My Blog List

Monday, August 31, 2009

ಇಂದಿನ ಇತಿಹಾಸ History Today ಆಗಸ್ಟ್ 28


ಇಂದಿನ ಇತಿಹಾಸ

ಆಗಸ್ಟ್ 28

ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು. 
 2015: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ 1965ರ ಭಾರತ- ಪಾಕಿಸ್ತಾನ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘1965ನೇ ವರ್ಷದ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾನು ನಮ್ಮ ತಾಯ್ನಾಡಿಗಾಗಿ ಹೋರಾಡಿದ ಎಲ್ಲಾ ಧೈರ್ಯಶಾಲಿ ಯೋಧರಿಗೂ ತಲೆಬಾಗುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ‘ನಮ್ಮ ಸಶಸ್ತ್ರ ಯೋಧರ ಧೈರ್ಯ ಮತ್ತು ಶೌರ್ಯ ಸ್ಪೂರ್ತಿದಾಯಕ. ಪ್ರತಿಯೊಂದು ಅಡ್ಡಿ ಆತಂಕ ಎದುರಾದಾಗಲೂ ಅವರು ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿದ್ದಾರೆ’ ಎಂದು ಪ್ರಧಾನಿ ಹೇಳಿದರು. ಈ ಮಧ್ಯೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಮರ ಜ್ಯೋತಿ ಜವಾನ್​ಗೆ ತೆರಳಿ ಹುತಾತ್ಮ ಯೋಧರ ಸ್ಮಾರಕದಲ್ಲಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
2015: ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಮೂವರು ನಾಗರಿಕರು ಹತರಾಗಿ, ಇತರ 16 ಮಂದಿ ಗಾಯಗೊಂಡರು.  ಆರ್.ಎಸ್.ಪುರ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರಿ ಪ್ರಮಾಣದಲ್ಲಿ ಅಪ್ರಚೋದಿತ ಗುಂಡುದಾಳಿ ಮತ್ತು ಫಿರಂಗಿ ದಾಳಿ ನಡೆಸಿದವು. ಪಾಕಿಸ್ತಾನದ ಕಡೆಯ ಫಿರಂಗಿದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಗಳು (ಬಿಎಸ್​ಎಫ್) ಸೂಕ್ತ ಉತ್ತರ ನೀಡಿದವು. ಈಮಧ್ಯೆ, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯು ಭಾರತದ ಹೈಕಮೀಷನರ್ ಅವರನ್ನು ಕರೆಸಿ ಕದನ ವಿರಾಮ ಉಲ್ಲಂಘನೆಗಾಗಿ ಪ್ರತಿಭಟನೆ ಸಲ್ಲಿಸಿದರು. ಸಿಯಾಲ್ ಕೋಟ್ ವರದಿಯ ಪ್ರಕಾರ ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಗಳಲ್ಲಿ ಪಾಕಿಸ್ತಾನದ  ಕನಿಷ್ಠ 9 ನಾಗರಿಕರು ಮೃತರಾಗಿ, ಇತರ ಹಲವರು ಗಾಯಗೊಂಡರು ಎಂದು ಪಾಕಿಸ್ತಾನದ ‘ಡಾನ್’ ವರದಿ ಮಾಡಿತು.

2015: ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ವಸ್ತುಗಳ ಬೆಲೆ ಕುಸಿತವು ಭಾರತಕ್ಕೆ ಲಾಭದಾಯಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನವದೆಹಲಿಯಲ್ಲಿ ಹೇಳಿದರು. ಜಾಗತಿಕ ತೈಲ ಹಾಗೂ ಸಾಮಗ್ರಿಗಳ ಬೆಲೆ ಕುಸಿತವು ಸಾರ್ವಜನಿಕ ವೆಚ್ಚಕ್ಕಾಗಿ ಹಣ ಉಳಿತಾಯ ಮಾಡುವುದು ಎಂದು ಅವರು ಹೇಳಿದರು..

2015: ಮುಂಬೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸರು ಶೀನಾ ಬೋರಾ ದೇಹವನ್ನು ಹುಗಿಯಲಾಗಿದ್ದ ಜಾಗದಲ್ಲಿ ಅಗೆದು ಕೆಲವು ಎಲುಬುಗಳು, ತಲೆಬುರುಡೆ ಮತ್ತು ಸೂಟ್​ಕೇಸ್ ಪತ್ತೆ ಮಾಡಿದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿನ ಪೆನ್​ನಲ್ಲಿ ಠಿಕಾಣಿ ಹೂಡಿದ  ಪೊಲೀಸರು ಇನ್ನಷ್ಟು ಅವಶೇಷಗಳಿಗಾಗಿ ಶೋಧ ನಡೆಸಲು ಕಾದರು. 2012ರ ಮೇ ತಿಂಗಳಲ್ಲಿ ರಾಯಗಢ ಪೊಲೀಸರು ತಲೆಗೂದಲು, ಹಲ್ಲು ಮತ್ತು ಕೆಲವು ಎಲುಬು ಮಾದರಿಗಳನ್ನು ಮುಂಬೈಯ ಜೆಜೆ ಆಸ್ಪತ್ರೆಗೆ ಕಳುಹಿಸಿದ್ದರು. 2013ರ ಡಿಸೆಂಬರ್​ನಲ್ಲಿ ಆಸ್ಪತ್ರೆಯು ಮೃತ ವ್ಯಕ್ತಿಯ ವಯಸ್ಸು ಮತ್ತು ಲಿಂಗ ಮತ್ತು ಸಾವಿನ ಕಾರಣ ಪತ್ತೆಗೆ ಈ ಅವಶೇಷಗಳು ಸಾಕಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿತ್ತು. ರಾಯಗಢ ಪೊಲೀಸರು ಬಳಿಕ
ಆಸ್ಪತ್ರೆಯ ಪತ್ರಕ್ಕೆ ಉತ್ತರಿಸಿರಲೇ ಇಲ್ಲ. ಶುಕ್ರವಾರ ಅವಶೇಷಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಈ ಮಧ್ಯೆ ಇಂದ್ರಾಣಿಯ ಮಾಜಿ ಗಂಡನ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 31ರವರೆಗೆ ನ್ಯಾಯಾಲಯವು ವಿಸ್ತರಿಸಿತು.

2015: ರಾಯಪುರ: ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕೆಲಸ ಮಾಡುತ್ತಾ ಅವರಿಗೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಪೂರೈಸುತ್ತಿದ್ದುದಕ್ಕಾಗಿ ಇಬ್ಬರು ವ್ಯಾಪಾರಿಗಳು ಸೇರಿದಂತೆ 13 ಮಂದಿಗೆ ವಿಶೇಷ ನ್ಯಾಯಾಲಯವೊಂದು 7 ವರ್ಷಗಳ ಕಠಿಣ ಸಜೆ ವಿಧಿಸಿತು. ವ್ಯಾಪಾರಿ ನೀರಜ್ ಛೋಪ್ರಾ, ಸಂಬಂಧಿ ಧರ್ಮೇಂದ್ರ ಛೋಪ್ರಾ, ಮೊಹ್​ಪಾಲ್ ಯಾನೆ ಸಂತೋಷ ಧ್ರುವ, ಬಲಿರಾಮ್ ಉಸೆಂಡಿ, ಚೈತ್ರಂ ದರ್ರೊ, ಫೋಲ್​ಸಿಂಗ್ ನಾಗ್, ಸುಖನಾಥ್ ನರೇಟಿ, ಬದ್ರಿ ಗವಡೆ, ಮೋಹನ್ ಸಿಂಗ್ ಧ್ರುವ, ರಾಮ್ ಕುಮಾರ್ ಮಾಂಡವಿ, ದಶರಥ ಮಾಂಡವಿ, ಲಕ್ಷ್ಮಣ್ ಉಸೆಂಡಿ ಮತ್ತು ರವಿ ಕಡಿಯಂ ಅವರಿಗೆ ವಿಶೇಷ ನ್ಯಾಯಾಧೀಶ ಅಬ್ದುಲ್ ಝುಹೀದ್ ಖುರೇಷಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಸುರೇಶ ಪ್ರಸಾದ್ ಶರ್ಮಾ ಹೇಳಿದರು. ಎಲ್ಲಾ ಆರೋಪಿಗಳೂ ಮಾವೋವಾದಿ ಸಂದೇಶವಾಹಕರಾಗಿ ಕೆಲಸ ಮಾಡುತ್ತಾ ಅವರಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಸರಬರಾಜು ಸರಬರಾಜು ಮಾಡುತ್ತಿದ್ದುದು ಸಾಬೀತಾಗಿದೆ ಎಂದು ಅವರು ಹೇಳಿದರು. ರಾಜ್ಯ ಗುಪ್ತಚರ ಶಾಖೆ ಮತ್ತು ಪೊಲೀಸರು ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ರಾಯಪುರ ಮತ್ತು ಬಸ್ತಾರ್ ಪ್ರದೇಶದ ಪ್ರತ್ಯೇಕ ಸ್ಥಳಗಳಿಂದ ಸಾಗಣೆ ಮತ್ತು ಹಣಕಾಸು ಬೆಂಬಲ ನೀಡುತ್ತಿದ್ದುದಕ್ಕಾಗಿ 13 ಜನರನ್ನು ಬಂಧಿಸಿದ್ದರು. 2014ರ ಜನವರಿ 15ರಂದು ಮೊಹ್​ಪಾಲ್, ಬಲಿರಾಂ ಮತ್ತು ಚೈತ್ರಮ್ ಅವರನ್ನು ರಾಯಪುರದಿಂದ ಕಂಕೇರ್​ಗೆ ನಕ್ಸಲೀಯರಿಗಾಗಿ ಶಸ್ತ್ರಾಸ್ತ್ರಗಳನ್ನು ಒಯ್ಯತ್ತಿದ್ದಾಗ ಅಭಂಪುರ್ ಪ್ರದೇಶದಲ್ಲಿ ಬಂಧಿಸಿದ್ದರು.

2015: ನವದೆಹಲಿ: ಟೋಲ್ ಅಡೆತಡೆಗಳನ್ನು ತೆಗೆದುಹಾಕಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರವು ಅಂಗೀಕರಿಸದ ಕಾರಣಕ್ಕಾಗಿ ಅಕ್ಟೋಬರ್ 1ರಿಂದ ಅನಿರ್ದಿಷ್ಟ ಕಾಲ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭಿಸಲಾಗುವುದು ಎಂದು ಟ್ರಕ್ ಚಾಲಕ - ಮಾಲೀಕರು ಪ್ರಕಟಿಸಿದರು.
2015: ನವದೆಹಲಿ: ತಮ್ಮ ವಿರುದ್ಧ ಹೂಡಲಾಗಿದ್ದ ಅತ್ಯಾಚಾರ ಪ್ರಕರಣ ಸುಳ್ಳೆಂದು ಸಾಬೀತಾದ ಕಾರಣ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ನ್ಯಾಯಾಲಯ ಅನುವು ಮಾಡಿಕೊಟ್ಟಿತು. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಸುಳ್ಳು ಆರೋಪಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ತೀರ್ಮಾನ ಹೆಚ್ಚಿನ ಮಹತ್ವಪಡೆದುಕೊಂಡಿತು. ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ವಿಚಾರಣೆ ವೇಳೆ ತಮ್ಮ ಸಮ್ಮತಿಯ ಮೇಲೆಯೇ ತಮ್ಮಿಬ್ಬರ ನಡುವೆ ಲೈಂಗಿಕ ಸಂಬಂಧ ಬೆಳೆದಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತು. ಇದೇ ವೇಳೆ ಅತ್ಯಾಚಾರದ ಸುಳ್ಳು ಆರೋಪದಿಂದಾಗಿ ಆ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾನೆ. ಜತೆಗೆ ಸಾರ್ವಜನಿಕವಾಗಿ ಅವಮಾನಿತನಾಗಿದ್ದಾನೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆ ವ್ಯಕ್ತಿಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದರು. ಪ್ರಕರಣದ ವಿಚಾರಣೆ ವೇಳೆ ದೂರುದಾರರೇ ತಟಸ್ಥರಾಗಿ, ಆರೋಪಿಯನ್ನು ಖುಲಾಸೆಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗೌರವಪೂರ್ಣವಾಗಿ ಆರೋಪದಿಂದ ಖುಲಾಸೆಗೊಳ್ಳಲು ಆರೋಪಿತರಿಗೆ ಅವಕಾಶ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುದಾರರ ನಡತೆಯನ್ನು ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೆಚ್ಚುವರಿ ಆಪಾದಿತರನ್ನಾಗಿ ಕರೆಸಲು ಸಮನ್ಸ್ ಹೊರಡಿಸುವಂತೆ ಕೋರಿ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಮಾಡಿರುವ ಮನವಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ರಂದು ನಡೆಸುವುದಾಗಿ ಪ್ರಕರಣದ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ತಿಳಿಸಿತು. ಉದ್ಯಮಿ, ಮಾಜಿ ಸಂಸತ್ ಸದಸ್ಯ ನವೀನ್ ಜಿಂದಾಲ್, ಮಧುಕೋಡಾ ಮತ್ತು ಇತರ 13 ಮಂದಿ ವಿರುದ್ಧ ಹೊರಿಸಲಾಗಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ವಾದಗಳ ಆರಂಭಕ್ಕೆ ವಿಶೇಷ ನ್ಯಾಯಾಲಯವು ಅಕ್ಟೋಬರ್ 15ನೇ ದಿನಾಂಕವನ್ನು ನಿಗದಿ ಪಡಿಸಿತು.

2015: ಟ್ರಿಪೋಲಿ:: ಆಫ್ರಿಕಾದ ವಲಸಿಗರಿದ್ದ ದೋಣಿಯೊಂದು ಮುಳುಗಿದ ಪರಿಣಾಮ 200 ಮಂದಿ ಮೃತರಾದರು.  ವಲಸಿಗರು ಇಟಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಲಿಬಿಯಾದ ಸಮುದ್ರದಲ್ಲಿ ಮುಳುಗಿದ್ದಾಗಿ ಲಿಬಿಯಾದ ಅಧಿಕಾರಿಗಳು ತಿಳಿಸಿದರು. ದೋಣಿಯಲ್ಲಿ ಸುಮಾರು 400 ಮಂದಿ ಪ್ರಯಾಣಿಸುತ್ತಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ತುಂಬಿಕೊಂಡಿದ್ದೇ ದೋಣಿ ಮುಳುಗಲು ಕಾರಣವೆಂದು ಹೇಳಲಾಯಿತು. ಸುಮಾರು 200 ಜನರನ್ನು ರಕ್ಷಿಸಲಾಯಿತು. ಇವರ ಪೈಕಿ 147 ಮಂದಿಯನ್ನು ಅಕ್ರಮ ವಲಸಿಗರ ಆಶ್ರಯ ತಾಣದಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಟ್ರಿಪೋಲಿಯ  ಅಧಿಕಾರಿಗಳು ಹೇಳಿದರು.

2015: ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಯಾವುದಾದರೂ ಬಾಹ್ಯ ಬೆದರಿಕೆ ಇದ್ದರೆ ಅದು ಭಾರತದಿಂದ ಮಾತ್ರ ಎಂದು ಪಾಕಿಸ್ತಾನದ ಸಂಸದೀಯ ರಕ್ಷಣಾ ಸಮಿತಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿತು. ಇತ್ತೀಚೆಗೆ ಪಾಕ್​ನ ಸೇನಾಪಡೆಯ ಜಾಯಿಂಟ್ ಸ್ಟಾಫ್ ಕೇಂದ್ರ ಸ್ಥಾನಕ್ಕೆ ಸಂಸದೀಯ ರಕ್ಷಣಾ ಸಮಿತಿ ಸದಸ್ಯರು ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಅಪಾಯ ಇರುವ ಬಗ್ಗೆ ಸೇನಾಧಿಕಾರಿಗಳು ಆತಂಕವನ್ನು ಹಂಚಿಕೊಂಡರು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಜಾಯಿಂಟ್ ಸ್ಟಾಫ್ ಉನ್ನತ ರಕ್ಷಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಅಣ್ವಸ್ತ್ರಗಳ ಭದ್ರತೆ ಹಾಗೂ ನಿರ್ವಹಣೆಯ ಹೊಣೆಯನ್ನು ನಿಭಾಯಿಸುತ್ತಿರುವುದಾಗಿ ಮುಷಾಯಿದ್ ಹುಸೇನ್ ನೇತೃತ್ವದ ಸಂಸದೀಯ ಸಮಿತಿಗೆ ಲೆಫ್ಟಿನೆಂಟ್ ಜನರಲ್ ರಶದ್ ಮೆಹಮೂದ್ ಮಾಹಿತಿ ನೀಡಿದರು. ಕಳೆದ ಕೆಲವಾರು ವರ್ಷಗಳಲ್ಲಿ ಭಾರತ ಸುಮಾರು 100 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಇವುಗಳ ಪೈಕಿ ಶೇ.80ರಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲೆಂದೇ ಮೀಸಲಾಗಿದೆ. ಇದರ ಜತೆಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಭಾರತ ಈಗಾಗಲೆ ಸಾಕಷ್ಟು ಹಣವನ್ನು ವ್ಯಯಿಸುತ್ತಿರುವುದಾಗಿ ಹೇಳಿದರು. ಈ ಮಧ್ಯೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ 3ನೇ ಅತಿದೊಡ್ಡ ಅಣ್ವಸ್ತ್ರಗಳ ದಾಸ್ತಾನು ಹೊಂದಿರುವ ರಾಷ್ಟ್ರವಾಗಲಿರುವುದಾಗಿ ಅಮೆರಿಕದ ತಜ್ಞರು ವರದಿ ನೀಡಿದರು. ಈ ವರದಿಯ ಪ್ರಕಾರ ಪ್ರತಿ ವರ್ಷ 20 ಅಣ್ವಸ್ತ್ರಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳುತ್ತಿದೆ. ಭಾರತ ಕೂಡ ಅಣ್ವಸ್ತ್ರ ಬಲಾಢ್ಯ ರಾಷ್ಟ್ರವಾಗಿರುವುದು ಇದಕ್ಕೆ ಕಾರಣ. ಪಾಕಿಸ್ತಾನದ ಬಳಿ ಸಂಸ್ಕರಿತ ಯುರೇನಿಯಂ ದಾಸ್ತಾನು ಹೆಚ್ಚಾಗಲಿರುವ ಕಾರಣ ಮುಂಬರುವ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬಲ ಮತ್ತಷ್ಟು ವೃದ್ಧಿಸುವುದು ನಿಶ್ಚಿತವೆಂದು ತಜ್ಞರು ಅಭಿಪ್ರಾಯಪಟ್ಟರು..

2015: ಬ್ಯಾಂಕಾಕ್: ಸಮುದ್ರದ ತೆರೆ ಬಂದು ಅಪ್ಪಳಿಸುವಾಗಲೇ ಒಂದು ರೀತಿಯ ಭಯ ಸಾಮಾನ್ಯ. ಅದೇ ರೀತಿ ಭಯ ಹುಟ್ಟಿಸುವ ಮಾಹಿತಿಯನ್ನು ಇದೀಗ ನಾಸಾ ಹೊರಗೆಡವಿದೆ. ಅದೇನೆಂದರೆ, ಸಮುದ್ರ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಂತೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ಒಂದು ಮೀಟರ್​ನಷ್ಟು ಹೆಚ್ಚಿದೆ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜ್ಞಾನಿ ಚಾರ್ಲೆಸ್ ಬೊಲ್ಡೆನ್ ಇದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದರು. ಇದಾದ ಬಳಿಕ ನಾಸಾ ವಿಜ್ಞಾನಿಗಳು ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ್ದು, 1992ರಿಂದ ಈಚೆ ಸಾಗರ ನೀರಿನ ಮಟ್ಟ ಹೆಚ್ಚೂಕಡಿಮೆ 8 ಸೆಂ.ಮೀ.ನಷ್ಟು ಹೆಚ್ಚಿದೆ. ಇದಕ್ಕೆ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಅಧ್ಯಯನದಿಂದ ಬಿಸಿ ನೀರು ಹೆಚ್ಚುತ್ತಿರುವುದು ಮತ್ತು ಹಿಮ ಕರಗುತ್ತಿರುವುದು ಎನ್ನುವುದು ತಿಳಿದಿದೆ ಎಂದರು. ಏಷ್ಯಾದ ಸಮುದ್ರ ತೀರದಲ್ಲಿ ಹೆಚ್ಚೂಕಡಿಮೆ 150 ಮಿಲಿಯನ್ ಜನರು ಸಮುದ್ರ ನೀರಿನ ಮಟ್ಟದಿಂದ ಕೇವಲ ಒಂದು ಮೀಟರ್ ಎತ್ತರದಲ್ಲಿ ವಾಸವಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನುವುದು ಎಚ್ಚರಿಕೆಯ ಸಂದೇಶ ಎನ್ನಲಾಯಿತು.

2008: ಪುದುಚೇರಿಯ ಕೈಗಾರಿಕೆ ಹಾಗೂ ವಿದ್ಯುತ್ ಖಾತೆ ಸಚಿವ ವೈದ್ಯಲಿಂಗಂ ಅವರನ್ನು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವು ಆಯ್ಕೆ ಮಾಡಿತು. ರಂಗಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಸಭೆ ಸೇರಿದ ಶಾಸಕರು ವೈದ್ಯಲಿಂಗಂ ಅವರನ್ನು ಮುಖ್ಯಮಂತ್ರಿಯಾಗಿ ಒಮ್ಮತದಿಂದ ಆರಿಸಿದರು.

2007: ಕ್ರೋಯೇಷಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಮಾನವ್ ಜಿತ್ ಸಿಂಗ್ ಸಂಧು ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆಯಾದರು. ಬೆಂಗಳೂರಿನ `ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿರುವ ಪಿಎಸ್ ಪಿಬಿ ಆಟಗಾರ ಚೇತನ್ ಆನಂದ್ ಅವರು ಬ್ಯಾಡ್ಮಿಂಟನ್ ರಂಗದಲ್ಲಿ ಈ ವರ್ಷ ತೋರಿದ ಸಾಧನೆಗಾಗಿ `ಅರ್ಜುನ' ಪ್ರಶಸ್ತಿಗೆ ಆಯ್ಕೆಯಾದರು.

2007: ಮಾತೆ ಮಹಾದೇವಿ ಅವರ `ಬಸವ ವಚನ ದೀಪ್ತಿ' ವಚನ ಸಂಗ್ರಹದ ಮೇಲೆ ರಾಜ್ಯ ಸರ್ಕಾರ ಹೇರಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ವಚನಗಳ ಅಂಕಿತನಾಮ `ಕೂಡಲಸಂಗಮದೇವ' ವನ್ನು `ಲಿಂಗದೇವ' ಎಂದು ಬದಲಾಯಿಸುವ ಅಧಿಕಾರ ಲೇಖಕರಿಗಿಲ್ಲ ಎಂದು ಹೇಳಿತು. `ಬಸವಣ್ಣನವರು ಕನಸಿನಲ್ಲಿ ಬಂದು ವಚನಗಳ ಅಂಕಿತ ನಾಮವನ್ನು `ಲಿಂಗದೇವ' ಎಂದು ಬದಲಾಯಿಸುವಂತೆ ತಿಳಿಸಿದ್ದರು ಎಂಬ ಮಾತೆ ಮಹಾದೇವಿ ಅವರ ಹೇಳಿಕೆ ನಂಬಿಕೆಗೆ ಯೋಗ್ಯವಲ್ಲ' ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಠಕ್ಕರ್ ಮತ್ತು ಮಾರ್ಕಾಂಡೇಯ ಖಟ್ಜು ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಾತೆಮಹಾದೇವಿ ಸಂಪಾದಿಸಿ 1995ರಲ್ಲಿ ಪ್ರಕಟಿಸಿದ್ದ ಪರಿಷ್ಕೃತ ವಚನಗಳ ಸಂಗ್ರಹವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು 1998ರಲ್ಲಿ ಎತ್ತಿಹಿಡಿದಿದ್ದ ಹೈಕೋರ್ಟ್ ` ಈ ರೀತಿ ಅಂಕಿತನಾಮದ ಬದಲಾವಣೆ ಸಮರ್ಥನಿಯ ಅಲ್ಲ' ಎಂದು ಹೇಳಿತ್ತು.

2007: ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಫೋರಂ ಸಮೀಪದಲ್ಲಿ ಬಿಗ್ ಬಜಾರ್ ಮಳಿಗೆ ಇರುವ ಕಟ್ಟಡ ಸೇರಿದಂತೆ ಹಲವು ಮಾಲ್ಗಳ ನಿರ್ಮಾಣಕ್ಕೆ 8.11 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು. `ಇಲ್ಲಿನ ಪ್ರತಿಷ್ಠಿತ `ಮಾಲ್' ಗಳು ಸೇರಿ ಸುಮಾರು 325 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯಾಗಿದೆ' ಎಂದು ರಾಮಸ್ವಾಮಿ ತಿಳಿಸಿದರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ ಪಾಕಿಸ್ಥಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಚಿವ ಇಷಾಕ್ ಖಾಕ್ವಾನಿ ರಾಜೀನಾಮೆ ನೀಡಿದರು.

2007: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ರಾಯ್ ಮೆಕ್ ಲೀನ್ (77) ಜೋಹಾನ್ಸ್ ಬರ್ಗಿನಲ್ಲಿ ನಿಧನರಾದರು. ನಲವತ್ತು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮೆಕ್ ಲೀನ್ 30ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಿಟ್ಟಿಸಿದ್ದರು. 1955ರರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಒಂದರಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅವರು ಗೆಲ್ಲಿಸಿಕೊಟ್ಟಿದ್ದರು. 1960ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದ ಪರವಾಗಿ ಉತ್ತಮ ಪ್ರದರ್ಶನನ ನೀಡಿದ ಮೆಕ್ ಲೀನ್ 1961ರಲ್ಲಿ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು. ರಗ್ಬಿ ಆಟಗಾರರಾಗಿಯೂ ಹೆಸರು ಮಾಡಿದ್ದರು.

2006: ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2006: ಹತ್ತನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ ಎಎಫ್) ಕ್ರೀಡಾಕೂಟ ಮುಕ್ತಾಯ. 118 ಚಿನ್ನ, 69 ಬೆಳ್ಳಿ, 47 ಕಂಚಿನ ಪದಕ ಸೇರಿ ಒಟ್ಟು 234 ಪದಕಗಳನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಮೂಲಕ ಭಾರತ ಪದಕ ಪಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪಾಕಿಸ್ಥಾನವು 43 ಚಿನ್ನ, 44 ಬೆಳ್ಳಿ, 71 ಕಂಚು ಸೇರಿ 158 ಪದಕ ಗೆದ್ದರೆ, ಶ್ರೀಲಂಕೆಯು 37 ಚಿನ್ನ, 63 ಬೆಳ್ಳಿ, 78 ಕಂಚು ಸೇರಿ 178 ಪದಕ ಗೆದ್ದುಕೊಂಡಿತು.

2001: ಇಂಟೆಲ್ ಕಾರ್ಪೊರೇಷನ್ ತನ್ನ ಅತಿ ವೇಗದ `ಪೆಂಟಿಯಮ್ 4' ಮೈಕ್ರೊಪ್ರೊಸೆಸರನ್ನು ಬಿಡುಗಡೆ ಮಾಡಿತು. ಹೊಸ ಪೆಂಟಿಯಮ್ 4 ಸೆಕೆಂಡಿಗೆ ಎರಡು ಶತಕೋಟಿ ಸೈಕಲಿನಷ್ಟು ಅಂದರೆ ಎರಡು ಗಿಗ್ಹರ್ಟ್ ಸಾಮರ್ಥ್ಯ ಹೊಂದಿದೆ.

1996: ವಿಚ್ಛೇದನಾ ಡಿಕ್ರಿ ಜಾರಿಯೊಂದಿಗೆ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ 15 ವರ್ಷಗಳ ದಾಂಪತ್ಯ ಕೊನೆಗೊಂಡಿತು.

1971: ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು.

1963: ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ `ನನಗೆ ಕನಸಿದೆ' ಭಾಷಣ ಎಂದೇ ಖ್ಯಾತಿ ಪಡೆಯಿತು.

1801: ಫ್ರೆಂಚ್ ಆರ್ಥಿಕ ತಜ್ಞ ಹಾಗೂ ಗಣಿತ ತಜ್ಞ ಆಂಟೋನಿ-ಆಗಸ್ಟಿನ್ ಕೊರ್ನೊ (1801-1877) ಜನ್ಮದಿನ. ಗಣಿತ-ಅರ್ಥಶಾಸ್ತ್ರವನ್ನು ರೂಪಿಸಿದ ಮೊದಲಿಗರಲ್ಲಿ ಈತನೂ ಒಬ್ಬ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement