾರು ನಾಯಕರು, ಸರ್ಕಾರಿ
ಅಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೆಲವು ವರ್ಷಗಳ ಹಿಂದೆ ನಿತೀಶ್ ಕುಮಾರ್
ಅವರು ರಾಜ್ಯದ ಕಾಡುಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ‘ಹಸಿರು ಚಳವಳಿ’ ಹಮ್ಮಿಕೊಂಡಿದ್ದರು. ಪಟ್ನಾದಿಂದ
230 ಕಿಮೀ. ದೂರದ ಭಾಗಲ್ಪುರ ಜಿಲ್ಲೆಯ ಸಣ್ಣ ಗ್ರಾಮ ಧರ್ತಾರದಲ್ಲಿ ಗ್ರಾಮಸ್ಥರು ಮಾವು ಮತ್ತು ಲಿಚಿ
ಸೇರಿದಂತೆ ಹಣ್ಣಿನ ಮರಗಳನ್ನು ನೆಡುವ ಮೂಲಕ ಎರಡು ವರ್ಷದ ಹಿಂದೆ ಸುದ್ದಿ ಮಾಡಿದ್ದುದರಿಂದ ಸ್ಪೂರ್ತಿ
ಪಡೆದ ನಿತೀಶ್ ’ಹಸಿರು ಚಳವಳಿ’ಯನ್ನು ರೂಪಿಸಿದ್ದರು. ಪ್ರತಿಯೊಂದು ಹೆಣ್ಣು ಮಗುವಿನ ಜನ್ಮದಿನ ಆಚರಣೆಗಾಗಿ
ಧರ್ತಾರ ಗ್ರಾಮಸ್ಥರು ಹಣ್ಣುಗಳ ಗಿಡ ನೆಡುವ ಪರಂಪರೆ ಹುಟ್ಟು ಹಾಕಿದ್ದರು. ಪರಿಣಾಮವಾಗಿ ಈ ಗ್ರಾಮ
ಹಚ್ಚ ಹಸಿರಿನ ಗ್ರಾಮವಾಗಿ ಪರಿವರ್ತನೆಗೊಂಡಿತ್ತು.
2015: ವಡೋದರಾ: ಖ್ಯಾತ ಶಿಲ್ಪಿ ಮಹೇಂದ್ರ ಪಾಂಡ್ಯ ಅವರು ಅಲ್ಪಕಾಲದ ಅಸ್ವಸ್ಥತೆಯ
ಬಳಿಕ ತಮ್ಮ ಸ್ವಗೃಹದಲ್ಲೇ ಹಿಂದಿನ ದಿನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದವು. 89ರ
ಹರೆಯದ ಪಾಂಡ್ಯ ಅವರು ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಲಲಿತ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದರು.
ಅವರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು. ಕಲಾವಿದ ಹಾಗೂ ಪದ್ಮಶ್ರೀ ವಿಜೇತರಾದ
ಗುಲಾಂ ಶೇಖ್, ಶಿಲ್ಪಿಗಳಾದ ನಾಗ್ಜಿ ಪಟೇಲ್, ರಾಘವ್ ಕನೇರಿಯಾ, ಜ್ಯೋತಿ ಭಟ್ ಮತ್ತಿತರರು ಅಂತ್ಯಕ್ರಿಯೆಯಲ್ಲಿ
ಪಾಲ್ಗೊಂಡಿದ್ದರು. ಶಿಲ್ಪಕಲಾ ಕ್ಷೇತ್ರದಲ್ಲಿ ಪಾಂಡ್ಯ ಅವರು ಅಪಾರ ಸಿದ್ಧಾಂತ ಹಾಗೂ ಪ್ರಾಯೋಗಿಕ
ಜ್ಞಾನ ಹೊಂದಿದ್ದರು.
2015: ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿನ ಸೇನಾ
ಶಿಬಿರವೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಪೋಟವೊಂದರಲ್ಲಿ ಕನಿಷ್ಠ 18 ಮಂದಿ ಸೇನಾ ಯೋಧರು ಗಾಯಗೊಂಡರು.
ಅವರ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಯಿತು.
ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದ ಕ್ರ್ಯೂನ ಕೋರ್ ಬ್ಯಾಟಲ್ ಸ್ಕೂಲ್ನಲ್ಲಿ (ಸಿಬಿಎಸ್) ಸಂಭವಿಸಿದ
ಸ್ಪೋಟದಲ್ಲಿ ಕನಿಷ್ಠ 18 ಜನ ಗಾಯಗೊಂಡಿದ್ದಾರೆ. ಅವರ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು,
ವಿಶೇಷ ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ಇಲ್ಲಿನ ಬಾದಾಮಿಬಾಗ್ನಲ್ಲಿರುವ 92 ಬೇಸ್ ಆಸ್ಪತ್ರೆಗೆ
ಕರೆತರಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಉಳಿದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ
ನೀಡಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ನುಡಿದರು. ಸ್ಫೋಟ ಹೇಗೆ ಸಂಭವಿಸಿತು ಎಂಬುದು
ತತ್ ಕ್ಷಣಕ್ಕೆ ಗೊತ್ತಾಗಿಲ್ಲ. ‘ಅದು ಆಕಸ್ಮಿಕವಾಗಿ ಸಂಭವಿಸಿರಬಹುದು. ಏನಿದ್ದರೂ ವಾಸ್ತವಾಂಶ ಏನು
ಎಂಬುದು ತನಿಖೆಯ ಮೇಲಷ್ಟೇ ಗೊತ್ತಾಗಬಹುದು. ಈಗ ಏನೂ ಹೇಳಲಾಗದು’ ಎಂದು ಅಧಿಕಾರಿ ನುಡಿದರು.
2015: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ
ಮೋದಿ ಅವರು ರಕ್ಷಾ ಬಂಧನ ಉತ್ಸವದ ಸಂದರ್ಭದಲ್ಲಿ
ರಾಷ್ಟ್ರವನ್ನು ಅಭಿನಂದಿಸಿದರು. ‘ಪವಿತ್ರ ರಾಖಿಯು ಸಹೋದರಿಯರು ಮತ್ತು ಸಹೋದರರನ್ನು ಪ್ರೇಮ ಮತ್ತು
ವಿಶ್ವಾಸದ ಬಂಧನದಲ್ಲಿ ಬೆಸೆಯುವುದು. ನಾವೆಲ್ಲರೂ ಈದಿನ ಭಾರತದ ಮಹಿಳೆಯರು ಅದರಲ್ಲೂ ನಿರ್ದಿಷ್ಟವಾಗಿ
ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಪ್ರತಿಜ್ಞೆಗೈಯೋಣ’ ಎಂದು ರಾಷ್ಟ್ರಪತಿ
ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ ತಿಳಿಸಿದರು. ‘ರಕ್ಷಾ ಬಂಧನದ ಸಂದರ್ಭದಲ್ಲಿ ನಾನು ಭಾರತದ ನಾಗರಿಕರೆಲ್ಲರಿಗೂ
ಶುಭಾಶಯಗಳನ್ನು ಸಲ್ಲಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದರು. ರಕ್ಷಾ ಬಂಧನವು ಸಹೋದರ - ಸಹೋದರಿಯರ
ನಡುವಣ ಪ್ರೇಮ ಹಾಗೂ ಕರ್ತವ್ಯವನ್ನು ನೆನಪಿಸುವ ಹಬ್ಬವಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ
ರಾಖಿ ಕಟ್ಟುತ್ತಾರೆ. ಇದು ಸಹೋದರರ ಬಗೆಗಿನ ಸಹೋದರಿಯರ ಪ್ರೇಮ ಮತ್ತು ಅವರ ಹಿತಕ್ಕಾಗಿ ಪ್ರಾರ್ಥನೆ
ಮಾಡುವ ಸಂಕೇತವಾಗಿದ್ದು, ಸಹೋದರರು ಜೀವನ ಪರ್ಯಂತ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ.2008: ಖ್ಯಾತ ಅಂಕಣಕಾರ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) (90) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು. `ಪ್ರಜಾವಾಣಿ'ಯಲ್ಲಿ ಆರ್ಥಿಕ ಚಿಂತನೆ ಮತ್ತು ಸುಧಾದಲ್ಲಿ ವಾರದ ವ್ಯಕ್ತಿ ಕಾಲಂನ್ನು ಹಲವಾರು ವರ್ಷಗಳ ಕಾಲ ಬರೆದಿದ್ದ ಅವರು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಬಂಧಕಾರರೂ ಆಗಿದ್ದ ಅವರು ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಅವರ ಸಮಗ್ರ ಪ್ರಬಂಧ ಕಳೆದ ಆಗಸ್ಟ್ 26ರಂದು ಅವರ 90ನೇ ಹುಟ್ಟಿದ ಹಬ್ಬದ ದಿನ ಬಿಡುಗಡೆಯಾಗಿತ್ತು. ಸಾಹಿತ್ಯ ಅಕಾಡೆಮಿ, ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದರು. ಹರ್ನಿಯಾ ಸಮಸ್ಯೆಯಿಂದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2008: ಷಿಕಾಗೋ ನಗರದಲ್ಲಿ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಆಯೋಜಿಸಿದ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
2007: ಭಾರತದ ಫುಟ್ ಬಾಲ್ ಇತಿಹಾಸದಲ್ಲಿ ಈದಿನದ ರಾತ್ರಿ ಒಂದು ಸುಂದರ ರಾತ್ರಿ. ಭಾರತ ತಂಡದವರು ಮೊದಲ ಬಾರಿ ಒಎನ್ ಜಿಸಿ ನೆಹರೂ ಕಪ್ ಫುಟ್ ಬಾಲ್ ಟ್ರೋಫಿ ಗೆದ್ದು ಚಾಂಪಿಯನ್ ಶಿಪ್ ಪಡೆದುದು ಇದಕ್ಕೆ ಕಾರಣ. ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸೊಗಸಾದ ಆಟ ಪ್ರದರ್ಶಿಸಿದ ಭಾರತ ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಸಿರಿಯಾ ತಂಡವನ್ನು ಮಣಿಸಿ ಈ ಮಹತ್ವದ ಸಾಧನೆ ಮಾಡಿತು. ಇದಕ್ಕಾಗಿ ಭಾರತ ತಂಡ 40 ಸಾವಿರ ಡಾಲರ್ ಬಹುಮಾನ ಪಡೆಯಿತು.
2007: ಖ್ಯಾತ ಟ್ರ್ಯಾಪ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕಾ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ 14 ಮಂದಿಗೆ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಇತರ ಪ್ರಶಸ್ತಿ ವಿಜೇತರು: ಅರ್ಜುನ ಪ್ರಶಸ್ತಿ- ಜಯಂತಾ ತಾಲ್ಲೂಕ್ದಾರ್ (ಆರ್ಚರಿ), ಕೆ.ಎಂ.ಬಿನು (ಅಥ್ಲೆಟಿಕ್ಸ್), ಬಿ. ಚೇತನ್ ಆನಂದ್ (ಬ್ಯಾಡ್ಮಿಂಟನ್), ವಿಜೇಂದರ್ (ಬಾಕ್ಸಿಂಗ್), ಪಿ. ಹರಿಕೃಷ್ಣ (ಚೆಸ್), ಅಂಜುಮ್ ಚೋಪ್ರಾ (ಕ್ರಿಕೆಟ್), ಜ್ಯೋತಿ ಸುನಿತಾ ಕುಲ್ಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಷಾಲ್ (ಸ್ಕ್ವಾಷ್), ಸುಭಜಿತ್ ಸಾಹಾ (ಟೇಬಲ್ ಟೆನಿಸ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ನವನೀತ್ ಗೌತಮ್ (ಕಬಡ್ಡಿ), ರೋಹಿತ್ ಬಾಕರ್ (ಬ್ಯಾಡ್ಮಿಂಟನ್, ಅಂಗವಿಕಲರ ವಿಭಾಗ). ಧ್ಯಾನ್ ಚಂದ್ ಪ್ರಶಸ್ತಿ: ವರಿಂದರ್ ಸಿಂಗ್ (ಹಾಕಿ), ಶಂಷೇರ್ ಸಿಂಗ್ (ಕಬಡ್ಡಿ), ರಾಜೇಂದ್ರ ಸಿಂಗ್ (ಕುಸ್ತಿ); ದ್ರೋಣಾಚಾರ್ಯ ಪ್ರಶಸ್ತಿ: ಆರ್. ಡಿ. ಸಿಂಗ್ (ಅಂಗವಿಕಲರ ಅಥ್ಲೆಟಿಕ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್), ಕೊನೇರು ಅಶೋಕ್ (ಚೆಸ್).
2007: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಪ್ರತಿವರ್ಷ ಉತ್ತಮ ಶಿಕ್ಷಕರಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಗುಲ್ಬರ್ಗದ ಕಪನೂರ ನೆಹರು ಗಂಜ್ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದೇವೇಂದ್ರಪ್ಪ ಎಸ್. ತೋಟನಹಳ್ಳಿ ಅವರು ಆಯ್ಕೆಯಾದರು.
2007: ಶಾಬೇ ಬರಾತ್ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಲಾರಿ ಹರಿದು ನಾಲ್ವರು ಯುವಕರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಬೀದಿಗೆ ಇಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಆಗ್ರಾದಲ್ಲಿ ವ್ಯಾಪಕ ಹಿಂಸಾಕೃತ್ಯ ಸಂಭವಿಸಿ ಒಬ್ಬ ಬಾಲಕ ಗೋಲಿಬಾರಿಗೆ ಬಲಿಯಾದ.
2006: ಆಲಮಟ್ಟಿ ಜಲಾಶಯದ ಮುಂಭಾಗದ ಸೇತುವೆಯಿಂದ ಮ್ಯಾಕ್ಸಿಕ್ಯಾಬ್ ಒಂದು ಕೃಷ್ಣಾ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 29 ಜನ ಜಲ ಸಮಾಧಿಯಾದರು. ವರ್ಷದ ಹಿಂದೆ ನಡೆದಿದ್ದ ಸೋದರರ ಮದುವೆಯ ಬಾಸಿಂಗವನ್ನು ಕೂಡಲ ಸಂಗಮದಲ್ಲಿ ಬಿಟ್ಟು ಆಲಮಟ್ಟಿ ವೀಕ್ಷಣೆಗಾಗಿ ಹೊರಟಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನರಿದ್ದ ತಂಡವನ್ನು ಒಯ್ಯುತ್ತಿದ್ದ ಈ ಟೆಂಪೋದಲ್ಲಿ 32 ಜನರಿದ್ದರು. ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟೆಂಪೋ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಈ ದುರಂತಕ್ಕೆ ಕಾರಣ.
2006: ಆಧುನಿಕ ವಚನ ರಚನೆಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಅನ್ನದಾನಯ್ಯ ಪುರಾಣಿಕ, ವಚನ ಸಂಗೀತದ ಸುಧೆ ಹರಿಸಿದ ಧಾರವಾಡದ ಪಂಡಿತ ಸೋಮನಾಥ ಮರಡೂರ, ಸಂಶೋಧನಾ ಕ್ಷೇತ್ರದ್ಲಲಿ ಸೇವೆ ಸ್ಲಲಿಸಿದ ಧಾರವಾಡದ ಸಂಶೋಧಕ ವೀರಣ್ಣ ರಾಜೂರ ಅವರಿಗೆ ಪ್ರತಿಷ್ಠಿತ ರಮಣಶ್ರೀ ಪ್ರಶಸ್ತಿ ಪ್ರಕಟಿಸಲಾಯಿತು.
2006: ಅಂಥ್ರಾಕ್ಸ್ ವೈರಾಣು ದೇಹದ ಮೇಲೆ ದಾಳಿ ಮಾಡಲಾಗದಂತೆ ತಡೆಯಬಲ್ಲ ಹಾಗೂ ಸಾರ್ಸ್ ಸೋಂಕು ಹಾಗೂ ಏಡ್ಸ್ನಂತಹ ರೋಗಗಳನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕವನ್ನು ಪತ್ತೆ ಹಚುವಲ್ಲಿ ಯಶಸ್ವಿಯಾಗಿರುವುದಾಗಿ ನ್ಯೂಯಾರ್ಕಿನ ರೆನ್ಸೆಲೀರ್ ಪಾಲಿಟೆಕ್ನಿಕ್ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯ ರವಿಕಾನೆ ಮತ್ತು ಸಹೋದ್ಯೋಗಿಗಳು ಮೊದಲು ಈ ಮದ್ದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು ಅವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಥ್ರಾಕ್ಸ್ ನಿಂದ ಪಾರಾದವು ಎಂದು ಬಿಬಿಸಿಯ ಆನ್ ಲೈನ್ ಸಂಚಿಕೆ ವರದಿ ಮಾಡಿತು.
2006: ಖ್ಯಾತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಕರ್ನಾಟಕದ ಪಂಕಜ್ ಅಡ್ವಾಣಿ ಅವರಿಗೆ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.
2006: ಜಪಾನಿನ ರಕ್ಷಣೆ, ಪಶ್ಚಿಮ ಫೆಸಿಫಿಕ್ನ ಸ್ಥಿರತೆ ಹಾಗೂ ಶಾಂತಿಗೆ ಶ್ರಮಿಸುವ ಉದ್ದೇಶದೊಂದಿಗೆ ಅಮೆರಿಕದ ಕ್ಷಿಪಣಿ ನಿರೋಧಕ ಯುದ್ಧ ನೌಕೆ `ಯುಎಸ್ಎಸ್ ಶಿಲೋಹ್' ಜಪಾನಿನ ಯೊಕೊಸುಕಾ ಬಂದರಿಗೆ ಆಗಮಿಸಿತು. 360 ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯ ತೂಕ 10,000 ಟನ್ನುಗಳು. ನೌಕೆಯಿಂದ ಆಕಾಶಕ್ಕೆ ಚಿಮ್ಮುವ ಎಸ್ ಎಂ -3 ಕ್ಷಿಪಣಿ ನಿರೋಧಕಗಳ ಮೂಲಕ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.
1994: ಖ್ಯಾತ ಪತ್ರಕರ್ತ ತುಷಾರ್ ಕ್ರಾಂತಿ ಘೋಷ್ ನಿಧನ.
1982: ಮಾತಾ ಆನಂದ ಮಯಿ ನಿಧನ.
1974: ಚೌಧರಿ ಚರಣ್ ಸಿಂಗ್ ಅಧ್ಯಕ್ಷತಯಲ್ಲಿ ಲೋಕದಳ ಅಸ್ತಿತ್ವಕ್ಕೆ.
1926: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು. ಐದು ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಹೆಗಡೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು.
1915: ಸಾಹಿತಿ ಗುರುದೇವಿ ಹಿರೇಮಠ ಜನನ.
1913: ಸಾಹಿತ್ಯವಲಯದಲ್ಲಿ ಎನ್ಕೆ ಎಂದೇ ಖ್ಯಾತರಾದ ಎನ್ಕೆ ಕುಲಕರ್ಣಿ (20-8-1913ರಿಂದ 23-4-2005) ಅವರು ಕೃಷ್ಣರಾವ್ ನರಸಿಂಹ ಕುಲಕರ್ಣಿ - ಸೋನಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಧಾರವಾಡದ ಮಂದಿಗೆ `ನಾನೀಕಾಕ' ಎಂದೇ ಆತ್ಮೀಯರಾಗಿದ್ದ ಎನ್ಕೆ ಹಾಸ್ಯ ಪ್ರಹಸನ, ಕಾದಂಬರಿ, ನಗೆ ಲೇಖನ, ಲಲಿತ ಪ್ರಬಂಧ, ಜೀವನ ಚರಿತ್ರೆ ಇತ್ಯಾದಿ ವೈವಿಧ್ಯಮಯ ಬರವಣಿಗೆಯ ಕೃಷಿ ನಡೆಸಿದವರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರ್ಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1905: ಭಾರತದ ಖ್ಯಾತ ಹಾಕಿ ಆಟಗಾರ ಧ್ಯಾನ್ ಚಂದ್ (1905-1979) ಜನ್ಮದಿನ. ಇವರ ಜನ್ಮದಿನವನ್ನು ಭಾರತದ್ಲಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಇವರ ಹಾಕಿ ಆಟದ ಕೌಶಲ್ಯಗಳು ಮ್ಯಾಜಿಕ್ಕಿನಂತೆ ಭಾಸವಾಗುತ್ತಿದ್ದವು. ವಿದೇಶೀ ತಂಡಗಳು ಅವರ ಹಾಕಿ ಸ್ಟಿಕ್ಕಿನಲ್ಲಿ `ಅಯಸ್ಕಾಂತ' ಮತ್ತು `ಗೋಂದು/ ಮರವಜ್ರ'ಕ್ಕಾಗಿ ತಡಕಾಟ ನಡೆಸಿದ್ದೂ ಉಂಟು. 1936ರ ಬಲರ್ಿನ್ ಒಲಿಂಪಿಕ್ಸ್ ಬಳಿಕ ಜರ್ಮನಿಗೆ ವಲಸೆ ಬಂದದ್ದೇ ಆದರೆ ಕರ್ನಲ್ ಹುದ್ದೆ ನೀಡುವುದಾಗಿ ಹಿಟ್ಲರ್ ಅವರಿಗೆ ಆಹ್ವಾನ ಕೂಡಾ ನೀಡಿದ್ದ.
1896: ಅಮೆರಿಕಕ್ಕೆ ಭೇಟಿ ನೀಡಿದ ಚೀನಾದ ರಾಯಭಾರಿ ಲಿ ಹಂಗ್-ಚಾಂಗ್ ಅವರಿಗಾಗಿ ಚೀನಾ- ಅಮೆರಿಕದ `ಚಾಪ್-ಸ್ವೇ' ಹೆಸರಿನ ಹೊಚ್ಚ ಹೊಸ ಭಕ್ಷ್ಯವನ್ನು ನ್ಯೂಯಾರ್ಕ್ ನಗರದಲ್ಲಿ ತಯಾರಿಸಲಾಯಿತು.
1882: ಲಂಡನ್ನಿನ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು ಮೊದಲ ಬಾರಿಗೆ ಸೋಲಿಸಿತು. ಈ ಪಂದ್ಯವನ್ನು `ಆಷಸ್ ಟೆಸ್ಟ್' (ಬೂದಿ ಪಂದ್ಯ!) ಎಂದು ಕರೆಯಲಾಯಿತು. ಪಂದ್ಯ ಮುಗಿದ ಒಂದು ದಿನದ ಬಳಿಕ `ಸ್ಪೋರ್ಟಿಂಗ್ ಟೈಮ್' ಪತ್ರಿಕೆ `ಇನ್ ಮೆಮೋರಿಯಮ್' ವಿಭಾಗದಲ್ಲಿ ಇಂಗ್ಲಿಷ್ ಕ್ರಿಕೆಟ್ಟಿನ ಸಾವು ಕುರಿತ ಪ್ರಕಟಣೆಯನ್ನು ಪ್ರಕಟಿಸಿತು. `ಶವವನ್ನು ದಹಿಸಲಾಯಿತು ಮತ್ತು ಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು' ಎಂದು ಅದು ಬರೆದಿತ್ತು.
1842: `ನಾನ್ ಕಿಂಗ್ ಒಪ್ಪಂದ'ದ ಮೂಲಕ ಚೀನಾ ಮತ್ತು ಬ್ರಿಟನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರಿ ಘರ್ಷಣೆ ಕೊನೆಗೊಂಡಿತು. ಈ ಘರ್ಷಣೆ ಮೊದಲ `ಅಫೀಮು ಯುದ್ಧ' (1839-42) ಎಂದೇ ಖ್ಯಾತಿ ಪಡೆದಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಚೀನಾವು ಹಾಂಕಾಂಗ್ ಭೂಪ್ರದೇಶವನ್ನು ಬಿಟ್ಟು ಕೊಟ್ಟದ್ದಲ್ಲದೆ, ಐದು ಬಂದರುಗಳಲ್ಲಿ ವ್ಯಾಪಾರ ನಡೆಸಲು ಬ್ರಿಟಿಷರಿಗೆ ಅವಕಾಶ ನೀಡಿತು. ಒಪ್ಪಂದಕ್ಕೆ ಎಚ್ ಎಂಎಸ್ ಕಾರ್ನವಾಲಿಸ್ ಹಡಗಿನಲ್ಲಿ ಸಹಿ ಮಾಡಲಾಯಿತು. ಈ ಹಡಗನ್ನು 19ನೇ ಶತಮಾನದಲ್ಲಿ ಭಾರತದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ವಾಡಿಯಾಸ್ ಹಡಗು ನಿರ್ಮಾಣ ಸಂಸ್ಥೆ ಬಾಂಬೆ ಡಾಕ್ಸ್ ನಿರ್ಮಿಸಿತ್ತು.
1831: ಮೂಲ ವಿದ್ಯುತ್ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಮಬಲದ ಎರಡನೇ ಸರ್ಕಿಟ್ ವಿದ್ಯುತ್ ಪ್ರವಾಹ ಕುರಿತ ತನ್ನ ಸಂಶೋಧನೆಗಳನ್ನು ಮೈಕೆಲ್ ಫ್ಯಾರಡೆ ನಡೆಸಿದ. ಈ ವರ್ಷದಲ್ಲೇ ನಂತರ ಅಯಸ್ಕಾಂತ (ಮ್ಯಾಗ್ನೆಟ್) ಬಳಸಿ ನಡೆದ ಪ್ರಯೋಗಗಳು ಮೊತ್ತ ಮೊದಲ `ಡೈನಮೊ' ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment